ವಿದೇಶವಾಸಿ
dhyapaa@gmail.com
ಕಾಡಿನಲ್ಲಿ ಒಂದು ಓಕ್ ಗಿಡ ಹಾಗೂ ಬಿದಿರಿನ ಗಿಡ ಅಕ್ಕಪಕ್ಕದಲ್ಲಿ ಹುಟ್ಟಿಕೊಂಡವಂತೆ. ದಿನಗಳೆ ದಂತೆ, ಓಕ್ ಗಿಡ ದೊಡ್ಡದಾಗಿ ಬೆಳೆಯಲು ಆರಂಭಿಸಿತಂತೆ. ಆದರೆ ಬಿದಿರಿನಲ್ಲಿ ಯಾವ ಬೆಳವಣಿಗೆ ಯೂ ಕಾಣಿಸಲಿಲ್ಲವಂತೆ. ದಿನವಷ್ಟೇ ಅಲ್ಲ, ತಿಂಗಳು ಕಳೆದು, 3-4 ವರ್ಷಗಳಾದರೂ ಓಕ್ ಗಿಡ ಬೆಳೆಯುತ್ತಿತ್ತೇ ವಿನಾ ಬಿದಿರಿನಲ್ಲಿ ಕಣ್ಣಿಗೆ ಕಾಣುವ ಯಾವ ಬದಲಾವಣೆಯೂ ಆಗಲಿಲ್ಲವಂತೆ. ಆಗಲೇ ಬೆಳೆದು ಮರವಾದ ಓಕ್, ಆಗಾಗ ಬಿದಿರಿಗೆ ಪ್ರಶ್ನೆ ಮಾಡುತ್ತಿತ್ತಂತೆ- “ನಾನು-ನೀನು ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಅಕ್ಕ-ಪಕ್ಕದಲ್ಲಿಯೇ ಹುಟ್ಟಿಕೊಂಡರೂ, ಬೆಳವಣಿಗೆಯಲ್ಲಿ ಯಾಕೆ ಹೀಗೆ? ನನ್ನನ್ನು ನೋಡು, ಈಗಾಗಲೇ ಬೆಳೆದು ಎಷ್ಟು ದೊಡ್ಡವನಾಗಿ ದ್ದೇನೆ.
ನನಗಿಂತ ಮೊದಲು ಹುಟ್ಟಿದ ಕೆಲವು ಮರಗಳಿಗಿಂತಲೂ ಎತ್ತರವಾಗಿ, ದಷ್ಟಪುಷ್ಟವಾಗಿ ಬೆಳೆದಿದ್ದೇನೆ. ಇಡೀ ಕಾಡೇ ನನ್ನ ಬೆಳವಣಿಗೆಯನ್ನು ಕೊಂಡಾಡುತ್ತಿದೆ. ನೀನು ಮಾತ್ರ ಇನ್ನೂ 3 ಅಡಿಯಷ್ಟೂ ಎತ್ತರ ಬೆಳೆಯಲಿಲ್ಲ. ನಿನಗೆ, ನಿನ್ನ ಬಗ್ಗೆ ಏನೂ ಅನ್ನಿಸುವುದಿಲ್ಲವೇ?" ಆಗ ಬಿದಿರು ಹೇಳುತ್ತಿತ್ತಂತೆ- “ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಒಂದಲ್ಲ ಒಂದು ದಿನ ನಾನೂ ಬೆಳೆಯು ತ್ತೇನೆ. ಆ ಬೆಳವಣಿಗೆಗಾಗಿಯೇ ಈ ತಯಾರಿ ನಡೆಸಿದ್ದೇನೆ".
