ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಹುಲಿ ಕಾಡಿನಿಂದ ಕೊನೆಯ ಗರ್ಜನೆ

ಕಾರ್ಬೆಟ್‌ ಮೇಲೆ ಹೇಳಿದ ಹಾಗೇ ಆಗುವ ಪರಿಸ್ಥಿತಿಯೂ ಬಂತು. ಹುಲಿಗಳ ಸಂಖ್ಯೆ ಸಿಕ್ಕಾಪಟ್ಟೆ ಇಳಿಯಿತು. 1970ರವರೆಗೂ ಈ ಬೇಟೆ ನಿಷ್ಕರುಣೆಯಿಂದ ನಡೆಯಿತು. ಕರ್ನಾಟಕದ ಕೆಲವು ಮಹಾ ರಾಜರೂ ಇದರಲ್ಲಿ ಹಿಂದುಳಿಯಲಿಲ್ಲ. 1973ರಲ್ಲಿ ಭಾರತದ ಕಾಡುಗಳಲ್ಲಿ ಹುಲಿಗಳ ಸಂಖ್ಯೆ 268ಕ್ಕೆ ಇಳಿಯಿತು. ಆಗ ನಿಜಕ್ಕೂ ಹುಲಿಗಳ ಬಗ್ಗೆಯೂ ಒಟ್ಟಾರೆ ಕಾಡುಗಳ ಬಗ್ಗೆಯೂ ಕಾಳಜಿ ಇದ್ದವರು ರಂಗಕ್ಕಿಳಿದರು. ಪ್ರಾಜೆಕ್ಟ್‌ ಟೈಗರ್‌ ಮೊದಲಾದ ಹೆಸರಿನಲ್ಲಿ ನಾನಾ ಕಾರ್ಯಕ್ರಮಗಳು ಬಂದವು. ಹುಲಿ ಸಂರಕ್ಷಿತಾರಣ್ಯಗಳು ಒಂದೊಂದಾಗಿ ಹೆಚ್ಚಿದವು.

ಹುಲಿ ಕಾಡಿನಿಂದ ಕೊನೆಯ ಗರ್ಜನೆ

ಹರೀಶ್‌ ಕೇರ ಹರೀಶ್‌ ಕೇರ Jul 3, 2025 6:00 AM

ಕಾಡುದಾರಿ

ಒಮ್ಮೆ ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್ ಆರ್ಚಿಬಾಲ್ಡ್ ವೇವೆಲ್ ಮತ್ತು ಬೇಟೆಗಾರ- ಲೇಖಕ ಜಿಮ್ ಕಾರ್ಬೆಟ್ ಭಾರತದ ಕಾಡೊಂದರಲ್ಲಿ ಹುಲಿ ಬೇಟೆಗಾಗಿ ಕಾಯುತ್ತಿದ್ದರು. ವೇವೆಲ್ ಕಾರ್ಬೆಟ್ ಕಡೆಗೆ ತಿರುಗಿ, ‘ನಾವು (ಬ್ರಿಟಿಷರು) ಹೋದ ನಂತರ ಇಲ್ಲಿ ಹುಲಿ ಬದುಕುಳಿಯುತ್ತದೆ ಎಂದು ನೀವು ಭಾವಿಸುತ್ತೀರಾ?’ ಎಂದು ಪ್ರಶ್ನಿಸಿದರು. ʼಖಂಡಿತ ಇಲ್ಲ. ಸ್ವತಂತ್ರ ಭಾರತದಲ್ಲಿ ಹುಲಿಗಳು 10 ವರ್ಷವೂ ಉಳಿಯುವುದಿಲ್ಲ. ಅವೆಲ್ಲವನ್ನೂ ಗುಂಡಿಕ್ಕಿ ಕೊಲ್ಲಲಾಗುತ್ತದೆʼ ಎಂದು ಜಿಮ್‌ ಕಾರ್ಬೆಟ್‌ ಪ್ರತಿಕ್ರಿಯಿಸಿದರಂತೆ. ಇದು ಪರಿಸರ ಇತಿಹಾಸಕಾರ ಮಹೇಶ್ ರಂಗರಾಜನ್ ಹೇಳಿದ ಘಟನೆ.

