ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokesh Kayarga Column: ಸರಕಾರವನ್ನೇ ಖಾಸಗಿಯವರಿಗೆ ಒಪ್ಪಿಸಿ ಬಿಡಿ !

ದೇಶದ ನಾಗರಿಕರ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸರಕಾರಗಳಿಗೆ ಸಾಧ್ಯವಿಲ್ಲ ಎಂದಾದರೆ, ಈ ಬೃಹತ್ ಸರಕಾರಿ ಯಂತ್ರ, ನೂರಾರು ಶಾಸಕರು, ಸಂಸದರು, ಸಚಿವರು ಮತ್ತು ವೈಭವದ ವಿಧಾನಸೌಧ, ಸಂಸತ್ತು ಯಾರಿಗಾಗಿ ಬೇಕು? ಇದಕ್ಕಿಂತ ಜಾಗತಿಕ ಟೆಂಡರ್ ಕರೆದು ಇಡೀ ಸರಕಾರವನ್ನೇ ಯಾವುದಾದರೂ ದೈತ್ಯ ಕಾರ್ಪೊರೇಟ್ ಕಂಪನಿಗೆ ವಹಿಸಿಕೊಡುವುದು ಒಳಿತು. ಇದಕ್ಕೆ ದಾರಿ ಮಾಡಿ ಕೊಡಲು ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದ’ ಮತ್ತು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂಬ ಎರಡು ಪದಗಳನ್ನು ಕೈಬಿಟ್ಟು, ‘ಕಾರ್ಪೊರೇಟ್ ನಿಯಂತ್ರಿತ ಭಾರತ’ ಎಂದು ಬದಲಾಯಿಸಿದರಾಯಿತು !

ಲೋಕಮತ

ಭಾರತದ ಪ್ರಜೆಗಳಾದ ನಾವು... ಎಂದು ಆರಂಭವಾಗುವ ನಮ್ಮ ಸಂವಿಧಾನದ ಪೀಠಿಕೆ ದೇಶವನ್ನು ‘ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ಘೋಷಿಸುತ್ತದೆ. ಇಲ್ಲಿ ‘ಸಮಾಜವಾದ’ ಎನ್ನುವ ಪದಕ್ಕೆ ಕೇವಲ ರಾಜಕೀಯ ಅರ್ಥವಿಲ್ಲ; ಅದಕ್ಕೊಂದು ಆಳವಾದ ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಯಿದೆ. ದೇಶದ ಸಂಪತ್ತು ಮತ್ತು ಸಂಪನ್ಮೂಲಗಳು ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಮಡುಗಟ್ಟದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನವಾಗಿ ಹಂಚಿಕೆಯಾಗಬೇಕು, ಶಿಕ್ಷಣ, ಆರೋಗ್ಯ, ಸಾರಿಗೆ, ಬೆಳಕು ಮತ್ತು ನೀರಿನಂತಹ ಕನಿಷ್ಠ ಅಗತ್ಯಗಳನ್ನು ಒದಗಿಸುವುದು ಸರಕಾರದ ಪರಮ ಆದ್ಯತೆಯಾಗಿರಬೇಕು ಎನ್ನುವುದು ಈ ಕಲ್ಪನೆಯ ಆಶಯ.

