ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Sudhakar Kalchar Column: ಕಲಾವಿದರ ಬಗೆಗೂ ಸಹಾನುಭೂತಿ ಇರಲಿ

ಶ್ರೇಷ್ಠ, ಕಳಪೆ ಎರಡೂ ರೀತಿಯ ತಾಳಮದ್ದಳೆಗಳು ಇಂದೂ ನಡೆಯುತ್ತಿವೆ. ಆನ್‌ಲೈನ್‌ನಲ್ಲಿ ತಾಳ ಮದ್ದಳೆಗಳ ಪ್ರಸಾರ ಆರಂಭವಾದ ಬಳಿಕ ಸೋಲಲು ಸಿದ್ಧರಿಲ್ಲದೆ ವಿತಂಡವಾದಕ್ಕೆ ಇಳಿಯುತ್ತಿರುವ ಕಲಾವಿದರ ಸಂಖ್ಯೆ ಜಾಸ್ತಿ ಆಗಿದೆ. ಅದನ್ನು ನೋಡುತ್ತಿದ್ದಂತೆ ಇಂದಿನ ತಾಳೆಮದ್ದಳೆಗಳ ಗುಣಮಟ್ಟ ಕೆಟ್ಟಿದೆ, ಅಗ್ಗದ ಮನರಂಜನೆಗೆ ಪ್ರಾಶಸ್ತ್ಯ ಎಂಬ ಭಾವನೆ ಹರಡುತ್ತಿದೆ.

ತಪ್ಪಿದ ತಾಳ

ಸುಧಾಕರ್‌ ಕಲ್ಚಾರ್

ಯಾವುದೇ ಕಲೆ ಉಳಿದು ಬೆಳೆಯಬೇಕಿದ್ದರೆ ಅಂತಃಸತ್ವ, ರಂಜನೆ ಎರಡೂ ಅನಿವಾರ್ಯ. ಅಗ್ಗದ ಸರಕು ಹೆಚ್ಚು ಬಾಳಿಕೆ ಬಾರದು. ಶ್ರೇಷ್ಠ ಗುಣಮಟ್ಟ ಇದ್ದರೂ ಜನರನ್ನು ರಂಜಿಸದಿದ್ದರೆ ಕಲೆಗೆ ಬೇಡಿಕೆ ಉಳಿಯಲಾರದು. ಇವೆರಡನ್ನೂ ಹದವಾಗಿ ಹೊಂದಿಸಿಕೊಳ್ಳುವ ಕಲೆ ಹೆಚ್ಚು ಸಮಯ ಉಳಿಯಬಹುದು.

ಯಕ್ಷಗಾನ ಅಂಥ ಒಂದು ಕಲೆ ಎನ್ನುವುದು ನಿರ್ವಿವಾದ. ಆದರೆ ರಂಜನೆಯ ಹೆಸರಿನಲ್ಲಿ ಕಲೆ ಹಳಿ ತಪ್ಪುತ್ತಿದೆಯಾ? ಇತ್ತೀಚಿನ ಕೆಲವು ಕಾರ್ಯಕ್ರಮಗಳನ್ನು ಗಮನಿಸಿದರೆ ಅಂಥ ಆತಂಕ ಹುಟ್ಟು ವುದು ಸಹಜ. ಕಲಾವಿದರೇ ಕಲೆಗಿರುವ ಚೌಕಟ್ಟನ್ನು ಮೀರದೆ, ಕಲೆಯನ್ನು ಉಳಿಸಿ ಬೆಳೆಸುವುದು ಅಪೇಕ್ಷಿತ. ಹಾಗಾಗದಿದ್ದಾಗ ಇತರರ ಪ್ರವೇಶ ಅನಿವಾರ್ಯ.

ಯಕ್ಷಗಾನದ ಸ್ವಲ್ಪ ಮಟ್ಟಿನ ತರಬೇತಿಯನ್ನು ಪಡೆದು, ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದ್ದು, ತಾಳಮದ್ದಳೆ, ಆಟ-ಕೂಟಗಳ ವೀಕ್ಷಕನಾಗಿ ನನ್ನ ಒಂದಷ್ಟು ಅಭಿಪ್ರಾಯ ತಿಳಿಸುವುದು ವಿಹಿತ ಎಂದುಕೊಂಡಿದ್ದೇನೆ.

