ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Basavaraja Shivappa Girgaon Column: ಎಥೆನಾಲ್‌ಗೆ ಉತ್ತೇಜನ ಸಿಗಲಿ

ವಿಶ್ವವು ಇಂದು ಪ್ರತಿಯೊಂದು ಕೆಲಸ-ಕಾರ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಆದರೆ ಇವುಗಳ ಅತಿಯಾದ ಬಳಕೆಯಿಂದಾಗಿ ಪರಿಸರವು ಹದಗೆಡು ತ್ತಿರುವುದು ಸುಳ್ಳೇನಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಮತ್ತು ವಿಶ್ವದ ಹಲವು ದೇಶಗಳು ಜೀವಸಂಕುಲದ ಆರೋಗ್ಯಕ್ಕಾಗಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸು ತ್ತಿವೆ.

ಕೃಷಿರಂಗ

ಬಸವರಾಜ ಶಿವಪ್ಪ ಗಿರಗಾಂವಿ

ಪ್ರಸ್ತುತ ಉಲ್ಬಣಿಸಿರುವ ಮಧ್ಯಪ್ರಾಚ್ಯ ಯುದ್ಧದ ಬಿಕ್ಕಟ್ಟು ವಿಶ್ವವನ್ನು ತಲ್ಲಣಗೊಳಿಸಿದೆ. ಕಾರಣ, ವಿಶ್ವದ ಬಹುತೇಕ ಭಾಗವು ಮಧ್ಯಪ್ರಾಚ್ಯದಲ್ಲಿನ ಕಚ್ಚಾತೈಲ ಮತ್ತು ಹೊರ್ಮುಜ್ ಜಲಸಂಧಿಯ ಮೇಲೆ ಅವಲಂಬಿತವಾಗಿದೆ. ಇವೆರಡು ಸೇವೆಗಳು ಸಾರ್ವಜನಿಕವಾಗಿ ಸರಳವಾದಲ್ಲಿ ಮಾತ್ರ ಪ್ರಪಂಚವು ಸುಖಿಯಾಗಿರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸದ್ಯ ಇವೆರಡು ಅತ್ಯಂತ ಬಿಗುವಿನ ವಾತಾವರಣದಿಂದ ಕೂಡಿರುವುದರಿಂದ ಜಗತ್ತಿನ ಸಾರಿಗೆ-ಸಂಪರ್ಕ ಹಾಗೂ ಆಮದು-ರಫ್ತು ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ವ್ಯಾಪಾರ ಚಟುವಟಿಕೆಗಳು ತೊಂದರೆಯಲ್ಲಿವೆ.

ವಿಶ್ವವು ಇಂದು ಪ್ರತಿಯೊಂದು ಕೆಲಸ-ಕಾರ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಆದರೆ ಇವುಗಳ ಅತಿಯಾದ ಬಳಕೆಯಿಂದಾಗಿ ಪರಿಸರವು ಹದಗೆಡು ತ್ತಿರುವುದು ಸುಳ್ಳೇನಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಮತ್ತು ವಿಶ್ವದ ಹಲವು ದೇಶಗಳು ಜೀವಸಂಕುಲದ ಆರೋಗ್ಯಕ್ಕಾಗಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸುತ್ತಿವೆ.

ಇದನ್ನೂ ಓದಿ: Dr Sadhanashree Column: ಸದ್ವೃರ್ಥದ ಸಾರ್ಥಕತೆ: ಶ್ರೀರಾಮನ ಆದರ್ಶ ಜೀವನ

ಇದರ ಭಾಗವಾಗಿ ಸೌರಶಕ್ತಿ, ನವೀಕರಿಸಬಹುದಾದ ಇಂಧನಗಳು, ಪವನಶಕ್ತಿ, ಹಸಿರು ಇಂಧನಗಳು ಮತ್ತು ಎಥೆನಾಲ್‌ಗಳ ಬಳಕೆಯು ಪ್ರಾಮುಖ್ಯವನ್ನು ಪಡೆದಿದೆ. ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ವಿವಿಧ ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯಂತ ಅಚ್ಚು ಕಟ್ಟಾಗಿ ಬಳಸುತ್ತಿರುವುದು ಶ್ಲಾಘನೀಯವಲ್ಲದೆ ಅಭಿವೃದ್ಧಿಶೀಲ ರಾಷ್ಟಗಳಿಗೆ ಮಾದರಿ ಯಾಗಿದೆ.

