ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Kangala Column: ಕುವೆಂಪು: ಅಗ್ರಮಾನ್ಯ ಯುಗಪ್ರವರ್ತಕ ಕವಿ

ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು.

ತನ್ನಮಿತ್ತ

ರವಿ ಕಂಗಳ

ಕುವೆಂಪು ಕನ್ನಡದ ಅಗ್ರಮಾನ್ಯ ಯುಗಪ್ರವರ್ತಕ ಕವಿ. ‘ಶ್ರೀ ರಾಮಾಯಣ ದರ್ಶನಂ’ ರಚಿಸುವ ಮೂಲಕ ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದವರು. ಇವರೊಬ್ಬ ಶ್ರೇಷ್ಠ ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ 20ನೇ ಶತಮಾನ ಕಂಡ ದೈತ್ಯ ಪ್ರತಿಭೆ. ಯುಗದ ಕವಿಗೆ ಜಗದ ಕವಿಗೆ ಶ್ರೀ ರಾಮಾಯಣ ದರ್ಶನದಿಂದಲೇ ಕೈ ಮುಗಿದ ಕವಿಗೆ ಮಣಿಯದವರು ಯಾರು? ಎಂದು ವರಕವಿ ಬೇಂದ್ರೆಯವರಿಂದ ಬಣ್ಣಿಸಿಕೊಂಡು ವಿಶ್ವಮಾನವ ಸಂದೇಶ ನೀಡಿದವರು.

‘ಮಂತ್ರಮಾಂಗಲ್ಯ’ ಎಂಬ ಸರಳ ವಿವಾಹ ಪದ್ಧತಿಯನ್ನು ರೂಢಿಗೆ ತಂದವರು. ಮೈಸೂರಿನಲ್ಲಿ ‘ಮಾನಸ ಗಂಗೋತ್ರಿ’ ಯನ್ನು ಕಟ್ಟಿ ಬೆಳೆಸಿದವರು. ದಲಿತ ಹಾಗೂ ಬಂಡಾಯ ಚಳವಳಿಗಳಿಗೆ ಸ್ಪೂರ್ತಿಯ ಸೆಲೆಯಾದವರು. “ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ ನಾಗಿರುತ್ತಾನೆ.

ಮುಂದೆ ಅದು ಬೆಳೆಯುತ್ತಾ ಹೋದಂತೆ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ" ಎಂದು ಹೇಳಿ, “ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ನಮ್ಮೆಲ್ಲರ ಕರ್ತವ್ಯವಾಗ ಬೇಕು" ಎಂದು ಸಾರಿದವರು.

ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು.

ಇದನ್ನೂ ಓದಿ: Ravi Kangala Column: ಸಮರ್ಥ ಸಮಾಜದ ನಿರ್ಮಾಣದಲ್ಲಿ ಮೌಲ್ಯ ಶಿಕ್ಷಣದ ಪಾತ್ರ

ಲೋಕ ಉಳಿದು, ಬಾಳಿ ಬದುಕಬೇಕಾದರೆ ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು ಎಂಬುದು ಅವರ ಘನ ಅಭಿಮತವಾಗಿತ್ತು. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ‘ಮನುಜಮತ’. ಆ ಪಥ ಈ ಪಥ ಅಲ್ಲ; ‘ವಿಶ್ವಪಥ’.

ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ ‘ಸರ್ವೋ ದಯ’. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ‘ಪೂರ್ಣದೃಷ್ಟಿ’. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ಮತ ‘ಮನುಜಮತ’ವಾಗಬೇಕು, ಪಥ ‘ವಿಶ್ವಪಥ’ ವಾಗಬೇಕು, ಮನುಷ್ಯ ‘ವಿಶ್ವಮಾನವ’ನಾಗಬೇಕು ಎಂಬ ಸದಾಶಯವೇ ವಿಶ್ವಮಾನವ ಸಂದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು 2015ರಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29ರಂದು ‘ವಿಶ್ವಮಾನವ ದಿನ’ವಾಗಿ ಆಚರಿಸುತ್ತ, ವಿಶ್ವಮಾನವತಾವಾದ ಮತ್ತು ಸರ್ವೋದಯದ ತತ್ವಗಳನ್ನು ಪ್ರಚುರ ಪಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ಎಂಬಲ್ಲಿ 1904ರ ಡಿಸೆಂಬರ್ 29ರಂದು ಜನಿಸಿದರು. ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ. ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಬಾಲ್ಯ ವನ್ನು ಕಳೆದ ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ, ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು.

kuvempu

ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಶಿಕ್ಷಣ ಮುಂದುವರಿಸಿ, ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಪಡೆದರು. ಟಿ.ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದ ಕುವೆಂಪು, ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ‘ಮಾನಸ ಗಂಗೋತ್ರಿ’ಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು.

ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು. 1937ರ ಎಪ್ರಿಲ್ ೩೦ರಂದು ಹೇಮಾವತಿಯವರನ್ನು ಕೈ ಹಿಡಿದರು. ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತಾರಿಣಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ರಾಮ ಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪು ರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದರು.

“ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ" ಎಂದು ಹಾ.ಮಾ. ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಸ್ವಾಭಿಮಾನಿ ಸಂಸ್ಕೃತಿಯ ಪ್ರತೀಕವಾಗಿದ್ದ ಕುವೆಂಪು ಅವರ ವೈಚಾರಿಕ ಸಾಹಿತ್ಯ ಕೃಷಿ ಬಹು ದೊಡ್ಡ ಕ್ರಾಂತಿ ಉಂಟುಮಾಡಿದೆ. ಕನ್ನಡದ ಎರಡನೆಯ ‘ರಾಷ್ಟ್ರಕವಿ’. ಜ್ಞಾನಪೀಠ ಪ್ರಶಸ್ತಿ ಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದು ಕೊಟ್ಟ ವರು, ಕರ್ನಾಟಕ ಸರಕಾರ ಕೊಡಮಾಡುವ ‘ಕರ್ನಾಟಕ ರತ್ನ’ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿ ಗಳನ್ನು ಮೊದಲ ಬಾರಿಗೆ ಪಡೆದವರು ಕುವೆಂಪು.

“ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ.

ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ" ಎಂದು ಡಿ.ಎಲ್.ನರಸಿಂಹಾಚಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕುವೆಂಪು ಅವರು 1994ರ ನವೆಂಬರ್ 11ರಂದು ಮೈಸೂರಿನಲ್ಲಿ ನಿಧನರಾದರು. ಹುಟ್ಟೂರು ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುವೆಂಪು ರಾಷ್ಟೀಯ ಪ್ರತಿಷ್ಠಾನದವರು ಇವರು ಜನಿಸಿದ ಮನೆಯನ್ನು ‘ಕವಿಮನೆ’ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ. ಕುವೆಂಪು ಸಮಾಧಿ ಸ್ಥಳವಾದ ‘ಕವಿಶೈಲ’ ಒಂದು ವಿಶಿಷ್ಟ ಸ್ಮಾರಕವಾಗಿದೆ.

1987ರಲ್ಲಿ ಶಿವಮೊಗ್ಗದಲ್ಲಿ ಕುವೆಂಪುರವರ ಗೌರವಾರ್ಥವಾಗಿ ‘ಕುವೆಂಪು ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ. ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸ ಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.

ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡುವುದರ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲಾಗಿದೆ. ಇಂದಿನ ವಿದ್ಯಾರ್ಥಿಗಳು, ರಾಷ್ಟ್ರಕವಿ ಕುವೆಂಪು ಅವರ ‘ನಿರಂಕುಶ ಮತಿಗಳಾಗಿ ಆತ್ಮಶ್ರೀಗಾಗಿ’ ಎಂಬ ಧ್ಯೇಯ ವನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ಯುವಜನತೆ ಯಾವ ಅಂಕುಶಕ್ಕೂ ಬೀಳದೆ ಆತ್ಮಸಾಕ್ಷಿ ಯಿಂದ ಬದುಕಬೇಕು.

