ಪ್ರತಿಧ್ವನಿ
ವಿನಯ ಶಿರಹಟ್ಟಿಮಠ
ವಿಶ್ವವಾಣಿ’ ಪತ್ರಿಕೆಯಲ್ಲಿ ರವಿ ಹಂಜ್ ಅವರು ಬರೆದಿರುವ ‘ಇದು ಬಸವಣ್ಣನ ಹೆಸರು ಬಳಸಿ ಅವನಿಗೆ ಮಾಡುತ್ತಿರುವ ಅಪಚಾರ’ ! ಎಂಬ ಲೇಖನವು ಬಸವ ತತ್ವದ ಅನುಯಾ ಯಿಗಳಲ್ಲಿ ಹಾಗೂ ನೈಜ ಇತಿಹಾಸದ ಅರಿವಿರುವವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಮೇಲ್ನೋಟಕ್ಕೆ ಇದು ಇಂದಿನ ಕೆಲವು ಸಂಘಟನೆಗಳ ಕಾರ್ಯವೈಖರಿಯ ಮೇಲಿನ ಟೀಕೆ ಯಂತೆ ಕಂಡರೂ, ಆಳವಾಗಿ ಗಮನಿಸಿದಾಗ ಇದು ಹನ್ನೆರಡನೇ ಶತಮಾನದ ಶರಣ ಪರಂಪರೆ, ಲಿಂಗಾಯತ ಧರ್ಮ ಮತ್ತು ಬಸವಣ್ಣನವರ ಸಾಮಾಜಿಕ ಸುಧಾರಣೆಗಳ ಬಗ್ಗೆ ವ್ಯವಸ್ಥಿತವಾಗಿ ಕೀಳರಿಮೆ ಮೂಡಿಸುವ ಪ್ರಯತ್ನವಾಗಿ ಗೋಚರಿಸುತ್ತದೆ.
ಇತಿಹಾಸವನ್ನು ಭಾವುಕತೆಯಿಂದಲೋ, ಪೂರ್ವಗ್ರಹ ಪೀಡಿತರಾಗಿಯೋ ಅಥವಾ ಮೇಲು ಸ್ತರದ ವಿಮರ್ಶೆಯಿಂದಲೋ ಅಳೆಯಲು ಸಾಧ್ಯವಿಲ್ಲ. ರವಿ ಹಂಜ್ ಅವರ ಲೇಖನವು 12ನೇ ಶತಮಾನದ ಬೃಹತ್ ಸಾಮಾಜಿಕ ಕ್ರಾಂತಿಯನ್ನು ಅತ್ಯಂತ ಸಂಕುಚಿತ ಮತ್ತು ವ್ಯಕ್ತಿನಿಷ್ಠ ದೃಷ್ಟಿಕೋನದಿಂದ ನೋಡುವ ಒಂದು ಪ್ರಯತ್ನವಾಗಿದೆ.
ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ಕೇವಲ ತಾತ್ಕಾಲಿಕ ಪ್ರತಿಕ್ರಿಯೆ ಯಾಗಿರಲಿಲ್ಲ. ಅದೊಂದು ಸುಭದ್ರವಾದ, ಶೋಷಣೆಮುಕ್ತ ಸಮಾಜವನ್ನು ಕಟ್ಟುವ ಬೃಹತ್ ಸಾಂಸ್ಥಿಕ ಪ್ರಯತ್ನವಾಗಿತ್ತು. ಇಂತಹ ಗಟ್ಟಿ ಐತಿಹಾಸಿಕ ಪುರಾವೆಗಳನ್ನು ಬದಿಗೊತ್ತಿ, ಇಂದಿನ ಶರಣ ಪರಂಪರೆಯ ಚಿಂತಕರನ್ನು ‘ತ್ಯಾಜ್ಯ ಸಾಹಿತಿಗಳು’ ಅಥವಾ ‘ಪರಿತ್ಯಕ್ತ ಸಂಶೋಧಕರು’ ಎಂದು ಹೀಯಾಳಿಸುವುದು ವಾಸ್ತವವನ್ನು ಮುಚ್ಚಿಡುವ ವಿಫಲ ಯತ್ನವಷ್ಟೇ.
