ಅಶ್ವತ್ಥಕಟ್ಟೆ
21 ರಾಜ್ಯದಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ ನಾಯಕರಿಗೆ, ಕರ್ನಾಟಕ ದಲ್ಲಿ ಅಧಿಕಾರಕ್ಕೆ ಬರುವುದರ ಹಿಂದಿನ ಲಾಭದ ಬಗ್ಗೆ ಸ್ಪಷ್ಟನೆಯಿದೆ. ದಕ್ಷಿಣ ಭಾರತದಲ್ಲಿ ತಳವೂರಲು ಈಗಲೂ ಚಡಪಡಿಸುತ್ತಿರುವ ಸಮಯದಲ್ಲಿ ಕರ್ನಾಟಕ ದಲ್ಲಿ ಕಾಂಗ್ರೆಸ್ ಸರಕಾರವನ್ನು ತೆಗೆಯುವುದರಿಂದ ಇತರೆ ರಾಜ್ಯಗಳಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಲು ಆಗಬಹುದಾದ ಲಾಭ-ನಷ್ಟದ ಅರಿವು ದೆಹಲಿ ನಾಯಕ ರಿಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಸುದೀರ್ಘ ಅವಧಿಗೆ ಅಸ್ತಿತ್ವ ದಲ್ಲಿರಬೇಕೆಂದರೆ ಆ ಪಕ್ಷದ ದೂರದೃಷ್ಟಿಯ ಆಲೋಚನೆಗಳು ಪ್ರಮುಖವಾಗುತ್ತದೆ. ದೂರದೃಷ್ಟಿಯ ಜತೆಜತೆ ತಮ್ಮ ಪಕ್ಷದ ಕೇಡರ್‌ಗಳನ್ನು ಭದ್ರಪಡಿಸಿಕೊಂಡಾಗ ಮಾತ್ರ ಸೋಲು-ಗೆಲುವಿನಾಚೆಯ ಬಲವನ್ನು ಪಕ್ಷಗಳು ಹೊಂದುತ್ತವೆ. ಒಂದು ಚುನಾವಣೆಯಲ್ಲಿ ಗೆದ್ದೆ ಎಂದು ಮೈಮರೆಯದೇ, ಸೋತ ಮಾತ್ರಕ್ಕೆ ಭ್ರಮನಿರಸನರಾಗದೇ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿಯಿದ್ದಾಗ ಮಾತ್ರ ರಾಜಕೀಯ ಹಾದಿಯಲ್ಲಿ ಸುದೀರ್ಘ ಪಯಣ ಸಾಧ್ಯವಾಗುತ್ತದೆ.
ಸದ್ಯ ಈ ವಿಚಾರ ಕರ್ನಾಟಕ ಬಿಜೆಪಿಗೆ ಸೂಕ್ತ ಎನಿಸುತ್ತಿದೆ. 2023ರ ಚುನಾವಣೆಯಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದ ಹೀನಾಯವಾಗಿ ಸೋತಿದ್ದ ಬಿಜೆಪಿ, 2028ರ ಚುನಾವಣೆಗೆ ಎರಡು ವರ್ಷವಿರುವಾಗಲೇ ಸಂಘಟನೆಗೆ ವೇಗ ನೀಡಲು ದೆಹಲಿ ವರಿಷ್ಠರು ಮುಂದಾಗಿದ್ದಾರೆ. ಬಿಎಸ್‌ವೈ ಅಭಿಮಾನೋತ್ಸವದ ನೆಪದಲ್ಲಿ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರೆ, ಅದರ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಬಹಿರಂಗ ಸಭೆ ನಡೆಸಿದರು.
