ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shishir Hegde Column: ಬದುಕಿನಂತೆ ಉದ್ದೇಶಕ್ಕೂ ಬದಲಾಗುವ ಸ್ವಾತಂತ್ರ್ಯವಿದೆ !

ಪ್ರತಿಯೊಂದರ, ಪ್ರತಿಯೊಬ್ಬರ ಆಳವೂ ಅಷ್ಟೇ ಇದೆ. ಯಾವುದನ್ನೇ ಎತ್ತಿಕೊಳ್ಳಿ, ಯಾರನ್ನೇ ಓದಿಕೊಳ್ಳಿ, ಎಲ್ಲವನ್ನೂ, ಎಲ್ಲರನ್ನೂ ಸ್ವಲ್ಪ ಸ್ವಲ್ಪ ಓದಿದರೂ ಸಾಕು. ಅದರಲ್ಲಿ ಕೆಲವು ನೇರಾನೇರ, ದ್ವಂದ್ವ ಸೃಷ್ಟಿಸದ ವಿಚಾರಗಳು- ಉದಾಹರಣೆಗೆ ‘ಅಷ್ಟಾವಕ್ರಗೀತೆ’. ಭಗವದ್ಗೀತೆ ಮೊದಲಾದವು ಹಾಗಲ್ಲ- ಅವುಗಳಲ್ಲಿ ವ್ಯಕ್ತಿಯ ಪ್ರಶ್ನೆಗೆ ಅನುಗುಣವಾಗಿ ಉತ್ತರಗಳು ರೂಪ ತಾಳುತ್ತವೆ.

ಶಿಶಿರಕಾಲ

(ತಾಳು ಮನವೇ ಭಾಗ-3)

ಆಂಕ್ಸೈಟಿ, ಡಿಪ್ರೆಷನ್‌ನ ಅಸಲಿಯತ್ತು ಏನೆಂಬುದನ್ನು ಹಿಂದಿನ ಲೇಖನಗಳಲ್ಲಿ ನೋಡಿದ್ದೆವು. ಆಂಕ್ಸೈಟಿ ಯಾವುದೋ ಒಂದು ರೋಗವಲ್ಲ, ಕೊರತೆಯಲ್ಲ- ಬದಲಿಗೆ ಅತಿಯಾಗಿ ಚಿಂತಿಸುವ ಮನೋದೈಹಿಕ ಸ್ಥಿತಿ. ಡಿಪ್ರೆಶನ್- ಗಾಢಾಂಧಕಾರವಲ್ಲ, ಮರ್ಲು ಕೂಡ ಅಲ್ಲ, ಬದಲಿಗೆ ಬದುಕಿನ ವಿಶ್ವಾಸ, ಭರವಸೆಗಳನ್ನು ಕಳೆದುಕೊಂಡ ಅವಸ್ಥೆ. ಆ ದುರ್ದೆಸೆಯಲ್ಲಿ ಕಾಡುವ ಪ್ರಶ್ನೆ ‘ಏಕೆ ಬದುಕ ಬೇಕು?’.

ಅದು ಜೀವವನ್ನೇ ನುಂಗಿಹಾಕುವ ಹಂತಕ್ಕೆ ಬೆಳೆಯಬಹುದು ಎಂಬೆ ವಿಷಯಗಳನ್ನು ಸವಿವರವಾಗಿ ಚರ್ಚಿಸಿzವು. ಆದರೆ ‘ಏಕೆ ಬದುಕಬೇಕು?’ ಎಂಬುದು ಆಂಕ್ಸೈಟಿ, ಡಿಪ್ರೆಶನ್ ಸಮಸ್ಯೆಯವರದ್ದಷ್ಟೇ ಚಿಂತೆಯಲ್ಲ. ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಎಲ್ಲರೂ ಹುಡುಕುವ ಉತ್ತರ. ಉಪಾಯಗಳು ಹಲವಿದೆ ಎಂಬ ಅರಿವು ಎಲ್ಲರಲ್ಲೂ ಇದೆ.

ಆದರೆ ನಮ್ಮೆಲ್ಲರ ವಯಸ್ಸು, ಹಿನ್ನೆಲೆ, ವೃತ್ತಿ, ಬದುಕಿನ ಸಾಧ್ಯತೆ, ಸಂಕೋಲೆಗಳು ಬೇರೆಯಾಗಿರು ವಾಗ ‘ಏಕೆ ಬದುಕಬೇಕು?’ ಎಂಬ ಪ್ರಶ್ನೆಗೆ ನಮ್ಮ ಉತ್ತರ ನಾವೇ ಕಂಡುಕೊಳ್ಳುವುದು ಹೇಗೆ? ಈ ‘ಯಕ್ಷಪ್ರಶ್ನೆ’ಯನ್ನು ಹಾಗೆಯೇ ಉಳಿಸಿಕೊಂಡಿದ್ದೆವು.

