ಲೋಕಮತ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಅಂಚಿನಲ್ಲಿ ನಡೆದ ಎನ್ ಕೌಂಟರ್ ಪ್ರಕರಣ ಇಡೀ ರಾಜ್ಯ ಹಾಗೂ ದೇಶಾದ್ಯಂತ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಅರಣ್ಯ ಇಲಾಖೆಯ ಪ್ರಕಾರ ಅರಣ್ಯದೊಳಗೆ ಅಕ್ರಮವಾಗಿ ನುಗ್ಗಿದವರು ಕಳ್ಳಬೇಟೆಗಾರರು. ಆದರೆ ಸ್ಥಳೀಯರ ಮತ್ತು ಸಂತ್ರಸ್ತರ ಕುಟುಂಬಸ್ಥರ ಪ್ರಕಾರ ಅವರು ದನಗಾಹಿಗಳು. ಈ ಪರ-ವಿರೋಧದ ವಾದಗಳು, ಆರೋಪ- ಪ್ರತ್ಯಾರೋಪಗಳು ಇಂದಿಗೂ ಮುಂದುವರಿದಿವೆ. ಆದರೆ, ಈ ಘಟನೆಯ ನಂತರದ ದಿನಗಳಲ್ಲಿ ಗಡಿ ಅರಣ್ಯ ಭಾಗದಲ್ಲಿ ನಡೆದ ಸರಣಿ ವಿಧ್ವಂಸಕ ಕೃತ್ಯಗಳು ಪ್ರಜಾಪ್ರಭುತ್ವ ಮತ್ತು ಕಾನೂನು ಸುವ್ಯವಸ್ಥೆಗೆ ಎದುರಾಗಿರುವ ಆತಂಕಕಾರಿ ಸವಾಲುಗಳನ್ನು ಎತ್ತಿ ತೋರಿಸುತ್ತಿವೆ.
ಹಿಂದೊಮ್ಮೆ ವೀರಪ್ಪನ್ ಅಟ್ಟಹಾಸ ಮೆರೆದ ನೆಲದಲ್ಲಿ, ಆತನ ಪಳೆಯುಳಿಕೆಗಳು ಮತ್ತು ಅದೇ ಉಗ್ರ ವಿಧ್ವಂಸಕ ಮನಸ್ಥಿತಿ ಇನ್ನೂ ಜೀವಂತವಾಗಿದೆಯೇ ಎಂಬ ಬಲವಾದ ಸಂಶಯ ಕಾಡಲಾ ರಂಭಿಸಿದೆ. ಹನೂರು ಶೂಟ್‌ಔಟ್ ಪ್ರಕರಣದ ಬಳಿಕ ನಡೆದ ಸರಣಿ ಬೆಳವಣಿಗೆಗಳು ಕೇವಲ ಒಂದು ಕ್ಷಣಿಕ ಆಕ್ರೋಶದ ಪ್ರತಿಭಟನೆಯಾಗಿ ಕಾಣುತ್ತಿಲ್ಲ. ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ನುಗ್ಗಿದ ಗುಂಪು ಪೀಠೋಪಕರಣ ಗಳನ್ನು ಧ್ವಂಸಗೊಳಿಸಿ, ದಾಖಲೆಗಳನ್ನು ನಾಶಪಡಿಸಲು ಯತ್ನಿಸಿತು.
ಅರಣ್ಯ ಇಲಾಖೆಯು ಕಳ್ಳಬೇಟೆ ತಡೆಗೆಂದು ನಿರ್ಮಿಸಿದ್ದ ಏಳೆಂಟು ಶಿಬಿರಗಳನ್ನು ಜಿಲೆಟಿನ್ ಮತ್ತು ಡೈನಮೈಟ್ ಬಳಸಿ ಸ್ಫೋಟಿಸಲಾಯಿತು. ಇದು ಸುಧಾರಿತ ಸ್ಫೋಟಕಗಳ ಜಾಲ ಹೊಂದಿರುವ ವ್ಯವಸ್ಥಿತ ಗುಂಪಿನ ಕೃತ್ಯ ಎನ್ನುವುದು ಸ್ಪಷ್ಟ. ಇದೇ ಗುಂಪು ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಕೊಳ್ಳೇಗಾಲ ತಾಲ್ಲೂಕಿನ ಶಿಲುವೆಪುರ ಅರಣ್ಯಪ್ರದೇಶಕ್ಕೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದೆ. ಈ ಘಟನೆಗಳು ಉಗ್ರರು ಇಲ್ಲವೇ ನಕ್ಸಲರು ನಡೆಸುವ ಯೋಜಿತ ಕೃತ್ಯಗಳಂತಿವೆ.
