ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಫಲಗಳ ರಾಜ ಮಾವು, ಆದರೆ ಅವನು ತರದಿರಲಿ ನೋವು

ವಿವಿಧ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸಿ ಕೃತ್ರಿಮವಾಗಿ ಹಣ್ಣು ಮಾಡಿದ ಮಾವಿನ ಗುಣಗಳು ಬೇರೆಯದಾಗಿರುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್/ ಎಥಿಲಿನ್ ಗ್ಯಾಸ್ ಮುಂತಾದ ರಾಸಾ ಯನಿಕಗಳ ಉಪಯೋಗವು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡಿ, ಆರೋಗ್ಯಕ್ಕೆ ಹಾನಿಕರ ವಾಗುವಂತೆ ಮಾಡುತ್ತದೆ. ಈ ರೀತಿಯ ಹಣ್ಣುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡಿ ಶರೀರಬಾವು, ಉರಿಯೂತ, ಕಣ್ಣಿನ ಉರಿ, ನೀರು ಜಿನುಗು ವುದು ಇತ್ಯಾದಿಗಳಲ್ಲದೆ ಕ್ಯಾನ್ಸರ್‌ ನಂಥ ರೋಗ ಗಳಿಗೂ ಕಾರಣವಾಗುತ್ತದೆ

ಫಲಗಳ ರಾಜ ಮಾವು, ಆದರೆ ಅವನು ತರದಿರಲಿ ನೋವು

ಅಂಕಣಗಾರ್ತಿ ಡಾ.ಸಾಧನಶ್ರೀ

Profile Ashok Nayak Mar 29, 2025 8:04 AM

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಒಮ್ಮೆ, ನಾರದ ಋಷಿಗಳು ಶಿವ ಮತ್ತು ಪಾರ್ವತಿಗೆ ವಿಶೇಷವಾದ ಮಾವಿನ ಹಣ್ಣನ್ನು ಅರ್ಪಿಸಿ, ಅದನ್ನು ತಿಂದವರಿಗೆ ಅಸಾಧಾರಣ ಜ್ಞಾನ ಮತ್ತು ಬುದ್ಧಿವಂತಿಕೆ ಸಿಗುತ್ತದೆ ಎಂದು ಭರವಸೆ ನೀಡಿದರು. ಶಿವ ಮತ್ತು ಪಾರ್ವತಿಯರಿಗೆ ತಮ್ಮ ಮಕ್ಕಳಾದ ಗಣೇಶ ಅಥವಾ ಸುಬ್ರಹ್ಮಣ್ಯರಲ್ಲಿ ಯಾರು ಮಾವಿನ ಹಣ್ಣನ್ನು ಪಡೆಯಬೇಕೆಂದು ನಿರ್ಧರಿಸಲು ಸಾಧ್ಯವಾಗದೆ, ಒಂದು ಸ್ಪರ್ಧೆಯನ್ನು ಪ್ರಸ್ತಾಪಿಸಿದರು- “ಇಡೀ ಜಗತ್ತನ್ನು ಮೂರು ಬಾರಿ ಸುತ್ತುವರಿದು ಯಾರು ಮೊದಲು ಹಿಂದಿರುಗುವರೋ ಅವರು ಮಾವಿನಹಣ್ಣನ್ನು ಗೆಲ್ಲು ತ್ತಾರೆ" ಎಂದು. ತಕ್ಷಣವೇ ಸುಬ್ರಹ್ಮಣ್ಯನು ತನ್ನ ನವಿಲಿನ ಮೇಲೆ ಏರಿ, ಶೀಘ್ರದಲ್ಲಿಯೇ ಕೆಲಸವನ್ನು ಪೂರ್ಣಗೊಳಿಸಲು ಹೊರಟನು.

ತಾನೇ ಮೊದಲು ಹಿಂದಿರುಗುವೆನೆಂಬ ಖಾತ್ರಿ ಅವನಿಗೆ. ಇತ್ತ ಗಣೇಶನು ಒಂದು ಕ್ಷಣ ದೀರ್ಘವಾಗಿ ಯೋಚಿಸಿದನು. ಗಣೇಶನು, ಲೋಕವನ್ನು ಸುತ್ತುವ ಸ್ಪರ್ಧೆಯ ಬದಲು, ತನ್ನ ಹೆತ್ತವರಾದ ಶಿವ ಮತ್ತು ಪಾರ್ವತಿಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಿದನು. ಅವರೇ ತನ್ನ ಇಡೀ ಪ್ರಪಂಚ ಎಂದು ಹೇಳಿದನು. ಇದನ್ನು ಕೇಳಿದ ಶಿವ-ಪಾರ್ವತಿಯರು ಅತ್ಯಂತ ಸಂತುಷ್ಟರಾದರು.