ಸುಮಾರು 4-5 ವರ್ಷದವರೆಗೂ ಓಕ್ ಮರ ಬಿದಿರನ್ನು ಅದರ ಬೆಳವಣಿಗೆಯ ಕುರಿತು ಹೀಯಾ ಳಿಸುತ್ತ, ಆಗಾಗ ಜರೆಯುತ್ತ, ತನ್ನ ದೊಡ್ಡಸ್ತಿಕೆಯ ಬಗ್ಗೆ ಮಾತನಾಡುತ್ತ, ಬಿದಿರನ್ನು ಹಂಗಿಸು ತ್ತಿತ್ತಂತೆ. ಐದು ವರ್ಷವಾಗುತ್ತಿದ್ದಂತೆ ಬಿದಿರು ಒಮ್ಮೆಲೇ ಬೆಳೆಯಲು ಆರಂಭಿಸಿತಂತೆ. ನೋಡ ನೋಡುತ್ತಿದ್ದಂತೆಯೇ ಬಿದಿರು ವಾರಕ್ಕೆ 1-2 ಅಡಿ ಎತ್ತರಕ್ಕೆ ಬೆಳೆಯತೊಡಗಿತಂತೆ.
ಇದನ್ನೂ ಓದಿ: Kiran Upadhyay Column: ಇವರು ಬಾಲ ಶಾಸ್ತ್ರಿ
6 ತಿಂಗಳು ಆಗುವುದರ ಒಳಗೆ ಬಿದಿರು 50-60 ಅಡಿ ಬೆಳೆದು, ಓಕ್ ಮರಕ್ಕಿಂತಲೂ ಎತ್ತರಕ್ಕೆ ನಿಂತಿ ತಂತೆ. ಹೀಗಿರುವಾಗ ಒಮ್ಮೆ ಕಾಡಿನಲ್ಲಿ ದೊಡ್ಡ ಬಿರುಗಾಳಿ ಬೀಸಿತಂತೆ. ಆ ಬಿರುಗಾಳಿಗೆ ಸಾಕಷ್ಟು ಮರಗಳು ಧರಾಶಾಯಿಯಾದವಂತೆ. ಆದರೆ ಬಿದಿರು ಮಾತ್ರ ಬಗ್ಗಿ ಭೂಸ್ಪರ್ಶ ಮಾಡಿದರೂ, ಬಿರುಗಾಳಿ ನಿಂತ ನಂತರ ಪುನಃ ತಲೆಯೆತ್ತಿ ಮೊದಲಿನಂತೆಯೇ ನಿಂತಿತಂತೆ.
ಧರೆಗೆ ಉರುಳಿದ ಮರಗಳಲ್ಲಿ ಬುಡ ಮುರಿದು ನೆಲಕ್ಕೆ ಒರಗಿದ ಓಕ್ ಮರವು ಬಿದಿರನ್ನು ಕಂಡು ಕೇಳಿತಂತೆ- “ನೀನು ನಿಧಾನವಾಗಿ ಬೆಳೆದರೂ, ಇಷ್ಟು ದೊಡ್ಡ ಬಿರುಗಾಳಿಯನ್ನು ಸಹಿಸಿಕೊಂಡು ಪುನಃ ತಲೆಯೆತ್ತಿ ಹೇಗೆ ನಿಂತುಕೊಂಡೆ? ನಾನು ನಿನಗಿಂತ ವೇಗವಾಗಿ, ನಿನಗಿಂತ ದಪ್ಪ, ವಿಶಾಲವಾಗಿ ಬೆಳೆದರೂ ಒಂದು ಬಿರುಗಾಳಿಗೆ ನೆಲಕ್ಕೆ ಒರಗಬೇಕಾಯಿತು. ನಿನಗೆ ಮಾತ್ರ ಏನೂ ಆಗಲಿಲ್ಲ.
ಇದು ಹೇಗೆ ಸಾಧ್ಯವಾಯಿತು?". ಆಗ ಬಿದಿರು, “ಆರಂಭದ ದಿನಗಳಲ್ಲಿ ನೀನು ನನ್ನ ಬೆಳವಣಿಗೆ ಕಂಡು ಹೀಯಾಳಿಸುತ್ತಿದ್ದೆ, ಅಣಕಿಸುತ್ತಿದ್ದೆ. ನೀನು ಬೇಗ ಬೆಳೆದೆ ಎಂದು ಬೀಗುತ್ತಿದ್ದೆ. ಆದರೆ ನಾನು ಇದ್ಯಾವುದನ್ನೂ ಲೆಕ್ಕಿಸದೆ, ನನ್ನ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನೀನು ಭೂಮಿಯ ಮೇಲೆ ಎಷ್ಟು ಬೆಳೆಯುತ್ತಿದ್ದೆಯೋ, ನಾನು ಭೂಮಿಯ ಕೆಳಗೆ ಅಷ್ಟೇ ದೃಢವಾಗಿ ಬೆಳೆಯುತ್ತಿದ್ದೆ.
