Dr N Someshwara Column: ಬದುಕು ನೀಡುವ ಬದಲಿ ಜೋಡಣೆ
ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮಾಂಸಲಿ (ಪ್ಯಾನ್‌ಕ್ರಿಯಾಸ್) ಮತ್ತು ಕರುಳು. ಎರಡನೆಯ ವರ್ಗದಲ್ಲಿ ಯಶಸ್ವಿಯಾಗಿರುವ ಆದರೆ ಅಪರೂಪಕ್ಕೆ ನಡೆಸುವ ಬದಲಿ ಜೋಡಣೆಗಳು- ಗರ್ಭಕೋಶ, ಜಠರ ಮತ್ತು ಥೈಮಸ್ ಗ್ರಂಥಿ. ಮೂರನೆಯ ವರ್ಗದಲ್ಲಿ ಸಂಯುಕ್ತ ಅಂಗಗಳನ್ನು (ಒಂದಕ್ಕಿಂತ ಹೆಚ್ಚು ಅಂಗಗಳನ್ನು) ಬದಲಿ ಜೋಡಿಸುವುದುಂಟು- ಕೈ ಅಥವಾ ಬಾಹು, ಮುಖ, ಶಿಶ್ನ, ಧ್ವನಿ ಪೆಟ್ಟಿಗೆ ಹಾಗೂ ವಾಯುನಾಳ (ಟ್ರೇಕಿಯ).
-
ಹಿಂದಿರುಗಿ ನೋಡಿದಾಗ
ಬದುಕು ನೀಡುವ ಬದಲಿ ಜೋಡಣೆ’ ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಇಂದು ನಾವು ಒಬ್ಬ ಮನುಷ್ಯನ ಅಂಗವನ್ನು ಹೊರ ತೆಗೆದು, ಅದನ್ನು ಮತ್ತೊಬ್ಬ ಮನುಷ್ಯನಿಗೆ ಬದಲಿ ಜೋಡಿಸುವುದು ಸಾಧ್ಯವಾಗಿವೆ. ಹೀಗೆ ಜೋಡಿಸಬಹುದಾದ ಅಂಗಗಳನ್ನು ನಾಲ್ಕು ರೀತಿ ವರ್ಗೀಕರಿಸಬಹುದು. ಮೊದಲನೆಯ ಪ್ರಧಾನ ಜೀವಾದಾಯಕ ಷಷ್ಟಾಂಗಗಳು.
ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮಾಂಸಲಿ (ಪ್ಯಾನ್‌ಕ್ರಿಯಾಸ್) ಮತ್ತು ಕರುಳು. ಎರಡನೆಯ ವರ್ಗದಲ್ಲಿ ಯಶಸ್ವಿಯಾಗಿರುವ ಆದರೆ ಅಪರೂಪಕ್ಕೆ ನಡೆಸುವ ಬದಲಿಜೋಡಣೆಗಳು- ಗರ್ಭಕೋಶ, ಜಠರ ಮತ್ತು ಥೈಮಸ್ ಗ್ರಂಥಿ. ಮೂರನೆಯ ವರ್ಗ ದಲ್ಲಿ ಸಂಯುಕ್ತ ಅಂಗಗಳನ್ನು (ಒಂದಕ್ಕಿಂತ ಹೆಚ್ಚು ಅಂಗಗಳನ್ನು) ಬದಲಿ ಜೋಡಿಸುವು ದುಂಟು- ಕೈ ಅಥವಾ ಬಾಹು, ಮುಖ, ಶಿಶ್ನ, ಧ್ವನಿಪೆಟ್ಟಿಗೆ ಹಾಗೂ ವಾಯುನಾಳ (ಟ್ರೇಕಿಯ). ನಾಲ್ಕನೆಯ ವರ್ಗದಲ್ಲಿ ಇಡೀ ಅಂಗವನ್ನು ಬದಲಿಜೋಡಿಸುವ ಬದಲು, ಆ ಅಂಗದ ಕೆಲವು ಭಾಗಗಳನ್ನು ಮಾತ್ರ ಕಸಿಯಲ್ಲಿ ಬಳಸುವುದುಂಟು.
ಕಣ್ಣಿನ ಕಾರ್ನಿಯ, ಚರ್ಮ, ಹೃದಯ ಕವಾಟ, ಅಸ್ಥಿಮಜ್ಜೆ, ಧಮನಿ ಮತ್ತು ಸಿರೆಗಳು. ಮನುಷ್ಯನ ತಲೆಯನ್ನು ಬದಲಿ ಜೋಡಿಸಿದ ದಿನ, ಅವನು ಭಗವಂತನೇ ಆಗಿ ಬಿಡುತ್ತಾನೆ. ಆದರೆ ಆ ದಿನ ಸದ್ಯಕ್ಕೆ ಕಾಣುತ್ತಿಲ್ಲ.
