ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ಕಾರ್ಮಿಕರ ಬವಣೆ ತೀರಲಿ !

1886ರಲ್ಲಿ ಅಮೆರಿಕದ ಶಿಕಾಗೋದಲ್ಲಿ ‘8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಮನರಂಜನೆ’ ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಹಕ್ಕಿಗಾಗಿ ಕಾರ್ಮಿಕರು ನಡೆಸಿದ ರಕ್ತಸಿಕ್ತ ಹೋರಾಟದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಯಾವುದೇ ದೇಶದ ಆರ್ಥಿಕ ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಸಮತೋಲನದ ಅಡಿಪಾಯ ನಿಸ್ಸಂಶಯವಾಗಿ ಆಯಾ ದೇಶದ ಕಾರ್ಮಿಕ ವರ್ಗ.

ರವೀ ಸಜಂಗದ್ದೆ

(ವಿಶ್ವ ಕಾರ್ಮಿಕರ ದಿನ)

ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ, ಪ್ರತಿ ವರ್ಷ ಮೇ 1ರಂದು ‘ಕಾರ್ಮಿಕ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ. ಜಗತ್ತಿನ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತು, ತಮ್ಮ ದುಡಿಮೆ ಮತ್ತು ಬೆವರಿನ ಹನಿಗಳಿಂದ ಅಭಿವೃದ್ಧಿಯ ರಥವನ್ನು ಎಳೆಯುವ ಕೋಟ್ಯಂತರ ಶ್ರಮಿಕರಿಗೆ ಆಯಾ ದೇಶಗಳು ಅಭಿಮಾನದಿಂದ ಗೌರವ ಸಲ್ಲಿಸುವ ವಿಶೇಷ ದಿನ.

1886ರಲ್ಲಿ ಅಮೆರಿಕದ ಶಿಕಾಗೋದಲ್ಲಿ ‘8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಮನರಂಜನೆ’ ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಹಕ್ಕಿಗಾಗಿ ಕಾರ್ಮಿಕರು ನಡೆಸಿದ ರಕ್ತಸಿಕ್ತ ಹೋರಾಟದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಯಾವುದೇ ದೇಶದ ಆರ್ಥಿಕ ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಸಮತೋಲನದ ಅಡಿಪಾಯ ನಿಸ್ಸಂಶಯವಾಗಿ ಆಯಾ ದೇಶದ ಕಾರ್ಮಿಕ ವರ್ಗ.

ಕೃಷಿ ಭೂಮಿಯಿಂದ ಹಿಡಿದು, ಗಗನಚುಂಬಿ ಕಟ್ಟಡಗಳ ನಿರ್ಮಾಣದವರೆಗೆ, ಬ್ಯಾಂಕ್‌ ನಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕೆಲಸಗಳ ಹಿಂದೆಯೂ ಈ ದೊಡ್ಡ ಸಂಖ್ಯೆಯ ಕಾರ್ಮಿಕರ ಅವಿರತ ಶ್ರಮ ಅಡಗಿದೆ.

ಹದಿನೆಂಟನೆಯ ಶತಮಾನದಲ್ಲಿ ಬಂಡವಾಳಶಾಹಿ ವ್ಯವಸ್ಥೆಯಡಿಯಲ್ಲಿ ತೀವ್ರ ಶೋಷಣೆಗೆ ಒಳಗಾಗುತ್ತಿದ್ದ ಕಾರ್ಮಿಕರ ದನಿಯಾಗಿ ಅವರೊಡನೆ ನಿಂತು ಆಸರೆಯಾದದ್ದು ಆಯಾ ಭಾಗಗಳ ಮತ್ತು ಆಯಾ ವಿಭಾಗಗಳ ಶಕ್ತಿಶಾಲಿ ಕಾರ್ಮಿಕ ಸಂಘಟನೆಗಳು. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ, ಉದ್ಯೋಗದ ಭದ್ರತೆಯ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿತಿಯನ್ನು ಕಾರ್ಮಿಕರಿಗೆ ಒದಗಿಸುವಲ್ಲಿ ಮತ್ತು ನ್ಯಾಯಯುತ ವೇತನ ಮತ್ತು ಕಾಲಾನುಕ್ರಮದಲ್ಲಿ ಅದರ ಪರಿಷ್ಕರಣೆಗಾಗಿ ಆಗ್ರಹಿಸುವ ವಿಚಾರದಲ್ಲಿ ಈ ಸಂಘಟನೆಗಳು ನಿರ್ವಹಿಸಿದ ಪಾತ್ರ ದೊಡ್ಡದು.