ಇವುಗಳಲ್ಲಿ ಪರಿಸರಸ್ನೇಹಿ ಇಂಧನವಾಗಿರುವ ಎಥೆನಾಲ್ ಉತ್ಪಾದನೆಗೆ ಭಾರತದಲ್ಲಿ ವಿಪುಲ ಅವಕಾಶಗಳಿವೆ. ಆರ್ಥಿಕ ಸಂಕಷ್ಟದಲ್ಲಿರುವ ಸಕ್ಕರೆ ಉದ್ದಿಮೆಯನ್ನು ಕಾಪಾಡಲು, ನಷ್ಟದಲ್ಲಿರುವ ರೈತರನ್ನು ಸಂರಕ್ಷಿಸಲು, ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಹಾಗೂ ವಿದೇಶಿ ವಿನಿಮಯವನ್ನು ಉಳಿಸಲು ಕೇಂದ್ರ ಸರಕಾರವು 2018ರ ವರ್ಷದಿಂದ ಬ್ರೆಜಿಲ್ ಮಾದರಿಯಂತೆ ಎಥೆನಾಲ್ ಉತ್ಪಾದಿಸಲು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿತು.

ಇದು ಸರಕಾರಕ್ಕೆ, ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಐತಿಹಾಸಿಕ ತಿರುವನ್ನು ತಂದು ಕೊಟ್ಟಿತು. ಕಬ್ಬು ಮತ್ತು ಧಾನ್ಯಗಳು ಎಥೆನಾಲ್ ಉತ್ಪಾದಿಸಲು ಅವಶ್ಯವಿರುವ ಪ್ರಮುಖ ಕಚ್ಚಾವಸ್ತುಗಳಾಗಿವೆ. ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಇವುಗಳ ಉತ್ಪಾದನೆಯು ಹೆಚ್ಚಳವಾಗಿದೆ.

ಭಾರತದಲ್ಲಿ ಅಂದಾಜು 60 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದು ಅಂದಾಜು 500 ಮಿಲಿಯನ್ ಟನ್ ಕಬ್ಬು ಉತ್ಪಾದಿಸಲಾಗುತ್ತಿದೆ. ಇದರಿಂದ 360 ಲಕ್ಷ ಟನ್ ಸಕ್ಕರೆ ಅಥವಾ 24000 ಕೋಟಿ ಲೀಟರ್ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಆದರೆ ಸದ್ಯ ಭಾರತ ದಲ್ಲಿ ಒಟ್ಟಾರೆ 360 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದರೆ ಸಕ್ಕರೆ ದರದಲ್ಲಿ ಕುಸಿತವಾಗಿ ಕಬ್ಬು ಬೆಳೆಗಾರರಿಗೆ ದರ ಪಾವತಿಸಲು ವಿಳಂಬವಾಗುವ ಅಪಾಯವಿದೆ; ಅದರಂತೆ 24000 ಕೋಟಿ ಲೀಟರ್‌ನಷ್ಟು ಎಥೆನಾಲ್ ಅನ್ನು ಉತ್ಪಾದಿಸಲು ಹಾಗೂ ಬಳಸಲು ಭಾರತದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ.

ಭಾರತವು ವಿಶ್ವದಲ್ಲಿಯೇ ಅತಿಹೆಚ್ಚು ಅಂದರೆ 260 ಲಕ್ಷ ಟನ್ ಸಕ್ಕರೆಯನ್ನು ಗೃಹ ಬಳಕೆ ಯಲ್ಲಿ ಬಳಸುವ ದೇಶವಾಗಿರುವುದರಿಂದ ಒಟ್ಟು 360 ಲಕ್ಷಟನ್ ಸಕ್ಕರೆ ಉತ್ಪಾದನೆಯ ಬದಲಾಗಿ 260 ಲಕ್ಷಟನ್ ಸಕ್ಕರೆಯನ್ನು ಮಾತ್ರ ಉತ್ಪಾದಿಸಿ ಉಳಿದ 100 ಲಕ್ಷ ಟನ್ ಸಕ್ಕರೆಯ ಉತ್ಪಾದನೆಯ ಬದಲಾಗಿ ಅಂದಾಜು 7000 ಕೋಟಿ ಲೀಟರ್‌ನಷ್ಟು ಎಥೆನಾಲ್ ಉತ್ಪಾದನೆ ಮಾಡಬಹುದು.

ಪ್ರಸಕ್ತ ವರ್ಷ 330 ಲಕ್ಷ ಟನ್ ಸಕ್ಕರೆ ಮತ್ತು ಇನ್ನುಳಿದ 30 ಲಕ್ಷ ಟನ್ ಸಕ್ಕರೆಯ ಬದಲಾಗಿ 2000 ಕೋಟಿ ಲೀಟರ್‌ನಷ್ಟು ಎಥೆನಾಲ್ ಉತ್ಪಾದನೆಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ 380 ಡಿಸ್ಟಿಲರಿ ಘಟಕಗಳಿಂದ 2000 ಕೋಟಿ ಲೀಟರ್‌ನಷ್ಟು ಎಥೆನಾಲ್ ಉತ್ಪಾದಿಸಿ ಶೇ.20ರವರೆಗೆ ಪೆಟ್ರೋಲ್‌ನಲ್ಲಿ ಮಿಶ್ರಣಗೊಳಿಸಲಾಗುತ್ತಿದೆ. ಇದರಿಂದ ಸರಕಾರಕ್ಕೆ 1.5 ಲಕ್ಷ ಕೋಟಿ ರು. ವಿದೇಶಿ ವಿನಿಮಯ ಸಂಗ್ರಹವಾಗಿದೆ.