‘ವಿಶ್ವವಾಣಿ’ಯ ಚರ್ಚೆ ತಾಳಮದ್ದಳೆಯ ಬಗ್ಗೆಯೇ ಆಗಿರುವುದರಿಂದ ತಾಳಮದ್ದಳೆಯಲ್ಲಿ ನಡೆದ, ನಡೆಯುವ ಅಪಸವ್ಯಗಳನ್ನು ಯಾರ ಹೆಸರನ್ನೂ ಉಲ್ಲೇಖಿಸದೆ ಪ್ರಸ್ತಾಪಿಸುತ್ತೇನೆ. ಯಕ್ಷಗಾನ ತಾಳಮದ್ದಳೆಗಳ ಗುಣಮಟ್ಟ ಇತ್ತೀಚೆಗೆ ಕೆಟ್ಟು ಹೋಯಿತಾ? ಹಿಂದೆ ಅದ್ಭುತ ಗುಣಮಟ್ಟದ ತಾಳಮದ್ದಳೆಗಳು ಮಾತ್ರವೇ ನಡೆಯುತ್ತಿದ್ದವಾ? ಅಂದರೆ ಹಾಗೇನೂ ಇಲ್ಲ.

ಇದನ್ನೂ ಓದಿ: Vishweshwar Bhat Column: ಇದು ತಾಳಮದ್ದಳೆಯ ʼಐಟಮ್‌ ಸಾಂಗ್‌ ಡಾನ್ಸರ್‌ʼಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ !

ಹಿಂದೆಯೂ ಕಳಪೆ ತಾಳಮದ್ದಳೆಗಳು ನಡೆಯುತ್ತಿದ್ದವು. ಆದರೆ ಆಗ ಕಳಪೆ ತಾಳಮದ್ದಳೆಗಳನ್ನು ನಿರ್ಲಕ್ಷಿಸಿ ಒಳ್ಳೆಯ ತಾಳಮದ್ದಳೆಗಳ ಬಗೆಗೆ ಚರ್ಚೆಗಳು ಜಾಸ್ತಿ ನಡೆಯುತ್ತಿದ್ದವು. ಗುಣಮಟ್ಟದ ತಾಳಮದ್ದಳೆಗಳಲ್ಲಿ ನಡೆದ ಚರ್ಚೆಯ ಅಂಶಗಳನ್ನು ತಮ್ಮ ಸಂಘದ ತಾಳಮದ್ದಳೆಗಳಲ್ಲಿ ಬಳಸಿ ಕೊಳ್ಳುತ್ತಿದ್ದರು. ಹೀಗಾಗಿ ಅಪಸವ್ಯಗಳು ನಿರ್ಲಕ್ಷಿಸಲ್ಪಟ್ಟು ಒಳ್ಳೆಯ ಅಂಶಗಳು ಮಾತ್ರವೇ ಉಳಿದವು.

ಶ್ರೇಷ್ಠ, ಕಳಪೆ ಎರಡೂ ರೀತಿಯ ತಾಳಮದ್ದಳೆಗಳು ಇಂದೂ ನಡೆಯುತ್ತಿವೆ. ಆನ್‌ಲೈನ್‌ನಲ್ಲಿ ತಾಳಮದ್ದಳೆಗಳ ಪ್ರಸಾರ ಆರಂಭವಾದ ಬಳಿಕ ಸೋಲಲು ಸಿದ್ಧರಿಲ್ಲದೆ ವಿತಂಡವಾದಕ್ಕೆ ಇಳಿಯು ತ್ತಿರುವ ಕಲಾವಿದರ ಸಂಖ್ಯೆ ಜಾಸ್ತಿ ಆಗಿದೆ. ಅದನ್ನು ನೋಡುತ್ತಿದ್ದಂತೆ ಇಂದಿನ ತಾಳೆಮದ್ದಳೆಗಳ ಗುಣಮಟ್ಟ ಕೆಟ್ಟಿದೆ, ಅಗ್ಗದ ಮನರಂಜನೆಗೆ ಪ್ರಾಶಸ್ತ್ಯ ಎಂಬ ಭಾವನೆ ಹರಡುತ್ತಿದೆ.

