ವಿಶ್ವರಂಗ
ಇನ್ನೊಂದು ಸಂಕ್ರಾಂತಿ ಹಬ್ಬವನ್ನು ಕೂಡ ಮುಗಿಸಿ ಮತ್ತೆ ಅದೇ ನಿತ್ಯದ ಬದುಕಿಗೆ ಹೊಂದಿಕೊಳ್ಳು ತ್ತಿದ್ದೇವೆ. ಇವತ್ತಿಗೆ ಹಬ್ಬಗಳು ಎಂದರೆ, ‘ಹಿರಿಯರು ಆಚರಿಸಿಕೊಂಡು ಬಂದ ಕಾರಣ ಅದನ್ನು ನಡೆಸಿಕೊಂಡು ಹೋಗಬೇಕು’ ಎನ್ನುವಂತಾಗಿದೆ. ಈ ಮಾತನ್ನು ಒಪ್ಪುವುದು, ಬಿಡುವುದು ನಿಮಗೆ ಬಿಟ್ಟಿದ್ದು. ಏಕೆಂದರೆ ಇವತ್ತಿನ ದಿನದಲ್ಲೂ ಹಿಂದಿನ ದಿನಗಳಲ್ಲಿದ್ದ ಸಡಗರವನ್ನು ಸಂಭ್ರಮಿಸುವ ಒಂದಷ್ಟು ಜನ ಇರಬಹುದು!
ಆದರೆ ಬಾಲ್ಯದಲ್ಲಿ ಹಬ್ಬ ಎಂದರೆ ಅದೆಂಥದೋ ಸಡಗರ. ಸಂಕ್ರಾಂತಿ ಹಬ್ಬವು ಹೆಣ್ಣು ಮಕ್ಕಳಿಗೆ ಸೇರಿದ್ದು ಎನ್ನುವ ಒಂದು ಮಾತಿದೆ. ಎಳ್ಳು-ಬೆಲ್ಲ ಬೀರಲು ಶೃಂಗಾರ ಮಾಡಿಕೊಂಡು ಸಡಗರದಿಂದ ಓಡಾಡುತ್ತಾರೆ, ಜರತಾರಿ ಸೀರೆ ಉಡುತ್ತಾರೆ. ಒಟ್ಟಿನಲ್ಲಿ ಹಬ್ಬಕ್ಕೆ ಒಂದು ಸಂತೋಷ, ಸಡಗರದ ಫೀಲ್ ಕೊಡುತ್ತಾರೆ. ಆದರೇನು ಮಾಡುವುದು ನಮ್ಮ ಮನೆಯಲ್ಲಿ ನಾವು ಮೂವರು ಹುಡುಗರು.
ಹೌದು, ಹೆಣ್ಣು ಮಕ್ಕಳಂತೆ ಸಡಗರ-ಸಂಭ್ರಮಕ್ಕೆ ಹುಡುಗರು ಎಂದಿಗೂ ಸಾಟಿಯಾಗಲಾರರು. ಹಾಗೆಂದು ಸಂಕ್ರಾಂತಿ ಮಜಾ ಎಂದೂ ನಮ್ಮ ಮನೆಯಲ್ಲಿ ಕಡಿಮೆಯಾಗಿರಲಿಲ್ಲ.
ಅಲ್ಲ ಕಣ್ರೀ, ಎಳ್ಳು-ಬೆಲ್ಲ ಮುಕ್ಕಲು ಅದ್ಯಾವ ಲಿಂಗಭೇದ ಅಲ್ಲವೇ? ಜತೆಗೆ ಗೆಣಸು, ಉಪ್ಪು ಹಾಕಿ ಬೇಯಿಸಿದ ಕಡಲೇಕಾಯಿ, ಅವರೇಕಾಳು, ಸಕ್ಕರೆ ಅಚ್ಚನ್ನು ಸವಿಯುವ ಸಂಭ್ರಮ. ಎಲ್ಲಕ್ಕೂ ಮಿಗಿಲಾಗಿ ಹುಡುಗರ ಗುಂಪು ಸೇರಿ, ಕಪ್ಪಗೆ ದಪ್ಪಗಿದ್ದು ಹಲ್ಲು ಮತ್ತು ವಸಡುಗಳಿಗೆ ಚಾಲೆಂಜ್ ಹಾಕುತ್ತಿದ್ದ ಕಬ್ಬನ್ನ ದವಡೆಯಲ್ಲಿ ಸಿಗಿದು, ಅಗಿದು, ಜಗಿದು ರಸ ಕುಡಿಯಲು ಸ್ಪರ್ಧೆ ಏರ್ಪಡು ತ್ತಿತ್ತು.