ಮನುಷ್ಯನ ದೇಹದ ಮೊತ್ತ ಮೊದಲ ಯಶಸ್ವಿ ಕಸಿಯೆಂದರೆ ಕಣ್ಣಿನ ಪಾರಪಟಲ ಇಲ್ಲವೇ ಕಾರ್ನಿಯ ಕಸಿ. ಈ ಪ್ರಯೋಗವು ಮೊದಲ ಬಾರಿಗೆ 1905ರಲ್ಲಿ ಯಶಸ್ವಿಯಾಯಿತು. ಆದರೆ ಇತರ ಅಂಗಗಳ ಬದಲಿ ಜೋಡಣೆ ಯಶಸ್ವಿಯಾಗಲಿಲ್ಲ. ಹಾಗೆಂದು ವಿಜ್ಞಾನಿಗಳು ತಮ್ಮ ಪ್ರಯತ್ನವನ್ನು ಬಿಡಲಿಲ್ಲ.
ಇದನ್ನೂ ಓದಿ: Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !
ವೈದ್ಯರು, ಸಂಶೋಧಕರು ಹಾಗೂ ರೋಗಿಗಳ ನಿರಂತರ ಪ್ರಯತ್ನ ಹಾಗೂ ತ್ಯಾಗದಿಂದ ಮನುಕುಲವು ಎರಡು ಮಹಾನ್ ಬದಲಿ ಅಂಗಜೋಡಣೆಯ ಯಶಸ್ಸನ್ನು ಕಂಡಿತು. ಮೊದಲನೆಯದು 1954ರಲ್ಲಿ ಯಶಸ್ವಿಯಾದ ಮೂತ್ರಪಿಂಡ ಬದಲಿಜೋಡಣೆ ಹಾಗೂ 1967ರಲ್ಲಿ ಯಶಸ್ವಿಯಾದ ಹೃದಯ ಬದಲಿ ಜೋಡಣೆಯ ಶಸ್ತ್ರಚಿಕಿತ್ಸೆ. ಈ ಯಶಸ್ಸಿನ ಗಾಥೆ ರಾಜ ಮಾರ್ಗವಾಗಿರಲಿಲ್ಲ. ವಿಜ್ಞಾನಿಗಳು ಹಲವು ಪ್ರಮುಖ ಅಡ್ಡಿ ಆತಂಕಗಳನ್ನು ಎದುರಿಸಬೇಕಾಯಿತು.
ಇವೆಲ್ಲವನ್ನು ಸಮರ್ಥವಾಗಿ ಎದುರಿಸಿದರು ವಿಜ್ಞಾನಿಗಳು. ಇಂದು ಜಗತ್ತಿನಲ್ಲಿ ಪ್ರತಿವರ್ಷ ಸುಮಾರು 150000 ಯಶಸ್ವಿ ಬದಲಿ ಹೃದಯ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ ಎಂದರೆ ಈ ಯಶಸ್ಸಿನ ಶಿಖರವನ್ನು ಕಲ್ಪಿಸಿಕೊಳ್ಳಬಹುದು. ವಿಜ್ಞಾನಿಗಳು ಎದುರಿಸಿದ ಮುಖ್ಯವಾದ ಕೆಲವು ಅಡೆತಡೆಗಳನ್ನು ಹಾಗೂ ಅವುಗಳನ್ನು ವಿಜ್ಞಾನಿಗಳು ಹೇಗೆ ಎದುರಿಸಿದರು ಎನ್ನುವುದನ್ನು ಸ್ಥೂಲವಾಗಿ ಗಮನಿಸೋಣ.
ಎಂಬ್ರಾಯ್ಡರಿ: ವಿಜ್ಞಾನಿಗಳು ಎದುರಿಸಿದ ಮೊದಲ ಸಮಸ್ಯೆ ಎಂದರೆ, ದಾನಿಯ ಹೃದಯ ವನ್ನು ಗ್ರಾಹಿಗೆ ಜೋಡಿಸಬೇಕಾದರೆ, ರಕ್ತನಾಳಗಳನ್ನು ನಿಖರವಾಗಿ ಜೋಡಿಸುವುದು. ಕ್ರಿ. ಶ.1900ರ ಅವಧಿಯಲ್ಲಿ ಒಂದು ರಕ್ತನಾಳವನ್ನು ಮತ್ತೊಂದು ರಕ್ತನಾಳಕ್ಕೆ ಹೇಗೆ ಹೊಲಿಯ ಬೇಕೆಂದು ಶಸ್ತ್ರವೈದ್ಯರಿಗೆ ತಿಳಿದಿರಲಿಲ್ಲ. ಅವರು ಹಲವು ರೀತಿಯಲ್ಲಿ ಹೊಲಿಗೆ ಹಾಕಿದರೂ, ರಕ್ತನಾಳಗಳ ಒಳಗೆ ರಕ್ತವು ಗರಣೆಕಟ್ಟಿಕೊಂಡು ರಕ್ತ ಸಂಚಾರವು ಸ್ಥಗಿತ ವಾಗುತ್ತಿತ್ತು.
