ಮನಿ ಮೈಂಡೆಡ್
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ ೧೦ ಡಾಲರ್ ಏರಿಕೆಯಾದರೂ, ಭಾರತದ ಬೊಕ್ಕಸಕ್ಕೆ 1 ಲಕ್ಷದ 27 ಸಾವಿರ ಕೋಟಿ ರುಪಾಯಿ ವೆಚ್ಚ ವಾಗುತ್ತದೆ! ಇದರಿಂದ ವಿತ್ತೀಯ ಕೊರತೆಯಾಗುತ್ತದೆ. ಆಗ ರುಪಾಯಿ ದುರ್ಬಲವಾಗುತ್ತದೆ. ಜಿಯೊಪೊಲಿಟಿಕಲ್ ರಿಸ್ಕ್ ಇದ್ದಾಗ ನಮ್ಮ ಇಂಧನ ಭದ್ರತೆಯ ಸತ್ವಪರೀಕ್ಷೆ ನಡೆಯುತ್ತದೆ. ಆದ್ದರಿಂದ ಭಾರತವು ಇಂಧನ ಸ್ವಾವಲಂಬನೆಯನ್ನೂ ಗಳಿಸಿಕೊಳ್ಳಬೇಕು.
ಎಲ್ಲವೂ ಅಂದುಕೊಂಡಂತೆ ನಡೆದರೆ, 2047ರ ಬಳಿಕ ಒಂದು ವೇಳೆ ಕೊಲ್ಲಿ ಯುದ್ಧ ಸಂಭವಿಸಿ ಹರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿ ಹಾಕಿದರೂ ಭಾರತೀಯರು ತಲೆ ಕೆಡಿಸಿಕೊಳ್ಳಲಾರರು! ಕಾರಣ ಏನೆಂಬುದನ್ನು ತಿಳಿಯೋಣ. ಸದ್ಯಕ್ಕಂತೂ ಅನಿವಾರ್ಯ. ಭಾರತೀಯರೆಲ್ಲರೂ ಪರ್ಷಿಯನ್ ಕೊಲ್ಲಿಯಲ್ಲಿರುವ ಹರ್ಮುಜ್ ಎಂಬ ಜಲಸಂಧಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ವ್ಯಾಪಕ ಚರ್ಚೆ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ನಿಮಗೆಲ್ಲ ಗೊತ್ತೇ ಇದೆ- ಅದುವೇ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಪಡೆಯ ನಡುವಣ ಯುದ್ಧ. ಯುದ್ಧ ನಡೆಯುತ್ತಿರುವುದು ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆಯಾದರೂ, ಹರ್ಮುಜ್ ಮಹತ್ವವೇ ಬೇರೆ. ಇದರ ಮೂಲಕ ಜಾಗತಿಕ ತೈಲ ಸರಬರಾಜಿನ 20 ಪರ್ಸೆಂಟ್ ಸಾಗುತ್ತದೆ.
ವಾಸ್ತವವಾಗಿ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಲೇನ್ ಮೇಲೆ ಯಾರಿಗೂ ಹಕ್ಕಿಲ್ಲ. ಅದು ಅಂತಾರಾಷ್ಟ್ರೀಯ ಜಲಮಾರ್ಗ. ಪರ್ಷಿಯನ್ ಕೊಲ್ಲಿಗೂ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾ ಸಾಗರಕ್ಕೂ ಅದು ಸಂಪರ್ಕ ಕಲ್ಪಿಸುತ್ತದೆ.
