Vishweshwar Bhat Column: ಲಗೇಜ್ ನಿರ್ವಹಣೆ
ಜಪಾನಿನಲ್ಲಿ ಒಂದು ವಿಶೇಷ ಲಗೇಜ್ ಸರ್ವಿಸ್ ಇದೆ. ನಾನು ಕ್ಯೊಟೋದಲ್ಲಿ ಉಳಿದು ಕೊಂಡ ಹೋಟೆಲಿನಲ್ಲಿಯೇ ನನ್ನ ಬ್ಯಾಗುಗಳನ್ನು ನೀಡಿದರೆ ಹಾಗೂ ಮುಂದೆ ನಾನು ಉಳಿಯ ಲಿರುವ ಟೋಕಿಯೋ ಹೋಟೆಲಿನ ವಿವರಗಳನ್ನು ಕೊಟ್ಟರೆ, ಅದೇ ದಿನ ಸಾಯಂಕಾಲ ಅಥವಾ ಮರು ದಿನ ಬೆಳಗಿನ ಹೊತ್ತಿಗೆ ಬ್ಯಾಗುಗಳು ಬಂದಿರುತ್ತವೆ.


ಜಪಾನಿನಲ್ಲಿ ನನಗೆ ಇಷ್ಟವಾದ ಸೇವೆಗಳ ಪೈಕಿ ಅಂದ್ರೆ ಲಗೇಜುಗಳ ಸಾಗಾಟ. ನೀವು ಅಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ, ಜತೆಯಲ್ಲಿ ನಿಮ್ಮ ಬ್ಯಾಗು, ಸೂಟ್‌ಕೇಸುಗಳನ್ನು ಹೊತ್ತು ಕೊಂಡು ಹೋಗಬೇಕಿಲ್ಲ. ನಾವು ಕ್ಯೊಟೋದಿಂದ ಟೋಕಿಯೋಕ್ಕೆ ಹೋಗುವವರಿದ್ದೆವು. ನನ್ನ ಜತೆ ಮಣಭಾರದ ಎರಡು ಬ್ಯಾಗುಗಳಿದ್ದವು. ಅವನ್ನು ಹೋಟೆಲಿನಿಂದ ಕಾರಿನಲ್ಲಿ ಟ್ಯಾಕ್ಸಿ ಯಲ್ಲಿ ಹಾಕಿಕೊಂಡು, ಬುಲೆಟ್ ಟ್ರೇನ್ ಸ್ಟೇಷನ್ ತನಕ ತಳ್ಳಿಕೊಂಡು, ಅನಂತರ ಟ್ರೇನ್ ಬರುತ್ತಿರು ವಂತೆ, ಆ ಬ್ಯಾಗುಗಳನ್ನು ಬೋಗಿಯೊಳಗೆ ತೂರಿಸಿ, ನಂತರ ಆ ಎರಡು ಬ್ಯಾಗುಗಳನ್ನು ಜನನಿಬಿಡ ಬೋಗಿಯಲ್ಲಿ ಇಡುವುದು, ಟೋಕಿಯೋ ಬರುತ್ತಿರುವಂತೆ ಅವುಗಳನ್ನು ಇಳಿಸಿ ಕೊಂಡು, ಪುನಃ ಟ್ಯಾಕ್ಸಿಯಲ್ಲಿ ಹೇರಿಕೊಂಡು ಹೋಟೆಲಿಗೆ ತೆಗೆದುಕೊಂಡು ಹೋಗುವುದು ನಿಜಕ್ಕೂ ಅತ್ಯಂತ ಯಾತನಾಮಯ!
ಆದರೆ ಜಪಾನಿನಲ್ಲಿ ಒಂದು ವಿಶೇಷ ಲಗೇಜ್ ಸರ್ವಿಸ್ ಇದೆ. ನಾನು ಕ್ಯೊಟೋದಲ್ಲಿ ಉಳಿದು ಕೊಂಡ ಹೋಟೆಲಿನಲ್ಲಿಯೇ ನನ್ನ ಬ್ಯಾಗುಗಳನ್ನು ನೀಡಿದರೆ ಹಾಗೂ ಮುಂದೆ ನಾನು ಉಳಿಯ ಲಿರುವ ಟೋಕಿಯೋ ಹೋಟೆಲಿನ ವಿವರಗಳನ್ನು ಕೊಟ್ಟರೆ, ಅದೇ ದಿನ ಸಾಯಂಕಾಲ ಅಥವಾ ಮರುದಿನ ಬೆಳಗಿನ ಹೊತ್ತಿಗೆ ಬ್ಯಾಗುಗಳು ಬಂದಿರುತ್ತವೆ.