ಮಾಡಿದ ಎಲ್ಲ ಪ್ರಯತ್ನಗಳು ನಿರರ್ಥಕವಾಗುತ್ತಿದ್ದವು. ಅಲೆಕ್ಸಿಸ್ ಕ್ಯಾರೆಲ್ (1873-1944) ಎಂಬ ಫ್ರೆಂಚ್ ಶಸ್ತ್ರವೈದ್ಯನಿದ್ದ. ಇವನು ಸಹ ರಕ್ತನಾಳಗಳನ್ನು ಹೇಗೆ ಹೊಲಿಯಬೇಕು ಎಂದು ಯೋಚಿಸುತ್ತಿದ್ದ. ಒಂದು ದಿನ ಅವನು ತನ್ನ ಅಮ್ಮ ಹಾಕುತ್ತಿದ್ದ ಕಸೂತಿಯನ್ನು ಗಮನಿಸಿದ. ಕೂಡಲೇ ಆ ಕಸೂತಿಯನ್ನು ಅಮ್ಮನಿಂದ ಪೂರ್ಣ ಹೇಳಿಸಿಕೊಂಡ.
ತಾನೂ ಕಸೂತಿಯನ್ನು ಹಾಕಿ ತೋರಿಸಿದ. ಅಮ್ಮನಿಂದ ಶಹಭಾಶ್‌ಗಿರಿ ಪಡೆದ. ಅಮ್ಮ ನಿಂದ ಕಲಿತ ತಂತ್ರವನ್ನೇ ಉಪಯೋಗಿಸಿಕೊಂಡು ಎರಡು ರಕ್ತನಾಳಗಳನ್ನು ಹೊಲಿದ. ಎರಡು ರಕ್ತನಾಳಗಳು ಆರೋಗ್ಯವಾಗಿದ್ದವು. ರಕ್ತವು ಹರಿಯುತ್ತಿತ್ತು, ಗರಣೆ ಕಟ್ಟಲಿಲ್ಲ.
ಇದನ್ನು ‘ಟ್ರಯಾಂಗ್ಯುಲೇಶನ್ ಸ್ಯೂಚರಿಂಗ್ ಮೆಥಡ್’ ಎಂದು ಕರೆಯುತ್ತಾರೆ. ಇವನನ್ನು ಬದಲಿ ಜೋಡಣಾ ಶಸ್ತ್ರಚಿಕಿತ್ಸೆಯ ಪಿತಾಮಹ (ಫಾದರ್ ಆಫ್ ಟ್ರಾನ್ಸ್‌ಪ್ಲಾಂಟೇಶನ್ ಸರ್ಜರಿ) ಎಂದು ಕರೆದರು. ಅಲೆಕ್ಸಿಸ್ ಕ್ಯಾರೆಲ್ ಅಮ್ಮನಿಂದ ಕಲಿತು ರೂಪಿಸಿದ ಈ ಹೊಲಿಗೆಯ ತಂತ್ರಜ್ಞಾನಕ್ಕಾಗಿ 1912ರ ನೊಬೆಲ್ ಪಾರಿತೋಷಕವನ್ನು ಪಡೆದ. ಇಂದು ನಡೆಯುತ್ತಿರುವ ಎಲ್ಲ ರೀತಿಯ ಬದಲಿ ಜೋಡಣಾ ಶಸ್ತ್ರಚಿಕಿತ್ಸೆಗಳು ಯಶಸ್ವಿ ಯಾಗುತ್ತಿರುವುದಕ್ಕೆ ಕಾರಣ ಕ್ಯಾರೆಲ್ ರೂಪಿಸಿದ ಹೊಲಿಗೆಯ ವಿಧಾನ.
ಮಿಲಿಟರಿ ಪಡೆ: ರಕ್ತನಾಳಗಳನ್ನು ಬದಲಿಜೋಡಿಸುವ ಯಶಸ್ವಿ ತಂತ್ರವನ್ನು ರೂಪಿಸಿದ ಮಾತ್ರಕ್ಕೆ ಬದಲಿ ಜೋಡಣಾ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಲಿಲ್ಲ. ವಿಜ್ಞಾನಿಗಳು ಮತ್ತೊಂದು ಸಮಸ್ಯೆಯನ್ನು ಎದುರಿಸಿದರು. ಅದುವೇ ಮಾನವ ದೇಹದ ಮಿಲಿಟರಿ ಪಡೆಯ ರೋಧಕತ್ವ. ನಮ್ಮ ದೇಶವನ್ನು ರಕ್ಷಿಸಲು ಒಂದು ಸೈನ್ಯವಿರುವಂತೆ, ನಮ್ಮ ದೇಹವನ್ನು ರಕ್ಷಿಸಲೂ ಒಂದು ಸೇನೆಯಿರುತ್ತದೆ. ಅದುವೇ ಪ್ರಧಾನವಾಗಿ ಬಿಳಿಯ ರಕ್ತಕಣ ಗಳಿಂದ ಆಗಿರುವ ರೋಗರಕ್ಷಣಾ ವ್ಯವಸ್ಥೆ ಅಥವಾ ಇಮ್ಯೂನ್ ಸಿಸ್ಟಮ್.
