ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raghava Sharma Nidle Column: ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಸೋದರಳಿಯನ ಅಕ್ರಮ ಕೃತ್ಯ, ಅವ್ಯವಹಾರಗಳನ್ನು ನೋಡಿಯೂ ಜಾಣಕುರುಡು ಪ್ರದರ್ಶಿಸು ತ್ತಿದ್ದ ಮಮತಾ ತಾನೊಬ್ಬ ಮಹಾನ್ ಜನನಾಯಕಿ ಎಂಬಂತೆ ಪೋಸು ಕೊಡುತ್ತಿದ್ದರು. ಆದರೆ, ಮೇ 4ರಂದು ಮಮತಾ ದೀದಿಯ ದರ್ಪ, ಅಹಂಕಾರವನ್ನು ಜನರೇ ಕೊನೆಗೊಳಿಸಿದರು. ದೆಹಲಿ ಯಲ್ಲಿರುವ ಇಂಡಿ ಮೈತ್ರಿಕೂಟದವರ ಮನೆಗಳಿಗೆ ಎಡತಾಕುತ್ತಾ ನಮ್ಮ ಟಿಎಂಸಿಯನ್ನು ರಕ್ಷಿಸಿ ಎಂದು ಮನವಿ ಮಾಡುವ ಸ್ಥಿತಿ ಈ ಮಮತಾರದ್ದು.

ಜನಪಥ

2026ರ ಮೇ 4ಕ್ಕೆ ಮುನ್ನ ಟಿಎಂಸಿ ಮುಖಂಡ, ಡೈಮಂಡ್ ಹಾರ್ಬರ್ ಜಿಲ್ಲೆಯ ಲೋಕಲ್ ಗ್ಯಾಂಗ್‌ ಸ್ಟರ್ ಜಹಾಂಗೀರ್ ಖಾನ್ ಬರುತ್ತಿದ್ದಾನೆ ಎಂದರೆ ಸ್ಥಳೀಯರು ನಡುಬಗ್ಗಿಸಿ ನಮಸ್ಕಾರ ಮಾಡುವುದು ಅನಿವಾರ್ಯವಾಗಿತ್ತು. ಹಲವು ವರ್ಷಗಳಿಂದ ಇಂಥದ್ದೊಂದುನ ದೃಶ್ಯ ಡೈಮಂಡ್ ಹಾರ್ಬರ್ ಜಿಲ್ಲೆಯಾದ್ಯಂತ ಸಾಮಾನ್ಯವಾಗಿತ್ತು. ಆದರೆ ಕಾಲಚಕ್ರ ಹೇಗೆ ತಿರುಗುತ್ತದೆ ನೋಡಿ... ಇದೇ ಗ್ಯಾಂಗ್‌ಸ್ಟರ್ ಜಹಾಂಗೀರ್ ಖಾನ್ ನನ್ನಿಂದ ತಪ್ಪಾಯಿತು, ಕ್ಷಮಿಸಿ ಬಿಡಿ ಎಂದು ಜನರ ಮುಂದೆ ಕೈ ಮುಗಿದು ಬೇಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ.

ಫಾಲ್ತಾ ವಿಧಾನಸಭೆ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿದ್ದ ಜಹಾಂಗೀರ್ ಖಾನ್, ಕ್ಷೇತ್ರದಾದ್ಯಂತ ಗೂಂಡಾಗಳ ನೆಟ್ʼವರ್ಕ್ ಸೃಷ್ಟಿಸಿಕೊಂಡು, ಭಯದ ವಾತಾವರಣ ಸೃಷ್ಟಿಸಿದ್ದವ. ಕೊಲೆ, ಸುಲಿಗೆ, ಹಿಂಸೆ, ಹಗಳ ಹಿಂದೆ ಜಹಾಂಗೀರ್ ಬೆಂಬಲಿಗ ಪಡೆಯ ಹೆಸರೇ ಕೇಳುತ್ತಿತ್ತು. ಬಡ ಆಟೋ ರಿಕ್ಷಾದವ ರಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದ ಕಿರಾತಕ ಈತ. ಅದಕ್ಕೆ ಪೊಲೀಸರದ್ದೂ ಮೌನ ಸಮ್ಮತಿ. ಆತನನ್ನು ಮತ್ತು ಬೆಂಬಲಿಗರನ್ನು ಪ್ರಶ್ನಿಸುವವರಿರಲಿಲ್ಲ.

