ವಿದ್ಯಮಾನ
2025ರ ಐತಿಹಾಸಿಕ ಮಹಾ ಕುಂಭಮೇಳದ ನಂತರ ಪ್ರಯಾಗ್‌ರಾಜ್‌ನಲ್ಲಿ ಮತ್ತೆ ಮಾಘಸ್ನಾನದ ಗೌಜು-ಗದ್ದಲ ನಡೆಯುತ್ತಿದೆ. ಪ್ರತಿದಿನ ಲಕ್ಷಾಂತರ ಜನರು ತೀರ್ಥಸ್ನಾನ ಮಾಡಿ ತೆರಳುತ್ತಿದ್ದಾರೆ. ಇದು ವಾರ್ಷಿಕವಾಗಿ ನಡೆಯುವ ಪುಣ್ಯಸ್ನಾನದ ಮೇಳ. ಇದೂ ಒಂದು ಮಿನಿ ಕುಂಭಮೇಳ ದಂತೆಯೇ ನಡೆಯುತ್ತದೆ. ಸುಮಾರು 44 ದಿನ ನಡೆಯುವ ಈ ಮೇಳದಲ್ಲಿ, ಮೌನಿ ಅಮಾವಾಸ್ಯೆಯ ದಿನ ಅತೀವ ಜನಸಂದಣಿಯಿರುತ್ತದೆ.
ಐತಿಹಾಸಿಕ ಮಹಾ ಕುಂಭಮೇಳದಲ್ಲಿ 70 ಕೋಟಿ ಜನರನ್ನು ಸಂಭಾಳಿಸಿದ ಯೋಗಿ ಸರಕಾರಕ್ಕೆ, ಅಂದಾಜು 10ರಿಂದ 15 ಕೋಟಿ ಜನರನ್ನು ಈ ವಾರ್ಷಿಕ ಮೇಳದಲ್ಲಿ ಸಂಭಾಳಿಸುವುದು ಅಷ್ಟೊಂದು ಸಾಹಸದ ಕೆಲಸವಲ್ಲದಿದ್ದರೂ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು.
ಅದರಲ್ಲೂ ಮೌನಿ ಅಮಾವಾಸ್ಯೆಯ ದಿನ ಸುಮಾರು ಮೂರು ಕೋಟಿಗೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಮೇಳದ 44 ದಿನವೂ ಜನಸಂದಣಿಯಿದ್ದರೂ ಮೌನಿ ಅಮಾವಾಸ್ಯೆ, ವಸಂತ ಪಂಚಮಿ, ಮಕರ ಸಂಕ್ರಾಂತಿ ಮುಂತಾದ ವಿಷೇಷ ಪರ್ವಕಾಲಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಿಗದಷ್ಟಿರು ತ್ತದೆ.
ಪ್ರಮಾಣ ಸಣ್ಣದಾದರೂ ಮಹಾಕುಂಭಕ್ಕೆ ಮಾಡಲಾಗುವ ವ್ಯವಸ್ಥೆಗಳನ್ನೆಲ್ಲ ಸರಕಾರ ಈಗಲೂ ಮಾಡಬೇಕಾಗುತ್ತದೆ. ಎಂದಿನಂತೆ ಯೋಗಿ ಸರಕಾರ ಅಗತ್ಯ ವ್ಯವಸ್ಥೆಗಳನ್ನು ಅತ್ಯಂತ ಚೆನ್ನಾಗಿ ಮಾಡಿದೆ ಎನ್ನುವುದು ಅನೇಕ ಸಾಧು-ಸಂತರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Vinayaka V Bhat Column: ಹಿಮಂತ ಬಿಸ್ವ ಶರ್ಮಾ: ಈಶಾನ್ಯ ಭಾರತದ ಧೀರಧುರಂದರ
ಇಷ್ಟೆಲ್ಲ ಸುವ್ಯವಸ್ಥೆಗಳ ನಡುವೆ ಮಾಘಮೇಳ ಶಾಂತವಾಗಿ ನಡೆಯುತ್ತಿರುವಾಗ, ಜ್ಯೋತಿರ್ಮಠದ ಪೀಠಾಧಿಪತಿಗಳಾದ ಶ್ರೀ ಅವಿಮುಕ್ತೇ ಶ್ವರಾನಂದ ಸರಸ್ವತಿಗಳ ಪಲ್ಲಕ್ಕಿಯ ಮೆರವಣಿಗೆಯ ವಿವಾದ ವಾಯಿತು. ನಾನು ಪ್ರಜ್ಞಾಪೂರ್ವಕವಾಗಿಯೇ ಅವರನ್ನು ‘ಜ್ಯೋತಿರ್ಮಠದ ಶಂಕರಾಚಾರ್ಯರು’ ಎಂದು ಸಂಬೋಧಿಸದೇ, ‘ಪೀಠಾಧಿಪತಿಗಳು’ ಎಂದು ಮಾತ್ರ ಸಂಬೋಧಿಸುತ್ತಿದ್ದೇನೆ.
