ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಸತ್ಯದ ಮುಖವಾಡವನ್ನು ಹೊತ್ತು ಬರುತ್ತಿರುವ ಸುಳ್ಳುಗಳೇ ಇಂದಿನ ಭಾರತದ ಬಹು ದೊಡ್ಡ ಸಮಸ್ಯೆಯಾಗಿದೆ. ಇವುಗಳು ಮೇಲ್ನೋಟಕ್ಕೆ ಸತ್ಯವೆಂದೇ ಭಾಸವಾಗುವಂತಿರುತ್ತವೆ. ಆದರೆ ಈ ಸುಳ್ಳುಗಳು ಹಸುವಿನ ತೊಗಲನ್ನು ಹೊದ್ದ ತೋಳನಷ್ಟೇ ಅಪಾಯಕಾರಿ ಯಾಗಿವೆ.
ಇವುಗಳು ಯಾರನ್ನೋ ಕೆಡವಲು ಮಾಡಿದ ಸಂಚಿನ ಭಾಗವಾಗಿ ರೂಪುಗೊಳ್ಳುತ್ತವೆ. ಜನರನ್ನು ನಂಬಿಸುವಂತೆ ಇವುಗಳನ್ನು ಹೊಸೆಯಲಾಗುತ್ತದೆ. ಸಾರ್ವಜನಿಕರಲ್ಲಿ ವಿಷಯಗಳ ಬಗ್ಗೆ ಗೊಂದಲವನ್ನು ಉಂಟು ಮಾಡಿ ತಪ್ಪು ಕಲ್ಪನೆಗಳನ್ನು ಮೂಡಿಸುವುದೇ ಇವುಗಳ ಉದ್ದೇಶವಾಗಿದೆ. ಭಾರತದ ರಾಜಕೀಯದಲ್ಲಿಂದು ಅರ್ಧಸತ್ಯಗಳದ್ದೇ ಕಾರುಬಾರು.
ವಿಪಕ್ಷಗಳು ಆಡಳಿತ ಪಕ್ಷವನ್ನು ಗುರಿಯಾಗಿಸಲು ಇವುಗಳನ್ನು ಧಾರಾಳವಾಗಿ ಬಳಸಿ ಕೊಳ್ಳುತ್ತಿವೆ. ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಕ್ಕಿಸಲು ರೂಪುಗೊಳ್ಳುವ ಅಸತ್ಯಗಳು ದೇಶದ ಹಿತಾಸಕ್ತಿಗೂ ಮಾರಕವಾಗುತ್ತಿರುವುದು ದುರಂತ.
ಇದನ್ನೂ ಓದಿ: Ganesh Bhat Column: ಜಾಗತಿಕ ಅನಿಶ್ಚಿತತೆಯ ನಡುವೆ ಭಾರತವೆಷ್ಟು ನಿಶ್ಚಿಂತ ?
ಇದೀಗ ಭಾರತ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ವ್ಯಾಪಾರ ಒಪ್ಪಂದಗಳ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಈ ವ್ಯಾಪಾರ ಒಪ್ಪಂದವು ಕೃಷಿಕರ ಪಾಲಿಗೆ ಮಾರಕವಾಗಿದೆ, ಇದರಿಂದಾಗಿ ಅಮೆರಿಕದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಕೊಳ್ಳೆಹೊಡೆಯಲಿವೆ ಎಂದು ಪ್ರಚಾರ ಮಾಡಲಾಗುತ್ತಿದೆ. ಡೇಟಾ ವನ್ನೂ ಅಮೆರಿಕಕ್ಕೆ ಮಾರಲಾಗುತ್ತದೆ ಎನ್ನುವ ಅಪಾದನೆಯನ್ನೂ ಮಾಡಲಾಗಿದೆ. ಮಧ್ಯಂತರ ವ್ಯಾಪಾರ ಒಪ್ಪಂದದಂತೆ ಗೋಧಿ, ಅಕ್ಕಿ, ಜೋಳ, ರಾಗಿ, ನವಣೆ, ಬಾರ್ಲಿ ಮೊದಲಾದ ಸಿರಿಧಾನ್ಯಗಳು, ಹಸಿರು ಬಟಾಣಿ, ಕಾಬೂಲಿ ಕಡಲೆ, ಉದ್ದು, ಬೇಳೆಕಾಳುಗಳು, ಹಿಟ್ಟುಗಳು, ಕ್ಷೀರೋತ್ಪನ್ನಗಳು, ಕೋಳಿ ಮಾಂಸ ಹಾಗೂ ಇತರ ಮಾಂಸಗಳು, ಜೇನು, ಹಣ್ಣು-ತರಕಾರಿಗಳು, ಸಾಂಬಾರ ಪದಾರ್ಥಗಳು, ಸಕ್ಕರೆ, ಎಣ್ಣೆಕಾಳುಗಳು, ಹೊಗೆಸೊಪ್ಪು, ಎಥನಾಲ್ ಇವುಗಳನ್ನು ಅಮೆರಿಕದಿಂದ ಭಾರತಕ್ಕೆ ತರಲಾಗುವ ಪಟ್ಟಿಯಿಂದ ಹೊರಗಿಡ ಲಾಗಿದೆ.
