ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಮಂದಾಕ್ರಾಂತಂ ವನಿತೆಯರಿಗೇ ಮೀಸಲಾದಂಥ ತಂತ್ರಂ...

ಬಹುಶಃ ವನಿತೆಯರು ಹುಸಿ ಮುನಿಸು ತೋರುತ್ತ ಮುಖ ಗಂಟಿಕ್ಕಿಕೊಳ್ಳುವುದು ಬೇಡವೆಂದು ಇರಬಹುದು. ಇನ್ನೂ ಮೂರು ಸಾಲುಗಳನ್ನು ಸೇರಿಸಿರುತ್ತಿದ್ದರೆ ಬಹಳವೇ ಸ್ವಾರಸ್ಯಕರ ವಾಗಿರುತ್ತಿತ್ತು, ಮಜಾ ಬರುತ್ತಿತ್ತು. ಏನು ವಿಷಯ? ಏನಿದು ಮಂದಾಕ್ರಾಂತ? ಮೇಲಿನ ಒಂದು ಸಾಲಿನ ಮಟ್ಟಿಗಷ್ಟೇ ಹೇಳುವುದಾದರೆ ‘ಮಂದವಾದ ಆಕ್ರಾಂತವೇ ಮಂದಾಕ್ರಾಂತ.’

ತಿಳಿರು ತೋರಣ

ಅ.ರಾ.ಮಿತ್ರ ಅವರು ಹೇಳಿದ್ದಿದು, ನಾನಲ್ಲ! ಅಲ್ಲದೆ ಕಾಲುಭಾಗವನ್ನಷ್ಟೇ ಹೆಣೆದಿದ್ದಾರೆ. ಸಾಮಾನ್ಯವಾಗಿ ನಾಲ್ಕು ಸಾಲುಗಳ ಪರಿಪೂರ್ಣ ಪದ್ಯವಾಗಿ ಇಂಥವನ್ನು ಅವರು ಬರೆಯುತ್ತಾರೆ. ಅವರ ‘ಛಂದೋಮಿತ್ರ’ ಕೃತಿಯಲ್ಲಿ ದಂಡಿಯಾಗಿ ಸಿಗುತ್ತವೆ. ಭಲೇ ತಮಾಷೆಯಾಗಿರುತ್ತವೆ ಆ ಪದ್ಯಗಳು. ನಾನು ಆಗಾಗ ಓದಿ ಆನಂದಿಸುವುದಿದೆ. ಆದರೆ, ಇಲ್ಲಿ ‘ಮಂದಾಕ್ರಾಂತಂ ವನಿತೆಯರಿಗೇ ಮೀಸಲಾದಂಥ ತಂತ್ರಂ’ ಅಂತ ಒಂದೇ ಸಾಲಿಗೆ ನಿಲ್ಲಿಸಿದ್ದಾರೆ.

ಬಹುಶಃ ವನಿತೆಯರು ಹುಸಿ ಮುನಿಸು ತೋರುತ್ತ ಮುಖ ಗಂಟಿಕ್ಕಿಕೊಳ್ಳುವುದು ಬೇಡವೆಂದು ಇರಬಹುದು. ಇನ್ನೂ ಮೂರು ಸಾಲುಗಳನ್ನು ಸೇರಿಸಿರುತ್ತಿದ್ದರೆ ಬಹಳವೇ ಸ್ವಾರಸ್ಯಕರವಾಗಿರುತ್ತಿತ್ತು, ಮಜಾ ಬರುತ್ತಿತ್ತು. ಏನು ವಿಷಯ? ಏನಿದು ಮಂದಾಕ್ರಾಂತ? ಮೇಲಿನ ಒಂದು ಸಾಲಿನ ಮಟ್ಟಿಗಷ್ಟೇ ಹೇಳುವುದಾದರೆ ‘ಮಂದವಾದ ಆಕ್ರಾಂತವೇ ಮಂದಾಕ್ರಾಂತ.’

ಮಂದವಾದ ಅಂದರೆ ನಿಧಾನ ಗತಿಯ. ಆಕ್ರಾಂತ ಅಂದರೆ ವ್ಯಾಪಿಸಲ್ಪಟ್ಟ ಅಥವಾ ಅತಿಕ್ರಮಿಸಲ್ಪಟ್ಟ ಅಂತ ಅರ್ಥ. ನೋಯಿಸಲ್ಪಟ್ಟ ಎಂಬ ಇನ್ನೊಂದು ಅರ್ಥವೂ ಇದೆ. ವನಿತೆಯರು ಯಾವುದರಲ್ಲೇ ಆದರೂ, ಯಾವುದನ್ನೇ ಆದರೂ, ನಿಧಾನ ಗತಿಯಲ್ಲಿ (ಆದರೆ ಅತ್ಯಂತ ಪರಿಣಾಮಕಾರಿಯಾಗಿ) ವ್ಯಾಪಿಸುತ್ತಾರೆ, ಅತಿಕ್ರ ಮಿಸುತ್ತಾರೆ, ಬಯಸಿದ್ದನ್ನು ಕೊನೆಗೂ ಈಡೇರಿಸಿಕೊಳ್ಳುತ್ತಾರೆ. ಅವರ ನಡಿಗೆಯೂ ಹಾಗೆಯೇ. ಒಂದು ವೇಳೆ ನೊಂದು ಕೊಳ್ಳುವುದು ಅಥವಾ ನೋವುಂಟು ಮಾಡುವುದಿದ್ದರೂ ಅಷ್ಟೇ-ನಿಧಾನವೇ ಪ್ರಧಾನ.

ಇದನ್ನೂ ಓದಿ: Srivathsa Joshi Column: ಮಥಿಸಿದಷ್ಟೂ ಮನದಟ್ಟಾಗುವ ಮೂವತ್ತಮೂರರ ಮಹಾತ್ಮೆ !

