ತನ್ನಿಮಿತ್ತ
ಲಕ್ಷ್ಮಣ ಆರ್.ನಿರಾಣಿ
ಮಹಾತ್ಮ ಗಾಂಧೀಜಿ 1934ರಲ್ಲಿ ಒಮ್ಮೆ ಉಡುಪಿಗೆ ಭೇಟಿ ನೀಡಿದಾಗ, ಅಲ್ಲಿಯ ಪ್ರಸಿದ್ಧ ಶ್ರೀಕೃಷ್ಣ ಮಂದಿರ ಸಮೀಪದ ರಥಬೀದಿಯಲ್ಲಿ ನಡೆದು ಮುಂದೆ ಹೋದರು, ಆದರೆ ಒಳಗೆ ಹೋಗಲಿಲ್ಲ. ಜತೆಗಿದ್ದವರು ಆಗ್ರಹಿಸಿದರೂ ಅವರು ಒಪ್ಪಲಿಲ್ಲ. ಎಲ್ಲರಿಗೂ ಪ್ರವೇಶವಿಲ್ಲದ ಮಂದಿರಗಳಿಗೆ ಅವರು ಹೋಗುತ್ತಿರಲಿಲ್ಲ. ಇದು ಗಾಂಧೀಜಿ ಸ್ವಯಂ ಹಾಕಿಕೊಂಡಿದ್ದ ನಿರ್ಬಂಧವಾಗಿತ್ತು.
ಅಂದು ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾಡುತ್ತಾ, “ಉಡುಪಿ ಯು ಬಹಳ ದಿನಗಳಿಂದ ನನ್ನ ಮನಸ್ಸನ್ನು ಆವರಿಸಿದೆ. ಇಲ್ಲಿಯ ಕೃಷ್ಣ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದೇನೆ. ಜಾತಿಯ ಕಾರಣಕ್ಕೆ ಭಕ್ತ ಕನಕನಿಗೆ ದೇವಾಲಯದ ಪ್ರವೇಶವನ್ನು ನಿರಾಕರಿಸಲಾಯಿತು, ಆಗ ಕೃಷ್ಣ ದೇವರು ತಿರುಗಿ ಕಿಂಡಿಯ ಮೂಲಕ ಕನಕನಿಗೆ ದರ್ಶನ ವನ್ನು ದಯಪಾಲಿಸಿದರು ಎಂಬ ಕಥೆಯನ್ನು ಅರಿತಿದ್ದೇನೆ.
ಇದು ಭಾರತದಲ್ಲಿನ ಜಾತಿ ತಾರತಮ್ಯ ನಿವಾರಣೆಗೆ ಸಂಬಂಧಿಸಿದ ಅರ್ಥಪೂರ್ಣ ರೂಪಕ. ದೇವರೇ ಹೀಗೊಂದು ಪರಿಹಾರ ಸೂಚಿಸಿರುವುದು ನಿಜಕ್ಕೂ ಅಪರೂಪದ ಸಂಗತಿ. ಆದ್ದರಿಂದ ದೇವಾಲಯ ಪ್ರವೇಶಿಸಲು ಎಲ್ಲರಿಗೂ ಸಾಧ್ಯವಾಗುವಂತೆ, ಸೌಮ್ಯ ಮಾರ್ಗ ದಿಂದ ಜನಾಭಿಪ್ರಾಯವನ್ನು ರೂಪಿಸಬೇಕು.
ಇದನ್ನೂ ಓದಿ: Leena Kamath Joshi Column: ಹಿಂದೂಗಳನ್ನು ನಿದ್ದೆಯಿಂದ ಬಡಿದೆಬ್ಬಿಸಿದಾಕೆಯ ದಾರುಣ ಜೀವನದ ಕಥೆ
ಇದು ಆತ್ಮಶುದ್ಧಿಯ ಚಳವಳಿಯಾಗಬೇಕು" ಎಂದಿದ್ದರು. ಮುಂದೆ ಕೆಲವೇ ದಿನಗಳಲ್ಲಿ, ಅವರ ಇಚ್ಛೆಯಂತೆ ಕೃಷ್ಣ ಮಂದಿರಕ್ಕೆ ಎಲ್ಲರಿಗೂ ಮುಕ್ತಪ್ರವೇಶ ದೊರಕಿತು. ಗಾಂಧೀಜಿ ಭಾಷಣ ಮಾಡಿದ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಿಸಲಾಗಿದೆ. ಕನಕನ ಕಿಂಡಿಯ ರೂಪಕವನ್ನು ಗಾಂಧೀಜಿ ವಿವರಿಸಿದ್ದು ದೊಡ್ಡ ಸಂಚಲನವನ್ನೇ ಉಂಟುಮಾಡಿತು.