ಇಂತಿಪ್ಪ ಜಹಾಂಗೀರ್ ಖಾನ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ ಕೂಡಲೇ ಫಾಲ್ತಾ ವಿಧಾನಸಭೆ ಮರು ಚುನಾವಣೆಯಲ್ಲಿ ನಾನು ಟಿಎಂಸಿಯಿಂದ ಸ್ಪರ್ಧಿಸುತ್ತಿಲ್ಲ ಎಂದು ದೂರ ಸರಿಯುತ್ತಾನೆ. ತಾನು ಬಂಧನಕ್ಕೀಡಾಗುತ್ತೇನೆ ಎಂದು ಗೊತ್ತಾಗಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಾನೆ.

ಅದೃಷ್ಟವಶಾತ್, ನಕ್ಸಲ್ಬಾರಿ ಪ್ರದೇಶದ ಪಾನಿಟಂಕಿ ಎಂಬಲ್ಲಿನ ಇಂಡೋ-ನೇಪಾಳ ಗಡಿಭಾಗದಲ್ಲಿ ಆತನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು, ಹೆಡೆಮುರಿ ಕಟ್ಟಿದ್ದಾರೆ. ಮೇ 4ರ ತನಕ ಟಿಎಂಸಿಯಲ್ಲಿ ಜಹಾಂಗೀರ್ ಖಾನ್ʼನಂತಹ ಹತ್ತಾರು ಮಂದಿ ಇದ್ದರು. ಈಗ ಬಹುಮಂದಿ ನಾಪತ್ತೆ ಯಾಗಿದ್ದಾರೆ. ಎಡಪಕ್ಷ, ಕಾಂಗ್ರೆಸ್, ಬಿಜೆಪಿ ಮೂರೂ ಪಕ್ಷಗಳ ಕಾರ್ಯಕರ್ತರಿಗೆ, ಅವರ ಕುಟುಂಬಸ್ಥ ರಿಗೆ ಹಿಂಸೆ ನೀಡುವುದು, ಲೂಟಿ ಹೊಡೆಯುವುದು, ಕಟ್ ಮನಿ ಸಂಗ್ರಹದ ಕುಕೃತ್ಯಗಳ ತೊಡಗಿದ್ದರು. ಈ ಕ್ರಿಮಿನಲ್‌ಗಳ ಮಹಾಪೋಷಕನಾಗಿದ್ದದ್ದು ಸಿಎಂ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ.

ಇದನ್ನೂ ಓದಿ: Raghava Sharma Nidle Column: ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

ಸೋದರಳಿಯನ ಅಕ್ರಮ ಕೃತ್ಯ, ಅವ್ಯವಹಾರಗಳನ್ನು ನೋಡಿಯೂ ಜಾಣಕುರುಡು ಪ್ರದರ್ಶಿಸು ತ್ತಿದ್ದ ಮಮತಾ ತಾನೊಬ್ಬ ಮಹಾನ್ ಜನನಾಯಕಿ ಎಂಬಂತೆ ಪೋಸು ಕೊಡುತ್ತಿದ್ದರು. ಆದರೆ, ಮೇ 4ರಂದು ಮಮತಾ ದೀದಿಯ ದರ್ಪ, ಅಹಂಕಾರವನ್ನು ಜನರೇ ಕೊನೆಗೊಳಿಸಿದರು. ದೆಹಲಿ ಯಲ್ಲಿರುವ ಇಂಡಿ ಮೈತ್ರಿಕೂಟದವರ ಮನೆಗಳಿಗೆ ಎಡತಾಕುತ್ತಾ ನಮ್ಮ ಟಿಎಂಸಿಯನ್ನು ರಕ್ಷಿಸಿ ಎಂದು ಮನವಿ ಮಾಡುವ ಸ್ಥಿತಿ ಈ ಮಮತಾರದ್ದು.