ಆದ್ದರಿಂದಲೇ ಅ.ರಾ. ಮಿತ್ರರು ಹೇಳಿರಬೇಕು ಮಂದಾಕ್ರಾಂತವು ವನಿತೆಯರ ಟ್ರೇಡ್‌ ಮಾರ್ಕ್ ತಂತ್ರ ಎಂದು. ಬಹುಮಟ್ಟಿಗೆ ಸತ್ಯಾಂಶವೇ ಇರುವ, ನಾವೆಲ್ಲರೂ ಒಪ್ಪಬಹುದಾದ ವ್ಯಂಗ್ಯೋಕ್ತಿಯಿದು ಎನ್ನೋಣ. ಆದರೆ, ನಿಜವಾಗಿ ಹೇಳಹೊರಟಿದ್ದು ವನಿತೆಯರ ಸ್ವಭಾವದ ಬಗ್ಗೆಯಲ್ಲ. ಮಂದಾಕ್ರಾಂತ ಎಂಬ ಛಂದಸ್ಸಿನ ಬಗ್ಗೆ.

ಛಂದಸ್ಸಿನಲ್ಲೊಂದು ಅಕ್ಷರವೃತ್ತವನ್ನು ಕುರಿತು ಎಂದು ಹೇಳಿದರೆ ಇನ್ನಷ್ಟು ಸರಿ. ನಾಲ್ಕು ಪಾದ (ಸಾಲು)ಗಳುಳ್ಳ ಪದ್ಯದಲ್ಲಿ ಪ್ರತಿ ಪಾದದಲ್ಲೂ ತಲಾ 17 ಅಕ್ಷರಗಳು. ಯಮಾತಾ ರಾಜಭಾನಸಲಗಂ ಸೂತ್ರದಂತೆ ಗುರು- ಲಘುಗಳನ್ನು ಗುರುತಿಸಿ ಗಣಗಳಾಗಿಸಿದರೆ ಪ್ರತಿ ಪಾದದಲ್ಲಿ ಮಗಣ, ಭಗಣ, ನಗಣ, ತಗಣ, ತಗಣ, ಆಗಿ ಕೊನೆಗೆರಡು ಗುರುಗಳು ಉಳಿಯುತ್ತವೆ.

ಗುನುಗುನಿಸಿದರೆ ಒಂದೊಂದು ಸಾಲೂ ‘ನಾನಾನಾನಾ ನನನನನನಾ ನಾನನಾನಾನನಾನಾ’ ಎಂಬ ರೀತಿಯಲ್ಲಿರುತ್ತದೆ. ಮೊದಲಿಗೆ ನಾಲ್ಕು ಅಕ್ಷರಗಳು, ಒಂದು ಮೈಕ್ರೊ ಸೆಕೆಂಡ್‌ನ ಅಲ್ಪವಿರಾಮ, ಮತ್ತೆ ಆರು ಅಕ್ಷರಗಳು, ಇನ್ನೊಂದು ಮೈಕ್ರೊಸೆಕೆಂಡ್ನ ಅಲ್ಪವಿರಾಮ, ಆಮೇಲೆ ಕೊನೆಯ ಏಳು ಅಕ್ಷರಗಳು. ಇದೇ ಮಧುರ ಮಂಜುಳ ಮನಮೋಹಕ ಮಂದಾಕ್ರಾಂತ.

ಅತ್ಯಂತ ಸೂಕ್ತ ಮತ್ತು ಜನಜನಿತ ಉದಾಹರಣೆಯೆಂದರೆ ವಿಷ್ಣುಸಹಸ್ರನಾಮದಲ್ಲಿ ಬರುವ “ಶಾಂತಾಕಾರಂ, ಭುಜಗಶಯನಂ, ಪದ್ಮನಾಭಂ ಸುರೇಶಂ| ವಿಶ್ವಾ ಧಾರಂ, ಗಗನಸದೃಶಂ, ಮೇಘವರ್ಣಂ ಶುಭಾಂಗಂ| ಲಕ್ಷ್ಮೀಕಾಂತಂ, ಕಮಲನಯನಂ, ಯೋಗಿ ಭಿರ್ಧ್ಯಾ ನಗಮ್ಯಂ| ವಂದೇ ವಿಷ್ಣುಂ, ಭವಭಯಹರಂ, ಸರ್ವಲೋ ಕೈಕನಾಥಂ||" ಎಂಬ ಧ್ಯಾನಶ್ಲೋಕ. ಅಲ್ಪವಿರಾಮ ಚಿಹ್ನೆ ಸೇರಿಸಿ ಬರೆದದ್ದು ಎಲ್ಲೆಲ್ಲಿ ಮೈಕ್ರೊಸೆಕೆಂಡ್‌ನಷ್ಟು ವಿರಾಮವಿರುತ್ತದೆ ಎಂದು ತಿಳಿಸಲಿಕ್ಕೆ. ವಿಷ್ಣುಸಹಸ್ರನಾಮ ಇಡೀ ಗೊತ್ತಿಲ್ಲದಿದ್ದವರಿಗೂ ಈ ಶ್ಲೋಕ ಪರಿಚಿತವಿರುತ್ತದೆ.

311

ಭಗವದ್ಗೀತೆಯ ಸಂಪೂರ್ಣ ಪಾರಾಯಣದಲ್ಲೂ ಇದೇ ಶ್ಲೋಕ ಬರುತ್ತದೆ. ಇದೊಂದನ್ನು ಪಠಿಸುವುದು ನಿಮಗೆ ಗೊತ್ತಿದ್ದರೆ ಇಂದಿನ ಅಂಕಣದಲ್ಲಿ ಇನ್ನುಮುಂದೆ ಬರುವ ತರಹೇ ವಾರಿ ವೆರೈಟಿ ಮಿಕ್ಸ್ ಮಂದಾಕ್ರಾಂತ ಶ್ಲೋಕ/ಪದ್ಯಗಳನ್ನೆಲ್ಲ ನೀವು ಇದೇ ಧಾಟಿ ಯಲ್ಲಿಆರಾಮಾಗಿ ಓದಿಕೊಳ್ಳುವುದಕ್ಕಾಗುತ್ತದೆ.