ಇದನ್ನೂ ಓದಿ: Dr Sadhanashree Column: ದಶವಿಧ ಪಾಪಗಳು ತರದಿರಲಿ ಸ್ವಾಸ್ಥ್ಯಕ್ಕೆ ಧಕ್ಕೆ !

ಸುಬ್ರಹ್ಮಣ್ಯನು ಹಿಂದಿರುಗಿದಾಗ, ಗಣೇಶನು ಆಗಲೇ ಸ್ಪರ್ಧೆಯನ್ನು ಗೆದ್ದು ಮಾವಿನ ಹಣ್ಣ ನ್ನು ಹಿಡಿದಿರುವುದನ್ನು ನೋಡಿ ಆಶ್ಚರ್ಯಚಕಿತನಾದನು. ಅದು ಹೇಗೆ ಸಾಧ್ಯ ವಾಯಿತು ಎಂದು ಸುಬ್ರಹ್ಮಣ್ಯನು ಕೇಳಿದಾಗ ಪಾರ್ವತಿಯು, “ಹೆತ್ತವರೇ ತನ್ನ ಇಡೀ ಜಗತ್ತನ್ನು ಪ್ರತಿ ನಿಧಿಸುತ್ತಾರೆಂದು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ ಗಣೇಶನಿಗಿದೆ" ಎಂದು ವಿವರಿಸಿ, ಕುಟುಂಬ ಮತ್ತು ಭಕ್ತಿಯ ಮಹತ್ವವನ್ನು ಒತ್ತಿ ಹೇಳಿದಳು.

ಅರೆ! ಇದೇನಪ್ಪಾ, ಇವತ್ತು ಕಥೆ ಹೇಳ್ತಿದ್ದಾರಲ್ಲಪ್ಪಾ ಅಂತ ಯೋಚನೆ ಬಂತಾ? ವಿಷಯ ಏನಪ್ಪಾ ಅಂದ್ರೆ ನಾರದರು ಮಾವಿನ ಹಣ್ಣನ್ನೇ ಏಕೆ ಆಯ್ಕೆ ಮಾಡಿಕೊಂಡರು? ಜಗತ್ತಿನಲ್ಲಿ ನೂರಾರು ಬಗೆಯ ಹಣ್ಣುಗಳು ಲಭ್ಯವಿವೆ. ಆದರೆ ಮಾವಿನ ಹಣ್ಣನ್ನೇ ಅವರು ತಂದು ಕೊಟ್ಟರೆಂದರೆ ಅದರ ಹಿಂದೆ ಏನೋ ವಿಶೇಷತೆ ಇರಬೇಕಲ್ವಾ ?! ಖಂಡಿತ ಇದೆ.

ಮಾವಿನ ಹಣ್ಣು, ಹಣ್ಣುಗಳ ರಾಜ. ಕಾರಣ, ಈ ಹಣ್ಣಿಗೆ ಅನೇಕ ಒಳ್ಳೆಯ ಗುಣಗಳಿದ್ದು, ದೇಹವನ್ನಷ್ಟೇ ಅಲ್ಲದೆ ಮನಸ್ಸನ್ನೂ ಉತ್ತಮವಾಗಿ ಪೋಷಿಸುವ ಸಾಮರ್ಥ್ಯ ಇದೆ. ಹಾಗಾಗಿಯೇ ಇದು ನಾರದರ ಆಯ್ಕೆ. ಮತ್ತೆ ಇನ್ನೇನು ಮಾವಿನ ಹಣ್ಣಿನ ಸುಗ್ಗಿ ಪ್ರಾರಂಭ ವಾಯಿತಲ್ಲವೇ, ಆದ್ದರಿಂದ ಮಾವಿನ ಹಣ್ಣಿನ ವಿಷಯವನ್ನು ಆಯುರ್ವೇದದಲ್ಲಿ ತಿಳಿಸಿ ರುವ ಹಾಗೆ ಅರ್ಥಮಾಡಿಕೊಂಡು ಉಪಯೋಗಿಸಿದರೆ ಯಾವುದೇ ಆರೋಗ್ಯದ ಸಮಸ್ಯೆ ಗಳಿಲ್ಲದೆ ಅದರ ರುಚಿಯನ್ನು ಸವಿಯಲು ಸಹಕಾರಿಯಾಗಬಲ್ಲದು. ಆ ಉದ್ದೇಶವಿಟ್ಟು ಕೊಂಡೇ ಈ ಲೇಖನವನ್ನು ಸಾದರಪಡಿಸಲಾಗಿದೆ!

Mango ok

‘ಮಾವು’ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವನ್ನು ಭಾರತ ದೇಶದಲ್ಲಿ ಹೊಂದಿದೆ. ಮಾವು ಭಾರತದ ಫಲಗಳ ಪೈಕಿ ಅತ್ಯಂತ ಜನಪ್ರಿಯವಾದದ್ದು. ಇದು ಪ್ರಪಂಚದ ಅತ್ಯುನ್ನತವಾದ ಹಣ್ಣಿನ ಮರಗಳ ಪಂಕ್ತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಮಾವು ಪ್ರಧಾನವಾಗಿ ಉಷ್ಣವಲಯದಲ್ಲಿ ಸುಮಾರು 25 ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುವಂಥ ಹಾಗೂ ವರ್ಷದ ಜೂನ್‌ನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಮಾತ್ರ ಮಳೆ ಬೀಳುವಂಥ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ.