‘ಏಕೆ ಬದುಕಬೇಕು?’ ಎಂಬ ಪ್ರಶ್ನೆಗೆ ಉತ್ತರಗಳದ್ದೇನೂ ಕೊರತೆಯಿಲ್ಲ. ಮಹಾಭಾರತ, ರಾಮಾ ಯಣ, ಭಗವದ್ಗೀತೆ, ಭಿಕ್ಷು ಗೀತೆ, ಅಷ್ಟಾವಕ್ರಗೀತೆ, ಅದ್ವೈತ, ಉಪನಿಷತ್ತುಗಳು, ವೇದಾಂತ, ಸಾಂಖ್ಯ, ನ್ಯಾಯ, ಮೀಮಾಂಸೆ, ಬ್ರಹ್ಮಸೂತ್ರ, ಯೋಗ ವಾಸಿಷ್ಠ, ಪುರಾಣ, ಭಾಗವತ, ಶಂಕರ, ಬುದ್ಧ, , ಜೆನ್, ಚಾನ್, Dzogchen, ತಾವೋ, ಮಹಾವೀರ, ಪ್ಲೇಟೋ, ಅರಿಸ್ಟಾಟಲ, ಬೈಬಲ್, ರೂಮಿ, ಜೋಹರ್, ಎಪಿಕ್ಟಿಟಸ್, ಮಾರ್ಕಸ್ ಅರಿಲಿಯೋ ಬರೆದಿಟ್ಟು ಹೋದ ಸ್ವಗತದ ಡೈರಿ, ಜರತುಷ್ಟ್ರ, ರಮಣ ಮಹರ್ಷಿ, ಜಿಡ್ಡು ಕೃಷ್ಣಮೂರ್ತಿ, ಓಶೋ, ಎಲ್ಕಾರ್ಟ್ ಟೊ, ರವಿಶಂಕರ್, ಸದ್ಗುರು ಜಗ್ಗಿ ವಾಸುದೇವ್- ಹುಹ್.. ಹೇಳುತ್ತಾ ಹೋದರೆ ಲೇಖನ ತುದಿ ಮುಟ್ಟೀತು, ಪಟ್ಟಿ ಮುಗಿಯಲಿಕ್ಕಿಲ್ಲ. ‌

ಇದನ್ನೂ ಓದಿ: Shishir Hegde Column: ಡಿಪ್ರೆಶನ್:‌ ಬದುಕಿ ಪ್ರಯೋಜನವೇನು ? ಎಂಬ ಯಕ್ಷಪ್ರಶ್ನೆ !

ಪ್ರತಿಯೊಂದರ, ಪ್ರತಿಯೊಬ್ಬರ ಆಳವೂ ಅಷ್ಟೇ ಇದೆ. ಯಾವುದನ್ನೇ ಎತ್ತಿಕೊಳ್ಳಿ, ಯಾರನ್ನೇ ಓದಿಕೊಳ್ಳಿ, ಎಲ್ಲವನ್ನೂ, ಎಲ್ಲರನ್ನೂ ಸ್ವಲ್ಪ ಸ್ವಲ್ಪ ಓದಿದರೂ ಸಾಕು. ಅದರಲ್ಲಿ ಕೆಲವು ನೇರಾ ನೇರ, ದ್ವಂದ್ವ ಸೃಷ್ಟಿಸದ ವಿಚಾರಗಳು- ಉದಾಹರಣೆಗೆ ‘ಅಷ್ಟಾವಕ್ರಗೀತೆ’. ಭಗವದ್ಗೀತೆ ಮೊದಲಾ ದವು ಹಾಗಲ್ಲ- ಅವುಗಳಲ್ಲಿ ವ್ಯಕ್ತಿಯ ಪ್ರಶ್ನೆಗೆ ಅನುಗುಣವಾಗಿ ಉತ್ತರಗಳು ರೂಪ ತಾಳುತ್ತವೆ. ಭಗವದ್ಗೀತೆಯಲ್ಲಿ ಶಂಕರರಿಗೆ ಜ್ಞಾನ ಕಂಡರೆ ರಾಮಾನುಜರಿಗೆ ಭಕ್ತಿ ಕಾಣಿಸುತ್ತದೆ, ಇನ್ನು ಸ್ಟೀವ್ ಜಾಬ್ಸಗೆ ಕರ್ಮ ಕಾಣಿಸುತ್ತದೆ.

‘ಏಕೆ ಬದುಕಬೇಕು?’ ಎಂಬ ಪ್ರಶ್ನೆಗೆ ‘ಇದನ್ನೆಲ್ಲ ಓದಿ ತಿಳಿದುಕೊಳ್ಳಿ’ ಎಂದು ಹೇಳಲು ಈ ಲೇಖನ ಬೇಕಿರಲಿಲ್ಲ. ಈ ಪ್ರಶ್ನೆಗೆ shortcut ಉತ್ತರವೇನು? ನಮ್ಮೆಲ್ಲರ ಬದುಕು, ವಯಸ್ಸು, ಆರ್ಥಿಕ ಸ್ಥಿತಿ, ಅಭಿರುಚಿ, ವ್ಯವಸ್ಥೆ, ಬದುಕುವ ರೀತಿ, ಸಂಬಂಧಗಳು, ಜ್ಞಾನ, ಸಾಧ್ಯತೆ, ಜಾಗ, ವಾತಾವರಣ, ಹವ್ಯಾಸ, ವೃತ್ತಿ, ಪ್ರವೃತ್ತಿ, ನಂಬಿಕೆಗಳು ಈ ರೀತಿಯ ಸಾವಿರದೆಂಟು ಭಿನ್ನತೆ. ಇಪ್ಪತ್ತರ ವಯಸ್ಸಿಗೆ ಏಕೆ ಬದುಕಬೇಕೆಂಬ ಪ್ರಶ್ನೆ ಅಸಹನೆಯನ್ನು ತಂದರೆ, ನಲವತ್ತರಲ್ಲಿ ಸುಸ್ತನ್ನು, ಅರವತ್ತರಲ್ಲಿ ತುರ್ತನ್ನು ಧ್ವನಿಸುತ್ತದೆ.

