ಲೋಕಮತ
ಹೆತ್ತವರನ್ನು ಬಿಟ್ಟು ತನ್ನನ್ನೇ ನಂಬಿ ಬಂದ ಹೆಂಡತಿಯನ್ನು ಗಂಡನೇ ಕತ್ತು ಹಿಸುಕಿ ಸಾಯಿಸುತ್ತಾನೆ. ‘ಧರ್ಮಪತ್ನಿ’ ಎನಿಸಿಕೊಂಡವಳು ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪ್ರಿಯಕರ ನೊಂದಿಗೆ ಸೇರಿ ಮಾಜಿ ಸೈನಿಕನಾದ ತನ್ನ ಗಂಡನನ್ನೇ ಮುಗಿಸು ತ್ತಾಳೆ. ಹಣ ಮತ್ತು ಆಸ್ತಿಯ ಮುಂದೆ ರಕ್ತದ ಬಣ್ಣ ಮಾಸಿಹೋಗಿದೆ.
‘ತಾಯಿಗಿಂತ ದೊಡ್ಡ ದೇವರಿಲ್ಲ’, ‘ಮನೆಯೇ ಮೊದಲ ಪಾಠಶಾಲೆ’, ‘ಜನನಿ ತಾನೇ ಮೊದಲ ಗುರು’ ಮುಂತಾದ ಉದಾತ್ತ ಚಿಂತನೆಗಳ ನೆಲ ನಮ್ಮದು. ಮಕ್ಕಳನ್ನು ದೇವರಂತೆ ಕಾಣುವ, ಪ್ರತಿಯೊಂದು ಶುಭ ಕಾರ‍್ಯದಲ್ಲೂ ಗುರು, ಹಿರಿಯರ ಪಾದಕ್ಕೆ ನಮಿಸುವ ಸಂಸ್ಕಾರ ನಮ್ಮ ಹೆಮ್ಮೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಂಬಿಕೆಯ ತಳಹದಿಯನ್ನೇ ಬುಡಮೇಲು ಮಾಡುವಂತಹ ಭೀಕರ ಅಪರಾಧಗಳು ನಮ್ಮ ಕಣ್ಣೆದುರೇ ಜರುಗುತ್ತಿವೆ. ಯಾರು ಯಾರನ್ನು ರಕ್ಷಿಸಬೇಕೋ, ಅವರೇ ಭಕ್ಷಕ ರಾಗುತ್ತಿದ್ದಾರೆ.
ಹೆತ್ತ ಮಗುವನ್ನು ಸಲಹಬೇಕಾದ ತಾಯಿ ಕಾಮಲಾಲಸೆಯಲ್ಲಿ ಮಗುವನ್ನೇ ಕತ್ತು ಹಿಸುಕಿ ಸಾಯಿಸುತ್ತಿದ್ದಾಳೆ. ಮಕ್ಕಳಿಗಾಗಿಯೇ ತಮ್ಮ ಇಡೀ ಬದುಕನ್ನು ಸವೆಸಿದ ಹೆತ್ತವರನ್ನು, ಪುಡಿ ಆಸ್ತಿಗಾಗಿ ಮಗ/ಮಗಳು ಸಂಚು ಹೂಡಿ ಸಾಯಿಸುತ್ತಿದ್ದಾರೆ. ಈ ಕ್ರೌರ್ಯ, ಈ ಸಂವೇದನಾಶೂನ್ಯತೆ ಕೇವಲ ಬಿಡಿ ಅಪರಾಧಗಳಲ್ಲ; ಬದಲಿಗೆ ನಮ್ಮ ಸಮಾಜದ ಸ್ವಾಸ್ಥ್ಯ ಕೆಟ್ಟಿರುವುದಕ್ಕೆ, ಸಾಂಸ್ಕೃತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ. ಸಂವೇದನೆ ಇಲ್ಲದ ಮನುಷ್ಯ ರಕ್ಕಸನಿಗಿಂತ ಕ್ರೂರಿಯಾಗ ಬಲ್ಲ ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ.
