ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mirley Chandrashekher Column: ಹಬ್ಬಗಳ ಸಡಗರದ ನಡುವೆ ಆಗದಿರಲಿ ಪರಿಸರ ಮಾಲಿನ್ಯ

ನಮ್ಮ ಹಬ್ಬಗಳು ನಮಗೆ ಬೇಕೇಬೇಕು, ನಿಲ್ಲಿಸಲು ಘನವಾದ ಕಾರಣಗಳು ಏನೇ ಇರಬಹುದು, ಆದರೆ ಖಂಡಿತ ಯಾರೂ ನಿಷೇಧಿಸಲಾಗದು. ಹಾಗೆಯೇ ಇತರೆ ಅನ್ಯಧರ್ಮೀಯರ ಹಬ್ಬ ಗಳನ್ನೂ ಸಹ ಆಚರಣೆಯಿಂದ ನಿಲ್ಲಿಸಲಾಗದು. ಇದು ಸಮಾಜದಲ್ಲಿ ಸೂಕ್ಷ್ಮ ವಿಚಾರದ ವಿಷಯಗಳು. ಈಗ ನಾನು ಮುಖ್ಯ ವಿಷಯಕ್ಕೆ ಬರುತ್ತಿದ್ದೇನೆ, ನಾವು ನೆಲೆಸಿರುವ ಭೂಮಿ ಹಾಗೂ ಪರಿಸರವನ್ನೂ ಮಾಲಿನ್ಯಗೊಳಿಸದೆ ಮುಂದಿನ ಪೀಳಿಗೆಗೆ ಉಳಿಸಿ ಹೋಗುವುದು ಎಲ್ಲರ ಕರ್ತವ್ಯವೂ ಹೌದು.

ಅವಲೋಕನ

ಮಿರ್ಲೆ ಚಂದ್ರಶೇಖರ

ಹಬ್ಬಗಳೆಂದರೆ, ಸಂಭ್ರಮ- ಸಡಗರ. ಆದರೆ, ಅವುಗಳಿಂದ ಘನತ್ಯಾಜ್ಯದ ಭಂಡಾರ! ದೀಪಾ ವಳಿಯ ವೇಳೆ ಶಬ್ದಮಾಲಿನ್ಯದ ಜೊತೆಗೆ ಸೃಷ್ಟಿಯಾಗುತ್ತೆ ಪಟಾಕಿ ತ್ಯಾಜ್ಯ. ಮದುವೆ- ಮುಂಜಿಗಳಾಗುತ್ತಿವೆ ಮಾಲಿನ್ಯದ ಕೂಪ. ನಮ್ಮ ರಾಜ್ಯದಲ್ಲಿ ನಿತ್ಯ ಸಂಗ್ರಹವಾಗುವ ತ್ಯಾಜ್ಯದಲ್ಲಿ ಶೇ.53ರಷ್ಟು ಮಾತ್ರ ವಿಲೇವಾರಿ! ದೇಶದ ಮುಂದಿದೆ Legacy Waste ಸವಾಲು.

ಜಾತಿಧರ್ಮಗಳನ್ನು ಮೀರಿದ್ದು ಎಂಬುದಕ್ಕೆ ದೊಡ್ಡ ಉದಾಹರಣೆಯೆಂದರೆ, ಮಾನವನ ಬದುಕಿನ ಪರಿವರ್ತನೆಯಿಂದ ಉತ್ಪಾದನೆ ಆಗುತ್ತಿರುವ ತ್ಯಾಜ್ಯದ ಪ್ರಮಾಣ. ಜೀವನ ಶೈಲಿಯು ಬದಲಾದ ಪರಿಣಾಮವಾಗಿ ಪರಿಸರವು ಅಡ್ಡಾದಿಡ್ಡಿಯಾಗಿ ಕುಲಷಿತವಾಗುತ್ತಿದೆ. ಅದರಲ್ಲೂ ಹಬ್ಬಹರಿದಿನಗಳಲ್ಲಿ ಮಾಲಿನ್ಯದ ಪ್ರಮಾಣವು ಅಂಕೆಗೆ ಸಿಗದಷ್ಟು ಏರಿಕೆ ಯಾಗುತ್ತದೆ. ಇದಕ್ಕೆ ಯಾವ ಧರ್ಮದ ಹಬ್ಬಗಳೂ ಹೊರತಾಗಿಲ್ಲ.

