ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಉದ್ಧವನಿಗೆ ಜೀವನದ ಪಾಠವನ್ನು ಹೇಳಿದ ಕೃಷ್ಣ

ಹಂಕಾರ ದಿಂದ ಅವಿವೇಕದಿಂದ ಮನುಷ್ಯ ನನ್ನನ್ನು ಮರೆತರೆ ತಪ್ಪು ಮಾಡುತ್ತಾನೆ, ಅಡ್ಡದಾರಿ ಹಿಡಿಯು ತ್ತಾನೆ. ಅಲ್ಲದೆ ಭಗವಂತ ನಮ್ಮ ಆತ್ಮದೊಳಗೆ ಇದ್ದಾನೆ ಎಂಬುದನ್ನು ಗಮನಿಸದೆ ಅವಿವೇಕ ದಿಂದ ವರ್ತಿಸಿದರೆ ನಾನೂ ಸಹಾಯಮಾಡಲು ಸಾಧ್ಯವಿಲ್ಲ" ಎಂದನು. ಪರಮಾತ್ಮನ ಬಗೆಗೆ ಸಮರ್ಪಣಾ ಭಾವ ಇದ್ದಾಗ, ಅವನಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ಅವನ ಕೃಪೆಗೆ ನಾವು ಪಾತ್ರರಾಗಲು ಸಾಧ್ಯ.

ಒಂದೊಳ್ಳೆ ಮಾತು

ಅದು ಕೃಷ್ಣಾವತಾರದ ಕೊನೆಯ ಗಳಿಗೆ. ತನ್ನ ಜತೆಯಲ್ಲಿದ್ದ ಉದ್ಧವನಿಗೆ, ‘ಏನಾದರೂ ಕೇಳು’ ಎಂದು ಹೇಳುತ್ತಾನೆ ಕೃಷ್ಣ. ಆಗ ಉದ್ಧವ, “ನನಗೆ ನಿನ್ನ ಸ್ನೇಹವೇ ದೊಡ್ಡ ಸೌಭಾಗ್ಯ; ಆದರೂ ಕೆಲವು ಅನುಮಾನಗಳಿವೆ, ಅವನ್ನು ಪರಿಹರಿಸು" ಎಂದು ಕೇಳಿಕೊಳ್ಳುತ್ತಾನೆ. “ಅದೇನು?" ಎಂದು ಕೃಷ್ಣ ಕೇಳಿದಾಗ ಉದ್ಧವ, “ಪಾಂಡವರು ನಿನಗೆ ಪರಮಾಪ್ತರಾದರೂ ಅದೇಕೆ ಅಷ್ಟೊಂದು ಕಷ್ಟ ಪಟ್ಟರು? ನೀನೇಕೆ ಅವರನ್ನು ಜೂಜಿನಾಟದಲ್ಲಿ ಕಾಪಾಡಲಿಲ್ಲ? ಅಕ್ಷಯಾಂಬರವಿತ್ತು ದ್ರೌಪದಿ ಯನ್ನು ಕಾಪಾಡಲು ಕೊನೆಯ ಕ್ಷಣದವರೆಗೆ ಏಕೆ ಕಾದೆ? ಇವೆಲ್ಲವೂ ನನಗೆ ಸೋಜಿಗ" ಎಂದನು.

ಆಗ ಕೃಷ್ಣನು ಮುಗುಳ್ನಗುತ್ತಾ, “ಇಂದು ನಿನಗೆ ಉದ್ಧವ ಗೀತೆಯನ್ನು ಬೋಧಿಸುತ್ತೇನೆ ಕೇಳು" ಎಂದು ಹೇಳಿ, “ನೋಡು ಉದ್ಧವ, ಕಷ್ಟದಲ್ಲಿದ್ದಾಗ ನನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ಕಾಪಾಡಲು ಸದಾಕಾಲ ಬದ್ಧನಾಗಿರುತ್ತೇನೆ. ಅನಿರೀಕ್ಷಿತವಾಗಿ ಕಷ್ಟಗಳು ಬಂದಾಗ ನನ್ನನ್ನು ಸ್ಮರಿಸಿದರೆ ಸಾಕು ನಾನು ಅವರನ್ನು ಕಾಪಾಡುವೆ.

