ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾರ್ಗದರ್ಶಕ ಮುರಾರಿ

ಶ್ರೀಕೃಷ್ಣ ಬದುಕು ಎಲ್ಲರಿಗೂ ಯಾವಾಗಲೂ ಸುಲಭವಾಗಿರುತ್ತೆ ಎಂದು ಉಪದೇಶಿಸಲಿಲ್ಲ. ಅವನ ಬದುಕಿನ ಮೂಲಕ ಮತ್ತು ಭಗವದ್ಗೀತೆಯ ಮುಖಾಂತರ ಎಲ್ಲ ಜೀವಿಗಳಿಗೂ ಕಷ್ಟ ಅನಿವಾರ್ಯ, ಆದರೆ ನಮ್ಮ ಆಂತರಿಕ ಶಕ್ತಿಗಳನ್ನು ಮತ್ತು ಜೀವನೋತ್ಸಾಹವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಾರಿದ್ದಾನೆ.

ಬೇಲೂರು ರಾಮಮೂರ್ತಿ

ಸೆ.4- 5ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ. ಲೀಲಾಮಾನುಷ ವಿಗ್ರಹನಾದ ಶ್ರೀಕೃಷ್ಣ ನನ್ನು ನೆನೆಯುವ ಲೇಖನ ಇಲ್ಲಿದೆ.

ನಿಮಗೆ ಗೊತ್ತೇ, ಶ್ರೀಕೃಷ್ಣನ ಮುಗ್ಧ ನಗುವಿನ ಹಿಂದೆ ಬಹಳ ಉನ್ನತವಾದ ಪಾಠವಿದೆ ಎಂದು. ಶ್ರೀಕೃಷ್ಣನ ಬದುಕೇ ವೈಪರೀತ್ಯಗಳಿಂದ ಕೂಡಿದ್ದು. ಚಿಕ್ಕಂದಿನಲ್ಲೇ ತಂದೆ ತಾಯಿಗಳಿಂದ ಬೇರ್ಪಟ್ಟು ಹುಟ್ಟಿದ ನಾಡಿನಿಂದ ಬಹುದೂರ ಜೀವನ ಸವೆಸುತ್ತಾ ಪಾಲನೆ ಪೋಷಣೆ ಮಾಡಿದವ ರನ್ನೇ ಮಾತಾಪಿತೃಗಳು ಎಂದುಕೊಂಡು ಆನಂದದಿಂದ ಬದುಕಿ ಅಂತಿಮವಾಗಿ ತನ್ನ ಮಾಯಾ ಲೋಲ ಭಾವಗಳನ್ನು ಜಗತ್ತಿನಲ್ಲಿ ಬಿಟ್ಟು ಹೋದ.

ಹೀಗಾಗಿಯೇ ನಾವೆಲ್ಲಾ ಶ್ರೀಕೃಷ್ಣನನ್ನು ಮತ್ತು ಅವನ ಮುಗ್ಧ ನಗುವನ್ನೂ ಮರೆಯಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಶ್ರೀಕೃಷ್ಣನ ಬದುಕು ನಮಗೆಲ್ಲಾ ರಂಜನೀಯವಾಗಿ ತೋರುತ್ತದೆ. ಶ್ರೀಕೃಷ್ಣ ಬದುಕು ಎಲ್ಲರಿಗೂ ಯಾವಾಗಲೂ ಸುಲಭವಾಗಿರುತ್ತೆ ಎಂದು ಉಪದೇಶಿಸಲಿಲ್ಲ. ಅವನ ಬದುಕಿನ ಮೂಲಕ ಮತ್ತು ಭಗವದ್ಗೀತೆಯ ಮುಖಾಂತರ ಎಲ್ಲ ಜೀವಿಗಳಿಗೂ ಕಷ್ಟ ಅನಿವಾರ್ಯ, ಆದರೆ ನಮ್ಮ ಆಂತರಿಕ ಶಕ್ತಿಗಳನ್ನು ಮತ್ತು ಜೀವನೋತ್ಸಾಹವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಾರಿದ್ದಾನೆ.

ಅವನ ನಗುಮುಖ ಕಷ್ಟದಿಂದ ಪಲಾಯನ ಮಾಡುವುದನ್ನು ಸಾರುವುದಿಲ್ಲ. ಬದಲಿಗೆ ಅದು ಸಂಘರ್ಷದ ದಿನಗಳನ್ನು ಹೇಗೆ ಎದುರಿಸಬಹುದು ಎನ್ನುವುದನ್ನು ಸೂಚಿಸುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿ ಸನಾತನ ಪರಂಪರೆಯಲ್ಲಿ ಒಂದು ಧಾರ್ಮಿಕ ದಿನ. ಅದು ಶ್ರೀಕೃಷ್ಣನ ಹುಟ್ಟುಹಬ್ಬ ವನ್ನು ನೆನಪಿಸುವುದರ ಜೊತೆಗೆ ಅವನ ಬದುಕಿನ ದಿನಗಳನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.