ಹಬ್ಬಗಳನ್ನು ನಮ್ಮ ಪೂರ್ವಿಕರು ಸದುದ್ದೇಶದಿಂದ ಪೀಳಿಗೆಯಿಂದ ಪೀಳಿಗೆಗೆ ಮುಂದು ವರಿಯುವ ಹಾಗೆ ಸಂಪ್ರದಾಯಗೊಳಿಸಿದ್ದರಾದರೂ ಬರುಬರುತ್ತಾ ಅವುಗಳ ಆಚರಣೆಯ ದಿಕ್ಕೇ ಬದಲಾಗಿದೆ, ಅದ್ದೂರಿತನದಿಂದಾಗಿ ಹಬ್ಬಗಳು ಮಾಲಿನ್ಯದ ಏರಿಕೆಗೆ ಕಾರಣ ವಾಗುತ್ತಿವೆ.

ಹಬ್ಬಗಳ ಆಚರಣೆಯಿಂದ ಹತ್ತು ಹಲವು ಪ್ರಯೋಜನಗಳಿವೆ. ಪ್ರವಾಸಿಗರನ್ನು ಆಕರ್ಷಿಸು ವುದರಿಂದ ವ್ಯಾಪಾರ ವಹಿವಾಟುಗಳು ಹೆಚ್ಚಾಗುವುದು, ಆ ಮೂಲಕ ಆರ್ಥಿಕತೆಯು ಉತ್ತೇಜನಗೊಳ್ಳುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಪೀಳಿಗೆಯ ಜೀವನ ಕ್ರಮವನ್ನು ಅರ್ಥಮಾಡಿಕೊಳ್ಳುವ ಹಾಗೂ ಮೌಲ್ಯಗಳನ್ನು ಪಾಲಿಸಲು ಸಹಕಾರಿ ಆಗು ವುದು, ಹಬ್ಬಗಳು ಕುಟುಂಬಗಳನ್ನು ಗಟ್ಟಿಗೊಳಿಸುತ್ತವೆ (ಇಂದು ಇದರ ಕೊರತೆಯು ಹೆಚ್ಚಾಗಿ ಕಾಡುತ್ತಿದೆ), ವಿಭಿನ್ನ ಸಂಸ್ಕೃತಿಯ ಸಮೂಹಗಳು ಆಚರಣೆಯ ಸಮಯದಲ್ಲಿ ಒಗ್ಗೂಡುತ್ತವೆ.

ಇದನ್ನೂ ಓದಿ: Mirley Chandrashekher Column: ವರುಣ ಕರುಣಿಸಿದ್ದಾನೆ, ಬಾಗಿಲುಗಳು ಭದ್ರವಾಗಿವೆಯೇ ?!

ಇದರಿಂದ ಧರ್ಮಗಳ ಸಾರವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ ಆಗುವುದು. ಹಬ್ಬ ಗಳನ್ನು ಆಚರಿಸುವ ಸಂಪ್ರದಾಯವು ನಮ್ಮ ಪರಂಪರೆಯು ಸಂತೋಷ, ಸುಖಶಾಂತಿ ಮತ್ತು ಸೌಹಾರ್ದತೆಯಿಂದ ಜೀವಿಸಲು ವಿಶೇಷವಾದ ಪ್ರೇರಣೆ ನೀಡುವಂಥವು. ಜಾತ್ರೆಗಳು, ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ, ಕುಂಭಮೇಳ ಹಾಗೂ ದಸರಾದಂತಹ ಸಾರ್ವಜನಿಕ ಆಚರಣೆಗಳು ಎಲ್ಲಾ ಜಾತಿಧರ್ಮಗಳನ್ನು ಒಗ್ಗೂಡಿಸುತ್ತವೆ ಪರಿಣಾಮವಾಗಿ ಸಹಬಾಳ್ವೆಯ ಜೀವನಕ್ಕೆ ಅನುವು ಮಾಡಿಕೊಡುವುದು.