ಪಾಂಡವರಲ್ಲಿ ಯುಧಿಷ್ಠಿರ ‘ನನಗೆ ಪಗಡೆ ಆಟ ಚೆನ್ನಾಗಿ ಆಡಲು ಬರುತ್ತದೆ, ನನಗೆ ಯಾರ ಜತೆಯೂ ಬೇಡ’ ಎಂಬ ಅಹಂನಿಂದ ಆಡಲು ಕುಳಿತನು. ಆದೇ ದುರ್ಯೋಧನನಿಗೆ ಪಗಡೆ ಆಡುವ ಅನುಭವ ಇಲ್ಲದಿದ್ದರೂ ಅವನು ಅಪಾರ ಸಂಪತ್ತನ್ನು ಹೊಂದಿದ್ದ. ಆ ಸಂಪತ್ತಿಗೆ ತಕ್ಕಂತೆ ಅವನು ಆಟದಲ್ಲಿ ಪಣ ಕಟ್ಟುತ್ತಿದ್ದ. ಆತ, ಸ್ವತಃ ಆಟವಾಡದೆ ತಾನು ನಂಬಿದ ಸೋದರಮಾವ ಶಕುನಿ ಕೈಯಲ್ಲಿ ದಾಳಗಳನ್ನು ಆಡಿಸಿದ, ಅವನ್ನು ತನ್ನ ಕೈಯಿಂದ ಮುಟ್ಟಲೂ ಇಲ್ಲ. ಆದರೆ ಯುಧಿಷ್ಠಿರ ಆ ಸಮಯದಲ್ಲಿ ನನ್ನನ್ನು ಸ್ಮರಿಸಲಿಲ್ಲ, ಸಹಾಯ ಕೇಳಲಿಲ್ಲ.

ಇದನ್ನೂ ಓದಿ: Roopa Gururaj Column: ಕತ್ತಲಿನತ್ತ ಸಾಗಿ, ಕತ್ತಲನ್ನು ನಿವಾರಿಸುವ ಬೆಳಕು

ಒಂದು ವೇಳೆ ಶಕುನಿಯ ಜತೆ ನಾನು ಸೇರಿ ಆಡಿದ್ದರೆ ಶಕುನಿ ಗೆಲ್ಲಲು ಆಗುತ್ತಿರಲಿಲ್ಲ. ಯುಧಿಷ್ಠಿರ ತನ್ನದೇ ಕರ್ಮಫಲದಿಂದಾಗಿ ಈ ಆಟದಲ್ಲಿ ಭಾಗಿಯಾಗಬೇಕಾಗಿದೆ ಎಂದುಕೊಂಡ, ಆದರೆ ನನ್ನನ್ನು ವಿಚಾರಿಸಲಿಲ್ಲ. ಅಲ್ಲದೆ ಯಾವುದೇ ಕಾರಣಕ್ಕೂ ಕೃಷ್ಣನಿಗೆ ವಿಷಯ ತಿಳಿಯಬಾರದು ಮತ್ತು ಈ ಕಡೆ ಕೃಷ್ಣ ತಲೆಹಾಕಬಾರದು ಎಂದು ಮನದಲ್ಲಿ ಪ್ರಾರ್ಥಿಸಿದ್ದ.

ಇದರ ಕುರಿತಾಗಿ ನನ್ನಲ್ಲಿ ಸಲಹೆಯನ್ನೂ ಕೇಳಲಿಲ್ಲ. ಇನ್ನು ಭೀಮ-ಅರ್ಜುನ-ನಕುಲ-ಸಹದೇವ ಇವರೆಲ್ಲ ದಾಳ ಆಡಿ ಕಳೆದುಕೊಳ್ಳುತ್ತಿರುವುದು ತಮ್ಮ ಕರ್ಮಫಲ ಎಂದುಕೊಂಡರೇ ಹೊರತು, ಒಂದು ಕ್ಷಣವೂ ನನ್ನ ಸಹಾಯ ಕೇಳಲು ಅವರು ಮನಸ್ಸು ಮಾಡಲಿಲ್ಲ.

ಹಾಗೆಯೇ, ಏನೋ ಅವಘಡ ಸಂಭವಿಸುತ್ತಿದೆ ಎಂಬುದು ದ್ರೌಪದಿಯ ಅರಿವಿಗೆ ಬಂದಿದ್ದರೂ, ಅವಳೂ ನನ್ನನ್ನು ಸ್ಮರಿಸಲಿಲ್ಲ, ಕರೆಯಲಿಲ್ಲ. ದುಶ್ಶಾಸನ ಬಂದು ಅವಳನ್ನು ಎಳೆದುಕೊಂಡು ಸಭೆ ಮಧ್ಯೆ ಹೋದಾಗ ಅಲ್ಲಿರುವ ಹಿರಿಯರನ್ನೆಲ್ಲ ಪ್ರಾರ್ಥಿಸಿದಳೇ ಹೊರತು ನನ್ನನ್ನು ಕರೆಯಲಿಲ್ಲ. ಅವರ‍್ಯಾರೂ ಇವಳ ಸಹಾಯಕ್ಕೆ ಬಾರದಿದ್ದಾಗ, ಹತಾಶಳಾಗಿ ದುಃಖದಿಂದ ‘ಕೃಷ್ಣ ಕಾಪಾಡು’ ಎಂದು ಕೂಗಿದಳು.

