ಒಂದೊಳ್ಳೆ ಮಾತು
ಕನ್ನಡ ಸಾಹಿತ್ಯ ಲೋಕದಲ್ಲಿ ‘ಕುಮಾರವ್ಯಾಸ’ ಎಂದೇ ಪ್ರಸಿದ್ಧರಾದ ನಾರಣಪ್ಪನವರು ಗದುಗಿನ ವೀರನಾರಾಯಣನ ಪರಮ ಭಕ್ತರು. ಸಂಸ್ಕೃತದ ವ್ಯಾಸಭಾರತವನ್ನು ಜನಸಾಮಾನ್ಯರಿಗೆ ತಲುಪಿಸುವಂತೆ ಕನ್ನಡದಲ್ಲಿ ಬರೆಯಬೇಕೆಂಬುದು ಅವರ ಹಂಬಲವಾಗಿತ್ತು. ಆದರೆ ಕಥೆ ಬರೆಯಲು ತೊಡಗಿದಾಗ ಅವರಿಗೆ ಭಕ್ತಿಯ ಪರವಶತೆಯಲ್ಲಿ ಬರವಣಿಗೆ ಮುಂದುವರಿಸಲು ಸಾಧ್ಯವಾಗು ತ್ತಿರಲಿಲ್ಲ.
ದೇವಸ್ಥಾನದಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದಾಗ, ಅವರ ಕನಸಿನಲ್ಲಿ ಶ್ರೀಕೃಷ್ಣ ಕಾಣಿಸಿಕೊಂಡು, ನನ್ನ ಭಕ್ತನಾದ ಅಶ್ವತ್ಥಾಮನನ್ನು ಭೇಟಿಯಾ ಗು, ಆತ ನಿನಗೆ ಭಾರತದ ಕಥೆಯನ್ನು ನಿರೂಪಿ ಸುತ್ತಾನೆ ಎಂದು ಅಭಯ ನೀಡಿದನು. ಕೃಷ್ಣನ ಮಾತುಗಳನ್ನು ನಂಬಿದ ನಾರಣಪ್ಪ ಅಶ್ವತ್ಥಾಮನ ಹುಡುಕಾಟಕ್ಕೆ ತೊಡಗಿದರು.
ಅಶ್ವತ್ಥಾಮನು ಸಾಕ್ಷಾತ್ ಚಿರಂಜೀವಿಯಾಗಿದ್ದು, ಸಾವಿರಾರು ಜನರು ಸೇರುವ ಧರ್ಮಕಾರ್ಯಗಳ ಸಂತರ್ಪಣೆಗಳಲ್ಲಿ ವೇಷ ಮರೆಸಿಕೊಂಡು ಭಾಗವಹಿ ಸುತ್ತಾನೆ ಎಂಬ ನಂಬಿಕೆಯಿತ್ತು. ನಾರಣಪ್ಪ ಎಲ್ಲೇ ಸಂತರ್ಪಣೆ ನಡೆದರೂ ಹೋಗಿ ಅಶ್ವತ್ಥಾಮನಿಗಾಗಿ ಹುಡುಕುತ್ತಿದ್ದರು. ಒಮ್ಮೆ ದೊಡ್ಡ ಸಂತರ್ಪಣೆಯೊಂದರಲ್ಲಿ, ಎರಡು ಮಕ್ಕಳು ಒಂದೇ ಬಾಳೆಎಲೆಗಾಗಿ ಜಗಳವಾಡುತ್ತಿದ್ದವು. ಕೊನೆಗೆ ಒಬ್ಬ ಹುಡುಗ ಆ ಎಲೆಯನ್ನು ಗೆದ್ದಾಗ, ಅಲ್ಲಿದ್ದ ವೃದ್ಧರೊಬ್ಬರು ‘ಛಲವೆಂದರೆ ಹೀಗಿರಬೇಕು!