ಮಾವಿನ ಹೂವು ಅರಳುವ ಸಮಯದಲ್ಲಿ ಮಳೆ, ಗಾಳಿ, ಮಂಜು, ಮೋಡ ಕವಿದ ವಾತಾ ವರಣ ಇರಬಾರದು. ಹಣ್ಣುಗಳು ಮಾಗುವ ವೇಳೆಯಲ್ಲಿ ಮಳೆ ಬೀಳಬಾರದು. ಮಾವು ಹೆಚ್ಚಿನ ಚಳಿಯನ್ನು ಸಹಿಸದು. ಮಾವಿನ ಮರದಲ್ಲಿ ವರ್ಷಕೊಮ್ಮೆ ಬಹುತೇಕ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಸುಮಾರು 6 ರಿಂದ 8 ವಾರಗಳ ಕಾಲದಲ್ಲಿ ಹೂವು ಅರಳುವುದು.

ನಂತರ ಕಾಯಿ ಬಿಟ್ಟು ಹಣ್ಣು ಪಕ್ವ ಸ್ಥಿತಿಗೆ ಬರಲು ಸುಮಾರು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಅವಶ್ಯಕ. ದಕ್ಷಿಣ ಭಾರತದಲ್ಲಿ, ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಮಾವಿನ ಹಣ್ಣಿನ ಸುಗ್ಗಿ ಆರಂಭವಾಗಿ ಮೇ ತಿಂಗಳ ವೇಳೆಗೆ ಮುಗಿಯುತ್ತದೆ. ಇದನ್ನು ವಿವರಿಸುವ ಹಿಂದಿನ ತಾತ್ಪರ್ಯವೆಂದರೆ ಮಾವಿನ ಹಣ್ಣು ವರ್ಷಕೊಮ್ಮೆ ಸಿಗುವ ಹಣ್ಣು. ಹಾಗಾಗಿ ಅದನ್ನು ಆ ಕಾಲದಲ್ಲಿ ತಿನ್ನುವುದು ಸದಾ ಆರೋಗ್ಯಕರ.

ಕೃತ್ರಿಮವಾಗಿ ಅದನ್ನು ಸಂಗ್ರಹಿಸಿ, ಅಕಾಲ ಸೇವನೆ ಮಾಡಿದಾಗ ಅದರಿಂದ ತೊಂದರೆ ತಪ್ಪಿದ್ದಲ್ಲ. ಆಯುರ್ವೇದಲ್ಲಿ ಮಾವಿನ ಹಣ್ಣಿಗೆ ಬಹಳ ಸುಂದರವಾದ ಸಂಸ್ಕೃತ ಹೆಸರು ಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಮುಖ್ಯವಾದವು: ಆಮ್ರಃ- ಎಲ್ಲರಿಗೂ ಇಷ್ಟ ವಾಗುವ ಹಣ್ಣು; ಚೂತಃ- ಮಾವಿನ ಹಣ್ಣು ರಸಭರಿತ ಮತ್ತು ಹಣ್ಣಾಗಿ, ತೊಟ್ಟು ಕಳಚಿ ಮರದಿಂದ ಉದುರುವುದು; ರಸಾಲಃ- ಮಾವಿನ ಹಣ್ಣು ಅದರ ಉತ್ತಮವಾದ ರಸಕ್ಕೆ ಪ್ರಸಿದ್ಧ; ಅತಿ ಸೌರಭಃ- ಮಾವಿನ ಹೂವು ಮತ್ತು ಹಣ್ಣು ವಿಶಿಷ್ಟವಾದ ಸುಗಂಧದಿಂದ ಕೂಡಿರುತ್ತದೆ; ಕಾಮಂಗಃ- ಮಾವಿನ ಹಣ್ಣು ವೀರ್ಯವರ್ಧಕವಾಗಿದೆ; ಮಧುದೂತಃ- ವಸಂತ ಋತುವಿನ ಆಗಮನದ ಪ್ರತೀಕವಾಗಿದೆ ಮಾವು.