ಆಸಕ್ತಿಯಿದ್ದರೆ ರಾಗಬದ್ಧವಾಗಿ ಹಾಡುವುದಕ್ಕೂ ಆಗುತ್ತದೆ! ಛಂದೋಬದ್ಧ ಪದ್ಯಗಳ ಹಿರಿಮೆಯೇ ಅದು. ಅವುಗಳಿಗೆ ಅಭಿಜಾತ ಗೇಯತೆ ಇರುತ್ತದೆ. ಸಂಸ್ಕೃತದ ಅತಿಪ್ರಖ್ಯಾತ ಅತಿಜನಪ್ರಿಯ ಕಾವ್ಯಗಳಲ್ಲೊಂದಾದ, ಕವಿಕುಲಗುರು ಕಾಳಿದಾಸನು ಬರೆದ ‘ಮೇಘದೂತ’ ದಲ್ಲಿ ಸುಮಾರು 110ರಷ್ಟು ಶ್ಲೋಕಗಳಿವೆ. ಎಲ್ಲವೂ ಮಂದಾಕ್ರಾಂತ ವೃತ್ತದವೇ. ಆ ರೀತಿಯ ವಿರಹವೇದನೆ ಮತ್ತು ಶೃಂಗಾರರಸ ಉಕ್ಕಿಹರಿವ ಕಾವ್ಯಗಳಿಗೆ ಹೇಳಿ ಮಾಡಿಸಿದ ವೃತ್ತವದು ಎಂದು ವಿದ್ವಾಂಸರ ಅಂಬೋಣ. ಅದನ್ನು ಜನಪ್ರಿಯವಾಗಿಸಿದ ಕೀರ್ತಿ ಕಾಳಿದಾಸನಿಗೆ ಸಲ್ಲುತ್ತದೆಂಬುದೂ ಸರ್ವಮಾನ್ಯ.

ಏಕೆಂದರೆ ಮೇಘದೂತವು ದೂತಕಾವ್ಯ ಎಂಬ ಹೊಸದೊಂದು ಕಾವ್ಯಪ್ರಕಾರವನ್ನೇ ಹುಟ್ಟುಹಾಕಿತು. ಆಮೇಲೆ ಅದನ್ನನುಸರಿಸಿ ಮತ್ತಷ್ಟು ದೂತಕಾವ್ಯಗಳು ಮಂದಾಕ್ರಾಂತ ಛಂದಸ್ಸಿನಲ್ಲೇ ರಚನೆಯಾದವು. ಸಂಸ್ಕೃತವ್ಮಾಯ ಎಂಬ ಮಹಾಸಾಗರದಲ್ಲಿ ಮಗದಷ್ಟು ಮುತ್ತುರತ್ನಗಳು ಸೇರಿಕೊಂಡು ಅದುಶ್ರೀಮಂತವಾಯಿತು.

ಮೇಘದೂತ ಆರಂಭವಾಗುವುದು ಈ ಶ್ಲೋಕದಿಂದ, “ಕಶ್ಚಿತ್ಕಾಂತಾ ವಿರಹಗುರುಣಾ ಸ್ವಾಧಿಕಾರಾತ್ಪ್ರಮತ್ತಃ| ಶಾಪೇನಾಸ್ತಂ ಗಮಿತಮಹಿಮಾ ವರ್ಷಭೋಗ್ಯೇಣ ಭರ್ತುಃ| ಯಕ್ಷಶ್ಚಕ್ರೇ ಜನಕತನಯಾ ಸ್ನಾನಪುಣ್ಯೋದಕೇಷು| ಸ್ನಿಗ್ಧಚ್ಛಾಯಾ ತರುಷು ವಸತಿಂ ರಾಮಗಿ ರ್ಯಾಶ್ರ ಮೇಷು||" ಇದರ ಭಾವಾರ್ಥ ಹೀಗಿದೆ, “ಒಬ್ಬಾನೊಬ್ಬ ಯಕ್ಷನು ತನ್ನ ಕರ್ತವ್ಯದಲ್ಲಿ ತಪ್ಪಿದಾಗ ಒಡೆಯನಿಂದ ಶಪಿಸಲ್ಪಟ್ಟನು.

ಅದರಿಂದಾಗಿ ಅವನ ಶಕ್ತಿ-ಮಹಿಮೆಗಳೆಲ್ಲವೂ ಕುಂದಿದವು. ಶಾಪದ ಅವಧಿಯಾದ ಒಂದು ವರ್ಷವನ್ನು ತನ್ನ ಕಾಂತೆಯಿಂದ ದೂರವಿದ್ದು ಕಳೆಯಲೆಂದು, ಹಿಂದೆ ವನವಾಸದಲ್ಲಿ ಸೀತೆಯು ಮಿಂದು ಪವಿತ್ರವಾದ ನೀರಿರುವ, ತಂಪಾದ ನೆರಳಿನ ಮರಗಳಿರುವ ರಾಮಗಿರಿಯ ಆಶ್ರಮದಲ್ಲಿ, ವಿರಹದುಃಖವನ್ನು ಅನುಭವಿಸುತ್ತ ವಾಸಿಸತೊಡಗಿದನು."