ನನ್ನ ಬೇರನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಮೊದಲು 4-5 ವರ್ಷ ನಾನು ಮಾಡಿದ ಕೆಲಸ ಎಂದರೆ, ನನ್ನ ಬೇರನ್ನು ಗಟ್ಟಿಯಾಗಿಸಿಕೊಂಡದ್ದು. ನನ್ನ ಬೇರು ಗಟ್ಟಿಯಾಗಿದ್ದುದರಿಂದಲೇ ಇಂದು ನಾನು ಪುನಃ ದೃಢವಾಗಿ ತಲೆಯೆತ್ತಿ ನಿಂತಿದ್ದೇನೆ. ನಿನ್ನ ಬೇರು ಗಟ್ಟಿಯಾಗಿರದ ಕಾರಣ ನೀನು ಧರೆಗೆ ಉರುಳಿದ್ದೀಯೆ. ನಾನು ಭೂಮಿಯ ಕೆಳಗೆ ನನ್ನ ಕೆಲಸವನ್ನು ಮಾಡುತ್ತಿದ್ದರಿಂದ ಆಗ ಅದು ನಿನ್ನ ಕಣ್ಣಿಗೆ ಕಾಣಲಿಲ್ಲ. ಈಗ, ಬಿರುಗಾಳಿ ಬೀಸಿ ಹೋದ ನಂತರ, ನಾನು ನಿನ್ನ ಕಣ್ಣಿಗಷ್ಟೇ ಅಲ್ಲ, ಎಲ್ಲರ ಕಣ್ಣಿಗೂ ಕಾಣುತ್ತಿದ್ದೇನೆ" ಎಂದು ಹೇಳಿತಂತೆ.
ಇದು ಒಂದು ಹಳೆಯ ಕತೆಯಾದರೂ ವಾಸ್ತವವೂ ಹೌದು. ಬಿದಿರು ಹುಟ್ಟಿಕೊಂಡ ತಕ್ಷಣ ಮೇಲೆ ಬೆಳೆಯುವುದಿಲ್ಲ. ಮೊದಲ ಕೆಲವು ವರ್ಷ ಅದರ ಬೆಳವಣಿಗೆ ಏನಿದ್ದರೂ ಭೂಮಿಯ ಕೆಳಗೆ. ಬೇರು ಗಟ್ಟಿಯಾದ ನಂತರ ಬಿದಿರು ಭೂಮಿಯ ಮೇಲೆ ಗಮನಾರ್ಹ ರೀತಿಯಲ್ಲಿ ಬೆಳೆಯುತ್ತದೆ. ಈ ಕತೆಯನ್ನು ತ್ವರಿತವಾಗಿ ಬೆಳೆಯುವ ಮತ್ತು ತಾಳ್ಮೆಯಿಂದ ಬೆಳೆಯುವ ಗುಣ ಅಥವಾ ಮನಸ್ಥಿತಿಯ ಪರಿಣಾಮವನ್ನು ಹೇಳಲು ಉದಾಹರಣೆಯಾಗಿ ಬಳಸುವುದಿದೆ.
ಎಲ್ಲವೂ ತ್ವರಿತವಾಗಿಯೇ ಆಗಬೇಕು, ಯಶಸ್ಸು ಕೂಡ ತ್ವರಿತವಾಗಿ ಬರಬೇಕು ಎಂದು ಎಣಿಸುವ ಇಂದಿನ ಜಗತ್ತಿನಲ್ಲಿ, ನಾವು ತಾಳ್ಮೆಯ ಮತ್ತು ಶಾಂತಿಯ ಶಕ್ತಿಯನ್ನು ಮರೆತು ಬಿಡುತ್ತೇವೆ. ಶೀಘ್ರ ವಾಗಿ ಬೆಳೆದವರೊಂದಿಗೆ ನಮ್ಮನ್ನು ನಾವು ತುಲನೆ ಮಾಡಿಕೊಳ್ಳುತ್ತೇವೆ. ತ್ವರಿತ ಮತ್ತು ನಿಧಾನದ ಮಾಪನದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತೇವೆ.