ಇದನ್ನೂ ಓದಿ: Vinayak M Bhat Column: ಹೆಸರು ಮಾತ್ರ ದೊಡ್ಡದು, ಆದರೆ ಮೊಸರು ತೆಳ್ಳಗೇ !
ಲೇಖಕರು ತಮ್ಮ ಬರಹದಲ್ಲಿ ಆಧುನಿಕ ಲಿಂಗಾಯತ ಚಳುವಳಿಗಳು, ಬಸವ ಧರ್ಮ, ಬಸವ ಸಂಸ್ಕೃತಿ ಮುಂತಾದ ವೇದಿಕೆಗಳನ್ನು ಕೇವಲ ಅಧಿಕಾರ, ಕುರ್ಚಿ ಮತ್ತು ಲಾಭದ ಸ್ವಾರ್ಥಕ್ಕಾಗಿ ಸೃಷ್ಟಿಯಾದ ‘ಈಡಿಪಸ್ ನಾಟಕ’ ಎಂದು ಜರಿದಿದ್ದಾರೆ. ಇದು ಸತ್ಯಕ್ಕೆ ಸಂಪೂರ್ಣ ದೂರವಾದ ವಿಚಾರ. ಎಂಟನೂರು ವರ್ಷಗಳಿಗೂ ಹೆಚ್ಚು ಕಾಲ ಮರೆ ಮಾಚಲ್ಪಟ್ಟಿದ್ದ, ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ವ್ಯವಸ್ಥಿತವಾಗಿ ತುಳಿಯಲ್ಪಟ್ಟಿದ್ದ ಶರಣ ಸಾಹಿತ್ಯವನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಗಳನ್ನು ಕೇವಲ ‘ಅಂಗಡಿ ವ್ಯಾಪಾರ’ ಎಂದು ಕರೆಯುವುದು ಶೋಚನೀಯ.
ಯಾವುದೇ ಒಂದು ಬೃಹತ್ ಸಾಮಾಜಿಕ ದರ್ಶನವು ಮುಂದಿನ ತಲೆಮಾರುಗಳಿಗೆ ತಲುಪ ಬೇಕಾದರೆ, ಅದಕ್ಕೊಂದು ಸಾಂಸ್ಥಿಕ ರೂಪದ ಅಗತ್ಯವಿರುತ್ತದೆ. ಇಂದಿನ ಬಸವಪರ ಸಂಘಟನೆಗಳು ಕೇವಲ ಮಠಮಾನ್ಯಗಳ ಸ್ಥಾಪನೆಗಾಗಿ ಹುಟ್ಟಿಕೊಂಡಿದ್ದಲ್ಲ; ಬದಲಾಗಿ, ಮನುಷ್ಯರ ನಡುವೆ ಜಾತಿ, ವರ್ಗ ಮತ್ತು ವರ್ಣದ ಗೋಡೆಗಳನ್ನು ಕೆಡವಿ ಸಮಾನತೆಯ ಸಂದೇಶವನ್ನು ಸಾರಿದ ಬಸವಣ್ಣನವರ ಅಪ್ಪಟ ಇತಿಹಾಸವನ್ನು ಜನಸಾಮಾನ್ಯರಿಗೆ ತಲುಪಿಸುವ ಅನಿವಾರ್ಯತೆಯಿಂದ ರೂಪುಗೊಂಡಿವೆ.
ಬಸವಣ್ಣನವರ ಗುರಿ ಇದ್ದದ್ದು ಅಂಧಾನುಕರಣೆ ಮತ್ತು ಮೌಢ್ಯಗಳ ಭಂಜನೆಯೇ ಹೊರತು, ಸಮಾಜವನ್ನು ಕಟ್ಟುವ ಶಕ್ತಿಗಳ ಭಂಜನೆಯಲ್ಲ. ಅಂದಿನ ವ್ಯವಸ್ಥೆಯಲ್ಲಿದ್ದ ಡಾಂಭಿಕ ಭಕ್ತಿಯನ್ನು, ಕಪಟ ಆಚರಣೆಗಳನ್ನು ವಿಡಂಬಿಸಲು ಬಳಸಿದ ವಚನಗಳನ್ನು, ಇಂದು ಅದೇ ಶೋಷಣೆಯ ವಿರುದ್ಧ ಧ್ವನಿಯೆತ್ತುತ್ತಿರುವ ಸಮುದಾಯದ ಮೇಲೆಯೇ ಪ್ರಯೋಗಿಸುವುದು ಐತಿಹಾಸಿಕ ವಿಪರ್ಯಾಸ. ವಚನಗಳ ಭಾಷಿಕ ಹಿನ್ನೆಲೆಯನ್ನು ಅರಿಯದೆ ಕೇವಲ ಮೇಲ್ನೋಟದ ಅರ್ಥವನ್ನು ಕಲ್ಪಿಸುವುದು ಖಂಡಿತವಾಗಿಯೂ ಸಂಶೋಧನಾತ್ಮಕ ವಿಧಾನವಲ್ಲ.
ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಯ ಹರಿಕಾರರಷ್ಟೇ ಆಗಿರಲಿಲ್ಲ, ಅವರು ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ಅತಿ ದೊಡ್ಡ ಶಕ್ತಿ ಎನ್ನುವುದನ್ನು ನಾವು ಮರೆಯಬಾರದು. ಹನ್ನೆರಡನೇ ಶತಮಾನದಲ್ಲಿ ಸಂಸ್ಕೃತದಂತಹ ಭಾಷೆಗಳ ಪ್ರಭಾವಳಿ ಯ ನಡುವೆ, ಸಾಮಾನ್ಯ ಜನರ ಆಡುಭಾಷೆಯಾದ ಕನ್ನಡದಲ್ಲಿ, ಅದೂ ಸ್ಥಳೀಯ ಉಪ ಭಾಷೆಗಳ ಸೊಗಡನ್ನು ಉಳಿಸಿಕೊಂಡು ವಚನಗಳನ್ನು ರಚಿಸಿದ್ದು ಅಂದಿನ ದಿನಮಾನದ ಅತಿದೊಡ್ಡ ಭಾಷಿಕ ಕ್ರಾಂತಿ. ಅಂದಿನ ಶರಣರು ತಮ್ಮ ದೈನಂದಿನ ಕಾಯಕದ ಪರಿಭಾಷೆ ಗಳನ್ನು ಸಾಹಿತ್ಯದ ಉನ್ನತ ಮಟ್ಟಕ್ಕೆ ಏರಿಸಿದರು.
ಹೀಗೆ ಕನ್ನಡ ಭಾಷೆ ಮತ್ತು ಶ್ರಮಿಕರ ಅಸ್ಮಿತೆಯನ್ನು ಒಟ್ಟಿಗೆ ಕಟ್ಟಿದ ಬಸವಣ್ಣನವರ ಪರಂಪರೆಯನ್ನು, ಕೇವಲ ಇಂದಿನ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ವಿಮರ್ಶಿಸುವುದು ಆ ಮಹಾನ್ ಚೇತನಕ್ಕೆ ಮಾಡುವ ನಿಜವಾದ ಅಪಚಾರ. ಶರಣರ ಸಾಹಿತ್ಯದಿಂದಲೇ ಕನ್ನಡ ಭಾಷೆ ತನ್ನ ನೈಜ ಜೀವಂತಿಕೆಯನ್ನು ಪಡೆದುಕೊಂಡಿತು ಎನ್ನುವ ಭಾಷಿಕ ಚರಿತ್ರೆಯನ್ನು ಈ ಅಪಪ್ರಚಾರಕರು ಅನುಕೂಲಾರ್ಥವಾಗಿ ಮರೆತಿದ್ದಾರೆ.
ಬಸವಣ್ಣನವರು ಕಟ್ಟಿದ ಅನುಭವ ಮಂಟಪವು ವಿಶ್ವದ ಮೊಟ್ಟಮೊದಲ ಪ್ರಜಾ ಪ್ರಭುತ್ವದ ಸಂಸತ್ತು. ಕಾಯಕವೇ ಕೈಲಾಸ ಎಂಬ ಪರಿಕಲ್ಪನೆಯ ಮೂಲಕ ಅವರು ಶ್ರಮಿಕ ವರ್ಗಕ್ಕೆ, ಮಹಿಳೆಯರಿಗೆ, ಮತ್ತು ತಳ ಸಮುದಾಯಗಳಿಗೆ ನೀಡಿದ ಘನತೆ ಅಸಾಮಾನ್ಯವಾದದ್ದು.