ಕುಬೇರನ ಸೇವಕರಾಗಿ ಒಂದಷ್ಟು ಯಕ್ಷರು ಕೆಲಸ ಮಾಡುತ್ತಿದ್ದದ್ದು, ಅವರ ಪೈಕಿ ಒಬ್ಬ ಯಕ್ಷನು ಕೆಲಸಕ್ಕೆ ಗಮನ ಕೊಡದೆ ತನ್ನ ಪತ್ನಿಯೊಂದಿಗೇ ಹೆಚ್ಚು ಕಾಲಕಳೆಯುತ್ತಿದ್ದದ್ದು, ಕುಪಿತನಾದ ಕುಬೇರನು ಅವನನ್ನು ಒಂದು ವರ್ಷ ಕಾಲ ಪತ್ನಿಯಿಂದ ದೂರ ಇರುವಂತೆ ಶಪಿಸಿದ್ದು, ಮಧ್ಯಭಾರತದ ದಟ್ಟಡವಿಯ ಪ್ರದೇಶದಲ್ಲಿ ರಾಮಗಿರಿ ಎಂಬ ಆಶ್ರಮದಲ್ಲಿ ಆತ ಆ ಅವಽಯನ್ನು ಕಳೆದದ್ದು, ಹಿಮಾಲಯದಲ್ಲಿ ಅಲಕಾಪುರಿ ಎಂಬಲ್ಲಿ ಇರುವ ಪತ್ನಿಯನ್ನು ನೆನೆನೆನೆದು ಪ್ರತಿಕ್ಷಣವೂ ಪರಿತಪಿಸಿದ್ದು, ಮಳೆಗಾಲದ ಆರಂಭದಲ್ಲಿ ಮೋಡ ಕಂಡುಬಂದಾಗ ಮೋಡದ ಮೂಲಕ ತನ್ನ ಪತ್ನಿಗೆ ಪ್ರೇಮಸಂದೇಶ ಕಳಿಸಿದ್ದು... ಇದು ಮೇಘದೂತ ಕಾವ್ಯದ ಸ್ಥೂಲ ಕಥಾಹಂದರ. ರಾಮಗಿರಿಯಿಂದ ಅಲಕಾಪುರಿವರೆಗಿನ ದಾರಿಯ ವರ್ಣನೆಯನ್ನು ಮೇಘ(ಮೋಡ)ಕ್ಕೆ ಆ ಯಕ್ಷ ಹೇಳಿದ್ದೇ ಮೇಘದೂತ ಕಾವ್ಯದ ರಸೋತ್ಕಟ ಅಂಶ.

ದಾರಿಯಲ್ಲಿ ಸಿಗುವ ಉಜ್ಜಯಿನಿ ನಗರದ ದೃಶ್ಯಾವಳಿಯಂತೂ ವೈಭವೋಪೇತ ಅನಿಸುವಂಥದ್ದು (ಆ ಭಾಗದ ನಾಲ್ಕೈದು ಶ್ಲೋಕಗಳು ನಮಗೆ ಪ್ರೌಢಶಾಲೆಯಲ್ಲಿ ಸಂಸ್ಕೃತ ಪ್ರಥಮಭಾಷೆ ಪಠ್ಯಪುಸ್ತಕದಲ್ಲಿ ಇದ್ದವು).

ಕಾಳಿದಾಸನ ಕಾವ್ಯಶಕ್ತಿಯಿಂದ ಹೊಮ್ಮಿದ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕೆತ್ತನೆ ಮೇಘದೂತ ಕಾವ್ಯದ ರಸಗ್ರಂಥಿಗಳು. ಯಕ್ಷನ ಮಾತುಗಳ ಮೂಲಕ ಮೋಡವನ್ನು ನಿರ್ದೇಶಿಸಿದ ಕಾಳಿದಾಸ ಅಪ್ರತಿಮ ಕಾವ್ಯಶಕ್ತಿಯನ್ನಷ್ಟೇ ಅಲ್ಲ, ತನ್ನ ಭೌಗೋಳಿಕ ಜ್ಞಾನವನ್ನೂ ಮೆರೆದಿದ್ದಾನೆ.

ಆಕಾಶಮಾರ್ಗದಲ್ಲಿ ಸಾಗಿದವರಿಗೆ ಮಾತ್ರ ಅಥವಾ ಈಗಲಾದರೆ ಡ್ರೋನ್ ವಿಡಿಯೊಗ್ರಫಿಗೆ ಮಾತ್ರ ಗೋಚರಿಸಬಹುದಾದ ಭೂರಚನೆಗಳು, ಅಲ್ಲಿನ ಹವಾಮಾನ ಬದಲಾಗುವ ರೀತಿ ಮುಂತಾದ ವರ್ಣನೆಗಳೆಲ್ಲ ಮೇಘದೂತದಲ್ಲಿ ಬರುತ್ತವೆ. ಇವು ಮಂದಾಕ್ರಾಂತ ವೃತ್ತಛಂದಸ್ಸಿನಿಂದಾಗಿ ಮತ್ತೂ ಮನೋಹರವೆನಿಸುತ್ತವೆ.

ಮೇಘದೂತ ಕಾವ್ಯದ ಅನನ್ಯತೆ ವಿಶಿಷ್ಟತೆ ಎಷ್ಟೆಂದರೆ ಭಾರತದ ಬೇರೆಲ್ಲ ಭಾಷೆಗಳ ಸಾಹಿತ್ಯದ ಮೇಲೂ ಅದು ಗಾಢ ಪ್ರಭಾವವನ್ನು ಬೀರಿದೆ. ಅದರಲ್ಲಿ ಮಂದಾಕ್ರಾಂತ ವೃತ್ತದ್ದೂ ಮಹತ್ತರ ಪಾಲಿದೆ. ಪ್ರತಿ ಭಾಷೆಯಲ್ಲಿಯೂ ಮೇಘದೂತದ ಹಲವು ಅನುವಾದಗಳು ಪ್ರಕಾಶಗೊಂಡಿವೆ. ಕನ್ನಡದಲ್ಲಿ ಎಸ್.ವಿ. ಪರಮೇಶ್ವರ ಭಟ್ಟ, ದ.ರಾ. ಬೇಂದ್ರೆ, ಅ.ರಾ. ಮಿತ್ರ, ಗಣಪತಿ ಮೊಳೆಯಾರ ಮುಂತಾದ ಕವಿಶ್ರೇಷ್ಠರು ಮೇಘದೂತ ವನ್ನು ಅನುವಾದಿಸಿ ಉಕ್ಕೃಷ್ಟ ಕೃತಿಗಳನ್ನು ರಚಿಸಿದ್ದಾರೆ.