ಪರಿಸ್ಥಿತಿ ಹಾಗೇ ಇತ್ತು. ಭಾರತದ ರಾಜರ ಅರಮನೆಗಳ ಗೋಡೆಗಳಲ್ಲಿ ವ್ಯಾಘ್ರನಖ, ಹುಲಿ ತಲೆ, ಚರ್ಮಗಳು ರಾರಾಜಿಸುತ್ತಿದ್ದವು. ನಾವೀಗ ವೀಕೆಂಡ್‌ನಲ್ಲಿ ಪಶ್ಚಿಮ ಘಟ್ಟದ ರೆಸಾರ್ಟ್‌ಗೆ ಹೋಗಿ ಅಲ್ಲಿನ ಜೇನುತುಪ್ಪ- ಕಾಫಿ ತರುವಂತೆ ಬ್ರಿಟಿಷರು ಇಲ್ಲಿಗೆ ಜಾಲಿ ಟ್ರಿಪ್‌ಗೆ ಬಂದು ಕೆಲವಾರು ಹುಲಿ ಹೊಡೆದುಕೊಂಡು ಹೋಗುತ್ತಿದ್ದರು. ಸ್ಥಳೀಯರು ಮಚಾನು ಕಟ್ಟಿ, ಆನೆಗಳ ಮೇಲೆ ಕೂರಿಸಿ, ಸುತ್ತಮುತ್ತಲಿನ ಕಾಡಿನಿಂದ ಹುಯ್ಲೆಬ್ಬಿಸಿ ಹುಲಿಗಳನ್ನು ಅವರ ಬಂದೂಕಿಗೆ ಕೊಡುತ್ತಿದ್ದರು. ವ್ಯಾಘ್ರಶಿಖಾರಿ ಉಳ್ಳವರ ಅಧಿಕಾರದ ಆಟವೂ ಆಗಿತ್ತು. 1875ರಿಂದ 1925ರ ಅವಧಿಯಲ್ಲಿ ದೇಶದಲ್ಲಿ ಸುಮಾರು 80,000 ಹುಲಿಗಳನ್ನು ಕೊಂದಿರಬಹುದು ಎಂಬ ಅಂದಾಜು. ಇಂಥವರ ನಡುವೆ ಜಿಮ್‌ ಕಾರ್ಬೆಟ್‌, ಕೆನೆತ್‌ ಆಂಡರ್‌ಸನ್‌ರಂಥವರೂ ಇದ್ದರು. ಇವರು ನರಭಕ್ಷಕ ಹುಲಿ ಗಳನ್ನು ಮಾತ್ರ ಹೊಡೆದು ಜನರನ್ನು ಭೀತಿಮುಕ್ತಗೊಳಿಸುತ್ತಿದ್ದರು.

ಕಾರ್ಬೆಟ್‌ ಮೇಲೆ ಹೇಳಿದ ಹಾಗೇ ಆಗುವ ಪರಿಸ್ಥಿತಿಯೂ ಬಂತು. ಹುಲಿಗಳ ಸಂಖ್ಯೆ ಸಿಕ್ಕಾಪಟ್ಟೆ ಇಳಿಯಿತು. 1970ರವರೆಗೂ ಈ ಬೇಟೆ ನಿಷ್ಕರುಣೆಯಿಂದ ನಡೆಯಿತು. ಕರ್ನಾಟಕದ ಕೆಲವು ಮಹಾರಾಜರೂ ಇದರಲ್ಲಿ ಹಿಂದುಳಿಯಲಿಲ್ಲ. 1973ರಲ್ಲಿ ಭಾರತದ ಕಾಡುಗಳಲ್ಲಿ ಹುಲಿಗಳ ಸಂಖ್ಯೆ 268ಕ್ಕೆ ಇಳಿಯಿತು. ಆಗ ನಿಜಕ್ಕೂ ಹುಲಿಗಳ ಬಗ್ಗೆಯೂ ಒಟ್ಟಾರೆ ಕಾಡುಗಳ ಬಗ್ಗೆಯೂ ಕಾಳಜಿ ಇದ್ದವರು ರಂಗಕ್ಕಿಳಿದರು. ಪ್ರಾಜೆಕ್ಟ್‌ ಟೈಗರ್‌ ಮೊದಲಾದ ಹೆಸರಿನಲ್ಲಿ ನಾನಾ ಕಾರ್ಯಕ್ರಮಗಳು ಬಂದವು. ಹುಲಿ ಸಂರಕ್ಷಿತಾರಣ್ಯಗಳು ಒಂದೊಂದಾಗಿ ಹೆಚ್ಚಿದವು. ಇಂದು ದೇಶದಲ್ಲಿ ಸುಮಾರು 3682 ಹುಲಿಗಳಿವೆ ಎಂಬ ಅಂದಾಜು. ಈ ಮಟ್ಟಕ್ಕೆ ಬರಬೇಕಿದ್ದರೆ ಬಹುದೊಡ್ಡ ಹೋರಾಟವೇ ನಡೆದಿದೆ ಎಂಬುದನ್ನು ನೆನಪಿಡಬೇಕು.

