Rangaswamy Mookanahalli Column: ವಿವಿಧತೆಯಲ್ಲಿ ಏಕತೆ ಎನ್ನುವ ಮಾತು ಸುಳ್ಳಾಗದಿರಲಿ !
ಯುದ್ಧ ಎನ್ನುವುದು ಕೇವಲ ನಮ್ಮ ಎಣಿಕೆಗೆ ಸಿಕ್ಕಷ್ಟು ಮಾತ್ರವಲ್ಲ. ಅಲ್ಲಿ ನೂರಾರು ಆಯಾಮಗಳು ಕೆಲಸ ಮಾಡುತ್ತವೆ. ಹೀಗಾಗಿ ಈಗ ತೆಗೆದುಕೊಂಡ ನಿರ್ಧಾರವನ್ನು ಮರುಗಳಿಗೆ ಬದಲಿಸಬೇಕಾಗುತ್ತದೆ. ಸರಕಾರವು ಎಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ವರದಿ ಒಪ್ಪಿಸಿ ನಂತರ ನಿರ್ಧಾರ ತೆಗೆದು ಕೊಳ್ಳಲು ಆಗುವುದಿಲ್ಲ.


ವಿಶ್ವರಂಗ
ಭಾರತದ ಜನಸಂಖ್ಯೆ 150 ಕೋಟಿಯನ್ನು ಮೀರಿದೆ. ಇಷ್ಟು ದೊಡ್ಡದೇಶದ, ಜನಸಂಖ್ಯೆಯ ಜನರನ್ನು ಒಗ್ಗೂಡಿಸುವುದು ಅಸಾಧ್ಯ. ವಿಷಯ ಯಾವುದೇ ಇರಲಿ, ಅದಕ್ಕೊಂದು ಪರ-ವಿರೋಧ ಹುಟ್ಟಿಕೊಂಡು ಬಿಡುತ್ತದೆ. ಭಾರತೀಯರನ್ನು ಒಂದು ತಕ್ಕಡಿಗೆ ಹಾಕುವುದು ಸಾಧ್ಯವೇ ಇಲ್ಲಎಂದು ಹೇಳಬಹುದು. ಇದಕ್ಕೊಂದು ಸಣ್ಣ ಉದಾಹರಣೆಯನ್ನು ನೀಡುವೆ. ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 49.2 ಪ್ರತಿಶತ ವೋಟ್ ಪಡೆದುಕೊಂಡು ಇತಿಹಾಸ ಸೃಷ್ಟಿಸಿತ್ತು. ಆ ನಂತರ ಅತಿ ಹೆಚ್ಚು ವೋಟ್ ಪಡೆದುಕೊಂಡ ಪಕ್ಷ ಬಿಜೆಪಿ.
ಅದೂ 2019ರಲ್ಲಿ, ಪಡೆದುಕೊಂಡದ್ದು 37.4 ಪ್ರತಿಶತ ವೋಟ್. ಅವತ್ತಿನ ದಿನದಲ್ಲಿ ಇಂದಿರಾ ಗಾಂಧಿ ಅವರ ಸಾವು ಜನತೆಯನ್ನು ‘ಪೋಲರೈಸ್’ ಮಾಡಿತ್ತು. ವಸ್ತುಸ್ಥಿತಿ ಹೀಗಿದ್ದೂ, ಐವತ್ತಕ್ಕಿಂತ ಹೆಚ್ಚಿನ ಜನರ ಬೆಂಬಲ ಪಡೆದುಕೊಳ್ಳಲು ಆಗಲಿಲ್ಲ ಎನ್ನುವುದನ್ನು ಗಮನಿಸಬೇಕು. ಅಂತೆಯೇ, 2019 ರಲ್ಲಿ ನರೇಂದ್ರ ಮೋದಿಯವರ ಪ್ರಭಾವ, ವರ್ಚಸ್ಸಿನಲ್ಲಿ ದೇಶ ಕೊಚ್ಚಿಹೋಗುತ್ತಿದೆ ಎಂದು ಕೊಂಡಾಗ ಕೂಡ ಅವರು 37.4 ಪ್ರತಿಶತಕ್ಕಿಂತ ಹೆಚ್ಚಿನ ಜನ ಬೆಂಬಲ ಗಳಿಸಲು ಸಾಧ್ಯವಾಗಲಿಲ್ಲ.