ಇದನ್ನೂ ಓದಿ: Ravi Sajangadde Column: ಸಿಎಸ್‌ʼಇಎಲ್‌ ಸಂವಹನ ಸಾಧನ: ಸಮರ ಸೈನಿಕರ ಸಂಜೀವಿನಿ !

ವ್ಯವಹಾರ ಮತ್ತು ಕೈಗಾರಿಕಾ ಮಾಲೀಕರು ಮತ್ತು ಕಾರ್ಮಿಕರ ನಡುವಿನ ಸೇತುವೆ-ಕೊಂಡಿಯಾಗಿ ಈ ಕಾರ್ಮಿಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಶೋಷಣೆ, ವಿವಿಧ ದೌರ್ಜನ್ಯಗಳನ್ನು ತಡೆಯುವುದು ಇವರ ಪ್ರಮುಖ ಗುರಿ. ಇದರೊಂದಿಗೆ ಕಾರ್ಮಿಕರಿಗೆ ಆರೋಗ್ಯ, ಸುರಕ್ಷತೆ, ವಿಮೆ ಮತ್ತು ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯಂತಹ ಮೂಲಭೂತ ಸೌಲಭ್ಯಗಳನ್ನು ಕಾನೂನಾತ್ಮಕವಾಗಿ ಒದಗಿಸುವಲ್ಲಿ ಈ ಸಂಘಟನೆಗಳ ಹೋರಾಟ ಮಹತ್ವದ್ದಾಗಿದೆ.

ಇಂತಹ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಈ ಕಾರ್ಮಿಕ ಸಂಘಟನೆಗಳು ಯಶಸ್ವಿಯಾಗಿವೆ. ಕಳೆದ ಕೆಲವು ವರ್ಷಗಳಿಂದ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯು ತ್ತಿದೆಯಾದರೂ, ಕಾರ್ಮಿಕ ವರ್ಗದ ಎಲ್ಲರ ಬದುಕು ಇನ್ನೂ ಹಸನಾಗಿಲ್ಲ. ಒಂದು ವಿವರಣೆ ಪ್ರಕಾರ, ಭಾರತದ ಒಟ್ಟು ಕಾರ್ಮಿಕ ಶಕ್ತಿಯಲ್ಲಿ ಶೇ.75ಕ್ಕೂ ಹೆಚ್ಚು ಜನರು ‘ಅಸಂಘಟಿತ ವಲಯ’ದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೆಲ್ಲರೂ ದೈನಂದಿನ ಕೆಲಸಕಾರ್ಯಗಳಲ್ಲಿ ಹಲವಾರು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರಿಗೆ ಖಾಯಂ ಉದ್ಯೋಗದ ಭದ್ರತೆ ಇಲ್ಲ. ಕೇಂದ್ರ ಸರ್ಕಾರದ ’ಜಿರಾಮ್‌ಜಿ ಯೋಜನೆ’ಯು ಒಂದಷ್ಟು ದಿನಗಳ ಉದ್ಯೋಗ ಖಾತ್ರಿ ಒದಗಿಸುತ್ತಿದೆಯಾದರೂ ಕಾರ್ಮಿಕರ ಬವಣೆಗಳು ಇನ್ನೂ ಕಡಿಮೆ ಆಗಿಲ್ಲ. ಉತ್ತರ ಭಾರತ ಮತ್ತು ಒಂದಷ್ಟು ಹಿಂದುಳಿದಿರುವ ಈಶಾನ್ಯ ರಾಜ್ಯಗಳ ಕಾರ್ಮಿಕರು ದೈನಂದಿನ ಜೀವನ ಸಾಗಿಸಲು ಬಹಳ ತ್ರಾಸ ಪಡುತ್ತಿದ್ದಾರೆ. ಕೆಲಸ ಸಿಕ್ಕ ದಿನವಷ್ಟೇ ಇವರ ಮನೆಯಲ್ಲಿ ಒಲೆ ಉರಿಯುವ ಪರಿಸ್ಥಿತಿ ಇಂದಿಗೂ ಇದೆ!

ದುಬಾರಿಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ಮತ್ತು ಕಾರ್ಮಿಕರಿಗೆ ಸಿಗುತ್ತಿರುವ ದಿನಗೂಲಿಗೆ ವ್ಯತ್ಯಾಸ ಅಜಗಜಾಂತರ! ‘ಕನಿಷ್ಠ ವೇತನ ಕಾಯ್ದೆ’ ಹೆಚ್ಚಿನ ಪ್ರದೇಶಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಉದ್ಯೋಗವನ್ನರಸಿ ಹಳ್ಳಿಗಳಿಂದ ನಗರಗಳಿಗೆ, ಹಿಂದುಳಿದ ರಾಜ್ಯಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ವಲಸೆ ಬರುವ ಕಾರ್ಮಿಕರು ಸಮರ್ಪಕ ವಸತಿ, ನೈರ್ಮಲ್ಯ ಮತ್ತು ಆರೋಗ್ಯ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಡೆಲಿವರಿ ಕೆಲಸಗಾರರು, ಬಾಡಿಗೆ ಕಾರು ಚಾಲಕರಂತಹ ‘ಗಿಗ್ ಕಾರ್ಮಿಕರ’ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಉದ್ಯೋಗ ಕಲ್ಪಿಸುವ ಕಂಪನಿಗಳು, ಇವರನ್ನು ‘ಪಾಲುದಾರರು’ ಎಂದು ಪರಿಗಣಿಸಿ, ‘ಉದ್ಯೋಗಿ’ಗಳಾಗಿರುವ ಇವರಿಗೆಲ್ಲ ಸಿಗಬೇಕಾದ ಭವಿಷ್ಯ ನಿಧಿ, ಆರೋಗ್ಯ ವಿಮೆ ಮುಂತಾದ ಸೌಲಭ್ಯಗಳಿಂದ ನಯವಾಗಿ ವಂಚಿಸುತ್ತಿವೆ.

ಆರೋಗ್ಯ ರಕ್ಷೆ ಮತ್ತು ಆರ್ಥಿಕ ಸದೃಢತೆ ಇನ್ನೂ ಮರೀಚಿಕೆಯಾಗಿದೆ. ಪುರುಷರಿಗೆ ಸಮಾನವಾದ ಕೆಲಸ ಮಾಡುತ್ತಿದ್ದರೂ ಮಹಿಳೆಯರಿಗೆ ಕಡಿಮೆ ವೇತನ ನೀಡುವುದು, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮತ್ತು ಹೆರಿಗೆ ಭತ್ಯೆಯ ನಿರಾಕರಣೆ ಮುಂತಾದ ಸಂಕಷ್ಟಗಳನ್ನು ಮಹಿಳಾ ಉದ್ಯೋಗಿಗಳು ಬಹುತೇಕ ಕಡೆಗಳಲ್ಲಿ ಎದುರಿಸುತ್ತಿದ್ದಾರೆ. ಈ ಸಮಸ್ಯೆಯ ನಿವಾರಣೆಗೆ ಮತ್ತು ನಿರ್ಮೂಲನೆಯ ದಿಸೆಯಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ಕಠಿಣ ಕಾನೂನು ತಂದಿದೆ. ಕೆಲವು ಕಡೆಗಳಲ್ಲಿ ಈ ಕಾನೂನು ಅನುಷ್ಠಾನ ಇನ್ನಷ್ಟು ಕಟ್ಟುನಿಟ್ಟಾಗಿ ಆಗಬೇಕಿದೆ.

ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಅವರ ಭವಿಷ್ಯವನ್ನು ಭದ್ರವಾಗಿ ಸುನ ನಿಟ್ಟಿನಲ್ಲಿ ಈವರೆಗೆ ಬಂದಿರುವ ಸರ್ಕಾರಗಳು ಹಲವಾರು ಮಹತ್ವದ ಹೆಜ್ಜೆಗಳನ್ನು ಇಟ್ಟಿರುವುದು ಸತ್ಯ. ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿಸಲು ಇ-ಶ್ರಮ್ ಪೋರ್ಟಲ್ ಅದಾಗಲೇ ಚಾಲನೆಯಲ್ಲಿದೆ. ಇದರಲ್ಲಿ ನೋಂದಾಯಿತ ಕಾರ್ಮಿಕರಿಗೆ ಎರಡು ಲಕ್ಷ ರೂಪಾಯಿಗಳ ಉಚಿತ ಅಪಘಾತ ವಿಮೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ನೆರವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪುತ್ತದೆ.

ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಸದುದ್ದೇಶದಿಂದ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ’ ಜಾರಿಯಲ್ಲಿದೆ. ಈ ಯೋಜನೆ ಯಡಿ, 60 ವರ್ಷಗಳ ನಂತರ ಪ್ರತಿ ತಿಂಗಳು ಕನಿಷ್ಠ ರೂಪಾಯಿ 3000 ಪಿಂಚಣಿ ನೀಡಲಾಗುತ್ತದೆ.

ಓಬೀರಾಯನ ಕಾಲದ 44 ಕಾರ್ಮಿಕ ಕಾನೂನುಗಳನ್ನು ಪರಿಶೀಲಿಸಿ, ಪರಾಂಬರಿಸಿ ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಔದ್ಯೋಗಿಕ ಸುರಕ್ಷತೆ ಎಂಬ ನಾಲ್ಕು ಹೊಸ ಕಾರ್ಮಿಕ ಕಾಯಿದೆಗಳನ್ನು ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಇದು ಕಾರ್ಮಿಕರ ಹಕ್ಕುಗಳನ್ನು ದೇಶದೆಡೆ ಸಮಾನವಾಗಿ ಕಾಪಿಡುವ ಗುರಿ ಹೊಂದಿದೆ.