ಇದನ್ನೂ ಓದಿ: Rangaswamy Mookanahalli Column: ಇರಾನಿನಲ್ಲಿ ಏನಾಗುತ್ತಿದೆ ? ಏಕಾಗುತ್ತಿದೆ ?
ಒಂದು ಜಯನ್ನ ಯಾರು ಬೇಗ ತಿಂದು ಮುಗಿಸುತ್ತಾರೆ ಎನ್ನುವುದೇ ಒಂದು ದೊಡ್ಡ ಸ್ಪರ್ಧೆ. ಗೆದ್ದವ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದ್ದ, ಸೋತವರ ಮುಖ ಸಣ್ಣಗಾಗುತ್ತಿತ್ತು. ಪುರೋಹಿತರ ಮಗ ಚಂದ್ರಮೌಳಿ ಹುಟ್ಟಾ ಮಾತುಗಾರ, ಆದರೆ ಯಾವ ಸ್ಪರ್ಧೆಯಲ್ಲೂ ಗೆಲ್ಲುತ್ತಿರಲಿಲ್ಲ.
ಬಟ್, ಅವನ ಸ್ಪಿರಿಟ್ ಇಂದಿಗೂ ಕಣ್ಣ ಮುಂದಿದೆ. “ನೋಡು, ನಾನು ಗೆಲ್ಲಬೇಕು ಅಂತಾನೇ ಇದ್ದೆ, ಆದರೆ ಅವನಿಗೆ (ಗೆದ್ದವನನ್ನು ತೋರಿಸುತ್ತ) ಅಂತ ಬಿಟ್ಟುಕೊಟ್ಟೆ" ಎಂದು ದೇಶಾವರಿ ನಗೆ ಬೀರುತ್ತಿದ್ದ. ಸೋತ ಬೇಸರವನ್ನ ಅವನ ಮುಖದಲ್ಲಿ ಎಂದೂ ಕಾಣಲಿಲ್ಲ. ಬಹಳ ಜೋವಿಯಲ್ ಮನುಷ್ಯ. ಅವರಪ್ಪ ಮಾತ್ರ ಅಷ್ಟೇ ಸಿಡುಕರಾಗಿದ್ದರು.
ಒಮ್ಮೆ ಚಂದ್ರಮೌಳಿ “ನಾನು ನಿನ್ನೆ ಕೋಲಾರ ಗೋಲ್ಸ್ ಫೀಲ್ಡ್ʼಗೆ ಹೋಗಿ ಒಂದೈದು ಕೆಜಿ ಚಿನ್ನ ತರೋಣ ಅಂತಿದ್ದೆ, ಆದರೇನು ಮಾಡುವುದು ಈ ನಮ್ಮಪ್ಪ ಬಿಡುತ್ತಿಲ್ಲ" ಎಂದ. ಅ ಇದ್ದ ಅವರಪ್ಪ ವಿಶ್ವನಾಥಪ್ಪ ಚಂದ್ರಮೌಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಬಡತನದ ಜೀವನ, ಅಂದು ಆತನಿಗೇನು ವ್ಯಥೆಯಿತ್ತೋ? ಬಲ್ಲವರಾರು? ಆದರೆ ಅಂದಿಗೆ ಆತ ನನ್ನ ಕಣ್ಣಿಗೆ ಬಹಳ ಕೆಟ್ಟವರಾಗಿ ಕಂಡಿದ್ದರು.