ಇಂದು ಬೆಳವಣಿಗೆ ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ, ಮುಂದೆಂದೂ ಅದು ಬೆಳೆಯುವುದಿಲ್ಲ ಎಂದು ಅರ್ಥವಲ್ಲ. ಇಂದು ದುರ್ಬಲರಾಗಿ ಕಾಣುವವರು ನಾಳೆ ಹೆಚ್ಚು ಉತ್ತಮವಾಗಿ, ಸಶಕ್ತವಾಗಿ ಬೆಳೆಯಲು ತಯಾರಿ ನಡೆಸುತ್ತಿರಬಹುದು ಎನ್ನುವುದು ನಮಗೆ ಅರ್ಥವೇ ಆಗುವುದಿಲ್ಲ. ಆ ಕಾಲ ಬಂದಾಗ ಮಾತ್ರ ನಿಧಾನವಾಗಿ ಎತ್ತರಕ್ಕೆ ಬೆಳೆದವರನ್ನು ಕಂಡು ಎಲ್ಲರೂ ಆಶ್ಚರ್ಯಪಡುತ್ತಾರೆ. ಇದು ವ್ಯಕ್ತಿಗಳ ವಿಷಯಕ್ಕಾದರೂ ಅಷ್ಟೇ, ದೇಶದ ವಿಷಯದದರೂ ಅಷ್ಟೇ.
ಒಂದು ಕಾಲದಲ್ಲಿ ಲೋಕದ ಕಣ್ಣಲ್ಲಿ ಭಾರತ ಎಂದರೆ ಕೊಳಚೆ ಪ್ರದೇಶ, ಹಾವಾಡಿಗರ ದೇಶ, ಭಿಕ್ಷುಕರ ನಾಡು. ಅಶಿಕ್ಷಿತರ, ಬಹುಭಾಷಿತರ, ಧರ್ಮ-ಜಾತಿಗಳ ನಡುವೆ ಹೊಂದಾಣಿಕೆ ಇಲ್ಲದ, ರಾಜ್ಯದ, ದೇಶದ ಗಡಿಗೆ ಬಡಿದಾಡುವ ರಾಷ್ಟ್ರವೆಂದೇ ಹೆಸರಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ, ಟೆಲಿವಿಷನ್‌ಗಳಲ್ಲಿ ಭಾರತದ ಕುರಿತು ಯಾವುದಾದರೂ ಸುದ್ದಿ ಇದ್ದರೆ, ಅದು ಭಾರತವನ್ನು ಜರೆಯುವುದಕ್ಕೆ, ತೆಗಳುವುದಕ್ಕೆ ಮೀಸಲಿಟ್ಟಂತೆ ಇರುತ್ತಿತ್ತು. ಭಾರತದಲ್ಲಿ ಇರುವ ಒಳ್ಳೆಯತನ, ಆಗುತ್ತಿರುವ ಉತ್ತಮ ಬದಲಾವಣೆಗಳು ಜಗತ್ತಿನ ಕಣ್ಣಿಗೆ ಕಾಣುತ್ತಲೇ ಇರಲಿಲ್ಲ.