ಇದಾಗಿ ಎರಡು ವಾರ ಕಳೆಯುವ ಮೊದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ನಿತಿನ್ ನಬೀನ್ ಕರ್ನಾಟಕ ಪ್ರವಾಸ ಕೈಗೊಂಡು, ರಾಜ್ಯ ಘಟಕದ ನಟ್ಟು-ಬೋಲ್ಟ್‌ಗಳನ್ನು ಯಾರಿಗೂ ನೋವಾಗದಂತೆ ಟೈಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಗೆಲುವಿನ ಬಳಿಕ ಕರ್ನಾಟಕವನ್ನು ಬಿಜೆಪಿ ವರಿಷ್ಠರು ಟಾರ್ಗೆಟ್ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ದೇಶಾದ್ಯಂತ ನೆಲಕಚ್ಚುತ್ತಿರುವ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಮರುಭೂಮಿಯಲ್ಲಿರುವ ಓಯಾಸಿಸ್ ಆಗಿದೆ. ಈ ಓಯಾಸಿಸ್ ಅನ್ನು ಮುಚ್ಚಿದರೆ ಅಲ್ಲಿಗೆ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತ ಕೊಡಬಹುದು ಎನ್ನುವುದು ಬಿಜೆಪಿ ದೆಹಲಿ ನಾಯಕರ ಆಲೋಚನೆಯಾಗಿದೆ. ಆ ಕಾರಣ ಕ್ಕಾಗಿಯೇ ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ, ನಿತಿನ್ ನಬೀನ್ ಕರ್ನಾಟಕ ವನ್ನು ಕೈಗೆತ್ತಿಕೊಂಡಿದ್ದಾರೆ. ಇದರ ಭಾಗವಾಗಿಯೇ ಭಾನುವಾರದ ಸಂವಾದದಲ್ಲಿ ಹಾಗೂ ಕೋರ್ ಕಮಿಟಿ ಸಭೆಯಲ್ಲಿ, ‘ಕಾಂಗ್ರೆಸ್ ಸರಕಾರವನ್ನು ಮಾಧ್ಯಮಗಳ ಮುಂದೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸುವುದನ್ನು ಬಿಟ್ಟು ಏನು ಮಾಡಿದ್ದೀರಾ? ಸಂಘಟನೆಯ ವಿಷಯದಲ್ಲಿ ಯಾರ ಕೊಡುಗೆ ಎಷ್ಟಿದೆ? ಎನ್ನುವ ಪ್ರಶ್ನೆಗಳ ಮೂಲಕ ಶಾಲು ಸುತ್ತಿ ಹೊಡೆದಿದ್ದಾರೆ.
ಇದನ್ನೂ ಓದಿ: Ranjith H Ashwath Column: ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?
ಶಾಸಕರು, ಸಂಸದರು, ಪದಾಧಿಕಾರಿ ಹಾಗೂ ಜಿಲ್ಲಾಧ್ಯಕ್ಷರೊಂದಿಗೆ ನಡೆದ 100 ನಿಮಿಷದ ಸಂವಾದದಲ್ಲಿ ನಿತಿನ್, ಏನೇನು ಮಾಡುತ್ತಿದ್ದೀರಾ ಎನ್ನುವ ಮಾಹಿತಿಯನ್ನು ಪಡೆದು ಕೊಂಡಿದ್ದಾರೆ. ಈ ವೇಳೆ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಎನ್ನುವ ಸಂದೇಶ ರವಾನಿಸಿದ್ದಾರೆ. ಇದಾದ ಬಳಿಕ ನಡೆದ ಕೋರ್ ಕಮಿಟಿ ಸಭೆಯಲ್ಲಿ, ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯವನ್ನು ಪ್ರಸ್ತಾಪಿಸುವ ಜತೆಗೆ, ಕಾಂಗ್ರೆಸ್ ಅನ್ನು ಟೀಕಿಸುವು ದರಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.
ತಳಮಟ್ಟದಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಿ ಎಂದಿದ್ದಾರೆ. ಕಾಂಗ್ರೆಸ್ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ದಡ ಸೇರಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಅನೇಕ ನಾಯಕರಿಗೆ ಮೊದಲ ಭೇಟಿಯಲ್ಲಿಯೇ ಕ್ಲಾಸ್ ತೆಗೆದುಕೊಂಡಿರುವ ನಿತಿನ್ ನಬೀನ್ ಸೋಷಿಯಲ್ ಮೀಡಿಯಾದ ಲೈಕ್ಸ್, ಕಾಮೆಂಟ್‌ಗಳು ವೋಟ್‌ಗಳಾಗುವುದಿಲ್ಲ.
