ಒಂದೊಳ್ಳೆ ಮಾತು
ಶಮಂತಕ ಮಣಿಯ ಘಟನೆಯ ನಂತರ ಶ್ರೀಕೃಷ್ಣನು ಜಾಂಬವತಿಯನ್ನು ವಿವಾಹವಾದರೂ ಅವರಿಗೆ ಬಹಳ ಕಾಲ ಸಂತಾನವಿರಲಿಲ್ಲ. ಜಾಂಬವತಿಯ ಕೋರಿಕೆಯ ಮೇರೆಗೆ ಶ್ರೀಕೃಷ್ಣನು ಉಪಮನ್ಯು ಮಹರ್ಷಿ ಗಳ ಮಾರ್ಗದರ್ಶನದಲ್ಲಿ ಕೈಲಾಸನಾಥನನ್ನು ಕುರಿತು ಕಠಿಣ ತಪಸ್ಸು ಆಚರಿಸಿದನು. ಸಾಂಬಶಿವನ ಅನುಗ್ರಹದಿಂದ ಜನಿಸಿದ ಬಾಲಕನಿಗೆ ‘ಸಾಂಬ’ ಎಂದು ನಾಮಕರಣ ಮಾಡಲಾಯಿತು.
ಸಾಂಬನು ನೋಡಲು ಕೃಷ್ಣನಷ್ಟೇ ತೇಜಸ್ವಿಯೂ, ಸಕಲ ಯುದ್ಧಕಲೆಗಳಲ್ಲಿ ಅಪ್ರತಿಮ ವೀರನೂ ಆಗಿ ಬೆಳೆದನು. ಆದರೆ ಅವನಲ್ಲಿದ್ದ ಮಿತಿಮೀರಿದ ಹಠ ಮತ್ತು ಅಹಂಕಾರ ಅವನ ವ್ಯಕ್ತಿತ್ವಕ್ಕೆ ಕಳಂಕ ತಂದವು. ಸಾಂಬನು ಸಾಹಸ ಮತ್ತು ಅವನ ದುರ್ವರ್ತನೆಗಳೆರಡನ್ನೂ ಮೆರೆಯುತ್ತಾ ನಡೆದನು. ದುರ್ಯೋಧನನ ಮಗಳು ಲಕ್ಷಣೆಯ ಸ್ವಯಂವರಕ್ಕೆ ತೆರಳಿದ ಸಾಂಬನು, ವಿಧಿವಿಧಾನ ಗಳಿಗೆ ಕಾಯದೆ ಆಕೆಯನ್ನು ಅಪಹರಿಸಲು ಯತ್ನಿಸಿ ಕೌರವರ ಸೈನ್ಯಕ್ಕೆ ಸೆರೆಯಾದನು. ಇದನ್ನು ತಿಳಿದ ಬಲರಾಮನು ಹಸ್ತಿನಾಪುರಕ್ಕೆ ತೆರಳಿ ಸಾಂಬನನ್ನು ಬಿಡಿಸಲು ಕೋರಿದನು.
ಇದನ್ನೂ ಓದಿ; Roopa Gururaj Column: ಅಹಂಕಾರ ಮುರಿದು ಕರುಣಾಮಯಿಯಾಗಿ ನೆಲೆನಿಂತ ತಿರುಮಲ ಶ್ರೀನಿವಾಸ
ಕೌರವರು ಯಾದವರನ್ನು ಹೀಯಾಳಿಸಿದಾಗ, ಕುಪಿತಗೊಂಡ ಬಲರಾಮ ತನ್ನ ನೇಗಿಲಿನಿಂದ ಇಡೀ ಹಸ್ತಿನಾಪುರವನ್ನೇ ಗಂಗೆಗೆ ಎಳೆಯತೊಡಗಿದನು. ಹೆದರಿದ ಕೌರವರು ಕ್ಷಮೆ ಯಾಚಿಸಿ, ಸಾಂಬ ಮತ್ತು ಲಕ್ಷಣೆಯ ವಿವಾಹವನ್ನು ವಿಜೃಂಭಣೆಯಿಂದ ನೆರವೇರಿಸಿದರು. ಮತ್ತೊಂದೆಡೆ, ಸಾಂಬನ ಉದ್ಧಟತನ ಋಷಿಗಳನ್ನೂ ಬಿಡಲಿಲ್ಲ. ಒಮ್ಮೆ ದೂರ್ವಾಸ ಮುನಿಗಳನ್ನು ಅಪಹಾಸ್ಯ ಮಾಡಿದ ಪರಿಣಾಮವಾಗಿ ಆತ ಕುಷ್ಠರೋಗಕ್ಕೆ ತುತ್ತಾದನು. ತಂದೆ ಕೃಷ್ಣನ ಮಾರ್ಗದರ್ಶನದಂತೆ ಚಂದ್ರ ಭಾಗಾ ನದಿಯ ತೀರದಲ್ಲಿ ಹನ್ನೆರಡು ವರ್ಷ ಸೂರ್ಯನಾರಾಯಣನನ್ನು ಆರಾಧಿಸಿ ರೋಗಮುಕ್ತ ನಾದನು.