ನಮ್ಮ ದೇಶದ ಪ್ರತಿಯೊಬ್ಬರಿಗೂ ಅವರ ಗುರುತು-ಪರಿಚಯವನ್ನು ತಿಳಿಸುವ ಒಂದು ಆಧಾರ್ ಕಾರ್ಡ್ ಇರುವ ಹಾಗೆ, ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಅದರ ಗುರುತು ಪರಿಚಯವನ್ನು ತಿಳಿಸುವ ಒಂದು ‘ಆಧಾರ್ ಕಾರ್ಡ್’ ಇರುತ್ತದೆ.
ಅದುವೇ ಎಚ್‌ಎಲ್‌ಎ ವ್ಯವಸ್ಥೆ (ಹ್ಯೂಮನ್ ಲ್ಯೂಕೋಸೈಟ್ ಆಂಟಿಜೆನ್ ಸಿಸ್ಟಮ್). ಬಿಳಿಯ ರಕ್ತಕಣಗಳಲ್ಲಿ ಕೆಲವು ಸದಾ ದೇಹಾದ್ಯಂತ ಗಸ್ತು ಹೊಡೆಯುತ್ತಿರುತ್ತವೆ. ದಾರಿ ಯಲ್ಲಿ ಸಿಕ್ಕ ಎಲ್ಲ ಜೀವಕೋಶ/ಕಣ/ರಾಸಾಯನಿಕಗಳು ಆಧಾರ್ ಕಾರ್ಡನ್ನು ಪರೀಕ್ಷಿಸು ತ್ತವೆ. ಆಧಾರ್ ಸರಿಯಾಗಿದ್ದರೆ ಮುಂದೆ ಹೋಗಲು ಬಿಡುತ್ತವೆ.
ತಪ್ಪಾಗಿದ್ದರೆ ಆ ಅಗಂತುಕನನ್ನು ಶತ್ರುವೆಂದು ಪರಿಗಣಿಸಿ, ಅಲ್ಲಿಯೇ ಅದನ್ನು ನಿರ್ನಾಮ ಮಾಡುತ್ತವೆ. ಒಂದು ಅಂಗವನ್ನು ಬದಲಿ ಜೋಡಿಸಿದಾಗ, ಅವನ ಅಂಗದಲ್ಲಿರುವ ಜೀವ ಕೋಶಗಳ ಆಧಾರ್ ಕಾರ್ಡ್ ಭಿನ್ನವಾಗಿರುತ್ತದೆ. ಹಾಗಾಗಿ ಬಿಳಿಯ ರಕ್ತಗಳ ದಂಡು ನೋಡ ನೋಡುತ್ತಿರುವಂತೆ ಬದಲಿ ಅಂಗವನ್ನು ನಾಶಪಡಿಸುತ್ತವೆ. ಇದನ್ನು ಕಸಿ ತಿರಸ್ಕಾರ (ಗ್ರಾಫ್ ರಿಜೆಕ್ಷನ್) ಎನ್ನುತ್ತಾರೆ.
1933ರಲ್ಲಿ ಸೋವಿಯತ್ ದೇಶದ ಯುಯು ವೋರೋನೋಯ್ (1895-1961) ಎಂಬ ಶಸ್ತ್ರವೈದ್ಯನು ಜಗತ್ತಿನ ಮೊದಲ ಮೂತ್ರಪಿಂಡ ಬದಲಿ ಜೋಡಣೆಯ ಶಸ್ತ್ರಚಿಕಿತ್ಸೆಯ ನ್ನು ನಡೆಸಿದ. ಮೃತ ದೇಹದಿಂದ ಮೂತ್ರಪಿಂಡವನ್ನು ಛೇದಿಸಿದ. ಪಾದರಸ ವಿಷದಿಂದ ನರಳುತ್ತಿದ್ದ ಓರ್ವ ಮಹಿಳೆಗೆ ಈ ಮೂತ್ರಪಿಂಡವನ್ನು ಯಶಸ್ವಿಯಾಗಿ ಬದಲಿ ಜೋಡಿಸಿದ. ಅವನು ನೋಡನೋಡುತ್ತಿರುವಂತೆಯೇ ಆಕೆಯ ದೇಹದ ಮಿಲಿಟರಿ ಪಡೆಯು ಬದಲಿ ಜೋಡಿಸಿದ ಮೂತ್ರಪಿಂಡದ ಮೇಲೆ ಆಕ್ರಮಣವನ್ನು ಮಾಡಿತು. ಬದಲಿ ಜೋಡಿಸಿದ ಮೂತ್ರಪಿಂಡ ಕಪ್ಪಾಯಿತು. ಒಡಲಿನಿಂದ ಪ್ರತ್ಯೇಕವಾಯಿತು.