ಈ ಸಂದರ್ಭದಲ್ಲಿ ಅನೇಕ ಪೀಠಾಧಿಪತಿಗಳಿಗೆ, ಅಖಾಡದ ಮುಖ್ಯಸ್ಥರುಗಳಿಗೆ ಅಲ್ಲಿ ತಮ್ಮ ಶಿಬಿರ ಗಳನ್ನು ಹೂಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ತಮ್ಮ ಶಿಷ್ಯವರ್ಗದ ಜತೆಗೆ ಆ ಶಿಬಿರ ಗಳಲ್ಲಿ ಕಥಾಕೀರ್ತನೆಗಳನ್ನು ವ್ಯವಸ್ಥೆ ಮಾಡಿಕೊಂಡು, ಪುಣ್ಯ ಪರ್ವಕಾಲದಲ್ಲಿ ಸಂಗಮ ಸ್ನಾನ ಮಾಡುತ್ತಾ ಮೇಳದ ಕೆಲವು ದಿನಗಳನ್ನು ಸಾಧುಗಳು ಅಲ್ಲಿ ಕಳೆಯುವುದು ವಾಡಿಕೆ.
ಈ ಸಲವೂ ಅನೇಕ ಸಾಧುಗಳ ಶಿಬಿರದಂತೆ, ಜ್ಯೋತಿರ್ಮಠದ ಪೀಠಾಧಿಪತಿಗಳಾದ ಶ್ರೀ ಅವಿ ಮುಕ್ತೇಶ್ವರಾನಂದ ಸರಸ್ವತಿಗಳ ಶಿಬಿರವನ್ನೂ ಅಲ್ಲಿ ನಿರ್ಮಿಸಲಾಗಿತ್ತು ಮತ್ತು ಅನೇಕ ಶಿಷ್ಯ ಪರಿವಾರದವರು ಅವರ ಜತೆಗಿದ್ದರು. ಅಲ್ಲಿ ನಡೆಯುವ ಕುಂಭಮೇಳಗಳಲ್ಲಿ ತಮ್ಮ ಪರಂಪರೆಯ ಗುರುಗಳನ್ನು ಶಿಷ್ಯರು ಅತ್ಯಂತ ಸಂಭ್ರಮದಿಂದ ವಿವಿಧ ವಾದ್ಯಗಳಿಂದೊಡಗೂಡಿದ ಮೆರವಣಿಗೆ ಯಲ್ಲಿ ಪಲ್ಲಕ್ಕಿಯ ಮೇಲೆ ಕುಳ್ಳಿರಿಸಿ ಸೇವಾಭಾವದಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಮತ್ತೆ ಅಲ್ಲಿಂದ ನದೀತಟದವರೆಗೆ ನಡೆದುಕೊಂಡು ಹೋಗಿ ಗುರುಗಳ ಸ್ನಾನಕ್ಕೆ ಸಹಾಯ ಮಾಡಿ, ಅವರ ಸ್ನಾನವಾದ ನಂತರ ತಾವೂ ಸ್ನಾನ ಮಾಡಿ, ಗುರುಗಳ ಜತೆಗೆ ಪುಣ್ಯಸ್ನಾನ ಮಾಡಿದ ಸಮಾಧಾನ ಭಾವದಿಂದ ಹಿಂದಿರುಗುವುದು ವಾಡಿಕೆಯಾಗಿದೆ.
ಈ ಬಾರಿಯೂ ಮೌನಿ ಅಮಾವಾಸ್ಯೆಯ ಮಧ್ಯಾಹ್ನದವರೆಗೆ ಈ ಎಲ್ಲ ರೀತಿ- ರಿವಾಜುಗಳು ಸುಸೂತ್ರ ವಾಗಿಯೇ ನಡೆಯುತ್ತಿದ್ದವು. ಶ್ರೀ ಅವಿಮುಕ್ತೇಶ್ವರಾನಂದರ ಸವಾರಿಯು ಸ್ನಾನಕ್ಕೆ ಹೊರಟಲ್ಲಿಂದ ಮುಂದೆ ನಡೆದಿzಲ್ಲ ಸನಾತನಿಗಳು ತಲೆ ತಗ್ಗಿಸಬೇಕಾದ ಘಟನೆಗಳಾದವು.
ಆಗಿದ್ದು ಇಷ್ಟೇ- ಮೌನಿ ಅಮಾವಾಸ್ಯೆಯ ದಿನ (ಜನವರಿ 18) ಶ್ರೀ ಅವಿಮುಕ್ತೇಶ್ವರಾನಂದರು ಶಿಷ್ಟಾ ಚಾರದಿಂದ ಸ್ವಲ್ಪ ದೂರಸರಿದು ತಮ್ಮ ಶಿಬಿರದಿಂದ ಪಲ್ಲಕ್ಕಿಯಲ್ಲಿ ಕುಳಿತು ಸ್ನಾನಕ್ಕಾಗಿ ಸಂಗಮ ದತ್ತ ತೆರಳುತ್ತಿದ್ದರು. ಮೂರು ಕೋಟಿಗೂ ಹೆಚ್ಚು ಭಕ್ತಾದಿಗಳು ಅಲ್ಲಿದ್ದುದರಿಂದ, ಕಾಲ್ತುಳಿತ ಮುಂತಾದ ಅವಘಡವನ್ನು ತಡೆಯುವ ದೃಷ್ಟಿಯಿಂದ ಮಾಘಮೇಳದ ಪ್ರಾಧಿಕಾರವು ಅಂದು ಅತ್ಯಂತ ಕಟ್ಟುನಿಟ್ಟಿನ ಭದ್ರತೆಯ ವ್ಯವಸ್ಥೆ ಮಾಡಿತ್ತು.