ಕೃತಜ್ಞತೆಯಿಂದ ಆತ ಸೂರ್ಯ ದೇವಾಲಯವನ್ನು ಪ್ರತಿಷ್ಠಾಪಿಸಿದನು. ಆದರೆ ಗುಣಮುಖ ನಾದರೂ ಅವನ ಕುಚೇಷ್ಟೆಯ ಸ್ವಭಾವ ಮಾತ್ರ ಬದಲಾಗಲಿಲ್ಲ. ಯದುವಂಶದ ಅವನತಿಯ ಕಾಲ ಸನ್ನಿಹಿತವಾದಾಗ, ಸಾಂಬ ಮತ್ತು ಆತನ ಮಿತ್ರರು ಮಹರ್ಷಿಗಳಾದ ವಿಶ್ವಾಮಿತ್ರ, ಕಣ್ವ ಹಾಗೂ ನಾರದರನ್ನು ಪರೀಕ್ಷಿಸಲು ಅದೇ ಉದ್ಧಟತನದಿಂದ ಮುಂದಾದರು. ಸಾಂಬನಿಗೆ ಗರ್ಭಿಣಿ ಸೀಯ ವೇಷ ತೊಡಿಸಿ, ಈಕೆ ಹೆಣ್ಣೋ ಗಂಡೋ ಏನನ್ನು ಹಡೆಯುತ್ತಾಳೆ? ಎಂದು ಋಷಿಗಳನ್ನು ಅಣಕಿಸಿ ದರು. ಋಷಿಗಳು ತಮ್ಮ ದಿವ್ಯದೃಷ್ಟಿಯಿಂದ ಸತ್ಯವನ್ನರಿತು, ಇವಳು ಇಡೀ ಯದುವಂಶವನ್ನೇ ಬೇರುಸಹಿತ ನಾಶಮಾಡುವ ಕಬ್ಬಿಣದ ಒನಕೆಯನ್ನು (ಮುಸಲ) ಹೆರುತ್ತಾಳೆ ಎಂದು ಶಾಪವಿತ್ತರು.
ಮರುದಿನವೇ ಸಾಂಬನ ಹೊಟ್ಟೆಯಿಂದ ಕಬ್ಬಿಣದ ಮುಸಲ ಹೊರಬಂತು. ರಾಜ ಉಗ್ರಸೇನನು ಭಯಭೀತನಾಗಿ ಆ ಒನಕೆಯನ್ನು ಪುಡಿಪುಡಿ ಮಾಡಿಸಿ ಪ್ರಭಾಸ ತೀರ್ಥದ ಸಮುದ್ರಕ್ಕೆ ಎಸೆಸಿದನು. ಆದರೆ ಆ ಕಬ್ಬಿಣದ ಪುಡಿಯು ಕಡಲತೀರದಲ್ಲಿ ಹರಿತವಾದ ‘ಏರಕಾ’ ಎಂಬ ಗರಿಕೆ ಹುಗಿ ಬೆಳೆಯಿತು. ಅರೆಯಲಾಗದೆ ಉಳಿದ ಒಂದು ಕಬ್ಬಿಣದ ಚೂರನ್ನು ನುಂಗಿದ ಮೀನು ಬೆಸ್ತನ ಬಲೆಗೆ ಬಿದ್ದು, ಅಂತಿಮವಾಗಿ ‘ಜರಾ’ ಎಂಬ ಬೇಟೆಗಾರನ ಬಾಣದ ಮೊನೆಯಾಯಿತು.