ಪ್ರತಿಯೊಂದು ನಿಯಮಕ್ಕೂ ಒಂದು ವಿನಾಯತಿ ಇರುತ್ತದೆಯಂತೆ. ಎಷ್ಟೇ ಸಮಗ್ರವಾಗಿ ರೂಪಿಸಿದ ಯೋಜನೆಯಲ್ಲೂ ಎಲ್ಲೋ ಒಂದು ಕಡೆ ಒಂದು ಲೋಪವಿರುತ್ತದೆಯಂತೆ. ಮಿಲಿಟರಿ ಪಡೆಯ ಕಾರ್ಯಕ್ಷಮತೆಯಲ್ಲೂ ಒಂದು ಲೋಪವಿತ್ತು. ಈ ಲೋಪವನ್ನು ಗಮನಿಸಿದ ಅಮೆರಿಕದ ಬಾಸ್ಟನ್ನಿನ ಪೀಟರ್ ಬ್ರೆಂಟ್ ಬ್ರಿಘಾಮ್ ಆಸ್ಪತ್ರೆಯ (ಬ್ರಿಘಾಮ್ ಮತ್ತು ಮಹಿಳೆಯರ ಆಸ್ಪತ್ರೆ) ಡಾ.ಜೋಸೆಫ್ ಮುರ್ರೆ (1919-2012) ಎಂಬ ಶಸ್ತ್ರವೈದ್ಯನು ಮೂತ್ರಪಿಂಡ ವೈಫಲ್ಯದ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದ. ಅವನಿಗೆ ಮಿಲಿಟರಿ ಪಡೆಯ ಕಾರ್ಯಸಾಮರ್ಥ್ಯದ ಪರಿಚಯವು ಚೆನ್ನಾಗಿಯೇ ಇತ್ತು.
1954. ೨೩ ವರ್ಷದ ರಿಚರ್ಡ್ ಹೆರ್ರಿಕ್. ತೀವ್ರಸ್ವರೂಪದ ಮೂತ್ರಪಿಂಡ ಉರಿಯೂತದ ಕಾರಣ ಸಾವಿನಂಚಿಗೆ ಬಂದಿದ್ದ. ಇವನಿಗೆ ಒಬ್ಬ ಅವಳಿ ಸೋದರ. ರೊನಾಲ್ಡ್ ಹೆರ್ರಿಕ್. ಅವನು ತನ್ನ ಮೂತ್ರಪಿಂಡವೊಂದನ್ನು ದಾನವಾಗಿ ನೀಡಲು ಒಪ್ಪಿದ. ಇವರಿಬ್ಬರೂ ಅವಳಿ ಮಕ್ಕಳು. ಅವರ ಡಿಎನ್‌ಎ ಸ್ವರೂಪವು ಏಕರೂಪವಾಗಿತ್ತು.
ಹಾಗಾಗಿ ಅವರಿಬ್ಬರ ದೇಹದ ಅಂಗಾಂಗಗಳ ಆಧಾರ್ ಕಾರ್ಡ್ ಏಕರೂಪವಾಗಿತ್ತು. ಹಾಗಾಗಿ ರೊನಾಲ್ಡ್ ನೀಡುವ ಮೂತ್ರಪಿಂಡವನ್ನು ಪರಕೀಯ ಎಂದು ಭಾವಿಸಿ, ಅದನ್ನು ನಾಶಮಾಡುವ ಪ್ರಯತ್ನವನ್ನು ರಿಚರ್ಡ್ ಮಿಲಿಟರಿ ಪಡೆಯು ಮಾಡುವುದಿಲ್ಲ ಎನ್ನುವ ಸತ್ಯವು ಮುರ್ರೆಯವರಿಗೆ ತಿಳಿದಿತ್ತು.