ಸಂಗಮಕ್ಕೆ ಯಾರು ಹೇಗೆ ತಲುಪಬೇಕು ಎನ್ನುವುದರ ಸ್ಪಷ್ಟ ರೂಪುರೇಷೆ ಅಲ್ಲಿನ ಅಧಿಕಾರಿಗಳಿ ಗಿತ್ತು. ಒಂದು ಜಾಗದಿಂದ ಮುಂದಕ್ಕೆ ಪಲ್ಲಕ್ಕಿ ಅಥವಾ ಮೆರವಣಿಗೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಬ್ಯಾರಿಕೇಡ್ ಹಾಕಲಾಗಿತ್ತು. ನದಿಗೆ ಅತ್ಯಂತ ಸಮೀಪವಿರುವ ಈ ಸ್ಥಳಕ್ಕೆ ಶ್ರೀ ಅವಿಮುಕ್ತೇಶ್ವರಾನಂದರ ಪಲ್ಲಕ್ಕಿ ಬರುತ್ತಿದ್ದಂತೆ, ಮೌನಿ ಅಮಾವಾಸ್ಯೆಯ ಪ್ರಮುಖಸ್ನಾನದ ದಿನವಾದ್ದರಿಂದ, ಬಹಳ ಜನಸಂದಣಿಯನ್ನು ಲಕ್ಷಿಸಿ “ಇಂದು ಇಲ್ಲಿಂದ ಮುಂದಕ್ಕೆ ಪಲ್ಲಕ್ಕಿಯನ್ನು ಬಿಡಲಾಗುವುದಿಲ್ಲ, ಹಾಗಾಗಿ ತಾವು ದಯವಿಟ್ಟು ಪಲ್ಲಕ್ಕಿಯಿಂದ ಇಳಿದು ನಾಲ್ಕು ಹೆಜ್ಜೆ ನಡೆದು ಸ್ನಾನ ಪೂರೈಸಬೇಕು" ಎಂದು ಮೇಳದ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅಲ್ಲಿನ ಪೊಲೀಸರು ಪರಿಪರಿಯಿಂದ ವಿನಯಪೂರ್ವಕವಾಗಿಯೇ ಪ್ರಾರ್ಥಿಸಿದರು.
ಆದರೆ ತಮ್ಮ ಪಲ್ಲಕ್ಕಿಯನ್ನು ನದೀತಟಾಕದವರೆಗೂ ಹೋಗಲು ಬಿಡಬೇಕು, ನಾವು ಇಲ್ಲಿಂದ ನಡೆದು ಹೋಗುವುದು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎನ್ನುವುದು ಶ್ರೀ ಅವಿಮುಕ್ತೇಶ್ವರಾನಂದರು ಹಾಗೂ ಅವರ ಶಿಷ್ಯಮಂಡಲಿಯ ವರಾತವಾಗಿತ್ತು.
“ನಿಮ್ಮ ಪಲ್ಲಕ್ಕಿಯ ಮೆರವಣಿಗೆಯನ್ನು ಅನುಮತಿಸಿದರೆ, ನಿಯಂತ್ರಣ ತಪ್ಪುವ ಸಂದರ್ಭವಿದೆ; ಹಾಗಾಗಿ ಬಹುಜನರ ಹಿತದೃಷ್ಟಿಯಿಂದ ನಾವು ಹಾಗೆ ಮಾಡಲಾರೆವು" ಎನ್ನುತ್ತಾ ಪ್ರಾಧಿಕಾರದ ಅಧಿಕಾರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡು ಪಲ್ಲಕ್ಕಿಯನ್ನು ಅಲ್ಲೇ ತಡೆದು ನಿಲ್ಲಿಸಿದರು. ಪೊಲೀಸ್ ಅಧಿಕಾರಿಗಳ ಮಾತನ್ನು ಧಿಕ್ಕರಿಸಿ, ಅವರ ಶಿಷ್ಯಜನರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ‘ಆಗೇ ಬಢೋ, ಆಗೇ ಬಢೋ’ ಎನ್ನುತ್ತಾ ಮುನ್ನುಗ್ಗುತ್ತಿರುವಾಗ ಪೊಲೀಸರು ಅವರುಗಳನ್ನು ವಶಕ್ಕೆ ಪಡೆದುಕೊಳ್ಳಬೇಕಾಯಿತು.
