ಅಭಿಮತ
ಅಜಯ್ ಅಂಗಡಿ
ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದಲ್ಲಿ ಮಹತ್ವದ ಬದಲಾವಣೆಗಳನ್ನು ಜನಸಾಮಾ ನ್ಯರು ಅದರಲ್ಲೂ ಮೋದಿಯವರ ಮತ್ತು ಕೇಂದ್ರ ಸರಕಾರದ ಆಡಳಿತ ವೈಖರಿಯನ್ನು ಇಷ್ಟ ಪಡುವವರು, ಬೆಂಬಲಿಸುವವರು ಬಹಳ ಕಾಲದಿಂದಲೂ ಬಯಸುತ್ತಿದ್ದಾರೆ. ಈಗ ಬದಲಾವಣೆ ಆಗಬಹುದು, ನಾಳೆ ಆಗಬಹುದು ಅನ್ನುವ ಭರವಸೆಯನ್ನು ಇಟ್ಟುಕೊಂಡಿರುವವರ ನಿಷ್ಠೆಗಾದರೂ ಬಿಜೆಪಿಯ ವರಿಷ್ಠರು ಬೆಲೆ ಕೊಡಬೇಕಲ್ವಾ? ತಾವು ಬೆಂಬಲಿಸುವ ರಾಜಕೀಯ ಪಕ್ಷ ಮತ್ತು ಅದರ ಮುಖಂಡರನ್ನು ಅಗತ್ಯ ಬಿದ್ದಾಗ ಪ್ರಶ್ನಿಸುವ ಏಕೈಕ ಕಾರ್ಯಕರ್ತರ ಪಡೆಯನ್ನು ಬಿಜೆಪಿ ಹೊಂದಿದೆ.
ಹೀಗಿರುವಾಗ ಅವರ ಸಹನೆಗೂ ಮೌಲ್ಯವಿಲ್ಲವೆ? ಅದೇ ಹಳೆ ತಲೆಗಳನ್ನೇ ನೆಚ್ಚಿಕೊಂಡು ಕೂತ ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆಯ ಗಾಳಿಯೇನೋ ಬೀಸುತ್ತಿದೆ. ಆದರೆ ಅದು ಕೌಟುಂಬಿಕ ವಾಗಿದೆಯಷ್ಟೆ. ಅದರಾಚೆಯ ಬೀಸುವಿಕೆ ಹೊಸ ವಾತಾವರಣ ಸೃಷ್ಟಿಸಬಲ್ಲದು ಎಂಬ ಅರಿವಿ ದ್ದರೂ ಪಕ್ಷದ ವರಿಷ್ಠರು ಮೌನವಾಗಿದ್ದಾರೆ.
ಇದಕ್ಕೆ ಕಾರಣವೇನು? ಸೋಲಿನ ಭಯವೆ? ಸ್ವಾರ್ಥ ರಾಜಕೀಯವೆ? ಬಿಜೆಪಿಯೂ ಅದೇ ಹಾದಿ ಹಿಡಿದರೆ ಉಳಿದ ಪಕ್ಷದಂತೆ ಅದೂ ಆಗುತ್ತದೆಯೇ ಹೊರತು, ವಿಭಿನ್ನ ಹೇಗಾದೀತು? ಆ ನಿಟ್ಟಿನಲ್ಲಿ ಯೋಚಿಸುವ ಮನಸ್ಥಿತಿ ಪಕ್ಷದಲ್ಲಿ ಒಬ್ಬರಿಗಾದರೂ ಇದೆಯಾ? ಎಂಬ ಅನುಮಾನದ ಗಾಳಿ ಬೀಸಲು ಶುರುವಾಗಿದೆ.