ಇವತ್ತಿಗೆ ಮನಸ್ಸು ಆತನ ಸ್ಥಾನದಲ್ಲಿ ಕುಳಿತು ಯೋಚಿಸುತ್ತದೆ, ಆತನಿಗಾಗಿ ಮರುಗುತ್ತದೆ, ಇರಲಿ ಸ್ಪರ್ಧೆಯಲ್ಲಿ ಸರಿಯಾಗಿ ಆಸ್ವಾದಿಸಿ ತಿನ್ನಲು ಆಗುವುದಿಲ್ಲ, ಅನಿದ್ದರೂ ಗೆಲ್ಲುವ ತವಕ. ಹೀಗಾಗಿ ನಾನು ಸ್ಪರ್ಧೆಯಿಂದ ಗಾವುದ ದೂರವಿರುತ್ತಿದ್ದೆ. ಆಮೇಲೆ ನಿಧಾನವಾಗಿ ಕುಳಿತು ಇಡೀ ಜಯನ್ನ ಹಲ್ಲಿನಿಂದ ಸಿಗಿದು, ಅಗಿದು ರಸ ಕುಡಿಯುತ್ತಿದ್ದೆ.
ನನ್ನ ತಮ್ಮನಿಗೆ ಅದು ಆಗುತ್ತಿರಲಿಲ್ಲ, “ರಂಗ ಸಿಪ್ಪೆ ಸುಲಿದು ಕೊಡು" ಎಂದು ಬರುತ್ತಿದ್ದ. ಬಾಲ್ಯ ದಲ್ಲಿ ಅವನು ಸದಾ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಹೀಗಾಗಿ ಅವನ ಮೇಲೆ ಎಲ್ಲರಿಗೂ ವಿಶೇಷ ಅಕ್ಕರೆ. ಅವನನ್ನ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದೆವು.
ಬನ್ನಿ, ಮತ್ತೆ ಹಬ್ಬದ ಬಗ್ಗೆ ಮಾತಾಡೋಣ. ಹಾಗೆ ನೋಡಲು ಹೋದರೆ ಹಬ್ಬಕ್ಕೆ ಒಂದು ವಾರ ಅಥವಾ ಹದಿನೈದು ದಿನ ಮುಂಚೆಯೇ ಸಡಗರ ಶುರುವಾಗುತ್ತಿತ್ತು. ಅದರಲ್ಲೂ ಸಂಕ್ರಾಂತಿಗೆ ಚೂರು ಜಾಸ್ತಿ ಸಿದ್ಧತೆ ಬೇಕಾಗುತ್ತಿತ್ತು. ಸಕ್ಕರೆ ಅಚ್ಚು ಮಾಡುವುದು, ಬೆಲ್ಲವನ್ನ, ಕೊಬ್ಬರಿಯನ್ನ ಸಣ್ಣಗೆ ಹೆಚ್ಚಿಕೊಳ್ಳುವುದು, ಅವುಗಳನ್ನೆ ಮಿಶ್ರಣ ಮಾಡಿ, ಸಣ್ಣ ಪ್ಯಾಕೆಟ್‌ಗಳನ್ನಾಗಿಸಿ ಇಡುವುದು, ಕಬ್ಬನ್ನ ತಂದು ಶೇಖರಿಸುವುದು- ಹೋಹ್ ಅದೆಂಥ ಸಡಗರ. ಹಬ್ಬದ ದಿನವಂತೂ ಮೂವರಿಗೂ ಮೈಗೆ ಎಣ್ಣೆ ಹಚ್ಚಿ ಸ್ವಲ್ಪ ಬಿಸಿಲು ಕಾಯಿಸಲು ನಿಲ್ಲಿಸುತ್ತಿದ್ದರು. ಹುಟ್ಟಬಟ್ಟೆಯಲ್ಲಿ ಹಜಾರದಲ್ಲಿ ಕುಣಿದಾ ಡಿದ್ದೇ ಕುಣಿದಾಡಿದ್ದು!
ಎಣ್ಣೆಯ ಅಂಡನ್ನ ಗೋಡೆಗೆ ಒತ್ತಿ, ಕಳೆದ ವರ್ಷದ ಗುರುತಿನ ಜತೆಗೆ ಹೋಲಿಕೆ ಮಾಡಿ ನಗುತ್ತಿದ್ದೆವು, ಬಾಲ್ಯದಲ್ಲಿ ಎಷ್ಟು ಸಣ್ಣ ವಿಷಯದಿಂದ ಭೂಮ್ಯವನ್ನ ಪಡೆಯುತ್ತಿದ್ದೆವು ಅಲ್ಲವೇ? ಬೇರೆ ಮನೆ ಯಿಂದ ಬಂದ ಪ್ರತಿ ಎಳ್ಳನ್ನೂ ತಿಂದು ರುಚಿ ನೋಡುವ ಕ್ರಿಯೆಯಲ್ಲಿ ಬೈಗುಳ ಕೂಡ ತಿನ್ನುತ್ತಿದ್ದಾ ವು. ಪೂರ್ತಿ ತಿನ್ನದೇ ಉಳಿಸುವುದು ಅಜ್ಜಿಗೆ ಇಷ್ಟವಾಗುತ್ತಿರಲಿಲ್ಲ. ಇವತ್ತಿಗೆ ಈ ಕ್ರಿಯೆಗಳನ್ನೆ ನೆನಪಿಸಿ ಕೊಂಡಾಗ, ನಾವು ನಿಜವಾಗಿಯೂ ಹಬ್ಬ ಮಾಡುತ್ತಿದ್ದೇವೆಯೇ ಎನ್ನಿಸುತ್ತದೆ!