ಮಂದಿರಗಳ ಪ್ರವೇಶಕ್ಕೆ ನಿರ್ಬಂಧ ಹಾಕುವುದು ಕಡಿಮೆಯಾಗತೊಡಗಿತು. ಅಂದರೆ, ಬಹಳಷ್ಟು ಮಂದಿರಗಳು ಎಲ್ಲರ ಪ್ರವೇಶಕ್ಕೆ ಮುಕ್ತವಾಗತೊಡಗಿದವು. ಕೆಲವು ಮಂದಿರ ಗಳಲ್ಲಿ ‘ಪ್ರವೇಶ ಮುಕ್ತವಾಗಿದೆ’ ಎಂಬ ಫಲಕಗಳನ್ನು ಪ್ರದರ್ಶಿಸುವ ವಿಧಾನವೂ ಶುರು ವಾಯಿತು.
ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ‘ಜಲಗಾರ’ ನಾಟಕವು ಕನಕನ ಕಿಂಡಿ ರೂಪಕದ ಮಾದರಿಯಲ್ಲಿದೆ. ಈ ನಾಟಕದಲ್ಲಿ, ಊರಿನ ಶಿವನ ಗುಡಿಯ ಜಾತ್ರೆಯಲ್ಲಿ ಜಲಗಾರನು ಬೆಳ್ಳಂಬೆಳಗ್ಗೆ ಗುಡಿಯ ಸುತ್ತಮುತ್ತಲಿನ ಪ್ರದೇಶದ ಕಸವನ್ನು ಗುಡಿಸಿ ಸ್ವಚ್ಛಗೊಳಿಸುತ್ತಾನೆ. ಚರಂಡಿಯಲ್ಲಿನ ಕೊಳಚೆಯನ್ನೆಲ್ಲ ತಲೆಯ ಮೇಲೆ ಹೊತ್ತು ದೂರ ಹಾಕುತ್ತಾನೆ. ಆದರೆ ಜಾತ್ರೆ ನೋಡಲು ಹೋದ ಅವನ ಮಗನನ್ನು ಥಳಿಸಿ ದೂರ ಅಟ್ಟುತ್ತಾರೆ.
ಜಾತ್ರೆ ಶುರುವಾಗುತ್ತಿದ್ದಂತೆ ಜಲಗಾರನಿಗೂ ಗುಡಿಯ ಸುತ್ತ ಸುಳಿಯದಂತೆ ನಿರ್ಬಂಧ ಹಾಕಲಾಗುತ್ತದೆ. ಜಾತ್ರೆಯ ನೆಪದಲ್ಲಿ ಊರವರು ಸಂಭ್ರಮಿಸುತ್ತಾರೆ, ಹಾಡಿ ಕುಣಿದು ಕುಪ್ಪಳಿಸುತ್ತಾರೆ. ಮಧ್ಯರಾತ್ರಿಯಾಗುತ್ತಿದ್ದಂತೆ ಜಾತ್ರೆ ಮುಗಿಯುತ್ತದೆ. ಜಲಗಾರ ದೂರದಲ್ಲಿ ಒಂಟಿಯಾಗಿ ನಿಂತು ಕಣ್ಣೀರು ಸುರಿಸುತ್ತಿರುತ್ತಾನೆ. ಆಗ ಶಿವನು ಜಲಗಾರನ ವೇಷವನ್ನು ಧರಿಸಿ ಅವನ ಎದುರು ಮೈದೋರುತ್ತಾನೆ.
ಚಕಿತಗೊಂಡ ಜಲಗಾರ, “ನೀನು ಯಾರು?" ಎಂದು ಪ್ರಶ್ನಿಸುತ್ತಾನೆ. ಆಗ ಅವನಿಗೆ, “ನಾನೊಬ್ಬ ಜಗದ ಜಲಗಾರ, ನನ್ನನ್ನು ‘ಶಿವ’ ಎನ್ನುತ್ತಾರೆ" ಎಂಬ ಉತ್ತರ ಸಿಗುತ್ತದೆ. ಆಗ ಜಲಗಾರ, “ಶಿವನು ನಾಗಾಭರಣ, ಗಂಗೆಯನ್ನು ಧರಿಸಿದವನು, ತ್ರಿಶೂಲ ಮತ್ತು ಭಸ್ಮಧಾರಿ. ಇವ್ಯಾವುವೂ ನಿನ್ನ ಮೈಮೇಲೆ ಇಲ್ಲ.