ಧಾರ್ಮಿಕ ಆಚರಣೆಗಳು ಜನರ ನಂಬಿಕೆಗೆ ಗಟ್ಟಿಯಾಗಿ ಅಂಟಿಕೊಂಡಿರುವುದರಿದ ಕಾರಣ ಗಳನ್ನು ಕೊಟ್ಟು ಹಬ್ಬಗಳನ್ನು ನಿಷೇಧಿಸುವ ಸಾಹಸಕ್ಕೆ ಯಾವ ಸರ್ಕಾರಗಳು ಧೈರ್ಯ ಮಾಡುವುದಿಲ್ಲ, ಅಷ್ಟು ಆಳವಾಗಿ ಹಬ್ಬಗಳು ಬದುಕಿನಲ್ಲಿ ಬೇರೂರಿವೆ.

ಹಿಂದಿನ ದಿನಗಳಲ್ಲಿ ಅಷ್ಟಾಗಿ ಆಚರಣೆಗಳಲ್ಲಿ ಇರದಿದ್ದ ಹಬ್ಬಗಳಾದ ವರಮಹಾಲಕ್ಷ್ಮಿ ಹಬ್ಬ, ತುಳಸಿ ಹಬ್ಬ, ಒಂದು ಗ್ರಾಂ ಚಿನ್ನವನ್ನಾದರೂ ಕೊಳ್ಳಿ ಒಳ್ಳೆಯದು ಎನ್ನುವ ಅಕ್ಷಯ ತೃತೀಯ, ಗಂಡನನ್ನು ಪೂಜಿಸುವ ಭೀಮನ ಅಮಾವಾಸ್ಯೆ ಪೂಜೆಗಳು ಮಾಧ್ಯಮಗಳ ಪ್ರಭಾವಳಿ ಹೆಚ್ಚಾದಂದಿನಿಂದ ಆಚರಿಸದೇ ಇದ್ದವರೂ ಸಹ ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ.

ನಮ್ಮ ಹಬ್ಬಗಳು ನಮಗೆ ಬೇಕೇಬೇಕು, ನಿಲ್ಲಿಸಲು ಘನವಾದ ಕಾರಣಗಳು ಏನೇ ಇರಬಹುದು, ಆದರೆ ಖಂಡಿತ ಯಾರೂ ನಿಷೇಧಿಸಲಾಗದು. ಹಾಗೆಯೇ ಇತರೆ ಅನ್ಯಧರ್ಮೀ ಯರ ಹಬ್ಬಗಳನ್ನೂ ಸಹ ಆಚರಣೆಯಿಂದ ನಿಲ್ಲಿಸಲಾಗದು. ಇದು ಸಮಾಜದಲ್ಲಿ ಸೂಕ್ಷ್ಮ ವಿಚಾರದ ವಿಷಯಗಳು. ಈಗ ನಾನು ಮುಖ್ಯ ವಿಷಯಕ್ಕೆ ಬರುತ್ತಿದ್ದೇನೆ, ನಾವು ನೆಲೆಸಿರುವ ಭೂಮಿ ಹಾಗೂ ಪರಿಸರವನ್ನೂ ಮಾಲಿನ್ಯಗೊಳಿಸದೆ ಮುಂದಿನ ಪೀಳಿಗೆಗೆ ಉಳಿಸಿ ಹೋಗುವುದು ಎಲ್ಲರ ಕರ್ತವ್ಯವೂ ಹೌದು.