ಇದನ್ನೂ ಓದಿ: Harish Kera Column: ಕಪ್‌ ನಮ್ಮದೇ, ತಪ್ಪೂ ನಮ್ಮದೇ

ಈ ತಿಂಗಳಲ್ಲಿ ನಡೆದ ಎರಡು ಘಟನೆಗಳನ್ನು ವಿಷಾದದಿಂದ ನೆನಪಿಸಿಕೊಂಡು ಇದನ್ನೆಲ್ಲ ಬರೆಯ ಬೇಕಿದೆ. ಮೊದಲನೆಯದು ನಿಮ್ಮ ನೆನಪಿನಿಂದ ಅಳಿಸಿಹೋಗಿರಲಾರದು. ಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಮೀಣ್ಯಂನಲ್ಲಿ ನಡೆದ ಹುಲಿಗಳ ಕಗ್ಗೊಲೆ. ಅವುಗಳ ಬದುಕಿನ ಸಂರಕ್ಷಣೆಗೆ ತಮ್ಮ ಬದುಕನ್ನು ತೆತ್ತವರ ಕಾಯಕಕ್ಕೆ ಎಸಗಿದ ದ್ರೋಹ. ಇನ್ನೊಂದು ಘಟನೆ, ಭಾರತದಲ್ಲಿ ಹುಲಿ ಸಂರಕ್ಷಣೆಗಾಗಿಯೇ ತಮ್ಮ ಜೀವನ ಮುಡಿಪಿಟ್ಟ ವಲ್ಮೀಕ್‌ ಥಾಪರ್‌ ಮೃತ ಪಟ್ಟದ್ದು (ಮೇ 31).

ಒಂದು ಲಿಟ್‌ ಫೆಸ್ಟ್‌ನಲ್ಲಿ ಮಾತನಾಡುತ್ತ ವಲ್ಮೀಕ್‌ ಥಾಪರ್‌ ಹೀಗೆ ಗರ್ಜಿಸಿದ್ದರು: ʼಪ್ರತಿ ವರ್ಷ 2.5 ಕೋಟಿ ಮಕ್ಕಳು ಹುಟ್ಟುವ ಈ ದೇಶದಲ್ಲಿ, ಭೂಮಿ ಅತ್ಯಂತ ಅಮೂಲ್ಯವಾದ ಆಸ್ತಿ. ಆದರೆ ಈ ಭೂಮಿ ಎಲ್ಲಿಂದ ಬರುತ್ತೆ? ಸ್ವಾಭಾವಿಕವಾಗಿ ಎಲ್ಲರೂ ಅರಣ್ಯ ಭೂಮಿಯನ್ನು ಹಿಂಡುವುದೇ ಸರಿ ಎಂದು ಭಾವಿಸುತ್ತಾರೆ. ಆದರೆ ಭವಿಷ್ಯದ ಮಕ್ಕಳ ಬಗ್ಗೆ ಯಾರೂ ಯೋಚಿಸುವುದಿಲ್ಲ. ಅವರು ಎಲ್ಲಿಂದ ನೀರು ಪಡೆಯುತ್ತಾರೆ? 600ಕ್ಕೂ ಹೆಚ್ಚು ನದಿಗಳು ಮತ್ತು ಸದಾ ಹರಿಯುವ ಹೊಳೆಗಳ ಮೂಲ ಇರುವುದು ಹುಲಿಗಳಿರುವ ಕಾಡುಗಳಿಂದ. ಕಾಡುಗಳನ್ನು ರಕ್ಷಿಸಲು ಈಗಲೇ ನಾವು ಏನನ್ನೂ ಮಾಡದಿದ್ದರೆ, 10 ಕೋಟಿ ಜನ ನೀರಿನ ಕೊರತೆಯಿಂದ ಸಾಯಲಿದ್ದಾರೆ.ʼ