ಬಂಗಾಳದಲ್ಲಿ ಜಹಾಂಗೀರ್ ಮೇಲೆ ಹತ್ತು ಹಲವು ಕೇಸುಗಳಿವೆ. ಟಿಎಂಸಿ ನಾಯಕತ್ವದಿಂದಾಗಿಯೇ ಆತನಿಗೆ ರಾಜಕೀಯ ರಕ್ಷಣೆ ಸಿಗುತ್ತಿತ್ತು. ಆದರೆ, ಇನ್ನು ಹಾಗಿಲ್ಲ. ಕೆಲ ವರ್ಷ ಆತನಿಗೆ ಜೈಲೂಟ ಗ್ಯಾರಂಟಿಯಾಗಿದೆ. ಮತ್ತೊಂದೆಡೆ ಅಭಿಷೇಕ್ ಬ್ಯಾನರ್ಜಿ ಕೂಡ ಹಣಕಾಸು ಅವ್ಯವಹಾರ ಪ್ರಕರಣ ದಲ್ಲಿ ಆರೋಪಿಯಾಗಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದಿನ ಶಾಸಕರ ನಕಲಿ ಸಹಿ ಪ್ರಕರಣದಲ್ಲೂ ಆರೋಪಿಯಾಗಿರುವ ಅಭಿಷೇಕ್, ಕಂಬಿ ಹಿಂದೆ ಕೂರುವ ದಿನಗಳು ದೂರದಲ್ಲಿಲ್ಲ ಅನಿಸುತ್ತಿದೆ.

ಪರಿಸ್ಥಿತಿ ಹೀಗಿರುವಾಗ, ಜಹಾಂಗೀರ್ ಜನರ ಮುಂದೆ ಕೈ ಮುಗಿಯಲೇ ಬೇಕು, ತನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಕೇಳುತ್ತಾ, ಅವರ ಮುಂದೆ ನಡು ಬಗ್ಗಿಸಲೇಬೇಕಾಗಿದೆ. ಇದೇ ಜಹಾಂಗೀರ್ ಡೈಮಂಡ್ ಹಾರ್ಬರ್, ಫಾಲ್ತಾ ಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದಾಗ ನಡುಬಗ್ಗಿಸಿದ ಜನ ಈಗ ಚಪ್ಪಲಿ ತೋರಿಸುವ ಧೈರ್ಯ ಮಾಡುವಷ್ಟು ಬದಲಾವಣೆಯಾಗಿದೆ ಎಂದರೆ ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಆತ ಪೊಲೀಸರೊಂದಿಗೆ ಬೀದಿ ಬೀದಿಗಳಲ್ಲಿ ಪರೇಡ್ ಮಾಡುತ್ತಿರುವ ದೃಶ್ಯಗಳೇ ಬದಲಾವಣೆಗೆ ಹಾಕುವ ಮತಕ್ಕಿರುವ ಶಕ್ತಿಗೆ ಸಾಕ್ಷಿ. ಬಂಗಾಳದ ಬೆಳವಣಿಗೆ ಬಗ್ಗೆ ಹಾಗೂ ಸ್ಥಳೀಯ ಮಟ್ಟದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಡೈಮಂಡ್ ಹಾರ್ಬರ್ʼನಲ್ಲಿ ಪರಿಚಯವಾಗಿದ್ದ ರಾಜಕೀಯ ಕಾರ್ಯಕರ್ತರೊಬ್ಬರಿಗೆ ಫೋನ್ ಮಾಡಿದ್ದೆ.

