ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಸಾಯುವೆನೆಂಬ ಎಂಬ ಮಾತು ಬರದಿರಲಿ ನಾಲಿಗೆಯಲ್ಲಿ

ಜೀವನದಲ್ಲಿ ನಾವು ಬಹಳವಾಗಿ ನೊಂದುಕೊಂಡಾಗ, ನಮ್ಮ ಆಸೆಗಳು ನೆರವೇರದಿzಗ ಬದುಕು ಸಾಕೆನಿಸಿ ಸಾಯುವ ಆಕಾಂಕ್ಷೆಗಳು ಬರುವುದು ಸಹಜ. ಈ ರೀತಿ ವ್ಯರ್ಥ ಜೀವನ ನಡೆಸುವುದಕ್ಕಿಂತ, ಸಾವೇ ಎಷ್ಟೋ ಮೇಲು ಎನಿಸುವುದು ಸಹಜ. ಆದರೆ ನಿಜವಾಗಿಯೂ ಯಾರಿಗೂ ಸಾಯಬೇಕೆಂಬ ಆಸೆ ಇರುವುದಿಲ್ಲ, ಎಲ್ಲರೂ ಬದುಕಿರುವುದನ್ನೇ ಬಯಸುವುದು

ಒಂದೊಳ್ಳೆ ಮಾತು

ಎಷ್ಟೋ ವರ್ಷಗಳಿಂದ ಒಬ್ಬ ವ್ಯಕ್ತಿ ಕಟ್ಟಿಗೆ ಮಾರಿ ಜೀವನ ನಡೆಸುತ್ತಿದ್ದ. ಪ್ರತಿದಿನ ಕಾಡಿಗೆ ಹೋಗಿ ಕಟ್ಟಿಗೆ ಒಡೆದು ತರುವುದು ಮಾರುಕಟ್ಟೆಯಲ್ಲಿ ಅದನ್ನು ಮಾರಾಟ ಮಾಡುವುದು. ಅದರಿಂದ ಬರುವ ಹಣದಿಂದಲೇ ಅವನ ಜೀವನ ನಿರ್ವಹಣೆ. ಜೀವಮಾನವಿಡೀ ಇದೇ ಕೆಲಸ ಮಾಡಿ ಮಾಡಿ ಅವನಿಗೆ ಜೀವನ ಬಹಳ ಬೇಸರವೆನಿಸತೊಡಗಿತು. ಸ್ವಲ್ಪ ವಯಸ್ಸೂ ಆಗುತ್ತಾ ಬಂದಿತು. ಕೆಲಸ ಮಾಡಲು ಸ್ವಲ್ಪ ಕಷ್ಟವೆನಿಸತೊಡಗಿತು. ಒಂದು ದಿನ ಕಟ್ಟಿಗೆ ತರಲು ಕಾಡಿಗೆ ಹೋದ . ಅಂದು ಯಾಕೋ ಅವನಿಗೆ ಕೆಲಸ ಮಾಡುವ ಉತ್ಸಾಹವೇ ಇರಲಿಲ್ಲ.

ಎಷ್ಟು ದಿನಗಳಿಂದ ಇದನ್ನೇ ಮಾಡುತ್ತಿದ್ದೇನೆ, ಒಂದು ದಿನ ಸತ್ತು ಹೇಗೂ ಮಣ್ಣಿನಲ್ಲಿ ಸೇರುವುದು ಇದ್ದೇ ಇದೆ, ಅದಕ್ಕಾಗಿ ಇಷ್ಟೆ ಯಾಕೆ ನಾನು ಕಷ್ಟಪಡಬೇಕು? ಈ ಜೀವನ ಯಾಕೋ ಸಾಕಾಗಿ ಹೋಗಿದೆ, ಮುಂದೆ ಒಂದು ದಿನ ಬರುವ ಸಾವು ಇಂದೇ ಏಕೆ ಬರಬಾರದು? ಎಂದು ಬೇಸರದಿಂದ ನೊಂದುಕೊಂಡು, ಓ, ಸಾವೇ ನೀನು ಇಂದೇ ಬರಬಾರದೇ? ನಾನು ಈ ಜೀವನದಿಂದ ಬಹಳ ನೊಂದಿದ್ದೇನೆ. ನನಗೆ ಈ ಜೀವನ ಸಾಕಾಗಿ ಹೋಗಿದೆ. ಕೃಪೆ ಮಾಡಿ ನನಗೆ ಇದರಿಂದ ಇಂದೇ ಮುಕ್ತಿ ಕೊಡು ಎಂದ. ಇದನ್ನು ಕೇಳಿಸಿಕೊಂಡ ಮೃತ್ಯು ದೇವತೆ, ತಕ್ಷಣವೇ ಅವನೆದುರು ಬಂದು ನಿಂತು, ನಾನು ಮೃತ್ಯು ದೇವತೆ, ನೀನು ನನ್ನನ್ನು ಕರೆದೆಯೆಂದು ಬಂದೆ, ನನ್ನಿಂದ ನಿನಗೇನು ಆಗಬೇಕಿದೆ? ಎಂದ.