ಇನ್ನು, ಮಾವಿನ ಮರದ ವಿವಿಧ ಭಾಗಗಳ ಉಪಯೋಗಗಳ ಬಗ್ಗೆ ಸ್ವಲ್ಪ ತಿಳಿದು ಕೊಳ್ಳೋಣ: ಮಾವಿನ ಚಿಗುರು: ಇದು ಒಗರು, ಸಿಹಿ ರುಚಿ ಉಳ್ಳದ್ದು. ಕಫ-ಪಿತ್ತ ದೋಷ ಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ವಸಂತ ಋತುವಿನಲ್ಲಿ ಇದನ್ನು ಉಪಯೋಗಿಸಿ ತಂಬುಳಿ, ಚಟ್ನಿಯನ್ನು ಸೇವಿಸುವುದು ಒಳ್ಳೆಯದು. ಇದು ದೇಹದಲ್ಲಿನ ಉರಿಯನ್ನು ಕಡಿಮೆ ಮಾಡುತ್ತದೆ.

ಮಾವಿನ ಹೂವು: ಇದು ತಂಪಾಗಿಸುವ ಸ್ವಭಾವವನ್ನು ಹೊಂದಿರುವ ಕಾರಣ, ಮಲ-ಮೂತ್ರಗಳನ್ನು ಬಂಧಿಸುವ ಗುಣ ಹೊಂದಿದೆ. ಇದು ವಾತಕರವಾಗಿರುವುದರಿಂದ ದೇಹ ವನ್ನು ಒಣಗಿಸುತ್ತದೆ. ಮಾವಿನ ಹೂವುಗಳು ಅತಿಸಾರ ಮತ್ತು ಆಮಶಂಕೆಗಳಿಗೆ ಉತ್ತಮ ಔಷಧಿ. ಪ್ರಮೇಹ ರೋಗದಲ್ಲಿಯೂ ಹಿತ. ರಕ್ತದುಷ್ಟಿಯನ್ನು ಸರಿಪಡಿಸುತ್ತದೆ.

ಅಡುಗೆಯಲ್ಲಿ ಮಾವಿನ ಹೂವನ್ನು ತುಪ್ಪ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಹುರಿದು ತಂಬುಳಿ, ಚಟ್ನಿ ಅಥವಾ ಪಳದ್ಯಗಳಲ್ಲಿ ಬಳಸಬಹುದು.

ಮಾವಿನ ತೊಗಟೆ: ಒಗರು ರುಚಿಯ ತೊಗಟೆಯು ರಕ್ತಸ್ರಾವವನ್ನು ತಡೆಯುತ್ತದೆ. ಮುಟ್ಟಿನ ಅತಿಸ್ರಾವ, ರಕ್ತ ಪ್ರವೃತ್ತಿಯುಳ್ಳ ಮೂಲವ್ಯಾಧಿ ಹಾಗೂ ರಕ್ತದುಷ್ಟಿಗಳಲ್ಲಿ ಇದು ಹಿತಕರ. ಗಾಯಗಳನ್ನು ತೊಳೆಯಲು ಔಷಧವಾಗಿ ಬಳಸಲಾಗುತ್ತದೆ.

ಮಾವಿನ ಮಿಡಿಗಾಯಿ: ಒಗರು ಮತ್ತು ಹುಳಿ ರುಚಿ ಹೊಂದಿದ ಕಾರಣ ಇದು ವಾತ-ಪಿತ್ತ ಗಳನ್ನು ದೇಹದಲ್ಲಿ ಕೆಡಿಸುತ್ತದೆ. ರಕ್ತವನ್ನು ದೂಷಿಸುತ್ತದೆ. ರಕ್ತದ ಒಸರುವಿಕೆ, ಗಂಟಲು ಊತ, ಬಾಯಿಹುಣ್ಣು, ಕುರು, ಮೊಡವೆ ಮುಂತಾದ ತೊಂದರೆಗಳನ್ನು ಕೊಡಬಹುದು. ಹಿತಮಿತವಾಗಿ ಉಪ್ಪಿನಕಾಯಿ, ತಂಬುಳಿ, ಚಿತ್ರಾನ್ನದಂಥ ಅಡುಗೆಗಳಲ್ಲಿ ಬಳಸುವುದು ಕ್ಷೇಮ. ನಿತ್ಯೋಪಯೋಗಕ್ಕಂತೂ ಇದು ಅನಾರೋಗ್ಯಕರ.

ಬಲಿತ ಮಾವಿನಕಾಯಿ: ಇದು ಅತ್ಯಂತ ಹುಳಿ ರುಚಿ ಹೊಂದಿದ ಕಾರಣ ತ್ರಿದೋಷಕಾರಕ, ರಕ್ತದುಷ್ಟಿಕರ ಮತ್ತು ದೇಹ ವನ್ನು ಒಣಗಿಸುವ ಸ್ವಭಾವ ಇದಕ್ಕಿದೆ. ಇದರ ಉಪ್ಪಿನಕಾಯಿ, ಚಟ್ನಿ, ಚಿತ್ರಾನ್ನಗಳನ್ನು ಸತತವಾಗಿ ಉಪಯೋಗಿಸಿದಾಗ ಹಲವು ರಕ್ತ-ಮೂತ್ರ-ಪಿತ್ತರೋಗ ಗಳನ್ನು ಉಂಟು ಮಾಡುತ್ತದೆ.