6 ok

ಅವರ ಪ್ರಕಾರ, ಎಗ್ಗಿಲ್ಲದೆ ವಸೂಲಿ ದಂಧೆ ಮಾಡುತ್ತಿದ್ದ ಜಹಾಂಗೀರ್ ಬೆಂಬಲಿಗರಲ್ಲಿ ಬಹುಪಾಲು ಈಗ ನಾಪತ್ತೆಯಾಗಿzರಂತೆ. ಟಿಎಂಸಿ ಅಧಿಕಾರದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತರಿಗೆ, ಜನ ಸಾಮಾನ್ಯ ರಿಗೆ ತೊಂದರೆ ಕೊಡುತ್ತಾ, ಅಕ್ರಮವಾಗಿ ಸಂಪಾದಿಸಿದ್ದ ವಸೂಲಿ ಹಣವನ್ನು ಕೂಡ ಅವರು ಹಿಂತಿರುಗಿಸುತ್ತಿದ್ದಾರಂತೆ.

ಬಿಜೆಪಿಗೆ ಮತ ಹಾಕಿದ್ದರು ಎಂಬ ಕಾರಣಕ್ಕಾಗಿ ಆ ಕುಟುಂಬಗಳಿಗೆ ಹಿಂಸೆ ನೀಡುತ್ತಿದ್ದ, ಮನೆಗಳಿಗೆ ದಾಳಿ ಮಾಡುತ್ತಿದ್ದ ಟಿಎಂಸಿ ಕಾರ್ಯಕರ್ತರು ತಲೆಮರೆಸಿಕೊಂಡು ಓಡಾಡುತ್ತಿದ್ದಾರಂತೆ. ಮತ್ತೊಂ ದಿಷ್ಟು ಮಂದಿ ಊರೇ ಬೇಡ ಎಂದು ಬೇರೆಡೆಗೆ ಹೋಗಿದ್ದಾರಂತೆ... ಕಾಲಚಕ್ರ ಹೇಗೆ ತಿರುಗುತ್ತದೆ ನೋಡಿ. ೨೦೨೧ರಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ಅನೇಕ ಮಂದಿ, ಟಿಎಂಸಿ ನಾಯಕರ ಆಕ್ರಮಣದಿಂದಾಗಿ ಅನಿವಾರ್ಯವಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋದರು.

ಊರು ಬಿಡಲು ಸಾಧ್ಯವಾಗದವರು ಹಿಂಸೆ, ನೋವನ್ನು ನುಂಗಿಕೊಂಡು ಬದುಕಿದರು. ಈಗ ಜಹಾಂಗೀರ್ ಬರ್ಮುಡ ಚಡ್ಡಿ, ಕಪ್ಪು ಟೀ ಶರ್ಟ್ ಧರಿಸಿ ಬೀದಿ ಬೀದಿಗಳಲ್ಲಿ ಕೈ ಮುಗಿಯುತ್ತಾ, ಬೆರಳುಗಳಲ್ಲಿ ಎರಡೂ ಕಿವಿಗಳನ್ನು ಮುಟ್ಟಿ ನನ್ನದು ತಪ್ಪಾಯ್ತು ಎಂದು ಅಂಗಲಾಚುವುದನ್ನು ನೋಡುತ್ತಾ ಈ ಸಂತ್ರಸ್ತರೆಲ್ಲರೂ ಸಂಭ್ರಮಿಸುತ್ತಿzರೆ.

ಹೀಗೆ ಪರೇಡ್ ಮಾಡಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಇದು ಸಂವಿಧಾನಕ್ಕೆ ಅವಮಾನವಲ್ಲವೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಆದರೆ, ಬಂಗಾಳವನ್ನು ಅರ್ಥ ಮಾಡಿ ಕೊಳ್ಳಬೇಕೆಂದರೆ ಬಂಗಾಳದ ಒಳಹೊಕ್ಕು ನೋಡಬೇಕು. ಬಂಗಾಳದ ಸಾಮಾಜಿಕ- ರಾಜಕೀಯ ಪರಿಸ್ಥಿತಿ ಬೇರೆ ರಾಜ್ಯಗಳಿಗಿಂತ ಭಿನ್ನ. ಕ್ರೂರತೆ ಯಾವತ್ತೂ ಉತ್ತುಂಗದ ಇತ್ತು.