ಅಷ್ಟೇ ಅಲ್ಲ, ಕನ್ನಡದಲ್ಲಿ ಈ ಎಲ್ಲ ಅನುವಾದಗಳ ತುಲನಾತ್ಮಕ ಅಧ್ಯಯನ ಮಾಡಿ ವಿದುಷಿ ಶೈಲಜಾ ಹೆಗಡೆಯವರು ‘ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರ ಗಳು’ ಎಂಬ ಸಂಪ್ರಬಂಧ ಬರೆದು ಎಂಫಿಲ್ ಪದವಿ ಪಡೆದಿದ್ದಾರೆ.

ಎಸ್.ವಿ.ಪರಮೇಶ್ವರ ಭಟ್ಟ ಮತ್ತು ದ.ರಾ. ಬೇಂದ್ರೆಯವರ ಅನುವಾದ ಕೃತಿಗಳು ಅಂತರ ಜಾಲದಲ್ಲಿಯೂ ಲಭ್ಯವಿವೆ, ಅವುಗಳನ್ನು ನಾನೂ ಓದಿದ್ದೇನೆ. ಆದರೆ, ಅವುಗಳಲ್ಲಿ ಪದ್ಯಗಳು ಆಕರ್ಷಕ ಲಯದಲ್ಲಿವೆಯಾದರೂ ಮಂದಾಕ್ರಾಂತ ವೃತ್ತ ಛಂದಸ್ಸಿನಲ್ಲಿ ಬರೆದಿದ್ದಲ್ಲ. ಅ.ರಾ. ಮಿತ್ರ ಮತ್ತು ಗಣಪತಿ ಮೊಳೆಯಾರ ಅದನ್ನೂ ಸಾಧಿಸಿದ್ದಾರೆ!

ಮೂಲ ಸಂಸ್ಕೃತದಂತೆಯೇ ಕನ್ನಡದಲ್ಲೂ ಮಂದಾಕ್ರಾಂತ ಛಂದಸ್ಸಿನಲ್ಲೇ ಬರೆದಿದ್ದಾರೆ. ಉದಾಹರಣೆಗೆ ಮೇಲೆ ವಿವರಿಸಿದ ಮೇಘದೂತದ ಆರಂಭಿಕ ಶ್ಲೋಕವು ಅನುಕ್ರಮವಾಗಿ ಅ.ರಾ. ಮಿತ್ರರ ಅನುವಾದದಲ್ಲಿ- “ಯಾರೋ ಯಕ್ಷಂ ಮದದಿ ಮೆರೆದೇ ಶಾಪಕೀಡಾಗಿ ನೊಂದಂ| ವರ್ಷಂ ಒಂದೇಸವನೆ ನವೆವಂತಸ್ತದೈವಾಂಶದಿಂದಂ| ಧಾತ್ರೀ ಪುತ್ರೀ ಜಳಕ ಜಲದಾ ಪುಣ್ಯತಾಣಂಗಳಲ್ಲಿ| ಭಾರ್ಯಾದೂರಂ ತಿರುತಿರುಗಿದಂ ರಾಮಗಿರ್ಯಾಶ್ರಮಾಂತಂ" ಮತ್ತು ಗಣಪತಿ ಮೊಳೆಯಾರರ ಅನುವಾದದಲ್ಲಿ “ಓರ್ವಂ ಯಕ್ಷಂ ಕೆಲಸಕಲಸ ಲ್ಕೋಪಳಂ ಮೈಮೆಯಂ ಮೇಣ್| ಬಿಟ್ಟೊರ್ಕಾಲಂ ವಿರಹವುಣು ವಂತಾಳ್ದನಿಂ ಶಾಪವಾಂತುಂ| ಛಾಯಾರಾಮಂ ಮರಗಳೆಸೆವಾ ರಾಮಗಿರ್ಯಾಶ್ರಮಂ ಸೇ| ರ್ದಿರ್ದಂ ರಾಮಪ್ರಿಯಳೆ ಜಳಕಂಗೈದ ತೀರ್ಥಂಗಳತ್ತಂ" ಎಂದು ಮೇಳೈಸಿದೆ, ಮನ ಮೋಹಕವೆನಿಸುವ ಮಂದಾಕ್ರಾಂತದಲ್ಲಿ. ಶಾಂತಾಕಾರಂ ಭುಜಗಶಯನಂ... ಧಾಟಿಯಲ್ಲೇ ಈ ಪದ್ಯಗಳನ್ನು ಓದಿದರೆ ಅಥವಾ ಹಾಡಿಕೊಂಡರೆ ಓದಿನ ಸವಿ ಮತ್ತಷ್ಟು ಹೆಚ್ಚುತ್ತದೆ.

ಸರಿ, ಈಗಿನ್ನು ಮೇಘದೂತ ಮತ್ತು ಅದರ ಅನುವಾದಗಳನ್ನೆಲ್ಲ ಅಲ್ಲಿಗೇ ಬಿಟ್ಟು ಬೇರೊಂದಿಷ್ಟು ಲಘು ಧಾಟಿಯ, ಮನೋರಂಜನೆಯ, ಬಹುಭಾಷಾ ಮಂದಾ ಕ್ರಾಂತ ಗಳನ್ನು ಮೆಲ್ಲೋಣ. ಗುನುಗುನಿಸಲಿಕ್ಕೆ ಧಾಟಿ ಅದೇ- ಶಾಂತಾಕಾರಂ ಭುಜಗಶಯನಂ... ಮೊದಲಿಗೆ ಅ.ರಾಮಿತ್ರರದೇ ಒಂದು ರಚನೆ, ಅವರ ಛಂದೋಮಿತ್ರ ಕೃತಿಯಲ್ಲಿ ಮಂದಾಕ್ರಾಂತ ಅಕ್ಷರವೃತ್ತಕ್ಕೆ ಕನ್ನಡ ಉದಾಹರಣೆಯ ರೀತಿಯಲ್ಲಿ ಕೊಟ್ಟಿರುವುದು.