ಹೀಗೆಲ್ಲ ಇರುವಾಗ ತಕ್ಷಣಕ್ಕೆ ಉತ್ತರ ಪಡೆಯುವುದು ಹೇಗೆ? ಈ ಪ್ರಶ್ನೆಗೆ ಉತ್ತರ ನಾಲ್ಕೇ ನಾಲ್ಕು ಪ್ರಶ್ನೆಗಳು! ನಮ್ಮ ಸ್ವಂತ ಜೀವನದಲ್ಲಿ ಖುಷಿಯಿಂದ ಭಾಗವಹಿಸಲು ಕಾರಣ ತಿಳಿಯಬೇಕಾದರೆ ಕೇಳಿಕೊಳ್ಳಬೇಕಾದದ್ದು ನಾಲ್ಕು ನೇರ ಪ್ರಶ್ನೆ- ಅದಕ್ಕೆ ನಮ್ಮದೇ ನಾಲ್ಕು ಪ್ರಾಮಾಣಿಕ, ನೇರ ಉತ್ತರ. ಮೊದಲನೆಯದು- ‘ನನಗೇನು ಇಷ್ಟ? ನಾನು ಏನು ಮಾಡುವುದನ್ನು ಪ್ರೀತಿಸುತ್ತೇನೆ?’ ಯಾವತ್ತೋ ಅಮಾಸೆ ಹುಣ್ಣಿಮೆಗೊಮ್ಮೆ, ಟೈಮ್ ಪಾಸ್ ಮಾಡುವ ಯಾವುದೇ ಕೆಲಸವಲ್ಲ. ಅಥವಾ ಆಲಸ್ಯ ವಲ್ಲ.

Screenshot_1 R

ಬದಲಿಗೆ ಯಾವುದು ನಿಮ್ಮನ್ನು ಸಮಯದ ಪರಿವೆಯೇ ಇಲ್ಲದಂತೆ ಮಾಡಬಲ್ಲದು? ಸಾಮಾನ್ಯ ವಾಗಿ ಹೆಚ್ಚಿನವರು ಬದುಕಿನ ಆದಿಯ ಇದು ಯಾವುದೆಂದು ಕಂಡುಕೊಂಡಿರುತ್ತಾರೆ. ನಂತರ ಅದನ್ನು ಅಷ್ಟೇ ಬೇಗ ಕೈ ಬಿಟ್ಟಿರುತ್ತಾರೆ. ಓದುಗರಾದ ಕುಮಟಾದ ಸುಷ್ಮಾ ಭಟ್ 2022ರಿಂದ ಪ್ರತಿ ದಿನ ರಂಗೋಲಿ ಬಿಡಿಸುತ್ತಾರೆ.

ನಾಲ್ಕು ವರ್ಷದಿಂದ, ಒಂದು ದಿನವೂ ಬಿಟ್ಟದ್ದಿಲ್ಲ. ಸುಮ್ಮನೆ ಶಾಸ್ತ್ರಕ್ಕೆಂದು ಮನೆಯ ಹೊರಗಡೆ ಹಾಕುತ್ತಿದ್ದ ರಂಗೋಲಿಯನ್ನು ಯಾರೋ ಮೆಟ್ಟಿ ಹೋಗುತ್ತಾರೆಂದು ದೊಡ್ಡ ಕಪ್ಪು ಬೋರ್ಡ್ ಮಾಡಿಕೊಂಡಿದ್ದಾರೆ. ಅವರ ರಂಗೋಲಿಗಳ ಸಂಕೀರ್ಣತೆ ಮತ್ತು ಚಂದ ದಿನದಿಂದ ದಿನಕ್ಕೆ ಹೆಚ್ಚುತ್ತ ಈಗ ಪ್ರತಿಯೊಂದು ರಂಗೋಲಿಯೂ ಯಾವುದೇ ಕಲಾಕೃತಿಗೆ ಕಡಿಮೆಯಿಲ್ಲ.

ಆ ರಂಗೋಲಿಗಳನ್ನು ನಿತ್ಯ ನೋಡುವುದೇ ಒಂದು ಅನುಭವ. ಅದು ಯಾರದೋ ಹೊಗಳಿಕೆಗೆ, ಪ್ರಚಾರಕ್ಕೆ ಮಾಡುವುದಲ್ಲ. ನನ್ನ ಇನ್ನೊಬ್ಬ ಅಮೆರಿಕದ ಸ್ನೇಹಿತನಿದ್ದಾನೆ, ಗ್ರೆಗ್. ಅವನದು ಹಣಕಾಸಿಗೆ ಸಂಬಂಧಿಸಿದ ಕೆಲಸ.

ನಿರಂತರ ಒತ್ತಡದಿಂದಾಗಿ ಒಂದಿಷ್ಟು ವರ್ಷ ಆಂಕ್ಸೈಟಿ, ಡಿಪ್ರೆಶನ್ʼನಿಂದ ಬಳಲಿದವನು, ಶುಶ್ರೂಷೆ ಪಡೆದವನು. ಅವನಿಗೆ ಚಿಕ್ಕಂದಿನಿಂದಲೂ ಮೆಕ್ಯಾನಿಕಲ್ ವಾಚುಗಳನ್ನು ರಿಪೇರಿ ಮಾಡುವುದು ಗೊತ್ತಿತ್ತು. ಈಗಲೂ ಮನೆಯವರೆಲ್ಲ ಮಲಗಿದ ಮೇಲೆ ಪ್ರತಿದಿನ ಒಂದು ಗಂಟೆ ವಾಚು ರಿಪೇರಿ ಮಾಡಿಯೇ ಮಲಗುವುದು.