ಹಾಗಾಗಿ, ಮಾವಿನ ಹಣ್ಣಿನ ಕಾಲದಲ್ಲಿ ವಾರಕ್ಕೊಮ್ಮೆ ಇದನ್ನು ಎಣ್ಣೆಯಲ್ಲಿ ಬಾಡಿಸಿ, ತೆಂಗಿನ ತುರಿ/ತೆಂಗಿನ ಹಾಲು ಅಥವಾ ಶುಂಠಿಗಳೊಂದಿಗೆ ಉಪಯೋಗಿಸಬಹುದು. ಆದರೆ ಎಲ್ಲರಿಗೂ ಬಹಳ ಪ್ರಿಯವಾದ ಹಸಿ ಕಾಯಿಯನ್ನು, ಉಪ್ಪು-ಖಾರದೊಂದಿಗೆ ತಿನ್ನುವ ಅಭ್ಯಾಸ ಮಾತ್ರ ಅತ್ಯಂತ ತೊಂದರೆದಾಯಕ. ಇದು ಅತ್ಯಂತ ಪಿತ್ತಕರ ಮತ್ತು ರಕ್ತ ದುಷ್ಟಿಕರ. ಬದಲಿಗೆ, ಅಡುಗೆಯಲ್ಲಿ ಬಳಸುವುದರಿಂದ ಇದು ಅಲ್ಪ ಹಾನಿಕರವಾಗುತ್ತದೆ.

ಒಣಗಿಸಿದ ಮಾವಿನಕಾಯಿ: ಮಾವಿನಕಾಯಿ ಸಿಪ್ಪೆಯನ್ನು ತೆಗೆದು, ಒಣಗಿಸಿ, ಅಡುಗೆ ಯಲ್ಲಿ ಬಳಸಲಾಗುತ್ತದೆ. ಇದು ರುಚಿಕರ, ಕಫ-ವಾತಹರ ಮತ್ತು ಮಲಭೇದಕ. ಮಿತವಾಗಿ ಬಳಸುವುದು ಸದಾ ಕ್ಷೇಮ. ಇನ್ನು ಎಲ್ಲರಿಗೂ ಪ್ರಿಯವಾಗಿರುವ ಮಾವಿನ ಹಣ್ಣಿನ ವಿಚಾರ ಗಳನ್ನು ತಿಳಿದುಕೊಳ್ಳೋಣ.

ನೈಸರ್ಗಿಕವಾಗಿ ಕಳಿತ ಮಾವಿನ ಹಣ್ಣು

ರುಚಿಯಲ್ಲಿ ಸಿಹಿಯಾಗಿದ್ದು, ಸ್ವಲ್ಪ ಒಗರು ರುಚಿ ಯನ್ನು ಸಹ ಹೊಂದಿರುತ್ತದೆ. ಇದು ಜಿಡ್ಡಿನ ಅಂಶವನ್ನು ಹೊಂದಿರುತ್ತದೆ. ಇದು ಬಲಕರ ಹಾಗೂ ಸಂತೃಪ್ತಿದಾಯಕವಾಗಿದೆ. ಇಂಥ ಮಾವಿನ ಹಣ್ಣಿನ ಜೀರ್ಣಕ್ಕೆ ಹೆಚ್ಚು ಸಮಯ ಬೇಕು. ಇದು ವೀರ್ಯವರ್ಧಕ ಮತ್ತು ಕಾಮೋತ್ತೇಜಕವಾಗಿದೆ.

ಇದು ವಾತವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕಾಯಿಗೆ ಹೋಲಿಸಿದರೆ ಹಣ್ಣು ಶೀತಲ ಮತ್ತು ಹೆಚ್ಚಾಗಿ ಪಿತ್ತವನ್ನು ಕೆರಳಿಸದು. ಆದರೆ ಮಾವಿನ ಹಣ್ಣು ಕಫವರ್ಧಕ. ಸಾಮಾನ್ಯವಾಗಿ, ‘ಹಸಿದಾಗ ಹಲಸು, ಉಂಡು ಮಾವು’ ಎಂಬ ಮಾತನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಮಾವಿನ ಹಣ್ಣು ಜೀರ್ಣಕ್ಕೆ ಜಡವಾ ದ್ದರಿಂದ ಮತ್ತು ಸಿಹಿ ಸ್ವಭಾವ ಉಳ್ಳದ್ದಾಗಿರುವುದರಿಂದ ಆಹಾರದ ಶುರುವಿನಲ್ಲಿ ಮಾವಿನ ಹಣ್ಣನ್ನು ಸೇವಿಸುವುದು ಒಳ್ಳೆಯದು. ಊಟವಾದ ಮೇಲೆ ಮಾವಿನ ಹಣ್ಣನ್ನು ಸೇವಿಸಿದರೆ ಅದು ಸರಿಯಾಗಿ ಜೀರ್ಣವಾಗದೆ ತೊಂದರೆ ಕೊಡಬಹುದು.