ʼನೀರು ಬರುವುದು ಹುಲಿಗಳಿರುವ ಕಾಡುಗಳಿಂದʼ ಎಂಬ ಥಾಪರ್‌ ಮಾತಿಗೆ ಇಲ್ಲೊಂದು ವಿವರಣೆ ಬೇಕು. ಹುಲಿಗಳು ಜೀವಿಸುವುದು ಹುಲ್ಲು ಮೇದು ಬದುಕುವ ಜಿಂಕೆ ಮೊದಲಾದ ಮಿಕಗಳಿರುವಲ್ಲಿ. ಇವುಗಳ ಸಂಖ್ಯೆ ಅತಿಯಾಗಿ ಹೆಚ್ಚಿದರೆ ಹುಲ್ಲೆಲ್ಲಾ ನಾಶವಾಗುತ್ತದೆ. ಕಾಡಿನಲ್ಲಿ ಬೀಳುವ ಮಳೆ ಯನ್ನು ಹಾಗೇ ಹರಿಯದಂತೆ ತಡೆಹಿಡಿದಿಟ್ಟುಕೊಂಡು ನೆಲಕ್ಕೆ ಇಳಿಸುವುದು ಈ ಹುಲ್ಲು. ಹುಲಿಗಳು ಇಲ್ಲದಿದ್ದರೆ ಬೇಟೆ ಮೃಗವಿಲ್ಲದೆ ಜಿಂಕೆಗಳ ಸಂಖ್ಯೆ ಅತಿಯಾಗುತ್ತದೆ. ಹುಲ್ಲು ನಾಶವಾಗಿ ಮಳೆನೀರು ಯದ್ವಾತದ್ವಾ ಹರಿದುಹೋಗಿ ಸಮುದ್ರ ಸೇರುತ್ತದೆ. ನೀರು ಇಂಗದೇ ಇದ್ದರೆ ಸರ್ವಋತುಗಳಲ್ಲೂ ನೀರನ್ನು ನೀಡುವ ಹೊಳೆಗಳಿರುವುದಿಲ್ಲ. ಕಾವೇರಿಗೆ ಈ ಹೊಳೆಗಳು ನೀರೂಡದಿದ್ದರೆ ಬೆಂಗಳೂರಿಗೆ ನೀರೆಲ್ಲಿಂದ ಬರಬೇಕು. ಇದು ಸರಳ ಸಂಗತಿ. ಆದರೆ ಎಲ್ಲಕ್ಕಿಂತ ಮೊದಲು ನಮ್ಮ ಜನತೆಗೆ ಅರ್ಥ ಮಾಡಿಸಬೇಕಾದ್ದು.