ನಿನ್ನನ್ನು ಶಿವನೆಂದು ಹೇಗೆ ನಂಬಲಿ?" ಎಂದು ಮತ್ತೆ ಪ್ರಶ್ನಿಸುತ್ತಾನೆ. ಆಗ, ಜಲಗಾರ ವೇಷಧಾರಿ ಶಿವನು ಮುಗುಳುನಗೆ ನಗುತ್ತಾ, “ಅವೆಲ್ಲಾ ಶಾಸ್ತ್ರೀಗಳು ತೊಡಿಸಿದ ವೇಷಗಳು. ನಿಜವಾದ ಶಿವನು ಗುಡಿಯೊಳಗೆ ಇಲ್ಲ; ದೀನರು, ಅನಾಥರು, ನಿಸ್ಸಹಾಯಕರ ಕೈಹಿಡಿದು ನಡೆಸುವವರ ಎದೆಯಲ್ಲಿ ಶಿವನಿರುತ್ತಾನೆ. ನೀನೇ ನಾನಾಗಿಹೆನು, ನಾನೇ ನೀನಾಗಿರುವೆ. ನೀನೂ ಶಿವ, ನಾನೂ ಶಿವ" ಎಂದು ಹೇಳುತ್ತಾನೆ. ಆಗ ಜಲಗಾರ, “ನಾನು ಶಿವ, ನಾನೇ ಶಿವ" ಎಂದು ಹೇಳಿಕೊಂಡು ಸಂಭ್ರಮಿಸುತ್ತಾನೆ.
ಹೀಗೆ, ಕುವೆಂಪು ಅವರ ‘ಜಲಗಾರ’ ನಾಟಕ ಕೂಡ ಕನಕನ ಕಿಂಡಿಯ ರೂಪಕವನ್ನೇ ಪ್ರತಿಧ್ವನಿಸುತ್ತದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ‘ಬಾಡ’ ಎಂಬ ಗ್ರಾಮದಲ್ಲಿ ಜನಿಸಿದ ಕನಕದಾಸರು ತಮ್ಮ ಪ್ರಾಯದ ದಿನಗಳನ್ನು ಕಾಗಿನೆಲೆಯಲ್ಲಿ ಕಳೆದರು.
ಕನಕದಾಸರ ಆಕರ್ಷಕ ಮೈಕಟ್ಟು, ಶಸ್ತ್ರನೈಪುಣ್ಯ, ವಿನಯವಂತಿಕೆ, ಧಾರಾಳತನ ಗಳನ್ನು ಮೆಚ್ಚಿಕೊಂಡ ಆನೆಗೊಂದಿ ಸಂಸ್ಥಾನದ ಮಹಾರಾ ಜರು ಬಂಕಾಪುರ ಪ್ರಾಂತ್ಯವನ್ನು ನೋಡಿಕೊಂಡು ಆಡಳಿತ ನಡೆಸುವಂತೆ ಅಪ್ಪಣೆ ಮಾಡಿದ್ದರು. ಕಾಗಿನೆಲೆಯನ್ನು ವಶಪಡಿಸಿಕೊಳ್ಳಲು ಆಗಾಗ ಯುದ್ಧಗಳು ನಡೆಯುತ್ತಿದ್ದವು. ಆದರೆ, ಗೆಲುವಿನ ಕ್ಷಣಿಕತೆ/ನಶ್ವರತೆಯನ್ನು ಕಣ್ಣಾರೆ ಕಂಡುಕೊಂಡ ಕನಕದಾಸರು ವೈರಾಗ್ಯದತ್ತ ಹೊರಳಿದರು.
ದಾಸ ಸಾಹಿತ್ಯದಲ್ಲಿ ಉನ್ನತ ಸ್ಥಾನವನ್ನು ಹೊಂದಿರು ವಂಥವರು ಕನಕದಾಸರು. ಅವರ ಸಮಗ್ರ ಸಾಹಿತ್ಯವನ್ನು ಹಿಂದಿ, ಇಂಗ್ಲಿಷ್ ಸೇರಿದಂತೆ ದೇಶದ ಎಲ್ಲ ಭಾಷೆಗಳಿಗೂ ಅನುವಾದಿಸಬೇಕಿದೆ.