ಬಿ.ಟಿ. ಹತ್ತಿ, ಬಿ.ಟಿ. ಬದನೆಯಂಥ ಮಾರ್ಪಡಿಸಲ್ಪಟ್ಟ ತಳಿ ಉತ್ಪನ್ನಗಳನ್ನೂ ಆಮದು ಪಟ್ಟಿಯಿಂದ ಹೊರಗಿಡಲಾಗಿದೆ. ಹೀಗಾಗಿ ಅಮೆರಿಕ-ಭಾರತಗಳ ನಡುವಿನ ವ್ಯಾಪಾರ ಒಪ್ಪಂದವು ಭಾರತೀಯ ಕೃಷಿ ವಲಯಕ್ಕೆ ಅಪಾಯಕಾರಿಯಾಗಲಿದೆ ಎನ್ನುವ ಆರೋಪವು ಸತ್ಯಕ್ಕೆ ದೂರಾದುದು ಎಂದು ಸಾಬೀತಾಗುತ್ತದೆ.
ಭಾರತ-ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದವು ವಿಳಂಬವಾಗಲು ಕೃಷಿ ಹಾಗೂ ಡೈರಿ ಉತ್ಪನ್ನಗಳನ್ನು ಒಪ್ಪಂದದಿಂದ ಹೊರಗಿಡಬೇಕೆಂದು ಭಾರತವು ಹಠ ಹಿಡಿದು ನಿಂತದ್ದೇ ಕಾರಣವಾಗಿತ್ತು.
ಹೀಗಿರುವಾಗ ಒಪ್ಪಂದವು ರೈತವಿರೋಧಿಯಾಗಲು ಹೇಗೆ ಸಾಧ್ಯ? ಇನ್ನು ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ತೆರೆಯಲು ಅನುವು ಮಾಡಿಕೊಡುವುದರ ಮೂಲಕ ದೇಶದ ಜನಸಾಮಾನ್ಯರ ಡೇಟಾವನ್ನು ಅಮೆರಿಕಕ್ಕೆ ಮಾರಲಾಗುತ್ತಿದೆ ಎಂದು ರಾಹುಲ್ ಗಾಂಧಿ ಯವರು ಸಂಸತ್ತಿನಲ್ಲಿ ಮಾಡಿರುವ ಆರೋಪ ಬಾಲಿಶವಾದುದು.
ಏಕೆಂದರೆ ಕೇಂದ್ರ ಸರಕಾರವು ‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ 2023’ ಹಾಗೂ ‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ರೂಲ್ಸ್ 2025’ ಉಪಕ್ರಮಗಳ ಮೂಲಕ ಜನರ ವೈಯಕ್ತಿಕ ಡೇಟಾಗಳನ್ನು ಸುರಕ್ಷಿತವಾಗಿಡಲು ಮುಂಜಾಗರೂಕತೆ ವಹಿಸಿದೆ.
ಹೀಗಾಗಿ ಡೇಟಾಗಳು ಮಾರಾಟವಾಗಲಿವೆ ಎನ್ನುವ ಆರೋಪಕ್ಕೆ ಅರ್ಥವಿಲ್ಲ. 20 ವರ್ಷ ಗಳಷ್ಟು ಹಳತಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ಎಂಎನ್ಆರ್‌ಇಜಿಎಫ್ ‘ಮನ್ರೇಗಾ’) ಯೋಜನೆಯನ್ನು ಕೇಂದ್ರ ಸರಕಾರವು ಬದಲಾಯಿಸಿ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಆಜೀವಿಕಾ ಮಿಷನ್- ಗ್ರಾಮೀಣ್’ (ವಿಬಿ- ಜಿ ರಾಮ್ ಜಿ) ಎನ್ನುವ ಯೋಜನೆಯಾಗಿ ಮಾರ್ಪಾಟು ಮಾಡಿದೆ.