ಆದರೆ, ಇಂದಿನ ಭಾರತದ ಆರ್ಥಿಕ ಚಿತ್ರಣವನ್ನು ನೋಡಿದರೆ ಸಂವಿಧಾನ ಶಿಲ್ಪಿಗಳು ಕಂಡ ಕನಸು ನುಚ್ಚುನೂರಾಗುತ್ತಿದೆಯೇ ಎಂಬ ದಟ್ಟವಾದ ಅನುಮಾನ ಕಾಡತೊಡಗಿದೆ. ಜಾಗತೀಕರಣದ ಹೆಸರಿನಲ್ಲಿ ಆರಂಭವಾದ ಆರ್ಥಿಕ ಸುಧಾರಣೆಗಳು ಇಂದು ಖಾಸಗೀ ಕರಣದ ಅತಿರೇಕಕ್ಕೆ ಬಂದು ನಿಂತಿವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವ ರೆಗೆ ಸಾಮಾನ್ಯ ನಾಗರಿಕ ಬಳಸುವ ಪ್ರತಿಯೊಂದು ಸೇವೆಯೂ ಒಂದೊಂದಾಗಿ ಕಾರ್ಪೊ ರೇಟ್ ಸಂಸ್ಥೆಗಳ ಪಾಲಾಗುತ್ತಿವೆ. ಸರಕಾರಗಳು ಕೇವಲ ತೆರಿಗೆ ವಸೂಲಿ ಮಾಡುವ ‘ಕಲೆಕ್ಷನ್ ಏಜೆಂಟ್’ಗಳಾಗುತ್ತಿವೆ. ಕಲ್ಯಾಣ ರಾಜ್ಯದ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ನುಣುಚಿಕೊಳ್ಳುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ಹೊಸ ಯೋಜನೆ ಗಳನ್ನು ಪ್ರಕಟಿಸಿದರೂ ಅಲ್ಲಿ ಕೇಳಿಬರುವ ಮೊದಲ ಪದ ‘ಪಿಪಿಪಿ’ (Public&Private Partnership - ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ). ಹೆದ್ದಾರಿಗಳ ನಿರ್ಮಾಣ, ಮೆಟ್ರೋ ರೈಲು, ರೈಲ್ವೆ ನಿಲ್ದಾಣಗಳ ನವೀಕರಣ, ವಿಮಾನ ನಿಲ್ದಾಣಗಳ ಆಧುನೀಕರಣ, ಬಂದರು ಗಳ ಅಭಿವೃದ್ಧಿ ಮಾತ್ರವಲ್ಲ ಕಸ ಎತ್ತುವುದಕ್ಕೂ ಸರಕಾರಗಳು ಪಿಪಿಪಿ ಮಾದರಿ ಯನ್ನೇ ಜಪಿಸುತ್ತಿವೆ. ಈ ಮಾದರಿಯನ್ನು ಸಮರ್ಥಿಸಿಕೊಳ್ಳುವ ಆರ್ಥಿಕ ತಜ್ಞರು, ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ನೀಡುವ ಒಂದೇ ನೆಪ ಎಂದರೆ, ಇದರಿಂದ ಸರಕಾರದ ಮೇಲಿನ ತತ್‌ಕ್ಷಣದ ಆರ್ಥಿಕ ಹೊರೆ ತಪ್ಪುತ್ತದೆ, ಖಾಸಗಿ ಬಂಡವಾಳ ಹರಿದು ಬರುತ್ತದೆ ಮತ್ತು ಆಧುನಿಕ ತಂತ್ರಜ್ಞಾನ ಸಿಗುತ್ತದೆ.

ಇದನ್ನೂ ಓದಿ: Lokesh Kayarga News: ದುಬಾ(ರಿ)ರೆ ಪಾಠ: ಪ್ರಾಣಿಗಳ ಪ್ರೀತಿಗಿರಲಿ ಜೀವದ ಅಂತರ !

ಮೇಲ್ನೋಟಕ್ಕೆ ಇದು ಆಕರ್ಷಕವಾಗಿ ಕಂಡರೂ, ಇದರ ಅಂತಿಮ ಹೊರೆ ಬೀಳುವುದು ಯಾರ ಮೇಲೆ? ಖಂಡಿತವಾಗಿಯೂ ಸಾಮಾನ್ಯ ನಾಗರಿಕನ ಜೇಬಿನ ಮೇಲೆ. ಮುಂಬೈ, ಚೆನ್ನೈ ಅಥವಾ ಕೋಲ್ಕತ್ತಾ ನಗರಗಳಲ್ಲಿ ದಶಕಗಳ ಹಿಂದೆ ಸರಕಾರವೇ ನೇರವಾಗಿ ಜಾರಿಗೆ ತಂದು, ನಿರ್ವಹಿಸುತ್ತಿರುವ ಸಬ್ ಅರ್ಬನ್ (ಉಪನಗರ) ರೈಲುಗಳನ್ನು ಗಮನಿಸಿ. ವಾಣಿಜ್ಯ ರಾಜಧಾನಿ ಇಂದಿಗೂ ಬಡವರ ಪಾಲಿಗೆ ಆಸರೆಯಾಗಿರುವುದು ಅಲ್ಲಿನ ಅಗ್ಗದ ರೈಲು ಸೇವೆಯಿಂದ.