ದುರದೃಷ್ಟವಶಾತ್, ಹೆಚ್ಚಿನವು ವರದಿಯಾಗಲಿಲ್ಲ. ಅಲ್ಲಿ ಕಾನೂನು-ಸುವ್ಯವಸ್ಥೆ ಇದ್ದದ್ದು ಕಾಗದ ದಲ್ಲಿ ಮಾತ್ರ. ಆದರೆ, ಪರಿವರ್ತನೆಗಾಗಿ ಬಿದ್ದ ಜನರ ಒಂದೊಂದು ಮತ ಈಗ ಎಲ್ಲವನ್ನೂ ಬದಲಿಸುತ್ತಿದೆ. ಮತದಾರರಿಂದ ತಿರಸ್ಕೃತಗೊಂಡ ಟಿಎಂಸಿ ಪೂರ್ತಿ ಬೆತ್ತಲಾಗಿದೆ. ಜಹಾಂಗೀರ್ ಖಾನ್ ಹೇಗೆ ತನ್ನ ಉಳಿವಿಗಾಗಿ ಜನ ಸಾಮಾನ್ಯರ ಮುಂದೆ ಕೈ ಮುಗಿಯುತ್ತಿದ್ದಾನೋ ಹಾಗೆಯೇ ಟಿಎಂಸಿಯ ರೆಬೆಲ್ ಶಾಸಕರು, ಸಂಸದರು ತಮ್ಮ ರಾಜಕೀಯ ಉಳಿವಿಗಾಗಿ ಬಂಡೆದ್ದಿದ್ದಾರೆಯೇ ಹೊರತು ಎನ್‌ಡಿಎ ಬೆಂಬಲಿಸಿ ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ ಎನ್ನುವುದೆ ಅವಕಾಶವಾದಿ ರಾಜಕಾರಣದ ಒಂದು ಭಾಗವಷ್ಟೇ.

ರಾಜ್ಯ ಅಭಿವೃದ್ಧಿಯಾಗಬೇಕು ಎಂಬ ನೈಜ ಕಾಳಜಿ ಇದ್ದಿದ್ದರೆ ಅವರು ಮಮತಾ, ಅಭಿಷೇಕ್ ವಿರುದ್ಧ ಎಂದೋ ಬಂಡೇಳಬೇಕಿತ್ತು, ಪಕ್ಷ ಬಿಟ್ಟು ಹೊರ ನಡೆಯಬೇಕಿತ್ತು. ಟಿಎಂಸಿಯ ೨೮ ಸಂಸದರಲ್ಲಿ20 ಮಂದಿ ಟಿಎಂಸಿ ಪಕ್ಷವನ್ನು ತ್ರಿಪುರಾ ಮೂಲದ ಎನ್‌ಸಿಪಿಐ ಎಂಬ ಸಣ್ಣ ಪಕ್ಷದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ.