ಬೆಂಗಳೂರಿನ ಕಾಡುಗೋಡಿಯಲ್ಲಿ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ 5 ವರ್ಷದ ಕಂದಮ್ಮ ’ವೆನ್ನೆಲ’ಳನ್ನು ಕೊಂದ ಮುಗಿಸಿದ ಘಟನೆ ಇಡೀ ರಾಜ್ಯ ಬೆಚ್ಚಿ ಬೀಳುವಂತೆ ಮಾಡಿದೆ. ಈ ಕೃತ್ಯವನ್ನು ಬಯಲಿಗೆಳೆದು ಶಿಕ್ಷಿಸಬೇಕಾದ ಪೊಲೀಸರು, ಇಂತಹ ಬರ್ಬರ ಕೃತ್ಯದಲ್ಲೂ ಆರೋಪಿ ಗಳೊಂದಿಗೆ ಕೈ ಜೋಡಿಸಿದ್ದು, ಇನ್ನಷ್ಟು ಆಘಾತಕಾರಿ ವಿಚಾರ. ಇತ್ತ ನೆರೆರಾಜ್ಯ ಕೇರಳದ ತಿರುವ ನಂತಪುರದಲ್ಲಿ ಒಂದೂವರೆ ವರ್ಷದ ಹಸುಗೂಸು ‘ಅರ್ಶಿತ್’ ಎಂಬ ಮಗುವನ್ನು ತಾಯಿಯ ಪ್ರಿಯಕರ ಸಿಗರೇಟಿನಿಂದ ಸುಟ್ಟು, ಚಿತ್ರಹಿಂಸೆ ನೀಡಿ ಕೊಂದಿದ್ದಾನೆ. ಕಾಮದ ವಿಕೃತಿಗೆ ಹೆತ್ತ ಒಡಲಿನ ಮಮತೆ ಬಲಿಯಾಗುತ್ತಿದೆ ಎಂದರೆ ನಾವಿನ್ನೂ ಮಾನವ ಸಮಾಜದಲ್ಲಿದ್ದೇವೆಯೇ ಅಥವಾ ಕಾಡುಮೃಗಗಳ ಲೋಕದಲ್ಲಿದ್ದೇವೆಯೇ ಎಂಬ ಸಂಶಯ ಮೂಡುತ್ತದೆ.
ಇದನ್ನೂ ಓದಿ: Lokesh Kayarga Column: ಅಲ್ಲಿ ನೀರಲ್ಲಿ ಸಮರ, ಇಲ್ಲಿ ನೀರಿಗಾಗಿ ಸಮರ
ನಮ್ಮ ದೇಶದಲ್ಲಿ ಮಕ್ಕಳನ್ನು ಹೊಡೆಯುವುದು, ಗದರಿಸುವುದು ಶಿಕ್ಷಣ ಅಥವಾ ಶಿಸ್ತಿನ ಭಾಗ ಎಂದು ಭಾವಿಸಲಾಗಿದೆ. ಯೂರೋಪ್ ರಾಷ್ಟ್ರಗಳಂತೆ ಮಕ್ಕಳ ಮೇಲಿನ ಸಣ್ಣ ದೈಹಿಕ ದಂಡನೆ ಯೂ ಶಿಕ್ಷಾರ್ಹ ಅಪರಾಧ ಎಂದು ನಮ್ಮಲ್ಲಿ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಿದ್ದರೆ, ಭಾರತದ ಜೈಲುಗಳು ಹೆತ್ತವರಿಂದಲೇ ತುಂಬಿ ಹೋಗುತ್ತಿದ್ದವೇನೋ? ಆದರೆ, ಇಲ್ಲಿ ಕೇವಲ ಶಿಸ್ತಿನ ಹೆಸರಿನ ದಂಡನೆಯಷ್ಟೇ ಇಲ್ಲ; ಎರಡು ವರ್ಷದ ಹೆಣ್ಣು ಮಗುವಿನ ಮೇಲೂ ಲೈಂಗಿಕ ದೌರ್ಜನ್ಯ ಎಸಗುವ ಕಾಮಪಿಪಾಸು ನರರಾಕ್ಷಸರು ರಾಜಾರೋಷವಾಗಿ ಓಡಾಡುತ್ತಿದ್ದಾರೆ.