ಪ್ರತಿಯೊಬ್ಬ ವಿದ್ಯಾರ್ಥಿ ಗೌರವ ತಪಸ್ವಿ ಎಂದು ಹೇಳುತ್ತಿದ್ದ ಕುವೆಂಪು ಅವರು “ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆ ಆಗಬೇಕೆ ಹೊರತು ಭತ್ತ ತುಂಬುವ ಚೀಲ ಆಗಬಾರದು" ಎಂದು ಹೇಳು ತ್ತಿದ್ದರು. ಅಂದರೆ ವಿದ್ಯಾರ್ಥಿಗಳು ತಾವೇ ಜ್ಞಾನಾರ್ಜನೆಯಲ್ಲಿ ತೊಡಗಬೇಕೆ ಹೊರತು ಬೇರೆಯ ವರು ಹೇಳಿದ್ದನ್ನಷ್ಟೆ ತಲೆಗೆ ತುಂಬಿಕೊಳ್ಳಬಾರದು ಎಂದರ್ಥ.

“ಕಣ್ಣಿನ ಕಾಂತಿ, ಮನಸ್ಸಿನ ಶಾಂತಿ, ಮುಖದ ತೇಜಸ್ಸು, ಆತ್ಮದ ಓಜಸ್ಸು, ದೇಹದ ಉಲ್ಲಾಸ, ಹೃದಯದ ಉತ್ಸಾಹ ಎಲ್ಲವನ್ನೂ ಕಳೆದುಕೊಂಡು ಜೀವಂತ ಶವಗಳಂತೆ ಇರುವವರಿಂದ ನಾಡಿಗಾದರೂ ಜನರಿಗಾದರೂ ಏನು ಉಪಯೋಗವಾದೀತು?" ಎಂದು ಪ್ರಶ್ನಿಸುತ್ತ ಮಕ್ಕಳಿಗೆ ತಮ್ಮ ಬುದ್ಧಿಶಕ್ತಿ ತಕ್ಕಂತೆ ಕ್ಷೇತ್ರ ಆಯ್ದುಕೊಳ್ಳುವ ಅವಕಾಶ ನೀಡಿದಾಗ ಮಾತ್ರ ವಿದ್ಯಾರ್ಥಿ ದೆಸೆಯಿಂದ ಬಹುತ್ವವನ್ನು ಸಾಧಿಸಲು ಸಾಧ್ಯ ಎಂದಿದ್ದಾರೆ ಕುವೆಂಪು.

“ಉತ್ಸಾಹ ಎಂಬುದು ಹುಲ್ಲಿನ ಬೆಂಕಿಯಾಗದೆ ಕಲ್ಲಿದ್ದಿಲಿನ ಕಾವಾಗಬೇಕು" ಎನ್ನುತ್ತ ನಮ್ಮಲ್ಲಿನ ಉತ್ಸಾಹವು ಎಂದಿಗೂ ಬತ್ತಬಾರದು ಎನ್ನುತ್ತಿದ್ದರು. ಕುವೆಂಪು ಅವರಿಗೆ ನಿಸರ್ಗದ ಮೇಲೆ ಅಪಾರ ಪ್ರೀತಿ ಇತ್ತು. ಅವರ ಕನ್ನಡ ಭಾಷೆಯ ಪ್ರೇಮ ಎಷ್ಟರಮಟ್ಟಿಗೆ ಇತ್ತೆಂದರೆ ಕನ್ನಡ ಆಯ್ಕೆಯೇ ಅವರ ಪ್ರಾಶಸ್ತ್ಯವಾಗಿತ್ತು.

‘ಜಯ ಭಾರತ ಜನನಿಯ ತನುಜಾತೆ’, ‘ಎದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡ ವಾಗಿರು’, ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ’ ಎಂದು ಕನ್ನಡದ ಅಸ್ಮಿತೆಗಾಗಿ ಕುವೆಂಪು ಅಹರ್ನಿಶಿ ಶ್ರಮಿಸಿzರೆ. ‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಪದ ಕಟ್ಟಿ, ಕಷ್ಟಪಟ್ಟು ದುಡಿಯುವ ರೈತನ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿ ದವರು ಕುವೆಂಪು.

‘ಓ ನನ್ನ ಚೇತನ ಆಗು ನೀ ಅನಿಕೇತನ’ ಎಂದು ಸಂದೇಶ ಸಾರಿದ ಈ ‘ಯುಗದ ಕವಿ ಜಗದ ಕವಿ’ಗೆ, ಮಹಾನ್ ಚೇತನಕ್ಕೆ ಗೌರವ ನಮನಗಳನ್ನು ಸಲ್ಲಿಸೋಣ.

(ಲೇಖಕರು ಶಿಕ್ಷಕರು)