ಇದನ್ನೂ ಓದಿ: Roopa Gururaj Column: ಅರ್ಧಜ್ಞಾನ ಅಭಿಮನ್ಯುವಿನ ಜೀವಕ್ಕೆ ತಂದ ಆಪತ್ತು

ಈ ವ್ಯಕ್ತಿಗೆ ಉಸಿರು ಕಟ್ಟಿದಂತಾಗಿ, ಭಯದಿಂದ ನಡುಗಲಾರಂಭಿಸಿದ. ಉಗುಳು ನುಂಗುತ್ತಾ, ನಿಧಾನ ವಾಗಿ, ಏನಿ ಪ್ರಭೂ, ಈ ಕಟ್ಟಿಗೆ ಹೊರೆಯನ್ನು ನನ್ನೊಬ್ಬನಿಂದಲೇ ತಲೆಯ ಮೇಲೆ ಇಟ್ಟುಕೊಳ್ಳ ಲಾಗಲಿಲ್ಲ, ಇಲ್ಲಿ ಯಾರೂ ಕಾಣಿಸಲಿಲ್ಲ. ಅದಕ್ಕಾಗಿ ನಿಮ್ಮನ್ನು ಕರೆದೆ, ಕೃಪೆ ಮಾಡಿ ನನ್ನ ತಲೆಯ ಮೇಲೆ ಈ ಕಟ್ಟಿಗೆಯ ಹೊರೆಯನ್ನು ಇಟ್ಟುಕೊಳ್ಳಲು ಸ್ವಲ್ಪ ಸಹಾಯ ಮಾಡಿ ಎಂದ. ಸುಮ್ಮನೆ, ಸಾಯುವ ಮಾತು ಆಗಾಗ್ಗೆ ನಮ್ಮ ಬಾಯಿಂದ ಬರುತ್ತಲೇ ಇರುತ್ತದೆ. ಆದರೆ ಯಾರಿಗೂ ಸಾಯುವ ಆಕಾಂಕ್ಷೆ ಇರುವುದಿಲ್ಲ. ಮನಸ್ಸಿನಲ್ಲಿ ಎಲ್ಲರಿಗೂ ಜೀವಿಸುವ ಆಕಾಂಕ್ಷೆಯೇ ಇರುವುದು.