ವಿಪಕ್ಷವಾದ ಕಾಂಗ್ರೆಸ್ ‘ಬದಲಾವಣೆಯಾದ ಯೋಜನೆಯಲ್ಲಿ ಕಾರ್ಮಿಕರ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ, ವಿಕೇಂದ್ರೀಕೃತ ವ್ಯವಸ್ಥೆಯನ್ನು ಕೇಂದ್ರೀಕೃತ ಗೊಳಿಸಲಾಗಿದೆ, ಸ್ಥಳೀಯ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ’ ಎಂದೆ ಆಕ್ಷೇಪಿಸಿದೆ.
ಈ ಬದಲಾವಣೆಯ ವಿರುದ್ಧ ಪಾದಯಾತ್ರೆ ಕೈಗೊಂಡು ಪ್ರತಿಭಟನೆಯನ್ನು ಮಾಡುತ್ತಿದೆ. ಆದರೆ ‘ಮನ್ರೇಗಾ’ದಲ್ಲಿ ಮಾಡಲಾಗುತ್ತಿರುವ ಚಿಕ್ಕಪುಟ್ಟ ಕೆಲಸಗಳು ಸಾರ್ವಜನಿಕ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುಕೂಲ ಆಗುತ್ತಿಲ್ಲ. ಅದರಲ್ಲಿ ಸಾಕಷ್ಟು ಭ್ರಷ್ಟಾಚಾರ ಇದೆ, ನಕಲಿ ಜಾಬ್ ಕಾರ್ಡ್‌ಗಳ ಹಾವಳಿ ಇದೆ, ಸಕಾಲದಲ್ಲಿ ವೇತನ ವಿತರಣೆ ಆಗುತ್ತಿಲ್ಲ.
ಮನ್ರೇಗಾ ಯೋಜನೆಯಲ್ಲಿರುವ ಕುಂದು ಕೊರತೆಗಳನ್ನು ನಿವಾರಿಸುವುದೇ ‘ವಿಬಿ ಜಿ ರಾಮ್ ಜಿ’ ಯೋಜನೆಯ ಉದ್ದೇಶವಾಗಿದೆ. ಯೋಜನೆಯಡಿಯಲ್ಲಿ ಸಣ್ಣಪುಟ್ಟ, ಅಲ್ಪ ಬಾಳಿಕೆಯ ಕೆಲಸಗಳನ್ನು ಮಾಡಿಸುವ ಬದಲು ದೀರ್ಘಕಾಲ ಬಳಿಕೆ ಬರುವಂಥ, ದೇಶದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಂಥ ಕೆಲಸಗಳನ್ನು ಮಾಡಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ.
ವಿಕಸಿತ್ ಗ್ರಾಮ ಪಂಚಾಯತ್ ಯೋಜನೆಯನ್ನು ಪಿಎಂ ಗತಿಶಕ್ತಿ ಯೋಜನೆಯ ಜತೆಗೆ ಸಮನ್ವಯಗೊಳಿಸಿ ಜಾರಿಗೊಳಿಸಲಾಗುತ್ತಿದೆ. ಜಲ ಸಂರಕ್ಷಣೆ, ಗ್ರಾಮೀಣ ಮೂಲಭೂತ ಸೌಕರ್ಯ ನಿರ್ಮಾಣ, ಜೀವನೋಪಾಯ ಕೆಲಸಗಳು, ಹವಾಮಾನಾಧಾರಿತ ಪ್ರಾಕೃತಿಕ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನ ಕೆಲಸಗಳು ಹೀಗೆ 4 ಪ್ರಮುಖ ವಲಯಗಳಲ್ಲಿ ಕೆಲಸಗಳನ್ನು ಮಾಡಿಸಲಾಗುವುದು. ಇದರಿಂದಾಗಿ ಕಾರ್ಮಿಕರಿಗೆ ಉದ್ಯೋಗದ ಜತೆಗೆ ಊರಿಗೆ ಉಪಯೋಗಕಾರಿ ಕೆಲಸಗಳೂ ಆಗಲಿದೆ. ‘ವಿಬಿ- ಜಿ ರಾಮ್ ಜಿ’ ಅಡಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಕೆಲಸದ ಹಾಜರಾ ತಿಯ ಮೇಲೆ ಕಣ್ಣಿಡಲಾಗುತ್ತದೆ, ಸೋರಿಕೆಯನ್ನು ತಡೆಗಟ್ಟಲಾಗುತ್ತದೆ ಹಾಗೂ ಸಕಾಲದಲ್ಲಿ ವೇತನವನ್ನು ಪಾವತಿಸ ಲಾಗುತ್ತದೆ.