‘ಆಪರೇಷನ್ ಕಮಲ’ದಿಂದ ಅಧಿಕಾರವನ್ನೇನೋ ಪಡೆದಾರು; ಆದರೆ ಆಪರೇಷನ್‌ಗೆ ಒಳಪಟ್ಟವರ ಸೈದ್ಧಾಂತಿಕ ನಿಲುವುಗಳು ಸಂಪೂರ್ಣ ಬಿಜೆಪಿಯ ಸಿದ್ಧಾಂತವಾಗಿ ಬದಲಾಗಿರುತ್ತವಾ? ಅನ್ನೊದು ಪ್ರಶ್ನೆ. ವಿರುದ್ಧ ಸಿದ್ಧಾಂತದ ಪಕ್ಷದಲ್ಲಿದ್ದು ಅಧಿಕಾರದ ಆಸೆಗಾಗಿ ಪಕ್ಷಾಂತರವಾದವರ ಮನಸ್ಸಿನ ಯಾವುದೋ ಮೂಲೆಯಲ್ಲಿ ಮಾತೃಪಕ್ಷದ ಸಿದ್ಧಾಂತದ ಸಣ್ಣ ಕಿಡಿಯೊಂದು ಇರದಿರಲು ಸಾಧ್ಯವೆ? ಬರಿ ಅಧಿಕಾರ ಲಾಲಸೆಯಿಂದ ಅತ್ತಿಂದಿತ್ತ, ಇತ್ತಿಂದತ್ತ ಜಿಗಿಯುವವರೇ ಹೆಚ್ಚಾಗಿರುವುದರಿಂದ ಹೀಗೆ ಯೋಚಿಸಬೇಕಿರುವುದು ಅನಿವಾರ್ಯ.
ಇದನ್ನೂ ಓದಿ: Roopa Gururaj Column: ವೈಕುಂಠ ಏಕಾದಶಿಯ ಮಹತ್ವ
ಇದರಿಂದ ಜನರಿಗೆ ಆಗುವ ಲಾಭವೇನು? ಸದಾ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಮಂತ್ರ ಜಪಿಸುವ ಬಿಜೆಪಿಯ ರಾಷ್ಟ್ರೀಯ ನಾಯಕರು, ಕರ್ನಾಟಕದ ಅನಂತ ಕುಮಾರ್ ಹೆಗಡೆಯವರನ್ನು ನೈಪಥ್ಯಕ್ಕೆ ಸರಿಸಿದ್ದರ ಹಿಂದಿನ ಮರ್ಮ ಈಗಲೂ ನಿಗೂಢ.
ಸಕ್ರಿಯ ಸಂಸದರಾಗಿದ್ದ ಪ್ರತಾಪ್ ಸಿಂಹರನ್ನು ಚುನಾವಣಾ ಕಣದಿಂದಲೇ ಹೊರಗಿಟ್ಟಿದ್ದರ ಹಿಂದಿನ ಕಾರಣವೂ ನಿಗೂಢವೇ. ಇಂಥವುಗಳಿಂದ ಪಕ್ಷದ ಇಮೇಜು ಡ್ಯಾಮೇಜ್ ಆದರೂ ವರಿಷ್ಠರ ಮಹಾಮೌನದ ಹಿಂದೆ ಇರುವ ಕಾರಣವೇನು? ಹೀಗೆ ಅಸಂಖ್ಯಾತ ಪ್ರಶ್ನೆಗಳು ಕಾಡುತ್ತಿವೆ. ಉತ್ತರ ಮಾತ್ರ ಶೂನ್ಯ!
ಹೊಸತನ್ನು ಬಯಸುವ ಜನರಿಗೆ ಸಿಕ್ಕಿದ್ದೇನು? ತಮ್ಮದೇ ಪಕ್ಷದ ಹಲವರ ಹಲವು ಹಗರಣಗಳು ಇನ್ನೂ ಜೀವಂತವಾಗಿರುವಾಗ ಆಡಳಿತ ಪಕ್ಷದ ಹಗರಣಗಳ ಕುರಿತು ಪ್ರಶ್ನೆ ಮಾಡುವುದು ಹೇಗೆ? ಎಂಬ ಗೊಂದಲದಲ್ಲಿ ಕರ್ನಾಟಕ ಬಿಜೆಪಿ ಇದ್ದಂತಿದೆ.