ಸೌದಿ ಅರೇಬಿಯಾ, ಇರಾಕ್, ಕತಾರ್, ಯುಎಇಯಿಂದ ಕಚ್ಚಾ ತೈಲ ಮತ್ತು ಎಲ್ಎನ್‌ಜಿ ಯನ್ನು ಏಷ್ಯಾದ ಚೀನಾ, ಭಾರತ, ಜಪಾನ್‌ಗೆ ಹಡಗುಗಳ ಮೂಲಕ ಸಾಗಣೆ ಮಾಡಲು ಈ ಅಗಲ ಕಿರಿದಾದ ಹರ್ಮುಜ್ ಜಲಸಂಧಿಯನ್ನು ದಾಟಬೇಕು. ಇದರ ಪ್ರವೇಶ ದ್ವಾರದಲ್ಲಿ 50 ಕಿಲೋಮೀಟರ್ ಅಗಲ ಇದ್ದರೆ, ಸಪೂರದ ಸಂಧಿಯಲ್ಲಿ 33 ಕಿಲೋಮೀಟರ್ ಮಾತ್ರ ಇದೆ.
ಅದರಲ್ಲೂ ಹಡಗುಗಳು ಸಾಗುವ ಶಿಪ್ಪಿಂಗ್ ಲೇನ್ ಇನ್ನೂ ಸಣ್ಣದು. ಭೌಗೋಳಿಕವಾಗಿ ಹರ್ಮುಜ್ ಜಲಸಂಧಿಯ ಒಂದು ಬದಿಯಲ್ಲಿ ಇರಾನ್ ಪ್ರಾಬಲ್ಯವಿದ್ದರೆ, ಮತ್ತೊಂದು ಬದಿಯಲ್ಲಿ ಯುಎಇ ಮತ್ತು ಒಮಾನ್ ತೀರವಿದೆ. ಜಾಗತಿಕ ಕಚ್ಚಾ ತೈಲದ 20 ಪರ್ಸೆಂಟ್ ಈ ಮಾರ್ಗದಲ್ಲಿ ಹೋಗುತ್ತದೆ.
ಇದನ್ನೂ ಓದಿ: Keshava Prasad B Column: ಲಕ್ಷಾಂತರ ಯುವಜನರು ಸರಕಾರಿ ನೌಕರಿಗೆ ಯತ್ನಿಸುವುದೇಕೆ ?
ಯುರೋಪಿಗೂ 80 ಪರ್ಸೆಂಟ್ ಎಲ್ಎನ್‌ಜಿ ಇದೇ ದಾರಿಯಲ್ಲಿ ಸಾಗಣೆಯಾಗುತ್ತದೆ. ಒಂದು ಕಡೆ ಹರ್ಮುಜ್ ಜಲಸಂಧಿ, ಮತ್ತೊಂದು ಕಡೆ ರಷ್ಯಾದಿಂದ ಯುರೋಪಿಗೆ ಅನಿಲ ಪೂರೈಕೆ ಸ್ಥಗಿತವಾದರೆ ಯುರೋಪ್ ಗಂಭೀರ ಸಮಸ್ಯೆಗೆ ಸಿಲುಕುವುದು ಖಚಿತ.
ಈ ನಡುವೆ, ಚೀನಾಕ್ಕೆ ಮಾತ್ರ ಕಚ್ಚಾ ತೈಲವನ್ನು ಹಡಗುಗಳ ಮೂಲಕ ಸಾಗಿಸಲು ಬಿಡುವುದಾಗಿ ಇರಾನ್ ಹೇಳಿದೆಯಂತೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಭಾರತ ಏನು ಪಾಪ ಮಾಡಿದೆ? ಇದು ಅನ್ಯಾಯವಲ್ಲವೇ? ಇರಲಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 10 ಡಾಲರ್ ಏರಿಕೆಯಾದರೂ, ಭಾರತದ ಬೊಕ್ಕಸಕ್ಕೆ 13-14 ಶತಕೋಟಿ ಡಾಲರ್ ವೆಚ್ಚವಾಗುತ್ತದೆ.