ರಕ್ತ ಸಂಬಂಧದಲ್ಲೇ ರಕ್ತದಾಹ
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿದಿನ ಮಕ್ಕಳ ಮೇಲೆ 500ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಅಂದರೆ ಪ್ರತಿ ಗಂಟೆಗೆ 21 ಪ್ರಕರಣಗಳು, ಪ್ರತಿ ನಿಮಿಷಕ್ಕೊಂದು ಬಾಲ ದೌರ್ಜನ್ಯದ ಕೃತ್ಯ ನಡೆಯುತ್ತಲೇ ಇದೆ. ಇವು ಕೇವಲ ಸಂಖ್ಯೆಗಳಲ್ಲ, ಇರುವೆಯನ್ನು ಸಾಯಿಸುವುದೂ ಪಾಪ ಕೃತ್ಯ ಎಂದು ಭಾವಿಸುವ ಇದೇ ದೇಶದ ಇನ್ನೊಂದು ಮುಖದ ಅನಾವರಣ. ಆಘಾತಕಾರಿ ವಿಷಯ ವೆಂದರೆ, ಮಕ್ಕಳ ಮೇಲಿನ ಶೋಷಣೆಯ ಶೇ.90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳು ಹೊರಗಿ ನವರಲ್ಲ; ಬದಲಿಗೆ ಮಲತಂದೆ, ಚಿಕ್ಕಪ್ಪ, ದೊಡ್ಡಪ್ಪ, ಸೋದರಮಾವ ಅಥವಾ ತೀರಾ ಹತ್ತಿರದ ಸಂಬಂಧಿಗಳೇ ಆಗಿರುತ್ತಾರೆ.
ಮಕ್ಕಳ ಕಥೆ ಹೀಗಾದರೆ, ಬದುಕಿನ ಸಂಧ್ಯಾಕಾಲದಲ್ಲಿ ನಿಶ್ಚಿಂತೆಯಾಗಿ ಇರಬೇಕಾದ ಹಿರಿಯ ನಾಗರಿಕರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಗರ ಪ್ರದೇಶಗಳಲ್ಲಿ ತಮ್ಮದೇ ಬದುಕಿನ ಜಂಜಾಟ, ಹಣದ ಅಂಧಾಭಿಮಾನದಲ್ಲಿ ತೇಲುತ್ತಿರುವ ಮಕ್ಕಳಿಗೆ ಹೆತ್ತವರು ಹೊರೆಯಾಗಿ ಕಾಣುತ್ತಿದ್ದರೆ. ಕೇವಲ ನಿರ್ಲಕ್ಷ್ಯವಷ್ಟೇ ಅಲ್ಲ, ಆಸ್ತಿಗಾಗಿ ಹೆತ್ತವರ ಪ್ರಾಣವನ್ನೇ ತೆಗೆಯುವ ಕ್ರೂರ ಘಟನೆಗಳು ಹೆಚ್ಚುತ್ತಿವೆ. ತೀರಾ ಇತ್ತೀಚೆಗೆ ಬೆಂಗಳೂರಿನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರ ಪುತ್ರ ತನ್ನ ತಂದೆ-ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ಹಾವೇರಿ ಜಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಮಗನೊಬ್ಬ ಆಸ್ತಿಯ ಆಸೆಗಾಗಿ ತಂದೆ, ತಾಯಿ, ಅಕ್ಕ ಸೇರಿದಂತೆ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿದ್ದ. ಇದಕ್ಕಾಗಿ ಆತ ಹೂಡಿದ ಸಂಚು, ಎಂಥವರ ಎದೆಯನ್ನೂ ನಡುಗಿಸುವಂತಿತ್ತು.
ರಕ್ತಸಂಬಂಧಗಳೆಂದರೆ ಕಷ್ಟ-ಸುಖದಲ್ಲಿ ಭಾಗಿಯಾಗಬೇಕಾದ ಆಸರೆಗಳು. ಆದರೆ ಇಂದು ಹಣ ಮತ್ತು ಆಸ್ತಿಯ ಮುಂದೆ ಆ ರಕ್ತದ ಬಣ್ಣ ಮಾಸಿಹೋಗಿದೆ. ‘ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ’ದ ಅಂಗವಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಕೆಲವು ಹಿರಿಯರು ಹಂಚಿಕೊಂಡ ಕಣ್ಣೀರಿನ ಕಥೆಗಳು ಕಲ್ಲನ್ನಾದರೂ ಕರಗಿಸುವಂತಿದ್ದವು.