ಕೃತ್ರಿಮವಾಗಿ ಹಣ್ಣುಮಾಡಿದ ಮಾವಿನ ಗುಣ

ವಿವಿಧ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸಿ ಕೃತ್ರಿಮವಾಗಿ ಹಣ್ಣು ಮಾಡಿದ ಮಾವಿನ ಗುಣಗಳು ಬೇರೆಯದಾಗಿರುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್/ ಎಥಿಲಿನ್ ಗ್ಯಾಸ್ ಮುಂತಾದ ರಾಸಾಯನಿಕಗಳ ಉಪಯೋಗವು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡಿ, ಆರೋಗ್ಯಕ್ಕೆ ಹಾನಿಕರವಾಗುವಂತೆ ಮಾಡುತ್ತದೆ. ಈ ರೀತಿಯ ಹಣ್ಣುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡಿ ಶರೀರಬಾವು, ಉರಿಯೂತ, ಕಣ್ಣಿನ ಉರಿ, ನೀರು ಜಿನುಗು ವುದು ಇತ್ಯಾದಿಗಳಲ್ಲದೆ ಕ್ಯಾನ್ಸರ್‌ನಂಥ ರೋಗ ಗಳಿಗೂ ಕಾರಣವಾಗುತ್ತದೆ. ಆದ್ದರಿಂದ, ಮಾವಿನ ಹಣ್ಣುಗಳನ್ನು ಬೆಳೆದ ರೈತರಿಂದ ನೇರವಾಗಿ ಖರೀದಿಸುವುದು ಸದಾ ಉತ್ತಮ.

ಚೂಷಿತಾಮ್ರ- ರಸ ಹೀರಿ ತಿನ್ನುವ ಮಾವಿನ ಹಣ್ಣಿನ ಗುಣ: ಹಣ್ಣಾದ ಮಾವನ್ನು ಬಾಯಿ ಯಿಂದ ಕಚ್ಚಿ, ರಸ ಹೀರುತ್ತಾ ಸೇವಿಸುವುದು ಅತ್ಯಂತ ರುಚಿಕರ ಮತ್ತು ಬಲಕರ. ಈ ವಿಧಾನದಲ್ಲಿ ಸೇವಿಸುವುದರಿಂದ ಮಾವಿನ ಹಣ್ಣು ಜೀರ್ಣಕ್ಕೆ ಅತ್ಯಂತ ಹಗುರವಾಗಿ ಪರಿಣಮಿಸಲ್ಪಡುತ್ತದೆ. ಇದು ಶೀತಲವೂ, ವಾತಪಿತ್ತಹರವೂ ಆಗಿದ್ದು ಸುಲಭವಾಗಿ ಮಲ ವಿಸರ್ಜನೆಯಾಗುವಂತೆ ಮಾಡುತ್ತದೆ.

ಗಾಲಿ ತಾಮ್ರ ರಸ- ಮಾವಿನ ಹಣ್ಣಿನಿಂದ ಹಿಂಡಿ ಸೋಸಿದ ರಸ: ಚೆನ್ನಾಗಿ ಕಳಿತ ಹಣ್ಣಿನ ರಸವನ್ನು ಹಿಂಡಿ ಸೇವಿಸಿದರೆ ಅದು ಬಲಕಾರಕ. ಆದರೆ ಜೀರ್ಣಕ್ಕೆ ಹೆಚ್ಚು ಸಮಯ ವನ್ನು ತೆಗೆದುಕೊಳ್ಳುತ್ತದೆ. ಇದು ಹೃದಯಕ್ಕೆ ಹಿತವಲ್ಲ ಎನ್ನಬಹುದು. ಇದು ಕಫ ದೋಷ ವನ್ನು ಹೆಚ್ಚಿಸಿ ಪ್ರಮೇಹ, ಅಜೀರ್ಣ, ಉಬ್ಬಸ, ಕೆಮ್ಮುಗಳನ್ನು ಹೆಚ್ಚಿಸುತ್ತದೆ. ಆದರೆ, ಕೃಶ ವಾಗಿರುವವರು, ದೈಹಿಕ ಶ್ರಮಜೀವಿಗಳು, ಜೀರ್ಣಶಕ್ತಿ ಚೆನ್ನಾಗಿರುವವರು, ಮಕ್ಕಳು, ಯುವಕರು, ಆಹಾರದ ಸಮಯದಲ್ಲಿ ಜೀರ್ಣವಾಗುವಷ್ಟು ಪ್ರಮಾಣದಲ್ಲಿ ಸೇವಿಸಿದರೆ, ತಕ್ಷಣವೇ ಆಯಾಸವು ನಿವಾರಣೆ ಆಗುತ್ತದೆ.