ನವಮುಂಬಯಿಯಲ್ಲಿ ಮನೆ ಮಾಡಿಕೊಂಡ ದಿನಗೂಲಿ ನೌಕರರು, ಕಾರ್ಮಿಕರು ಕೇವಲ 300 ರಿಂದ 400 ರೂಪಾಯಿಗಳ ಮಾಸಿಕ ಪಾಸ್ ಪಡೆದು ತಿಂಗಳು ಪೂರ್ತಿ ಛತ್ರಪತಿ ಶಿವಾಜಿ ಟರ್ಮಿನಸ್ ತನಕ ನಿರಾತಂಕವಾಗಿ ಪಯಣಿಸುತ್ತಾರೆ. ಇದು ಜನಸಾಮಾನ್ಯರ ಪಾಲಿಗೆ ಜೀವನಾಡಿಯಾಗಿದೆ. ನಮ್ಮದೇ ಮೈಸೂರು- ಬೆಂಗಳೂರು ಮಧ್ಯೆ 550 ರು. ಕೊಟ್ಟು ತಿಂಗಳ ಪಾಸ್ ಪಡೆದು ಸಾವಿರಾರು ಮಂದಿ ಪಯಣಿಸುತ್ತಾರೆ.

ಆದರೆ, ಇದಕ್ಕೆ ತದ್ವಿರುದ್ಧವಾದ ಉದಾಹರಣೆ ನಮ್ಮ ಕಣ್ಣಮುಂದಿರುವ ‘ನಮ್ಮ ಮೆಟ್ರೋ’. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ ಪ್ರತ್ಯೇಕ ಕಂಪನಿ (ಬಿಎಂಆರ್‌ಸಿಎಲ್) ಸ್ಥಾಪಿಸಿ, ದೇಶ-ವಿದೇಶಗಳ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ತಂದು ಜಾರಿಗೊಳಿಸಲಾದ ಈ ಯೋಜನೆಯು ಸಾಮಾನ್ಯ ಜನರ ಪಾಲಿಗೆ ಅತ್ಯಂತ ದುಬಾರಿಯಾಗಿದೆ. ಇಲ್ಲಿ ಕೇವಲ 10 ಕಿಲೋ ಮೀಟರ್ ಪ್ರಯಾಣಿಸಬೇಕಾದರೂ 50 ರಿಂದ 60 ರೂಪಾಯಿಗಳನ್ನು ವ್ಯಯಿಸಬೇಕು. ದಿನವೊಂದಕ್ಕೆ ನೂರು ರೂಪಾಯಿಗಿಂತ ಹೆಚ್ಚು ಸಾರಿಗೆಗೇ ಖರ್ಚು ಮಾಡಬೇಕೆಂದರೆ ಒಬ್ಬ ಬಡ ಅಥವಾ ಕೆಳ ಮಧ್ಯಮ ವರ್ಗದ ಕಾರ್ಮಿಕ ಮೆಟ್ರೋ ಹತ್ತಲು ಹೇಗೆ ಸಾಧ್ಯ? ಆಧುನಿಕತೆ ಎನ್ನುವುದು ಶ್ರೀಮಂತರಿಗೆ ಮಾತ್ರ ಸೀಮಿತ ವಾಗುವುದಾದರೆ ಸಂವಿಧಾನದಲ್ಲಿ ತಿಳಿಸಿದ ‘ಸಮಾಜವಾದ’ದ ಸಮಪಾಲು, ಸಮಬಾಳು ನೀತಿಗೆ ಏನು ಅರ್ಥ ?