ಮೊದಮೊದಲು ಹೇಗಾಗಿತ್ತು ಎಂದರೆ ಪುಕ್ಸಟ್ಟೆ ರಿಪೇರಿ ಮಾಡಿಕೊಡುತ್ತೇನೆ ಎಂದರೂ ಅವನಿಗೆ ರಿಪೇರಿಗೆ ವಾಚು ಸಿಗುತ್ತಿರಲಿಲ್ಲ. ಈಗೀಗ ಡಿಜಿಟಲ್ ವಾಚುಗಳು ಬಂದಮೇಲೆ ಮೆಕ್ಯಾನಿಕಲ್ ವಾಚು ಗಳೇ ಕಾಣೆಯಾಗಿವೆ. ಈಗ ಅವನು ಆಗೀಗ ಗುಜರಿ ಅಂಗಡಿಗೆ ಹೋಗುತ್ತಾನೆ. ಅಲ್ಲಿಂದ ತಂದು ವಾಚು ರಿಪೇರಿ ಮಾಡುತ್ತಾನೆ. ಈಗ ಅವನ ಮನೆಗೆ ಹೋದರೆ 800 ವಾಚುಗಳಿವೆ.

“ನಾನು ವಾಚು ರಿಪೇರಿ ಮಾಡುವಾಗ ಸಮಯವೇ ನಿಲ್ಲುತ್ತದೆ, ರಿಪೇರಿಯಾದ ಮೇಲಷ್ಟೇ ಸಮಯ ಮುನ್ನಡೆಯುತ್ತದೆ" ಎನ್ನುವುದು ಅವನ ಪಂಚ್ ಡಯಲಾಗ್. ನಾವು ಯಾವಾಗ ನಮಗೆ ನಿಜವಾಗಿ ಯೂ ಇಷ್ಟವಾದದ್ದನ್ನು, ಪ್ರೀತಿಸಿದ್ದನ್ನು ಮಾಡುವುದನ್ನು ಬಿಡುತ್ತೇವೆಯೋ ಆ ಖಾಲಿತನದಲ್ಲಿ ಬೇಡದೆ ಹೋದದ್ದು ತುಂಬಿಕೊಂಡಿರುತ್ತದೆ. ವಾಕಿಂಗ್, ವ್ಯಾಯಾಮ, ಸಂಗೀತ ಕೇಳುವುದು, ಗಿಡಗಳಿಗೆ ನೀರು ಹಾಕುವುದು, ಸುಮ್ಮನೆ ಕುಳಿತುಕೊಳ್ಳುವುದು, ಓದುವುದು- ಯಾವುದೇ ಆಗಿರ ಬಹುದು. ‌

ಮೊಬೈಲ್, ಟಿವಿ ಮೊದಲಾದ ಮನೋದ್ರೇಕ ಸ್ಕ್ರೀನ್‌ಗಳನ್ನು ಹೊರತುಪಡಿಸಿ. ಎರಡನೆಯ ಪ್ರಶ್ನೆ- ‘ನಾನು ಯಾವುದರಲ್ಲಿ ಪರಿಣತ?’ ಇತರರು ನಿಮ್ಮಲ್ಲಿದೆ ಎಂದು ಗ್ರಹಿಸುವ ಸಾಮರ್ಥ್ಯ, ಕೌಶಲ ಯಾವುದು? ನೀವು ಇಷ್ಟು ಕಾಲ ಅಲಕ್ಷಿಸಿದ ಆದರೆ ನಿಮ್ಮ ಪ್ರಾಥಮಿಕವಾದ ಇಷ್ಟದ ಕೌಶಲ ವೇನು? ಈ ಎರಡನೇ ಪ್ರಶ್ನೆ ಸ್ವಲ್ಪ ಗೊಂದಲದ ಪ್ರಶ್ನೆ. ಏಕೆಂದರೆ ನಮಗೆಲ್ಲರಿಗೂ- ನಮ್ಮ ನಿಜವಾದ ಸಾಮರ್ಥ್ಯ ಯಾವತ್ತೂ ವಿಶೇಷವೆನಿಸುತ್ತಿರುವುದಿಲ್ಲ.

ಬರಹಗಾರನಿಗೆ ತನ್ನ ಬರಹದ ಶಕ್ತಿ, ಚಿತ್ರ ಬಿಡಿಸುವವನಿಗೆ ತಾನು ಬಿಡಿಸಿದ ಚಿತ್ರ ವಿಶೇಷ ವೆನಿಸುವು ದಿಲ್ಲ. ಹಾಗಾಗಿ ನಾವು ಯಾವುದರಲ್ಲಿ ಉತ್ತಮ ಎಂದು ಕಂಡುಕೊಳ್ಳುವುದು ಸುಲಭವೇನಲ್ಲ, ಕಷ್ಟವೂ ಅಲ್ಲ. ಉಳಿದವರು ಹೇಳಿದ್ದೆಲ್ಲ ನಮ್ಮ ಸಾಮರ್ಥ್ಯವಲ್ಲ. ನಮಗೆ ಆ ನಮ್ಮ ಪರಿಣತಿ ಯನ್ನು ಯಾರು ಬೇಕಾದರೂ ರೂಢಿಸಿಕೊಳ್ಳಬಹುದು ಎಂದೇ ಅನಿಸುತ್ತಿರುತ್ತದೆ. ಆದರೂ ಅದು ನಮ್ಮ ಸಾಮರ್ಥ್ಯ, ಪರಿಣತಿ ಎಂದು ನಮಗೆ ಒಳಗೊಳಗೇ ತಿಳಿದಿರುತ್ತದೆ.