ಇದನ್ನೂ ಓದಿ: Roopa Gururaj Column: ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ
ದುರ್ಯೋಧನನಲ್ಲಿ ಇಂತಹ ಛಲ ನೋಡಿದ್ದೆ, ಮತ್ತೆ ನಿನ್ನಲ್ಲಿ ನೋಡುತ್ತಿದ್ದೇನೆ’ ಎಂದು ಆ ಹುಡುಗನನ್ನು ಬೆನ್ನು ತಟ್ಟಿ ಮುದ್ದಾಡಿದರು. ಇದನ್ನು ಗಮನಿಸಿದ ನಾರಣಪ್ಪನವರಿಗೆ ಆ ವೃದ್ಧನೇ ಅಶ್ವತ್ಥಾಮನೆಂದು ಅರಿವಾಯಿತು. ತಕ್ಷಣ ಅವರ ಪಾದ ಹಿಡಿದು ಕಥೆ ಹೇಳಿಕೊಡುವಂತೆ ಪ್ರಾರ್ಥಿಸಿ ದರು.
ವೃದ್ಧನು ಮೊದಲು ನಿರಾಕರಿಸಿದರೂ, ನಾರಣಪ್ಪನ ಛಲ ಮತ್ತು ಭಕ್ತಿಗೆ ಮಣಿದು, ‘ನನ್ನ ಆಪ್ತ ಗೆಳೆಯ ದುರ್ಯೋಧನನ ಅಂತ್ಯದವರೆಗೆ ಮಾತ್ರ ಕಥೆ ಹೇಳುವೆ. ಕಥೆ ಹೇಳುವಾಗ ಪರದೆಯ ಹಿಂದೆ ಕುಳಿತು ಹೇಳುತ್ತೇನೆ, ನನ್ನನ್ನು ನೋಡಬಾರದು’ ಎಂಬ ಶರತ್ತಿನೊಂದಿಗೆ ಒಪ್ಪಿದನು.
ಮಾರನೆಯ ದಿನದಿಂದ ವೀರನಾರಾಯಣ ದೇವಸ್ಥಾನದ ಮಂಟಪದಲ್ಲಿ ಪರದೆಯಿಟ್ಟು ಕಾವ್ಯ ರಚನೆ ಆರಂಭವಾಯಿತು. ಅಶ್ವತ್ಥಾಮ ಕಥೆ ನಿರೂಪಿಸುತ್ತಿದ್ದರೆ, ನಾರಣಪ್ಪನಿಗೆ ಪರದೆಯ ಮೇಲೆ ಆ ಮಹಾ ಭಾರತದ ದೃಶ್ಯಗಳೇ ಗೋಚರಿಸುತ್ತಿದ್ದವು. ಭಕ್ತಿ ಹಾಗೂ ಪ್ರತಿಭೆಯಿಂದ ನಾರಣಪ್ಪ ‘ಕರ್ಣಾಟ ಭಾರತ ಕಥಾಮಂಜರಿ’ಯನ್ನು ಗದುಗಿನ ವೀರನಾರಾಯಣನಿಗೆ ಅಂಕಿತಗೊಳಿಸಿ ಬರೆಯುತ್ತಾ ಸಾಗಿದರು.
ಕಥೆ ಗದಾಯುದ್ಧದ ಹಂತಕ್ಕೆ ತಲುಪಿತು. ಭೀಮನು ದುರ್ಯೋಧನನ ತೊಡೆ ಮುರಿದು ಕೆಡವಿದಾಗ, ಪರದೆಯ ಹಿಂದಿನಿಂದ ಅಶ್ವತ್ಥಾಮನ ದುಃಖದ ಚೀತ್ಕಾರ ಕೇಳಿಸಿತು. ಗೆಳೆಯನ ಪತನದ ನೋವಿ ನಲ್ಲಿ ಅಶ್ವತ್ಥಾಮನ ಧ್ವನಿ ಅಡಗಿದಾಗ, ಕುತೂಹಲ ತಾಳಲಾರದೆ ನಾರಣಪ್ಪ ಶರತ್ತನ್ನು ಮರೆತು ಪರದೆಯನ್ನು ಸರಿಸಿ ನೋಡಿದರು. ಅಲ್ಲಿ ಅಶ್ವತ್ಥಾಮನಿರಲಿಲ್ಲ; ಬದಲಾಗಿ ಗದಾಯುದ್ಧದ ರಣರಂಗ, ದುರ್ಯೋಧನನ ಪತನ, ಪಾಂಡವರ ವಿಜಯ ಹಾಗೂ ಅವರ ನಡುವೆ ಕಂಗೊಳಿಸು ತ್ತಿದ್ದ ಶ್ರೀಕೃಷ್ಣನ ಸಾಕ್ಷಾತ್ ದಿವ್ಯದರ್ಶನವಾಯಿತು.