ಸಂಘಟನೆಯನ್ನೇ ಮರೆತು, ಮಾಧ್ಯಮಗಳ ಮುಂದೆ ಹೇಳಿಕೆ, ಸೋಷಿಯಲ್ ಮೀಡಿಯಾದ ಪೋಸ್ಟ್‌ಗಳನ್ನು ಬಿಟ್ಟು ತಳಹಂತದಲ್ಲಿ ಸಂಘಟನೆಯ ಬಲ ಗಟ್ಟಿಮಾಡಿಕೊಳ್ಳಿ. ಬೂತ್ ಮಟ್ಟದಿಂದ ಹೋರಾಟ ರೂಪಿಸಿ ಎನ್ನುವ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯಿತಿಯಿಂದ ರಾಷ್ಟ್ರಮಟ್ಟದವರೆಗೆ ಕೇಂದ್ರ ಸರಕಾರದ ಸಾಧನೆಗಳೇ ನಮ್ಮ ಅಸ್ತ್ರ ಗಳಾಗಬಾರದು.
ನಿಮ್ಮ ಸಂಘಟನಾ ಶಕ್ತಿಯನ್ನು ತೋರಿಸಿ ಎನ್ನುವ ಜತೆಗೆ ಪಕ್ಷವನ್ನು ಅಧಿಕಾರಕ್ಕೆ ತರು ವುದು ಮಾತ್ರ ಮುಖ್ಯವೇ ಹೊರತು ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನುವುದಲ್ಲ ಎನ್ನುವ ಮೂಲಕ ನಾಯಕತ್ವದ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಇನ್ನು ನಿತಿನ್ ನಬೀನ್ ಅವರು ಶಾಸಕರು, ಸಂಸದರು, ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಬೂತ್ ಗಳನ್ನು ಗಟ್ಟಿಗೊಳಿಸಿಕೊಳ್ಳುವ ಜತೆಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಏಕೆಂದರೆ, ಸ್ಥಳೀಯ ಸಂಸ್ಥೆಗಳ ಮೇಲಿನ ಹಿಡಿತ ಗಟ್ಟಿಯಾದಷ್ಟು, 2028ರ ಗುರಿ ಸಾಧಿಸು ವುದು ಸುಲಭ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಏಕೆಂದರೆ, ಯಾವುದೇ ರಾಜ್ಯ ಗೆಲ್ಲುವ ಮೊದಲು ಅಲ್ಲಿನ ಸ್ಥಳೀಯ ಸಂಸ್ಥೆಗಳನ್ನು ಗೆಲ್ಲಬೇಕು ಎನ್ನುವುದು ರಾಜಕೀಯ ತಂತ್ರಗಾರಿಕೆ ಭಾಗ. ಈಗ ರಾಜಕೀಯದ ಆಯಕಟ್ಟಿನ ಹುzಯಲ್ಲಿರುವ ಬಹುತೇಕ ನಾಯಕರು, ದಶಕಗಳ ಹಿಂದೆ ಗ್ರಾಮ ಪಂಚಾಯಿತಿಗೋ, ನಗರಸಭೆಗೋ ಅಥವಾ ಬೆಂಗಳೂರಿನ ಶಾಸಕರು ಬಿಬಿಎಂಪಿ ಕಾರ್ಪೋರೇಟರ್‌ಗಳಾಗಿಯೋ ರಾಜಕೀಯಕ್ಕೆ ಕಾಲಿಟ್ಟವರು.
ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಕರ್ನಾಟಕದಲ್ಲಿ 31 ಜಿಲ್ಲಾ ಪಂಚಾಯಿತಿ, 226 ತಾಲೂಕು ಪಂಚಾಯಿತಿ ಮತ್ತು 6022 ಗ್ರಾಮ ಪಂಚಾಯಿತಿಗಳೊಂದಿಗೆ, 10 ಮಹಾನಗರ ಪಾಲಿಕೆ, 61 ನಗರಸಭೆ, 123 ಪುರಸಭೆ, 117 ಪಟ್ಟಣ ಪಂಚಾಯಿತಿಗಳಿವೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಾಗ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆ ಯಾಗುತ್ತಾರೆ.
ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಚಿಹ್ನೆ ಸಿಗದಿದ್ದರೂ, ಪಕ್ಷದ ಬೆಂಬಲದೊಂದಿಗೆ ಚುನಾವಣೆ ನಡೆಯುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಈ ಎಲ್ಲ ಚುನಾವಣೆಗಳು ಪಕ್ಷಗಳ ಬಲಾಬಲವನ್ನು ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕೇವಲ ತೋರಿಸುವುದಷ್ಟೇ ಅಲ್ಲದೇ, ಬಲವನ್ನು ಹೆಚ್ಚಿಸಿಕೊಳ್ಳುವಲ್ಲಿ, ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ, ಪಕ್ಷದ ಬಲಾಬಲ ಸ್ಪಷ್ಟವಾಗುತ್ತದೆ ಎನ್ನುವುದು ನಿತಿನ್ ನಬೀನ್ ಸೂಚನೆಯ ಒಳಮರ್ಮ.
ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದಾಗಿ ಘೋಷಿಸಿಕೊಂಡೇ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಅನೇಕರಿಗೆ ಸ್ಥಳೀಯ ಸಂಸ್ಥೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸಲು ಇಷ್ಟವಿಲ್ಲ. ಈ ಕಾರಣಕ್ಕಾಗಿಯೇ ಅನೇಕ ಕಾರ್ಯಕರ್ತರು ರಾಜಕೀಯದಿಂದ ನಿಷ್ಕ್ರಿಯರಾಗಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮಾತನಾಡುತ್ತಾ, ‘ನಿತ್ಯ ಮನೆ ಮುಂದೆ ಹತ್ತಾರು ಜನ ಬರುತ್ತಾರೆ. ಅವರಿಗೆ ಕಾಫಿ-ಟೀ ಎಂದರೂ ತಿಂಗಳಿನಿಂದ ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ಇಷ್ಟು ಖರ್ಚು ಮಾಡಿದರೂ ಯಾವುದೇ ಲಾಭವಿಲ್ಲ ಎಂದಾಗ ನಾವೇಕೆ ಕೆಲಸ ಮಾಡಬೇಕು?’ ಎನ್ನುವ ಹತಾಶೆಯ ಭಾವನೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಅನೇಕ ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದಾರೆ.
ಹಾಗೇ ನೋಡಿದರೆ, ಈ ಹಿಂದೆಯಿದ್ದ ಬಿಜೆಪಿ ಸರಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪ, ಒಳ ಜಗಳದ ಲಾಭ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್‌ನಲ್ಲಿಯೂ ಸದ್ಯದ ಸ್ಥಿತಿ ಭಿನ್ನವಾಗಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಪಕ್ಷದಲ್ಲಿ ಶುರುವಾದ ಆಂತರಿಕ ತಿಕ್ಕಾಟ, ನಾಯಕರ ನಡುವಿನ ಸಮನ್ವಯ ಕೊರತೆಯಿಂದ ಪಕ್ಷದ ಅನೇಕ ಕಾರ್ಯಕರ್ತರು ರಾಜಕೀಯವಾಗಿ ‘ತಟಸ್ಥ’ರಾದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಪಕ್ಷದ ಕಾರ್ಯಕರ್ತರಿಗಿಂತ ಆಪರೇಷನ್ ಕಮಲದಿಂದ ಪಕ್ಷಕ್ಕೆ ಆಗಮಿಸಿದವರು ಹಾಗೂ ಅವರ ಹಿಂಬಾಲಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಕಟ್ಟರ್ ಕಾರ್ಯಕರ್ತರಿಗೆ ಕಿಮ್ಮತ್ತು ಸಿಗುತ್ತಿಲ್ಲವೆಂದು ಅನೇಕರು ಮೌನಕ್ಕೆ ಶರಣಾಗಿ, ಚುನಾವಣೆ ಸಮಯದಲ್ಲಿಯೂ ಅಂತರ ಕಾಯ್ದುಕೊಂಡರು.