“ನಾವು ಶಂಕರಾಚಾರ್ಯರು, ನೂರು ಕೋಟಿ ಹಿಂದೂಗಳ ಶ್ರದ್ಧೆಯ ಜತೆಗೆ ನಡೆಯುವವರು; ಯಃಕಶ್ಚಿತ್ ಅಧಿಕಾರಿಗಳು ನಮ್ಮನ್ನು ಪಲ್ಲಕ್ಕಿಯಿಂದ ಇಳಿಯಿರಿ ಎಂದು ಆದೇಶಿಸುವುದು ಅಂದರೆ, ಅದು ನೂರು ಕೋಟಿ ಹಿಂದೂಗಳಿಗೆ ಮಾಡಿದ ಅವಮಾನವಾಗುತ್ತದೆ. ಆದಿ ಶಂಕರಾಚಾರ್ಯರಿಗೆ ಮಾಡಿದ ಅವಮಾನವಾಗುತ್ತದೆ ಹಾಗೂ ಸನಾತನ ಧರ್ಮಕ್ಕೇ ಮಾಡಿದ ಅವಮಾನವಾಗುತ್ತದೆ. ಹಾಗಾಗಿ ನಾವು ಪಲ್ಲಕ್ಕಿಯಿಂದ ಇಳಿದು ಸಂಗಮವನ್ನು ಕಾಲ್ನಡಿಗೆಯಿಂದ ತಲುಪಲು ಒಪ್ಪುವು ದಿಲ್ಲ. ಅಷ್ಟೇ ಅಲ್ಲದೆ, ಕೆಳಗಿಳಿದರೆ ನೀವು ನಮ್ಮನ್ನು ಅಪಹರಣ ಮಾಡಿ ಎಲ್ಲಾದರೂ ಕರೆದು ಕೊಂಡು ಹೋಗುವ ಸಂಭವವಿರುವುದರಿಂದ ನಾವು ಕೆಳಗಿಳಿಯುವುದಿಲ್ಲ" ಎನ್ನುತ್ತಾ ಅವಿಮುಕ್ತೇಶ್ವರಾನಂದರು ಅಲ್ಲಿ ಕುಳಿತೇ ಇದ್ದರು.
ಅಷ್ಟೇ ಅಲ್ಲದೆ, “ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಹತ್ಯೆಗೆ ಪ್ರಯತ್ನ ಮಾಡಿದರು" ಎನ್ನುವ ಆರೋಪವನ್ನೂ ಮಾಡಿದರು. ಅಲ್ಲಿಂದ ಮುಂದೆ ಅವಿಮುಕ್ತೇಶ್ವರಾನಂದರು ತಮ್ಮ ಶಿಬಿರದ ಹೊರಗೆ ಧರಣಿ ಕುಳಿತರು.
“ಸಂಗಮ ಸ್ನಾನಕ್ಕಾಗಿ ನಾವು ಶಿಬಿರದಿಂದ ಹೊರಗೆ ಬಂದವರು; ನಮ್ಮ ಇಚ್ಛೆಗೆ ಅನುಗುಣವಾಗಿ ಸ್ನಾನವಾಗದ ಹೊರತು ನಾವು ತಿರುಗಿ ಶಿಬಿರಕ್ಕೆ ತೆರಳುವ ಪ್ರಶ್ನೆಯೇ ಇಲ್ಲ" ಎಂದುಬಿಟ್ಟರು. ಮುಖ್ಯಮಂತ್ರಿಗಳು ಅಲ್ಲಿಗೆ ಬಂದು ಕ್ಷಮೆ ಕೇಳುವವರೆಗೆ ತಮ್ಮ ನಿರಶನವನ್ನು ನಿಲ್ಲಿಸುವುದಿಲ್ಲ ಎಂದು ಗಟ್ಟಿಯಾಗಿ ಕುಳಿತು ಬಿಟ್ಟರು.
ಧರಣಿ ಕುಳಿತಲ್ಲಿಂದ ಮುಂದೆ ಅವಿಮುಕ್ತೇಶ್ವರಾನಂದರು ನಡೆದುಕೊಂಡ ರೀತಿ, ಅವರಾಡಿದ ಮಾತುಗಳು, ಸಾರ್ವಜನಿಕವಾಗಿ ತೋರಿದ ಕ್ರೋಧ, ಮಾಧ್ಯಮಗಳ ಎದುರು ಮಾಡಿದ ಅರಚಾಟ/ಕೂಗಾಟ, ತನ್ಮೂಲಕ ಆ ಪೀಠದ ಘನತೆಯನ್ನು ಇಳಿಸಿದ್ದು ಈ ಎಲ್ಲವೂ ಸನಾತನಿಗಳಿಗೆ, ಶ್ರೀ ಶಂಕರ ತತ್ವಾನುಯಾಯಿಗಳಿಗೆ ಮುಜುಗುರ ಉಂಟುಮಾಡುವ ಸಂಗತಿಯಾಗಿವೆ.
ದೇಶದ ಎಲ್ಲ ಮಾಧ್ಯಮಗಳು ಸಾಲು ಸಾಲಾಗಿ ಬಂದು ಅವರ ಸಂದರ್ಶನ ಮಾಡಿದವು, ಸಂದರ್ಶನ ಗಳ ನೇರಪ್ರಸಾರಗಳಾದವು. ಆ ವೇಳೆ ಅವಿಮುಕ್ತೇಶ್ವರಾನಂದರು “ಯೋಗಿ ಹಾಗೂ ಮೋದಿ ಆಧು ನಿಕ ಹುಮಾಯೂನ್, ಅಕ್ಬರ್, ಔರಂಗಜೇಬ್ ಇದ್ದಂತೆ, ಬಾಬರನ ಸಂತಾನದಂತೆ" ಎಂದರು; ಯೋಗಿಯೊಬ್ಬ ಹಿಂದುವೇ ಅಲ್ಲ ಅನ್ನುವ ಮಾತೂ ಬಂತು.
“ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ಯೋಗಿ ಆದಿತ್ಯನಾಥರ ಪಾತ್ರವೇನು?" ಎನ್ನುವ ಮಾತೂ ಇವರ ಬಾಯಿಂದ ಬಂತು. ರಾಷ್ಟ್ರಪತಿಗಳು ಶಂಕರಾಚಾರ್ಯರಿಗಿಂತ ಮೇಲಲ್ಲ, ಪ್ರಧಾನ ಮಂತ್ರಿಗಳು ಸ್ತ್ರೀ ಶೋಷಕ ಎನ್ನುವ ಮಾತುಗಳೂ ಬಂದವು.
“ಹಿಂದುತ್ವದ ಬೆಂಬಲದಿಂದ ಅಧಿಕಾರಕ್ಕೆ ಬಂದು ಹನ್ನೆರಡು ವರ್ಷಗಳಿಂದ ಅಧಿಕಾರ ನಡೆಸು ತ್ತಿದ್ದಾರೆ, ಇವರಿಗೆ ಗೋಹತ್ಯೆಯನ್ನು ಏಕೆ ನಿಲ್ಲಿಸಲಾಗುತ್ತಿಲ್ಲ? ರಾಮಮಂದಿರದ ಪುನರ್ ನಿರ್ಮಾಣ ದಲ್ಲಿ ಯೋಗಿ ಹಾಗೂ ಮೋದಿ ಹೇಳಿಕೊಳ್ಳುವುದನ್ನು ಏನು ಮಾಡಿದ್ದಾರೆ? ಯೋಗಿ ಹೆಸರಿಗೆ ಮಾತ್ರ ಯೋಗಿ, ಅಲ್ಲದಿದ್ದರೆ ಎಲ್ಲರಂತೆ ಆತನೊಬ್ಬ ರಾಜಕಾರಣಿ ಮಾತ್ರ, ಹೆಚ್ಚೇನಲ್ಲ" ಎನ್ನಲಾಯಿತು.
ಸಂಸ್ಕೃತ ಸಾಹಿತ್ಯಕ್ಕೆ ಜ್ಞಾನಪೀಠ ತಂದುಕೊಟ್ಟ ಶ್ರೀ ರಾಮಭದ್ರಾಚಾರ್ಯರಂಥ ಹಿರಿಯ ಸಾಧಕ ರನ್ನು, “ಅವರು ಮೂರ್ಖ, ಅಂಗವಿಕಲರು; ಅಂಗವಿಕಲರಿಗೆ ಸನ್ಯಾಸ ದೀಕ್ಷೆಯ ಹಕ್ಕೇ ಇಲ್ಲ, ಅವರನ್ನು ಜಗದ್ಗುರುಗಳೆಂದು ಕರೆದವರಾರು" ಎಂದೆ ಅಹಂಕಾರದ ಮಾತುಗಳನ್ನೇ ಆಡಿದರು.
ಯೋಗಿ ಅದಿತ್ಯನಾಥರು ಕೇವಲ ಮುಖ್ಯಮಂತ್ರಿಗಳಲ್ಲ, ಅವರು ಒಂದು ದೊಡ್ಡ ಗುರು ಪರಂಪರೆ ಯ ಧರ್ಮಾಧಿಕಾರಿಯೂ ಆಗಿದ್ದಾರೆ. ಅವರ ಕುರಿತು ಕೇವಲವಾಗಿ ಮಾತನಾಡುವುದು, ಅದರಲ್ಲೂ ಆಚಾರ್ಯ ಪೀಠಾಧಿಪತಿಗಳೆನಿಸಿಕೊಂಡವರು ಆಡುವುದು ಅಲ್ಲಿ ಸೇರಿದ್ದ ಸಹಸ್ರಾರು ಸಂತರಿಗೆ ಸರಿಬರಲಿಲ್ಲ.
“ಯೋಗಿ ಮುಖ್ಯಮಂತ್ರಿ ಆಗುವುದಕ್ಕಿಂತ ಮುಂಚೆ ಇಲ್ಲಿ ನಾವು ಹಿಂದೂಗಳು ಎಂದು ಹೇಳಿಕೊ ಳ್ಳುವುದಕ್ಕೆ ಅಂಜುವ ಕಾಲವಿತ್ತು; ಅವರು ಏನು ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತು" ಎಂದು ಪ್ರಯಾಗ್‌ರಾಜ್ ನಿವಾಸಿ ಮಹಿಳೆಯೊಬ್ಬರು ಮಾತನಾಡುತ್ತಾರೆ. ಹೀಗೆ ದೇಶಾದ್ಯಂತ ತಮ್ಮ ವಿರೋಧವಾಗಿ ಅದಕ್ಕಿಂತ ಹೆಚ್ಚಾಗಿ ಯೋಗಿ ಆದಿತ್ಯನಾಥರ ಪರವಾದ ಜನಾಭಿಪ್ರಾಯ ಮೂಡು ತ್ತಿರುವುದನ್ನು ಶ್ರೀಗಳು ಗಮನಿಸುತ್ತಿದ್ದರು.