ಈ ಎರಡೂ ಚುನಾವಣೆಗಳಲ್ಲಿ ಆಯಾ ಪಕ್ಷಗಳು ಗಳಿಸಿದ ಗರಿಷ್ಠ ವೋಟ್ ಪ್ರತಿಶತ ಇದಾಗಿತ್ತು ಎನ್ನುವುದು ನೆನಪಿರಲಿ. ಈ ಎರಡೂ ಸಮಯವನ್ನು ಹೊರತುಪಡಿಸಿ ನೋಡಿದರೆ ವೋಟ್ ಪರ್ಸೆಂಟೇಜ್ ಇನ್ನಷ್ಟು ಛಿದ್ರವಾಗಿರುವುದನ್ನು ನಾವು ನೋಡಬಹುದು. 2024ರಲ್ಲಿ ಗೆದ್ದ ಬಿಜೆಪಿ ಗಳಿಸಿದ್ದು ಕೇವಲ 36.6 ಪ್ರತಿಶತ ವೋಟ್ ಎನ್ನುವುದನ್ನು ಮರೆಯುವುದು ಬೇಡ.
ಇದನ್ನೂ ಓದಿ: Rangaswamy Mookanahalli Column: ಕನ್ನಡ ಉಳಿಸುವುದು, ಬೆಳೆಸುವುದು ನಮ್ಮ ಕೈಯಲ್ಲಿದೆ !
ಈ ವಿಷಯವನ್ನು ಪ್ರಸ್ತಾಪಿಸಲು ಪ್ರಮುಖ ಕಾರಣ ಮೊನ್ನೆಯಷ್ಟೇ ಕದನವಿರಾಮ ಘೋಷಿಸಿ ಕೊಂಡಿರುವ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ. ಸೋಶಿಯಲ್ ಮೀಡಿಯಾ ಸಣ್ಣಪುಟ್ಟ ವಿಷಯಗಳಿಗೆ ಇಬ್ಭಾಗವಾಗುತ್ತದೆ. ಇನ್ನು ಹೇಳಿ ಕೇಳಿ ಭಾರತ-ಪಾಕಿಸ್ತಾನ ಯುದ್ಧ ಎಂದಮೇಲೆ ಕೇಳ ಬೇಕೆ? ನೂರಾರು ಗುಂಪುಗಳಲ್ಲಿ ಸೋಶಿಯಲ್ ಮೀಡಿಯಾ ಛಿದ್ರವಾಗಿತ್ತು.
ಎಲ್ಲರೂ ವಿಷಯ ಪರಿಣಿತರೇ! ಯುದ್ಧ ಯಾರಾದರೂ ಗೆಲ್ಲಲಿ, ಯಾರಾದರೂ ಸೋಲಲಿ, ಸೋಶಿ ಯಲ್ ಮೀಡಿಯಾದಲ್ಲಿ ಮಾತ್ರ ಸೋಲೊಪ್ಪಲು ಯಾರೂ ತಯಾರಿಲ್ಲ. ವಹಿಸಿಟ್ಟುಕೊಳ್ಳಲು ಸರಿಯಾದ ಕಾರಣಗಳು ಸಿಗದಿದ್ದಾಗ ಇದ್ದೇ ಇದೆಯಲ್ಲ ವೈಯಕ್ತಿಕ ದಾಳಿ. ಯುದ್ಧ ಎನ್ನುವುದು ಕೇವಲ ನಮ್ಮ ಎಣಿಕೆಗೆ ಸಿಕ್ಕಷ್ಟು ಮಾತ್ರವಲ್ಲ. ಅಲ್ಲಿ ನೂರಾರು ಆಯಾಮಗಳು ಕೆಲಸ ಮಾಡುತ್ತವೆ. ಹೀಗಾಗಿ ಈಗ ತೆಗೆದುಕೊಂಡ ನಿರ್ಧಾರವನ್ನು ಮರುಗಳಿಗೆ ಬದಲಿಸಬೇಕಾಗುತ್ತದೆ.