ಕಾರ್ಮಿಕರು ಉದ್ಯೋಗಕ್ಕೆ ಮನವಿ ಸಲ್ಲಿಸಿದ 15 ದಿವಸಗಳ ಒಳಗೆ ಕೆಲಸವನ್ನು ಒದಗಿಸಲು ವಿಫಲವಾದರೆ ಅವರಿಗೆ ನಿರುದ್ಯೋಗ ಭತ್ಯೆಯನ್ನೂ ಕೊಡುವ ಬದ್ಧತೆಯನ್ನು ಈ ಯೋಜನೆ ಹೊಂದಿದೆ ಎಂದರೆ ‘ವಿಬಿ- ಜಿ ರಾಮ್ ಜಿ’ಯು ಕಾರ್ಮಿಕರಿಗೆ ಕೊಡುತ್ತಿರುವ ಉದ್ಯೋಗದ ಖಾತರಿಯನ್ನು ಅರ್ಥಮಾಡಿಕೊಳ್ಳಬಹುದು.
ಹೀಗಾಗಿ ಜನರು ಈ ಯೋಜನೆಯ ಬಗೆಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡ ಬೇಕಾದ ಅಗತ್ಯವಿಲ್ಲ.ಇದೀಗ ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ನಡೆಯುತ್ತಿದ್ದು ಇದರ ವಿರುದ್ಧವೂ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಹಾಗೂ ಕಮ್ಯುನಿಸ್ಟ್ ಪಕ್ಷಗಳು ತಗಾದೆ ಮಾಡಿವೆ.
ಎಸ್‌ಐಆರ್ ಮೂಲಕ ಅಲ್ಪಸಂಖ್ಯಾತರ, ವಲಸೆ ಕಾರ್ಮಿಕರ ಹಾಗೂ ಕೊಳೆಗೇರಿ ನಿವಾಸಿ ಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎನ್ನುವ ಆರೋಪ ಗಳನ್ನು ಇವು ಮಾಡಿವೆ.
ನಕಲಿ ಮತದಾರರ ಹೆಸರನ್ನು, ಮೃತ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಹಾಗೂ ಅರ್ಹ ಮತದಾರ ರನ್ನು ಪಟ್ಟಿಗೆ ಸೇರಿಸುವುದು ಈ ಎಸ್‌ಐಆರ್‌ನ ಉದ್ದೇಶವಾಗಿದೆ. 2002ರಲ್ಲಿ ಎಸ್‌ಐಆರ್ ನಡೆದ ನಂತರದ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟು ಇಂದಿನ ಎಸ್‌ಐಆರ್ ಅನ್ನು ನಡೆಸಲಾಗುತ್ತಿದೆ.
2002ರ ಎಸ್ ಐಆರ್ ಪಟ್ಟಿಯಲ್ಲಿ ಇರುವ ಮತದಾರರ, ಮತದಾರರ ಹೆತ್ತವರ ಅಥವಾ ಮತದಾರರ ಅಜ್ಜ-ಅಜ್ಜಿಯರ ಹೆಸರುಗಳನ್ನು ತಾಳೆ ಮಾಡಿ ಇಂದಿನ ಎಸ್‌ಐಆರ್ ಪಟ್ಟಿಯನ್ನು ಮಾಡಲಾಗುತ್ತಿದೆ. ಇದು ಸಾಧ್ಯವಾಗದಿದ್ದರೆ ಮತದಾರರು ಜಿಲ್ಲಾಧಿಕಾರಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಿ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶಾಲಾ ಪ್ರಮಾಣಪತ್ರ ಮೊದಲಾದ 12 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ತಮ್ಮ ಹೆಸರನ್ನು ಎಸ್‌ಐಆರ್ ಪಟ್ಟಿಗೆ ಸೇರಿಸುವ ಅವಕಾಶವಿದೆ.