ರುಪಾಯಿ ಲೆಕ್ಕದಲ್ಲಿ 1 ಲಕ್ಷದ 27 ಸಾವಿರ ಕೋಟಿ ರುಪಾಯಿ! ಇದರಿಂದ ವಿತ್ತೀಯ ಕೊರತೆ ಯಾಗುತ್ತದೆ. ಆಗ ರುಪಾಯಿ ದುರ್ಬಲವಾಗುತ್ತದೆ. ಜಿಯೊಪೊಲಿಟಿಕಲ್ ರಿಸ್ಕ್ ಇದ್ದಾಗ ನಮ್ಮ ಇಂಧನ ಭದ್ರತೆಯ ಸತ್ವಪರೀಕ್ಷೆ ನಡೆಯುತ್ತದೆ. ಆದ್ದರಿಂದ ಭಾರತವು ಇಂಧನ ಸ್ವಾವಲಂಬನೆಯನ್ನೂ ಗಳಿಸಿಕೊಳ್ಳಬೇಕು.
ಆರ್ಥಿಕ ಪ್ರಗತಿಗೆ ಇದು ಅವಶ್ಯಕ. ದೇಶವು ಕೇವಲ ಕ್ಲೀನ್ ಎನರ್ಜಿಗೆ ಆದ್ಯತೆ ನೀಡಿದರೆ ಸಾಲದು. ಜತೆಗೆ ಪ್ರತಿ ಮನೆಯಲ್ಲೂ, ಉದ್ದಿಮೆಯಲ್ಲೂ ನವೀಕರಿಸಬಹುದಾದ ಇಂಧನದ ಸ್ವಾವಲಂಬನೆ ಸಾಧಿಸುವಂತಾಗಬೇಕು. ಸೌರ ಫಲಕಗಳು ಮತ್ತು ಗಾಳಿಯಂತ್ರಗಳನ್ನು ಒಟ್ಟಿಗೆ ಹೊಂದಿರುವ ಪಿಎಲ್ಎಫ್-ಸೋಲಾರ್-ವಿಂಡ್ ಹೈಬ್ರಿಡ್ ಮಾದರಿಗಳು ಜನಪ್ರಿಯವಾಗಬೇಕು.
ಇಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಬೇಕು. ಅತ್ಯಾಧುನಿಕ ಗ್ರಿಡ್‌ಗಳು, ಬೃಹತ್ ಬ್ಯಾಟರಿಗಳು, ಪಂ ಹೈಡ್ರೊ ಸ್ಟೋರೇಜ್ ಮತ್ತು ನ್ಯೂಕ್ಲಿಯರ್ ಎನರ್ಜಿಯ ಬಳಕೆ ಅಗತ್ಯ ಎನ್ನುತ್ತಾರೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್. ಅಮೆರಿಕದ ಎನರ್ಜಿ ಟೆಕ್ನಾಲಜಿ ವಲಯದ ಸಂಸ್ಥೆ ಬರ್ಕ್ಲಿ ಲ್ಯಾಬ್ 2023ರಲ್ಲಿ ಒಂದು ಸ್ವಾರಸ್ಯಕರ ವರದಿ ಸಿದ್ಧಪಡಿಸಿತ್ತು.
‘ಭಾರತ 2047ರ ವೇಳೆಗೆ ಇಂಧನ ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯ’ ಎಂಬುದೇ ಅದರ ಶೀರ್ಷಿಕೆ. ಅದರ ಸಾರ ಇಲ್ಲಿದೆ: ಭಾರತಕ್ಕೆ ಮೂರು ಸೆಕ್ಟರ್‌ಗಳಲ್ಲಿ ಹೆಚ್ಚಿನ ಇಂಧನ ಅಗತ್ಯ ವಿದೆ. ಅವೆಂದರೆ- ವಿದ್ಯುತ್, ಸಾರಿಗೆ ಮತ್ತು ಉದ್ದಿಮೆ.
ಇಂಧನ ಸ್ವಾವಲಂಬನೆ ಗಳಿಸಿದರೆ ಆರ್ಥಿಕ-ಪರಿಸರ ಮತ್ತು ಎನರ್ಜಿ ಬೆನಿಫಿಟ್ ಆಗಲಿದೆ. 2047ರ ವೇಳೆಗೆ ಗ್ರಾಹಕರಿಗೆ 240 ಶತಕೋಟಿ ಡಾಲರ್ ಉಳಿತಾಯವಾಗಲಿದೆ. ಪೆಟ್ರೋಲಿ ಯಂ ಆಮದು ವೆಚ್ಚದಲ್ಲಿ 90 ಪರ್ಸೆಂಟ್ ಇಳಿಕೆಯಾಗಲಿದೆ. ವಾರ್ಷಿಕ 240 ಶತಕೋಟಿ ಡಾಲರ್ ಖರ್ಚು ಉಳಿತಾಯವಾಗಲಿದೆ.