ಕಾಲಕ್ರಮೇಣ ಪ್ರಭಾಸ ಕ್ಷೇತ್ರದಲ್ಲಿ ಯಾದವರು ಮದ್ಯಪಾನದ ಮದದಲ್ಲಿ ಪರಸ್ಪರ ಜಗಳವಾಡಿ, ಅದೇ ಹರಿತವಾದ ಹುಲ್ಲನ್ನೇ ಆಯುಧಗಳನ್ನಾಗಿ ಬಳಸಿ ಹೊಡೆದಾಡಿ ಇಡೀ ವಂಶವನ್ನೇ ಸರ್ವನಾಶ ಮಾಡಿಕೊಂಡರು. ಅಂತಿಮವಾಗಿ ಅರಣ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಕೃಷ್ಣನ ಪಾದವನ್ನು ಜಿಂಕೆಯೆಂದು ತಪ್ಪಾಗಿ ಭಾವಿಸಿದ ಬೇಟೆಗಾರ ಜರಾ, ಅದೇ ಕಬ್ಬಿಣದ ಮೊನೆಯಿದ್ದ ಬಾಣವನ್ನು ಪ್ರಯೋಗಿಸಿದಾಗ ಕೃಷ್ಣಾವತಾರ ಸಮಾಪ್ತಿಯಾಯಿತು.
ನಮ್ಮಲ್ಲಿ ಎಷ್ಟೇ ರೂಪ, ಸೌಂದರ್ಯ, ಪರಾಕ್ರಮ ಅಥವಾ ದೈವಿಕ ಹಿನ್ನೆಲೆಯಿದ್ದರೂ, ವಿನಯ ಮತ್ತು ಸಂಸ್ಕಾರವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಕೆಲವೊಮ್ಮೆ ಅಪರಿಮಿತ eನಿಗಳಾದ ಸಾಧಕರಾದ ತಂದೆ ತಾಯಿಗಳಿಗೂ ಕೂಡ ಇಂತಹ ಮಕ್ಕಳು ಹುಟ್ಟಿಬಿಡುತ್ತಾರೆ. ತಮ್ಮೆಲ್ಲ ವಿದ್ಯೆ ಸಂಸ್ಕಾರ ಜ್ಞಾನದ ಬಲದಿಂದಲೂ ಈ ತಂದೆ ತಾಯಿಗಳು ಮಕ್ಕಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಕಾರಣವಿಷ್ಟೇ ಮಕ್ಕಳ ಮಿತಿಮೀರಿದ ಅಹಂಕಾರ ಮತ್ತು ಉದ್ಧಟತನ. ಆದ್ದರಿಂದಲೇ ಮಕ್ಕಳನ್ನು ಎಳೆವೆಯಿಂದಲೇ ಬಹಳ ಜಾಗರೂಕರಾಗಿ ಬಳಸಬೇಕು.
ತಂದೆ ತಾಯಿಗಳು ಹೆಸರು ಮಾಡಿದ್ದ ರಂತೂ ಮಕ್ಕಳಿಗೆ ಅದು ಬಹಳ ಬೇಗ ಪ್ರಭಾವ ಬೀರುತ್ತದೆ. ಅಂತಹ ಸಮಯದಲ್ಲಿ ತಂದೆ ತಾಯಿಗಳ ಅಧಿಕಾರ, ಅಂತಸ್ತು, ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಎಲ್ಲಾ ಆಸ್ತಿ ಅಂತಸ್ತು ಅಧಿಕಾರ ಇದ್ದರೂ ಆ ಮಕ್ಕಳು ಅಧೋಗತಿಗೆ ಇಳಿಯುವುದನ್ನು ನೋಡಬೇಕಾದ ಕರ್ಮ ತಂದೆ ತಾಯಿಗಳಿಗೆ ತಪ್ಪಿದ್ದಲ್ಲ. ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುವ ಮಕ್ಕಳನ್ನು ನಂತರ ಎಷ್ಟು ಹಣದಿಂದಲೂ ಸರಿಪಡಿಸಲಾಗದು. ಅಧಿಕಾರ-ಸಂಪತ್ತಿಗಿಂತ ನಮ್ರತೆ ಮತ್ತು ಸಂಸ್ಕಾರವೇ ಬದುಕಿಗೆ ನಿಜವಾದ ಶ್ರೀರಕ್ಷೆ.