wastage

ಹಬ್ಬಗಳ ಆಚರಣೆಯಲ್ಲಿ ಇದನ್ನು ನಿರ್ಲಕ್ಷಿಸಲಾಗದು. ಹಾಗಾದರೆ ಹಬ್ಬಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೆಂದು ಆಚರಿಸಿ ಪರಿಸರವನ್ನು ಹಾಳು ಮಾಡುವುದು ಎಷ್ಟು ಸರಿ? ಪ್ರಾಣಿಪಕ್ಷಿಗಳು ಹಬ್ಬಗಳನ್ನು ಮಾಡುತ್ತವೆಯೇ? ಹಾಗಂತ ಹೇಳುವುದಕ್ಕೆ ಆಗುತ್ತದೆ ಯೇ? ಮನುಷ್ಯರು ಪ್ರಾಣಿಗಳಿಗಿಂತ ವಿಭಿನ್ನ, ಮುಂದುವರಿದ ಸಂತತಿ ಎಂಬ ಉತ್ತುಂಗ ಸ್ಥಾನದಲ್ಲಿ ಮನುಷ್ಯ ಇದ್ದಾನೆ. ಅವನಿಗೆ ಹಬ್ಬಗಳು ಬೇಕೇಬೇಕು.

ಹಬ್ಬಗಳ ಆಚರಣೆ ಸಂದರ್ಭಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿ ಆಗುತ್ತದೆ. ವಿಷಕಾರಿ ವಸ್ತು ಹಾಗೂ ಬಣ್ಣಗಳಿಂದ ತಯಾರಿಸಿದ ವಿಗ್ರಹ ಗಳನ್ನು ಕೆರೆಕಟ್ಟೆ ನದಿಕಾಲುವೆಗಳಲ್ಲಿ ಮುಳುಗಿಸುವುದರಿಂದ ನೀರನ್ನು ವಿಷವಾಗಿಸಿ ಜಲಮಾಲಿನ್ಯಗೊಳಿಸುತ್ತಿದ್ದೇವೆ, ಇದರಿಂದ ಜಲಚರ ಪ್ರಾಣಿಗಳ ಉಳಿವಿಗೆ ಸಂಚಕಾರ ವಾಗಿದೆ.

ದೀಪಾವಳಿ ಹಬ್ಬದಲ್ಲಿ ಇತರೆಲ್ಲಾ ಹಬ್ಬಗಳಿಗಿಂತ ಅತೀ ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುತ್ತಿರುವುದಲ್ಲದೆ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯಗಳಿಗೆ ಬಹುದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಸುಟ್ಟ ಪಟಾಕಿಯ ತ್ಯಾಜ್ಯವು ಭೂಮಿಗೆ ಸೇರುವುದರಿಂದ ನೂರಾರು ವರ್ಷಗಳ ನೈಸರ್ಗಿಕ ಕ್ರಿಯೆಗಳ ಫಲದಿಂದ ಆಗಿರುವ ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ.

ಕೆಲವು ವರ್ಷಗಳಿಂದ ಮದುವೆಮುಂಜಿಗಳು ಮಾಲಿನ್ಯದ ಕೇಂದ್ರಗಳಾಗಿ ಬಿಟ್ಟಿವೆ. ಮದುವೆ ಗಳಿಗೆ ದೇವಸ್ಥಾನಗಳ ಬದಲಾಗಿ ದೊಡ್ಡದೊಡ್ಡ ಛತ್ರಗಳು ಬೇರೆ. ತಿನ್ನುವುದು ಮುಷ್ಟಿ ಯಷ್ಟಾದರೂ ತೋರಿಕೆಗೆ ಹಲವು ಐಟಂಗಳನ್ನು ಮಾಡಿಸುವುದು ದೊಡ್ಡಸ್ಥಿಕೆ ಅನ್ನುವು ದಕ್ಕಿಂತ ಮೃಷ್ಟಾನ್ನ ಭೋಜನವು ಸಮಾರಂಭಗಳಲ್ಲಿ ಸಹಜವಾಗಿಬಿಟ್ಟಿದೆ, ಅರ್ಧದಷ್ಟು ಆಹಾರವನ್ನು ಊಟದ ಎಲೆಯ ಮೇಲೆ ತಿನ್ನಲಾರದೆ ಬಿಟ್ಟಿರುತ್ತಾರೆ.