ಮೂರನೆಯ ಪ್ರಶ್ನೆ- ‘ಜಗತ್ತಿಗೆ ನನ್ನಿಂದ ಏನು ಬೇಕು?’ ಜಗತ್ತಿಗೇನು ಬೇಕು? ಅದು ಪ್ರಶ್ನೆಯಲ್ಲ. ಆ ಪ್ರಶ್ನೆಗೆ ಕ್ಯಾನ್ಸರ್‌ಗೆ ಪರಿಹಾರ, ಏqಗೆ ಔಷಽ? ಊಹುಂ, ಆ ರೀತಿಯದ್ದೆಲ್ಲ ಪ್ರಶ್ನೆಯೇ ಅಲ್ಲ. ‘ನಿಮ್ಮಿಂದ ಸುತ್ತಲಿನ ಜಗತ್ತಿಗೆ ಏನು ಬೇಕು?’ ಅತ್ಯಂತ ಮುಖ್ಯವಾದ ಪ್ರಶ್ನೆ ಇದು.

ಈ ಪ್ರಶ್ನೆ ಶುರುವಾಗುವುದು ಮನೆಯಿಂದ. ಕುಟುಂಬದಲ್ಲಿ ಯಾರ‍್ಯಾರಿಗೆ ನಿಮ್ಮಿಂದ ಏನು ಬೇಕು? ತಾಯಿಗೆ, ತಂದೆಗೆ, ಮಗ, ಮಗಳಿಗೆ, ಹೆಂಡತಿ- ಗಂಡನಿಗೆ. ಇದು ಕೇವಲ ನಿಭಾಯಿಸುವ ಕರ್ತವ್ಯದ ಪ್ರಶ್ನೆಯಲ್ಲ.

ತಾಯಿಗೆ ಸಾಂತ್ವನ, ತಂದೆಗೆ ಧೈರ್ಯ, ಮಗಳಿಗೆ ಕಿವಿ, ಹೆಂಡತಿಗೆ ಸ್ನೇಹಿತ ಹೀಗೆ. ನಂತರ ಅಕ್ಕಪಕ್ಕ ದವರಿಗೆ, ಕಚೇರಿಯಲ್ಲಿ- ಒಟ್ಟಾರೆ ನಿಮ್ಮ ಬಹಿರ್ಜಗತ್ತಿಗೆ ನಿಮ್ಮಿಂದೆನಾಗಬೇಕಾಗಿದೆ? ನೀವು ರಿಪೇರಿ ಮಾಡುವುದರಲ್ಲಿ ಪರಿಣತರಾದರೆ ಅದು, ನಿವೃತ್ತ ಮೇಷ್ಟ್ರು ಟ್ಯೂಷನ್ ತೆಗೆದುಕೊಳ್ಳುವುದು, ಕಲಿತ ಸಂಗೀತ ಅಥವಾ ಕೌಶಲವನ್ನು ಇನ್ನೊಬ್ಬರಿಗೆ ಕಲಿಸುವುದು, ಹಾಡುವುದು ಇತ್ಯಾದಿ ಯಾವು ದೆಂದರೆ ಯಾವುದೇ ಇರಬಹುದು. ಎಲ್ಲ ಪ್ರಶ್ನೆಗೂ ನಿಮ್ಮ ಉತ್ತರ ಮಾತ್ರ ಸರಿ ಉತ್ತರ. ರಸ್ತೆಯಲ್ಲಿ ಬಿದ್ದ ಕಸ ಹೆಕ್ಕುವುದಾದರೂ ಸರಿ- ಪ್ರಪಂಚಕ್ಕೆ ನಮ್ಮಿಂದ ಏನಾಗಬೇಕು? ‘ಮರಣಶಯ್ಯೆಯ ಕಥೆಗಳು’ ಎಂದೊಂದು ಲೇಖನಮಾಲೆ ಬರೆದದ್ದು ನೆನಪಿರಬಹುದು.

ಅದರಲ್ಲಿ ಸ್ನೇಹಿತೆ ಸ್ಟೇಸಿ ಮಾರ್ಕಂ ಎಂಬ ಹಾಸ್ಪೈಸ್- ಮರಣಶಯ್ಯೆಯಲ್ಲಿರುವ ರೋಗಿಗಳನ್ನು ನೋಡಿಕೊಳ್ಳುವ ದಾದಿಯ ಬಗ್ಗೆ, ಅವಳು ಹೇಳಿದ ಕೆಲವು ಕಥೆಗಳನ್ನು ಹೇಳಿದ್ದೆ. ಅವಳು ಸಾವಿ ನಂಚಿನ ಶುಶ್ರೂಷೆಯ ನರ್ಸ್. ಇಪ್ಪತ್ತೈದು ವರ್ಷದ ಸರ್ವೀಸ್‌ನಲ್ಲಿ ಏನಿಲ್ಲವೆಂದರೂ ಮೂರರಿಂದ ನಾಲ್ಕು ಸಾವಿರ ರೋಗಿಗಳನ್ನು ಕೊನೆಯ ಹಂತದಲ್ಲಿ ನೋಡಿಕೊಂಡವಳು.