ಜೀವವಿಮಾ ನಿಗಮದ ಮಂತ್ರವೆಂಬಂತೆ ಇದನ್ನು ಓದಬೇಕು. “ಯೋಗಕ್ಷೇಮಂ ವಹಿಸಿಕೊಳುವೆಂ ಪಾಲಿಸೀದಾರರಿಂದಂ| ತ್ಯಾಗಂ ಕೊಂಚಂ ಬಳೆವುದು ಧನಂ ಕಷ್ಟಕಾಲಕ್ಕೆ ಮಿತ್ರಂ| ಭಂಗಂ ಸಂಸಾರಿಗಳ ಬದುಕೇ ನಿಶ್ಚಿತಂ ಎಂದರಾರೋ| ಸಾಂಗಂ ನಿಮ್ಮೀ ಬದುಕದು ವಿಮಾಸೂತ್ರ ಸಂಬಂಧದಿಂದಂ" ಎಷ್ಟು ಚೆನ್ನಾಗಿದೆ ಅಲ್ವಾ!? ಇನ್ನೂ ಒಂದು ಬರೆದಿದ್ದಾರೆ ಒಂದೇ ಸಾಲಿನದು: “ಕ್ಯಾಂಟೀನ್ ಕಾಫೀ ಕುಡಿದ ಒಡನೇ ವಾಂತಿ ಬಂತಲ್ಲೊ ದೇವಾ!" ಛಂದೋಬದ್ಧ ಪದ್ಯರಚನೆಯನ್ನೇ ಹವ್ಯಾಸವಾಗಿಸಿಕೊಂಡಿರುವ ಪ್ರತಿಭಾವಂತ ಸದ್ಗೃಹಿಣಿ ಮೋಹಿನಿ ದಾಮ್ಲೆಯವರ ಒಂದೆರಡು ರಚನೆಗಳು ಇಲ್ಲಿವೆ: “ಮಂದಾಕ್ರಾಂತಾ ಬಹಳ ಮೆಲು ನೀ ಹೀಗೆ ಬಂದಾರೆ ಹೇಗೇ| ನನ್ನೀ ಬುದ್ಧೀ ಹೆಣಗುತಿಹುದೂ ಭಾರಿಯೇ ಜೋರು ನೋಡೇ| ಡೈಲೀ ಏನೋ ಹೊಸದು ಬರಿಲೇಬೇಕು ಅಂತೆಂಬ ಆಸೇ| ಬಾರೇ ತೋರುತ್ತೆನಗೆ ಸರಿ ದಾರೀಯನೂ ಒಮ್ಮೆ ತಾಯೇ" ಮತ್ತು “ಮಂದಾಕ್ರಾಂತಾಬರೆದು ಬರೆದೂ ನಂಗೆ ಈಗಾಯ್ತು ಬೋರೂ| ಸಂದಾಕಿನ್ನೊಂದ್ ಹೊಸದು ವರಸೇ ಹೇಳ್ಕೊಡೀ ಅಂದ್ರೆ ಸಾರೂ| ಒಂದೊಂದಾಗೇ ಕಲಿತು ನಮಗೇ ಒಪ್ಪಿಸೀ ಅಂದ್ರು ಮತ್ತೇ| ಹಿಂದಿಂದೆಲ್ಲಾ ಮರೆತರೆನಗೇ ವೃತ್ತವೇ ಮಾರ್ಕು ಗೊತ್ತೇ!" ಮೋಹಿನಿ ಅವರಿಗೆ ಇಂತಹ ಪದ್ಯರಚನೆ ಎಷ್ಟು ಸುಲಭವೆಂದರೆ ದೈನಂದಿನ ಸಂಭಾಷಣೆಯನ್ನೇ ಪದ್ಯವಾಗಿಸಬಲ್ಲರು! “ಸಂದೀಯಲ್ಲೇ ಇಣುಕಿ ನಗುವೇ ನಿತ್ಯ ಪುಷ್ಪಾ ಇದೇಕೇ? ಬಂದಾಯ್ತಲ್ಲೇ ಎರಡು ಘಳಿಗೇ ಇನ್ನು ಮಾತಾಡೆಯೇಕೇ!?" ಛಂದೋಬದ್ಧ ಕವಿತೆರಚನೆಯ ಇನ್ನೊಬ್ಬ ಹವ್ಯಾಸಿ, ಸಚಿನ್ ಮುಂಗಿಲ ಅವರು ಹವ್ಯಕಕನ್ನಡದಲ್ಲಿ ಬರೆದ ಮಂದಾ ಕ್ರಾಂತ ಪದ್ಯವೊಂದಿದೆ, ಭಲೇ ತಮಾಷೆಯದು: “ಬೈರಾಸನ್ನೇ ಮರೆತು ಹೆರಟೆನ್ ಮೀವಲೇಳಿಪ್ಪ ಕೋಣೆಂ| ಪೂರಾಮೈಗೇ ನೊರೆಯನೊರೆಸಲ್ ಚೆಂಬು ಕಾಣದ್ದೆಯಾತೈ| ಬೇರೆಂತಾರೂ ಪರಡಿಹುಡುಕಲ್ ಕೈಯಮೇ ಲೊಮ್ಮೆ ಮಾಡಲ್| ಹಾರಿತ್ತೊಂದಾ ಮಡಲಿನೆಡೆಲೇ ಕೂದಿಹಾ ಸಣ್ಣ ಸರ್ಪಂ" ಸ್ನಾನ ಮಾಡಲಿಕ್ಕೆಂದು ಬಚ್ಚಲಕೋಣೆಗೆ ಹೋದಾಗ ಅಂಗವಸ ಮರೆತರಂತೆ.