ನಮ್ಮ ಮಕ್ಕಳಿಗೆ ನಮಗೆ ಸಿಕ್ಕ ಅನುಭವದ ನೂರನೇ ಒಂದಂಶ ಕೂಡ ಸಿಗುತ್ತಿಲ್ಲವಲ್ಲ ಎಂದು ಮನಸ್ಸು ರೋದಿಸುತ್ತದೆ. ಸಮಾಜ ಬೆಳೆಯುತ್ತ ಹೋದಂತೆ, ಮಾಯವಾದ ಈ ಪುಟಾಣಿ ಸಂತೋಷ ಗಳಿಗೆ, ಈ ಕ್ರಿಯೆಗೆ ನಾಗರಿಕತೆ, ಅಭಿವೃದ್ಧಿ ಎನ್ನುವ ಹೆಸರು ಬೇರೆ ಇಟ್ಟುಬಿಟ್ಟಿದ್ದೇವೆ.
ತಿನ್ನುವುದು, ತಿನ್ನುವುದು ಮತ್ತು ತಿನ್ನುವುದು ಜತೆಗೆ ಕುಣಿತ, ಆಟ ಮತ್ತು ಆಟ ಅಷ್ಟೇ. ದಿನ ಮುಗಿದು ಹೋಗುತ್ತಿತ್ತು. ನಿನ್ನೆಯ ನೆನಪುಗಳು ಅದೆಷ್ಟು ಮಧುರ. ಅವತ್ತಿಗೆ ಹೇಳಿಕೊಳ್ಳುವ ಯಾವ ಭೌತಿಕ ಒಡೆತನ ಇರಲಿಲ್ಲ, ಆದರೆ ಜಗತ್ತಿನಲ್ಲಿರುವ ಸಕಲ ಖುಷಿ ಕಾಲ ಬಳಿಯೇ ಬಿದ್ದಿರುತ್ತಿತ್ತು. ಇಂದು ಬದಲಾಗಿ ಹೋಗಿದೆ. ಇವತ್ತು ನಮ್ಮನೆ ಆಂತಲ್ಲ, ಬಹುತೇಕ ಮನೆಗಳ ಕಥೆ ಸೇಮ್. ಯಾರೋ ಸಿದ್ಧಪಡಿಸಿದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಕೊಂಡು ತರುತ್ತೇವೆ. ಎಲ್ಲವೂ ಸಿದ್ಧವಾಗಿರು ತ್ತದೆ, ಕೊನೆಗೆ ಮನೆಗೆ ಕಟ್ಟುವ ತೋರಣ ಕೂಡ ರೆಡಿಮೇಡ್ ಸಿಗುತ್ತೆ!
ಅದೇ ಕಣ್ರೀ, ಸದಾ ಹಸಿರಾಗಿರುವ ಪ್ಲಾಸ್ಟಿಕ್ ತೋರಣ! ಇವತ್ತಿಗೆ ಎಲ್ಲಾ ಮನೆಗಳಿಗೂ ಅದೇ ಭೂಷಣವಾಗಿದೆ. ಹೀಗೆ ಕೊಂಡು ತಂದ ಎಳ್ಳನ್ನು ತೋರಿಕೆಗೆ ನಾಲ್ಕು ಮನೆಗೆ ಕೊಟ್ಟು ಬಂದರೆ ಅಲ್ಲಿಗೆ ಹಬ್ಬ ಮುಕ್ತಾಯ. ಅಷ್ಟಕ್ಕೇ ಸಾಯಂಕಾಲಕ್ಕೆ ‘ಉಸ್ಸಪ್ಪ’ ಎನ್ನುವ ಉದ್ಗಾರ ಬೇರೆ.