ಅವಳಿಗೆ ಮೃತ್ಯು ಸಮೀಪಿಸುವಾಗಿನ ವ್ಯಕ್ತಿಗಳ ಮನಸ್ಥಿತಿ ಗೊತ್ತು. ಈಗ ಅವಳು ಕೌನ್ಸಿಲಿಂಗ್ ಸೆಂಟರ್ ಒಂದನ್ನು ಸ್ವಂತ ಖರ್ಚಿನಲ್ಲಿ ತೆರೆದಿದ್ದಾಳೆ. ಕ್ಯಾನ್ಸರ್ ಮೊದಲಾದ ಮಾರಣಾಂತಿಕ ರೋಗವಿದೆ ಎಂದು ತಿಳಿದು ಆಘಾತ ಹೊಂದಿದ ಯಾರಿಗೇ ಆಗಲಿ ಸಾಂತ್ವನ ಹೇಳುತ್ತಾಳೆ.

ಜತೆಯಲ್ಲಿ ನರ್ಸಿಂಗ್ ಕಾಲೇಜಿಗೆ ಹೋಗಿ ಕೊನೆಯ ಹಂತದಲ್ಲಿರುವ ರೋಗಿಗಳನ್ನು ಮಾತನಾಡಿಸು ವುದು ಹೇಗೆ ಎಂದು ಪಾಠಮಾಡುತ್ತಾಳೆ. ಎಲ್ಲಿಯೂ ಒಂದು ಪೈಸೆ ತೆಗೆದುಕೊಳ್ಳುವುದಿಲ್ಲ. ನಾಲ್ಕನೇ ಪ್ರಶ್ನೆ- ‘ನಿಮ್ಮ ಉಳಿವಿಗೆ ವ್ಯವಸ್ಥೆಯೇನು?’ ಉಳಿವಿನ ವ್ಯವಸ್ಥೆ- ಅತ್ಯಂತ ಮುಖ್ಯವಾದ ಪ್ರಶ್ನೆ.

ಹೌದು, ಬದುಕುಳಿಯುವುದು ಮುಖ್ಯ. ನೌಕರಿಯೋ, ವ್ಯಾಪಾರವೋ, ನಿವೃತ್ತಿ ವೇತನವೋ ಆದಾಯ ಮುಖ್ಯ. ಆದರೆ ಇಲ್ಲಿನ ಪ್ರಶ್ನೆ ಎಷ್ಟು ದುಡಿಯಬೇಕು, ದುಡಿಯುತ್ತೀರಿ ಎನ್ನುವುದಲ್ಲ. ಬದಲಿಗೆ ಹೇಗೆ ದುಡಿಯುತ್ತಿದ್ದೀರಿ ಎನ್ನುವುದು. ಬದುಕನ್ನು ಕಟ್ಟಿಕೊಳ್ಳುವುದು ಬೇರೆ, ಕಟ್ಟಿಕೊಳ್ಳಲು ಹೋಗಿ ನಮ್ಮನ್ನೇ ನಾವು ಕಳೆದುಕೊಳ್ಳುವುದು ಬೇರೆ. ಎಷ್ಟು ಹಣಮಾಡಬೇಕು, ಯಾವ ಹಂತಕ್ಕೆ ವೃತ್ತಿಯಲ್ಲಿ ತಲುಪಬೇಕು ಎನ್ನುವುದು ಗುರಿ.

ಆದರೆ ಗುರಿ ಬದುಕಿನ ಕಾರಣವನ್ನೇ ಅಲಕ್ಷಿಸುವಂತಾಗಬಾರದು. ಹಣಮಾಡುವುದು, ದುಡಿಯು ವುದೇ ಗುರಿಯಾದಾಗ ಉದ್ವೇಗ ಚಿಗುರುತ್ತದೆ. ದುಡಿಮೆ ನಮ್ಮ ವೈಯಕ್ತಿಕ ಮೌಲ್ಯಕ್ಕೆ ಹೊಂದಿಕೆ ಯಾದಾಗ ಮಾತ್ರ ಬದುಕಿನ ತಾಳಮೇಳ ಸರಿಯಾಗುತ್ತದೆ. ನೈತಿಕ ಕೆಲಸ ಮಾತ್ರ ಸಮಾಧಾನ ಕೊಡಬಲ್ಲದು. ವಿದ್ಯಾರ್ಥಿಯಾದರೆ, ನಿವೃತ್ತಿಯಾದರೆ, ಅಥವಾ ಸಂಗಾತಿ ದುಡಿಯುವುದಾದರೆ ಅಲ್ಲಿ ಹೊರಗೆ ಹೋಗಿ ದುಡಿಮೆಗೆ ವೃತ್ತಿ ಮಾಡಬೇಕಿಲ್ಲ. ಇಲ್ಲಿ ಪ್ರಶ್ನೆ ಹಣ, ದುಡಿಮೆಯಲ್ಲ- ಉಳಿವಿನ ವ್ಯವಸ್ಥೆಯದು.