ಸರಕಾರವು ಎಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ವರದಿ ಒಪ್ಪಿಸಿ ನಂತರ ನಿರ್ಧಾರ
ತೆಗೆದುಕೊಳ್ಳಲು ಆಗುವುದಿಲ್ಲ. ಇದನ್ನು ನಮ್ಮ ಜನತೆ ಅರಿತುಕೊಳ್ಳಬೇಕು. ಗಡಿಭಾಗದಲ್ಲಿ ಇರುವ ರಾಜ್ಯಗಳ ಜನತೆಯ ನಾಡಿಮಿಡಿತ ನಮಗೆ ಬೇಕಿಲ್ಲ. ಯುದ್ಧದಲ್ಲಿ ಆಗುವ ಸಾವು-ನೋವು, ಖರ್ಚುಗಳ ಲೆಕ್ಕಾಚಾರ ನಾವು ಕೇಳುವುದಿಲ್ಲ. ದಕ್ಷಿಣ ಭಾರತದಲ್ಲಿ ಸುರಕ್ಷಿತವಾಗಿ ಕುಳಿತು ಇಡ್ಲಿ-ದೋಸೆ ತಿನ್ನುತ್ತಾ ಮನಸ್ಸಿಗೆ ಬಂದದ್ದು ಟೈಪ್ ಮಾಡಿ ಪೋಸ್ಟ್ ಒತ್ತಿದರೆ ಸಾಕು, ಇನ್ನ್ಯಾರ ಅಪ್ಪಣೆಯೂ ಬೇಕಿಲ್ಲ. ಈ ರೀತಿ ಸ್ವನಿಯಂತ್ರಣ ಕಳೆದುಕೊಂಡು ಮನಸ್ಸಿಗೆ ಅನ್ನಿಸಿದ್ದು ಗಳಿಗೆ ಗಳಿಗೆಗೆ ಪೋಸ್ಟ್ ಮಾಡುವ ಮುನ್ನ ಒಂದು ಕ್ಷಣವೂ ನಾವು ಇನ್ನೊಬ್ಬರ ಮನಸ್ಥಿತಿ ಏನಿರಬಹುದು ಎಂದು ಯೋಚಿಸುವುದಿಲ್ಲ.
ನಾವೇ ವೋಟ್ ಮಾಡಿ ಚುನಾಯಿಸಿ ಕಳಿಸಿದ ನಾಯಕನ ಮೇಲೂ ಅಸಮಾಧಾನ, ದ್ವೇಷ, ಟ್ರೋಲ್ ಶುರುವಾಗುತ್ತದೆ. ‘ಏ ದಿಲ್ ಮಾಂಗೇ ಮೋರ್’ ಎನ್ನುವವರ ಪಟ್ಟಿ ಒಂದು ಕಡೆ. ‘ಪಾಕಿಸ್ತಾನವನ್ನು ಭೂಪಟದಿಂದ ಅಳಿಸಿ ಹಾಕಿ ಬಿಡಿ’ ಎನ್ನುವ ಶೂರರ ಕೂಗಾಟ ಇನ್ನೊಂದು ಕಡೆ. ‘ಪಾಕಿಸ್ತಾನವನ್ನು ನಾಲ್ಕು ಹೋಳಾಗಿ ವಿಭಾಗಿಸಿ’ ಎಂದು ಸಲಹೆ ನೀಡುವ ದಂಡು ಬೇರೆ, ‘ಯುದ್ಧ ಬೇಡ’ ಎನ್ನುವ ಕೂಗು, ಕದನವಿರಾಮ ಘೋಷಣೆಯಾದಾಗ ‘ಅದೇಕೆ ಯುದ್ಧವಿಲ್ಲ?’ ಎಂದು ತಿರುಗಿ ಬೀಳುವ ಜನತೆ ಅಬ್ಬಬ್ಬಾ, ಈ 150 ಕೋಟಿ ಜನರನ್ನು ಸುಮ್ಮನಾಗಿಸುವುದು ಹೇಗೆ? ಏನೇ ಮಾಡಲಿ ಅದಕ್ಕೊಂದು ಕೊಂಕು ಇದ್ದೇ ಇರುತ್ತದೆ.