ಮುಖ್ಯಮಂತ್ರಿಗಳು ಬಂದು ಕ್ಷಮೆ ಕೇಳುತ್ತಾರೆ ಅಂದುಕೊಂಡವರಿಗೆ ಸರಕಾರದ ಪ್ರಾಧಿಕಾರದ ನೋಟಿಸ್ ಬಂತು. ‘ನೀವು ಶಂಕರಾಚಾರ್ಯರೇ ಹೌದು ಎನ್ನುವುದಕ್ಕೆ ಪುರಾವೆಯೇನು?’ ಎಂದು ಮೊದಲ ನೋಟಿಸ್‌ನಲ್ಲಿ ಕೇಳಲಾಯಿತು (ಪೀಠಾಽಪತಿಯಾಗಿ ಅವರ ನೇಮಕದ ಪ್ರಶ್ನೆ ಉಚ್ಚ ನ್ಯಾಯಾಲಯದ ಮುಂದಿದೆ).
‘ನಿಮ್ಮಿಂದಾಗಿ ಮಾಘ ಮೇಳದ ಆಯೋಜನೆಯಲ್ಲಿ ತೊಂದರೆಯಾಗುತ್ತಿದೆ, ಹಾಗಾಗಿ ನಿಮ್ಮ ಶಿಬಿರ ವನ್ನು ಇಲ್ಲಿಂದ ಏಕೆ ಸ್ಥಳಾಂತರಿಸಬಾರದು?’ ಎನ್ನುವುದನ್ನು ಎರಡನೇ ನೋಟಿಸ್‌ನಲ್ಲಿ ಕೇಳಲಾ ಯಿತು. ಅಹಂಕಾರಕ್ಕೆ ಔದಾಸೀನ್ಯವೇ ಮದ್ದು ಎನ್ನುವ ಧೋರಣೆಯನ್ನು ಯೋಗಿ ಸರಕಾರ ತೆಗೆದುಕೊಂಡಂತೆ ಕಂಡುಬಂತು.
ಮುಖ್ಯಮಂತ್ರಿಗಳು ಕ್ಷಮೆ ಕೇಳಲು ಬಂದರೆ ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಅವರನ್ನು ಅವಮಾನಿಸಬಹುದು ಎಂದುಕೊಂಡಿದ್ದರೇನೋ ಸ್ವಾಮಿಗಳು. ಆದರೆ, ಮುಖ್ಯಮಂತ್ರಿ ಇರಲಿ, ಯಾವೊಬ್ಬ ಶಾಸಕನೂ ಅಥವಾ ಹಿರಿಯ ಅಧಿಕಾರಿಗಳೂ ಹನ್ನೊಂದು ದಿನ ಶ್ರೀ ಅವಿಮುಕ್ತೇಶ್ವರಾ ನಂದರು ಧರಣಿ ಕುಳಿತ ಸ್ಥಳದತ್ತ ಹಾಯಲಿಲ್ಲ.
ಶ್ರೀಗಳು “ಮಾಘಮೇಳದ ಪ್ರಾಧಿಕಾರವು ಗೌರವ ಪೂರ್ವಕವಾಗಿ ಸ್ನಾನಮಾಡಲು ನನಗೆ ಅವಕಾಶ ಮಾಡಿಕೊಟ್ಟರೆ ಈ ನಿರಶನವನ್ನು ಮುಗಿಸಲಾಗುವುದು" ಎನ್ನುತ್ತಿದ್ದುದರಿಂದ, ಹನ್ನೊಂದು ದಿನಗಳ ನಂತರ ಅವರಿಗೆ ಸರಕಾರದ ವತಿಯಿಂದ ಒಂದು ಪ್ರಸ್ತಾಪವನ್ನು ಕಳಿಸಲಾಯಿತು. “ಈಗ ನೀವು ನದೀತಟಾಕದವರೆಗೆ ಪಲ್ಲಕ್ಕಿಯ ತೆರಳಿ ಸ್ನಾನ ಮಾಡಿ ಬರಬಹುದು, ಅಂದು ನಿಮ್ಮನ್ನು ತಡೆದಿದ್ದ ಅಧಿಕಾರಿಯೇ ಇಂದು ನಿಮ್ಮನ್ನು ಸಂಗಮದವರೆಗೆ ಸ್ನಾನಕ್ಕೆ ಕರೆದುಕೊಂಡು ಹೋಗು ತ್ತಾರೆ" ಎಂದು ತಿಳಿಸಲಾಯಿತು.
ಆದರೆ ಶ್ರೀ ಅವಿಮುಕ್ತೇಶ್ವರಾನಂದರು ಪ್ರಾಧಿಕಾರದ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಹನ್ನೊಂದು ದಿನಗಳ ಧರಣಿಗೆ ಮಂಗಳ ಹಾಡಿ ಕೊನೆಯಲ್ಲಿ ಅನ್ಯ ಉಪಾಯವಿಲ್ಲದೆ ಪೂರ್ಣಿಮೆ ಯ ಪವಿತ್ರ ಸ್ನಾನವನ್ನೂ ಮಾಡದೇ ಶಿಬಿರವನ್ನು ಅವರು ಬಿಡುವಂತಾಯ್ತು. ವಾಪಸ್ ತೆರಳುವಾಗ ಅವರು ಆಡಿದ ಮಾತು- “ಇಲ್ಲಿರುವುದು ಹಿಂದೂಗಳ ಪರವಾದ ಸರಕಾರವಲ್ಲ, ಬದಲಿಗೆ ಇದು ಮೊಘಲರ ಸರಕಾರವಾಗಿದೆ; ಸನಾತನಿಗಳ ಪರವಾದ ನನ್ನ ಹೋರಾಟ ಮುಂದುವರಿಯಲಿದೆ.