ಈ ನಾಲ್ಕು ಪ್ರಶ್ನೆಗಳು ‘ಇಕಿಗಾಯ್’ ಎಂಬ ಜಪಾನಿನ ತತ್ವಶಾಸ್ತ್ರದ್ದು. ಈ ಪ್ರಶ್ನೆಗಳನ್ನು ಒಂದಾದ ಮೇಲೆ ಒಂದರಂತೆ ಕೇಳಿಕೊಂಡರೆ ಇದೊಂದು ವ್ಯಾಪಾರಿ ಸೂತ್ರ. ನನಗೆ ಯಾವುದು ಪ್ರೀತಿಯ ಕೆಲಸ? ನನ್ನ ಪರಿಣತಿ, ಕೌಶಲವೇನು? ಜಗತ್ತಿಗೆ ನನ್ನಿಂದೇನು ಬೇಕು? ಆ ಕೌಶಲವನ್ನು ಉಳಿವಿಗಾಗಿ ಬಳಸಿಕೊಳ್ಳುವುದು ಹೇಗೆ? ಇವೇ ಪ್ರಶ್ನೆಗಳನ್ನಿಟ್ಟುಕೊಂಡು ಬೆಳೆದ ದೊಡ್ಡ ಗ್ರಂಥಗಳೇ ಇವೆ. ಆದರೆ ಈ ತತ್ವಜ್ಞಾನಗಳ ಉಸಾಬರಿ ಇಲ್ಲಿ ಬೇಡ. ಆಸಕ್ತಿಯಿದ್ದರೆ Ikigai ಮೇಲೆ ಪುಸ್ತಕ, ವಿಡಿಯೋಗಳು ಸಾಕಷ್ಟು ಸಿಗುತ್ತವೆ. ಮಾಹಿತಿಗೆ ಕೊರತೆ ಇಲ್ಲ !

ಆದರೆ ಈ ನಾಲ್ಕು ಪ್ರಶ್ನೆಗಳಿಗೆ ಅದರದೇ ಆದ ವಿಶೇಷತೆಗಳಿವೆ. ಅವನ್ನು ಪ್ರತ್ಯೇಕವಾಗಿ ಕೇಳಿ ಕೊಂಡಲ್ಲಿ ಬದುಕಿಗೊಂದು ಉದ್ದೇಶ ಸ್ಪಷ್ಟವಾಗುತ್ತದೆ. ಮೊದಲ ಪ್ರಶ್ನೆಯಲ್ಲಿ ಇಷ್ಟವಾದದ್ದು, ಎರಡನೆಯದರಲ್ಲಿ ವಿಶೇಷವಾದದ್ದು, ಮೂರನೆಯದರಲ್ಲಿ ಸಮಾಜ ಬಯಸಿದ್ದು, ನಾಲ್ಕನೆಯ ದರಲ್ಲಿ ಬದುಕಿನ ವ್ಯವಸ್ಥೆಯದು. ಹಾಗಂತ ಇವು ಒಮ್ಮೆ ಕೇಳಿ ಉತ್ತರಿಸಿ ಬಿಡುವ ಪ್ರಶ್ನೆಗಳಲ್ಲ. ಮತ್ತೆ ಮತ್ತೆ ಕೇಳಿಕೊಳ್ಳುತ್ತಲೇ ಇರಬೇಕಾದ ಪ್ರಶ್ನೆಗಳಿವು.

ಉತ್ತರಗಳು ಬದಲಾದಲ್ಲಿ ಗಾಬರಿ ಬೀಳಬೇಕಿಲ್ಲ. ಉದ್ದೇಶ ಬದಲಾಗುತ್ತಿರಬಹುದು. ನಾನಿಲ್ಲಿ ಲೇಖನದ ಶಿಷ್ಟಾಚಾರ ಪಕ್ಕಕ್ಕಿಟ್ಟು ನನ್ನದೇ ಉದಾಹರಣೆಯನ್ನು ಹೊಂದಿಸಿ ಹೇಳುತ್ತೇನೆ. ನನಗೆ ಓದುವುದು, ದೀರ್ಘ ವಾಕಿಂಗ್, ಸಂಗೀತ ಕೇಳುವುದು, ಫೋಟೋಗ್ರಫಿ, ಬರವಣಿಗೆ, ಇಷ್ಟ. ನನಗೆ ಆಫೀಸಿನ ಕೆಲಸವೂ ಇಷ್ಟ. ಬರವಣಿಗೆ ನಾನು ಬೆಳೆಸಿಕೊಂಡ, ಪರರು ಗುರುತಿಸಿದ ಪರಿಣತಿ. ಮೂರನೆಯ ಪ್ರಶ್ನೆ- ಜಗತ್ತಿಗೆ ನನ್ನಿಂದ ಏನು ಬೇಕು? ನನ್ನ ಆಫೀಸಿನಲ್ಲಿ ಮೇಲೆ ಕೆಳಗೆನ್ನದೆ ಎಲ್ಲರಿಗೂ ಸಮಾನ ಗೌರವ, ಆದಷ್ಟು ಸಹಾಯ.