ಭಾರತವಾದರೂ ಅಷ್ಟೇ, ಅಮೆರಿಕ, ಬ್ರಿಟನ್ ಅಥವಾ ಇನ್ಯಾವುದೋ ಶಕ್ತಿಶಾಲಿ ಎಂದು ಕರೆಸಿ ಕೊಂಡ ದೇಶ ಏನೇ ಹೇಳಿದರೂ ತುಟಿಪಿಟಕ್ ಎನ್ನದೆ, ದೇಹ ಬಾಗಿಸಿ, ತಲೆತಗ್ಗಿಸಿ, ‘ಜೀ ಹುಜೂರ್’ ಎಂದು ಹೇಳಿ ಸುಮ್ಮನೆ ಕುಳಿತು ಕೊಳ್ಳುತ್ತಿತ್ತು. ಶಕ್ತಿಶಾಲಿ ದೇಶದ ಜತೆಗಿನ ಭಾರತದ ಬಹುತೇಕ ವ್ಯಾಪಾರಗಳು ಅವಶ್ಯಕತೆಗಿಂತ ಹೆಚ್ಚಾಗಿ ಆ ದೇಶದ ಜತೆ ಸಂಬಂಧ ಗಳಿಸಿಕೊಳ್ಳಬೇಕು ಅಥವಾ ಉಳಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದಲೇ ನಡೆಯುತ್ತಿದ್ದವು.
ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದ ಕೆಲವು ದೇಶಗಳು ಭಾರತ ಇಂದಿಗೂ ಜೀತದಾಳಿನ ಮನಸ್ಥಿತಿಯಲ್ಲಿಯೇ ಇದೆ, ತಾವು ಕೈಬಿಟ್ಟರೆ ಭಾರತ ಮುಳುಗಿ ಹೋಗುತ್ತದೆ, ನಾಶವಾಗುತ್ತದೆ ಎಂಬ ದೊಡ್ಡಸ್ತಿಕೆಯಲ್ಲಿಯೇ ಉಳಿದುಕೊಂಡವು. ಭಾರತ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡು ಅಂತರಿಕ್ಷಕ್ಕೆ ನೆಗೆದದ್ದಾಗಲಿ, ಯುದ್ಧದ ಸಲಕರಣೆ ತಯಾರಿಸಿದ್ದಾಗಲಿ, ಕಂಪ್ಯೂಟರ್, ಡಾಟಾ ಸೆಂಟರ್‌ಗಳ ನಿರ್ಮಾಣದಲ್ಲಿ ಮಾಡಿದ ಸಾಧನೆಯಾಗಲಿ ಕಾಣಲೇ ಇಲ್ಲ.
ಅಥವಾ ಕಂಡರೂ ಕಾಣದಂತೆ ಸುಮ್ಮನೇ ಉಢಾಫೆ ಹೊಡೆದು ಕುಳಿತಿರಲಿಕ್ಕೂ ಸಾಕು. ಬಲಶಾಲಿ ಗಳು ಎಂದು ಕರೆಸಿಕೊಂಡವರೆಲ್ಲ ತಮ್ಮ ಪರದೆಯ ಮೇಲೆ ತಾವೇ ನಿರ್ಮಾಣ ಮಾಡಿದ ಚಿತ್ರ ನೋಡುವುದರಲ್ಲಿ, ಅದರ ಬಗ್ಗೆಯೇ ಮಾತನಾಡುವುದರಲ್ಲಿ ವ್ಯಸ್ತರಾಗಿದ್ದರೇ ವಿನಾ, ಭಾರತದಲ್ಲಿ ಅದಕ್ಕಿಂತ ಉತ್ತಮ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎಂಬುದು ಅವರ ಗಮನಕ್ಕೆ ಬರಲೇ ಇಲ್ಲ.
ಹಾಗಾದರೆ ಭಾರತ ಇದ್ದಕ್ಕಿದ್ದಂತೆ ಎಚ್ಚರಗೊಂಡಿತೇ? ಅಷ್ಟು ಶಕ್ತಿಯುತವಾಯಿತೇ? ಹೌದು ಎಂದಾದರೆ, ಭಾರತಕ್ಕೆ ಈ ಶಕ್ತಿ ರಾತ್ರಿ ಬೆಳಗಾಗುವುದರೊಳಗೆ ಬಂದಿದ್ದಲ್ಲ. ಇದರ ಹಿಂದೆ ಸಾಕಷ್ಟು ವರ್ಷಗಳ ಶ್ರಮವಿದೆ.