ಬೆಂಗಳೂರಿನ ಹಿರಿಯರ ಸಹಾಯವಾಣಿ ನಡೆಸಿರುವ ಮೂರು ವರ್ಷಗಳ (2023ರಿಂದ ಈಚೆಗೆ) ಅಧ್ಯಯನದ ಪ್ರಕಾರ ಹಿರಿಯರ ಮೇಲಿನ ಒಟ್ಟು ದೌರ್ಜನ್ಯಗಳಲ್ಲಿ ಶೇ. 68ರಷ್ಟು ಕೃತ್ಯಗಳು ಸ್ವಂತ ಕುಟುಂಬದ ಸದಸ್ಯರಿಂದಲೇ ನಡೆದಿದೆ. ಇವುಗಳಲ್ಲಿ ಶೇ.42ರಷ್ಟು ಪ್ರಕರಣಗಳಲ್ಲಿ ಸ್ವಂತ ಮಕ್ಕಳೇ (ಮಗ ಅಥವಾ ಮಗಳು) ಹೆತ್ತವರನ್ನು ಪೀಡಿಸುತ್ತಿದ್ದರೆ.
ಶೇ.29ರಷ್ಟು ಪ್ರಕರಣಗಳಲ್ಲಿ ಮನೆಗೆ ಬಂದ ಸೊಸೆಯಂದಿರಿಂದ ದೌರ್ಜನ್ಯ ನಡೆಯುತ್ತಿದೆ. ಇಂದಿನ ಅಪರಾಧ ಲೋಕದ ಚಿತ್ರಣ ಬದಲಾಗಿದೆ. ಈ ಹಿಂದೆ ನಮಗೆ ಅಪರಾಧ ಕೃತ್ಯ ಎಂದಾಕ್ಷಣ ಕಳ್ಳ ಕಾಕರು, ರೌಡಿಗಳು, ವಿಕ್ಷಿಪ್ತ, ವಿಕೃತ ಮನಸ್ಥಿತಿಯ ಕ್ರಿಮಿನಲ್‌ಗಳ ನೆನಪಾಗುತ್ತಿತ್ತು.
ಇಂದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಒಂದಾಗಿ ಬದುಕು ಸಾಗಿಸಿದವರು, ಒಟ್ಟಿಗೇ ಅನ್ನಾಹಾರ ಸೇವಿಸಿದರು, ಒಂದೇ ಹಾಸಿಗೆ ಹಂಚಿಕೊಂಡವರೇ ಪಾತಕಿಗಳಾಗುತ್ತಿದ್ದಾರೆ. ಹೆತ್ತವರನ್ನು ಬಿಟ್ಟು ತನ್ನನ್ನೇ ನಂಬಿ ಬಂದ ಹೆಂಡತಿಯನ್ನು ಗಂಡನೇ ಕತ್ತು ಹಿಸುಕಿ ಸಾಯಿಸುತ್ತಾನೆ. ‘ಧರ್ಮ ಪತ್ನಿ’ ಎನಿಸಿಕೊಂಡವಳು ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಮಾಜಿ ಸೈನಿಕನಾದ ತನ್ನ ಗಂಡನನ್ನೇ ಮುಗಿಸುತ್ತಾಳೆ.
ಮನುಷ್ಯನ ಆಸೆಗಳು ಮಿತಿಮೀರಿದಾಗ, ನೈತಿಕತೆಯ ಬೇರುಗಳು ಸಡಿಲವಾದಾಗ ಇಂತಹ ವಿಕೃತ ಮನಸ್ಥಿತಿಗಳು ಜನ್ಮ ತಾಳುತ್ತವೆ. ಮಕ್ಕಳಾಗಲಿ, ಹಿರಿಯರಾಗಲಿ ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ಉಚಿತ ಸಹಾಯವಾಣಿಗಳಿದ್ದರೂ, ಹೆಚ್ಚಿನವರು ದೂರು ನೀಡಲು ಮುಂದೆ ಬರುವುದಿಲ್ಲ. ದೂರು ನೀಡಿದರೆ ಮುಂದೇನು ಎನ್ನುವುದೇ ದೊಡ್ಡ ಪ್ರಶ್ನೆ.