ಒಂದು ವೇಳೆ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದರೆ ಈ 20 ಸಂಸದರು ಟಿಎಂಸಿ ಬಿಡುತ್ತಿದ್ದರೇ? ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಬುಸುಗುಡುವ ಧೈರ್ಯ ಪ್ರದರ್ಶಿಸುತ್ತಿದ್ದರೇ? ಇದೇ ಮಮತಾ ಬ್ಯಾನರ್ಜಿಯನ್ನು ಅವರು ಕಾಳಿ ಮಾತೆಗೆ ಹೋಲಿಸುತ್ತಾ ವ್ಯಕ್ತಿಪೂಜೆ ಮಾಡುತ್ತಿರಲಿಲ್ಲವೇ? ಹಾಗಿದ್ದರೆ, ಚುನಾವಣೆ ಸೋತ ಕೂಡಲೇ ಕಾಳಿಮಾತೆ ಬೇಡವಾದಳೇ? ಮಮತಾ ಬ್ಯಾನರ್ಜಿ ಪ್ರಧಾನಿ ಸ್ಥಾನಕ್ಕೆ ಅರ್ಹ ಎಂದು ಪುಂಗಿ ಊದುತ್ತಿದ್ದ ನಾಯಕರು ಫಲಿತಾಂಶದ ನಂತರ ವಾಸ್ತವ ಜಗತ್ತಿಗೆ ಬಂದರೇ? ಬಂಗಾಳದ ವಾಸ್ತವ ಏನೆಂದರೆ ; ಬಿಜೆಪಿ, ಕೇಂದ್ರ ಸರಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡುವ ಭರದಲ್ಲಿ ಹಿಂಸಾಪ್ರೇರಿತ ರಾಜಕಾರಣ ಅನುಮೋದಿಸುತ್ತಿದ್ದ ಟಿಎಂಸಿಯ ಈ ಬಂಡಾಯ ಸಂಸದ-ಶಾಸಕರಿಗೆ, ಜನರು ಚೋರ್-ಚೋರ್ ಎನ್ನುತ್ತಾ ಮೊಟ್ಟೆಗಳನ್ನೆಸೆದು ಸ್ವಾಗತಿಸುತ್ತಿರುವುದರಿಂದ, ತಮ್ಮ ಕ್ಷೇತ್ರಗಳಿಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಮಾಡಿದ್ದುಣ್ಣೋ ಮಹರಾಯ ಎಂಬ ಸ್ಥಿತಿ ಅವರದ್ದು. ಸಾಮೂಹಿಕ ಅತ್ಯಾಚಾರಗಳಾದಾಗ, ಹತ್ಯೆ ಗಳಾದಾಗ, ಹಿಂಸೆಯಿಂದ ಬೇಸತ್ತು ಬಡವರು ವಲಸೆ ಹೋದಾಗ ತಮ್ಮ ಪಕ್ಷ, ನಾಯಕಿ, ಗೂಂಡಾ ಗಳನ್ನು ಸಮರ್ಥಿಸುತ್ತಿದ್ದ ಇದೇ ಟಿಎಂಸಿ ಶಾಸಕ, ಸಂಸದರಿಗೆ ಬದಲಾದ ರಾಜಕೀಯ ಸನ್ನಿವೇಶ ಪ್ರತಿಕೂಲ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸ್ವಕ್ಷೇತ್ರದ ಉಳಿಗಾಲವಿಲ್ಲ. ಆಡಳಿತ ವರ್ಗದ ಬೆಂಬಲವೂ ಇಲ್ಲ. ಹೀಗಾಗಿ, ರಾಜಕೀಯ ರಕ್ಷಣೆ ಬೇಕೆಂದರೆ, ಅಸ್ತಿತ್ವ ಉಳಿಯಬೇಕೆಂದರೆ ಟಿಎಂಸಿ ತೊರೆಯುವುದು ಅನಿವಾರ್ಯ.

ಅಷ್ಟಕ್ಕೂ ಇವರ್ಯಾರೂ ಸೈದ್ಧಾಂತಿಕ ಹಿನ್ನೆಲೆ, ಬದ್ಧತೆ ಅಥವಾ ಸ್ಪಷ್ಟ ವೈಚಾರಿಕ ನಿಲುವು, ದೃಷ್ಟಿಕೋನಗಳನ್ನಿಟ್ಟುಕೊಂಡು ಟಿಎಂಸಿಯಲ್ಲಿ ರಾಜಕಾರಣ ಮಾಡಿದವರಲ್ಲ. ಟಿಎಂಸಿ ವ್ಯಕ್ತಿ ಕೇಂದ್ರಿತ ಪಕ್ಷವಾಗಿತ್ತೇ ವಿನಃ ಸಂಘಟನೆ ಅಥವಾ ಕೇಡರ್ ಹಿನ್ನೆಲೆ ಅದಕ್ಕಿರಲಿಲ್ಲ. ಟಿಎಂಸಿ ನಾಯಕರ ಮಹಾವಲಸೆಗೆ ಕಾರಣವೂ ಇದೇ. ಅಧಿಕಾರ ಮತ್ತು ರಕ್ಷಣೆ ಇದ್ದಲ್ಲಿ ಅವರಿರುತ್ತಾರೆ.