ವಲ್ಮೀಕ್‌ ಥಾಪರ್‌ ಹುಲಿ ರಕ್ಷಣೆಗೆ ನೀಡಿದ ಕೊಡುಗೆ ಸಣ್ಣದಲ್ಲ. ನಿರಂತರವಾಗಿ ಹುಲಿ ರಕ್ಷಣೆಗೆ ಸರಕಾರಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅಧಿಕಾರಿಗಳ ಜತೆ ಗುದ್ದಾಡುವುದು ಸಣ್ಣ ಮಾತಲ್ಲ. ಪುಸ್ತಕಗಳನ್ನು ಬರೆದರು. ನ್ಯಾಷನಲ್‌ ಜಿಯೊಗ್ರಾಫಿಕ್‌, ಡಿಸ್ಕವರಿ, ಅನಿಮಲ್‌ ಪ್ಲಾನೆಟ್ ಮೊದಲಾದ ಅಂತಾರಾಷ್ಟ್ರೀಯ ಚಾನೆಲ್‌ಗಳಿಗೆ ಡಾಕ್ಯುಮೆಂಟರಿ ಮತ್ತಿತರ ಕಾರ್ಯಕ್ರಮಗಳನ್ನು ಮಾಡಿ, ಮಾಡಿಸಿದರು. ರಣಥಂಬೋರ್‌ ಉದ್ಯಾನವನವನ್ನು ದೇಶದ ಪ್ರಮುಖ ಹುಲಿ ಸಂರಕ್ಷಿತಾರಣ್ಯವಾಗಿ ಮಾಡುವಲ್ಲಿ ಅವರ ಕೊಡುಗೆ ದೊಡ್ಡದು. ಅಲ್ಲಿ ಕಳ್ಳಬೇಟೆ ನಿಲ್ಲಿಸಿದರು. ಕಾಡು ಅತಿಕ್ರಮಿಸಿದವ ರನ್ನು, ಅರಣ್ಯ ಭಕ್ಷಕರನ್ನು ಎದುರು ಹಾಕಿಕೊಂಡು ಕೋರ್ಟುಗಳಿಗೆ ಅಲೆದಾಡಿದರು. ಅದಕ್ಕೆಲ್ಲ ಸಾಕಷ್ಟು ಹಣ ಚೆಲ್ಲಿದರು, ವಿದೇಶಗಳಿಂದಲೂ ಹಣ ತಂದರು. ನೋಡನೋಡುತ್ತಾ ಭಾರತದ ವ್ಯಾಘ್ರರಕ್ಷಣೆಯ ಬ್ರಾಂಡ್‌ ಅಂಬಾಸಿಡರ್‌ ಆಗಿ ಹೋದರು.

ಥಾಪರ್‌ ತಮ್ಮ ಜೀವಮಾನದ ಹೋರಾಟದಲ್ಲಿ ಕಂಡುಕೊಂಡಿರುವ ಹಲವು ಒಳನೋಟಗಳನ್ನು ನಮ್ಮ ಬಂಡಿಪುರ, ನಾಗರಹೊಳೆ ಅರಣ್ಯಗಳಿಗೂ ವಿಸ್ತರಿಸಿದರೆ ನಮ್ಮ ಹುಲಿಗಳನ್ನು ಕಾಪಾಡಿ ಕೊಳ್ಳುವ ಕೆಲವು ದಾರಿಗಳು ಗೋಚರಿಸಬಹುದು. ಯಲ್ಲಪ್ಪ ರೆಡ್ಡಿ, ಕೆಎಂ ಚಿಣ್ಣಪ್ಪ, ಉಲ್ಲಾಸ ಕಾರಂತರಂಥವರು ಆ ನಿಟ್ಟಿನಲ್ಲಿ ಕೆಲವು ಹಾದಿಗಳನ್ನು ಹಾಕಿಕೊಟ್ಟಿದ್ದಾರೆ ಕೂಡ. ಮುಖ್ಯವಾಗಿ ಇಂದು ವನ್ಯಜೀವಿಗಳ ಸುಗಮ ಬದುಕಿಗೆ ಅಡ್ಡಿಯಾಗಿರುವುದು ಮಾನವ ಹಸ್ತಕ್ಷೇಪ. ಇದನ್ನು ʼಮಾನವ- ವನ್ಯಜೀವಿ ಸಂಘರ್ಷʼ ಎಂಬ ಸುಂದರ ಹೆಸರಿನಿಂದ ಕರೆಯಲಾಗುತ್ತದೆಯಾದರೂ, ಮನುಷ್ಯನ ಅಧಿಕಪ್ರಸಂಗದ್ದೇ ಈ ದುರಂತದಲ್ಲಿ ಹೆಚ್ಚಿನ ಪಾಲು. 1981ರಲ್ಲಿ ರಣಥಂಬೋರ್‌ ಅನ್ನು ಉಜ್ಜೀವಿಸುವಾಗ, ಕಾಡಿನ ಅಕ್ಕಪಕ್ಕದ ಜನತೆಗೆ ಮರುವಸತಿ ನೀಡಿ ಕಳಿಸುವ ಕೆಲಸದ ಮುಂಚೂಣಿ ವಹಿಸಿದರು. ಇದು ಮನುಷ್ಯನೊಂದಿಗೆ ಕಡಿಮೆ ತಿಕ್ಕಾಟದ ಸಾಕಷ್ಟು ಬಫರ್‌ ವಲಯ ವನ್ನು ಅಲ್ಲಿ ಸೃಷ್ಟಿಸಿತು.