ಎಲ್ಲವೂ ನಮ್ಮ ಹಣೆ ಬರಹ, ಕರ್ಮಫಲ ಎಂದು ಮೌನವಾಗಿ ಸಹಿಸಿಕೊಳ್ಳುವವರೇ ಹೆಚ್ಚು. ಈ ಮೌನವೇ ಅಪರಾಧಿಗಳಿಗೆ ಮತ್ತಷ್ಟು ಬಲ ನೀಡುತ್ತಿದೆ. ಜಗತ್ತಿನ ಅತಿ ಪ್ರಾಚೀನ ನಾಗರಿಕತೆ, ಉದಾತ್ತ ಮತ್ತು ಆದರ್ಶ ಪರಂಪರೆಯನ್ನು ಹೊಂದಿದ ದೇಶದಲ್ಲಿ ಮನೆ ಮಂದಿಯೇ ಪಾತಕಿಗಳಾಗಲು ಏನು ಕಾರಣ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಾಗಿದೆ. ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ, ಪ್ರತಿಷ್ಠಿತ ಎನಿಸಿಕೊಂಡ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿದರೂ ಅಲ್ಲಿ ದೊರಕುವ ಶಿಕ್ಷಣವು, ಅಂಕಗಳನ್ನು ಗಳಿಸುವ, ಹಣ ತರುವ ಯಂತ್ರಗಳನ್ನು ಸೃಷ್ಟಿಸುತ್ತಿದೆಯೇ ವಿನಃ ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಅರಿವು ಮೂಡಿಸುತ್ತಿಲ್ಲ.
ಇನ್ನೊಬ್ಬರ ಅಭಿವೃದ್ಧಿಯನ್ನು ಕಂಡು ಕರುಬುವ, ಇತರರನ್ನು ಸಂಶಯ ದೃಷ್ಟಿಯಿಂದ ನೋಡುವ, ಹಣ ಗಳಿಕೆಯೊಂದೇ ಜೀವನದ ಪರಮ ಧ್ಯೇಯವೆಂದು ಭಾವಿಸುವ ಪೋಷಕರ ನಡವಳಿಕೆಯನ್ನೇ ಇಂದಿನ ಮಕ್ಕಳು ರೂಢಿಸಿಕೊಳ್ಳುತ್ತಿದ್ದಾರೆ. ಸದಾ ಋಣಾತ್ಮಕ ಸುದ್ದಿ ಮತ್ತು ಚಿಂತನೆಗಳನ್ನು, ವಿಚಿತ್ರ ಅಪರಾಧ ಕೃತ್ಯಗಳನ್ನೇ ರೋಚಕವಾಗಿ ಬಿತ್ತರಿಸುವ ಮಾಧ್ಯಮಗಳು, ಜನರನ್ನು ಸುಲಭದಲ್ಲಿ ಮರಳು ಮಾಡುವ, ದಾರಿ ತಪ್ಪಿಸುವ ಸಾಮಾಜಿಕ ಜಾಲತಾಣಗಳು ಮತ್ತು ರೀಲ್ಸ್‌ಗಳ ದುನಿಯಾ, ಹಿಂಸೆಯನ್ನೇ ಬಂಡವಾಳನ್ನಾಗಿಸಿಕೊಂಡ ಸಿನಿಮಾ ಲೋಕ ಜನರ ಮನಸ್ಸನ್ನು ವಿಕೃತಗೊಳಿಸುತ್ತಿವೆ.