ಸ್ನೇಹ, ಸಂಬಂಧಗಳ ನಿಭಾವಣೆ. ಬರವಣಿಗೆ. ನಾಲ್ಕನೆಯ ಪ್ರಶ್ನೆ- ಬದುಕಿನ ವ್ಯವಸ್ಥೆಗೆ ವೃತ್ತಿ- ದುಡಿಮೆ. ಇದು ಯಾವುದೂ ಗುಣವಿಶೇಷವಲ್ಲ. ಇಲ್ಲಿ ಎಲ್ಲವೂ ಪ್ರಾಮಾಣಿಕವಾಗಿ, ನಮ್ಮ ನಮ್ಮ ಮಟ್ಟದಲ್ಲಿ ಎಷ್ಟು ಸಾಧ್ಯವೋ ಅಷ್ಟು. ಎಷ್ಟೇ ಇದ್ದರೂ ಹೆಚ್ಚಲ್ಲ ಕಡಿಮೆಯೂ ಅಲ್ಲ. ಆದರೆ ಪ್ರಶ್ನೆಗಳ ಉತ್ತರ ಬದಲಾಗಬಹುದು.

ಉದಾಹರಣೆಗೆ ನನ್ನ ಇವತ್ತಿನ ಬರವಣಿಗೆಯ ಪ್ರೀತಿ ನಾಳೆ ಮುಗಿದುಹೋಗಬಹುದು. ನೈಪುಣ್ಯ ಸವಕಳಿಯಾಗಬಹುದು, ಅಥವಾ ಬರಹ ಟ್ಠಠಿbZಠಿಛಿb ಅನಿಸಬಹುದು. ಪ್ರಸಿದ್ಧ ವಿeನ ಲೇಖಕರಂತೆ ನಾನ್ಸೆ ಬರೆಯಲು ಆರಂಭಿಸಿಬಿಡಬಹುದು! ಓದುಗರೇ ‘ಬರೆದದ್ದು ಸಾಕು ನಿಲ್ಲಿಸಿ’ ಅನ್ನಬಹುದು. ಬರವಣಿಗೆ ಯಾರಿಗೂ ಅವಶ್ಯಕವಿಲ್ಲ ಎಂದಾಗಬಹುದು.

ಹಾಗಾಗಿಯೇ ಈ ನಾಲ್ಕು ಪ್ರಶ್ನೆಗಳನ್ನು ಆಗಾಗ ಕೇಳಿಕೊಳ್ಳುತ್ತಲೇ ಇರಬೇಕು, ಉತ್ತರವನ್ನು ಕಂಡು ಕೊಳ್ಳುತ್ತಿರಬೇಕು ಎಂದದ್ದು. ಏಕೆಂದರೆ ಎಲ್ಲರಿಗೂ ಬದಲಾವಣೆ ಮಾತ್ರ ನಿರಂತರ. ಈ ನಾಲ್ಕು ಪ್ರಶ್ನೆಗಳನ್ನು ಈ ರೀತಿ ನಿಮ್ಮ ಮುಂದಿಡಲು ಕಾರಣವಿದೆ. ತಕ್ಷಣಕ್ಕೆ ಬದುಕನ್ನು ವರ್ತಮಾನಕ್ಕೆ ಎಳೆದುತರುವ ಶಕ್ತಿ ಇವಕ್ಕಿದೆ. ಈ ಪ್ರಶ್ನೆಗಳಿಗೆ ಸಂತೋಷಕ್ಕಿಂತ ಮುಗಿಲಾದ ಸಮಾಧಾನ ತರುವ ದಕ್ಷತೆಯಿದೆ.

ನಮ್ಮ ಬದುಕಿನಲ್ಲಿ ನಾವೇ ಭಾಗವಹಿಸುವಂತೆ ಮಾಡುವ ತಾಕತ್ತಿದೆ. ನೆನಪಿರಲಿ, ಬದುಕಿನ ಉದ್ದೇಶ ಯಾವತ್ತೂ ಫ್ಯಾನ್ಸಿ ಆಗಿರಬೇಕಿಲ್ಲ. ಉದ್ದೇಶ ಭ್ರಮೆಯಲ್ಲ, ಕನಸಲ್ಲ. ಈ ಪ್ರಶ್ನೆಗಳಿಗೆ ಉತ್ತರ ದೊಡ್ಡ ಘನಂದಾರಿಯಾಗಿರಬೇಕಿಲ್ಲ. ಉತ್ತರ ಹುಡುಕಿ ನಮ್ಮನ್ನೇ ನಾವು ಪುನರಾವಿಷ್ಕಾರ ಮಾಡಬೇಕೆಂದು ಕೂಡ ಇಲ್ಲ. ವಯಸ್ಸು, ವೃತ್ತಿ, ಸ್ಥಿತಿ ಏನೇ ಇರಬಹುದು, ಬದಲಾಗಬಹುದು. ಬದುಕಿನಂತೆ ಬದುಕಿನ ಉದ್ದೇಶಕ್ಕೂ ಬದಲಾಗುವ ಪೂರ್ಣ ಸ್ವಾತಂತ್ರ್ಯವಿದೆ!

ಸರಿ- ಈಗ ಬದುಕುವ ಉದ್ದೇಶ ತಿಳಿಯುವುದು ಹೇಗೆ ಎಂದು ತಿಳಿದಾಯ್ತು. ಆದರೆ ‘ಸಂತೃಪ್ತ’ ಬದುಕಿಗೆ ಉದ್ದೇಶ ತಿಳಿದರಷ್ಟೇ ಸಾಕೆ?

(ಮುಂದುವರಿಯುತ್ತದೆ)

ಶಿಶಿರ್‌ ಹೆಗಡೆ

View all posts by this author