ಗಡುವಿಗೆ ಮೊದಲೇ ಭಾರತ ‘ನೆಟ್ ಝೀರೊ’ ಕಮಿಟ್ಮೆಂಟ್ ಸಾಧಿಸಬಹುದು. ಜಾಗತಿಕ ವಾಗಿಯೂ ಭಾರತೀಯ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬಹುದು. ಭಾರತ ಈಗ ಜಗತ್ತಿನ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ. ಮುಂದಿನ ದಶಕಗಳಲ್ಲಿ ಇದು ನಾಲ್ಕು ಪಟ್ಟು ಹೆಚ್ಚಲಿದೆ. ದೇಶದ ಆರ್ಥಿಕ ಪ್ರಗತಿ ಇದಕ್ಕೆ ಕಾರಣ. ಭಾರತ ಈಗ ತನ್ನ ಜನರ ಅಗತ್ಯಕ್ಕಾಗಿ ತೈಲದ 90 ಪರ್ಸೆಂಟ್, ಇಂಡಸ್ಟ್ರಿಯಲ್ ಕಲ್ಲಿದ್ದಲಿನ 80 ಪರ್ಸೆಂಟ್ ಮತ್ತು ನೈಸರ್ಗಿಕ ಅನಿಲದ 40 ಪರ್ಸೆಂಟ್ ಅನ್ನು ಆಮದು ಮಾಡಿಕೊಳ್ಳುತ್ತಿದೆ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ದರಗಳು ಮತ್ತು ಪೂರೈಕೆ ಯಲ್ಲಿ ಅಲ್ಲೋಲ-ಕಲ್ಲೋಲ ಆಗುತ್ತಿರುತ್ತದೆ. ಇದರ ಪರಿಣಾಮಗಳನ್ನು ದೇಶ ನಿರ್ವಹಿಸ ಬೇಕಾಗುತ್ತದೆ. ಸ್ವಚ್ಛ ಇಂಧನ ವಿಷಯದಲ್ಲಿ ಭಾರತ ಇನ್ನೂ ಪ್ರಬಲವಾಗಬೇಕು. ವಿಶ್ವದಲ್ಲಿ ಯೇ ನವೀಕರಿಸಬಹುದಾದ ಇಂಧನಗಳ ದರವು ಭಾರತದಲ್ಲಿ ಅಗ್ಗವಾಗಿದೆ. ಸೌರ ವಿದ್ಯುತ್ ದರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಇಳಿಕೆಯಾಗಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಲಿಥಿಯಂ ನಿಕ್ಷೇಪ ಇರುವ ದೇಶಗಳಲ್ಲಿ ಭಾರತ ಇದೆ.
ಜಮ್ಮು-ಕಾಶ್ಮೀರದಲ್ಲಿ 59 ಲಕ್ಷ ಟನ್ ಲಿಥಿಯಂ ನಿಕ್ಷೇಪ 2023ರಲ್ಲಿ ಪತ್ತೆಯಾಗಿತ್ತು. ಮಂಡ್ಯ ಜಿಯಲ್ಲೂ ಪ್ರಾಥಮಿಕ ಸಮೀಕ್ಷೆಯ ಪ್ರಕಾರ 1600 ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಇದರ ಬಳಕೆಯಾಗುತ್ತದೆ. ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ.