ನಮ್ಮ ಈ ಹುಲಿಕಾಡುಗಳ ಬಿಕ್ಕಟ್ಟು ಹಲವಾರಿವೆ. ಹುಲಿಗಳ ಜತೆ ಮನುಷ್ಯನನ್ನೂ ಉಳಿಸಬೇಕಿದೆ. ಮೊದಮೊದಲು, ಹುಲಿಕಾಡುಗಳಿಂದ ಮನುಷ್ಯನನ್ನು ಪೂರ್ತಿ ದೂರವಿಡಬೇಕು ಎನ್ನುತ್ತಿದ್ದ ಥಾಪರ್‌, ಕಡೆಕಡೆಗೆ ವಾಸ್ತವ ಅರ್ಥ ಮಾಡಿಕೊಂಡು, ಮನುಷ್ಯ- ಹುಲಿ ಸಹಬಾಳ್ವೆಯ ಸಾಧ್ಯತೆ ಗಳನ್ನು ಅನ್ವೇಷಿಸಿದರು. ಆದರೆ ಈ ವಿಚಾರದಲ್ಲಿ ಆಸಕ್ತರನ್ನು, ತಜ್ಞರನ್ನು ಹುಲಿಕಾಡು ಗಳಿಂದ ದೂರವಿಡುತ್ತಿದ್ದ ಅಧಿಕಾರಿಗಳನ್ನು ಕಂಡರೆ ಅವರಿಗೆ ಭಯಂಕರ ಸಿಟ್ಟಿತ್ತು. ತಾವೂ ಮಾಡೋಲ್ಲ, ಇತರರಿಗೂ ಬಿಡೋಲ್ಲ ಎನ್ನುವ ತಿಕ್ಕಲು, ಜಡ ಅಧಿಕಾರಿಗಳೇ ಅನೇಕ ಸಲ ಇಂಥ ಪ್ರಾಜೆಕ್ಟುಗಳು ಸರ್ವನಾಶ ಆಗಲು ಮೂಲ. ಕಾಡು ರಕ್ಷಣೆಯಲ್ಲಿ ಹಳ್ಳಿಗಳು ​​ಮತ್ತು ನಗರಗಳ ಜನರಲ್ಲಿ ಪಾಲುದಾರಿಕೆ ಬೇಕು. ಸರ್ಕಾರಗಳು ಯೋಚಿಸುವ ರೀತಿಯಲ್ಲಿ ಬದಲಾವಣೆ ಆಗಬೇಕು. ಅರಣ್ಯ ಸಿಬ್ಬಂದಿಗೆ ಹೆಚ್ಚಿನ ಬೆಂಬಲ, ಬೇಟೆ ನಿಲ್ಲಿಸಲು ಬಲವಾದ ಪ್ರಯತ್ನಗಳು, ನೀತಿಗಳು, ಉತ್ತಮ ಸಂಶೋಧನೆಗಳು ಬೇಕೆಂದರು.