ಹಾಗಾಗಿ ಬದಲಿ ಜೋಡಣೆಯನ್ನು ನಡೆಸಲು ಸಿದ್ಧರಾದರು. ಆಗ ಅನಿರೀಕ್ಷಿತ ಅವಘಡ ಎದುರಾಯಿತು. ಅಮೆರಿಕದ ಜನರು ಹಲವು ನೈತಿಕ ಪ್ರಶ್ನೆಗಳನ್ನು ಎತ್ತಿದರು. ಕೆಲವು ಕ್ರೈಸ್ತರಲ್ಲಿ ಒಬ್ಬ ಅಂಗವನ್ನು ಮತ್ತೊಬ್ಬರಿಗೆ ಬದಲಿ ಜೋಡಿಸುವುದು ನಿಷಿದ್ಧವಿತ್ತು. ಒಬ್ಬ ಮನುಷ್ಯನು ಪೂರ್ಣವಾಗಿ ಸ್ವಸ್ಥನಾಗಿದ್ದಾನೆ.
ಅವನ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸುವುದು ಅನೈತಿಕ. ಅದು ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆ. ಜೀವಾಪಾಯ ಆಗುವ ಸಾಧ್ಯತೆಯಿತ್ತು. ಅಕಸ್ಮಾತ್ ರೊನಾಲ್ಡ್ ಸತ್ತರೆ ಯಾರು ಹೊಣೆ? ಈ ಶಸ್ತ್ರಚಿಕಿತ್ಸೆಯಿಂದ ರಿಚರ್ಡ್‌ಗೆ ಅನುಕೂಲವಾಗಬಹುದು. ಆದರೆ ರೊನಾಲ್ಡ್ ಸಾಯಬಹುದಲ್ಲವೆ!
ಇಂಥ ಶಸ್ತ್ರಚಿಕಿತ್ಸೆಗೆ ಮುಂದಾಗಿರುವ ವೈದ್ಯರ ಗುಂಪನ್ನು ‘ಬಂಚ್ ಆಫ್ ಫಾಲ್ಸ್’, ‘ಗ್ರೇವ್ ರಾಬರ್ಸ್’ ಎಂದೆಲ್ಲ ಜರೆದರು. ಪೊಲೀಸರು ಅವರು ನಿಜಕ್ಕೂ ಅವಳಿ ಸೋದರರು ಎನ್ನುವುದನ್ನು ಖಚಿತಪಡಿಸಲು ಅವರ ಬೆರಳಚ್ಚನ್ನು ಪರೀಕ್ಷಿಸಿ ಖಚಿತಪಡಿಸಿಕೊಂಡರು.
ಡಿಸೆಂಬರ್ 23, 1954. ಮುರ್ರೆಯವರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಮುರ್ರೆಯವರು ಬದಲಿ ಮೂತ್ರಪಿಂಡದ ರಕ್ತನಾಳಕ್ಕೆ ಹಾಕಿದ್ದ ತಡೆಯನ್ನು (ಕ್ಲಾಂಪ್) ತೆಗೆಯುತ್ತಿರುವಂತೆಯೇ ರಕ್ತಪ್ರವಾಹವು ನುಗ್ಗಿತು. ಪೇಲವವಾಗಿದ್ದ ಮೂತ್ರ ಪಿಂಡವು ಕೆಂಪಗಾಯಿತು. ಕೂಡಲೇ ಮೂತ್ರೋತ್ಪಾದನೆಯನ್ನು ಆರಂಭಿಸಿತು.
ನೋಡನೋಡುತ್ತಿರುವಂತೆಯೇ ಬದಲಿ ಜೋಡಣೆಯು ಯಶಸ್ವಿಯಾಗಿತ್ತು. ನಿರೀಕ್ಷಿಸಿದ್ದಂತೆ ಮಿಲಿಟರಿ ಪಡೆಯು ಯಾವುದೇ ರೀತಿಯಲ್ಲಿ ಹೊಸ ಮೂತ್ರಪಿಂಡವನ್ನು ತಿರಸ್ಕರಿಸಲಿಲ್ಲ. ರಿಚರ್ಡ್ ೮ ವರ್ಷಗಳು ಬದುಕಿದ್ದ. ತನಗೆ ಚಿಕಿತ್ಸೆಯನ್ನು ನೀಡುತ್ತಿದ್ದ ನರ್ಸ್ ಓರ್ವಳನ್ನು ಮದುವೆಯಾದ. ಎರಡು ಮಕ್ಕಳನ್ನು ಪಡೆದ.
ರೊನಾಲ್ಡ್, 79 ವರ್ಷಗಳ ಕಾಲ ಬದುಕಿದ್ದು 2010ರಲ್ಲಿ ತೀರಿಕೊಂಡ. ಜೋಸೆಫ್ ಮುರ್ರೆ ಅವರಿಗೆ ನೊಬೆಲ್ ಪಾರಿತೊಷಕವು ದೊರೆಯಿತು. ಮಿಲಿಟರಿ ಪಡೆಯನ್ನು ನಿಗ್ರಹಿಸುವ ಕಲೆಯನ್ನು ರೂಢಿಸಿಕೊಂಡರೆ, ಅಂಗಗಳ ಬದಲಿಜೋಡಣೆ ಕಷ್ಟವಲ್ಲ ಎಂದು ವಿಜ್ಞಾನಿ ಗಳಿಗೆ ಮನವರಿಕೆಯಾಯಿತು.