ನಾನು ಕಡೆಯ ಕ್ಷಣದವರೆಗೂ, ಅವರು ನನ್ನನ್ನು ಕರೆಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ದ್ರೌಪದಿ ಕೂಗಿದ ಒಂದೇ ಕೂಗಿಗೆ ಹೋಗಿ ಅವಳಿಗೆ ಸಹಾಯ ಮಾಡಿದೆ. ಈಗ ಹೇಳು ಇದರಲ್ಲಿ ನನ್ನ ತಪ್ಪೇ ನಿದೆ?" ಎಂದು ಕೇಳಿದ. ಉದ್ಧವ ಪಟ್ಟು ಬಿಡದೆ, “ನಮ್ಮಂಥ ಸಾಮಾನ್ಯ ಮನುಷ್ಯರು ಕಷ್ಟದಲ್ಲಿ ದ್ದಾಗ ನಿನ್ನನ್ನು ಕರೆಯಲು ನಮ್ಮ ಸ್ಮರಣೆಗೆ ಬರದೇ ಇರಬಹುದು ಅಥವಾ ನಾವು ಗಾಬರಿಯಿಂದ ಮರೆಯಬಹುದು.

ಆಗ ನೀನು ಸಹಾಯಮಾಡಲು ಬರುವುದಿಲ್ಲವೇ? ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಟ್ಟ ಕೆಲಸ ಮಾಡುತ್ತಿದ್ದರೆ ನೀನು ಅದನ್ನು ನೋಡಿಕೊಂಡು ಸುಮ್ಮನಿರುವೆಯಾ? ಹುಲುಮಾನವರಾದ ನಮ್ಮಂಥವರನ್ನು ನೀನು ತಡೆಯುವುದಿಲ್ಲವೇ? ನಿನ್ನದು ಇದೆಂಥ ಧರ್ಮ?" ಎಂದು ಕೇಳಿದ.

ಆಗ ಕೃಷ್ಣ, “ನೀನು ಸರಿಯಾಗಿ ಗಮನಿಸಿ ನೋಡು, ಭಗವಂತ ನಿನ್ನೊಳಗೇ ಇದ್ದಾನೆ, ನಿನ್ನನ್ನು ನೋಡುತ್ತಿದ್ದಾನೆ ಎಂದು ನೀನು ಭಾವಿಸಿದರೆ ಸಾಕು, ತಪ್ಪು ಮಾಡಲು ಸಾಧ್ಯವೇ ಇಲ್ಲ. ಅಹಂಕಾರ ದಿಂದ ಅವಿವೇಕದಿಂದ ಮನುಷ್ಯ ನನ್ನನ್ನು ಮರೆತರೆ ತಪ್ಪು ಮಾಡುತ್ತಾನೆ, ಅಡ್ಡದಾರಿ ಹಿಡಿಯು ತ್ತಾನೆ. ಅಲ್ಲದೆ ಭಗವಂತ ನಮ್ಮ ಆತ್ಮದೊಳಗೆ ಇದ್ದಾನೆ ಎಂಬುದನ್ನು ಗಮನಿಸದೆ ಅವಿವೇಕದಿಂದ ವರ್ತಿಸಿದರೆ ನಾನೂ ಸಹಾಯಮಾಡಲು ಸಾಧ್ಯವಿಲ್ಲ" ಎಂದನು. ಪರಮಾತ್ಮನ ಬಗೆಗೆ ಸಮರ್ಪಣಾ ಭಾವ ಇದ್ದಾಗ, ಅವನಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ಅವನ ಕೃಪೆಗೆ ನಾವು ಪಾತ್ರರಾಗಲು ಸಾಧ್ಯ. ಅಹಂಕಾರವಿದ್ದಲ್ಲಿ ಅವನಿರುವುದಿಲ್ಲ. ಕೃಷ್ಣನ ಈ ಮಾತುಗಳು ನಮ್ಮ ನಿಮ್ಮೆಲ್ಲರಿಗೂ ಪಾಠವಾಗಲಿ.

ರೂಪಾ ಗುರುರಾಜ್

View all posts by this author