ಹಿಂದೆ ನಡೆದಿದ್ದ ವಿತಂಡ ವಾದಗಳಿಗೆ ಉದಾಹರಣೆ ಕೊಡುವುದಾದರೆ, ಸೀತಾಪಹಾರ ಪ್ರಸಂಗದಲ್ಲಿ ಮಾಯಾಜಿಂಕೆಯ ಪ್ರವೇಶವಾದ ಬಳಿಕ “ಮಾಯಾಜಿಂಕೆಯನ್ನು ನಾನು ತರುತ್ತೇನೆ, ನೀನು ಸೀತೆಗೆ ರಕ್ಷಣೆಯಾಗಿ ನಿಲ್ಲು" ಎಂದು ರಾಮ ಹೇಳುತ್ತಾನೆ. “ಇಲ್ಲ, ನಾನೇ ಹೋಗುತ್ತೇನೆ. ಸೀತೆಯ ಗಂಡನಾಗಿ ನೀನೇ ಸೀತೆಯ ರಕ್ಷಣೆಗೆ ನಿಲ್ಲು" ಎಂದು ಲಕ್ಷ್ಮಣ ವಾದ ಹೂಡಿದ.

ಇದನ್ನೂ ಓದಿ: Prof R G Hegde Column: ಕ್ಷುಲ್ಲಕ ವಾಸ್ತವ ನಡುವೆಯೇ ಮನಸೆಳೆವ ತಾಳಮದ್ದಳೆ

ವಾದದಲ್ಲಿ ಲಕ್ಷ್ಮಣ ರಾಮನ ಬಾಯಿ ಮುಚ್ಚಿಸಿದ. ಭಾಗವತರು ತಕ್ಷಣ “ನನಗೆ ಮುಂದಿನ ಪದ್ಯ ಗೊತ್ತಿಲ್ಲ. ಪ್ರಸಂಗ ಪುಸ್ತಕ ತನ್ನಿ" ಎಂದರು (ಆ ಕಾಲದಲ್ಲಿ ಭಾಗವತರು ‘ಪ್ರಸಂಗ ಪುಸ್ತಕ’ ಬಳಸು ತ್ತಿರಲಿಲ್ಲ. ಪದ್ಯಗಳು ಅವರಿಗೆ ಬಾಯಿಪಾಠ ಬರುತ್ತಿತ್ತು). ವ್ಯವಸ್ಥಾಪಕರು ಎಲ್ಲಿಂದಲೋ ಪ್ರಸಂಗ ಪುಸ್ತಕ ತರಿಸಿದರು.

ಅದನ್ನು ನೋಡಿದ ಭಾಗವತರು “ಈ ಪದ್ಯ ನನಗೆ ಗೊತ್ತು. ಚಿನ್ನದ ಜಿಂಕೆಯನ್ನು ತರಲು ಲಕ್ಷ್ಮಣ ಹೋದ ಪದ್ಯ ಇರುವ ಪ್ರಸಂಗ ಪುಸ್ತಕ ನನಗೆ ಬೇಕು, ಅದನ್ನು ತನ್ನಿ" ಎಂದರು. ಪರಿಸ್ಥಿತಿಯ ಅರಿವಾದ ಲಕ್ಷ್ಮಣ ಪಾತ್ರಧಾರಿಯು ಕ್ಷಮೆ ಕೇಳಿದ ಬಳಿಕ ಪ್ರಸಂಗ ಮುಂದುವರಿಯಿತು. ಇಲ್ಲಿ ಯಾರನ್ನು ದೂರಬೇಕು? ಔಚಿತ್ಯ ಮರೆತು ವಾದ ಮಾಡಿದ ಲಕ್ಷ್ಮಣನನ್ನೇ ಅಥವಾ ರಾಮನ ಬಾಯಿ ಮುಚ್ಚಿಸಬಲ್ಲ ಸಾಮರ್ಥ್ಯವಿರುವ ಮಾತುಗಾರನಿಗೆ ಲಕ್ಷ್ಮಣನ ಪಾತ್ರ ಕೊಟ್ಟ ವ್ಯವಸ್ಥಾಪಕರನ್ನೇ? ಇದು ನಾನು ಬೇರೆಯವರಿಂದ ಕೇಳಿದ ಘಟನೆ.

