ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ತಮ್ಮದೇ ಅಹಂಕಾರದಿಂದ ಅಂತ್ಯ ಕಂಡ ಮಧು-ಕೈಟಭಾಸುರರು

ತಮ್ಮ ಮಾತಿನ ಬಲೆಯಲ್ಲಿ ತಾವೇ ಸಿಲುಕಿದ ಅಸುರರು ಗಾಬರಿಗೊಂಡರು. ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ, “ಸರಿ, ಆದರೆ ನಮ್ಮನ್ನು ಎಲ್ಲಿ ನೀರಿಲ್ಲವೋ ಅಂಥ ಒಣಪ್ರದೇಶದಲ್ಲಿ ಮಾತ್ರ ಕೊಲ್ಲಬೇಕು" ಎಂಬ ಷರತ್ತು ಹಾಕಿದರು. ಆಗ ಮಹಾವಿಷ್ಣುವು ತನ್ನ ವಿರಾಟ ರೂಪವನ್ನು ತಾಳಿ, ಅಸುರರಿಬ್ಬರನ್ನೂ ತನ್ನ ಬಲಿಷ್ಠ ತೊಡೆಗಳ ಮೇಲೆ ಮಲಗಿಸಿಕೊಂಡನು (ನೀರಿಲ್ಲದ ಜಾಗವನ್ನಾಗಿ ತನ್ನ ತೊಡೆಯನ್ನೇ ಬಳಸಿದನು). ಅಲ್ಲಿ ತನ್ನ ಸುದರ್ಶನ ಚಕ್ರದಿಂದ ಅವರಿಬ್ಬರ ಶಿರಚ್ಛೇದ ಮಾಡಿದನು.

ಒಂದೊಳ್ಳೆ ಮಾತು

ಸೃಷ್ಟಿಯ ಆರಂಭದಲ್ಲಿ ಇಡೀ ಬ್ರಹ್ಮಾಂಡವು ಜಲಮಯವಾಗಿತ್ತು. ಮಹಾವಿಷ್ಣುವು ಆದಿಶೇಷನ ಮೇಲೆ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿಯ ಮಲದಿಂದ (ಕರ್ಣಮಲ) ಮಧು ಮತ್ತು ಬ್ರಹ್ಮ ಎಂಬ ಇಬ್ಬರು ಅಸುರರು ಜನಿಸಿದರು. ದೃಢಕಾಯರೂ, ಪರ್ವತಸದೃಶ ದೇಹದವರೂ ಆದ ಈ ಸಹೋದರರು ಸಮುದ್ರದಲ್ಲಿ ಆಟವಾಡುತ್ತಾ ಬೆಳೆದರು.

ಒಮ್ಮೆ ಅವರಿಗೆ ಗಾಳಿಯಲ್ಲಿ ‘ವಾಗ್ಬೀಜ’ ಮಂತ್ರವು ಕೇಳಿಸಿತು. ಕುತೂಹಲದಿಂದ ಆರಂಭವಾದ ಮಂತ್ರದ ಜಪವು ಕ್ರಮೇಣ ತಪಸ್ಸಾಗಿ ಬದಲಾಯಿತು. ಅವರ ಭಕ್ತಿಗೆ ಮೆಚ್ಚಿದ ಮಹಾದೇವಿಯು ಪ್ರತ್ಯಕ್ಷಳಾಗಿ, “ನೀವಿಬ್ಬರೂ ಒಗ್ಗಟ್ಟಾಗಿರುವವರೆಗೆ ಯಾರೂ ನಿಮ್ಮನ್ನು ಸೋಲಿಸಲಾರರು" ಎಂಬ ಅಜೇಯ ವರವನ್ನು ನೀಡಿದಳು.

ವರದ ಮದದಿಂದ ಉಬ್ಬಿದ ಅಸುರರು ಸೃಷ್ಟಿಕರ್ತ ಬ್ರಹ್ಮನ ಮೇಲೆ ದಾಳಿ ಮಾಡಿ ವೇದಗಳನ್ನು ಅಪಹರಿಸಿದರು. ಬ್ರಹ್ಮನು ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಉಪಾಯಗಳನ್ನು ಬಳಸಿದರೂ ಫಲ ನೀಡಲಿಲ್ಲ. ಗಾಬರಿಗೊಂಡ ಬ್ರಹ್ಮನು ವಿಷ್ಣುವಿನ ಬಳಿ ಧಾವಿಸಿದನು. ಆದರೆ ವಿಷ್ಣುವು ಯೋಗನಿದ್ರೆಯಲ್ಲಿದ್ದನು. ಆಗ ಬ್ರಹ್ಮನು ವಿಷ್ಣುವನ್ನು ನಿದ್ರೆಯಿಂದ ಎಬ್ಬಿಸಲು ‘ನಿದ್ರಾದೇವಿ’ಯನ್ನು ಪ್ರಾರ್ಥಿಸಿದನು. ದೇವಿಯ ಕೃಪೆಯಿಂದ ವಿಷ್ಣುವು ಎಚ್ಚರಗೊಂಡು ಪರಿಸ್ಥಿತಿಯನ್ನು ಅರಿತನು.