ಕೋಲು ಹಿಡಿದ ಗಾಂಧಿಯ ಚಿತ್ರದ ಜಾಗದಲ್ಲಿ ಮೋದಿಯವರ ಚಿತ್ರ ಹಾಕುವುದು, ಚರಕ ಹಿಡಿದ ಗಾಂಧಿಯ ಜಾಗದಲ್ಲಿ ಮೋದಿಯವರನ್ನು ಕಲ್ಪಿಸಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಚಿತ್ರ ಸೃಷ್ಟಿಸಿ ಹರಿಬಿಡುವ ವೀರರ ಗುಂಪು. ಒಟ್ಟಾರೆ ಯುದ್ಧ ಮಾಡಿದರೂ ಹಂಗಿಸುವಿಕೆ, ಮೂದಲಿಕೆ ತಪ್ಪಿದ್ದಲ್ಲ. ಹಾಗೆ ಯುದ್ಧ ನಿಲ್ಲಿಸಿದರೂ ಅವಹೇಳನ ತಪ್ಪಿದ್ದಲ್ಲ. ಇಂಥ ಸಮಾಜವನ್ನು ಕಂಡು ಕೆ.ಎಸ್ .ನರಸಿಂಹಸ್ವಾಮಿಯವರು ‘ಇಕ್ಕಳ’ ಎನ್ನುವ ಕವಿತೆಯಲ್ಲಿ ಇದನ್ನು ಸೊಗಸಾಗಿ ಹೇಳಿದ್ದಾರೆ.
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್’ ಎಂದರು ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು; ‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ನಿಂತವರ ಕೇಳುವರು: ನೀನೇಕೆ ನಿಂತೆ? ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ! ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಓದಿದರೆ ಹೇಳುವರು: ಮತ್ತೊಮ್ಮೆ ಬರೆಯೊ ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ‘ವಿವಿಧತೆಯಲ್ಲಿ ಏಕತೆ’ ಎನ್ನುವ ಸಾಲಿನಲ್ಲಿ ನಂಬಿಕೆಯಿಟ್ಟು ಬೆಳೆದು ಬಂದ ಭಾರತ, ಇಂದು ಅದೇ ವಿವಿಧತೆಯ ಕಾರಣ ಅಶಾಂತಿಯ ಕೂಪವಾಗುತ್ತಿದೆ. ನಿಮಗೆ ಗೊತ್ತಿರಲಿ ಭಾರತ ಬಲಿಷ್ಠವಾದರೆ ಅದು ಚೀನಾ ಮತ್ತು ಅಮೆರಿಕ ಎರಡೂ ದೇಶಕ್ಕೂ ನುಂಗಲಾರದ ಬಿಸಿ ತುಪ್ಪವಾಗಲಿದೆ.
ಹೀಗಾಗಿ ಅವರು ಸದಾ ಭಾರತದ ಕುಸಿತವನ್ನು ಬಯಸುತ್ತಾರೆ. ಕುಸಿತ ಎಂದರೆ ಆರ್ಥಿಕ ಕುಸಿತವಲ್ಲ. ಅವರಿಗೆ ಚಿನ್ನದ ಮೊಟ್ಟೆ ಇಡುವ ಭಾರತ ಬೇಕು. ಆದರೆ ಅದು ಅವರ ನಿಯಂತ್ರಣದಲ್ಲಿರಬೇಕು. ಅವರು ಬಯಸುವ ಭಾರತವನ್ನು ಅವರು ಪಡೆದುಕೊಳ್ಳಲು ಅವರಿಗೆ ಇರುವ ಸುಲಭ ದಾರಿ ಅಸ್ಥಿರ ಭಾರತ. ಅಂದರೆ ಭಾರತವನ್ನು ಅಸ್ಥಿರಗೊಳಿಸಿಬಿಟ್ಟರೆ ಸಾಕು. ಆಗ ಅದರ ಮೇಲಿನ ನಿಯಂತ್ರಣ ಸುಲಭವಾಗುತ್ತದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿಯಾಗಿರುವ ಎಲ್ಲಾ ದೇಶಗಳೂ ಅಸ್ಥಿರ ಭಾರತವನ್ನು ಬಯಸುತ್ತವೆ.