ಜೊತೆಗೆ ಪಕ್ಕದಲ್ಲೊಂದು ಕುಡಿದುಳಿದ ನೀರಿನ ಪ್ಲಾಸ್ಟಿಕ್ ಬಾಟಲಿ, ಇಷ್ಟಕ್ಕೆ ಮುಗಿಯಿತೆ? ಇಲ್ಲ. ಬಾಡೂಟ ಬೇರೆ ಇದೆಯಲ್ಲಾ.... ಅಂದು ನೂರಾರು ಪ್ರಾಣಿಗಳ ಮಾರಣಹೋಮ, ಅಲ್ಲಿಯೂ ಲೋಡ್ ಗಟ್ಟಲೆ ತ್ಯಾಜ್ಯ ಉತ್ಪಾದನೆ, ನೀವು ಹಿರಿಯ ನಾಗರೀಕರಾಗಿದ್ದರೆ ತಿಳಿದಿರುತ್ತದೆ ಹಿಂದಿನ ಮದುವೆಗಳಲ್ಲಿ ತ್ಯಾಜ್ಯಕ್ಕೆ ಹೋಗುತ್ತಿದ್ದದ್ದು ಪೂರ್ಣವಾಗಿ ತಿಂದು, ಒಂದು ಅಗಳು ಅನ್ನವೂ ಇರದ ನೆಕ್ಕಿ ಬಿಟ್ಟ ಊಟದ ಎಲೆಗಳು ಮಾತ್ರ!

ಪ್ಲಾಸ್ಟಿಕ್ ಬಾಟಲಿಗಳಿರಲಿಲ್ಲ, ಮುತ್ತುಗದ ಎಲೆಯ ಮೇಲೆ ಬಡಿಸುತ್ತಿದ್ದ ಊಟದಲ್ಲಿ ಅನ್ನಸಾರು, ಪಲ್ಯ, ಬೂಂದಿ ಪಾಯಸ ಬಿಟ್ಟರೆ ಬೇರೆ ಏನಿತ್ತು?. ಸ್ವಚ್ಛನಗರ ಬೆಂಗಳೂರಿ ನಲ್ಲಿ ಪ್ರತೀ ದಿನ 3000-3500 ಟನ್ಸ್ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಆಯುಧ ಪೂಜೆ ಮುಗಿದ ಮರುದಿನ 4500 ಟನ್‌ಗಳಿಗಿಂತಲೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸುತ್ತದೆ.

ಸಾಮಾನ್ಯ ದಿನಗಳಿಗಿಂತ ಶೇ.50ರಷ್ಟು ಹೆಚ್ಚುವರಿಯಾಗಿ ಸಂಗ್ರಹಣೆ ಆಗುವುದು. ಅಗಾಧ ಪ್ರಮಾಣದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಪರಿಪೂರ್ಣವಾಗಿ ವಿಲೇವಾರಿ ಮಾಡುವುದು ಜಿಬಿಎಗೆ ಬಹುದೊಡ್ಡ ಸವಾಲಿನ ಕೆಲಸ, ಆ ಕೆಲಸವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆಯಾದರೂ ಮಿತಿ ಇಲ್ಲದ ತ್ಯಾಜ್ಯದ ಉತ್ಪಾದನೆಯಿಂದ ಪೂರ್ಣವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ.