ಅಮೆರಿಕವನ್ನು ಅಥವಾ ಯಾವುದೇ ಬಲಿಷ್ಠ ರಾಷ್ಟ್ರವನ್ನು ಎದುರು ಹಾಕಿಕೊಂಡರೆ ಆಗುವ ಪರಿಣಾಮ ಭಾರತಕ್ಕೆ ತಿಳಿಯದಿದ್ದದ್ದೇನೂ ಅಲ್ಲ. ಆದರೆ ಅಂಥ ದೇಶಗಳು ಕೈಬಿಟ್ಟರೂ ತಾನು ಬದುಕಬಹುದು ಎಂಬ ಆತ್ಮವಿಶ್ವಾಸ ಬಂದ ನಂತರವೇ ಭಾರತ ಈ ನಿಲುವಿಗೆ ಬಂದು ನಿಂತಿದೆ. ಅದಿಲ್ಲವಾದರೆ ಇಂದಿಗೂ ಭಾರತವು ಅಮೆರಿಕ ಹೇಳಿದ್ದಕ್ಕೆ ಒಪ್ಪಿಕೊಂಡು ಸುಮ್ಮನೆ ಬಿದ್ದಿರುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ನೀಡುತ್ತಿರುವ ಸಾಕಷ್ಟು ಹೇಳಿಕೆಗಳನ್ನು ನೀವು ಗಮನಿಸಿರಬಹುದು. ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಸಂಸ್ಥೆ ಭಾರತದ ಬದಲು ಅಮೆರಿಕ ದಲ್ಲಿಯೇ ಕಾರುಗಳನ್ನು ನಿರ್ಮಾಣ ಮಾಡಬೇಕು, ದೊಡ್ಡ ಸಂಸ್ಥೆಗಳಾದ ಗೂಗಲ್, ಆಪಲ್, ಮೈಕ್ರೋಸಾಫ್ಟ್ ಮುಂತಾದವು ಏಷ್ಯಾದ, ಅದರಲ್ಲೂ ಭಾರತದ ಜನರಿಗೆ ಉದ್ಯೋಗ ನೀಡುವ ಬದಲು ಅಮೆರಿಕದ ಜನರಿಗೆ ಉದ್ಯೋಗಾವಕಾಶ ಒದಗಿಸಿ ಕೊಡಬೇಕು ಎಂದು ಅಮೆರಿಕದ ಅಧ್ಯಕ್ಷ ಹೇಳುವಾಗ ಭಾರತ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ.
ಏಕೆಂದರೆ ಅದು ದೇಶ ಆಳುವ ನಾಯಕನಾಗಿ ತನ್ನ ದೇಶದ ಬಗ್ಗೆ ಇರಬೇಕಾದ ಪ್ರೀತಿಯನ್ನು, ಬದ್ಧತೆ ಯನ್ನು ತೋರಿಸುವ ಮಾತುಗಳು ಎಂದೇ ಎಲ್ಲರೂ ಪರಿಗಣಿಸಬೇಕು, ಭಾರತವೂ ಹಾಗೆಯೇ ಪರಿಗಣಿಸಿದ್ದಿರಬೇಕು. ಯಾವಾಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳಿಗೆ ಶೇಕಡ 25ರಷ್ಟು ಸುಂಕ ನೀಡಬೇಕು ಎಂದು ಹೇಳಿದರೋ, ಆಗ ಭಾರತವು ಪ್ರತಿಕ್ರಿಯೆ ನೀಡಿ, ಅಮೆರಿಕದ ಜತೆ ಮಾಡಿಕೊಂಡ ಯುದ್ಧವಿಮಾನದ ಒಪ್ಪಂದವನ್ನು ತಡೆಹಿಡಿಯಿತು.