ರಾಜ್ಯದಲ್ಲಿ ‘ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ನೊಂದಾಯಿತ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ‘ವಿದ್ಯಾನಿಧಿ’, ಮದುವೆ ಸಹಾಯಧನ, ಮತ್ತು ಹೆರಿಗೆ ಭತ್ಯೆಯನ್ನು ನೀಡಲಾಗುತ್ತಿದೆ.

ಕಾರ್ಮಿಕರ ಕೆಲಸದ ಸ್ಥಳಕ್ಕೆ ತೆರಳಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಒದಗಿಸುವ ‘ಶ್ರಮಿಕ ಸಂಜೀವಿನಿ’ ಕ್ಲಿನಿಕ್‌ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿವೆ. ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ನಗರ ಸಾರಿಗೆಯಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಲಾಗಿದೆ. ಜೊತೆಯಲ್ಲಿ ‘ಕಾರ್ಮಿಕ ಗೃಹ ಭಾಗ್ಯ’ ಯೋಜನೆಯಡಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಅಥವಾ ಮನೆ ಖರೀದಿಸಲು ಕಾರ್ಮಿಕರಿಗೆ ಆರ್ಥಿಕ ಸಹಾಯ ಧನವನ್ನು ರಾಜ್ಯ ಸರಕಾರ ನೀಡುತ್ತಿದೆ.

ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದರೂ ಎಲ್ಲಾ ಕ್ಷೇತ್ರಗಳಲ್ಲೂ ನುರಿತ ಮತ್ತು ಅನುಭವಿ ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿದ್ದೇವೆ. ಒಂದು ಕೆಲಸಕ್ಕೆ ಸೂಕ್ತ ವಾದ ಅಭ್ಯರ್ಥಿ ಆಯ್ಕೆ, ಅದಕ್ಕೆ ಹೊಂದುವ ಮತ್ತು ದೀರ್ಘಕಾಲ ಆ ಜವಾಬ್ದಾರಿ ತೆಗೆದು ಕೊಂಡು ಕೆಲಸ ಮಾಡುವ ಸಿದ್ಧತೆ ಮತ್ತು ಬದ್ಧತೆಯ ಕೊರತೆಯನ್ನು ಎಡೆ ಕಾಣುತ್ತಿದ್ದೇವೆ.

ನುರಿತ ಕಾರ್ಮಿಕರ ಸಂಖ್ಯೆ ಹೆಚ್ಚಬೇಕಿದೆ ಮತ್ತು ಈಗಿನ ಯುವಜನತೆ ದುಡ್ಡಿನ ಹಿಂದೆ ಹೋಗುವ ಬದಲಾಗಿ ಕೌಶಲ್ಯಾಭಿವೃದ್ಧಿಯ ಕಡೆಗೂ ಗಮನ ನೀಡಬೇಕಿದೆ. ಪ್ರತಿಭಾವಂತ ರಿಗೆ ವಿದೇಶಗಳಲ್ಲಿ ಸಿಗುವ ಸಂಬಳ, ಸ್ಥಾನಮಾನ ನಮ್ಮ ದೇಶದಲ್ಲಿ ಕೊಡುವ ಮೂಲಕ ದೇಶದ ಕೋಟ್ಯಂತರ ಪ್ರತಿಭೆಗಳನ್ನು ದೇಶಕ್ಕಾಗಿ ದುಡಿಯುವ ಯೋಜನೆಗಳನ್ನು ಸರ್ಕಾರಗಳು ಗಂಭೀರ ವಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಗಬೇಕಾದದ್ದು ಸದ್ಯದ ತುರ್ತು.

ಮೇ ಒಂದರ ಕಾರ್ಮಿಕ ದಿನಾಚರಣೆಯು ಕೇವಲ ವೇದಿಕೆಯ ಮೇಲಿನಿಂದ ನೇತಾರರು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ರಾಜಕಾರಣಿಗಳು ಮಾಡುವ ಭಾಷಣಗಳಿಗೆ ಅಥವಾ ಪರಸ್ಪರ ಶುಭಾಶಯ ವಿನಿಮಯಕ್ಕೆ ಮಾತ್ರ ಸೀಮಿತವಾಗದಿರಲಿ!

ಸರ್ವರಿಗೂ ಕಾರ್ಮಿಕ ದಿನಾಚರಣೆಯ ಶುಭ ಹಾರೈಕೆಗಳು.