ಭಗವಂತನ ದರ್ಶನದಿಂದ ನಾರಣಪ್ಪ ಧನ್ಯರಾದರು. (ಜನಪದೀಯ ಪ್ರತೀತಿಯ ಪ್ರಕಾರ, ಶರತ್ತು ಮುರಿದ ಕಾರಣಕ್ಕೆ ಅಶ್ವತ್ಥಾಮನ ಕೋಪದ ಬಾಣಕ್ಕೆ ನಾರಣಪ್ಪ ತೀರಿದರೆಂಬ ಮಾತಿದೆ. ಆದರೆ ಸಾಹಿತ್ಯ ಚರಿತ್ರೆಯ ಪ್ರಕಾರ, ಅಶ್ವತ್ಥಾಮ ತನ್ನ ಶರತ್ತಿನಂತೆಯೇ ದುರ್ಯೋಧನನ ಅವಸಾನದ ವರೆಗಿನ (ಸಭಾಪರ್ವ ದಿಂದ ಗದಾಪರ್ವ/ ದಶಪರ್ವ) ಕಥೆಯನ್ನು ಪೂರ್ಣಗೊಳಿಸಿ ಅಲ್ಲಿಗೆ ನಿಲ್ಲಿಸಿದನು. ಹೀಗಾಗಿ ಕುಮಾರವ್ಯಾಸ ಭಾರತವು ‘ದಶಪರ್ವ ಭಾರತ’ವೆಂದೇ ಪ್ರಸಿದ್ಧವಾಯಿತು).
ಕುಮಾರವ್ಯಾಸನ ಭಕ್ತಿ, ನಿಷ್ಠೆ ಹಾಗೂ ಛಲದಿಂದಾಗಿ ಜನಿಸಿದ ಈ ‘ಕರ್ಣಾಟ ಭಾರತ ಕಥಾಮಂಜರಿ’ ಕಾವ್ಯವು ಕನ್ನಡ ಸಾಹಿತ್ಯದಲ್ಲಿ ಎಂದೆಂದಿಗೂ ಅಜರಾಮರವಾಗಿ ಉಳಿಯಿತು. ಕುಮಾರವ್ಯಾಸರಿಗೆ ಅಶ್ವತ್ಥಾಮನನ್ನು ಹುಡುಕು ವುದು ಸುಲಭವಾಗಿರಲಿಲ್ಲ. ಎಷ್ಟೇ ಹಿನ್ನಡೆಯಾದರೂ ಆತ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಸಂತರ್ಪಣೆಯಲ್ಲಿ ನಡೆದ ಸಣ್ಣ ಘಟನೆಯನ್ನು ಗಮನಿಸಿ ಕುಮಾರ ವ್ಯಾಸರು ಅಶ್ವತ್ಥಾಮನನ್ನು ಗುರುತಿಸಿದರು. ನಮ್ಮ ಸುತ್ತಮುತ್ತಲಿನ ಸನ್ನಿವೇಶಗಳನ್ನು ಸೂಕ್ಷ ವಾಗಿ ಗಮನಿಸಿದರೆ ನಮಗೆ ಬೇಕಾದ ಅವಕಾಶಗಳು ಅಥವಾ ಮಾರ್ಗದರ್ಶಕರು ಸಿಗುತ್ತಾರೆ. ಎಂದಿಗೂ ನಮಗೆ ಸದಾ ಜೀವನದಲ್ಲಿ ದೊಡ್ಡ ಅವಕಾಶವೇ ಮೊದಲು ಸಿಗುವುದಿಲ್ಲ. ಆದ್ದರಿಂದ ಸಿಕ್ಕ ಅವಕಾಶವನ್ನು ಚಿಕ್ಕದು ಎಂದು ಉಪೇಕ್ಷೆ ಮಾಡದೆ, ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಒಂದೊಂದು ಅವಕಾಶವೂ ಕೂಡ ನಮ್ಮ ಜೀವನದಲ್ಲಿ ಗುರಿಯಡೆಗೆ ದಾರಿ ಮಾಡಿ ಕೊಡುವ ಹೆದ್ದಾರಿಗೆ ನಮ್ಮನ್ನು ತಲುಪಿಸುತ್ತಿರುತ್ತದೆ