ನಾವು ಪ್ರತಿ ವರ್ಷ 10,000 ಚದರ ಕಿ.ಮೀ.ಗೂ ಹೆಚ್ಚು ದಟ್ಟ ಕಾಡುಗಳನ್ನು ಮರ ಮತ್ತು ಭೂ ಮಾಫಿಯಾಕ್ಕೆ ಕಳೆದುಕೊಳ್ಳುತ್ತಿದ್ದೇವೆ. ಭಾರತದಲ್ಲಿ ಪ್ರಕೃತಿ ಎಂದರೆ ಕಾವಲುಗಾರರಿಲ್ಲದ ಬ್ಯಾಂಕಿನಂತಿದೆ. ನಮ್ಮ ಅಸಮರ್ಥ ರಾಜಕೀಯ ನಾಯಕತ್ವ ಮತ್ತು ಅಧಿಕಾರಶಾಹಿ ನೈಸರ್ಗಿಕ ಖಜಾನೆಯ ಲೂಟಿಗೆ ಅವಕಾಶ ಮಾಡಿಕೊಟ್ಟಿದೆ. ಎಲ್ಲರೂ ತಮ್ಮ ಜೇಬುಗಳನ್ನು ತುಂಬಿಸಿಕೊಂಡಿ ದ್ದಾರೆ. ಶ್ರೀಮಂತ ಭಾರತೀಯರು ಮಸಾಯಿ ಮಾರಾದಲ್ಲಿ ರಜೆ ಆನಂದಿಸಲು ಆಫ್ರಿಕಾಕ್ಕೆ ಸ್ವಂತ ಜೆಟ್‌ಗಳಲ್ಲಿ ಹಾರಿಸುತ್ತಾರೆ. ಆದರೆ ತಮ್ಮದೇ ನಾಡಿನಲ್ಲಿ ವನ್ಯಜೀವಿಗಳನ್ನು ಬದುಕಿಸಿಕೊಳ್ಳುವ ಬಗ್ಗೆ ಯಾವುದೇ ಕಾರ್ಪೊರೇಟ್ ಜವಾಬ್ದಾರಿ ತೋರಿಸುವುದಿಲ್ಲ ಎಂದು ಅವರಿಗೆ ಸಿಟ್ಟಿತ್ತು. ಮಸಾಯಿ ಮಾರಾದ ಗೇಟ್‌ ಫೀ ಒಂದರಿಂದಲೇ ಕೆನ್ಯಾ 2400 ಕೋಟಿ ಡಾಲರ್‌ ಗಳಿಸುತ್ತದೆ. ಅಲ್ಲಿರುವ ಗಾರ್ಡ್‌ ಗಳ ಕೈಯಲ್ಲಿ ಬಂದೂಕುಗಳಿವೆ, ಕಳ್ಳಬೇಟೆಗಾರರನ್ನು ಕಂಡ ಕೂಡಲೇ ಗುಂಡಿಕ್ಕುತ್ತಾರೆ. ನಮ್ಮವರ ಕೈಯಲ್ಲಿ ಬೆತ್ತ ಕೊಟ್ಟಿದ್ದೇವೆ ಅಷ್ಟೆ.

ಹುಲಿಯಾಗಲೀ ಆನೆಯಾಗಲೀ ಮನುಷ್ಯರ ಜೊತೆ ತೊಡಕಾಗದಂತೆ ಬದುಕಲು ಕಾಡು ಸುತ್ತಲಿನ ಪ್ರದೇಶಗಳ ಜನಜೀವನದಲ್ಲಿಯೇ ಆಮೂಲಾಗ್ರ ಸುಧಾರಣೆಯಾಗಬೇಕು. ರಾಶಿ ರಾಶಿ ಜಾನುವಾರು ಗಳನ್ನು ಸಾಕಿಕೊಳ್ಳುವುದೇ ಬದುಕುವ ದಾರಿಯಾದರೆ ಈಗ ಆಗಿರುವಂತೆ ದುರಂತಗಳಾಗುತ್ತವೆ. ಸ್ಥಳೀಯ ಯುವಕರಿಗೆ ಕಾಡಿನ ಗೈಡ್‌ ಸೇರಿದಂತೆ ಸುಸ್ಥಿರ ಉದ್ಯೋಗಗಳು, ಸ್ಥಳೀಯ ಕರಕುಶಲ ವಸ್ತುಗಳ ಮೂಲಕ ಆದಾಯ ಗಳಿಕೆಗೆ ಮಹಿಳಾ ಸಹಕಾರಿ ಸಂಘಗಳು, ಉಚಿತ ರೋಗನಿರೋಧಕ ಕಾರ್ಯಕ್ರಮಗಳು, ಕುಟುಂಬ ಯೋಜನೆಗಳು, ಸಾಕ್ಷರತಾ ಕಾರ್ಯಕ್ರಮಗಳು, ಕಾಡಿನ ಒಳಗೆ ಮೇಯುವುದನ್ನು ಕಡಿಮೆ ಮಾಡಲು ದನಗಳಿಗೆ ಮೇವು ಬೆಳೆಸುವ ಪೈಲಟ್ ಯೋಜನೆ, ದನಗಳ ಸಗಣಿಯಿಂದ ಅನಿಲ ಉತ್ಪಾದಿಸುವ ಜೈವಿಕ ಅನಿಲ ಜನರೇಟರ್‌ಗಳ ಸ್ಥಾಪನೆ, ಇವನ್ನೆಲ್ಲ ಥಾಪರ್‌ ಪ್ರಯತ್ನಿಸಿದರು. ಹಲವು ಯಶಸ್ವಿಯಾದವು. ಇನ್ನು ಕೆಲವು ಸರಕಾರದ ಏಕಸ್ವಾಮ್ಯದಿಂದಾಗಿ ಕುಸಿದವು. ಜೊತೆಗೆ, ಹಣ ಮಾಡುವ ಹುಚ್ಚಿನಿಂದ ಟಿಂಬರ್‌ ಮಾಫಿಯಾ- ಕಳ್ಳಬೇಟೆಗಾರರೊಂದಿಗೆ ಕೈಜೋಡಿಸಿದವರ ದ್ರೋಹ.