ಟೋಲ್ ಎಂಬ ಹಗಲು ದರೋಡೆ

ಕರ್ನಾಟಕದಲ್ಲಿ ನಾಲ್ಕು ದಶಕಗಳ ಹಿಂದೆಯೇ ‘ನೈಸ್’ ರಸ್ತೆಗೆ ಅನುಮತಿ ನೀಡುವ ಮೂಲಕ ರಸ್ತೆ ಸಂಚಾರದ ಖಾಸಗೀಕರಣ ಮತ್ತು ಬಡವರ ಭೂಮಿ ಕಿತ್ತು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಕೆಟ್ಟ ಪರಂಪರೆಗೆ ನಾಂದಿ ಹಾಡಲಾಗಿತ್ತು. ಅಂದು ಆರಂಭವಾದ ‘ಟೋಲ್’ ಸಂಸ್ಕೃತಿ ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತರುತ್ತಿರುವ ಪ್ರತಿಯೊಂದು ರಸ್ತೆಯಲ್ಲೂ ಹೆಮ್ಮರವಾಗಿ ಬೆಳೆದಿದೆ. ದೇಶದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎನ್ನುವ ಪ್ರಚಾರ ಭರಾಟೆಯ ನಡುವೆ, ಪ್ರತಿ 20-30 ಕಿಲೋಮೀಟರ್‌ ಗೊಂದು ಟೋಲ್ ಗೇಟ್‌ಗಳು ತಲೆಯೆತ್ತುತ್ತಿವೆ.

ಐದು ವರ್ಷಗಳ ಹಿಂದೆ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೋಗಿ ಬರಲು ಕೇವಲ ಇಂಧನದ ವೆಚ್ಚ ಸಾಕಾಗುತ್ತಿತ್ತು. ಆದರೆ ಇಂದು ಹೊಸದಾಗಿ ನಿರ್ಮಿಸಲಾದ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಕೇವಲ 120 ಕಿಲೋಮೀಟರ್ ಪ್ರಯಾಣಿಸಿ ಮರಳಿ ಬರಬೇಕೆಂದರೆ ಕನಿಷ್ಠ 720 ರೂಪಾಯಿಗಳನ್ನು ಕೇವಲ ಟೋಲ್ ಶುಲ್ಕದ ರೂಪದಲ್ಲೇ ಪಾವತಿಸಬೇಕು! ಹಾಗಿದ್ದರೆ ಪ್ರಜೆಗಳು ಕಟ್ಟುವ ರಸ್ತೆ ತೆರಿಗೆ, ಇಂಧನದ ಮೇಲಿನ ಸೆಸ್ಸ್‌ಗಳೆಲ್ಲ ಎಲ್ಲಿಗೆ ಹೋಗು ತ್ತಿವೆ? ಸರಕಾರ ರಸ್ತೆ ನಿರ್ಮಿಸಿಕೊಡುವುದು ನಾಗರಿಕರ ಮೂಲಭೂತ ಹಕ್ಕಲ್ಲವೇ?

ಇನ್ನು ರೈಲ್ವೆಯತ್ತ ಮುಖ ಮಾಡಿದರೆ, ಪ್ರಗತಿಯ ಸಂಕೇತವೆಂದು ಬಿಂಬಿಸುತ್ತಿರುವ ‘ವಂದೇ ಭಾರತ್’ ರೈಲುಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಾಮಾನ್ಯ ರೈಲುಗಳಿಗಿಂತ ಮೂರ್ನಾಲ್ಕು ಗಂಟೆ ಮುಂಚಿತವಾಗಿ ತಲುಪಿಸುತ್ತದೆ ಎನ್ನುವ ಕಾರಣಕ್ಕೆ ಇದಕ್ಕೆ ದುಪ್ಪಟ್ಟು ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರು ಇದನ್ನು ಸುಲಭವಾಗಿ ಬಳಸಬಹುದು. ಆದರೆ, ವಂದೇ ಭಾರತ್‌ಗಾಗಿ ಇದೇ ಹಳಿಯಲ್ಲಿ ಸಂಚರಿಸುತ್ತಿದ್ದ ಬಡವರ ಪಾಲಿನ ಪ್ಯಾಸೆಂಜರ್ ರೈಲುಗಳನ್ನು, ಎಕ್ಸ್‌ಪ್ರೆಸ್ ರೈಲುಗಳ ಜನರಲ್ ಬೋಗಿಗಳನ್ನು ಕಡಿತಗೊಳಿಸಲಾಗುತ್ತಿದೆ. ವೇಗದ ಹೆಸರಿನಲ್ಲಿ ಬಡವರ ಸಾರಿಗೆ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.