ಮಾನಸಿಕವಾಗಿ ಹಬ್ಬದ ತಯಾರಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ. ಹತ್ತಾರು ಮನೆಗೆ ಹೋಗಿ ಎಳ್ಳು ಬೀರಲು ದೈಹಿಕ ಕ್ಷಮತೆಯಿಲ್ಲ, ಅದು ಇದ್ದವರಿಗೂ ಟ್ರಾಫಿಕ್ ಎನ್ನುವ ಭೂತಪ್ಪ ಅಡ್ಡಗಾಲು ಹಾಕದೆ ಬಿಡುವುದಿಲ್ಲ. ಮಜಾ ನೋಡಿ- ಹೀಗೆ ನಾವು ಹಬ್ಬಕ್ಕೆ ಎಲ್ಲವನ್ನೂ ಕೊಂಡು ತರಬೇಕು. ಇಲ್ಲದಿದ್ದರೆ ಅದು ಜಿಡಿಪಿ ಲೆಕ್ಕಾಚಾರದಲ್ಲಿ ಬರುವುದಿಲ್ಲ. ಜನರು ಮನೆಯಲ್ಲಿ ತಯಾರಿ ಮಾಡಿಕೊಳ್ಳಲು ಶುರುಮಾಡಿದರೆ, ಸಮಾಜದ ಒಂದು ವರ್ಗದವರು, ‘ಇದನ್ನು ಮಾರುತ್ತಿದವರು ಜೀವನ ನಡೆಸುವುದು ಹೇಗೆ?’ ಎನ್ನುವ ಮಾತುಗಳನ್ನು ಆಡಲು ಶುರುಮಾಡುತ್ತಾರೆ.
ಇವೆಲ್ಲವೂ ನಾವು ಅಭಿವೃದ್ಧಿ ಹೆಸರಿನಲ್ಲಿ ಕಟ್ಟಿಕೊಡಿರುವ ಹೊಸ ಬದುಕು. ಅದರಷ್ಟು ತ್ರಾಣವಿದೆ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವುದಿಲ್ಲ ಎಂಬುದು ನಮ್ಮ ಜಾಣಕಿವುಡು ಎನ್ನಲಡ್ಡಿ ಯಿಲ್ಲ. ಇನ್ನು ಕಬ್ಬಿನ ಜಯನ್ನ ಹಲ್ಲಿನಲ್ಲಿ ಸೀಳಿ ತಿನ್ನುವ ಮಂದಿ ಎಷ್ಟಿದ್ದಾರು? ಹಬ್ಬದ ದಿನ ಎರಡು ಕಬ್ಬಿನ ಜಲ್ಲೆ ತಂದಿದ್ದೆ, ಅದನ್ನು ಹಲ್ಲಿನಿಂದ ಸಿಗಿದು ತಿನ್ನೋಣ ಎನ್ನಿಸಿತು.
ಹಾಗೆ ಮಾಡಿದೆ, ಅದೆಷ್ಟೋ ವರ್ಷದ ನಂತರ ಹೀಗೆ ಮಾಡಿದ್ದು, ಶಕ್ತಿಯಿಲ್ಲದ ವಸಡಿನಿಂದ ರಕ್ತ ಬಂದಿತ್ತು. ‘ನಾನು ಕೂಡ ಸಿಗಿದು ತಿನ್ನುತ್ತೇನೆ’ ಎಂದಿದ್ದ ಮಗಳು ನನ್ನನ್ನು ನೋಡಿ ಸುಮ್ಮನಾದಳು. ಆದರೇನು ಬಾಲ್ಯದ ಒಂದಷ್ಟು ಕ್ಷಣ ಜೀವಿಸಿದ ಖುಷಿ ನನ್ನದು. ಮಗಳಿಗೆ ಅವರಜ್ಜಿ ಚಾಕುವಿನಿಂದ ಸಿಪ್ಪೆ ತೆಗೆದು, ಸಣ್ಣ ಹೋಳುಗಳಾಗಿ ಕತ್ತರಿಸಿಕೊಟ್ಟರು ಎನ್ನುವುದು ಬೇರೆಯ ಕಥೆ.