ಜೀವನದಲ್ಲಿ ನಾವು ಬಹಳವಾಗಿ ನೊಂದುಕೊಂಡಾಗ, ನಮ್ಮ ಆಸೆಗಳು ನೆರವೇರದಿzಗ ಬದುಕು ಸಾಕೆನಿಸಿ ಸಾಯುವ ಆಕಾಂಕ್ಷೆಗಳು ಬರುವುದು ಸಹಜ. ಈ ರೀತಿ ವ್ಯರ್ಥ ಜೀವನ ನಡೆಸುವುದಕ್ಕಿಂತ, ಸಾವೇ ಎಷ್ಟೋ ಮೇಲು ಎನಿಸುವುದು ಸಹಜ. ಆದರೆ ನಿಜವಾಗಿಯೂ ಯಾರಿಗೂ ಸಾಯಬೇಕೆಂಬ ಆಸೆ ಇರುವುದಿಲ್ಲ, ಎಲ್ಲರೂ ಬದುಕಿರುವುದನ್ನೇ ಬಯಸುವುದು. ನಮ್ಮಲ್ಲಿ ಕೆಲವರು ಕಷ್ಟಗಳನ್ನು ತಡೆದುಕೊಳ್ಳಲಾಗದೆ ಸತ್ತು ಹೋಗಿಬಿಡಬೇಕು ಅನ್ನಿಸ್ತಿದೆ, ಅನ್ನುವ ಮಾತುಗಳನ್ನ ನಾವು ಕೇಳಿರುತ್ತೇವೆ. ಆಗ ಅವರಿಗೆ ಬೈದು ಸಮಾಧಾನವನ್ನು ಕೂಡ ಮಾಡಿರುತ್ತೇವೆ. ಆದರೆ ಕೆಲವರಿಗೆ ಈ ರೀತಿ ಮಾತನಾಡುವುದು, ಎಲ್ಲದರಲ್ಲೂ ನಕಾರಾತ್ಮಕ ವಿಷಯಗಳನ್ನು ಹುಡುಕುವುದು ಎಷ್ಟು ಅಭ್ಯಾಸವಾಗಿ ಬಿಟ್ಟಿರುತ್ತದೆ ಎಂದರೆ, ಅನಗತ್ಯವಾಗಿ ಮತ್ತೊಬ್ಬರ ಸಾಂತ್ವನ ಗಳಿಸಲು ಮತ್ತೆ ಮತ್ತೆ ಈ ರೀತಿ ಮಾತನಾಡುತ್ತಿರುತ್ತಾರೆ. ಅವರಿಗೆ ಸಮಾಧಾನ ಪಡಿಸಲು ಹೋದ ಅನೇಕರು ಖಿನ್ನತೆಗೆ ಜಾರುವ ಸಾಧ್ಯತೆಗಳು ಇರುತ್ತದೆ.

ಅಂತಹವರನ್ನು ಯೋಚನೆಯ ಬಾವಿಯಿಂದ ಹೊರಗೆ ತರುವುದಿರಲಿ ನಾವೇ ಅದರೊಳಗೆ ಬಿದ್ದು ಹೋಗುವ ಆದ್ದರಿಂದ ತಿದ್ದಿಕೊಳ್ಳಲು ಮನಸ್ಸು ಮಾಡದವರಿಗೆ, ಹೇಳಿದ ಬುದ್ಧಿವಾದವನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದವರಿಗೆ ಸದಾ ಬುದ್ಧಿವಾದ ಹೇಳಲು ಹೋಗಬೇಡಿ. ಕೆಲವರಿಗೆ ಪರಿಹಾರ ಬೇಕಿರುವುದಿಲ್ಲ ಅವರು ಸದಾ ಯಾವುದೋ ಒಂದು ಸಂಕಟ ತೋಡಿಕೊಳ್ಳುತ್ತಾ ಬದುಕುತ್ತಿರುತ್ತಾರೆ. ಜೀವನ್ಮುಖಿಯಾದ ನಾವು ಅವರನ್ನು ಸರಿಪಡಿ ಸಲು ಹೋಗಿ ನಮ್ಮ ಸಮಯ ಕೂಡ ವ್ಯರ್ಥವಾಗು ತ್ತದೆ. ಎಂದಿಗೂ ನಮ್ಮ ಸಹಾಯ, ನಮ್ಮ ಒಳ್ಳೆಯ ತನ ನಮ್ಮ ಚೈತನ್ಯ ಆಪಾತ್ರದಾನ ವಾಗಬಾರದು. ಈ ಸೂಕ್ಷ್ಮವನ್ನು ತಿಳಿದು ಯಾರಿಗೆ ಸಹಾಯ ಮಾಡಬೇಕು, ಎಷ್ಟು ಬುದ್ಧಿ ಹೇಳಿ ಸರಿಪಡಿಸಬೇಕು ಎನ್ನುವ ಅರಿವು ನಮಗಿದ್ದರಾಯಿತು.

ರೂಪಾ ಗುರುರಾಜ್

View all posts by this author