ಇದನ್ನೂ ಓದಿ: Roopa Gururaj Column: ನಾಲ್ಕು ಪಕ್ಷಿಗಳ ರಹಸ್ಯ

ವೇದಗಳನ್ನು ರಕ್ಷಿಸಲು ಮತ್ತು ಅಸುರರನ್ನು ಸಂಹರಿಸಲು ವಿಷ್ಣುವು ಕುದುರೆಯ ಮುಖವುಳ್ಳ ಹಯಗ್ರೀವ ರೂಪವನ್ನು ತಳೆದನು. ಮಧು-ಕೈಟಭರು ವಿಷ್ಣುವನ್ನು ಯುದ್ಧಕ್ಕೆ ಆಹ್ವಾನಿಸಿದರು. ಈ ಘನಘೋರ ಮಲ್ಲಯುದ್ಧವು ಸತತ ಐದು ಸಾವಿರ ವರ್ಷಗಳ ಕಾಲ ನಡೆಯಿತು. ಆದರೂ ದೇವಿಯ ವರದಿಂದಾಗಿ ಅಸುರರನ್ನು ಸೋಲಿಸಲು ಸಾಧ್ಯವಾಗಲಿಲ್ಲ.

ದೈಹಿಕ ಬಲಕ್ಕಿಂತ ಬುದ್ಧಿವಂತಿಕೆಯೇ ಮದ್ದೆಂದು ಅರಿತ ವಿಷ್ಣುವು ಯುದ್ಧವನ್ನು ನಿಲ್ಲಿಸಿ ಮಧು-ಕೈಟಭರ ಶೌರ್ಯವನ್ನು ಹೊಗಳಿದನು. “ನಿಮ್ಮ ಪರಾಕ್ರಮಕ್ಕೆ ನಾನು ಮೆಚ್ಚಿದ್ದೇನೆ, ಯಾವುದಾ ದರೂ ವರವನ್ನು ಕೇಳಿ" ಎಂದನು ವಿಷ್ಣು. ಆಗ ಅಹಂಕಾರದಿಂದ ಬೀಗಿದ ಅಸುರರು, “ನಾವು ವಿಜೇತರು, ನಿನ್ನಿಂದ ವರ ಕೇಳುವ ಅಗತ್ಯ ನಮಗಿಲ್ಲ. ಬೇಕಿದ್ದರೆ ನೀನೇ ನಮ್ಮಿಂದ ವರವನ್ನು ಕೇಳು" ಎಂದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ವಿಷ್ಣುವು ಕಿರುನಗೆ ಬೀರುತ್ತಾ, “ಹಾಗಿದ್ದಲ್ಲಿ, ನಿಮ್ಮಿಬ್ಬರ ಸಾವು ನನ್ನ ಕೈಯಿಂದಲೇ ಆಗಲಿ ಎಂಬ ವರವನ್ನು ಕೊಡಿ" ಎಂದು ಕೇಳಿದನು.