2021ರ ಚುನಾವಣೆ ವೇಳೆ ಬಿಜೆಪಿ ಸೇರಿದ್ದ ಅನೇಕ ಟಿಎಂಸಿ ಮುಖಂಡರು, ಚುನಾವಣೆಯಲ್ಲಿ ಬಿಜೆಪಿ ಸೋತ ಕೂಡಲೇ ಟಿಎಂಸಿಗೇ ವಾಪಸಾಗಿದ್ದರು. ಹಾಗಾಗಿ, ರೆಬೆಲ್‌ಗಳೆಂದು ಗುರುತಿಸಿಕೊಂಡು ಸಂಚಲನ ಎಬ್ಬಿಸುತ್ತಿರುವುದು ವಿಲಕ್ಷಣ ಬೆಳವಣಿಗೆಯೇನಲ್ಲ. ಇದು ನಿರೀಕ್ಷಿತ. ಮಮತಾ ಬ್ಯಾನರ್ಜಿ ನೆರಳಿನಂತಿದ್ದ, ಭವಿಷ್ಯದ ಟಿಎಂಸಿ ನಾಯಕಿ ಎಂದೇ ಪ್ರಸಿದ್ಧಿಯಾಗಿದ್ದ, ಚುನಾವಣೆ ಸಂದರ್ಭದಲ್ಲಿ ಪಿಎಂ ಮೋದಿ,ಗೃಹ ಸಚಿವ ಅಮಿತ್ ಶಾ ಸೇರಿ ಎಲ್ಲರನ್ನೂ ವ್ಯಂಗ್ಯೋಕ್ತಿಗಳ ಮೂಲಕ ಟೀಕಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದ ಜಾಧವಪುರ ಸಂಸದೆ ಸಾಯೋನಿ ಘೋಷ್ ಕೂಡ ರೆಬೆಲ್ ಬಣ ಸೇರಿಕೊಂಡು ಬಿಜೆಪಿ ಮಂತ್ರ ಜಪಿಸುತ್ತಿದ್ದಾರೆ.

ಕನಿಷ್ಠ ನಾಚಿಕೆಯೂ ಇಲ್ಲವೇ ಎಂದು ಹೀಗಳೆಯುತ್ತಿರುವ ಜನರ ಮಧ್ಯೆ ಮುಖ ಮುಚ್ಚಿಕೊಂಡು ಬದುಕುವ ಸ್ಥಿತಿ. ಸಾಯೋನಿ ಘೋಷ್ ವಿಮಾನ ನಿಲ್ದಾಣವೊಂದರಿಂದ ಮುಖಕ್ಕೆ ವಸ್ತ್ರ ಧರಿಸಿ ಹೊರಬರುತ್ತಿದ್ದ ದೃಶ್ಯವೇ ಇದಕ್ಕೆ ಸಾಕ್ಷಿ.

ಬಹುಶಃ ಈ ಎಲ್ಲಾ ಕಾರಣಕ್ಕಾಗಿಯೇ 2026ರ ಮೇ 4 ಇತಿಹಾಸದ ಪುಟಗಳಲ್ಲಿ ದಾಖಲಾಗಲೇ ಬೇಕಾದ ದಿನ. ಬಂಗಾಳ ಫಲಿತಾಂಶ ಹೊರ ಬಿದ್ದ ದಿನದಿಂದ ದೇಶದ ರಾಜಕಾರಣ ಹತ್ತಾರು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಒಂದು ಕಡೆ ಬಂಗಾಳದಲ್ಲಿ ನೆಲೆಸಿದ್ದ ಬಾಂಗ್ಲಾದ ಸಾವಿರಾರು ಅಕ್ರಮವಾಸಿಗಳು ತಮ್ಮ ಮೂಲ ದೇಶಕ್ಕೆ ವಾಪಸಾಗುತ್ತಿದ್ದರೆ, ಟಿಎಂಸಿ ರಾಜಕೀಯ ಅವಸಾನ ದಂಚಿಗೆ ಬಂದು ನಿಂತಿದೆ. 15 ವರ್ಷ ಬಂಗಾಳದಲ್ಲಿ ಸಿಂಹಿಣಿಯಂತೆ ಮೆರೆದಿದ್ದ ಮಮತಾ ಬ್ಯಾನರ್ಜಿ, ಸಂಗಡಿಗರ ದ್ರೋಹದಿಂದಾಗಿ ಯಾರಿಗೂ ಬೇಡದವರಾಗಿದ್ದಾರೆ. ಅಧಿಕಾರಕ್ಕಾಗಿ ಮಮತಾ ಮತ್ತು ಸೋದ ರಳಿಯ ಅಭಿಷೇಕ್ ಜತೆ ಗುರುತಿಸಿಕೊಂಡಿದ್ದ ಮಂದಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಹಾದಿ ಕಂಡುಕೊಂಡಿದ್ದಾರೆ.