ಇದನ್ನೂ ಓದಿ: Lokesh Kayarga Column: ಕರ್ನಾಟಕದಲ್ಲೊಂದು ಗುಟ್ಕಾ ನಿಷೇಧ ಪ್ರಹಸನ !
ಇದೀಗ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕು ತ್ತಿದ್ದಾರೆ. ಯಾವುದೇ ಒಂದು ಸಂವೇದನಾಶೀಲ ಘಟನೆ ನಡೆದಾಗ ಆಡಳಿತ ವ್ಯವಸ್ಥೆ ತನಿಖೆಗೆ ಆದ್ಯತೆ ನೀಡಬೇಕು. ಆದರೆ ಈ ಪ್ರಕರಣದಲ್ಲಿ ಕರ್ನಾಟಕ ಸರಕಾರ ಮತ್ತು ತಮಿಳುನಾಡು ಸರಕಾರದ ನಾಯಕರು ನಡೆದುಕೊಂಡಿರುವ ರೀತಿ ಅಧಿಕಾರಿಗಳ ಮನೋಬಲ ಮತ್ತು ನೈತಿಕ ಸ್ಥೆರ್ಯವನ್ನು ಕಂಗೆಡಿಸಿರುವುದು ಸುಳ್ಳಲ್ಲ. ಪ್ರಕರಣ ವರದಿಯಾಗಿ ಕೆಲವು ಗಂಟೆಗಳೊಳಗೆ, ಚಾಮರಾಜನಗರ ಉಸ್ತುವಾರಿ ಸಚಿವ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು‘ ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ’ ಎಂದು ಹೇಳಿಬಿಟ್ಟರು.
ಅರಣ್ಯ ಸಚಿವರಾಗಲಿ, ಮುಖ್ಯಮಂತ್ರಿಯಾಗಲಿ ಹೇಳಿಕೆ ನೀಡುವ ಮುನ್ನವೇ, ಪುಟ್ಟರಂಗಶೆಟ್ಟರು ಈ ಮಾತನ್ನಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಅಷ್ಟು ಬೇಗ ಈ ತೀರ್ಮಾನಕ್ಕೆ ಬರಲು ಅವರ ಬಳಿ ಅದೆಂತಹ ನಿಖರ ಸಾಕ್ಷ್ಯವಿತ್ತೋ ಗೊತ್ತಿಲ್ಲ. ಹಾಗೆ ನೋಡಿದರೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರ ನಡೆ ಇದಕ್ಕಿಂತ ಹೆಚ್ಚು ಸಮಾಧಾನಕರವಾಗಿತ್ತು. ಪ್ರತಿಭಟನಾ ಕಾರರ ಜತೆ ಸಂಧಾನ ನಡೆಸಿ, ಪೋಸ್ಟ್ ಮಾರ್ಟಂಗೆ ಅವರನ್ನು ಒಪ್ಪಿಸುವಲ್ಲಿ ಶಾಸಕರ ಪಾತ್ರ ಹಿರಿದಾಗಿತ್ತು.
ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸುವ ಮೂಲಕ, ನ್ಯಾಯೋಚಿತ ಪರಿಹಾರದ ಭರವಸೆ ನೀಡುವ ಮೂಲಕ ಉದ್ವಿಗ್ನ ಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈ ನಡುವೆ ಸ್ವಧರ್ಮಿಯರೆಂಬ ಕಾರಣಕ್ಕೆ ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕ, ಐವಾನ್ ಡಿಸೋಜ ಅವರ ಮಾತುಗಳೂ ಹೆಚ್ಚು, ಕಡಿಮೆ ಅಧಿಕಾರಿಗಳನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವಂತಿದ್ದವು. ಇನ್ನೊಂದೆಡೆ ಕರ್ನಾಟಕಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ತಮಿಳುನಾಡು ಮೂಗು ತೂರಿಸುವ ಮೂಲಕ ಇನ್ನೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿತು.