ಇದನ್ನು ಅಮೆರಿಕ ನಿರೀಕ್ಷಿಸಿರಲಿಲ್ಲ. ಭಾರತ ಹಾಗೆ ಪ್ರತಿಕ್ರಿಯಿಸುವುದಕ್ಕೆ ನಿಜವಾದ ಕಾರಣ ಅಥವಾ ಮುಂದೆ ಆಗುವ ಪರಿಣಾಮ ಏನು ಎನ್ನುವುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಇದು ಯಾವ ದಿಕ್ಕಿಗೂ ಹೋದೀತು ಅಥವಾ ಏನು ಆಗಲಿಲ್ಲವೆಂಬಂತೆ ಪುನಃ ಹೊಂದಾಣಿಕೆಯೂ ಆಗಬಹುದು. ಆದರೆ, ಅಮೆರಿಕ ಮರೆತಿದ್ದೇನೆಂದರೆ, ಇಷ್ಟು ದಿನ ಕೂಲಿ ಕಾರ್ಮಿಕರು, ಕೆಲಸದವರಿ ಗಾಗಿಯೇ ಇರುವ ದೇಶವಾಗಿದ್ದ ಭಾರತದ ಪ್ರಜೆಗಳು ಇಂದು ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖ ಕುರ್ಚಿ ಯಲ್ಲಿ ಕುಳಿತಾಗಿದೆ ಎಂಬುದನ್ನು ಗಮನಿಸದೇ ಇದ್ದದ್ದು.
ಮೊನ್ನೆ ಅಮೆರಿಕದ ನಿಲುವಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು ಹೆದರಿಯೋ, ಬೆದರಿಯೋ ಅಲ್ಲ ಅಥವಾ ಯಾರದ್ದೇ ಒತ್ತಡಕ್ಕೂ ಅಲ್ಲ. ಇದು ಇಷ್ಟು ವರ್ಷ ನಡೆಸಿದ ತಯಾರಿಯ ಪರಿಣಾಮ. ಇತರ ದೇಶಗಳು ಸುದ್ದಿಯ ಬೆನ್ನು ಹತ್ತಿ ಹೋಗುತ್ತಿದ್ದಾಗ ಭಾರತ ಸುದ್ದಿ ನೀಡುವ ತಯಾರಿ ನಡೆಸಿತ್ತು. ಒಂದು ಕಡೆ ಅಮೆರಿಕ ವಿಶ್ವದ ಪೊಲೀಸರಂತೆ ವರ್ತಿಸಿ, ಬೇರೆ ದೇಶಗಳ ಮೇಲೆ ನಿರ್ಬಂಧ ಹೇರಿ, ಬೇರೆ ದೇಶವನ್ನು ಒಡೆಯಲು ರಹಸ್ಯ ಕಾರ್ಯಾಚರಣೆ ನಡೆಸಿ, ಒಂದು ದೇಶದ ಆಂತರಿಕ ವಿಭಜನೆಯನ್ನು ಕುಶಲತೆಯಿಂದ ನಿರ್ವಹಿಸಿ ತನ್ನ ಪಾರುಪತ್ಯ ಸ್ಥಾಪಿಸುವುದರಲ್ಲಿ ನಿರತವಾಗಿದ್ದರೆ, ಇನ್ನೊಂದು ಕಡೆ ಚೀನಾ ಅಭಿವೃದ್ಧಿಯ ಹೆಸರಿನಲ್ಲಿ ಬೇರೆ ದೇಶಗಳನ್ನು ಸಾಲದ ಬಲೆಯಲ್ಲಿ ಸುತ್ತುತ್ತಿರುವ ಸಮಯದಲ್ಲಿ ಭಾರತ ಮಾತ್ರ ಸಂಪೂರ್ಣವಾಗಿ ವಿಭಿನ್ನವಾದುದನ್ನೇ ನಿರ್ಮಿಸುವಲ್ಲಿ ನಿರತ ವಾಗಿತ್ತು.
ಭಾರತ ಇತರ ದೇಶಗಳೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವುದರಲ್ಲಿ ಶ್ರಮವಹಿಸಿತ್ತು. ಭಾರತದ ವಹಿವಾಟು ಒಪ್ಪಂದಗಳು ಕೇವಲ ವ್ಯಾಪಾರದ ಒಪ್ಪಂದಗಳಾಗಿರದೇ ಅರ್ಥಪೂರ್ಣ, ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ನಿರ್ಮಿಸಿತು. ಅದರ ಪರಿಣಾಮವಾಗಿಯೇ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ಬಹುತೇಕ ರಾಷ್ಟ್ರಗಳು ಭಾರತ ವನ್ನು ಸಮರ್ಥಿಸಿದವು ಅಥವಾ ಸುಮ್ಮನೇ ಕುಳಿತವು.