ಮುಖ-ಮೈಗೆಲ್ಲ ಸಾಬೂನು ಹಚ್ಚಿದಾಗ ನೊರೆಯಿಂದ ಉರಿಯಬಾರದೆಂದು ಕಣ್ಣು ಗಳನ್ನೂ ಮುಚ್ಚಿಕೊಂಡಿದ್ದಾರೆ. ಚೊಂಬಿಗಾಗಿ ತಡಕಾಡುತ್ತ ಕೈಮೇಲೆ ಮಾಡಿದಾಗ ಸೋಗೆಗಳ ಮಾಡಿನಲ್ಲಿ ಅಡಗಿದ್ದ ಚಿಕ್ಕ ಹಾವೊಂದು ಹರಿದಾಡಿತಂತೆ!

ಸಂಸ್ಕೃತ ಮತ್ತು ಕನ್ನಡಗಳಂತೆಯೇ ಬೇರೆ ಭಾಷೆಗಳಲ್ಲೂ ಮಂದಾಕ್ರಾಂತ ರಚನೆ ಸಾಧ್ಯ ವಿದೆ. ಇಲ್ಲಿ ನಾನಿರುವ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲೇ ಕ್ಯಾನ್ಸರ್ ಸಂಶೋಧನ ಸಂಸ್ಥೆ ಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದು ಪ್ರವೃತ್ತಿಯಾಗಿ ಛಂದಃಶಾಸ್ತ್ರವನ್ನು ಅರೆದು ಕುಡಿದಿರುವ ಜೆಜ್ಜಾಲ ಕೃಷ್ಣ ಮೋಹನ ರಾವು ಎಂಬೊಬ್ಬ ಪ್ರಕಾಂಡ ಪಂಡಿತರಿದ್ದಾರೆ.

ಛಂದಸ್ಸಿನ ಒಂದೊಂದು ಪ್ರಕಾರದ ಬಗ್ಗೆಯೂ ಸಂಶೋಧನಾತ್ಮಕ ಪ್ರಬಂಧಗಳನ್ನು, ಆಯಾ ಪ್ರಕಾರಗಳಲ್ಲಿ ಸ್ವಂತ ರಚನೆಗಳನ್ನೂ ಸೇರಿಸಿ ಬರೆದಿದ್ದಾರೆ. ಅವರದೊಂದು ತೆಲುಗು ಪದ್ಯ ಮಂದಾಕ್ರಾಂತ ವೃತ್ತದಲ್ಲಿ: “ಕಾಕೀ ಕಾಕೀ ಕಡಲಿ ಕೊನಲೋ ಕಾಟುಕೇಮೈನ ಉಂದಾ| ಕೇಕೀ ಕೇಕೀ ಕೆರಲಿತಿವಿ ನೀಕೆವ್ವರಿಚ್ಚಾರೆ ನಾಟ್ಯಂ| ಆಕಾಶಂಲೋ ಅಲಲು ಅಲಲೈ ಆಡು ಓ ಮೇಘಮಾಲಾ| ನಾಕೋಸಂ ಆ ನಗವು ವಿರಿತೋ ನಾತಿ ಏಮಂದಿ ನೀತೋ" (ಕಾಗೆಯೇ ಕಾಗೆಯೇ, ಕತ್ತಲೆಯ ಸಮುದ್ರದಲ್ಲಿ ಕಣ್ಣುಗಳನ್ನದ್ದಿ ಕಾಡಿಗೆ ಬಳಿದುಕೊಂಡೆಯಾ? ನವಿಲೇ ನವಿಲೇ, ಇಷ್ಟು ಚಂದ ಕುಣಿಯುತ್ತಿದ್ದೀಯಲ್ಲ ನಿನಗೆ ನಾಟ್ಯ ಕಲಿಸಿದವರಾರು? ಆಗಸದಲ್ಲಿ ಅಲೆ ಅಲೆಯಾಗಿ ಸಾಗಿರುವ ಮೋಡಗಳೇ, ಹೂನಗೆಯೊಂದಿ ಗಿನ ಬೆಡಗಿ ನನ್ನ ನಲ್ಲೆ ನನಗಾಗಿ ಏನನ್ನಾದರೂ ಹೇಳಿಕಳಿಸಿರುವಳೇ?) ಮರಾಠಿ ಭಾಷೆಯ ಲ್ಲೊಂದು, ಮೇಘದೂತ ಬರೆದ ಕಾಳಿದಾಸನನ್ನು ಕೊಂಡಾಡುತ್ತ: “ಮೇಘಾಂನೀ ಹೇ ಗಗನ ಭರತಾ ಗಾಢ ಆಷಾಢ ಮಾಸೀ| ಹೋಯೀ ಪರ್ಯುತ್ಸುಕ ವಿಕಲ ತೋ ಕಾಂತ ಏಕಾಂತವಾಸೀ|

ತಃನಿಃಶ್ವಾಸ ಶ್ರವುನಿ ರಿಝವೀ ಕೋಣ್ಹ ತ್ಯಾಚ್ಯಾ ಜಿವಾಸೀ| ಮಂದಾ ಕ್ರಾಂತಾ ಸರಲ ಕವಿತಾ ಕಾಲಿದಾಸೀ ವಿಲಾಸೀ|" ಹಾಗೆಯೇ ಹಿಂದೀ ಭಾಷೆಯದೊಂದು, ನಮಾಮಿ ಗಂಗೇ ಪ್ರಾಜೆಕ್ಟ್‌ಗೆ ಮೊದಲು ಗಂಗೆ ಅಪವಿತ್ರಳಾಗಿದ್ದ ಕಾಲದ್ದು: “ಪಾನೀ ಪೀನಾ ಹಿತಕರ ಸದಾ ಪ್ಯಾಸಜೋ ಹೈ ಬುಝಾತಾ| ಅಚ್ಛಾ ಪಾನೀ ನಿತ ಮಿಲ ಸಕೇ ಪ್ರಾಣ ಕೋ ಜೋ ಬಚಾತಾ| ಗಂಧಿ ಗಂಗಾ ಅಬ ನ ಕರತೀ ದೇಹ ಕೀ ಜೋ ಸ-ಈ| ತೋ ಪಾಪೀ ಕೀ ವಹ ಕರ ಸಕೇ ಆಜ ಕೈಸೇ ಭಲಾಈ?"

(ಬಾಯಾರಿಕೆಯಾದಾಗ ಹಿತಕರವಾದ ನೀರು ಕುಡಿಯೋಣ ವೆನಿಸುವುದು ಸಹಜವೇ. ಆದರೆ, ಪ್ರಾಣವುಳಿಸುವ ಒಳ್ಳೆಯ ನೀರು ಸಿಗುವುದಾದರೂ ಹೇಗೆ? ಕೊಳೆತುಹೋಗಿರುವ ಗಂಗೆ ನಮ್ಮ ದೇಹವನ್ನೇ ಸ್ವಚ್ಛಗೊಳಿಸಲಾರಳಂತೆ ಇನ್ನು ಪಾಪಿಗಳ ಮನಸ್ಸನ್ನು ಹೇಗೆ ತಾನೆ ಸ್ವಚ್ಛಗೊಳಿಸಿಯಾಳು?)

ಕೊನೆಯಲ್ಲಿ ಈ ಅಂಕಣಬರಹಕ್ಕೆಂದೇ ವಿಶೇಷವಾಗಿ ಬರೆಸಿದ, ತಾಜಾತಾಜಾ ಸುಪರ್ ಫ್ರೆಷ್ ಮಂದಾಕ್ರಾಂತ ಪದ್ಯವೊಂದನ್ನು ಪ್ರಸ್ತುತಪಡಿಸಿ ಸಮಾರೋಪ ಮಾಡೋಣ. ಇದನ್ನು ಬರೆದವರು ಬೆಂಗಳೂರಿನಲ್ಲಿರುವ ಸ್ನೇಹಿತ ಮೃತ್ಯುಂಜಯ ತೇಜಸ್ವಿ.

ಕಂಪ್ಯೂಟರ್ ತಂತ್ರಜ್ಞಾನದ ವೃತ್ತಿಯಲ್ಲಿದ್ದರೂ ಪ್ರವೃತ್ತಿಯಾಗಿ ಛಂದೋಬದ್ಧ ಪದ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ. ದೇವುಡು ಅವರ ಮಹಾಬ್ರಾಹ್ಮಣ ಕೃತಿಯನ್ನು ಸಂಪೂರ್ಣವಾಗಿ ಭಾಮಿನಿಷಟ್ಪ ದಿಗಳ ರೂಪದಲ್ಲಿ ಬರೆದು ಇತ್ತೀಚೆಗೆ ಪುಸ್ತಕ ಪ್ರಕಟಿಸಿದ ಮೇಧಾವಿ.

ಭಾಮಿನಿಯಷ್ಟೇ ಅಲ್ಲದೆ ಛಂದಸ್ಸಿನ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿರುವ, ತಿಳಿರು ತೋರಣ ಅಂಕಣದಲ್ಲೂ ಈ ಹಿಂದೆ ಉಲ್ಲೇಖಗೊಂಡಿರುವ ಮೃತ್ಯುಂಜಯ ತೇಜಸ್ವಿ, ಇದುವರೆಗೆ ಮಂದಾಕ್ರಾಂತ ವೃತ್ತದಲ್ಲಿ ಕನ್ನಡ ಪದ್ಯ ರಚಿಸಿರಲಿಲ್ಲವಂತೆ. ಈ ಅಂಕಣಕ್ಕಾಗಿ ಒಂದು ಪದ್ಯ, ಪ್ರಚಲಿತ ವಿದ್ಯಮಾನವನ್ನು ವಸ್ತುವಾಗಿಟ್ಟುಕೊಂಡು ಬರೆದುಕೊಡುತ್ತೀರಾ ಎಂದು ನಾನು ವಾಟ್ಸ್ಯಾಪ್ ಸಂದೇಶದಲ್ಲಿ ಕೇಳಿದಾಗ ಅರ್ಧಗಂಟೆ ಯೊಳಗೆ ಬರೆದು ಕಳುಹಿಸಿರುವ ಪದ್ಯ: “ಸಾಕ್ರೀ ನಿಮ್ಮಾಡಳಿತವೆನುತಾ ಸಿದ್ದರಾಮಯ್ಯರನ್ನೇ| ನೌಕ್ರೀಯಿಂದ್ಲೇ ಕೆಳಗಿಳಿಸಿದರ್ ಕೈಕಮಾಂಡ್ ನಿನ್ನೆ ತಾನೇ| ಸೀಕ್ರೇಟುಂಟೇನಿದರೊಳಥವಾ ಕಾಕತಾಲೀಯ ವೇನೋ| ಬಕ್ರೀದಂದೇ ಟಗರುಬಲಿಯಂ ಕೊಟ್ಟರೇಕೆಂದು ಗೊತ್ತೇ?"- ಇದಕ್ಕೆ ಹೆಚ್ಚಿನ ವ್ಯಾಖ್ಯಾನ ವಿವರಣೆಗಳೇನೂ ಬೇಕಿಲ್ಲವಷ್ಟೆ.

ಶ್ರೀವತ್ಸ ಜೋಶಿ

View all posts by this author