ನಿಸ್ಸಂದೇಹವಾಗಿ ಭಾರತ ಈಗ ಇಂಧನ ಸ್ವಾತಂತ್ರ್ಯದ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಡುತ್ತಿದೆ. 2030ರೊಳಗೆ 500 ಗಿಗಾವ್ಯಾಟ್ ನಾನ್ -ಫಾಸಿಲ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ವನ್ನು ಹೊಂದುವ ಗುರಿಯನ್ನು ಕೇಂದ್ರ ಸರಕಾರ ಘೋಷಿಸಿದೆ. ಇದರಲ್ಲಿ ಈಗಾಗಲೇ 2025ರ ಅಕ್ಟೋಬರ್ ವೇಳೆಗೆ 250 ಮೆಗಾವ್ಯಾಟ್ ಗುರಿ ಮುಟ್ಟಲಾಗಿದೆ.
ಸೌರಶಕ್ತಿ ಇದರಲ್ಲಿ ನಿರ್ಣಾಯಕವಾಗಿದೆ. ಪವನ ವಿದ್ಯುತ್ ಸಾಥ್ ನೀಡುತ್ತಿದೆ. 2035ರ ಬಳಿಕ ಮಾರಾಟವಾಗುವ ಬಹುಪಾಲು ಹೊಸ ವಾಹನಗಳು ಇಲೆಕ್ಟ್ರಿಕ್ ಆಗಿರಲಿವೆ. ಹೊಸ ಇಲೆಕ್ಟ್ರಿಕ್ ವಾಹನಗಳು ಮತ್ತು ಗ್ರಿಡ್ ಸ್ಕೇಲ್ ಬ್ಯಾಟರಿ ಸ್ಟೋರೇಜ್ ಸಿಸ್ಟಮ್‌ಗಳಿಗೆ 2040ರ ವೇಳೆಗೆ 20 ಲಕ್ಷ ಟನ್ ಲಿಥಿಯಂ ಅಗತ್ಯ ಬೀಳಲಿದೆ. ಇದನ್ನು ದೇಶೀಯ ನಿಕ್ಷೇಪಗಳಿಂದಲೇ ಪಡೆಯಲಾಗುವುದು.
ಲಿಥಿಯಂ ನಿಕ್ಷೇಪ ಹೇರಳವಾಗಿ ಪತ್ತೆಯಾಗಿರುವುದರಿಂದ ಭಾರತದಲ್ಲಿಯೇ ಹೊಸ ಇಲೆಕ್ಟ್ರಿಕ್ ವಾಹನಗಳ ತಯಾರಿಕೆ ಸುಲಭವಾಗಲಿದೆ. ಗ್ರಿಡ್-ಸ್ಕೇಲ್ ಬ್ಯಾಟರಿ ಸ್ಟೋರೇಜ್ ಸಿಸ್ಟಮ್‌ಗಳನ್ನೂ ತಯಾರಿಸಬಹುದು. ಮುಂಬರುವ ದಶಕಗಳಲ್ಲಿ ಇಂಧನ ಮೂಲ ಸೌಕರ್ಯಕ್ಕೆ ಭಾರತವು 3 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಬೇಕಾದ ಅಗತ್ಯ ಇದೆ.
ಇದು ಒಂದು ರೀತಿಯಲ್ಲಿ ಅನುಕೂಲವೂ ಆಗಿದೆ. ಮುಂಬರುವ ದಶಕದಲ್ಲಿ ಕ್ಲೀನ್ ಎನರ್ಜಿಗೆ ಪರಿವರ್ತನೆ ಹೊಂದಲು ಇದು ಸಕಾಲವಾಗಿದೆ. ಸರಕಾರದ ಪಾಲಿಸಿಗಳು ಇದಕ್ಕೆ ತುಂಬ ಸಪೋರ್ಟ್ ಕೊಡಬೇಕು. ಕ್ಲೀನ್ ಎನರ್ಜಿ ಅನುಷ್ಠಾನವನ್ನು ಕಡ್ಡಾಯಗೊಳಿಸಬೇಕು ಹಾಗೂ ಭಾರತ ಈ ಮಹತ್ವಾಕಾಂಕ್ಷೆಯ ಪರಿವರ್ತನೆಯನ್ನು ಸಾಧಿಸುವ ವಿಶ್ವಾಸ ಇದೆ ಎಂದು ಬರ್ಕ್ಲಿ ಲ್ಯಾಬ್‌ನ ಸಂಶೋಧಕರು ಹೇಳಿದ್ದಾರೆ.