ಒಂದು ಕಾಲದಲ್ಲಿ ಭಾರತವೆಂದರೆ ಅಸ್ತವ್ಯಸ್ತಗೊಂಡ ಪ್ರಜಾಪ್ರಭುತ್ವ ಎಂದು ದೂರುತ್ತಿದ್ದ ದೇಶ ಗಳೇ ಈಗ ಪ್ರಜಾಪ್ರಭುತ್ವವನ್ನು ಸ್ಥಿರಗೊಳಿಸುವ ಶಕ್ತಿಯುತ ದೇಶ ಭಾರತ ಎಂದು ಕರೆಯುತ್ತಿವೆ. ತಮ್ಮ ತಂತ್ರeನಗಳನ್ನು ಹಂಚಿಕೊಳ್ಳಲು ನಿರಾಕರಿಸುವ ದೇಶಗಳು ಈಗ ಭಾರತದೊಂದಿಗೆ ಸಹಯೋಗ ನೀಡಲು ಸಾಲುಗಟ್ಟಿ ನಿಂತಿವೆ. ಭಾರತ ಕೇವಲ ‘ಕಾರ್ಮಿಕರ ಮಾರುಕಟ್ಟೆ’, ‘ಬಡವರ ಬೀಡು’ ಎಂದು ಹಳೆಯ ಪುಸ್ತಕಗಳಲ್ಲಿ ಓದಿದ ದೇಶಗಳು ಸದ್ಯಕ್ಕಂತೂ ಇಂದಿನ ಭಾರತ ಅದಲ್ಲ ಎಂಬುದನ್ನು ಅರಿತುಕೊಂಡಂತಿದೆ.
ಇನ್ನು ಭಾರತವು ಅಮೆರಿಕಕ್ಕೆ ಕೊಟ್ಟ ಏಟಿನ ಉರಿ, ಪ್ರಮಾಣ, ಅದರ ಪರಿಣಾಮಗಳೆಲ್ಲ ಮುಂದಿನ ದಿನಗಳ ತಿಳಿಯಬೇಕು. ಆದರೆ ಒಂದಂತೂ ನಿಜ, ಊರಿನ ಪೈಲ್ವಾನನೊಬ್ಬ ಒಂದೇ ಸಲ ನಾಲ್ಕು ಜನರಿಗೆ ಹೊಡೆದರೆ ಅದು ಸುದ್ದಿಯಲ್ಲ. ಆದರೆ ಅದೇ ಪೈಲ್ವಾನನಿಗೆ ಸಾಮಾನ್ಯ ಸಣಕಲು ಮನುಷ್ಯ ನೊಬ್ಬ ಒಂದೇ ಏಟು ಕೊಟ್ಟರೂ ಅದು ಊರಿನಲ್ಲ ದೊಡ್ದ ಸುದ್ದಿ. ಈಗ ಆಗಿದ್ದೂ ಅದೇ, ಇತರ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರುವ, ಯುದ್ಧಕ್ಕೆ ಇಳಿಯುವ, ತಾನು ಹೇಳಿದಂತೆಯೇ ಕೇಳಬೇಕು ಎಂದು ಹಂಬಲಿಸುವ ಅಮೆರಿಕ ಏನೇ ಮಾಡಿದರೂ ಅದು ಸುದ್ದಿಯಲ್ಲ.
ಅದು ಹತ್ತರೊಂದಿಗೆ ಹನ್ನೊಂದು. ಆದರೆ ಅಮೆರಿಕ ಮಾತ್ರವಲ್ಲ, ಇತರ ಕೆಲವು ದೇಶಗಳ ನಿರೀಕ್ಷೆಗೂ ಮೀರಿ ಭಾರತ ಪ್ರತಿಕ್ರಿಯೆ ನೀಡಿದ್ದು ದೊಡ್ಡ ಸುದ್ದಿ. ಈಗ ಮತ್ತೊಮ್ಮೆ ಓಕ್ ಮತ್ತು ಬಿದಿರಿನ ಕತೆ ಓದಿಕೊಳ್ಳಿ.