ಮತದಾರರು ಟಿಎಂಸಿಯನ್ನು ಸಂಪೂರ್ಣ ತಿರಸ್ಕರಿಸಿ ಬಿಜೆಪಿಯನ್ನೇ ನೆಚ್ಚಿಕೊಂಡದ್ದರಿಂದ, ಟಿಎಂಸಿ ರೆಬೆಲ್ ಬಣದ ನಾಯಕರನ್ನು ತಕ್ಷಣವೇ ಪಕ್ಷಕ್ಕೆ ಸೇರಿಸಿಕೊಂಡರೆ ಬಿಜೆಪಿ ಜನಾಕ್ರೋಶ ಹಾಗೂ ಪಕ್ಷದ ಕಾರ್ಯಕರ್ತರ ಆಕ್ರೋಶ ಎದುರಿಸಬೇಕಾದೀತು. ಹಾಗಾಗಿಯೇ, ಅವರೆಲ್ಲರೂ ಎನ್ಸಿಪಿಐ ಎಂಬ ಸಣ್ಣ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಮೈತ್ರಿಕೂಟದ ಭಾಗವಾಗು ತ್ತಿದ್ದಾರೆ. ಸದ್ಯಕ್ಕೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಬಿಜೆಪಿಯನ್ನು ಅನುಮೋದಿಸು ತ್ತಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ಟಿಕೆಟ್‌ನಿಂದಲೇ ಬಂಗಾಳದಲ್ಲಿ ಚುನಾವಣೆ ಸ್ಪರ್ಧಿಸಬೇಕು ಎನ್ನುವ ಆಶಯ ಇಟ್ಟುಕೊಂಡೇ ಕೇಸರಿ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಅವರ ಪಾಲಿಗೆ ಟಿಎಂಸಿ ಮುಗಿದ ಅಧ್ಯಾಯ. ಹೆಚ್ಚುಕಡಿಮೆ ಬಂಗಾಳದಲ್ಲೂ ಟಿಎಂಸಿ ಅಧ್ಯಾಯ ಕೊನೆಗೊಂಡಂತೆಯೇ.

ಲಾಸ್ಟ್ ಸಿಪ್ : ಜನಸಮೂಹದಲ್ಲಿ ಸದ್ದೇ ಮಾಡದ ಒಬ್ಬನೇ ಒಬ್ಬ ಶಾಸಕ ಅಥವಾ ಸಂಸದ ಹೊಂದಿರದ ಎನ್‌ಸಿಪಿಐ ಪಕ್ಷವು, ರಾತ್ರಿ ಹಗಲಾಗುವುದರೊಳಗೆ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿ ಕೂಟದ ಎರಡನೇ (ಬಿಜೆಪಿ ನಂತರ) ಅತಿದೊಡ್ಡ ಪಕ್ಷವಾಗುತ್ತಿದೆ! ಚುನಾವಣೆಯಲ್ಲಿ ಸ್ಪರ್ಧಿಸದೆಯೇ 20 ಸಂಸದರನ್ನೊಳಗೊಂಡು, ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಬಳಿಕ ಭಾರತದ 5ನೇ ಅತಿ ದೊಡ್ಡ ಪಕ್ಷ ಎಂಬ ಖ್ಯಾತಿಗೆ ಪಾತ್ರವಾಗುತ್ತಿದೆ.

ಕೆ. ರಾಘವ ಶರ್ಮ ನಿಡ್ಲೆ

View all posts by this author