ಇದನ್ನೂ ಓದಿ: Vishweshwar Bhat Column: 60 ವರ್ಷಗಳ ಹಿಂದೆ ಅಲ್ಲಿ ಒಂದು ರೋಬೋಟ್ ಇತ್ತು, ಇಂದು ನಾಲ್ಕೂವರೆ ಲಕ್ಷ !
ಆ ದಿನ ಸಾಯಂಕಾಲ ಕಳೆಯಲು ಬೇಕಾದ ವಸ, ವಸ್ತುಗಳನ್ನು ಬ್ಯಾಕ್ ಪ್ಯಾಕ್ ನಲ್ಲಿ ಇಟ್ಟು ಕೊಂಡರೆ ಸಾಕು. ಇದರಿಂದ ನನಗಾದ ಅನುಕೂಲ ಅಷ್ಟಿಷ್ಟಲ್ಲ. ಆ ಎರಡು ಬ್ಯಾಗುಗಳನ್ನು ಇಡೀ ದಿನ ಪ್ರಯಾಣದುದ್ದಕ್ಕೂ ಹೊತ್ತುಕೊಂಡು ಹೋಗಬೇಕಾದ ಅಗತ್ಯವಿಲ್ಲ ಮತ್ತು ನನ್ನ ಬ್ಯಾಗು ಗಳಿಂದ ಸಾರ್ವಜನಿಕ ಸಾರಿಗೆ ವಾಹನ ಅಥವಾ ಬುಲೆಟ್ ಟ್ರೇನಿನಲ್ಲಿ ಪಯಣಿಸುವ ಇತರರಿಗೆ ತೊಂದರೆ ಆಗುವುದಿಲ್ಲ.
ನನ್ನ ಹಾಗೆ ಟ್ರೇನಿನಲ್ಲಿ ಇರುವ ಇತರ ಪ್ರಯಾಣಿಕರು ಕೈಯಲ್ಲಿ ಎರಡೆರಡು ಬ್ಯಾಗುಗಳನ್ನು ಹಿಡಿದುಕೊಂಡು ಬಂದರೆ, ಬೋಗಿಗಳಲ್ಲಿರುವ ಪ್ರಯಾಣಿಕರಿಗೆ ಅದೆಷ್ಟು ತೊಂದರೆ ಆಗಬಹುದು, ಊಹಿಸಿ. ಇದರಿಂದ ರೈಲು ಪ್ರಯಾಣಿಕರಿಗೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ. ನಮ್ಮ ಬ್ಯಾಗು ಗಳನ್ನು ಒಂದು ನಗರದಲ್ಲಿರುವ ಹೋಟೆಲಿನಿಂದ ಮತ್ತೊಂದು ಊರಿನಲ್ಲಿರುವ ಹೋಟೆಲಿಗೆ ಸಾಗಿಸುವ ಕೆಲಸವನ್ನು ಹೋಟೆಲೇ ಮಾಡುತ್ತದೆ.
ಅಂತಾರಾಷ್ಟ್ರೀಯ ಪ್ರಯಾಣಿಕರು ಎದುರಿಸುವ ಇನ್ನೊಂದು ಸಮಸ್ಯೆಯೂ ಬ್ಯಾಗುಗಳದೇ. ನೀವು ಬೆಳಗ್ಗೆ ಹನ್ನೆರಡು ಗಂಟೆಗೆ ಹೋಟೆಲ್ ರೂಮನ್ನು ಖಾಲಿ ಮಾಡುತ್ತೀರಿ ಎಂದಿಟ್ಟು ಕೊಳ್ಳಿ. ನಿಮ್ಮ ವಿಮಾನ ಬೆಳಗಿನ ಜಾವ ಎರಡೋ, ಮೂರೋ ಗಂಟೆಗೆ ಇರುತ್ತದೆ. ಅಲ್ಲಿ ತನಕ ನಿಮ್ಮ ಬ್ಯಾಗು ಗಳನ್ನು ಏನು ಮಾಡುವುದು? ಜತೆಯಲ್ಲಿ ಹೊತ್ತುಕೊಂಡು ತಿರುಗಾ ಡುವುದು ಸಾಧ್ಯವೇ ಇಲ್ಲ. ಅದಕ್ಕಾಗಿ ರೈಲು ನಿಲ್ದಾಣ, ಮಾಲ್, ಹೋಟೆಲ್, ಶಾಪಿಂಗ್ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ಬ್ಯಾಗ್ ಸ್ಟೋರೇಜ್ ಕೇಂದ್ರಗಳನ್ನು ತೆರೆಯಲಾಗಿದೆ.