ಇನ್ನೂ ಒಳ್ಳೆಯ ಉಪಾಯ ಬೇಕೆಂದರೆ, ಹಣ್ಣಿನ ರಸಕ್ಕೆ ಸ್ವಲ್ಪ ಉಪ್ಪು, ಶುಂಠಿ, ಜೀರಿಗೆ, ಹಿಂಗು, ಸಾಸಿವೆ ಮತ್ತು ಕೊಬ್ಬರಿ ಎಣ್ಣೆಗಳ ಒಗ್ಗರಣೆಯನ್ನು ಕೊಟ್ಟು ಬೆಚ್ಚಗೆ ಮಾಡಿ ಅಡುಗೆಯಂತೆ ಬಳಸುವುದು ಜೀರ್ಣಕ್ಕೆ ಹಗುರ ಮತ್ತು ಹಣ್ಣಿನ ರಸಗಳ ಅವಗುಣಗಳನ್ನು ಕಡಿಮೆ ಮಾಡುತ್ತದೆ.

ಆಮ್ರ ಖಂಡ- ತುಂಡರಿಸಿದ ಮಾವಿನ ಹಣ್ಣು: ಸಿಪ್ಪೆಯನ್ನು ತೆಗೆದು, ತುಂಡುಗಳನ್ನಾಗಿ ಮಾಡಿ, ತಿಂದಾಗ ಅದು ಜೀರ್ಣಕ್ಕೆ ಜಡವಾಗುತ್ತದೆ. ಶರೀರದ ಸ್ಥೂಲತೆಗೆ ಕಾರಣವಾಗುತ್ತದೆ. ಇದು ಬಲಕಾರಕ, ಶೀತಲ ಮತ್ತು ವಾತಹರವಾಗಿದೆ. ಆದ್ದರಿಂದ ಚೆನ್ನಾಗಿ ಹಸಿವಾದಾಗ, ಆಹಾರದ ಮೊದಲು, ಹಣ್ಣಿನ ತುಂಡುಗಳನ್ನು ಸೇವಿಸಿ ನಂತರ ಊಟ ಮಾಡುವುದು ಹಿತಕರ.

ಹಾಲು ಮತ್ತು ಮಾವಿನ ಮಿಶ್ರಣ- ಕ್ಷೀರಾಮ್ರ/ದುಗ್ಧಾಮ್ರ/ಸೀಕರಣೆ: ಸಿಹಿಸಿಹಿ ಮಾವಿನ ಹಣ್ಣನ್ನು ತಿಂದು, ಹಾಲು ಕುಡಿದರೆ ಅಥವಾ ಹಾಲಿನಲ್ಲಿ ಸಿಹಿಯಾದ ಮಾವಿನ ತುಂಡು ಗಳನ್ನು ಬೆರೆಸಿ ಸೀಕರಣೆಯಂತೆ ತಿಂದರೆ ಅಥವಾ ಮಾವಿನ ಹೋಳುಗಳೊಂದಿಗೆ ಹಾಲನ್ನು ಬೆರೆಸಿ ಮಿಲ್ಕ್ ಶೇಕ್ ಮಾಡಿ ಕುಡಿದರೆ, ಅದು ವಾತ-ಪಿತ್ತಹರ, ರುಚಿಕರ, ಬಲವರ್ಧಕ ಹಾಗೂ ಶರೀರದ ಸ್ಥೂಲತೆಗೆ ಕಾರಣ. ‌

ಅಂತೆಯೇ ವೀರ್ಯವರ್ಧಕ ಮತ್ತು ವರ್ಣವರ್ಧಕ. ಇದು ಜೀರ್ಣಕ್ಕೆ ಅತ್ಯಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ದೇಹಕ್ಕೆ ತಂಪನ್ನು ಕೊಡುತ್ತದೆ. ಸದಾ ಚಟುವಟಿಕೆ ಯುಳ್ಳವರು, ಕೃಶವಾಗಿರುವವರು ಮತ್ತು ಮಕ್ಕಳಿಗೆ ಇದು ಬೇಸಗೆಯಲ್ಲಿ ಒಳ್ಳೆಯ ಪೋಷಕ ಆಹಾರ.