ಇಂತಹ ಅಗಾಧವಾದ ಕೊಡುಗೆಯನ್ನು ಕೇವಲ ಸೀಮಿತ ಚೌಕಟ್ಟಿನಲ್ಲಿ ಬಂಧಿಸಿ, ಅವರ ಅನುಯಾಯಿಗಳು ಇಂದು ನಡೆಸುತ್ತಿರುವ ಅಸ್ಮಿತೆಯ ಹೋರಾಟವನ್ನು ದೂಷಿಸುವುದು ಸರಿಯಲ್ಲ. ಇಂದಿನ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸಣ್ಣ ಪುಟ್ಟ ವೈಯಕ್ತಿಕ ಲೋಪ ಗಳನ್ನು ಮುಂದಿಟ್ಟುಕೊಂಡು, ಇಡೀ ಬಸವ ತತ್ವವನ್ನೇ, ಮತ್ತು ಆ ತತ್ವವನ್ನು ಉಸಿರಾಗಿಸಿ ಕೊಂಡು ಮುನ್ನಡೆಯುತ್ತಿರುವ ಲಕ್ಷಾಂತರ ಅನುಯಾಯಿಗಳ ಬದ್ಧತೆಯನ್ನು ಪ್ರಶ್ನಿಸು ವುದು ದುರುದ್ದೇಶಪೂರಿತವಾಗಿದೆ.
ಇತಿಹಾಸವನ್ನು ಒರೆಗೆ ಹಚ್ಚಬೇಕಾದದ್ದು ಕೇವಲ ವಾಕ್ಚಾತುರ್ಯದ ಭಾವನಾತ್ಮಕ ಲೇಖನ ಗಳಿಂದಲ್ಲ, ಬದಲಾಗಿ ವಸ್ತುನಿಷ್ಠ ಮತ್ತು ವೈಜ್ಞಾನಿಕ ಆಧಾರಗಳಿಂದ. ಬಸವಣ್ಣ ನವರ ವ್ಯಕ್ತಿತ್ವ ಮತ್ತು ಅವರ ಸಾಮಾಜಿಕ ಸುಧಾರಣೆಗಳು ಯಾವುದೇ ಕಾಲಘಟ್ಟದ ಕುತರ್ಕ ಗಳಿಗಿಂತ ಮಿಗಿಲಾದವು.
ಇಂದು ಬಸವಣ್ಣನವರ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳು ಕೇವಲ ಅಧಿಕಾರದ ಹಪಾಹಪಿಯಲ್ಲ, ಬದಲಾಗಿ ಶತಮಾನಗಳಿಂದ ನಡೆದು ಬಂದಿರುವ ಸಾಂಸ್ಕೃತಿಕ ಶೋಷಣೆಯ ವಿರುದ್ಧದ ನಿರಂತರ ಜಾಗೃತಿಯಾಗಿದೆ. ಬಸವ ತತ್ವದ ನೈಜ ವಾರಸುದಾರ ರನ್ನು ಅಪಹಾಸ್ಯ ಮಾಡುವ ಇಂತಹ ಲೇಖನಗಳು, ಕಾಲದ ಕಸದ ಬುಟ್ಟಿಗೆ ಸೇರುತ್ತವೆಯೇ ವಿನಃ ಇತಿಹಾಸದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.
ನಮಗೆ ಬೇಕಾಗಿರುವುದು ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆಗಳ ವೈಜ್ಞಾನಿಕ ಮರು ಶೋಧನೆಯೇ ಹೊರತು, ಹಳೆಯ ಶೋಷಕ ವ್ಯವಸ್ಥೆಯನ್ನು ಪರೋಕ್ಷವಾಗಿ ಪೋಷಿಸುವ ಇಂತಹ ಅಪಪ್ರಚಾರಗಳಲ್ಲ. ಸಕಲ ಜೀವಾತ್ಮರಿಗೆ ಲೇಸಾಗಲೆಂದು, ಅನ್ನದಾತನಿಗೆ/ಕಾಯಕ ಜೀವಿಗಳಿಗೆ ಜಯವಾಗಲೆಂದು ಪ್ರಾರ್ಥಿಸುತ್ತ, ಬಸವಾದಿ ಶರಣರಿಗೆ ಶರಣಾರ್ಥಿ ಹೇಳುವೆ.