ಜನತೆ ಈಗಾಗಲೇ ನೂರಾರು ಹೆಸರಿನಲ್ಲಿ ಛಿದ್ರವಾಗಿ ಹೋಗಿದ್ದಾರೆ. ಇನ್ನು ದೇಶವನ್ನು ಛಿದ್ರ ಗೊಳಿಸುವುದು ಅವರಿಗೆ ಅದ್ಯಾವ ಕಷ್ಟ. ಇದರ ಕಾರ್ಯಸಾಧನೆಗೆ ಅವು ಮೂರು ರೀತಿಯಲ್ಲಿ ಹೆಜ್ಜೆ ಇಡುತ್ತವೆ: 1) ಡಿಸೆಪ್ಷನ್ ಅಂದರೆ ವಂಚನೆಯಿಂದ ದೇಶವನ್ನು ಅಸ್ಥಿರಗೊಳಿಸುವುದು. ಇಂದಿನ ಸಂದರ್ಭದಲ್ಲಿ ಇದು ಸಾಧ್ಯವಿಲ್ಲದ ಮಾತು. 2)ಡಿಸ್ಟೆಬಿಲೈಸಷನ್ ಅಂದರೆ ಅಸ್ಥಿರತೆ ಸೃಷ್ಟಿಸಿ ಸಮಾ ಜದಲ್ಲಿ ಅರಾಜಕತೆ ಸೃಷ್ಟಿಸುವುದರ ಮೂಲಕ ಭಾರತದ ಮೇಲೆ ಹಿಡಿತ ಸಾಧಿಸುವುದು. ಈಗ ನಾವು ನೋಡುತ್ತಿರುವ ಯುದ್ಧ, ಟೆರರಿಸಂ ಇವೆಲ್ಲವೂ ಭಾರತವನ್ನು ಅಸ್ಥಿರಗೊಳಿಸಲು ಮಾಡುತ್ತಿರುವ ಕೃತ್ಯಗಳು. 3)ಡಿಸ್‌ಇನರ್ಮೇಷನ್, ತಪ್ಪು ಮಾಹಿತಿ ಅಥವಾ ಸುಳ್ಳು ಮಾಹಿತಿಗಳನ್ನ ಟೆಕ್ನಾಲಜಿ ಬಳಸಿ ಹರಿಬಿಡುವುದು. ಆ ಮೂಲಕ ಜನತೆಯಲ್ಲಿ ಸಂಶಯ ಬಿತ್ತುವುದು ಮತ್ತು ತಮಗೆ ಬೇಕಾದ ರೀತಿ ಆ ದೇಶವನ್ನ ಬಳಸಿಕೊಳ್ಳುವುದು.
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ- If you can't convince them, confuse them. ಇದನ್ನು ಕೂಡ ಕಳೆದ ಹತ್ತಾರು ವರ್ಷದಿಂದ ಮಾಡಿಕೊಂಡು ಬರುತ್ತಿವೆ. ಇಂದಿಗೆ ಯಾವ ಸುದ್ದಿ ನಿಖರವಾದದ್ದು ಯಾವುದು ಫೇಕ್ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ. ಇಂದಿಗೆ ಯುರೋಪಿಯನ್ ಯೂನಿಯನ್ ಇರಬಹುದು, ಸೌತ್ ಅಮೆರಿಕನ್ ದೇಶಗಳು, ಆಫ್ರಿಕನ್ ದೇಶಗಳು ಮತ್ತು ಮಧ್ಯ ಪ್ರಾಚ್ಯ ದೇಶಗಳು, ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕ, ಚೀನಾ ಮೇಲೆ ಅವಲಂಬಿತ ವಾಗಿವೆ.