ಅಪರಾಧ ಮಾಡುವುದು ಎಷ್ಟು ಸುಲಭ ಎಂಬ ದಾರಿಯನ್ನು ಇವು ಪರೋಕ್ಷವಾಗಿ ತೋರಿಸಿ ಕೊಡುತ್ತಿವೆ. ಇನ್ನೊಂದೆಡೆ ನಿಕಟ ಸಂಬಂಧಿಕರು, ಅಜ್ಜಿ-ತಾತ, ಮುತ್ತಾತಂದಿರು, ಮಾವ-ಅತ್ತೆ ಯಂದಿರ ಸಂಪರ್ಕವಿಲ್ಲದೆ, ಮನೆ ಮತ್ತು ಶಾಲೆ ಎಂಬ ನಾಲ್ಕು ಗೋಡೆಗಳ ಮಧ್ಯೆ, ಮೊಬೈಲ್ ಪರದೆಯ ಮುಂದೆ ಬೆಳೆಯುವ ನಮ್ಮ ಮಕ್ಕಳು ಸಾಮಾಜಿಕ ಸಂವೇದನೆ ಇಲ್ಲದೆ, ಭಾವನೆಗಳ ಬೆಲೆ ಅರಿಯದೆಯೇ ಬೆಳೆಯುತ್ತಿದ್ದಾರೆ.
ನಮ್ಮ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ಮತ್ತು ತನಿಖಾ ವ್ಯವಸ್ಥೆಯಲ್ಲಿನ ಒತ್ತಡ, ಪ್ರಭಾವ ಮತ್ತು ವಿಳಂಬ ನೀತಿಗಳು ಅಪರಾಧಿಗಳಿಗೆ ವರದಾನವಾಗುತ್ತಿವೆ. ಇಲ್ಲಿ ಎಂತಹ ಘೋರ ಅಪರಾಧ ಎಸಗಿದರೂ ಹಣ, ರಾಜಕೀಯ ಪ್ರಭಾವ ಬಳಸಿ ಸುಲಭವಾಗಿ ಜಾಮೀನಿನ ಮೇಲೆ ಹೊರಬರ ಬಹುದು. ಪೋಕ್ಸೋ ಪ್ರಕರಣದಲ್ಲಿ ಸಿಲುಕಿದ ಬಡ ಹಿನ್ನೆಲೆಯ ವ್ಯಕ್ತಿಗೆ 30 ವರ್ಷಗಳಷ್ಟು ದೀರ್ಘ ಶಿಕ್ಷೆ ನೀಡಿದ ನಮ್ಮ ವ್ಯವಸ್ಥೆಗೆ, ಪ್ರಭಾವಿಗಳೆನಿಸಿಕೊಂಡವರನ್ನು ಕನಿಷ್ಠ ಒಂದು ಬಾರಿಯೂ ಕಂಬಿ ಹಿಂದೆ ತಳ್ಳಲು ಸಾಧ್ಯವಾಗಿಲ್ಲ. ಶಿಕ್ಷೆಯ ಭೀತಿ ಇಲ್ಲದಿರುವುದು ಅಪರಾಧಗಳು ಮರುಕಳಿಸಲು ಮುಖ್ಯ ಕಾರಣ.
ಇಡೀ ದುರಂತದ ಮತ್ತೊಂದು ಕರಾಳ ಮುಖವೆಂದರೆ, ದೌರ್ಜನ್ಯಕ್ಕೆ ಒಳಗಾಗುತ್ತಿರುವವರಲ್ಲಿ ಬಹುಪಾಲು ಹೆಣ್ಣುಮಕ್ಕಳು ಮತ್ತು ಅಬಲರೇ ಆಗಿದ್ದಾರೆ. ಭ್ರೂಣ ಹತ್ಯೆಯಿಂದ ಹಿಡಿದು ವೃದ್ಧಾಪ್ಯ ದವರೆಗೂ ಹೆಣ್ಣು ಸಾಲು ಸಾಲು ದೌರ್ಜನ್ಯಗಳನ್ನು ಎದುರಿಸುತ್ತಲೇ ಇದ್ದಾಳೆ. ದೇವಿ ಹೆಸರಿನಲ್ಲಿ ನಾವು ದೇವಸ್ಥಾನಗಳನ್ನು ಕಟ್ಟುತ್ತೇವೆ, ನದಿಗಳನ್ನು ಪೂಜಿಸುತ್ತೇವೆ, ದೇಶವನ್ನು ‘ಭಾರತ ಮಾತೆ’ ಎಂದು ಕರೆಯುತ್ತೇವೆ. ಆದರೆ ಅದೇ ದೇಶದ ಹೆಣ್ಣುಮಕ್ಕಳಿಗೆ, ವೃದ್ಧರಿಗೆ ಮತ್ತು ಹಸುಗೂಸುಗಳಿಗೆ ಅವರ ಸ್ವಂತ ಮನೆಯ ರಕ್ಷಣೆ ಇಲ್ಲದಂತಾಗಿದೆ.
ಸಮಾಜದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಮಾಲಿನ್ಯಕ್ಕೆ ಬಲಿಯಾಗುತ್ತಿರುವುದು ಕೇವಲ ಜೀವಗಳಲ್ಲ, ಬದಲಿಗೆ ಇಡೀ ಸಮಾಜದ ನೈತಿಕ ಸ್ಥಿರತೆ ಕುಸಿಯುತ್ತಿದೆ. ದೇಶದ ಅಭಿವೃದ್ಧಿ ಎಂದರೆ ಕೇವಲ ಗಗನಚುಂಬಿ ಕಟ್ಟಡಗಳು, ಹೆದ್ದಾರಿಗಳು, ಮೇಲ್ಸೇತುವೆಗಳು, ಸ್ಮಾರ್ಟ್ ಸಿಟಿಗಳು, ಜಿಡಿಪಿ ದರ ಅಥವಾ ಅಂಕಿ-ಅಂಶಗಳಲ್ಲಿ ಕಾಣಿಸುವ ಭೌತಿಕ ಪ್ರಪಂಚವಲ್ಲ. ನಿಜವಾದ ಅಭಿವೃದ್ಧಿ ಇರುವುದು ದೇಶದ ಜನರ ಮನೋಭಾವ, ನಡವಳಿಕೆ ಮತ್ತು ವರ್ತನೆಯಲ್ಲಿ. ನಾಗರಿಕರಲ್ಲಿ ಸಂವೇದನೆ,
ಕರುಣೆ, ಪ್ರೀತಿ ಮತ್ತು ಗೌರವದ ಭಾವನೆಗಳು ಇಲ್ಲದಿದ್ದರೆ ನಾವು ಎಷ್ಟೇ ಆರ್ಥಿಕವಾಗಿ ಶ್ರೀಮಂತ ರಾದರೂ ಆ ಸಮಾಜವು ಮರುಭೂಮಿಗೆ ಸಮಾನ.ಮಕ್ಕಳು, ಹಿರಿಯರು, ಮಹಿಳೆಯರು ಮತ್ತು ಅಬಲರ ಮೇಲಿನ ಈ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಇಡೀ ಸಮಾಜ ಒಟ್ಟಾಗಿ ನಿಲ್ಲಬೇಕಿದೆ. ಮಕ್ಕಳಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮನೆಯಲ್ಲಿ ಮತ್ತು ಶಾಲೆಯಲ್ಲಿ ಸಮಾನವಾಗಿ ಸಾಗಬೇಕು.
ಹೆತ್ತವರು, ಪೋಷಕರು, ಗುರುಗಳು ಮಕ್ಕಳ ಪಾಲಿಗೆ ಮೊದಲ ಆದರ್ಶ. ಸರಿ, ತಪ್ಪುಗಳ ನೈತಿಕ ಪರಿಧಿಗೆ ಭದ್ರ ಬುನಾದಿ ಹಾಕುವ ಶಕ್ತಿ ಇವರಲ್ಲಿದೆ. ಆದರೆ ಈ ವರ್ಗ ಹಾದಿ ತಪ್ಪದಂತೆ ನೋಡಿ ಕೊಳ್ಳುವುದು ಸಮಾಜದ ಕರ್ತವ್ಯ.
ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆಂತರ್ಯದ ಕ್ರೌರ್ಯ ಮತ್ತು ಸ್ವಾರ್ಥವನ್ನು ಕಳಚಿಕೊಂಡು ಮಾನವೀಯತೆಯನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ರಕ್ತಸಂಬಂಧಗಳು ಸ್ವಾರ್ಥ ದ, ವ್ಯವಹಾರದ ಮಾರುಕಟ್ಟೆಯಾಗಬಾರದು; ಅವು ಪ್ರೀತಿಯ ಆಸರೆಯಾಗಬೇಕು. ಮಾನವೀಯ ಮೌಲ್ಯಗಳನ್ನು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಕೇವಲ ಸರಕಾರದ ಕೆಲಸವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ.