Dr Sadhanashree Column: ಹೃದಯ ಆಗಲಿ ನಿಮ್ಮ ಜೀವದ ಗೆಳೆಯ
ಹೃದ್ರೋಗದ ಕಾರಣಗಳನ್ನು ತಿಳಿದು ರೋಗ ಬಾರದಂತೆ ಮುನ್ನೆಚ್ಚರಿಕೆಯಿಂದಿರಲು ಸರಿಯಾದ ತಿಳಿವಳಿಕೆಯ ಅವಶ್ಯಕತೆಯಿದೆ. ಹಾಗಾಗಿ ಹೃದ್ರೋಗ ವಿಷಯದ ಆಯುರ್ವೇದೋಕ್ತ ಜ್ಞಾನ ಸಂಪತ್ತು ನಿಮ್ಮ ಮುಂದೆ. ಸ್ನೇಹಿತರೆ, ಕಾರಣವಿಲ್ಲದೆ ಕಾರ್ಯವಿಲ್ಲ! ಯಾವ ರೋಗವೂ ಕಾರಣ ವಿಲ್ಲದೆ ಬರದು. ಅಂತೆಯೇ ಹೃದ್ರೋಗವೂ! ಹಾಗಾಗಿ, ಹೃದಯವನ್ನು ರಕ್ಷಿಸಿಕೊಳ್ಳುವ ನಿಟ್ಟಿ ನಲ್ಲಿ ಅದಕ್ಕೆ ತೊಂದರೆ ಕೊಡುವ ಕಾರಣಗಳಿಂದ ದೂರವಿರುವುದೇ ಮೊದಲ ಹೆಜ್ಜೆ


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ನಿಮಗಿದು ಗೊತ್ತೇ? ಹೃದಯವು ನಮ್ಮ ಇಂದ್ರಿಯ, ಇಂದ್ರಿಯಾರ್ಥ, ಆತ್ಮ, ಸತ್ವ-ರಜ-ತಮಸ್ಸುಗಳ ಕೇಂದ್ರ. ಹೃದಯವು ಶರೀರದ ಆಧಾರ. ಹೃದಯವು ದಿನಕ್ಕೆ ಸುಮಾರು ಒಂದು ಲಕ್ಷ ಸಲ ಬಡಿದುಕೊಳ್ಳುವ ಪ್ರಾಣಾಯತನ. ಹೃದಯವು ಜೀವರಸವಹನ ಮಾಡುವ ಮೂಲ. ಹೃದಯವು ಸಪ್ತಧಾತುಗಳ ಸಾರವಾದ ಓಜಸ್ಸಿನ ಆಶ್ರಯ. ಅಂತೆಯೇ, ಪ್ರತಿ ನಿತ್ಯವೂ ಜಗತ್ತಿನಲ್ಲಿ ಅರ್ಧದಷ್ಟು ಸಾವು ಉಂಟಾಗುವುದು ಹೃದಯಾಘಾತದಿಂದಲೇ!
ಭಾರತದಂಥ ದೇಶಗಳಲ್ಲಿ ಹೃದ್ರೋಗದಿಂದ ಬಳಲುವ ರೋಗಿಗಳಲ್ಲಿ ಬಹಳಷ್ಟು ಜನರು ಚಿಕಿತ್ಸೆಯ ಖರ್ಚನ್ನು ವಹಿಸುವಲ್ಲಿ ಅಸಮರ್ಥರು. ಅಷ್ಟೇ ಅಲ್ಲದೆ, ಶಸ್ತ್ರಚಿಕಿತ್ಸೆಯ ನಂತರವೂ ಪುನಃ ಹೃದಯಾಘಾತ ಆಗುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಹೃದ್ರೋಗದ ಕಾರಣಗಳನ್ನು ತಿಳಿದು ರೋಗ ಬಾರದಂತೆ ಮುನ್ನೆಚ್ಚರಿಕೆ ಯಿಂದಿರಲು ಸರಿಯಾದ ತಿಳಿವಳಿಕೆಯ ಅವಶ್ಯಕತೆಯಿದೆ. ಹಾಗಾಗಿ ಹೃದ್ರೋಗ ವಿಷಯದ ಆಯುರ್ವೇದೋಕ್ತ ಜ್ಞಾನ ಸಂಪತ್ತು ನಿಮ್ಮ ಮುಂದೆ. ಸ್ನೇಹಿತರೆ, ಕಾರಣವಿಲ್ಲದೆ ಕಾರ್ಯ ವಿಲ್ಲ! ಯಾವ ರೋಗವೂ ಕಾರಣವಿಲ್ಲದೆ ಬರದು. ಅಂತೆಯೇ ಹೃದ್ರೋಗವೂ! ಹಾಗಾಗಿ, ಹೃದಯವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅದಕ್ಕೆ ತೊಂದರೆ ಕೊಡುವ ಕಾರಣಗಳಿಂದ ದೂರವಿರುವುದೇ ಮೊದಲ ಹೆಜ್ಜೆ. ಹೃದ್ರೋಗದ ಕಾರಣಗಳನ್ನು ಈ ರೀತಿಯಾಗಿ ವಿಂಗಡಿಸ ಬಹುದು:
ಇದನ್ನೂ ಓದಿ: Dr Sadhanashree Column: ಫಲಗಳ ರಾಜ ಮಾವು, ಆದರೆ ಅವನು ತರದಿರಲಿ ನೋವು
ಆಹಾರಜನ್ಯ ಕಾರಣಗಳು
ಹಸಿವಿಲ್ಲದೆಯೇ ಪದೇ ಪದೆ ಹೆಚ್ಚಾಗಿ ಜಿಡ್ಡಿನಿಂದ ಕೂಡಿದ ಆಹಾರ ಸೇವನೆ ಮತ್ತು ಎಣ್ಣೆ ಯಲ್ಲಿ ಕರಿದ ತಿಂಡಿ, ತುಪ್ಪ/ಬೆಣ್ಣೆ ಇತ್ಯಾದಿಗಳ ಸೇವನೆ. ಸ್ನೇಹಿತರೇ, ಆಯುರ್ವೇದದ ಪ್ರಕಾರ ‘ಸ್ನಿಗ್ಧಂ ಅಶ್ನೀಯಾತ್’ ಎನ್ನುವುದು ಸಹ ಆಹಾರ ಸೇವನಾ ನಿಯಮವೇ. ಈ ನಿಯಮ ಪಾಲನೆಯು ನಮ್ಮ ಆರೋಗ್ಯವನ್ನು ಸದಾ ಕಾಪಾಡುತ್ತದೆ ಎನ್ನುವುದು ಎಷ್ಟು ಸತ್ಯವೋ, ನಮ್ಮ ಹಸಿವೆಯನ್ನು ಗಮನಿಸದೆ ಮತ್ತು ದೈಹಿಕ ಶ್ರಮವಿಲ್ಲದೆಯೇ ಸೇವಿಸುವ ಜಿಡ್ಡಿನ ಆಹಾರವು ತೊಂದರೆದಾಯಕ ಎನ್ನುವುದೂ ಅಷ್ಟೇ ಸತ್ಯ.
ವ್ಯಾಯಾಮವಿಲ್ಲದೆ ಸೇವಿಸುವ ಜಿಡ್ಡು ಸರಿಯಾಗಿ ಜೀರ್ಣವಾಗದೆ ನಮ್ಮ ರಕ್ತನಾಳಗಳಲ್ಲಿ ಶೇಖರಣೆಯಾಗಿ ನೇರವಾಗಿ ಹೃದಯಕ್ಕೆ ತೊಂದರೆ ಮಾಡಬಹುದು.
ಕಿಂಚಿತ್ತೂ ಜಿಡ್ಡಿಲ್ಲದ ಒಣ ಆಹಾರ ಸೇವನೆಯೂ ಕೆಟ್ಟದ್ದು. ಉದಾಹರಣೆಗೆ, ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಹಾಗಲಕಾಯಿ/ಮೆಂತ್ಯ/ ಕರಿಬೇವಿನ ಸೇವನೆ, ಬಟಾಟೆ, ಬೀ, ಬಟಾಣಿ, ಮೊಳಕೆಕಾಳು, ಹಸಿ ತರಕಾರಿ ಮುಂತಾದ ಪದಾರ್ಥಗಳ ಅತಿ ಸೇವನೆ. ಇದರಿಂದ ಹೃದಯದ ಮಾಂಸಪೇಶಿಗಳಲ್ಲಿನ ಸ್ನಿಗ್ಧತೆ ಕಡಿಮೆಯಾಗಿ ಅದರ ಕಾರ್ಯಕ್ಷಮತೆ ಕುಂದು ತ್ತದೆ.
ಅತಿ ತಂಪಾದ ಪದಾರ್ಥಗಳಾದ ಕೂಲ್ ಡ್ರಿಂಕ್ಸ್, ಐಸ್‌ಕ್ರೀಂ, ಫ್ರಿಜ್ ಪದಾರ್ಥಗಳ ಸೇವನೆ, ಬಿಸಿಲಿನಿಂದ ಬಂದಕೂಡಲೇ ತಂಪಾದ ನೀರನ್ನು ಕುಡಿಯುವುದೂ ಅಹಿತ. ಅತಿಶೀತಲ ಗುಣವು ಸ್ತಂಭನವನ್ನು ಉಂಟುಮಾಡುತ್ತದೆ. ಈ ಗುಣವು ಹೃದಯಕ್ಕೆ ಹಾನಿಕರ.
ಹಾಲು+ಮೊಸರು, ಮೀನು+ಹಾಲು, ಜೇನುತುಪ್ಪ+ಬಿಸಿನೀರು, ಹಾಲು+ಉಪ್ಪು/ ಉಪ್ಪಿನ ಪದಾರ್ಥಗಳು ಮುಂತಾದ ವಿರುದ್ಧ ಸ್ವಭಾವದ ದ್ರವ್ಯಗಳ ಸೇವನೆ. ಇಂಥ ವಿರುದ್ಧಾ ಹಾರ ಗಳು ದೇಹದಲ್ಲಿ ಆಮವಿಷವನ್ನು ಉತ್ಪತ್ತಿ ಮಾಡಿ ಹೃದಯದ ಸ್ವಾಸ್ಥ್ಯವನ್ನು ಹಾಳು ಮಾಡುತ್ತವೆ.
ಅಭ್ಯಾಸವಿರದ ಹೊಸ ಪದಾರ್ಥಗಳನ್ನುಇದ್ದಕ್ಕಿದ್ದಂತೆ ಹೆಚ್ಚು ಸೇವಿಸುವುದು. ಉದಾ: ಸೋಯಾ, ಚೈನೀಸ್ ಫುಡ್, ಪಿಜ್ಜಾ, ಆಲಿವ್ ಆಯಿಲ್ ಇತ್ಯಾದಿ. ತಲತಲಾಂತರದಿಂದ ನಮ್ಮ ಹಿರಿಯರು ಸೇವಿಸುತ್ತಾ ಬಂದಿರುವ ಆಹಾರವು ನಮಗೆ ಸದಾ ಕ್ಷೇಮ.
ಪ್ರಮಾಣ ಮೀರಿದ ಅಧಿಕ ಆಹಾರ ಸೇವನೆ ಮತ್ತು ಹಿಂದೆ ಸೇವಿಸಿದ ಆಹಾರವು ಜೀರ್ಣ ವಾಗುವ ಮುನ್ನವೇ ಮತ್ತೊಮ್ಮೆ ಆಹಾರ/ಪಾನೀಯಗಳ ಸೇವನೆಯೂ ಹೃದ್ರೋಗಕ್ಕೆ ಕಾರಣ. ಉದಾಹರಣೆಗೆ ಬೆಳಗ್ಗೆ ಎದ್ದ ಕೂಡಲೇ ಗಂಜಿ ಕುಡಿಯುವುದು, ಸ್ವಲ್ಪ ಹೊತ್ತಿಗೆಯೇ ತಿಂಡಿ ತಿಂದು ಮತ್ತೆ ನಂತರ ಒಂದು ಬಟ್ಟಲು ಹಣ್ಣನ್ನು ಸೇವಿಸುವುದು.
ಅದು ಜೀರ್ಣವಾಗುವ ಮುನ್ನವೇ ಊಟದ ಸಮಯವಾಯಿತೆಂದು ಊಟ ಮಾಡುವುದು. ಮತ್ತೆ ಸ್ವಲ್ಪ ಸಮಯಕ್ಕೇ ಕಾಫಿ ಮತ್ತು ಬಿಸ್ಕೆಟ್ ಸೇವನೆ, ಸಂಜೆ ಲಘು ಉಪಾಹಾರ ಸೇವಿಸಿ ಮತ್ತೆ ರಾತ್ರಿ ಭೋಜನವನ್ನು ಸೇವಿಸಿ, ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಮಲಗುವುದು, ‘ನ್ಯೂಟ್ರಿಷನ್’ ಹೆಸರಿನಲ್ಲಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿ ಕೊಳ್ಳುತ್ತಿರುವ ಪರಿ!
ಅಧಿಕ ಖಾರ, ಉಷ್ಣ, ತೀಕ್ಷ್ಣ ಆಹಾರಗಳ ನಿರಂತರ ಸೇವನೆ. ಅಧಿಕ ಜನರಿಗೆ ರುಚಿಯೆಂದರೆ ಕೇವಲ ಖಾರವಷ್ಟೇ. ಆಯುರ್ವೇದದ ಪ್ರಕಾರ ನಿತ್ಯವೂ ಯಾವುದೋ ಒಂದು ರುಚಿಯನ್ನೇ ಸೇವಿಸುವುದು ದೌರ್ಬಲ್ಯಕರ. ಆದ್ದರಿಂದ ಹಿತವಾಗಿ ಬೆರೆತ ಷಡ್ರಸಭೋಜನವೇ ಸದಾ ಸುಖಕರ.
ತಂಬಾಕು, ಧೂಮಪಾನ, ಅಡಕೆ, ಮದ್ಯಪಾನ ಮುಂತಾದ ಮಾರಕ ಪದಾರ್ಥಗಳ ಸೇವನೆ. ಇದು ಪಾಕವಾಗುವ ಮುನ್ನವೇ ದೇಹವನ್ನು ವ್ಯಾಪಿಸಿ, ನೇರವಾಗಿ ಹೃದಯವನ್ನು ಪ್ರವೇಶಿಸಿ ಅದನ್ನು ಶಿಥಿಲ ಮಾಡುವ ಗುಣ ಹೊಂದಿದೆ. ಅತಿಯಾದ ಕಾಫಿ/ಟೀ ಸೇವನೆಯ ಬಗ್ಗೆಯೂ ಎಚ್ಚರವಿರಲಿ.
ವಿಹಾರಜನ್ಯ ಕಾರಣಗಳು
ಅತ್ಯಧಿಕ ಮಾನಸಿಕ ಒತ್ತಡ, ಶೋಕ, ಕ್ರೋಧಗಳಂಥ ಮಾನಸಿಕ ವಿಕಾರಗಳ ವೃದ್ಧಿ. ಅತಿ ಉಪವಾಸ, ಬಾಯಾರಿಕೆ, ಮಲ-ಮೂತ್ರಾದಿ ಶಾರೀರಿಕ ವೇಗಗಳನ್ನು ಬಲವಂತವಾಗಿ ತಡೆ ಯುವುದು. ಅತಿ ಜಾಗರಣೆ, ರಾತ್ರಿ ಕೆಲಸ, ನಿದ್ರೆಯಿಲ್ಲದ ನಿರಂತರ ಕೆಲಸ, ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ನಿಧಾನವಾಗಿ ಏಳುವ ಅಭ್ಯಾಸ.
‘ದಿವಾಸ್ವಪ್ನ’- ಅಂದರೆ ಹಗಲು ಹೊತ್ತಿನಲ್ಲಿ ನಿದ್ರಿಸುವುದು ಅತ್ಯಂತ ಅನಾರೋಗ್ಯಕರ. ನಮ್ಮಲ್ಲಿ ಹಲವರಿಗೆ ಮಧ್ಯಾಹ್ನ ಊಟವಾದ ನಂತರ ನಿದ್ರೆ ಬೇಕೇ ಬೇಕು. ಆದರೆ, ಈ ಅಭ್ಯಾಸವು ಹೃದ್ರೋಗ, ಪ್ರಮೇಹಗಳಂಥ ಕಾಯಿಲೆಗಳಿಗೆ ಮುಖ್ಯವಾದ ಕಾರಣವೆಂದು ಮರೆಯಬೇಡಿ. ಸ್ನೇಹಿತರೇ, ನಿದ್ರೆಗೂ ಹೃದಯಕ್ಕೂ ನೇರವಾದ ಸಂಬಂಧವಿದೆ. ಸರಿಯಾದ ನಿದ್ರೆಯು ಹೃದಯವನ್ನು ಪೋಷಿಸುತ್ತದೆ. ರಾತ್ರಿ ಜಾಗರಣೆ/ಅಕಾಲಿಕ ನಿದ್ರೆ/ಅನಿಯಮಿತ ನಿದ್ರೆ/ಹಗಲು ನಿದ್ರೆ- ಇವೆಲ್ಲವೂ ಹೃದಯವನ್ನು ದುರ್ಬಲಗೊಳಿಸಿ ವಿವಿಧ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತವೆ!
ಅತಿ ವ್ಯಾಯಾಮ, ಮಿತಿ ಮೀರಿದ ಶ್ರಮ- ಅತಿಯಾದ ‘ವರ್ಕ್ ಔಟ್’ ಹೆಸರಿನಲ್ಲಿ ಹೃದಯ ವನ್ನು ದಂಡಿಸದಿರಿ, ಜೋಪಾನ! ಬೇರೆ ಯಾರೋ ನಿಗದಿಪಡಿಸಿದ ಆ 10000 ಸ್ಟೆಪ್‌ಗಳ ಗುರಿಯನ್ನು ಮುಟ್ಟುವ ತರಾತುರಿಯಲ್ಲಿ ಹೃದಯವನ್ನು ಕಷ್ಟಕ್ಕೆ ಸಿಲುಕಿಸುವುದು ಬೇಡ. ನಿಮ್ಮ ದೈಹಿಕ ಸಾಮರ್ಥ್ಯಕ್ಕನುಗುಣವಾಗಿ ನಿಮ್ಮ ವ್ಯಾಯಾಮದ ಗುರಿಯನ್ನು ನೀವೇ ನಿಗದಿಪಡಿಸಿಕೊಂಡರೆ ಕ್ಷೇಮ!
ತುಂಬ ದಿನಗಳಿಂದ ಕಾಡುತ್ತಿರುವ ಮಲಬದ್ಧತೆಯೂ ಹೃದ್ರೋಗಕ್ಕೆ ಕಾರಣವಾಗಬಹುದು. ನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಯಾವುದೇ ಬಾಹ್ಯ ಪ್ರಚೋದನೆಯಿಲ್ಲದೆ ಮಲ ವಿಸರ್ಜ ನೆಯಾಗುವುದು ಸ್ವಾಸ್ಥ್ಯದ ಲಕ್ಷಣ. ಇದನ್ನು ಸರಿಪಡಿಸಿಕೊಂಡರೆ ಎಷ್ಟೋ ರೋಗಗಳಿಂದ ಬಚಾವ್! ಅಂತೆಯೇ ಅಧೋವಾತದ ಅವರೋಧ- ಅಂದರೆ ಹೂಸನ್ನು ಬಲವಂತವಾಗಿ ತಡೆಯುವುದೂ ಹೃದಯಕ್ಕೆ ತೊಂದರೆದಾಯಕ!
ಆಹಾರ-ವಿಹಾರಜನ್ಯ ಕಾರಣಗಳು
ತಿಂದ ಕೂಡಲೇ ವ್ಯಾಯಾಮ ಮಾಡುವುದು- ‘ಪ್ರಿ-ವರ್ಕ್‌ಔಟ್ ಸ್ನ್ಯಾಕ್’ ಟ್ರೆಂಡ್‌ಗೆ ಮರುಳಾ ಗಬೇಡಿ! ಎಂದಿಗೂ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡತಕ್ಕದ್ದು!
ನೀರು ಕುಡಿದ ಕೂಡಲೇ ವ್ಯಾಯಾಮ ಮಾಡುವುದು ಅಥವಾ ನೀರು ಕುಡಿಯುತ್ತಾ ಕುಡಿ ಯುತ್ತಾ ವ್ಯಾಯಾಮ ಮಾಡುವುದು- ಹೈಡ್ರೇಶನ್ ಅವಶ್ಯಕ, ಆದರೆ ವ್ಯಾಯಾಮ ಮಾಡು ವಾಗಲ್ಲ! ವಾಟರ್ ಯೋಗ/ಬಿಯರ್ ಯೋಗ- ಇವೆಲ್ಲವೂ ಅಧಃಪತನದ ನೇರ ಮಾರ್ಗ ಗಳು! ಮಾತನಾಡುತ್ತಾ, ಹರಟುತ್ತಾ, ಓಡಾಡುತ್ತಾ ಗಬಗಬನೆ ಆಹಾರ ಸೇವಿಸುವುದು.
ಆಹಾರವನ್ನು ಸೇವಿಸಿದ ಕೂಡಲೇ ಸ್ನಾನ ಮಾಡುವುದು. ಒಳ್ಳೆಯ ನಿದ್ರೆಗಾಗಿ ರಾತ್ರಿ ಭೋಜನ ವಾದ ಮೇಲೆ ಸ್ನಾನ ಮಾಡಿ ಮಲಗುವುದು ಬೇಡ!
ಆಹಾರವನ್ನು ಸೇವಿಸಿದ ಕೂಡಲೇ ಪ್ರಯಾಣ ಮಾಡುವುದು.
ಮಾನಸಿಕ ಒತ್ತಡ-ಉದ್ವೇಗದಲ್ಲಿ ಆಹಾರ ಸೇವನೆ.
ಅನ್ಯ ವ್ಯಾಧಿಗಳಿಂದ ದೇಹ ಕೃಶವಾದಾಗ ಅಧಿಕ ಶ್ರಮಪಡುವುದು.
ಹೀಗೆ, ಮೇಲಿನ ಕಾರಣಗಳ ಸಂಯೋಗದಿಂದ ವಿವಿಧ ಹೃದ್ರೋಗಗಳು ಬರಬಹುದು.
ಹೃದ್ರೋಗದ 5 ಪ್ರಕಾರಗಳು
೧. ವಾತಜ ಹೃದ್ರೋಗ: ಈ ಪ್ರಕಾರದಲ್ಲಿ ಹೃತ್ ಸ್ತಂಭನ, ವಿವಿಧ ವೇದನೆಗಳು ಕಂಡು ಬರುತ್ತವೆ. ಹೃದಯಭಾಗದಲ್ಲಿ ಚುಚ್ಚಿದಂತೆ, ಸೀಳಿದಂತೆ, ಹಿಂಡಿದಂತೆ, ಜಜ್ಜಿದಂತೆ ಅನಿ ಸುವ ನೋವುಗಳು, ಹೃದ್ರವ (ಪಲ್ಪಿಟೇಶನ್), ಶ್ವಾಸಕೃಚ್ಚ್ರತೆ, ಭಯ, ಶೋಕ, ಅನಿದ್ರೆ, ಹೃತ್ ಶೂನ್ಯತೆ ಜತೆಗೆ ಇತರ ಶರೀರಭಾಗಗಳಲ್ಲಿ ನೋವು.
೨. ಪಿತ್ತಜ ಹೃದ್ರೋಗ: ಬಾಯಾರಿಕೆ, ತಲೆ ತಿರುಗುವಿಕೆ, ಎದೆಯುರಿ, ಬೆವರು, ಹುಳಿಪಿತ್ತ ವಾಂತಿ, ಆಯಾಸ, ಜ್ವರ, ಎಚ್ಚರ ತಪ್ಪುವಿಕೆ- ಈ ಲಕ್ಷಣಗಳ ಜತೆಗೆ ಹೃತ್ ಶೂಲ ಕಂಡು ಬರುತ್ತದೆ.
೩. ಕಫಜ ಹೃದ್ರೋಗ: ಹೃದಯದಲ್ಲಿ ಕಲ್ಲು ಕಟ್ಟಿದಂತೆ ಭಾರವಾಗುವಿಕೆ, ಅಗ್ನಿಮಾಂದ್ಯ, ಆಲಸ್ಯ, ನಿದ್ರೆ, ಕೆಮ್ಮು, ಅರುಚಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
೪. ಸನ್ನಿಪಾತಜ ಹೃದ್ರೋಗ: ಮೇಲಿನ ಮೂರೂ ವಿಧಗಳ ಮಿಶ್ರ ಲಕ್ಷಣಗಳುಂಟಾಗುತ್ತವೆ.
೫. ಕೃಮಿಜ ಹೃದ್ರೋಗ: ಹೃದಯದಲ್ಲಿ ಕತ್ತರಿಸುವಂಥ ವೇದನೆಯ ಜತೆಗೆ ತಲೆ ತಿರುಗುವಿಕೆ,
ತುರಿಕೆ, ಕಫಸ್ರಾವ, ಶರೀರದ ಶೋಷ, ಕಣ್ಣು ಕಪ್ಪಾಗುವಿಕೆ ಇತ್ಯಾದಿ.
ಹೃದ್ರೋಗದಲ್ಲಿನ ಸಾಮಾನ್ಯ ಲಕ್ಷಣಗಳು
ಪದೇಪದೆ ಎದೆಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು
ತಲೆ ತಿರುಗುವಿಕೆ
ಎದೆ ಹಿಡಿದ ಹಾಗೆ ಅನಿಸುವಿಕೆ
ಕಾರಣವಿಲ್ಲದೆ ಎದೆಯ ಬಡಿತ ಹೆಚ್ಚಾಗುವುದು
ಇದ್ದಕಿದ್ದ ಹಾಗೆ ಹೆದರಿಕೆ, ದುಃಖವಾಗುವಿಕೆ
ಸ್ವಲ್ಪ ಶಬ್ದವಾದರೂ ಗಾಬರಿಯಾಗುವಿಕೆ
ಉಸಿರಾಟದ ಸಮಸ್ಯೆ
ಹಸಿವಿಲ್ಲದಿರುವುದು
ಆಹಾರದಲ್ಲಿ ರುಚಿಯಿಲ್ಲದಿರುವುದು
ಹೃದಯಕ್ಕೆ ಇವುಗಳು ಹೃದ್ಯ
ಹಿತಮಿತವಾದ, ಒಳ್ಳೆಯ ಜಿಡ್ಡಿನಿಂದ ಕೂಡಿದ ತಾಜಾ ಆಹಾರ, ಷಡ್ರಸೋಪೇತ ಸಂತುಲಿತ ಆಹಾರವು ಸದಾಕಾಲ ಹೃದಯವನ್ನು ಸಂರಕ್ಷಿಸುತ್ತದೆ! ನಮ್ಮ ಹಸಿವನ್ನು ಗಮನಿಸಿ ಇವನ್ನು ಸೇವಿಸಿದಾಗ ಅಮೃತವೇ ಆಗಿಬಿಡುತ್ತವೆ!
ಹಾಲು-ತುಪ್ಪಗಳ ನಿತ್ಯ ಬಳಕೆ ಹೃದಯಕ್ಕೆ ರಸಾಯನವಿದ್ದಂತೆ!
ಪಡವಲಕಾಯಿ, ಹಿರೇಕಾಯಿ, ಸೋರೆಕಾಯಿ, ಬೂದು ಗುಂಬಳ, ಎಳೆಯ ಮೂಲಂಗಿ, ಹೆಸರುಬೇಳೆ, ಹುರಳಿ, ಕೆಂಪಕ್ಕಿ, ಬೆಲ್ಲ, ಶುಂಠಿ, ಬೆಳ್ಳುಳ್ಳಿ ಎಲ್ಲವೂ ಹೃದಯಕ್ಕೆ ಪಥ್ಯ!
ಮಜ್ಜಿಗೆ ಬಳಸಿ, ಮೊಸರಿನಿಂದ ದೂರವಿರಿ!
ದಾಳಿಂಬೆ, ನೆಲ್ಲಿಕಾಯಿ, ಕೋಕಮ, ಒಣದ್ರಾಕ್ಷಿ ಮುಂತಾದ ಹಣ್ಣುಗಳ ಸೇವನೆಯು ಹೃದ್ರೋಗಿಗಳಿಗೆ ಹಿತಕರ. ಈ ಮೇಲೆ ಹೇಳಿದ ಹಣ್ಣುಗಳನ್ನು ಪೂರ್ತಿ ವರ್ಷವೂ ಬಳಸ ಬಹುದು. ಈ ಹಣ್ಣುಗಳ ವಿಶೇಷತೆ ಅಂದರೆ ಇವುಗಳು ಜ್ವರದಲ್ಲಿಯೂ ಪಥ್ಯ!
ನಿತ್ಯವೂ ಅಭ್ಯಂಗ ಸ್ನಾನ ಮಾಡಿ ನಮ್ಮ ದೈಹಿಕ ಶಕ್ತ್ಯಾನುಸಾರ ವ್ಯಾಯಾಮ ಮಾಡು ವುದು ಹೃದಯವನ್ನು ಬಲಗೊಳಿಸಿ ನಮ್ಮ ಆಯುಷ್ಯವನ್ನು ಹೆಚ್ಚಿಸುವುದರಲ್ಲಿ ಯಾವು ದೇ ಸಂಶಯವಿಲ್ಲ. ವ್ಯಾಯಾಮಗಳಲ್ಲಿ ಯೋಗ, ವಾಕಿಂಗ್ ಒಳ್ಳೆಯದು.
ವ್ಯಾಯಾಮದ ನಂತರ ಪೂರ್ತಿ ಶರೀರಕ್ಕೆ ಕೆಲ ನಿಮಿಷಗಳು ವಿಶ್ರಾಂತಿ ನೀಡಿ ನಂತರ ಸ್ವಲ್ಪ ಸಮಯ ಪ್ರಾಣಾಯಾಮ ಮಾಡುವುದು ಮನಸ್ಸಿಗೂ ಹೃದಯಕ್ಕೂ ಹಿತ. ನಿತ್ಯವೂ ನಮ್ಮ ದಿನಚರಿಯಲ್ಲಿ ‘ಸ್ಟ್ರೆಸ್ ರಿಲೀಸ್’ ಮಾಡಿಕೊಳ್ಳುವುದು ಅವಶ್ಯಕವೂ, ಅನಿವಾರ್ಯವೂ ಆಗಿಬಿಟ್ಟಿದೆ.
ರಾತ್ರಿ ಬೇಗ ಮಲಗಿ ಮುಂಜಾನೆ ಸೂರ್ಯೋದಯದ ಮುನ್ನ ಏಳುವುದು ಹೃದಯದ ರಕ್ಷಾಕವಚ.
ಸದಾ ಮನಸ್ಸನ್ನು ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯಗಳಿಂದ ದೂರ ವಿಟ್ಟು, ದುಃಖದಿಂದ ರಕ್ಷಿಸಿಕೊಂಡು ಸಚ್ಚಿಂತನೆಯಲ್ಲಿ ತೊಡಗಬೇಕು. ನಿತ್ಯದ ಧ್ಯಾನ, ಮಂತ್ರ, ಪಾರಾಯಣ ಮತ್ತು ಸತ್ಸಂಗದಿಂದ ಹೃದಯವು ಪುಷ್ಟಿಹೊಂದುತ್ತದೆ.
ಅಹಿಂಸೆ, ಪ್ರೀತಿ, ತಾಳ್ಮೆ, ಸತ್ಯ ಆಚರಣೆ, ಕರುಣೆ, ವೀರ್ಯಪಾಲನೆ, ಜ್ಞಾನದಲ್ಲಿ ಆಸಕ್ತಿ ಮತ್ತು ತತ್ತ್ವ ಚಿಂತನೆಯನ್ನು ಆಚರಿಸುತ್ತಾ, ಅತಿಯಾದ ಇಂದ್ರಿಯಾಸಕ್ತಿಯನ್ನು ತ್ಯಜಿಸಿ ದೈವಿಕ ಚಿಂತನೆಯಲ್ಲಿ ತೊಡಗಿದಾಗ ಉಂಟಾದ ಮನಃ ಪ್ರಹ್ಲಾದನೆಯು ನಿಮ್ಮ ಹೃದಯಕ್ಕೆ ಎರೆಯುವುದು ನೂರಾರು ವರುಷಗಳ ಆಯುಷ್ಯಧಾರೆ!