ಇದು ಇವತ್ತಿನ ಬಹುತೇಕ ಮಕ್ಕಳ ಕಥೆ, ಮನೆಮನೆಯ ಕಥೆ.ಇವತ್ತಿನ ದಿನ ನಾವು ನಮ್ಮ ಮಕ್ಕಳನ್ನು ಅದೆಷ್ಟು ನಾಜೂಕಾಗಿ ಸಾಕಿ ಬಿಟ್ಟಿದ್ದೇವೆ ಎನ್ನಿಸುತ್ತದೆ. ಗಂಡುಮಕ್ಕಳಿಗೆ ತೋರಣ ಕಟ್ಟುವುದು ಬರುವುದಿಲ್ಲ. ಹೆಣ್ಣುಮಕ್ಕಳಿಗೆ ರಂಗೋಲಿ ಇಡಲು ಬರುವುದಿಲ್ಲ, ಅಕ್ಕಿ ಬೇಯಿಸಿ ಅನ್ನ ಮಾಡಲು ಬರುವುದಿಲ್ಲ. ಇನ್ನು ಕಾರಿನ ಟೈರು ಪಂಕ್ಚರ್ ಆದರೆ ಅದನ್ನು ಹಾಕುವುದು ಹೇಗೆ ಬಂದೀತು? ನಮ್ಮ ಬಾಲ್ಯದಲ್ಲಿ ಸಹಜವಾಗಿರುತ್ತಿದ್ದ ಈಜು ಇಂದಿಗೆ ಕೆಲವೇ ಮಕ್ಕಳಿಗೆ ಸೀಮಿತವಾಗಿದೆ.
ಇನ್ನು ಮರ ಹತ್ತುವುದು, ಲಗೋರಿ, ಕುಂಟೆಬಿ ಇವೆಲ್ಲವೂ ಶಾಶ್ವತವಾಗಿ ಮಾಯವಾಗಿ ಬಿಟ್ಟಿವೆ. ಒಟ್ಟಾರೆ ನಾಳೆ ಏನಾದರೂ ಹೆಚ್ಚು ಕಡಿಮೆಯಾದರೆ ಬದುಕಲು ಬೇಕಾದ ‘ಜೀವನ ಕೌಶಲ’ ಅಥವಾ ‘ಲೈಫ್ ಸ್ಕಿಲ್ಸ್’ ನಮ್ಮ ಮಕ್ಕಳ ಬಳಿ ಇಲ್ಲವೇ ಇಲ್ಲ. ಎಲ್ಲರ ಮನೆಯ ಮಕ್ಕಳೂ ತೊಂಬತ್ತು ಪ್ರತಿಶತ ಅಂಕ ಗಳಿಸುವುದರಲ್ಲಿ ಮಗ್ನರು. ಇದು ನಾವೇ ಕಟ್ಟಿಕೊಂಡ ಸ್ಪರ್ಧೆ.
ಬದುಕಲು ಅವಶ್ಯಕವಾಗಿ ಬೇಕಾದ ಅಂಶಗಳನ್ನು ನಮ್ಮ ಬಾಲ್ಯದಲ್ಲಿ ಯಾರೂ ಹೇಳಿ ಕೊಡುತ್ತಿರ ಲಿಲ್ಲ. ಅದು ಸಹಜ ಬದುಕಿನ ರೀತಿಯಾಗಿತ್ತು. ಸೈಕಲ್ ಹೊಡೆಯುವುದು, ಮರ ಹತ್ತುವುದು, ನೀರು ಸೇದುವುದು, ಈಜುವುದು ಎಲ್ಲವೂ ಸಹಜವಾಗಿತ್ತು. ಆದರೆ ಇಂದು ಇವುಗಳನ್ನು ಕಲಿಯಲು ಕೂಡ ಹಣ ಕೊಡಬೇಕು. ಹಣವನ್ನೇನೋ ಪೋಷಕರು ಕೊಟ್ಟಾರು, ಆದರೆ ಸಮಯ? ಮಕ್ಕಳಿಗೆ ಸಮಯ ವೆಲ್ಲಿದೆ?ಯಶಸ್ಸು ಎಂದರೇನು? ಅದು ಹಣ ಮಾಡುವುದಾ, ಸಂಪತ್ತನ್ನು ಸೃಷ್ಟಿಸಿಕೊಳ್ಳುವುದಾ? ಅದೇಕೆ ನಮ್ಮ ಸಮಾಜವು ‘ಸಿರಿವಂತರಾದರೆ ಮಾತ್ರ ಅಂಥವರು ಯಶಸ್ವಿ’ ಎನ್ನುವಂತೆ ನೋಡು ತ್ತದೆ? ಸೋತವರಲ್ಲೂ ಅದೇ ಆತ್ಮ ವಾಸಿಸುತ್ತಿರುತ್ತದೆ ಅಲ್ವಾ? ಪಟ್ಟ ಪರಿಶ್ರಮಕ್ಕೆ ಅದ್ಯಾಕೆ ನಾವು ಮತ್ತು ನಮ್ಮ ಸಮಾಜ ಬೆಲೆ ನೀಡುವುದಿಲ್ಲ? ಪ್ರಯತ್ನ, ಪರಿಶ್ರಮ ಎಲ್ಲವೂ ಇದ್ದೂ ಕೆಲವೊಮ್ಮೆ ನಾವು ಬಯಸಿದ ಫಲಿತಾಂಶ ಸಿಗದೇ ಹೋಗಬಹುದು.