ಪ್ರಕರಣದ ಸತ್ಯಾಸತ್ಯತೆ ತಿಳಿಯುವ ಮುನ್ನವೇ ಮೃತರು ತಮಿಳು ಭಾಷಿಕರೆಂಬ ಒಂದೇ ಕಾರಣ ಕ್ಕಾಗಿ ಆ ರಾಜ್ಯದಿಂದಲೂ ನೆರವಿನ ಘೋಷಣೆ ಮಾಡಲಾಯಿತು. ಜತೆಗೆ ಈ ಪ್ರಕರಣದ ಸಮಗ್ರ ತನಿಖೆ ನಡೆಯಬೇಕೆಂಬ ಅಹವಾಲನ್ನೂ ಸಲ್ಲಿಸಲಾಯಿತು. ಒಕ್ಕೂಟ ವ್ಯವಸ್ಥೆಯ ಔಚಿತ್ಯ ಮೀರಿದ ಈ ನಡೆಯನ್ನು ಕರ್ನಾಟಕ ಬಲವಾಗಿ ಖಂಡಿಸಬೇಕಿತ್ತು. ಆದರೆ ಅಲ್ಲೂ ನಮ್ಮ ಪ್ರತಿಕ್ರಿಯೆಯಲ್ಲಿ ತಪ್ಪಿತಸ್ಥನ ಭಾವವಿತ್ತು. ನಾವು ನಾಡಿನಲ್ಲಿ ಸುರಕ್ಷಿತವಾಗಿ ಕುಳಿತುಕೊಂಡು ಈ ಪ್ರಕರಣದಲ್ಲಿ ತಪ್ಪು ಯಾರದ್ದು ಎಂದು ತೀರ್ಪು ನೀಡಲಾಗದು.
ಸಮಗ್ರವಾದ ತನಿಖೆ ಬಳಿಕವೇ ಸತ್ಯಾಂಶ ಹೊರಬರಬೇಕಾಗಿದೆ. ಆದರೆ ತಲೆಗೆ ಟಾರ್ಚ್ ಲೈಟ್ ಕಟ್ಟಿಕೊಂಡು, ಕೈಯಲ್ಲಿ ಬಂದೂಕು ಹಿಡಿದು ರಾತ್ರಿ ವೇಳೆಗೆ ದಟ್ಟಾರಣ್ಯದೊಳಗೆ ನುಗ್ಗುವವರು ದನಗಾಹಿಗಳಾಗಿರಲು ಸಾಧ್ಯವಿಲ್ಲ. ಅದೇ ರೀತಿ ಅರಣ್ಯಾಧಿಕಾರಿಗಳು ‘ಸ್ವಯಂ ರಕ್ಷಣೆಗಾಗಿ’ ಹಾರಿಸಿದ ಗುಂಡು ಒಂದೇ ಬಾರಿ ಮೂವರ ಎದೆ ಸೀಳಲು ಸಾಧ್ಯವಿಲ್ಲ. ಇದರ ಹಿಂದೆ-ಮುಂದೆ ನಾವರಿಯದ ಹಲವು ನಿಗೂಢಗಳಿರುವುದು ಸ್ಪಷ್ಟ. ಸಿಐಡಿ ತನಿಖೆಯಲ್ಲಿ ಇವೆಲ್ಲವೂ ಬಹಿರಂಗವಾಗಬೇಕಿದೆ.
ಅರಣ್ಯ ಸಿಬ್ಬಂದಿ ಪ್ರಕಾರ ಈ ಘಟನೆಗಳ ಹಿಂದೆ ಕಳ್ಳಬೇಟೆಗಾರರ ವ್ಯವಸ್ಥಿತ ಷಡ್ಯಂತ್ರವಿದೆ. ಅವರ ಬಳಿ ಬಂದೂಕು ಸಹಿತ ಮಾರಕಾಸಗಳು ಮಾತ್ರವಲ್ಲ, ಡೈನಮೈಟ್‌ನಂತಹ ಸ್ಫೋಟಕಗಳಿವೆ. ಇದು ನಿಜವಾಗಿದ್ದರೆ ಮುಂದೊಂದು ದಿನ ಈ ತಂಡ ಇಲ್ಲಿನ ಅರಣ್ಯಕ್ಕೆ, ವನ್ಯಜೀವಿಗಳಿಗೆ ಮತ್ತು ಸರಕಾರಕ್ಕೆ ಸವಾಲೊಡ್ಡುವುದು ಖಚಿತ. ವೀರಪ್ಪನ್ ಚರಿತ್ರೆ ಆರಂಭವಾಗಿದ್ದೇ ಹೀಗೆ. ಆರಂಭದಲ್ಲಿ ಆತ ಮಾಡಿದ ಎಲ್ಲ ಕೆಲಸಗಳಿಗೆ ಅಲ್ಲಿನ ಗ್ರಾಮಸ್ಥರ ಪರೋಕ್ಷ ಬೆಂಬಲವಿತ್ತು. ಬಳಿಕ ಆತನ ಕಾರಣದಿಂದಲೇ ಇಡೀ ಹಳ್ಳಿ ನಲುಗುವಂತಾಯಿತು.
ಸರಿ ಸುಮಾರು ಮೂರೂವರೆ ದಶಕಗಳ ಕಾಲ ಆತ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ತಲೆ ನೋವಾಗಿ ಪರಿಣಮಿಸಿದ. ಈ ಕರಾಳ ಚರಿತ್ರೆ ಮತ್ತೊಮ್ಮೆ ಮರುಕಳಿಸಬಹುದೇ ಎನ್ನುವ ಆತಂಕವಿದೆ. ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋದ ಬಳಿಕ, ಅಧಿಕಾರಿಗಳು, ಸಿಬ್ಬಂದಿ ಈ ಭಾಗದಲ್ಲಿ ಇನ್ನು ಭಯ, ಆತಂಕಗಳಿಲ್ಲದೆ ಕರ್ತವ್ಯ ನಿರ್ವಹಿಸುವುದು ದೂರದ ಮಾತು. ನಿರ್ದಿಷ್ಟ ಪ್ರಕರಣದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಭರವಸೆ ಜತೆಗೆ ಈ ದುರ್ಗಮ ಪ್ರದೇಶದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಅರಣ್ಯ ಯೋಧರಿಗೆ ನೈತಿಕ ಧೈರ್ಯ, ಸ್ಥೆರ್ಯ ತುಂಬುವ ಕೆಲಸವೂ ನಡೆಯಬೇಕಿತ್ತು. ಆದರೆ ಇಷ್ಟೂ ದಿನಗಳಲ್ಲಿ ನಾಯಕರಿಂದಾಗಲೀ, ಹಿರಿಯ ಅಧಿಕಾರಿ ಗಳಿಂದಾಗಲಿ ಈ ಕೆಲಸ ನಡೆದಿಲ್ಲ.
ವೀರಪ್ಪನ್ ಕಲಿಸಿದ ಪಾಠ ವೀರಪ್ಪನ್ ಎಂಬ ಕಾಡುಗಳ್ಳ ಒಂದೇ ದಿನದಲ್ಲಿ ರೂಪುಗೊಂಡವನಲ್ಲ. ಆರಂಭದಲ್ಲಿ ಆತ ಸಣ್ಣಪುಟ್ಟ ಕಳ್ಳಬೇಟೆ, ಶ್ರೀಗಂಧ ಕಳ್ಳಸಾಗಣೆಯ ಮೂಲಕವೇ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದ. ಅಂದಿನ ದಿನಗಳಲ್ಲಿ ಸ್ಥಳೀಯರನ್ನು ಭೀತಿಯಿಂದ ಅಥವಾ ಆಮಿಷಗಳಿಂದ ತನ್ನ ಪರವಾಗಿ ಇರಿಸಿಕೊಂಡಿದ್ದ ಆತನಿಗೆ, ವ್ಯವಸ್ಥೆಯ ಆರಂಭಿಕ ನಿರ್ಲಕ್ಷ್ಯವೇ ದೊಡ್ಡ ಬಲವಾಯಿತು.
ಆರಂಭಿಕ ಹಂತದ ಅರಣ್ಯ ಸಿಬ್ಬಂದಿಯ ಮೇಲೆ ಹಗಳು ನಡೆದಾಗ ಕಠಿಣ ಕ್ರಮ ಕೈಗೊಳ್ಳದ ಪರಿಣಾಮವಾಗಿ, ಆತ ಮುಂದೆ ಇಡೀ ಪೊಲೀಸ್ ಮತ್ತು ಅರಣ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದ. ಇಂದು ಚಾಮರಾಜನಗರ ಗಡಿಯಲ್ಲಿ ನಡೆದಿರುವ ಅರಣ್ಯ ಶಿಬಿರಗಳ ಸ್ಫೋಟ ಹಾಗೂ ಬೆಂಕಿ ಹಚ್ಚುವಿಕೆ ಕೃತ್ಯಗಳು ಅದೇ ಇತಿಹಾಸದ ಆರಂಭಿಕ ಲಕ್ಷಣಗಳಂತೆ ಗೋಚರಿಸುತ್ತಿವೆ. ಈ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ಈ ಭೂಪ್ರದೇಶದ ಭೌಗೋಳಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಅವಲೋಕಿಸುವುದು ಅನಿವಾರ್ಯ.
ಚಾಮರಾಜನಗರ-ಈರೋಡ್ ಗಡಿ ಭಾಗವು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ತ್ರಿವೇಣಿ ಸಂಗಮದಂತಿರುವ ದಟ್ಟ ಅರಣ್ಯ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡು ಗಡಿ ಹಂಚಿಕೊಳ್ಳುವ ಚಾಮರಾಜನಗರ, ಕೊಳ್ಳೇಗಾಲ, ಹನೂರು, ತಾಳವಾಡಿ ಮತ್ತು ಈರೋಡ್ ವ್ಯಾಪ್ತಿಯ ಅರಣ್ಯಗಳು ಭೌಗೋಳಿಕವಾಗಿ ಅತ್ಯಂತ ಸಂಕೀರ್ಣವಾದ ಭೂಪ್ರದೇಶಗಳು. ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳ ವ್ಯಾಪ್ತಿಯು ಕಳ್ಳಬೇಟೆಗಾರರಿಗೆ ಮತ್ತು ಅಕ್ರಮ ದಂಧೆಕೋರರಿಗೆ ದಶಕಗಳಿಂದಲೂ ಆಶ್ರಯ ತಾಣವಾಗಿದೆ. ವೀರಪ್ಪನ್ ಯುಗ ಅಂತ್ಯಗೊಂಡ ಬಳಿಕ ದೊಡ್ಡ ಮಟ್ಟದ ಗ್ಯಾಂಗ್‌ಗಳು ನಾಶವಾದರೂ, ಸಣ್ಣಪುಟ್ಟ ಕಳ್ಳಬೇಟೆ ಜಾಲಗಳು ಸಂಪೂರ್ಣವಾಗಿ ನಿರ್ನಾಮವಾಗಲಿಲ್ಲ.
ಗಡಿಯಾಚೆಗಿನ ಬೇಡಿಕೆ, ಕಳ್ಳಸಂತೆ ಮತ್ತು ದುರ್ಗಮ ಕಾಡಿನ ಹಾದಿಗಳು ಇಂತಹ ದಂಧೆಗಳಿಗೆ ನಿರಂತರ ನೀರೆರೆಯುತ್ತಿವೆ. ಪಾಲಾರ್ ನದಿಯ ಇಕ್ಕೆಲಗಳಲ್ಲಿ ನಡೆಯುವ ಅಕ್ರಮ ಮೀನುಗಾರಿಕೆ, ಕಾಡುಕೋಣ, ಕಡವೆ ಹಾಗೂ ಜಿಂಕೆಗಳ ಮಾಂಸದ ಕಳ್ಳದಂಧೆ ಇಂದಿಗೂ ಸಕ್ರಿಯ ಜಾಲಗಳಿಂದ ನಿಯಂತ್ರಿಸಲ್ಪಡುತ್ತಿವೆ.
ಅರಣ್ಯ ಅಂಚಿನ ಕೆಲ ಗ್ರಾಮಗಳಲ್ಲಿ ಕಳ್ಳಬೇಟೆಗಾರರು ಹಣ, ಮಾಂಸ ಹಂಚುವ ಮೂಲಕ ತಮ್ಮ ಪರವಾದ ಗುಪ್ತಚರ ಜಾಲವನ್ನು ನಿರ್ಮಿಸಿಕೊಂಡಿರುತ್ತಾರೆ. ಅಂದು ವೀರಪ್ಪನ್‌ಗೆ ಸ್ಥಳೀಯರು ನೀಡಿದ ಪರೋಕ್ಷ ರಕ್ಷಣೆಯೇ ಆತ ಮೂರೂವರೆ ದಶಕಗಳ ಕಾಲ ಸರಕಾರಕ್ಕೆ ಸವಾಲಾಗಲು ಕಾರಣವಾಯಿತು. ಇದೀಗ ಸ್ಥಳೀಯವಾಗಿ ಸಿಗುವ ನಾಡಬಂದೂಕುಗಳು ಹಾಗೂ ಕ್ವಾರಿಗಳಿಂದ ಅಕ್ರಮವಾಗಿ ಸೋರಿಕೆಯಾಗುವ ಜಿಲೆಟಿನ್ ಕಡ್ಡಿಗಳು ಈ ಭಾಗದಲ್ಲಿ ಸುಲಭವಾಗಿ ಕ್ರಿಮಿನಲ್ ಶಕ್ತಿಗಳ ಕೈಸೇರುತ್ತಿರು ವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.
ಈ ರಾಜಕೀಯ ಮೇಲಾಟಗಳಿಂದಾಗಿ, ಅರಣ್ಯದಂಚಿನಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ತಳಮಟ್ಟದ ಬೀಟ್ ಫಾರೆಸ್ಟರ್‌ಗಳು ಮತ್ತು ಗಾರ್ಡ್‌ಗಳು ಗಂಭೀರ ಆತಂಕಕ್ಕೆ ಒಳಗಾಗಿದ್ದಾರೆ. ಅಕ್ರಮ ಶಕ್ತಿಗಳು ಅರಣ್ಯ ಇಲಾಖೆಯ ಶಿಬಿರಗಳನ್ನೇ ಸ್ಫೋಟಿಸಿದರೂ, ಸರ್ಕಾರದ ಕಡೆಯಿಂದ ಅಧಿಕಾರಿಗಳಿಗೆ ಸಿಗಬೇಕಾದ ನೈತಿಕ ಬೆಂಬಲ ಸಿಗದಿರುವುದು ಅವರ ಕರ್ತವ್ಯ ಪ್ರಜ್ಞೆಗೆ ಪೆಟ್ಟುಕೊಟ್ಟಿದೆ.
ವೀರಪ್ಪನ್ ಕಾಲದ ಕರಾಳ ಇತಿಹಾಸ ಮರಕಳಿಸದಿರಲು ಕರ್ನಾಟಕ ಮತ್ತು ತಮಿಳುನಾಡು ಇಲ್ಲಿ ಹೆಚ್ಚಿನ ವಿವೇಚನೆ ಮತ್ತು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಎನ್‌ಕೌಂಟರ್‌ನ ವಾಸ್ತವಾಂಶ, ಮೃತರ ಹಿನ್ನೆಲೆ ಹಾಗೂ ಅವರ ಕೈಗೆ ಮಾರಕಾಸ್ತ್ರಗಳು ಬಂದ ಮೂಲವನ್ನು ನಿಖರವಾಗಿ ಪತ್ತೆ ಹಚ್ಚಿ ವರದಿ ಸಾರ್ವಜನಿಕಗೊಳಿಸುವುದು ಅಗತ್ಯ.
ಕಾಡಂಚಿನ ಗ್ರಾಮಸ್ಥರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸಿ, ಅವರು ಕಳ್ಳಬೇಟೆಗಾರರ ಜಾಲಕ್ಕೆ ಸಿಲುಕದಂತೆ ಜಾಗೃತಿ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಉಭಯ ರಾಜ್ಯಗಳ ಪೊಲೀಸರು ಹಾಗೂ ಅರಣ್ಯ ಇಲಾಖೆಗಳು ಪರಸ್ಪರ ರಾಜಕೀಯ ಹಿತಾಸಕ್ತಿ ಬದಿಗೊತ್ತಿ ಜಂಟಿ ಕಾರ್ಯಾಚರಣೆ ನಡೆಸಬೇಕು. ಅರಣ್ಯ ಶಿಬಿರಗಳನ್ನು ಸ್ಫೋಟಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸ್ಫೋಟಕ ಸರಬರಾಜು ಮಾಡಿದ ರೂವಾರಿಗಳನ್ನು ಬಂಧಿಸಬೇಕು.
ಕರ್ತವ್ಯ ನಿರತ ಅರಣ್ಯ ಸಿಬ್ಬಂದಿಗೆ ಪೊಲೀಸರಂತೆಯೇ ಅಗತ್ಯ ಶಸ್ತ್ರಾಸ್ತ್ರ ಬಳಕೆ ಮತ್ತು ಸೆಕ್ಷನ್ 197ರ ಅಡಿಯಲ್ಲಿ ಕಾನೂನು ರಕ್ಷಣೆ ಒದಗಿಸಬೇಕು. ವೀರಪ್ಪನ್ ಎಂಬ ರಕ್ಕಸ ಹುಟ್ಟಿದ್ದು ಒಂದೇ ದಿನದಲ್ಲಲ್ಲ; ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ರಾಜಕೀಯ ಓಲೈಕೆ ಮತ್ತು ಸ್ಥಳೀಯರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಆತ ಹೆಮ್ಮರವಾದ. ಇಂದು ಹನೂರು ಕಾಡುಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆ ಕರಾಳ ಇತಿಹಾಸದ ಆರಂಭಿಕ ದಿನಗಳನ್ನು ನೆನಪಿಸುತ್ತಿವೆ.
ಸರಕಾರಗಳು ಕೇವಲ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಬದಿಗಿಟ್ಟು, ಅರಣ್ಯ ರಕ್ಷಕರ ನೈತಿಕ ಸ್ಥೈರ್ಯವನ್ನು ಎತ್ತಿಹಿಡಿಯದಿದ್ದರೆ ಹಾಗೂ ವಿಧ್ವಂಸಕ ಶಕ್ತಿಗಳನ್ನು ಆರಂಭದ ಮಟ್ಟ ಹಾಕದಿದ್ದರೆ, ಈ ನೆಲದಲ್ಲಿ ಮತ್ತೊಬ್ಬ ವೀರಪ್ಪನ್ ಹುಟ್ಟಿಕೊಳ್ಳುವುದನ್ನು ತಡೆಯುವುದು ಅಸಾಧ್ಯ. ಅರಣ್ಯ ರಕ್ಷಣೆ ಎಂಬುದು ಕೇವಲ ಮರ-ಗಿಡಗಳ ರಕ್ಷಣೆಯಲ್ಲ; ಅದು ದೇಶದ ಆಂತರಿಕ ಭದ್ರತೆಯ ಒಂದು ಭಾಗ. ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಕರ್ತವ್ಯನಿರತ ಸಿಬ್ಬಂದಿ ಯ ನೈತಿಕ ಸ್ಥೈರ್ಯ ಕುಗ್ಗಿದರೆ, ಕಾನೂನುಬಾಹಿರ ಶಕ್ತಿಗಳು ಮತ್ತೆ ಹೆಡೆಎತ್ತಿ ನಿಲ್ಲುತ್ತವೆ. ದಕ್ಷಿಣದ ಕಾಡುಗಳಲ್ಲಿ ಮತ್ತೊಬ್ಬ ವೀರಪ್ಪನ್ ಹುಟ್ಟಿಕೊಳ್ಳದಂತೆ ತಡೆಯಲು ಇಚ್ಛಾಶಕ್ತಿ ಮತ್ತು ದೃಢ ಆಡಳಿತಾತ್ಮಕ ನಿಲುವು ಅತ್ಯಗತ್ಯ.