ಅಲ್ಲೂ ಸಾಧ್ಯವಾಗದಿದ್ದರೆ, ರಾಜ್ಯದ ಮುಖ್ಯ ಚುನಾವಣಾಧಿಕಾರಿಯ ಮೊರೆಹೋಗುವ ಅವಕಾಶವಿದೆ. ಈಗಾಗಲೇ ಬಿಹಾರದಲ್ಲಿ ನಡೆಸಲಾಗಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವೊಬ್ಬ ನ್ಯಾಯಯುತ ಮತದಾರನ ಹೆಸರೂ ಬಿಟ್ಟುಹೋಗಿಲ್ಲ. ಕೇರಳದಲ್ಲೂ ಎಸ್‌ಐಆರ್ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಇಲ್ಲಿಯೂ ಧಾರ್ಮಿಕ ಹಿನ್ನೆಲೆಯ ಆಧಾರದಲ್ಲಿ ಯಾವೊಬ್ಬ ಮತದಾರರ ಹೆಸರೂ ಎಸ್‌ಐಆರ್ ಪಟ್ಟಿಯಿಂದ ಹೊರಗಾಗಿಲ್ಲ.
ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟಿಗೆ ಮೊರೆಹೋಗಿದ್ದರೂ ಕೋರ್ಟ್ ಮಮತಾ ವಾದವನ್ನು ತಿರಸ್ಕರಿಸಿ ಎಸ್‌ಐಆರ್ ಪ್ರಕ್ರಿಯೆಗೆ ರಾಜ್ಯಗಳು ಯಾವುದೇ ತಡೆಯೊಡ್ಡಬಾರದು ಎಂದು ತಾಕೀತು ಮಾಡಿದೆ.
ಕೇಂದ್ರ ಸರಕಾರವು ತಮಗೆ ನ್ಯಾಯಯುತವಾಗಿ ಅನುದಾನವನ್ನು ವಿತರಿಸುತ್ತಿಲ್ಲ ಎನ್ನು ವುದು ಕರ್ನಾಟಕ, ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳ ಆರೋಪ. ಆದರೆ ಅನುದಾನ ಹಂಚಿಕೆಯ ಪ್ರಮಾಣವನ್ನು ನಿರ್ಧರಿಸುವುದು -ನಾ ಕಮಿಷನ್.
15ನೇ -ನಾ ಕಮಿಷನ್‌ನ ಶಿಫಾರಸಿನಂತೆ ಕೇಂದ್ರ ಸರಕಾರವು ತಾನು ಗಳಿಸಿದ ತೆರಿಗೆ (ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಜಿಎಸ್‌ಟಿ) ಆದಾಯದ ಶೇ.41ರಷ್ಟನ್ನು ರಾಜ್ಯಗಳಿಗೆ ಹಂಚುತ್ತಿದೆ. ಹಿಂದಿನ ಯುಪಿಎ ಸರಕಾರದ ಅವಽಯಲ್ಲಿ ಈ ಪ್ರಮಾಣ ಶೇ.32ರಷ್ಟು ಮಾತ್ರ ಆಗಿತ್ತು.
ರಾಜ್ಯಗಳು ಸ್ಟೇಟ್ ಜಿಎಸ್‌ಟಿಯಲ್ಲಿ ಶೇ.100ರಷ್ಟು ಪಾಲನ್ನೂ ತಮ್ಮ ಉಳಿಸಿಕೊಳ್ಳುತ್ತವೆ, ಸಮಗ್ರ ಜಿಎಸ್‌ಟಿಯಲ್ಲಿ ಶೇ.50ರಷ್ಟನ್ನೂ, ಕೇಂದ್ರ ಜಿಎಸ್‌ಟಿಯಲ್ಲಿ ಶೇ.42ರಷ್ಟು ಪಾಲನ್ನೂ ಪಡೆದುಕೊಳ್ಳುತ್ತವೆ. 2013ರ ಅವಧಿಯಲ್ಲಿ ಕೇಂದ್ರ ಸರಕಾರವು ಕರ್ನಾಟಕಕ್ಕೆ 137.00ಕೋಟಿ ರುಪಾಯಿಗಳ ತೆರಿಗೆ ಪಾಲನ್ನು ಕೊಟ್ಟಿದ್ದರೆ, 2025-26ರಲ್ಲಿ 51,876 ಕೋಟಿ ರುಪಾಯಿಗಳ ತೆರಿಗೆ ಪಾಲು ನೀಡಿದೆ. ಈ ವರ್ಷದ ಬಜೆಟ್ ಪ್ರಕಾರ 2026-27ನೇ ಸಾಲಿನಲ್ಲಿ ಕೇಂದ್ರವು ಕರ್ನಾಟಕಕ್ಕೆ 63,049.58 ಕೋಟಿ ರುಪಾಯಿಗಳ ತೆರಿಗೆ ಪಾಲನ್ನು ಕೊಡಲಿದೆ. ಕಳೆದ 12 ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರವು ಕೊಡುತ್ತಿರುವ ತೆರಿಗೆ ಪಾಲು ಸುಮಾರು 5 ಪಟ್ಟು ಹೆಚ್ಚಿದೆ!