ತಮ್ಮ ಮಾತಿನ ಬಲೆಯಲ್ಲಿ ತಾವೇ ಸಿಲುಕಿದ ಅಸುರರು ಗಾಬರಿಗೊಂಡರು. ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ, “ಸರಿ, ಆದರೆ ನಮ್ಮನ್ನು ಎಲ್ಲಿ ನೀರಿಲ್ಲವೋ ಅಂಥ ಒಣಪ್ರದೇಶದಲ್ಲಿ ಮಾತ್ರ ಕೊಲ್ಲಬೇಕು" ಎಂಬ ಷರತ್ತು ಹಾಕಿದರು. ಆಗ ಮಹಾವಿಷ್ಣುವು ತನ್ನ ವಿರಾಟ ರೂಪವನ್ನು ತಾಳಿ, ಅಸುರರಿಬ್ಬರನ್ನೂ ತನ್ನ ಬಲಿಷ್ಠ ತೊಡೆಗಳ ಮೇಲೆ ಮಲಗಿಸಿಕೊಂಡನು (ನೀರಿಲ್ಲದ ಜಾಗ ವನ್ನಾಗಿ ತನ್ನ ತೊಡೆಯನ್ನೇ ಬಳಸಿದನು). ಅಲ್ಲಿ ತನ್ನ ಸುದರ್ಶನ ಚಕ್ರದಿಂದ ಅವರಿಬ್ಬರ ಶಿರಚ್ಛೇದ ಮಾಡಿದನು. ಮಧುವನ್ನು ಸಂಹರಿಸಿದ್ದರಿಂದ ವಿಷ್ಣುವಿಗೆ ‘ಮಧುಸೂದನ’ ಎಂಬ ಹೆಸರು ಬಂತು. ಅಸುರರ ದೇಹದಿಂದ ಹೊರಬಂದ ಮೇದಸ್ಸು (ಕೊಬ್ಬು) ಸಮುದ್ರದಲ್ಲಿ ಹರಡಿತು. ವಿಷ್ಣುವು ಆ ಮೇದಸ್ಸಿನಿಂದ ಭೂಮಿಯನ್ನು ನಿರ್ಮಿಸಲು ಬ್ರಹ್ಮನಿಗೆ ಸೂಚಿಸಿದನು.

ಹೀಗೆ ಮಧು-ಕೈಟಭರ ಮೇದಸ್ಸಿನಿಂದ ಸೃಷ್ಟಿಯಾದ ಕಾರಣ ಈ ಭೂಮಿಗೆ ‘ಮೇದಿನಿ’ ಎಂಬ ಹೆಸರು ಬಂದಿತು. ಅವರ ದೇಹದ ಅವಶೇಷಗಳು ಭೂಮಿಯ ಹನ್ನೆರಡು ಭೂಫಲಕಗಳಾಗಿ (Tectonic Plates) ಬದಲಾದವು ಎಂದು ಪುರಾಣಗಳು ಹೇಳುತ್ತವೆ.

ಕೆಲವೊಮ್ಮೆ ನಮ್ಮ ಎದುರಾಳಿಗಳನ್ನು ನಾವು ಹಗುರಾಗಿ ಪರಿಗಣಿಸಿ ಬಿಡುತ್ತೇವೆ; ಆದರೆ ಯಾವುದೇ ಕಾರ್ಯ ಮುಗಿಯುವವರೆಗೂ ಹಾಗೆ ಸಂಪೂರ್ಣವಾಗಿ ಸಂಭ್ರಮಿಸಬಾರದು ಎನ್ನುವುದಕ್ಕೆ ಮೇಲಿನ ಕಥೆ ಸಾಕ್ಷಿ. ಕೊನೆಯ ಕ್ಷಣದಲ್ಲೂ ಯಾವುದೇ ಒಂದು ಸ್ಪರ್ಧೆ, ಕೆಲಸ ಇವುಗಳಲ್ಲಿ ಎಂಥ ಬದಲಾವಣೆ ಬೇಕಾದರೂ ಆಗಬಹುದು. ಆದ್ದರಿಂದಲೇ ಎಂದಿಗೂ ಮುಂಚಿತವಾಗಿ ಸಂಭ್ರಮಿಸ ಬಾರದು.

ಕೆಲಸ ಆಗುವುದಕ್ಕೆ ಮುಂಚೆಯೇ ನಮ್ಮ ಯೋಜನೆಗಳನ್ನು ಅನಗತ್ಯವಾಗಿ ಹಂಚಿಕೊಳ್ಳಲೂ ಬಾರದು. ಎಲ್ಲಕ್ಕಿಂತ ಹೆಚ್ಚಾಗಿ ವಾಮಮಾರ್ಗದಿಂದ ಅಧಿಕಾರ ಸ್ವೀಕರಿಸಿದವರಿಗೆ ಎಂದಾದರೂ ಒಂದು ದಿನ ಸೋಲು ಕಟ್ಟಿಟ್ಟಬುತ್ತಿ. ಆದ್ದರಿಂದಲೇ ಸರಿಯಾದ ದಾರಿಯಲ್ಲಿ ನಡೆಯಬೇಕು ಒಳ್ಳೆಯ ರೀತಿಯಲ್ಲಿ ಬೆಳೆಯಬೇಕು....

ರೂಪಾ ಗುರುರಾಜ್

View all posts by this author