ಇದೆಲ್ಲ ಮುಂದಿನ ಎರಡು ದಶಕಗಳ ಯೋಜನೆಯಾದರೆ, ಈಗಿನ ಪರಿಸ್ಥಿತಿ ಏನು ಎಂಬ ಪ್ರಶ್ನೆ ಸ್ವಾಭಾವಿಕ. ಇರುವುದರಲ್ಲಿ ಉತ್ತಮ ನಡೆಯನ್ನು ಭಾರತ ಅನುಸರಿಸುತ್ತಿದೆ. ಭಾರತ ತನ್ನದೇ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರಗಳನ್ನು ಹೊಂದಿದೆ. ದೇಶ 85 ಪರ್ಸೆಂಟ್ ತೈಲವನ್ನು ಆಮದು ಮಾಡುತ್ತಿದೆ.
ಡಜನುಗಟ್ಟಲೆ ಮೂಲಗಳನ್ನು ಹೊಂದಿದೆ. ದಿನಕ್ಕೆ 50 ಲಕ್ಷ ಬ್ಯಾರೆಲ್ ತೈಲ ಬೇಕಾಗುತ್ತದೆ. ಹರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಬಳಿ ಕೇವಲ 25 ದಿನಗಳಿಗೆ ಬೇಕಾಗುವಷ್ಟು ಮಾತ್ರ ಕಚ್ಚಾ ತೈಲ ಇದೆ ಎಂಬ ತಪ್ಪು ಕಲ್ಪನೆ ಹರಡುತ್ತಿದೆ. ಸ್ಟ್ರಾಟಜಿಲ್ ಪೆಟ್ರೋಲಿಯಂ ರಿಸರ್ವ್ಸ್, ಇತರ ದಾಸ್ತಾನು ಸೇರಿ ಒಟ್ಟು 70ಕ್ಕೂ ಹೆಚ್ಚು ದಿನಗಳಿಗೆ ಬೇಕಾಗುವಷ್ಟು ಕಚ್ಚಾ ತೈಲ ದಾಸ್ತಾನು ಇದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಹಾಗೂ ಕರ್ನಾಟಕದಲ್ಲಿ ಮಂಗಳೂರು ಮತ್ತು ಪಡೂರಿ ನಲ್ಲಿ ಈ ದಾಸ್ತಾನು ಕೇಂದ್ರಗಳು ಇವೆ. ಈ ಲೆಕ್ಕಾಚಾರ ಹೀಗಿದೆ: ಆಂಧ್ರಪ್ರದೇಶ ಮತ್ತು ಕರ್ನಾಟಕದ ಮೂರು ರಿಸರ್ವ್‌ಗಳಲ್ಲಿ 5.33 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಇದೆ. ಇದು 9.5 ದಿನಗಳ ಇಡೀ ದೇಶದ ಖರ್ಚಿಗೆ ಸಾಕು. ಇದನ್ನು ತೀರಾ ತುರ್ತು ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ.
ದಿನ ನಿತ್ಯದ ಅಗತ್ಯಗಳಿಗೆ ಬಳಸುವ ಪರಿಪಾಠ ಇಲ್ಲ. ಇದಲ್ಲದೆ ವರದಿಗಳ ಪ್ರಕಾರ 25 ದಿನಗಳ ಬೇಡಿಕೆಗೆ ಅವಶ್ಯವಿರುವ ಕಚ್ಚಾ ತೈಲ ಸಂಗ್ರಹ ಇದೆ. ಜತೆಗೆ ಪೆಟ್ರೋಲ್-ಡೀಸೆಲ್ ಆಗಿ ಸಂಸ್ಕರಣೆಯಾಗಿರುವ ತೈಲದ ಸಂಗ್ರಹ ಹೆಚ್ಚುವರಿ 25 ದಿನಗಳಿಗೆ ಸಾಕಾಗುವಷ್ಟು ಇದೆ. ಇದಲ್ಲದೆ 15-20 ದಿನಗಳಿಗೆ ಸಾಕಾಗುವ ಕಮರ್ಷಿಯಲ್ ಸ್ಟಾಕ್ಸ್, ಎಲ್‌ಪಿಜಿ, ಎಲ್ಎನ್‌ಜಿ ರಿಸರ್ವ್ಸ್ ಇದೆ.