ಅಕ್ಷರ ಮತ್ತು ಆರೋಗ್ಯದ ವ್ಯಾಪಾರೀಕರಣ

ಯಾವ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಉದ್ಯಮವಾಗುತ್ತದೆಯೋ, ಆ ದೇಶದ ಪತನ ಆರಂಭವಾಗಿದೆ ಎಂದೇ ಅರ್ಥ. ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇಂದು ಶಿಕ್ಷಣ ಕ್ಷೇತ್ರವು ಸಂಪೂರ್ಣವಾಗಿ ಕಾರ್ಪೊರೇಟ್ ಉದ್ಯಮಿಗಳ ವಶವಾಗಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಕ್ಕಳನ್ನು ಎಲ್‌ಕೆಜಿ ತರಗತಿಗೆ ಸೇರಿಸಬೇಕಾದರೂ ವರ್ಷಕ್ಕೆ ಎರಡು ಲಕ್ಷ ರೂಪಾಯಿಗಳ ದೇಣಿಗೆ ಅಥವಾ ಶುಲ್ಕ ನೀಡಬೇಕಾದ ದಯನೀಯ ಸ್ಥಿತಿಯಿದೆ. ಸರಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚ ಲಾಗುತ್ತಿದೆ. ಸರಕಾರಿ ಕಾಲೇಜುಗಳಿಗೆ, ವಿವಿಗಳಿಗೆ ಕಾಯಂ ಉಪನ್ಯಾಸಕರನ್ನು ನೇಮಿಸ ದಿರುವ ಮೂಲಕ ವಿದ್ಯಾರ್ಥಿಗಳನ್ನು ದೂರವಿಡಲಾಗುತ್ತಿದೆ. ಇನ್ನೊಂದೆಡೆ ಖಾಸಗಿ ವಿವಿಗಳಿಗೆ ಸಲೀಸಾಗಿ ಅನುಮತಿ ನೀಡಲಾಗುತ್ತಿದೆ.

ವೈದ್ಯಕೀಯ ಶಿಕ್ಷಣದ ಕಥೆಯಂತೂ ಕೇಳುವುದೇ ಬೇಡ. ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಬಹುತೇಕ ಎಲ್ಲವೂ ಖಾಸಗಿ ಒಡೆತನದಲ್ಲಿದ್ದು, ಅಲ್ಲಿ ಸೀಟು ಪಡೆಯಲು ಕೋಟ್ಯಂತರ ರೂಪಾಯಿಗಳ ಶುಲ್ಕ ತೆರಬೇಕು. ಇಷ್ಟೊಂದು ಹಣ ಹೂಡಿ ವೈದ್ಯರಾಗು ವವರು ಮುಂದೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹೇಗೆ ಸಾಧ್ಯ? ಅವರು ಸಹಜ ವಾಗಿಯೇ ತಮ್ಮ ಹೂಡಿಕೆಯನ್ನು ಜನರಿಂದ ವಸೂಲಿ ಮಾಡಲು ಮುಂದಾಗುತ್ತಾರೆ.

ಆರೋಗ್ಯ ಸೇವೆಯು ಇಂದು ಸಂಪೂರ್ಣವಾಗಿ ಖಾಸಗಿ ಆಸ್ಪತ್ರೆಗಳ ‘ಮಾಫಿಯಾ’ ಆಗಿ ಬದಲಾಗಿದೆ. ಕಾರ್ಪೊರೇಟ್ ಆಸ್ಪತ್ರೆಗಳು ರೋಗ ಪತ್ತೆ ಹಚ್ಚುವ ಮುನ್ನವೇ ಲಕ್ಷಾಂತರ ರೂಪಾಯಿಗಳ ಬಿಲ್ ಕೈಗಿಡುತ್ತವೆ. ಸರಕಾರಿ ಆಸ್ಪತ್ರೆಗಳು ಕೇವಲ ಹೆಸರಿಗಷ್ಟೇ ಎಂಬಂತಾ ಗಿದ್ದು, ಬಡವರು ಅನಿವಾರ್ಯವಾಗಿ ಸಾಲ, ಸೋಲ ಮಾಡಿ ಖಾಸಗಿ ಆಸ್ಪತ್ರೆಗಳ ಮೆಟ್ಟಿ ಲೇರುತ್ತಿದ್ದಾರೆ. ಸರಕಾರ ನೀಡುವ ಆಯುಷ್ಮಾನ್ ಕಾರ್ಡ್‌ಗಳು ಸಹ ಖಾಸಗಿ ಆಸ್ಪತ್ರೆಗಳ ಖಜಾನೆ ತುಂಬಿಸಲು ಬಳಕೆಯಾಗುತ್ತಿವೆಯೇ ವಿನಃ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಯನ್ನು ಬಲಪಡಿಸುತ್ತಿಲ್ಲ.