ಮೀಣ್ಯಂನಲ್ಲಿ ನಡೆದದ್ದು ಮಹಾದುರಂತವಲ್ಲ, ಅದು ಈ ದೇಶಕ್ಕೆ ಬಡಿದ ದೊಡ್ಡದೊಂದು ರೋಗದ ಸಣ್ಣ ಲಕ್ಷಣವಷ್ಟೇ. ದುರಂತ ಮುಂದೆ ಕಾದಿದೆ. ನಮ್ಮ ಎಲ್ಲ ಕಾಡುಗಳೂ ಟೈಂಬಾಂಬು ಗಳ ಮೇಲೆ ಕುಳಿತಿವೆ. ಅರಣ್ಯಪ್ರೀತಿಯಿಲ್ಲದ ಜನಜಂಗುಳಿಯೇ ಈ ಟೈಂಬಾಂಬು. ಹುಲಿ ಕೊಂದ ಹಸುವಿನ ಕಳೇಬರಕ್ಕೆ ವಿಷ ಹಾಕುವವರಿಗೂ, ಅಕ್ರಮವಾಗಿ ಗುಡ್ಡ ಕಡಿದು ರೆಸಾರ್ಟು ಮಾಡುವವ ರಿಗೂ, ಹಣದಾಸೆಗೆ ಟಿಂಬರ್‌ ಮಾಫಿಯಾ- ಕಳ್ಳಬೇಟೆಗೆ ಅವಕಾಶ ಮಾಡಿಕೊಡುವವರಿಗೂ ವ್ಯತ್ಯಾಸವಿಲ್ಲ. ಮಾದರಾಜನಂಥ ಕೆಲವರು ಕಾನೂನಿನ ಕೈಗೆ ಸಿಕ್ಕಿ ಜೈಲಿಗೆ ಹೋಗುತ್ತಾರೆ, ಇನ್ನು ಕೆಲವರು ಮೀಸೆಯಡಿಯೇ ನಗುತ್ತಾರೆ.

ನಿಮಗೆ ಗೊತ್ತಿರಲಿ, ಕಳೆದ 13 ವರ್ಷಗಳಲ್ಲಿ ದೇಶದಲ್ಲಿ 1519 ಹುಲಿಗಳ ಸಾವಾಗಿದೆ. ಇದರಲ್ಲಿ ವಯಸ್ಸಾಗಿ ಸತ್ತವು ಅತ್ಯಲ್ಪ. ಕರ್ನಾಟಕ ಹುಲಿಗಳ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿ (563) ಇದೆ. ಇಲ್ಲಿ 5 ಹುಲಿ ಸಂರಕ್ಷಿತ ಅರಣ್ಯಗಳಿವೆ. ತಮಾಷೆ ಸಂಗತಿ ಅಂದರೆ ದೇಶದಲ್ಲಿ ʼಹುಲಿ ಸಂರಕ್ಷಿತ ಅರಣ್ಯʼ ಎಂದು ಘೋಷಿಸಲಾಗಿರುವ 58 ಕಾಡುಗಳಲ್ಲಿ 6ರಲ್ಲಿ ಒಂದೇ ಒಂದು ಹುಲಿಯೂ ಇಲ್ಲ. ಅದರಲ್ಲಿ ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದ ಸಹ್ಯಾದ್ರಿ ಸಂರಕ್ಷಿತಾರಣ್ಯವೂ ಸೇರಿದೆ. ನಾವು ಹಾಗಾಗುವುದು ಬೇಡ.