ಅಂಥ ನೂರಾರು, ಸಾವಿರಾರು ಜನರನ್ನು ನಮ್ಮ ನಡುವೆ ಕಾಣಬಹುದು. ಆದರೆ ಅದು ಕೇವಲ ನಮ್ಮ ಕಣ್ಣಿಗೆ ಕಾಣಿಸುತ್ತದೆ, ಮನಸ್ಸಿಗೆ ನಾಟುವುದಿಲ್ಲ. ಹೀಗಾಗಿ ಮತ್ತದೇ ವಿಷವರ್ತುಲಕ್ಕೆ ನಮ್ಮ ಮಕ್ಕಳನ್ನು ದೂಡುತ್ತೇವೆ. ಬದುಕೆಂದರೇನು? ಅದರಿಂದ ನಾವು ಬಯಸುವುದೇನು? ಎನ್ನುವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದಿಲ್ಲ. ನಮ್ಮ ಮಕ್ಕಳಿಗೂ ಕೇಳಿಕೊಳ್ಳಲು ಕಲಿಸುವುದಿಲ್ಲ.
ಅತ್ಯಂತ ವೇಗವಾಗಿ ಓಡುವ ಸಮಾಜದಲ್ಲಿ ನಾವೆಲ್ಲರೂ ಸ್ಪರ್ಧಿಗಳು. ಯಾರನ್ನಾದರೂ ‘ಏಕೆ ಹೀಗೆ ಓಡುತ್ತಿದ್ದೀರಿ? ಎಲ್ಲಿಗೆ ನಿಮ್ಮ ಓಟ? ಕಾರಣವೇನು?’ ಎನ್ನುವ ಪ್ರಶ್ನೆ ಕೇಳಿದರೆ ಉತ್ತರ ಮಾತ್ರ ಯಾರಿಗೂ ಗೊತ್ತಿರುವುದಿಲ್ಲ. ಕೊನೆಗೆ, ಓಡುತ್ತಿರುವ ದಿಕ್ಕಿನ ಅರಿವು ಕೂಡ ಇರುವುದಿಲ್ಲ.
‘ಎಲ್ಲರೂ ಓಡುತ್ತಿದ್ದಾರೆ, ನಾನೂ ಓಡುತ್ತಿದ್ದೇನೆ’ ಎನ್ನುವುದು ಬಹುತೇಕರ ಉತ್ತರ. ಇದೊಂದು ಪ್ಯಾಟ್ರನ್ ಆಗಿ ಬದಲಾಗಿದೆ. ಇದನ್ನು ಮುರಿಯದೆ ಹೊಸ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ. ಹೀಗಾಗಿ ಇವತ್ತು ನಮ್ಮ ಬದುಕು, ಅದರಲ್ಲೂ ನಗರ ಪ್ರದೇಶದಲ್ಲಿ ಬದುಕುವ ಜನರ ಬದುಕು ಥೇಟ್ ಸ್ಯಾಕರಿನ್‌ನ ಹಾಗಾಗಿದೆ- ಅದರಲ್ಲಿ ಸಿಹಿಯುಂಟು, ಆದರೆ ಶಕ್ತಿಯಿಲ್ಲ...!