ವಿದ್ಯುತ್ ಖಾಸಗೀಕರಣದ ಆತಂಕ

ಮೇಲಿನ ಎಲ್ಲ ಆತಂಕಗಳಿಗೆ ಕಾರಣವಾಗಿದ್ದು ಕರ್ನಾಟಕದ ಹೊಸ ಬೆಳವಣಿಗೆ. ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಹಕ್ಕನ್ನು ತನಗೆ ನೀಡಬೇಕೆಂದು ಕೋರಿ ದೈತ್ಯ ಕಾರ್ಪೊರೇಟ್ ಸಂಸ್ಥೆಯಾದ ಟಾಟಾ ಪವರ್ ಕಂಪನಿ ಲಿಮಿಟೆಡ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮುಂದೆ ಅರ್ಜಿ ಸಲ್ಲಿಸಿದೆ. ಇದು ರಾಜ್ಯದ ಇಂಧನ ವಲಯದಲ್ಲಿ ಖಾಸಗೀಕರಣದ ಮೊದಲ ಬೃಹತ್ ಹೆಜ್ಜೆಯಂತೆ ಕಂಡು ಬರುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಸಾರಿಗೆಯನ್ನು ಈಗಾಗಲೇ ಕಳೆದುಕೊಂಡಿರುವ ಜನರಿಗೆ, ಈಗ ಮನೆಯ ಬೆಳಕನ್ನೂ ಖಾಸಗಿಯವರಿಗೆ ಒಪ್ಪಿಸಲು ಸರಕಾರ ಸದ್ದಿಲ್ಲದೆ ದಾರಿ ಮಾಡಿಕೊಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ವಿದ್ಯುತ್ ಸರಬರಾಜು ಮಂಡಳಿಗಳಾದ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂಗಳು ಈಗಾಗಲೇ ನಷ್ಟದಲ್ಲಿವೆ ಎಂಬ ನೆಪವೊಡ್ಡಿ ಇಡೀ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸಿದರೆ ಏನಾಗಬಹುದು? ಖಾಸಗಿ ಕಂಪನಿಗಳ ಪರಮೋಚ್ಚ ಧ್ಯೇಯ ಲಾಭ ಗಳಿಸುವುದೇ ಆಗಿರುತ್ತದೆ. ಅವರು ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚು ಲಾಭ ತರುವ ಕೈಗಾರಿಕಾ ಮತ್ತು ನಗರ ಪ್ರದೇಶಗಳ ಮೇಲೆ ಕಣ್ಣಿಡುತ್ತಾರೆ. ಕ್ರಮೇಣ ವಿದ್ಯುತ್ ದರಗಳು ಗಗನಕ್ಕೇರುತ್ತವೆ. ಬಡವರ ಗುಡಿಸಲುಗಳ ದೀಪಗಳು ಆರಿ ಹೋಗಬಹುದು.

ರೈತರ ಉಚಿತ ಪಂಪ್‌ಸೆಟ್ ಭಾಗ್ಯಕ್ಕೆ ಸಂಚಕಾರ?

ಕರ್ನಾಟಕದಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಕೃಷಿ ಕ್ಷೇತ್ರ ಜೀವಂತವಾಗಿರಲು ಪ್ರಮುಖ ಕಾರಣ ರೈತರ ಪಂಪ್‌ಸೆಟ್‌ಗಳಿಗೆ ಸರಕಾರ ನೀಡುತ್ತಿರುವ ಉಚಿತ ವಿದ್ಯುತ್. ಹಗಲಿರುಳು ಶ್ರಮಿಸಿ, ಸಾಲ ಮಾಡಿ ಬೋರ್‌ವೆಲ್ ಕೊರೆಸುವ ರೈತ, ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದಿದ್ದರೂ ಕೃಷಿಯನ್ನು ಮುಂದುವರಿಸುತ್ತಿರುವು ದಕ್ಕೆ ಉಚಿತ ವಿದ್ಯುತ್ ಬೆಂಗಾವಲಾಗಿದೆ. ಒಂದು ವೇಳೆ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗಿ ಕಂಪನಿಗಳ ಸುಪರ್ದಿಗೆ ಸೇರಿದರೆ, ಈ ಉಚಿತ ಸೇವೆಗಳು ದೀರ್ಘಕಾಲ ಮುಂದು ವರಿಯಲು ಸಾಧ್ಯವೇ ಇಲ್ಲ. ಆರಂಭದಲ್ಲಿ ಒಪ್ಪಂದದ ಪ್ರಕಾರ ಸರಕಾರ ಸಬ್ಸಿಡಿ ನೀಡಿ ದರೂ, ಕಾಲಕ್ರಮೇಣ ಖಾಸಗಿ ಕಂಪನಿಗಳು ನಷ್ಟದ ನೆಪವೊಡ್ಡಿ ಅಥವಾ ಸುಧಾರಣೆಯ ಹೆಸರಿನಲ್ಲಿ ಪ್ರತಿಯೊಂದು ಪಂಪ್‌ಸೆಟ್‌ಗೂ ಮೀಟರ್ ಅಳವಡಿಸಿ ಶುಲ್ಕ ವಸೂಲಿ ಮಾಡಲು ಆರಂಭಿಸುತ್ತವೆ. ಇದು ಈಗಾಗಲೇ ಸಂಕಷ್ಟದಲ್ಲಿರುವ ಕೃಷಿ ವಲಯಕ್ಕೆ ಮತ್ತು ಭಾರತದ ರೈತಾಪಿ ವರ್ಗಕ್ಕೆ ಮರ್ಮಾಘಾತ ನೀಡುವುದು ಖಚಿತ.

ಮಧ್ಯಮ ವರ್ಗ ‘ಬಲಿಪಶು’

ಚುನಾವಣೆಗಳು ಬಂದಾಗ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಉಚಿತ ಶಿಕ್ಷಣ, ಉಚಿತ ವಿದ್ಯುತ್, ಉಚಿತ ಸಾರಿಗೆ, ಉಚಿತ ರೇಷನ್ ಮುಂತಾದ ಆಕರ್ಷಕ ‘ಗ್ಯಾರಂಟಿ’ ಯೋಜನೆಗಳನ್ನು ಪ್ರಕಟಿಸುತ್ತವೆ. ಈ ಯೋಜನೆಗಳು ಬಡವರಿಗೆ ತಾತ್ಕಾಲಿಕ ಆಸರೆ ನೀಡುತ್ತವೆ ಎನ್ನುವುದು ನಿಜ. ಆದರೆ, ಇಂತಹ ಜನಪ್ರಿಯ ಯೋಜನೆಗಳನ್ನು ದೀರ್ಘಕಾಲ ದವರೆಗೆ ಸಾರ್ವಜನಿಕ ಹಣದಿಂದ ನಿಭಾಯಿಸುವುದು ಯಾವುದೇ ಸರಕಾರಕ್ಕೂ ಸುಲಭ ವಲ್ಲ. ಸರಕಾರಗಳು ಒಂದು ಕೈಯಿಂದ ಉಚಿತವಾಗಿ ನೀಡಿ, ಮತ್ತೊಂದು ಕೈಯಿಂದ ಪೆಟ್ರೋಲ್, ಡೀಸೆಲ್, ಮದ್ಯದ ಮೇಲಿನ ತೆರಿಗೆ, ಆಸ್ತಿ ತೆರಿಗೆ, ಕುಡಿಯುವ ನೀರಿನ ದರ ಮತ್ತು ವಿದ್ಯುತ್ ದರಗಳನ್ನು ಸದ್ದಿಲ್ಲದೆ ಏರಿಸುತ್ತವೆ. ಈ ತೆರಿಗೆಯ ಭಾರ ಯಾರ ಮೇಲೆ ಬೀಳುತ್ತದೆ? ಇಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೀಡಾಗುತ್ತಿರುವುದು ದೇಶದ ಪ್ರಾಮಾಣಿಕ ತೆರಿಗೆದಾರನಾದ ‘ಮಧ್ಯಮ ವರ್ಗ’.

ನಾಗರಿಕರಿಗೆ ಕನಿಷ್ಠ ಮೂಲಸೌಕರ್ಯಗಳಾದ ಸಮರ್ಪಕ ಶಿಕ್ಷಣ, ಕೈಗೆಟುಕುವ ಆರೋಗ್ಯ ಸೇವೆ, ಸಾರ್ವಜನಿಕ ಸಾರಿಗೆ, ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಒದಗಿಸುವುದು ಸರಕಾರದ ಸಾಂವಿಧಾನಿಕ ಕರ್ತವ್ಯ. ಇದನ್ನು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನೋಡ ಬಾರದು. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ನಷ್ಟದ ನೆಪದಲ್ಲಿ ಖಾಸಗಿಯವರಿಗೆ ಮಾರಾಟ ಮಾಡುವ ಬದಲು, ಅವುಗಳಲ್ಲಿನ ಭ್ರಷ್ಟಾಚಾರ ಮತ್ತು ಅದಕ್ಷತೆಯನ್ನು ತೊಡೆದುಹಾಕಲು ಸರಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ದೇಶದ ನಾಗರಿಕರ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸರಕಾರಗಳಿಗೆ ಸಾಧ್ಯವಿಲ್ಲ ಎಂದಾದರೆ, ಈ ಬೃಹತ್ ಸರಕಾರಿ ಯಂತ್ರ, ನೂರಾರು ಶಾಸಕರು, ಸಂಸದರು, ಸಚಿವರು ಮತ್ತು ವೈಭವದ ವಿಧಾನಸೌಧ, ಸಂಸತ್ತು ಯಾರಿಗಾಗಿ ಬೇಕು? ಇದಕ್ಕಿಂತ ಟೆಂಡರ್ ಕರೆದು ಇಡೀ ಸರಕಾರವನ್ನೇ ಯಾವುದಾದರೂ ದೈತ್ಯ ಕಾರ್ಪೊರೇಟ್ ಕಂಪನಿಗೆ ವಹಿಸಿಕೊಡು ವುದು ಒಳಿತು. ಆದರೆ, ಹೀಗೆ ಮಾಡುವ ಮುನ್ನ ನಾವು ದೇಶದ ಸಂವಿಧಾನಕ್ಕೆ ಒಂದು ತಿದ್ದುಪಡಿ ತರಬೇಕಾಗುತ್ತದೆ. ಪೀಠಿಕೆಯಲ್ಲಿರುವ ‘ಸಮಾಜವಾದ’ ಮತ್ತು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂಬ ಪವಿತ್ರ ಪದಗಳನ್ನು ಕೈಬಿಟ್ಟು, ಅದರ ಜಾಗದಲ್ಲಿ ‘ಕಾರ್ಪೊರೇಟ್ ನಿಯಂತ್ರಿತ ಭಾರತ’ ಎಂದು ಬರೆಯಬೇಕಾಗುತ್ತದೆ !

ಇಷ್ಟೆಲ್ಲಾ ಕಹಿ ಸುದ್ದಿಗಳ ನಡುವೆ, ಕರ್ನಾಟಕದಲ್ಲಿ ನಡೆದ ಒಂದು ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ದೇಶದಲ್ಲೇ ಮೊದಲ ಬಾರಿಗೆ ತುರ್ತು ಆರೋಗ್ಯ ಸೇವೆಯಾದ ‘108 ಆಂಬ್ಯುಲೆನ್ಸ್‌' ಸೇವೆಯನ್ನು ಖಾಸಗಿ ಸಂಸ್ಥೆಗಳ ಮುಷ್ಟಿಯಿಂದ ಬಿಡಿಸಿ, ಸರಕಾರವೇ ನೇರವಾಗಿ ನಿರ್ವಹಿಸಲು ನಿರ್ಧರಿಸಿದೆ. ಆದರೆ ಆಸ್ಪತ್ರೆಗೆ ಕಳುಹಿಸುವುದಷ್ಟೇ ಸರಕಾರದ ಕೆಲಸವಾಗಬಾರದು. ಕೈಗೆಟಕುವ ದರದಲ್ಲಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ.

ಲೋಕೇಶ್​ ಕಾಯರ್ಗ

View all posts by this author