ಇವರ ಹಿಂದಿನ ಆಡಳಿತ ವೈಖರಿಯಿಂದ ಬೇಸತ್ತು ಮತ್ತು ಒಂದಷ್ಟು ತಂತ್ರಗಳಿಗೆ ಬಲಿಯಾದ ‘ಸತ್ ಪ್ರಜೆಗಳು’ ಮತ್ತೆ ಬಿಜೆಪಿಯತ್ತ ಮುಖ ಮಾಡುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಹಾಗಾಗ ಬೇಕೆಂದರೆ ಬಿಜೆಪಿ ಒಂದಷ್ಟು ತ್ಯಾಗಗಳಿಗೆ ಸಿದ್ಧವಾಗಬೇಕಿರುವುದು ಅನಿವಾರ್ಯ.
ಹಾಗಾಗದಿದ್ದಲ್ಲಿ ಸತ್ ಪ್ರಜೆಗಳು ಬೇರೆ ದಾರಿ ಆಯ್ದುಕೊಳ್ಳಬಹುದು. ಜನರ ಮನಸ್ಸಿನಲ್ಲಿ ರಾಷ್ಟ್ರೀ ಯತೆಯನ್ನು ಆಳವಾಗಿ ಬೇರೂರಿಸುವ ಪ್ರಯತ್ನದಲ್ಲಿ ಮೋದಿ ಮತ್ತವರ ಬಳಗ ನಿರತವಾಗಿರು ವಾಗ ಇಲ್ಲಿ ಕರ್ನಾಟಕದಲ್ಲಿ ಅದಕ್ಕೆ ತಕ್ಕ ಪ್ರತಿ-ಲ ಸಿಗಬೇಕಲ್ವಾ? ಆದರೆ ಆಗುತ್ತಿರುವುದೇ ಬೇರೆ.
ವಿಪಕ್ಷ ನಾಯಕರು ಮತ್ತು ಪಕ್ಷದ ಅಧ್ಯಕ್ಷರು ಕೇವಲ ತಮ್ಮ ಹೇಳಿಕೆಗಳಿಂದ ಮಾತ್ರ ಸುದ್ದಿಯಲ್ಲಿ ಇzರೇನೋ ಅನಿಸುವಂತಿದೆ ಇಲ್ಲಿನ ವಾತಾವರಣ. ಪ್ರಖರ ಚಿಂತನೆಯ ಸೈದ್ಧಾಂತಿಕ ಬದ್ಧತೆಯುಳ್ಳ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯರಂಥವರ ಕೈಗೆ ಪಕ್ಷದ ಚುಕ್ಕಾಣಿ ಕೊಟ್ಟರೆ ಈ ಹಡಗಿನ ಪ್ರಯಾಣ ಸುರಕ್ಷಿತ ಎನ್ನಬಹುದು.
ಇಷ್ಟಾಗಿಯೂ ಭಾರತೀಯ ಜನತಾ ಪಕ್ಷದ ವರಿಷ್ಠರು ತಮ್ಮ ಯೋಚನೆ ಮತ್ತು ಯೋಜನೆ ಬದಲಿ ಸದೆ ಹೀಗೆಯೇ ಜಾಣಮೌನ ವಹಿಸಿದರೆ ಈ ಪಕ್ಷವೂ ಮುಳುಗುವ ಹಡಗಾಗುವುದಂತೂ ನಿಶ್ಚಿತ. ತೇಲಿಸುವುದು, ಮುಳುಗಿಸುವುದು ಅವರಿಗೆ ಬಿಟ್ಟ ವಿಚಾರ.
(ಲೇಖಕರು ಹವ್ಯಾಸಿ ಬರಹಗಾರರು)