ಮೂತ್ರಪಿಂಡ ಬದಲಿಜೋಡಣೆಯು ವೈದ್ಯಕೀಯ ಲೋಕದಲ್ಲಿ ರೋಮಾಂಚನವನ್ನು ಉಂಟುಮಾಡಿದರೆ, ಹೃದಯದ ಬದಲಿ ಜೋಡಣೆಯು ಕೇವಲ ವೈದ್ಯಕೀಯ ರಂಗದಲ್ಲಿ ಮಾತ್ರವಲ್ಲ, ಇಡೀ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನುಂಟು ಮಾಡಿತು. ಮಾನವ ಜನಾಂಗದಲ್ಲಿ ಹೃದಯಕ್ಕೆ ಮಹತ್ತರವಾದ ಸ್ಥಾನವಿದೆ.
ಹೃದಯವು ಭಗವಂತನ ಆವಾಸಸ್ಥಾನ, ಭಾವನೆಗಳ ಆಗರ. ಮಾನವ ಸಂಬಂಧಗಳಿಗೆ ಮಿಡುಕುವ ಅಂಗ. ಅಂದಿನ ದಿನಗಳಲ್ಲಿ ಹೃದಯವು ಮಿಡಿಯುವುದನ್ನು ನಿಲ್ಲಿಸಿದರೆ, ಅವನು ಸತ್ತ ಎಂದೇ ಪರಿಗಣಿಸುತ್ತಿದ್ದರು. ಇಂಥ ಪವಿತ್ರವಾದ ಅಂಗವನ್ನು ಮತ್ತೊಬ್ಬರಿಗೆ ಬದಲಿ ಜೋಡಿಸುವುದು ಅಪವಿತ್ರ, ಅಧಾರ್ಮಿಕ ಹಾಗೂ ಅನೈತಿಕ ಕಾರ್ಯ ಎಂದು ಸಮಾಜವು ಪ್ರತಿಭಟಿಸಿತು.
1960ರ ದಶಕ. ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಡಾ. ನಾರ್ಮನ್ ಶುಮ್ವೇ (1923-2006) ಹೃದಯಗಳನ್ನು ಬದಲಿ ಜೋಡಿಸುವ ಪ್ರಯೋಗಗಳನ್ನು ನಾಯಿಗಳ ಮೇಲೆ ನಡೆಸುತ್ತಿದ್ದರು. ಒಂದು ನಾಯಿಯ ಹೃದಯವನ್ನು ಎಲ್ಲಿ ಹಾಗೂ ಹೇಗೆ ಕತ್ತರಿಸಬೇಕು ಹಾಗೂ ಅದನ್ನು ಇನ್ನೊಂದು ನಾಯಿಗೆ ಹೇಗೆ ಬದಲಿ ಜೋಡಿಸಬೇಕು ಎನ್ನುವ ತಂತ್ರ ವನ್ನು ಕರಗತಗೊಳಿಸುತ್ತಿದ್ದರು. ಆದರೆ ಅನಿರೀಕ್ಷಿತವಾಗಿ ದಕ್ಷಿಣ ಆಫ್ರಿಕದ ಡಾ. ಕ್ರಿಶ್ಚಿಯನ್ ಬರ್ನಾರ್ಡ್ ಎನ್ನುವವನು ಜಗತ್ತಿನ ಮೊದಲ ಹೃದಯ ಬದಲಿಜೋಡಣೆಯ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ಮಾಡಿದ ಎನ್ನುವ ಸುದ್ದಿಯು ಇಡೀ ಜಗತ್ತನ್ನು ಅಲುಗಾಡಿಸಿತು.
ಮನುಷ್ಯನು ‘ದೇವರೇ’ ಆಗಿಬಿಟ್ಟನೇ ಎಂದು ಕೆಲವರು ಹುಯಿಲಿಟ್ಟರು. ಕ್ರಿಶ್ಚಿಯನ್ ಬರ್ನಾರ್ಡ್ (1922-2001) ಅಮೆರಿಕದಲ್ಲಿ ಕಲಿತು ದಕ್ಷಿಣ ಆಫ್ರಿಕದಲ್ಲಿ ನೆಲೆಸಿದ್ದ. ಲೂಯಿಸ್ ವಾಷ್ಕಾನ್‌ಸ್ಕಿ (1912-1967) ಎಂಬ ೫೩ ವರ್ಷದ ಕಿರಾಣಿ ವ್ಯಾಪಾರಿ, ಧೂಮ ಪಾನಿ ಹಾಗೂ ಜೂಜುಕೋರ. ಇವನು ತನ್ನ ದೇಹದಲ್ಲಿರುವ ವಿವಿಧ ದ್ರವಗಳಲ್ಲಿ ‘ಮುಳುಗಿ’ ಸಾಯುವ ಸ್ಥಿತಿಯನ್ನು ತಂದುಕೊಂಡಿದ್ದ.
ಡೆನಿಸ್ ಡರ್ವಾಲ್ ೨೮ ವರ್ಷದ ಯುವತಿ. ಕೇಕ್ ಕೊಳ್ಳಲು ರಸ್ತೆಯನ್ನು ದಾಟುವಾಗ ಕಾರ್ ಡಿಕ್ಕಿ ಹೊಡೆಯಿತು. ಆಕೆಯ ಮಿದುಳಿಗೆ ತೀವ್ರ ಪೆಟ್ಟಾದ ಕಾರಣ ಮಿದುಳು ಮೃತವಾಯಿತು. ಆದರೆ ಹೃದಯವಿನ್ನೂ ಮಿಡಿಯುತ್ತಿತ್ತು. ಡಿಸೆಂಬರ್ ೭, 1967. ದಕ್ಷಿಣ ಆಫ್ರಿಕದ ಗ್ರೂಟ್ ಶುರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯು ಆರಂಭವಾಯಿತು. ಆದರೆ ಕಾನೂನು ಮೂಗು ತೂರಿಸಿತು. ಅಂದಿನ ದಿನಗಳಲ್ಲಿ ಹೃದಯವು ನಿಂತರೆ ಮಾತ್ರ, ಸಾವು ಸಂಭವಿಸಿದೆ ಎಂದು ಜನರು ಮಾತ್ರವಲ್ಲ ಕಾನೂನು ಸಹ ನಂಬಿತ್ತು. ಹಾಗಾಗಿ ಬರ್ನಾರ್ಡ್, ವೆಂಟಿಲೇಟರನ್ನು ಸ್ಥಗಿತಗೊಳಿಸಿದರು.
ನೋಡನೋಡುತ್ತಿರುವಂತೆಯೇ ಡರ್ವಾಲಳ ಹೃದಯವು ಮಿಡಿಯುವುದನ್ನು ನಿಲ್ಲಿಸಿತು. ತಕ್ಷಣವೇ ಹೃದಯವನ್ನು ಛೇದಿಸಿದ. ಕೂಡಲೇ ಅದನ್ನು ‘ಆಕ್ಸಿಜನ್ ಚೇಂಬರ್’ನ ಒಳಗಿಟ್ಟ. ಹೃದಯವು ಚೇತರಿಸಿಕೊಂಡಿತು. ನಂತರ ಅದನ್ನು ವಾಷ್ಕಾನ್‌ಸ್ಕಿಯ ಎದೆಗೂಡಿನಲ್ಲಿಟ್ಟು ಬದಲಿಜೋಡಣೆಯನ್ನು ಪೂರ್ಣಗೊಳಿಸಿದ. ವಾಷ್ಕಾನ್‌ಸ್ಕಿ, ೧೮ ದಿನಗಳ ಕಾಲ ಬದುಕಿದ್ದ. ನಂತರ ಸತ್ತ.
ಅವನ ಸಾವಿಗೆ ಕಸಿ ತಿರಸ್ಕಾರ ಕಾರಣವಾಗಿರಲಿಲ್ಲ. ಮಿಲಿಟರಿ ಪಡೆಯನ್ನು ಸಂಪೂರ್ಣ ವಾಗಿ ನಿಗ್ರಹಿಸಬಲ್ಲ ಔಷಧಗಳನ್ನು ನೀಡಿದರು. ಈ ಔಷಧಗಳು ಬಿಳಿಯ ರಕ್ತಕಣಗಳ ಕಸಿ ತಿರಸ್ಕಾರ ಸಾಮರ್ಥ್ಯವನ್ನು ಕುಗ್ಗಿಸಿದ್ದವು. ಜತೆಯಲ್ಲಿ ಅವನ ಶ್ವಾಸಕೋಶಗಳಲ್ಲಿ ಬೆಳೆಯು ತ್ತಿದ್ದ ಅಪಾಯಕಾರಿ ಬ್ಯಾಕ್ಟೀರಿಯಗಳನ್ನು ನಿಗ್ರಹಿಸಲೂ ವಿಫಲವಾದವು. ಹಾಗಾಗಿ ಬ್ಯಾಕ್ಟೀರಿಯಗಳ ಮೇಲುಗೈಯಾಗಿ, ನ್ಯುಮೋನಿಯ ಉಂಟಾಗಿ ವಾಷ್ಕಾನ್‌ಸ್ಕಿ ಮರಣಿಸಿದ.