ಬೆಳಗ್ಗಿನ ಉಪಾಹಾರದಲ್ಲಿ ಚಪಾತಿ/ರೊಟ್ಟಿ/ದೋಸೆ/ಪೂರಿಯೊಂದಿಗೆ ಜೀರ್ಣಶಕ್ತಿಗೆ ತಕ್ಕಂತೆ ಸೇವಿಸುವುದು ಹಿತಕರ. ಇದು ಜೀರ್ಣಶಕ್ತಿ ಚೆನ್ನಾಗಿರುವ ವ್ಯಕ್ತಿಗಳಿಗೆ ಮಾತ್ರ ಸೂಕ್ತವಾದ ಆಹಾರ. ಇದನ್ನು ಕ್ರಮ ತಪ್ಪಿ ಬಳಸಿದಾಗ ಕುರು, ತಲೆಭಾರ, ಸಂಧಿಯೂತ, ಬಾವು, ಚರ್ಮ ಕಾಯಿಲೆ, ಪ್ರಮೇಹಗಳನ್ನು ಹೆಚ್ಚಿಸಬಹುದು. ದುಗ್ಧಾಮ್ರವನ್ನು ಸೇವಿಸು ವಾಗ ನೆನಪಿನಲ್ಲಿಡಬೇಕಾದ ಅತ್ಯಂತ ಮುಖ್ಯವಾದ ಅಂಶವೆಂದರೆ- ಹುಳಿ ಇರುವ ಹಣ್ಣ ನ್ನು ಹಾಲಿನ ಜತೆಗೆ ಮಿಶ್ರಣ ಮಾಡಿ ಬಳಸಿದರೆ, ಅದು ವಿರುದ್ಧ ಆಹಾರವಾಗಿ ಪರಿಣಮಿಸಿ ದೇಹದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತದೆ.

ಚರ್ಮರೋಗ, ರಕ್ತದುಷ್ಟಿ ಸೇರಿದಂತೆ ಅನೇಕ ತೊಂದರೆಯನ್ನು ನೀಡುತ್ತದೆ. ಆದ್ದರಿಂದ ನೆನಪಿಡಿ, ಬಳಸುವಾಗ ಮಾವಿನ ಹಣ್ಣು ‘ಸಿಹಿ’ ಇದ್ದರೆ ಮಾತ್ರ ಹಾಲಿನೊಂದಿಗೆ ಬಳಸಬೇಕು. ಹಣ್ಣು ಸ್ವಲ್ಪ ಹುಳಿ ಮಿಶ್ರಿತವಾಗಿದ್ದರೆ ಹಾಲಿನ ಬದಲು ತೆಂಗಿನಕಾಯಿಯ ಹಾಲನ್ನು ಬಳಸಬಹುದು.

ಕೊನೆಯದಾಗಿ ಒಂದು ಕಿವಿಮಾತು: ಸ್ನೇಹಿತರೆ, ನಿಮ್ಮ ಹಸಿವೆಯನ್ನು ಗಮನಿಸಿ, ಮಾವಿನ ಹಣ್ಣನ್ನು ಸದಾ ಆಹಾರದ ಕಾಲದಲ್ಲಿ, ಆಹಾರದ ಶುರುವಿನಲ್ಲಿಯೇ ಸೇವಿಸಿದರೆ ಮಾವು ಅಮೃತ ಸಮಾನ! ಹಸಿವೆಯನ್ನು ಗಮನಿಸದೆ, ಮಿತಿಮೀರಿ ಸೇವಿಸಿದರೆ ಮಾವು ಅತ್ಯಂತ ತೊಂದರೆದಾಯಕವಾಗಬಹುದು! ಅತಿಯಾಗಿ ಸೇವಿಸುವ ಮಾವಿನ ಹಣ್ಣಿನಿಂದ ನಮ್ಮ ಜಠರಾಗ್ನಿ ಮಂದವಾಗಿ, ಹೊಟ್ಟೆಭಾರ, ಮೈ ಭಾರಗಳು ಪ್ರಾರಂಭವಾಗುತ್ತವೆ. ಪದೇಪದೆ ಕಾಡುವ ಜ್ವರಗಳು ಕಾಣಿಸಿಕೊಳ್ಳುತ್ತವೆ. ರಕ್ತದುಷ್ಟಿಗೊಂಡು ಕಾಮಾಲೆ, ಪಾಂಡು ರೋಗ, ಚರ್ಮರೋಗಗಳು ಶುರುವಾಗಬಹುದು.

ಮಲಬದ್ಧತೆಯಿಂದ ಹಿಡಿದು ಸಕ್ಕರೆ ಕಾಯಿಲೆ ಮತ್ತು ಕೊಲೆಸ್ಟ್ರಾಲ್‌ಗಳೂ ಹೆಚ್ಚಾಗ ಬಹುದು. ನಾವು ಮಾವನ್ನು ಅತಿಯಾಗಿ ತಿಂದು ಅದು ಜೀರ್ಣವಾಗದಿದ್ದಾಗ ಆಹಾರವನ್ನು ವರ್ಜಿಸಿ, ಉಪವಾಸದಲ್ಲಿದ್ದು, ಸ್ವಲ್ಪ ಸ್ವಲ್ಪವೇ ಶುಂಠಿಯ ನೀರನ್ನು ಹೀರಿ ಜೀರ್ಣಶಕ್ತಿ ಮೊದಲಿನಂತಾಗುವ ತನಕ ಕಾಯುವುದರಿಂದ ಮುಂಬರುವ ಎಲ್ಲಾ ತೊಂದರೆಗಳನ್ನೂ ನಿವಾರಿಸಬಹುದು. ನೆನಪಿಡಿ ಅತಿಯಾದರೆ ಅಮೃತವೂ ವಿಷವೇ!