ಎರಡು-ಮೂರು ದಿನ ಸಂಗ್ರಹಿಸದೆ ಕಸ ಹಾಕಿದಲ್ಲೇ ಉಳಿದರೆ ಇಡೀ ಬೆಂಗಳೂರು ಗಬ್ಬು ನಗರವಾಗಿ ಬಿಡುತ್ತದೆ. ನಿತ್ಯವೂ 18500 ಕ್ಕಿಂತಲೂ ಹೆಚ್ಚು ಪೌರಕಾರ್ಮಿಕರು ಸ್ವಚ್ಚತೆಯ ಯೋಧರಾಗಿ ಪೊರಕೆ ಹಿಡಿದು ಹಗಲಿರುಳು ಹೋರಾಟ ಮಾಡುತ್ತಿದ್ದಾರೆ.

ಕರ್ನಾಟಕ ಎಕನಾಮಿಕ್ಸ್ ಸರ್ವೆ 2021-22ರ ವರದಿಯ ಅನುಸಾರ ರಾಜ್ಯದಲ್ಲಿ ಸಂಗ್ರಹಿಸು ವ ತ್ಯಾಜ್ಯದಲ್ಲಿ ಶೇ.53ರಷ್ಟು ಮಾತ್ರ ವಿಲೇವಾರಿ ಆಗುತ್ತಿರುವುದು. ಉಳಿದಿದ್ದು ಹಳೆಯ ತ್ಯಾಜ್ಯವಾಗಿ (ಔಛಿಜZqs UZoಠಿಛಿ) ಬೆಟ್ಟಗಳೋಪಾದಿಯಲ್ಲಿ ನಿಂತಿವೆ.

2021-22ರಂದು ರಾಜ್ಯದಲ್ಲಿ ಉತ್ಪತ್ತಿ ಆದ ತ್ಯಾಜ್ಯ 11044.30 ಟನ್ಸ್, ಇದರಲ್ಲಿ ವೈಜ್ಞಾನಿಕ ವಾಗಿ ವಿಲೇವಾರಿ ಆಗಿದ್ದು ಕೇವಲ 5884.38 ಟನ್ಸ್ ಮಾತ್ರ. ಅಂದಾಜಿಸಿರುವಂತೆ ಇಲ್ಲಿಯ ವರೆಗೆ ವಿಲೇವಾರಿ ಆಗದೆ ಲ್ಯಾಂಡ್‌ಫಿಲ್‌ನಲ್ಲಿ ಶೇಖರವಾಗಿರುವ ಹಳೆಯ ತ್ಯಾಜ್ಯದ ( Legacy Waste) ಪ್ರಮಾಣ 143.64 ಲಕ್ಷ ಮೆಟ್ರಿಕ್ ಟನ್ಸ್. ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರು ವ ಪ್ರಮಾಣ ಒಂದಡೆಯಾದರೆ ಹಳೆಯದನ್ನೂ ಸೇರಿದಂತೆ ವಿಲೇವಾರಿ ಮಾಡಲಾಗದಿದ್ದರೆ ಮುಂದಿನ ಪರಿಣಾಮಗಳು ಏನಾಗಬಹುದು? ಹಾಗೂ ಇದರಿಂದ ಪ್ರಕೃತಿಯ ಮೇಲೆ ಆಗಬಹುದಾದ ದುಷ್ಪರಿಣಾಮಗಳನ್ನು ಉಹಿಸಿಕೊಳ್ಳಲಿಕ್ಕೆ ಕಷ್ಟವೆನಿಸಬಹುದು.