ಈ ಕುರಿತು ಕಾಶಿಗೆ ತೆರಳಿ ಮುಂದಿನ ರಣನೀತಿ ರೂಪಿಸಲಾಗುವುದು. ನಡೆಯುತ್ತಿರುವ ಮಾಘಮೇಳ ದ ಮಧ್ಯದಲ್ಲಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎನ್ನುವ ದೃಷ್ಟಿಯಿಂದ ಸುಮ್ಮನೇ ತೆರಳುತ್ತಿದ್ದೇನೆ. ಮುಂದಿನ ಮೇಳಕ್ಕೆ ಲಕ್ಷಾಂತರ ಜನರಿಂದ ಒಡಗೂಡಿ ಮತ್ತೆ ಬರುತ್ತೇನೆ. ನೀವು ಮುಂದಿನ ವರ್ಷ ಹೇಗೆ ಮೇಳ ನಡೆಸುತ್ತೀರಿ ನೋಡುತ್ತೇನೆ.
ಈಗಲೇ ಎಚ್ಚರಿಕೆ ಕೊಡುತ್ತಿದ್ದೇನೆ" ಎನ್ನುವ ಚಿತಾವಣೆ ನೀಡಿ ಅಲ್ಲಿಂದ ಕಾಶಿಗೆ ಹೊರಟರು. ಶ್ರೀ ಅವಿಮುಕ್ತೇಶ್ವರಾನಂದರ ಈ ಮಾತುಗಳು ಯಾವುದೇ ರಾಜಕೀಯ ಪುಡಾರಿಯ ಮಾತುಗಳಿಗೂ ಕಡಿಮೆಯೆನಿಸಲಿಲ್ಲ. ಅರ್ಧಕುಂಭ ಅಥವಾ ಮಹಾಕುಂಭಗಳಲ್ಲಿ ಮಾತ್ರ ಈ ಥರದಲ್ಲಿ, ಕುದುರೆ-ಆನೆಗಳ ಮೇಲೆ, ಪಲ್ಲಕ್ಕಿಯ ಮೇಲೆ ಸಾಧು-ಸಂತರು ಸ್ನಾನಕ್ಕೆ ತೆರಳುವ ಶಿಷ್ಟಾಚಾರವಿದೆಯೇ ಹೊರತು, ವಾರ್ಷಿಕವಾಗಿ ನಡೆಯುವ ಮಾಘಸ್ನಾನದಲ್ಲಿ ಇಲ್ಲ.
ಜಗನ್ನಾಥ ಪುರಿಯ ಗೋವರ್ಧನ ಪೀಠದ ವಯೋವೃದ್ಧ ಶ್ರೀ ನಿಶ್ಚಲಾನಂದರು ಗಾಲಿಕುರ್ಚಿಯ ಮೇಲೆ ಕುಳಿತು ಸದ್ದುಗದ್ದಲಗಳಿಲ್ಲದೇ ಸರಳವಾಗಿ ಬಂದು ಸ್ನಾನಮಾಡಿ ನಿರ್ಗಮಿಸಿದರು; ಆದರೆ ಶ್ರೀ ಅವಿಮುಕ್ತೇಶ್ವರಾನಂದರು ಹೀಗೆ ಪಲ್ಲಕ್ಕಿಯಲ್ಲಿ ಬರುವುದರ ಮೂಲಕ ಶಿಷ್ಟಾಚಾರವನ್ನು ಮುರಿದಿ ದ್ದಾರೆ. ಅವರು ಇಲ್ಲಿಗೆ ಬಂದ ಉದ್ದೇಶವೇ ಯೋಗಿ ಹಾಗೂ ಮೋದಿ ಸರಕಾರದ ವಿರುದ್ಧ ಉತ್ತರ ಪ್ರದೇಶದಲ್ಲಿ ಜನಾಭಿಪ್ರಾಯ ಮೂಡಿಸಲಿಕ್ಕಾಗಿತ್ತು ಎನ್ನುತ್ತಾರೆ ಅಖಿಲ ಭಾರತ ಸಂತ ಸಮಿತಿಯ ಅಧ್ಯಕ್ಷರು.