ಈಗ, ನಾನೇ ವೀಕ್ಷಕನಾಗಿದ್ದ ತಾಳಮದ್ದಳೆಯ ಇನ್ನೊಂದು ಉದಾಹರಣೆ ಹೇಳುತ್ತೇನೆ. ಸಂಘ ವೊಂದರ ತಾಳಮದ್ದಳೆ, ಪ್ರಸಂಗ- ಅಂಗದ ಸಂಧಾನ. ಪ್ರಹಸ್ತ ಮತ್ತು ಅಂಗದರ ನಡುವಿನ ಸಂಭಾ ಷಣೆಯ ಸಂದರ್ಭ. “ಮಾತಿನೊಳಗೆ ಜಾಣನಹುದು ನಿನ್ನನ್ನು ಪೆತ್ತ ಮಾತೆ (ಹೆತ್ತ ಮಾತೆ) ಯಾರಯ್ಯ" ಎಂಬುದು ಪದ್ಯ. ಪೆತ್ತ ಎಂಬಲ್ಲಿಗೆ ಭಾಗವತರು ರಾಗದ ಆಲಾಪನೆ ಆರಂಭಿಸಿದರು. ತಕ್ಷಣ ಅರ್ಥಧಾರಿ ತುಳುವಿನಲ್ಲಿ “ಪೆತ್ತ ಅತ್ತ್ ಕೋಣ" (ಹಸು ಅಲ್ಲ ಕೋಣ) ಎಂದುಬಿಟ್ಟರು.

ಇದನ್ನೂ ಓದಿ: G N Bhat Column: ಇಂದಿನ ತಾಳಮದ್ದಳೆಯೆಂದರೆ ಸೂತ್ರವಿಲ್ಲದ ಗಾಳಿಪಟದಂತೆ

ಭಾಗವತರು ಪದ್ಯ ನಿಲ್ಲಿಸಿ ಜಗಳಕ್ಕೆ ನಿಂತರು. ವ್ಯವಸ್ಥಾಪಕರ ಮಧ್ಯಪ್ರವೇಶದಿಂದ ತಾಳಮದ್ದಳೆ ಇಡೀ ರಾತ್ರಿ ಮುಂದುವರಿಯಿತು. ಬೆಳಗ್ಗೆ ಮತ್ತೆ ಜಗಳ ನಡೆಯಿತು. “ಪದ್ಯದಲ್ಲಿ ಪೆತ್ತ ಎಂಬಲ್ಲಿಗೆ ಗೀಟು ಹಾಕಿದ್ದು ಯಾಕೆ? ಗೀಟು ಹಾಕಿದಲ್ಲಿ ನಾನು ನಿಲ್ಲಿಸುತ್ತೇನೆ" ಎಂದು ಭಾಗವತರು ಅರ್ಥಧಾರಿಯ ಶೇಪ್ ತೆಗೆದರು.

ಪದ್ಯಕ್ಕೆ ಗೀಟು ಹಾಕಿದ ನಿಲ್ಲಿಸಲಾರಂಭಿಸಿದರೆ ಏನು ಅಪಸವ್ಯವಾಗುತ್ತದೆ ಎಂಬುದು ಯಕ್ಷಗಾನ ಪದ್ಯಗಳ ಪ್ರಾಥಮಿಕ ತಿಳಿವಳಿಕೆ ಇರುವವರಿಗೆ ಗೊತ್ತು. ಅರ್ಥಧಾರಿಯದೂ ಅನುಚಿತ ಪ್ರತಿಕ್ರಿಯೆ. ಈ ತಾಳಮದ್ದಳೆಗೆ ಸಂಪಾದಕರು ಸಾಕ್ಷಿಯಾಗಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು ಎನ್ನುವುದು ನನ್ನ ಕುತೂಹಲ.

ಇನ್ನೊಂದು ಜಿಲ್ಲಾ ಮಟ್ಟದ ಪ್ರಸಿದ್ಧ ಅರ್ಥಧಾರಿಗಳ ಉದಾಹರಣೆಯನ್ನು ತೆಗೆದುಕೊಳ್ಳುವು ದಾದರೆ ಅದೇ ಅಂಗದ ಸಂಧಾನ ಪ್ರಸಂಗದಲ್ಲಿ ರಾವಣನ ಮಂತ್ರಿ ಪ್ರಹಸ್ತ ಸಂಧಾನಕ್ಕೆ ಬಂದ ಅಂಗದನ ಮೇಲೆ ಯಾವ ರೀತಿ ಮಾತಿನ ಪ್ರಹಾರ ನಡೆಸಿದರೆಂದರೆ “ನನಗೆ ಒಂದು ಸಲ ತಾಳ ಮದ್ದಳೆ ಮುಗಿದರೆ ಸಾಕು ಅನಿಸಿತ್ತು" ಎಂದು ಮಾರನೇ ದಿನ ಅಂಗದನ ಅರ್ಥಧಾರಿ ಹೇಳಿದರಂತೆ.

ನ್ಯಾಯವನ್ನೇ ಹಿಡಿದು ಮಾತನಾಡುವುದಾದರೆ ನೀತಿಯನ್ನು ಬೋಧಿಸುವ ರಾಮಾಯಣದ ಪ್ರಕರಣವನ್ನು ಆಧರಿಸಿದ ತಾಳಮದ್ದಳೆಯಲ್ಲಿ ನ್ಯಾಯದ ಪರವಾಗಿದ್ದ ಅಂಗದನ ಮೇಲೆ ಪ್ರಹಸ್ತ ಆ ಪರಿ ಪ್ರಹಾರ ನಡೆಸಬಹುದಿತ್ತೆ? ಅಥವಾ ಎದುರು ಅರ್ಥಧಾರಿಯ ಸಾಮರ್ಥ್ಯ ಅರಿತ ಸಜ್ಜನ ಅರ್ಥಧಾರಿಯು ಆ ಪ್ರಸಂಗದಲ್ಲಿ ಭಾಗವಹಿಸದೆ ಇರಬಹುದಿತ್ತಲ್ಲವೆ? ಇಲ್ಲಿ ಪ್ರಹಸ್ತ ಪಾತ್ರಧಾರಿ ಯಿಂದ ಸೌಜನ್ಯ ಅಪೇಕ್ಷಿಸಬೇಕಿತ್ತೇ ಅಥವಾ ತಾಳಮದ್ದಳೆಯ ವೀಕ್ಷಕರು ರಂಜನೆ ಅಪೇಕ್ಷಿಸಬೇಕೇ? ಪ್ರಹಸ್ತನ ಮಾತುಗಳಿಗೆ ಪ್ರೇಕ್ಷಕರು ಘೊಳ್ಳೆಂದು ನಗುತ್ತಿದ್ದುದರಿಂದಲೇ ಅವರು ಮನರಂಜನೆ ಪಡೆದಿರುವುದು ಸ್ಪಷ್ಟ. ಆದರೆ ತಾಳಮದ್ದಳೆಯ ಗುಣಮಟ್ಟ ಮಾತ್ರ ಪಾತಾಳಕ್ಕೆ ಇಳಿದಿತ್ತು.

ಇದನ್ನೂ ಓದಿ: Kiran Upadhyay Column: ತಾಳಮದ್ದಳೆ ಬಾಲಿವುಡ್‌, ಅರ್ಥಧಾರಿಗಳು ಐಟಂ ಡ್ಯಾನ್ಸರ್‌ʼಗಳಾಗಬಾರದು

ಇಷ್ಟೊಂದು ದೀರ್ಘವಾಗಿ ಉದಾಹರಣೆಗಳನ್ನು ಯಾಕೆ ಕೊಟ್ಟೆ ಅಂದರೆ, ಹಿಂದಿನ ಕಾಲದಲ್ಲಿಯೂ ಕಳಪೆ ಪ್ರದರ್ಶನಗಳು, ವಿತಂಡವಾದಗಳು ನಡೆಯುತ್ತಿದ್ದವು. ಆದರೂ ಯಕ್ಷಗಾನ ತಾಳಮದ್ದಳೆ ಇಲ್ಲಿಯವರೆಗೆ ಉಳಿದಿದೆ, ಬೆಳೆದಿದೆ. ಆದರೆ ಇಂದು ಆನ್‌ಲೈನ್ ಪ್ರಸಾರದಿಂದಾಗಿ ಅಪಸವ್ಯ ನಡೆದ ಕೂಡಲೇ ಪ್ರಚಾರವಾಗುತ್ತದೆ.

ಅಪಸವ್ಯಗಳು ಯಾಕೆ ನಡೆಯುತ್ತವೆ?

1. ಕೆಲವು ಪಾತ್ರಧಾರಿಗಳು ಸೋಲೊಪ್ಪಲು ಸಿದ್ಧರಿಲ್ಲದೆ ವಿತಂಡ ವಾದ ನಡೆಸುವುದು. ಇದು ತಪ್ಪು. ವ್ಯವಸ್ಥಾಪಕರು ಕ್ರಮ ಕೈಗೊಳ್ಳಲೇಬೇಕು.

2. ಸಮಕಾಲೀನ ಘಟನೆಗಳನ್ನು ಯಕ್ಷಗಾನ ಪ್ರಸಂಗದೊಳಕ್ಕೆ ಎಳೆದು ತರುವುದು. ಇದನ್ನು ಪೂರಾ ತಪ್ಪು ಅನ್ನುವಂತಿಲ್ಲ. ಕೆಲವು ಸಮರ್ಥ ಕಲಾವಿದರು ಇದನ್ನು ಅತ್ಯಂತ ಜಾಣತನದಿಂದ ನಿರ್ವಹಿಸುತ್ತಾರೆ. ನೋಟ್‌ಬ್ಯಾನ್‌ನಂಥ ಘಟನೆಯನ್ನು ಯಕ್ಷಗಾನದಲ್ಲಿ ಪ್ರಸ್ತಾಪಿಸಿದ್ದು ಹೀಗೆ: ಕುಬೇರನಲ್ಲಿ ಮಾತನಾಡುತ್ತಾ “ನೀನು ಕೂಡಿಹಾಕಿದ ಸಂಪತ್ತನ್ನು ಒಂದು ಕ್ಷಣದಲ್ಲಿ ಅವನು ಮೌಲ್ಯ ಇಲ್ಲದಂತೆ ಮಾಡಬಲ್ಲ".

ಕುಬೇರ ಸಂಪತ್ತಿನ ಅಧಿಪತಿ ಆದ್ದರಿಂದ ಇದು ಚೆನ್ನಾಗಿ ಹೊಂದಿಕೊಂಡಿತ್ತು. ದೇವಸೇನಾನಿ ಕುಮಾರಸ್ವಾಮಿಗೆ (ಷಣ್ಮುಖ) ನೀನು ಪಕ್ಷ ಬದಲಿಸು ಎಂಬ ಸಲಹೆ ಕೊಡುವುದು, ಕೋವಿಡ್ ಕಾಲದ ‘ಅಂತರ ಕಾಯ್ದುಕೊಳ್ಳುವಿಕೆ’, ಇತ್ತೀಚಿನ ಯಕ್ಷಗಾನದ ಕಾಲಮಿತಿಯ ಬಗ್ಗೆ ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ “ಗಯನನ್ನು 8 ದಿನಗಳೊಳಗೆ ಕೊಲ್ಲುತ್ತೇನೆ" ಎಂಬ ಕೃಷ್ಣ ಹೇಳಿದ ಮಾತಿಗೆ ಕಾಲಮಿತಿಯನ್ನು ನೆನಪಿಸುವುದು... ಇವು ಕೆಲವು ಉದಾಹರಣೆಗಳಾದರೂ ಪಾತ್ರಧಾರಿಯ ವಾಕ್ಚಾ ತುರ್ಯ, ಪದ ಸಂಪತ್ತು ಚೆನ್ನಾಗಿದ್ದರೆ ತುಂಬಾ ಚೆನ್ನಾಗಿ ಯಕ್ಷಗಾನ ಪ್ರಸಂಗಕ್ಕೆ ಹೊಂದಿ ಕೊಳ್ಳುತ್ತವೆ. ಕೆಲವು ಬಾರಿ ಇದು ‘ಮಿಸ್ ಫೈರ್’ ಆಗುತ್ತದೆ, ಅದಕ್ಕೆ ಎರಡು ಕಾರಣಗಳಿವೆ:

1. ಪಾತ್ರಧಾರಿಯ ವೈಫಲ್ಯ

2. ವೀಕ್ಷಕರಿಗೆ ಆ ಕ್ಷಣದಲ್ಲಿ ಅರ್ಥವಾಗದಿರುವಿಕೆ ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ‘ಗಾಂಡೀವ ನಿಂದನೆ’ ಪ್ರಸಂಗದಲ್ಲಿ ಅರ್ಜುನ ಯುಧಿಷ್ಠರನ್ನು ಗರಿಷ್ಠ ಮಟ್ಟದಲ್ಲಿ ನಿಂದಿಸಿದ ಬಳಿಕ ‘ಇನ್ನು ತೆಗಳಲು ಪದ ಉಂಟಾ?’ ಎನ್ನುತ್ತಾರೆ (ಪದ ಇಲ್ಲ ಅಂದರೆ ಶಬ್ದ ಇಲ್ಲ ಎಂಬರ್ಥದಲ್ಲಿ).

ಆದರೆ ವಿಮರ್ಶಕರೊಬ್ಬರು ಪದ ಉಂಟಾ? ಎಂಬುದನ್ನು ಪ್ರಸಂಗದಲ್ಲಿ ಪದ್ಯ ಉಂಟಾ ಎಂದದ್ದು ಅಂತ ತಪ್ಪು ಅರ್ಥ ಮಾಡಿಕೊಂಡಿದ್ದರು. ಇನ್ನೊಂದು ವೇದಿಕೆಯಲ್ಲಿ ಅದು ಪ್ರಸ್ತಾಪವಾದಾಗ ಆ ಅರ್ಥಧಾರಿಯೇ ಸ್ಪಷ್ಟೀಕರಿಸಿದ್ದು ಯುಟ್ಯೂಬ್‌ನಲ್ಲಿ ಲಭ್ಯವಿದೆ.

ಯಕ್ಷಗಾನ ಆಶುಸಾಹಿತ್ಯವಾಗಿರುವುದರಿಂದ, ಕಲಾವಿದನ ಉಳಿವಿಗೆ ಆತ ರಂಜಿಸುವುದೂ ಅನಿವಾರ್ಯವಾದಾಗ, ಆತನ ಪ್ರಯತ್ನ ಕೆಲವು ಬಾರಿ ಆಭಾಸಕ್ಕೆ ಎಡೆಮಾಡಿಕೊಡುತ್ತದೆ. ಆ ಕೂಡಲೇ ಯಕ್ಷಗಾನ ಪಾತಾಳಕ್ಕಿಳಿಯಿತು ಎಂದಾಗಲೀ, ಕಲಾವಿದನಿಗೆ ಔಚಿತ್ಯಪ್ರಜ್ಞೆ ಇಲ್ಲವೆಂದಾ ಗಲಿ ವಾಗ್ಬಾಣಗಳನ್ನು ಪ್ರಯೋಗಿಸುವ ಅಗತ್ಯವಿಲ್ಲ.

ಕಲಾವಿದನಿಗೆ ಕೆಟ್ಟ ಉದ್ದೇಶ ಇಲ್ಲದಿದ್ದರೆ ಅದು ಕ್ಷಮ್ಯ. ಮುಂದೆ ಹಾಗಾಗದಂತೆ ನೋಡಿಕೊಳ್ಳು ವುದು ಅಗತ್ಯ. ಜನರಿಗೆ ಇಂದು ಮನರಂಜನೆಗೆ ಹಲವು ಆಯ್ಕೆಗಳಿವೆ. ಹಾಗಾಗಿ ತಾಳಮದ್ದಳೆಗಳಿಗೆ ವೀಕ್ಷಕರೂ ಕಡಿಮೆಯಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ರಂಜನೆಯ ಒತ್ತಡಕ್ಕೆ ಬಿದ್ದ ಕಲಾವಿದರು ಆಭಾಸಕ್ಕೆ ಕಾರಣವಾಗುವುದೂ ಸತ್ಯ. ತಮ್ಮ ಬದುಕಿಗೆ ಆಸರೆಯಾಗಿರುವ ಕಲೆಯನ್ನು ಜೀವಂತವಾಗಿ ಇರಿಸಿಕೊಳ್ಳಲು ಜನರನ್ನು ಆಕರ್ಷಿಸುವ ಕಲಾವಿದರ ಒತ್ತಡವನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿದೆ.

ಯಕ್ಷಗಾನ ಹಲವು ಅವಸ್ಥಾಂತರಗಳನ್ನು ದಾಟಿ ಬಂದಿದೆ. ಅಂದೂ ಇಂದೂ ಸವ್ಯ, ಅಪಸವ್ಯ ಎರಡೂ ಇವೆ. ಇಂದೂ ಪ್ರಬುದ್ಧ ಮಾತುಗಾರರಿದ್ದಾರೆ. ಆಟಕ್ಕಷ್ಟೆ ಬಳಕೆಯಾಗುವ ದೇವಿ ಮಹಾತ್ಮೆ ಪ್ರಸಂಗದ ತಾಳಮದ್ದಳೆಯಲ್ಲಿ ಶುಂಭನ ಪಾತ್ರದಲ್ಲಿ ಬೆರಗು ಹುಟ್ಟಿಸುವ ಅದ್ಭುತ ನಿರೂಪಣೆ ನೀಡಿದ ಕಲಾವಿದರಿದ್ದಾರೆ (ಆಟದಲ್ಲಿ ಶುಂಭ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ).

ಕರ್ಣಾರ್ಜುನ ಕಾಳಗದ ಕರ್ಣ-ಶಲ್ಯ ಸಂವಾದ, ಕುರುಕ್ಷೇತ್ರ ಯುದ್ಧದ ಮೊದಲಿನ ಭೀಷ್ಮ-ಕೌರವ ಸಂವಾದ ಇಂಥ ಅದ್ಭುತ ಕಾರ್ಯಕ್ರಮಗಳು ಯುಟ್ಯೂಬ್‌ನಲ್ಲಿ ಲಭ್ಯವಿವೆ. ಇದರಿಂದಲೇ ಯಕ್ಷಗಾನದ ಶ್ರೀಮಂತಿಕೆಯ ಬಗ್ಗೆ ಹೆಮ್ಮೆ ಪಡಬಹುದು.

ಹಾಗೆಂದು ಅಪಸವ್ಯಗಳಿಗೆ ಕಡಿವಾಣ ಅನಿವಾರ್ಯ. ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕ ನಾಗಿದ್ದರೂ ಇಂದಿನ ತಾಳಮದ್ದಳೆಗಳಲ್ಲಿ ಭಾಗವಹಿಸುವ ಬಹು ಬೇಡಿಕೆಯ ಭಾಗವತರುಗಳು ಅರ್ಥಧಾರಿಗಳಿಂದ ಕಿರಿಯರಾಗಿರುವುದರಿಂದ ಅವರು ಬಹುಶಃ ಅರ್ಥಧಾರಿಗಳನ್ನು ನಿಯಂತ್ರಿಸ ಲಾರರು. ಇಂಥ ಸಂದರ್ಭಗಳಲ್ಲಿ ವಿಶ್ವೇಶ್ವರ ಭಟ್‌ರಂಥ ಹಿರಿಯರ ಹಿತವಚನ ಸಕಾಲಿಕ.

(ಲೇಖಕರು ಪತ್ರಕರ್ತರು ಮತ್ತು ಯಕ್ಷಗಾನಾಸಕ್ತರು)