ಅಲ್ಲಿಗೆ ಹೋಗಿ ಬ್ಯಾಗುಗಳನ್ನು ಇಟ್ಟು ಲಾಕ್ ಮಾಡಿ ಭದ್ರವಾಗಿ ಇಡಬಹುದು. ಅಲ್ಲಿನ ರೈಲು ನಿಲ್ದಾಣಗಳು, ಶಾಪಿಂಗ್ ಮಾಲ್ ಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಅಪಾರ ಸಂಖ್ಯೆಯಲ್ಲಿ ಲಾಕರ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಲಾಕರ್‌ಗಳು ವಿವಿಧ ಗಾತ್ರಗಳಲ್ಲಿ ಲಭ್ಯವಿದ್ದು, ದೊಡ್ಡ ಸೂಟ್ ಕೇಸ್‌ನಿಂದ ಹಿಡಿದು ಚಿಕ್ಕ ಬ್ಯಾಗ್‌ಗಳವರೆಗೆ ಇಡಬಹುದು. ಕೀ ಕಾರ್ಡ್ ಅಥವಾ ಪಿನ್ ಕೋಡ್ ನಿಯಂತ್ರಿತ ಲಾಕರ್‌ಗಳು ಸುರಕ್ಷಿತವಾಗಿರುತ್ತವೆ.
ಇವನ್ನು ದಿನಪೂರ್ತಿ ಅಥವಾ ಕೆಲವು ಗಂಟೆಗಳವರೆಗೆ ಬಾಡಿಗೆಗೆ ಪಡೆಯಬಹುದು. ಜಪಾನ್‌ನಲ್ಲಿ ’ತಾಕ್ಯೂ ಹೈಬಿನ’ ಎಂಬ ವಿಶಿಷ್ಟ ಪಾರ್ಸೆಲ್ ಡೆಲಿವರಿ ಸೇವೆ ಜನಪ್ರಿಯ ವಾಗಿದೆ. ಪ್ರವಾಸಿಗರು ತಮ್ಮ ಹೋಟೆಲ್‌ನಿಂದ ವಿಮಾನ ನಿಲ್ದಾಣ ಅಥವಾ ಇತರ ಸ್ಥಳ ಗಳಿಗೆ ತಮ್ಮ ಬ್ಯಾಗ್ ಕಳುಹಿಸ ಬಹು ದಾಗಿದೆ.
ಅನೇಕರಿಗೆ ಪ್ರವಾಸದ ವೇಳೆ ಹೋಟೆಲ್‌ನಲ್ಲಿ ಬ್ಯಾಗ್ ಇಟ್ಟುಕೊಳ್ಳುವುದು ಅತಿ ಸುಲಭ ವಾದ ಆಯ್ಕೆಯಾಗುತ್ತದೆ. ಜಪಾನಿನ ಹೋಟೆಲ್‌ಗಳಲ್ಲಿ ಬ್ಯಾಗ್ ಶೇಖರಣಾ ಸೇವೆ ಅತ್ಯಂತ ಪರಿಣಾಮ ಕಾರಿಯಾಗಿ ನಿರ್ವಹಿಸಲಾಗುತ್ತದೆ. ಅಲ್ಲಿನ ಹಲವಾರು ಶಾಪಿಂಗ್ ಮಾಲ್ ಗಳಲ್ಲಿ ಖರೀದಿಸಿದ ವಸ್ತುಗಳನ್ನು ನಿಮ್ಮ ಹೋಟೆಲ್ ಅಥವಾ ಗಮ್ಯಸ್ಥಾನಕ್ಕೆ ನೇರವಾಗಿ ತಲುಪಿಸುವ ವ್ಯವಸ್ಥೆಯಿದೆ. ಈ ಸೇವೆಯು ಪ್ರವಾಸಿಗರಿಗೆ ಖರೀದಿಸಿದ ವಸ್ತುಗಳನ್ನು ಹೊತ್ತೊಯ್ಯುವ ತೊಂದರೆಯಿಂದ ತಪ್ಪಿಸು ತ್ತದೆ.
ಜಪಾನ್ ತನ್ನ ಸುರಕ್ಷಾ ವ್ಯವಸ್ಥೆಗೆ ಪ್ರಖ್ಯಾತ. ಜನರು ತಮ್ಮ ಸಾಮಾನುಗಳನ್ನು ಸಾರ್ವ ಜನಿಕ ಸ್ಥಳ ಗಳಲ್ಲಿ ಬಿಟ್ಟು ಹೋದರೂ ಅವುಗಳನ್ನು ಕಳ್ಳತನ ಮಾಡುವ ಸಂಭವ ಕಡಿಮೆ. ಪ್ರವಾಸಿಗರು ತಮ್ಮ ಬ್ಯಾಗ್ ಬಗ್ಗೆ ಅತಿಯಾಗಿ ಚಿಂತಿಸಬೇಕಾದ ಕಾರಣಗಳಿಲ್ಲ.