ಹಬ್ಬಗಳು ನಮ್ಮ ಸಂಸ್ಕೃತಿಯ ಹಿರಿಮೆ. ನಾವು ಆಚರಿಸುವ ಪ್ರತೀ ಸಮಾರಂಭಗಳು ಹಾಗೂ ಹಬ್ಬಕ್ಕೊಂದು ತನ್ನದೇ ಆದ ಅರ್ಥವಿದೆ. ಯಾವುದನ್ನೂ ನಿಲ್ಲಿಸಲಾಗದು. ಏಕೆಂದರೆ ದೇಶದ ಆರ್ಥಿಕತೆಯ ಪ್ರಶ್ನೆ, ಮೌಲ್ಯಗಳ ಉಳಿಯುವಿಕೆ, ಕುಟುಂಬಗಳ ಸಹ ಬಾಳ್ವೆ, ನಾಡಿನ ಪರಂಪರೆ, ಸುಖಶಾಂತಿ, ಸಂತೋಷ ಹಾಗೂ ಸೌಹಾರ್ಧತೆಗಳ ಮೂಲ, ಮಾನವ ಜೀವನದ ಸಕಲ ಮೌಲ್ಯವು ಹಬ್ಬಗಳಲ್ಲಿ ಅಡಗಿದೆ. ಹಾಗಾಗಿ ಹಬ್ಬಗಳು ನಡೆಯಲಿಕ್ಕೇ ಬೇಕು ಮತ್ತು ಆಚರಿಸಿ ಸಂಭ್ರವಿಸಲೇಬೇಕು.

ತ್ಯಾಜ್ಯವನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ನಿಯಮಗಳನ್ನಾಗಿಸಿ ಜಾರಿಗೆ ತರುವುದು ಸೂಕ್ತ, ಇಲ್ಲವಾದಲ್ಲಿ ಭವಿಷ್ಯದಲ್ಲಿ ಘನಘೋರ ಪರಿಣಾಮ ಪ್ರಕೃತಿಯ ಮೇಲೆ ಆಗುವುದರಲ್ಲಿ ಸಂಶಯವಿಲ್ಲ.

ಆಶ್ಚರ್ಯವೆನಿಸುವ ಅಂಶಗಳು: ಪ್ರಪಂಚದಲ್ಲಿ ಘನ ತ್ಯಾಜ್ಯ ನಿರ್ವಹಣೆಯು ( Solid Waste Management) ಬಹುದೊಡ್ಡ ಸವಾಲಿನ ಕೆಲಸವಾಗಿದೆ. ನಮ್ಮ ದೇಶದಲ್ಲಿ ಪ್ರತೀ ವರ್ಷ 72 ಮಿಲಿಯನ್ ಟನ್ಸ್ ತ್ಯಾಜ್ಯ ಉತ್ಪತ್ತಿ ಆಗುವುದು ಅದರಲ್ಲಿ 43 ಮಿಲಿಯನ್ ಟನ್ಸ್ ಮಾತ್ರ ಸಂಗ್ರಹಿಸುತ್ತಿರುವುದು.

ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿರುವುದು ಕೇವಲ 12 ಟನ್ಸ್, ಉಳಿದ 31 ಟನ್ಸ್ ತ್ಯಾಜ್ಯವು ಲ್ಯಾಂಡ್‌ಫಿಲ್‌ನಲ್ಲಿ ಸಂಗ್ರಹವಾಗಿದೆ. ನೆನಪಿರಲಿ ಭವಿಷ್ಯದಲ್ಲಿ ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ದೇಶದಲ್ಲಿ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳಂತಹ ಇ-ತ್ಯಾಜ್ಯವನ್ನು ಮರುಬಳಕೆಗಾಗಿ ಪರಿಷ್ಕರಿಸುವ ಸಾಮರ್ಥ್ಯವು ವಾರ್ಷಿಕ 1.07 ಮಿಲಿಯನ್ ಟನ್ಸ್, ಪ್ರತೀ ಒಂದು ಮಿಲಿಯನ್ ಟನ್ ಇ-ತ್ಯಾಜ್ಯವನ್ನು ಪರಿಷ್ಕರಿಸಿದಾಗ 14 ಕೆಜಿ ಪಲ್ಲಾಡಿಯಮ್ ಲೋಹ, 3 ಕೆಜಿ ಚಿನ್ನ, 350 ಕೆಜಿ ಬೆಳ್ಳಿ ಮತ್ತು 15875 ಕೆಜಿ ತಾಮ್ರ ಸಿಗುವುದು.