ಈ ಎರಡು ದೇಶಗಳ ಕುಸಿತ, ವಿಶ್ವ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಬಲ್ಲದು. ಗ್ಲೋಬಲೈ ಸೇಷನ್ ಎನ್ನುವ ಆಟವನ್ನು ಅಮೆರಿಕ ಹುಟ್ಟುಹಾಕದಿದ್ದರೆ ಜಗತ್ತು ಇಂದಿನ ಕೆಟ್ಟ ಪರಿಸ್ಥಿತಿಯನ್ನು ಕಾಣುವ ಅವಶ್ಯಕತೆ ಬರುತ್ತಿರಲಿಲ್ಲ. ಇದೀಗ ಅಮೆರಿಕಕ್ಕೆ ಗ್ಲೋಬಲೈಸೇಷನ್ ಎನ್ನುವುದು ದೊಡ್ಡ ತಪ್ಪು ಎನ್ನುವುದರ ಅರಿವಾಗಿದೆ. ಇದು ಅರಿವಾಗುವ ವೇಳೆಗೆ ಅದನ್ನು ಬದಲಾಯಿಸಲಾಗದ ಮಟ್ಟಿಗೆ ಅದು ಬದಲಾವಣೆ ಕಂಡು ಬಿಟ್ಟಿದೆ. ಇವತ್ತಿಗೆ ಇವತ್ತೇ ಹೊಸ ವ್ಯವಸ್ಥೆ ಕಟ್ಟಬೇಕು ಎಂದರೂ ಅದಕ್ಕೂ ದಶಕಗಳು ಬೇಕು ಆ ಮಟ್ಟಿಗೆ ಅವಲಂಬನೆ ಬೆಳೆದು ಬಿಟ್ಟಿದೆ.
ಆದರೆ ಅಮೆರಿಕ, ಚೀನಾ, ಯುರೋಪಿಯನ್ ಯೂನಿಯನ್‌ಗೆ ದಶಕಗಳು ಕಾಯುವ ತಾಳ್ಮೆ, ಸಂಯಮ ಎರಡೂ ಇಲ್ಲ. ಅವರಿಗೆ ತಕ್ಷಣ ಈ ಆಟವನ್ನು ಮುಗಿಸಿ, ಹೊಸ ಆಟಕ್ಕೆ ಸಿದ್ಧರಾಗಬೇಕು ಎನ್ನುವ ಹಪಾಹಪಿ ಶುರುವಾಗಿದೆ. ಹೀಗಾಗಿ ಅವರು ‘ರಿಸೆಟ್ ಬಟನ್’ ಒತ್ತುವ ತರಾತುರಿಯಲ್ಲಿದ್ದಾರೆ. ಅವರಿಗೆ ಗೊತ್ತಿದೆ ಗ್ಲೋಬಲೈಸೇಷನ್ ಎನ್ನುವ ಆಟವನ್ನು ‘ರಿಸೆಟ್ ಬಟನ್’ ಒತ್ತಿ ಕೂಡ ಅಳಿಸ ಲಾಗದು ಎಂದು. ಹೀಗಾಗಿ ಅವರು ಕಂಟ್ರೋಲ್ಡ ಗ್ಲೋಬಲೈಸೇಷನ್ ಎನ್ನುವ ಹೊಸ ಆಟವನ್ನು ಶುರುಮಾಡಲು ಬಯಸುತ್ತಿದ್ದಾರೆ.
ಇದರ ಚುಕ್ಕಾಣಿ ಯಾರ ಕೈಗೆ ಸಿಗುತ್ತದೆ, ಅವರು ಇನ್ನೊಂದೆರಡು ಶತಮಾನ ರಾಜ್ಯವಾಳುತ್ತಾರೆ. ಈ ಬಾರಿ ಈ ಅಧಿಕಾರದ ಚುಕ್ಕಾಣಿಗಾಗಿ ಜಗತ್ತಿನಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಯುದ್ಧ ವಿರಾಮ ಎನ್ನುವುದು ಫುಲ್‌ಸ್ಟಾಪ್ ಅಲ್ಲ. ಅದು ಕೇವಲ ಅಲ್ಪವಿರಾಮ ಎನ್ನುವುದನ್ನು ನಾವು ಮನಗಾಣ ಬೇಕಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾವು-ನೋವು ಕಟ್ಟಿಟ್ಟ ಬುತ್ತಿ.
ಜಾಗತಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಭಾರತಕ್ಕೆ ಮುಂಬರುವ ದಿನಗಳಲ್ಲಿ ಭವ್ಯ ಭವಿಷ್ಯವಿದೆ. ಬಲಿಷ್ಠವಾದ ಭಾರತ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುತ್ತದೆ. ಅಮೆರಿಕ, ಚೀನಾ, ಯುರೋಪಿಯನ್ ಯೂನಿಯನ್, ಜಪಾನ್ ಜತೆಗೆ ಭಾರತ ಕೂಡ ಜಾಗತಿಕ ವಿದ್ಯಮಾನಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆಯುತ್ತದೆ.
ಈಗಾಗಲೇ ಅದು ಸ್ಪಷ್ಟವಾಗಿ ಕಾಣುತ್ತಿದೆ. ಭಾರತವನ್ನು ಈ ರೀತಿ ಬೆಳೆಯಲು ಬಿಟ್ಟರೆ ಅದು ಚೀನಾದಂತೆ ದೈತ್ಯವಾಗಿ ಬೆಳೆದು ಕುಳಿತರೆ ಆಗ ಅಮೆರಿಕ ಮೂಲೆಗುಂಪಾಗುತ್ತದೆ. ಚೀನಾಕ್ಕೂ ತನ್ನನ್ನು ಪ್ರಶ್ನಿಸುವ ಮಟ್ಟಕ್ಕೆ ಭಾರತ ಬೆಳೆಯುವುದು ಬೇಕಿಲ್ಲ. ಭಾರತದ ಬಳಿ 688 ಬಿಲಿಯನ್ ಡಾಲರ್ ಫಾರಿನ್ ರಿಸರ್ವ್ ಇದೆ.
ಇಷ್ಟು ದೊಡ್ಡ ಮೊತ್ತವನ್ನು ಭಾರತ ಹೊಂದಿರುವುದು ಕಳೆದ ಒಂದು ದಶಕದಲ್ಲಿ ಎನ್ನುವುದು ನೆನಪಿರಲಿ. ನಾವು ಪೂರ್ಣ ಪ್ರಮಾಣದ ಯುದ್ಧಕ್ಕೆ ಹೋದರೆ ಕನಿಷ್ಠ 20/30 ವರ್ಷ ಮತ್ತೆ ಆರ್ಥಿಕವಾಗಿ ಹಿಂದಕ್ಕೆ ಹೋಗುತ್ತೇವೆ. ಗಮನಿಸಿ ಅಮೆರಿಕ, ಚೀನಾ, ಯುರೋಪಿಯನ್ ಯೂನಿ ಯನ್ ಎಲ್ಲವೂ ಬಯಸುವುದು ಇದನ್ನೇ!
ಯುದ್ಧದ ನಂತರ ಮರುಕಟ್ಟುವಿಕೆ ಹೆಸರಿನಲ್ಲಿ ಇನ್ನೊಂದೆರಡು ದಶಕ ಅವುಗಳ ಬದುಕು ಸಾಗು ತ್ತದೆ. ಆನೆ ಸತ್ತರೆ ತೋಳಗಳಿಗೆ ಆಹಾರಕ್ಕೆ ಕೊರತೆಯಿರುವುದಿಲ್ಲ. ಭಾರತ ಕುಸಿದರೆ ಅದು ಅಮೆರಿಕ ಮತ್ತು ಚೀನಾಕ್ಕೆ ರಸಗವಳ. ನಾಳೆ ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದದ್ದು ಬರೆಯುವ ಮುನ್ನ ಸ್ವಲ್ಪ ಜಾಗರೂಕತೆ ಇರಲಿ. ಈ ದೇಶದ ಪ್ರಜೆಯಾಗಿ ನಾವಾಡುವ ಸಣ್ಣ ಮಾತು, ಹಾಕುವ ಒಂದು ಪೋ ಕೂಡ ಭಾರತದ ಭವಿಷ್ಯಕ್ಕೆ ಪೂರಕ ಅಥವಾ ಮಾರಕ ಆಗಬಲ್ಲವು ಎನ್ನುವ ತಿಳಿವಳಿಕೆ ನಮ್ಮೆಲ್ಲರಲ್ಲೂ ಇರಲಿ.