ಚುನಾವಣೆಯಲ್ಲಿ ಹೀನಾಯ ಸ್ಥಿತಿಗೆ ಬಿಜೆಪಿ ತಲುಪಲು ಇದು ಪ್ರಮುಖ ಕಾರಣವಾಗಿತ್ತು. ಅಂದು ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರ ಮುನಿಸಿನಿಂದಾದ ಎಡವಟ್ಟಿನ ಲಾಭ ಪಡೆದಿದ್ದ ಕಾಂಗ್ರೆಸ್, ಈಗ ಅದೇ ಎಡವಟ್ಟನ್ನು ಮಾಡಲು ಶುರು ಮಾಡಿದೆ ಎಂದರೆ ತಪ್ಪಾಗುವುದಿಲ್ಲ.
ಬಿಜೆಪಿಯ ವೈಫಲ್ಯಗಳನ್ನೇ ಅಸ್ತ್ರವಾಗಿಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆರಂಭಿಕ ದಿನಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದಿಲ್ಲ ಎನ್ನುವ ಸಂದೇಶ ರವಾನಿಸಿತ್ತು. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹತ್ತು ಹಲವು ರೀತಿಯ ತಂತ್ರಗಾರಿಕೆಗಳನ್ನು ಮಾಡಿದ್ದರು. ಅದರಲ್ಲಿಯೂ ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ಅರ್ಜಿ ಆಹ್ವಾನ, ಸ್ಥಳೀಯ ನಿಗಮಗಳ ನಿರ್ದೇಶಕ, ಸದಸ್ಯತ್ವ ಸ್ಥಾನಕ್ಕೆ ನೇಮಿಸುವುದಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.
ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಇರುವ ನಿರ್ದೇಶಕ, ಸ್ಥಾನಗಳ ಸಂಖ್ಯೆ ಯನ್ನು ಸರಿಯಾಗಿ ತುಂಬಿದರೆ ಎಂಟೊಬ್ಬತ್ತು ಸಾವಿರ ಕಾರ್ಯಕರ್ತರಿಗೆ ಅವಕಾಶ ನೀಡಲು ಸಾಧ್ಯವಿದೆ. ಆ ಕಾರಣಕ್ಕಾಗಿಯೇ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಈ ಅವಕಾಶ ನೀಡಬೇಕು ಎಂದು ಜಿಲ್ಲಾಧ್ಯಕ್ಷರು, ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ನಿಮ್ಮ ನಿಮ್ಮ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರನ್ನು ಶಿಫಾರಸು ಮಾಡಿ ಎಂದು ಸೂಚನೆ ನೀಡಿದ್ದರು. ಇದಾದ ಬಳಿಕ ಪರಂ ಸಮಿತಿಯೂ ಈ ಎಲ್ಲ ಅರ್ಜಿಗಳನ್ನು ನೋಡಿ ಅಂತಿಮ ಪಟ್ಟಿಯನ್ನು ತಯಾರಿಸಿದೆ.
ಆದರೆ ಪಟ್ಟಿಗೆ ಮಾತ್ರ ಅಂತಿಮ ಮುದ್ರೆ ಬಿದ್ದಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿಕೊಂಡು, ಅದಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ನೇಮಿಸಿಕೊಂಡಿರುವುದು ಬಿಟ್ಟರೆ ಉಳಿದ ನಿಗಮ-ಮಂಡಳಿಗಳ ಸದಸ್ಯ, ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಿಂತಲ್ಲೆ ನಿಂತಿದೆ.
ಈ ಪಟ್ಟಿಯನ್ನು ಅಂತಿಮಗೊಳಿಸಬೇಕು ಎನ್ನುವ ಹೊತ್ತಿಗೆ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಗದ್ದಲ ಜೋರಾಗಿದ್ದರಿಂದ ಕಾರ್ಯಕರ್ತರಿಗೆ ಸಿಗಬೇಕಿದ್ದ ಹುದ್ದೆಗಳ ಬಗ್ಗೆ ಯೋಚಿಸಲು ನಾಯಕರಿಗೆ ಸಮಯವಿಲ್ಲವಾಗಿದೆ. ಈ ಹುದ್ದೆಗಳಿಂದ ಬಹುದೊಡ್ಡ ಲಾಭವಾಗುತ್ತದೆ ಎನ್ನುವುದಕ್ಕಿಂತ, ಪಕ್ಷದ ಅಧಿಕಾರದಲ್ಲಿದ್ದಾಗ ಗುರುತಿಸುವ ಕಾರ್ಯವಾಗಿದೆ ಎನ್ನುವುದೇ ಕಾರ್ಯಕರ್ತನಿಗೆ ಸಿಗುವ ಬಹುದೊಡ್ಡ ಮನ್ನಣೆ. ಆದರೆ ನಾಯಕರಲ್ಲಿನ ಕಿತ್ತಾಟದಿಂದ ಇಡೀ ಪ್ರಕ್ರಿಯೆ ನಿಂತಲ್ಲೇ ನಿಂತಿರುವುದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.
ಭರ್ಜರಿ ಬಹುಮತದೊಂದಿಗೆ ಸರಕಾರವನ್ನು ರಚಿಸಿದ ಬಳಿಕ ಕಳೆದ ಆರು ತಿಂಗಳುಗಳಿಂದ ನಡೆಯುತ್ತಿದ್ದ ಕಿತ್ತಾಟ, ಗೊಂದಲ, ಈ ಗೊಂದಲಕ್ಕೆ ಪರಿಹಾರ ನೀಡಬೇಕಾದ ಪಕ್ಷದ ಹೈಕಮಾಂಡ್ ಒಬ್ಬರ ಮೇಲೊಬ್ಬರು ಹಾಕಿಕೊಂಡು ಸಮಯದೂಡುತ್ತಿರುವುದು ಪಕ್ಷದ ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಾರ್ಯಕರ್ತರಲ್ಲಿದ್ದ ಅಸಮಾಧಾನ, ಬೇಸರವೇ ಈಗಿನ ಕಾಂಗ್ರೆಸ್ ಸರಕಾರದಲ್ಲಿ ಶುರು ವಾಗಿರುವುದು ಪಕ್ಷಕ್ಕೆ ಎಚ್ಚರಿಕೆ ಗಂಟೆ ಎಂದರೆ ತಪ್ಪಾಗುವುದಿಲ್ಲ.
ದೇಶದ 21 ರಾಜ್ಯದಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ ನಾಯಕರಿಗೆ, ಕರ್ನಾಟಕ ದಲ್ಲಿ ಅಧಿಕಾರಕ್ಕೆ ಬರುವುದರ ಹಿಂದಿನ ಲಾಭದ ಬಗ್ಗೆ ಸ್ಪಷ್ಟನೆಯಿದೆ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ತಳವೂರಲು ಈಗಲೂ ಚಡಪಡಿಸುತ್ತಿರುವ ಸಮಯದಲ್ಲಿ ಕರ್ನಾಟಕ ದಲ್ಲಿ ಕಾಂಗ್ರೆಸ್ ಸರಕಾರವನ್ನು ತೆಗೆಯುವುದರಿಂದ ಇತರೆ ರಾಜ್ಯಗಳಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಲು ಆಗಬಹುದಾದ ಲಾಭ-ನಷ್ಟದ ಅರಿವು ದೆಹಲಿ ನಾಯಕರಿಗಿದೆ.
ವಿಧಾನಸಭಾ ಚುನಾವಣೆ ಎರಡು ವರ್ಷವಿರುವಾಗಲೇ, ಸಿದ್ಧತೆ ಆರಂಭಿಸಿ ಕರ್ನಾಟಕವನ್ನು ಮರಳಿ ಪಡೆದರೆ 2029ರಲ್ಲಿ ಎದುರಾಗುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಜತೆ ಜಂಟಿ ಕಾರ್ಯಚರಣೆ ನಡೆಸಿ ಅಧಿಕಾರವನ್ನು ವಿಸ್ತರಿಸಿ ಕೊಳ್ಳುವ ಆಲೋಚನೆಯಿದೆ.
ಸದ್ಯದ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹಾಗೂ ಬಿಜೆಪಿಯ ಸಂಘಟನಾ ಶಕ್ತಿಯನ್ನು ನೋಡಿದರೆ ಮೇಲ್ನೋಟಕ್ಕೆ ಈ ಆಲೋಚನೆಯೇನು ಬಹುದೊಡ್ಡ ಸವಾಲಿನದ್ದಾಗಿಲ್ಲ. ಪಶ್ಚಿಮ ಬಂಗಾಳದ ರೀತಿ ಸಂಘಟನೆಯೇ ಇಲ್ಲದಿದ್ದರೂ, ಕಟ್ಟಿ ಬೆಳೆಸಲು ಅವಕಾಶವಿರುತ್ತದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರಿಗೇನು ಕೊರತೆ ಇಲ್ಲ. ಆದರೆ ಇರುವುದು ಪಕ್ಷದೊಳಗೆ ಆಗ್ಗಿದ್ದಾಗೆ ಕಾಣಿಸಿಕೊಳ್ಳುವ ಒಳಜಗಳ. ಈ ಒಳಜಗಳನ್ನು ಸರಿಪಡಿಸಿ ಕೊಳ್ಳದೇ, ಅದೆಷ್ಟೇ ಸಂಘಟನೆಗೆ ಒತ್ತು ಹಾಗೂ ತಂತ್ರಗಾರಿಕೆ ಮಾಡಿದರೂ ಅದರ ಪೂರ್ಣ ಫಲ ಸಿಗುವುದು ಭಾರಿ ಕಷ್ಟ ಎನ್ನುವ ವಾಸ್ತವತೆ ದೆಹಲಿ ನಾಯಕರಿಗಿದೆ.
ಬಿಜೆಪಿ ವರಿಷ್ಠರಿಗೂ ಇರುವ ತೊಡಕು ಸಹ ಇದೇ ಆಗಿದೆ. ಕರ್ನಾಟಕದ ಗೆಲುವಿಗೆ ‘ಅಶ್ವಮೇಧ’ ಕಟ್ಟುವುದು ದೊಡ್ಡ ವಿಷಯವಲ್ಲ. ಆದರೆ ಈ ಅಶ್ವಮೇಧದ ನೇತೃತ್ವ ವಹಿಸುವುದು ಯಾರು? ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕನ್ಯಾರು ಎನ್ನುವುದೇ ದೆಹಲಿ ವರಿಷ್ಠರ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಶೀಘ್ರವೇ ಉತ್ತರ ಹುಡುಕದಿದ್ದರೆ ಅಥವಾ ಹುಡುಕಾಟ ಆರಂಭಿಸದೇ ಹೋದರೆ ಕಾಂಗ್ರೆಸ್ ವಿರುದ್ಧದ ಆಡಳಿತ ವಿರೋಧಿ ಅಲೆ, ಬೂತ್‌ಮಟ್ಟದಲ್ಲಿ ಬಿಜೆಪಿ ಸಂಘಟನೆ ಸೇರಿದಂತೆ ಯಾವುದೇ ಡ್ರಿಲ್‌ಗಳು ಬಹುದೊಡ್ಡ ಯಶಸ್ಸನ್ನು ಬಿಜೆಪಿ ತಂದುಕೊಡುವುದಿಲ್ಲ.