ಭಾರತಕ್ಕೆ ರಷ್ಯಾ 19-33 ಪರ್ಸೆಂಟ್ ಕಚ್ಚಾ ತೈಲ ನೀಡುತ್ತಿದೆ. ಸೌದಿ ಅರೇಬಿಯಾ, ಯುಎಇ, ಇರಾಕ್, ಅಮೆರಿಕ, ಆಫ್ರಿಕದ ದೇಶಗಳು, ಲ್ಯಾಟಿನ್ ಅಮೆರಿಕದಿಂದಲೂ ತೈಲ ಪಡೆಯ ಬಹುದು. ಆದ್ದರಿಂದ ಹರ್ಮುಜ್‌ನಿಂದ ತೈಲದ ಮಾರ್ಗಕ್ಕೆ ಸಮಸ್ಯೆ ಆಗಿದ್ದರೂ, ಪೂರೈಕೆ ಯ ಮೂಲಗಳು ವೈವಿಧ್ಯಮಯವಾಗಿವೆ.
ಸೌದಿ ಅರೇಬಿಯಾ ಮತ್ತು ಯುಎಇ, ಹರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ ಪೈಪ್‌ಲೈನ್ ಮೂಲಕ ರಫ್ತು ಮಾಡುವ ವ್ಯವಸ್ಥೆಯನ್ನು ಹೊಂದಿವೆ. ಅಮೆರಿಕ ಕೂಡ ತೈಲ ಸಾಗಣೆಗೆ ಸಹಕರಿಸುವ ನಿರೀಕ್ಷೆ ಇದೆ. ಆದರೆ ಸದ್ಯಕ್ಕಿರುವ ಸವಾಲು ಅಂತಾರಾಷ್ಟ್ರೀಯ ತೈಲ ದರಗಳ ದಿಢೀರ್ ಏರಿಕೆ. ತೈಲದ ಕೊರತೆ ಕಾಣಿಸುವ ಸಾಧ್ಯತೆ ಇಲ್ಲ.
‘4-5 ವಾರಗಳಲ್ಲಿ ಇರಾನ್ ಯುದ್ಧ ನಿಲ್ಲುವ ನಿರೀಕ್ಷೆ ಇದೆ’ ಎಂದು ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ‘ಇದು ಅಲ್ಪಾವಧಿಯ ಸಮರ’ ಎಂದಿದ್ದಾರೆ. ಆಪ್ತ ಮಿತ್ರ ರಷ್ಯಾ ಸೇರಿದಂತೆ ಡಜನ್‌ಗಟ್ಟಲೆ ದೇಶಗಳೂ ತೈಲ ಪೂರೈಕೆಗೆ ನಿಂತಿವೆ. ಪರಿಸ್ಥಿತಿ ಯನ್ನು ಜಾಣ್ಮೆಯಿಂದ ಎದುರಿಸುವುದು ಮತ್ತು ದೀರ್ಘಕಾಲೀನ ತಂತ್ರವಾದ ಇಂಧನ ಸ್ವಾತಂತ್ರ್ಯವನ್ನು ಗಳಿಸುವುದೊಂದೇ ಉಳಿದಿರುವ ದಾರಿ. ಆದ್ದರಿಂದ ಅಂದುಕೊಂಡಂತೆ ಎಲ್ಲವೂ ನಡೆದರೆ 2047ರ ಬಳಿಕ ಮತ್ತೊಮ್ಮೆ ಹರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದರೂ, ಭಾರತೀಯರು ನಿಶ್ಚಿಂತೆಯಿಂದ ಇರಬಲ್ಲರು!