ಶ್ರೀ ಅವಿಮುಕ್ತೇಶ್ವರಾನಂದರ ‘ಮೋದಿ-ಯೋಗಿ ವಿರೋಧಿ’ ಕಾರ್ಯಕ್ರಮಗಳು ಹೊಸದೇನಲ್ಲ; ಇಡೀ ಜಗತ್ತು ಮೆಚ್ಚಿದ್ದ ಐತಿಹಾಸಿಕ ಮಹಾಕುಂಭಮೇಳದ ಸಂದರ್ಭದಲ್ಲೂ, ರಾಮಮಂದಿರ ಉದ್ಘಾಟನೆಯ ಹೊತ್ತಿನಲ್ಲೂ ಇವರದ್ದು ನೂರಾರು ತಕರಾರುಗಳಿದ್ದವು. ಗೋರಕ್ಷಣೆ ಹಾಗೂ ಸನಾತನ ಧರ್ಮದ ರಕ್ಷಣೆಯ ಹೆಸರಿನಲ್ಲಿ ಬಿಹಾರದ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ಸನ್ನು ನೇರವಾಗಿ ಬೆಂಬಲಿಸುತ್ತಿರುವವರು ಈ ಶ್ರೀಗಳು. ಹೀಗಾಗಿ ಅವರೊಬ್ಬ ರಾಜಕೀಯ ಅಜೆಂಡಾ ಹೊಂದಿರುವವರಾಗಿದ್ದಾರೆ ಎನ್ನುವುದು ಸಂಗಮದಲ್ಲಿ ಮೇಳೈಸಿದ ಸಂತಸಮಾಜದ ಅಭಿಪ್ರಾಯವಾಗಿದೆ.
ಮೂರು ಕೋಟಿ ಜನರು ಒಂದು ಜಾಗದಲ್ಲಿ ನಿಂತು ಸ್ನಾನ ಮಾಡುತ್ತಿರುವಾಗ, ಸರಿಯಾಗಿ ನಡೆದಾ ಡಲೂ ಅಲ್ಲಿ ಸ್ಥಳ ಸಿಗದಿರುವ ಸಂದರ್ಭದಲ್ಲಿ “ನಾನು ಪಲ್ಲಕ್ಕಿಯ ಬರುತ್ತೇನೆ, ಎರಡು ಹೆಜ್ಜೆಯ ನ್ನೂ ನಡೆಯುವುದು ನನ್ನ ಗೌರವಕ್ಕೆ ತಕ್ಕದಾಗುವುದಿಲ್ಲ" ಎಂದು ಗಲಾಟೆ ಮಾಡುವುದು, ಪುಂಡರ ಸಹಾ ಯದಿಂದ ಅಲ್ಲಿನ ವ್ಯವಸ್ಥೆಯನ್ನು ಮುರಿಯುವುದು ನಿಜಕ್ಕೂ ನಿಂದನೀಯ ಸಂಗತಿಯಾಗಿದೆ.
ನೂಕುನುಗ್ಗಲಿನಿಂದ ಅವಘ ಡಕ್ಕೀಡಾಗಬಹುದಾದ ಸಂದರ್ಭದಲ್ಲೂ ಪಲ್ಲಕ್ಕಿ ಇಳಿಯದೇ ಹನ್ನೊಂದು ದಿನ ಸಾರ್ವಜನಿಕವಾಗಿ ರಂಪಾಟ ಮಾಡುವುದರ ಮೂಲಕ ಅವರು ಗಳಿಸಿದ ಗೌರವ ಎಷ್ಟು? ಅದಕ್ಕಿಂತ ಹೆಚ್ಚಾಗಿ ಆದಿ ಶಂಕರಾಚಾರ್ಯರಿಗೆ ಇವರಿಂದ ಆದ ಅಗೌರವ ಎಷ್ಟು? ಅನೇಕ ಹಿರಿಯ ಸಂತರುಗಳಿಗೆ ಇವರಿಂದಾದ ಅಪಮಾನವೆಷ್ಟು? ಈಗಾಗಲೇ ಸಂಕಷ್ಟದಲ್ಲಿರುವ ಹಿಂದೂ ಸಮಾಜದ ಒಗ್ಗಟ್ಟಿಗೆ ಇವರ ವರ್ತನೆಯಿಂದ ಬಿದ್ದ ಪೆಟ್ಟು ಎಷ್ಟು ದೊಡ್ಡದು? ಒಟ್ಟಿನಲ್ಲಿ ಇವರು ಸಾಽಸಿದ್ದೇನು? ಇವೇ ಮುಂತಾದ ಪ್ರಶ್ನೆಗಳಿಗೆ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳೇ ಉತ್ತರಿಸಿದರೆ ಚೆನ್ನ.
“ನಾನೂ ಶಂಕರಾಚಾರ್ಯ" ಎಂದುಕೊಂಡು ತಿರುಗಾಡುವವರು, ಕರ್ನಾಟಕದ ಹೆಮ್ಮೆಯ ದಕ್ಷಿಣಾ ಮ್ನಾಯ ಶ್ರೀ ಶಾರದಾ ಪೀಠದ ಯತಿಗಳಿಂದ ಕಲಿಯಬೇಕಾಗಿದೆ. ಅನುಷ್ಠಾನ ನಿರತರಾಗಿದ್ದು ಕೊಂಡು, ಹಿಂದೂಗಳನ್ನು ಕೂಡಿಸುವ ಕೆಲಸ ಮಾಡುತ್ತ, ರಾಜಕೀಯದಿಂದ ಅಂತರ ಕಾಯ್ದು ಕೊಂಡು ಪೀಠದ ಗೌರವವನ್ನು ಉತ್ತುಂಗಕ್ಕೇರಿಸುತ್ತಾ ಸಾಗುತ್ತಿರುವ ಶೃಂಗೇರಿ ಪರಂಪರೆಯ ಯತಿ ಗಳನ್ನು ನೋಡಿಯಾದರೂ ಇಂಥವರು ಕಲಿಯಬಹುದಿತ್ತು...