ಇದೇ ರೀತಿಯಾಗಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳೂ ಹೆಚ್ಚುವರಿ ತೆರಿಗೆ ಪಾಲನ್ನು ಗಳಿಸಿಕೊಂಡಿವೆ. ಹೀಗಾಗಿ ತೆರಿಗೆ ಹಂಚಿಕೆ ವಿಚಾರದಲ್ಲಿ ತಮಗೆ ತಾರತಮ್ಯವೆಸಗಲಾಗುತ್ತಿದೆ ಎನ್ನುವ ರಾಜ್ಯಗಳ ವಾದದಲ್ಲಿ ಹುರುಳಿಲ್ಲ.
ಅಪಪ್ರಚಾರಕ್ಕೆ ರೈತರ ಕಾಯಿದೆಯಂಥ ಅತ್ಯುತ್ತಮ ಕಾನೂನನ್ನು ನಾವು ಕಳೆದು ಕೊಂಡಿದ್ದೇವೆ. ಕೃಷಿವಲಯವನ್ನು ದಳ್ಳಾಳಿಗಳ ಹಿಡಿತದಿಂದ ಮುಕ್ತಗೊಳಿಸಿ ಕೃಷಿಯನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸುವ ಉದ್ದೇಶದಿಂದ ಹೊಸ ಕೃಷಿ ಕಾಯ್ದೆ ಯನ್ನು 2020ರಲ್ಲಿ ಜಾರಿಗೆ ತರಲಾಗಿತ್ತು.
ಆದರೆ ಹೊಸ ಕಾನೂನು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ತೆಗೆದು ಹಾಕುತ್ತದೆ, ಎಪಿಎಂಸಿ ಮಂಡಿಗಳನ್ನು ಮುಚ್ಚುವಂತೆ ಮಾಡುತ್ತದೆ ಎನ್ನುವ ಸುಳ್ಳು ಸುದ್ದಿಗಳು ಪ್ರಚುರ ಪಡಿಸಲ್ಪಟ್ಟು ಪಂಜಾಬ್, ಹರಿಯಾಣಗಳ ರೈತರು ಈ ಕಾಯ್ದೆಯ ವಿರುದ್ಧ ದಂಗೆ ಏಳುವಂತೆ ಮಾಡಲಾಯಿತು. ಇದೇ ಅವಕಾಶವನ್ನು ಬಳಸಿಕೊಂಡು ಖಾಲಿಸ್ತಾನಿ ಉಗ್ರರು ಪಂಜಾಬಿನ ಸಿಖ್ಖರನ್ನು ಪ್ರತ್ಯೇಕತಾವಾದಕ್ಕೆ ಸೆಳೆಯಲು ಯತ್ನಿಸತೊಡಗಿದಾಗ ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರವು ಈ ಕಾಯಿದೆಯನ್ನು ಹಿಂದೆಗೆಯಬೇಕಾಯಿತು.
ಹೀಗಾಗಿ ದೇಶದ ಹಿತದೃಷ್ಟಿಯಿಂದ ತರಲಾಗುವ ಕಾನೂನು ಅಥವಾ ಯೋಜನೆಗಳ ವಿಚಾರದಲ್ಲಿನ ಸುಳ್ಳು ಸುದ್ದಿಗಳನ್ನು ಜನರು ನಂಬಿದರೆ ದೇಶಕ್ಕೆ ಒಳಿತಾಗದು.
(ಲೇಖಕರು ಹವ್ಯಾಸಿ ಬರಹಗಾರರು)