ಭಾರತದ ಅರ್ಥವ್ಯವಸ್ಥೆಗೆ ಇದೊಂದು ಮಹಾನ್ ಶಕ್ತಿಯಾಗಿದೆ. ಭಾರತವನ್ನು ಆರ್ಥಿಕ ವಾಗಿ ಮತ್ತಷ್ಟು ಪ್ರಬಲಗೊಳಿಸಲು ಅವಕಾಶವಿರುವ ಒಟ್ಟು 24000 ಕೋಟಿ ಲೀಟರ್‌ನಷ್ಟು ಎಥೆನಾಲ್ ಉತ್ಪಾದಿಸಿ ಅಂದಾಜು 18 ಲಕ್ಷ ಕೋಟಿ ರು. ವಿದೇಶಿ ವಿನಿಮಯ ಸಂಗ್ರಹಿಸುವತ್ತ ಕೇಂದ್ರ ಸರಕಾರವು ಚಿಂತನೆ ನಡೆಸಬೇಕಾಗಿದೆ.

ಸದ್ಯ ಸಂಭವಿಸುತ್ತಿರುವ ಬಿಕ್ಕಟ್ಟುಗಳು ಭವಿಷ್ಯದಲ್ಲಿಯೂ ಮುಂದುವರಿಯುವ ಅಪಾಯ ಗಳಿವೆ ಹಾಗೂ ಶೀಘ್ರದಲ್ಲಿಯೇ ತೈಲಬಾವಿಗಳು ಖಾಲಿಯಾಗುವ ಸೂಚನೆಗಳಿರುವ ಹಿನ್ನೆಲೆ ಯಲ್ಲಿ ಕಡಿಮೆ ಖರ್ಚಿನ ಪರಿಸರಸ್ನೇಹಿ ಇಂಧನವಾಗಿರುವ ಎಥೆನಾಲ್ ಉತ್ಪಾದನೆಗೆ ಭಾರತದಲ್ಲಿ ಮುಕ್ತ ಅವಕಾಶ ದೊರೆಯಬೇಕು. ಈಗ ತಲೆದೋರಿರುವ ಮಧ್ಯಪ್ರಾಚ್ಯ ಯುದ್ಧದ ಬಿಕ್ಕಟ್ಟಿನ ಸಮಯವು ಎಥೆನಾಲ್ ವಿಷಯದಲ್ಲಿ ಕೇಂದ್ರ ಸರಕಾರವು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಸಕಾಲವಾಗಿದೆ.

ಬ್ರೆಜಿಲ್ ಮತ್ತು ಅಮೆರಿಕ ರಾಷ್ಟಗಳಂತೆ ಭಾರತದಲ್ಲಿಯೂ ಎಥೆನಾಲ್ ಮಿಶ್ರಣ ಪ್ರಮಾಣ ವನ್ನು ಇನ್ನಷ್ಟು ಹೆಚ್ಚಿಸಬೇಕು ಮತ್ತು ಡೀಜೆಲ್ ನಲ್ಲಿಯೂ ಎಥೆನಾಲ್ ಅನ್ನು ಮಿಶ್ರಣ ೊಳಿಸಿ ಭಾರತವನ್ನು ಇಂಧನ ಸ್ವಾವಲಂಬಿ ದೇಶವನ್ನಾಗಿ ಪರಿವರ್ತಿಸಬೇಕು. ಈಗಾಗಲೇ ಭಾರತದಲ್ಲಿ ಎಥೆನಾಲ್‌ಗೆ ಸರಿಹೊಂದುವ ವಾಹನಗಳನ್ನು ತಯಾರಿಸಲಾಗುತ್ತಿದೆಯಲ್ಲದೆ ಎಥೆನಾಲ್ ಬಳಕೆಯ ವಿಷಯದಲ್ಲಿದ್ದ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ಸಹ ಪೂರಕ ವಾದ ತೀರ್ಪನ್ನು ನೀಡಿದೆ. ಅದರಂತೆ ಎಥೆನಾಲ್ ಆಧಾರಿತ ಸ್ಟವ್‌ಗಳನ್ನು ದೇಶಾದ್ಯಂತ ಪರಿಚಯಿಸಿ ಎಥೆನಾಲ್ ಬಳಕೆಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ.

ಇದಕ್ಕಾಗಿ ಎಥೆನಾಲ್ ಕಾರ್ಖಾನೆಗಳಿಗೆ ಸಹಾಯ, ಸಹಕಾರ ಮತ್ತು ಸಹಾಯಧನವನ್ನು ಒದಗಿಸಬೇಕು. ಇದರಿಂದ ಪರಿಸರದ ಸಂರಕ್ಷಣೆಯಾಗುವುದಲ್ಲದೆ ಮನುಕುಲದ ಆರೋಗ್ಯವು ಸುಧಾರಿಸುತ್ತದೆ.

(ಲೇಖಕರು ಕೃಷಿ ತಜ್ಞರು)