ಇದನ್ನೂ ಓದಿ: Krishna Janmastami 2026: ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಸಡಗರ

ಕಂಸ ತನ್ನ ಕ್ರೂರತೆಯನ್ನು ಮೆರೆಯುತ್ತಿದ್ದ ದಿನಗಳನ್ನೂ ನೆನಪಿಸುತ್ತದೆ. ಭಾಗವತ ಪುರಾಣದ ಪ್ರಕಾರ ಕೃಷ್ಣ ಮಧುರೆಯಲ್ಲಿ ಹುಟ್ಟಿದ್ದು ದುಷ್ಟ ಶಿಕ್ಷಣ ಶಿಷ್ಟರಕ್ಷಣ, ಅಧರ್ಮದ ಎದುರಿಗೆ ಧರ್ಮದ ಜಯ ತಂದುಕೊಡಲು ಎಂದಷ್ಟೇ ತಿಳಿದುಕೊಂಡರೆ ತಪ್ಪಾದೀತು. ಏಕೆಂದರೆ ಶ್ರೀಕೃಷ್ಣನ ಕಥೆ ಜೀವನ ದುಸ್ತರವಾಗಿರುವಾಗ ಕೆಚ್ಚೆದೆಯಿಂದ ಬದುಕುವುದು ಹೇಗೆಂದು ತೋರಿಸುತ್ತದೆ.

ಜೊತೆಗೆ ಎಂಥದೇ ಸಂದರ್ಭವಾಗಲೀ ಎಲ್ಲವನ್ನೂ ಮುಗುಳುನಗೆಯಿಂದಲೇ ಸ್ವೀಕರಿಸುತ್ತಾ ಸಮಸ್ಯೆ ಗೊಂದು ಪರಿಹಾರ ಕಂಡುಕೊಳ್ಳುವ ದಾರಿಯನ್ನು ತೋರುತ್ತದೆ. ಶ್ರೀಕೃಷ್ಣನ ಬಾಲ್ಯ, ತಂದೆತಾಯಿ ಯರಿಂದ ಅಗಲಿಕೆ, ಸ್ನೇಹಿತರೊಂದಿಗೆ ಜೀವನ, ಆಗಾಗ ಜನರಲ್ಲಿ ಇರುವ ದುರಹಂಕಾರವನ್ನು ತೊಲಗಿಸುವ ಪರಿ, ಕೆಟ್ಟವರ ನಿರ್ಮೂಲನೆ, ಸಂಬಂಧಗಳೊಂದಿಗೆ ಬದುಕು, ಸಮಸ್ಯೆಗಳ ನಿವಾರಣೆ, ಅಂತಿಮವಾಗಿ ಅನಿವಾರ್ಯವಾದ ಯುದ್ಧವನ್ನು ಎದುರಿಸುವುದು, ಅವರವರಿಗೆ ಅವರವರ ಕರ್ಮಫಲಗಳನ್ನು ನೀಡುವುದು ಇವೆಲ್ಲಾ ಗಮನಿಸಿದಾದ ಬರೀ ಶ್ರೀಕೃಷ್ಣನ ಹುಟ್ಟನ್ನು ಬರೀ ಹಬ್ಬವೆಂದು ಸಂಭ್ರಮಿಸುವುದರ ಬದಲು ಅವನಿಗೇ ನಮ್ಮನ್ನು ನಾವು ಅರ್ಪಿಸಿಕೊಂಡು ನಮ್ಮ ಬದುಕನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ಅರಿವಾಗು ತ್ತದೆ. ಕೆಲವರು ಮಾತಾಡುವಾಗ ನಾವೇನು ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿಲ್ಲ ಎನ್ನುತ್ತಾರೆ.

ಶ್ರೀಕೃಷ್ಣನ ಬದುಕು ಕೂಡಾ ಹಾಗೆಯೇ. ಹುಟ್ಟಿದ ಎಳೆಮಗುವನ್ನು ರಭಸವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಬುಟ್ಟಿಯಲ್ಲಿ ಮಲಗಿಸಿಕೊಂಡು ಭೋರ್ಗರೆಯುತ್ತಿದ್ದ ನದಿಯನ್ನು ದಾಟಿದವನು ವಸುದೇವ. ಕೃಷ್ಣನಿಗೆ ಬಾಲ್ಯದಲ್ಲಿ ಯಾವ ಐಷಾರಾಮಿಯೂ ಇರಲಿಲ್ಲ. ಅವನ ಬಾಲ್ಯದ ಒಂದೊಂದು ಹೆಜ್ಜೆಯೂ ಅನಿರೀಕ್ಷಿತಗಳಿಂದ ತುಂಬಿತ್ತು. ಆದರೂ ಅಂತಿಮವಾಗಿ ಅವನ ಬದುಕು ರೂಪುಗೊಂಡ ರೀತಿ ಇಡೀ ಜಗತ್ತಿಗೆ ಮಾದರಿಯಾಗಿತ್ತು. ಇಲ್ಲಿನ ಸಂದೇಶ ಏನೂ ಅಂದರೆ ಯಾವುದೇ ವ್ಯಕ್ತಿಯ ಜೀವನದ ಸಾಧನೆಗೆ ಅವನ ಜನನ, ಬಾಲ್ಯ ರೂಪುಗೊಂಡ ರೀತಿ, ಅನುಭವಿ ಸಿದ ಕಷ್ಟ ಇವುಗಳಿಂದ ಅವಲಂಬಿತವಾಗಿಲ್ಲ ಎನ್ನುವುದು. ಶ್ರೀಕೃಷ್ಣನ ಬಾಲ್ಯ ಗೋಕುಲದಲ್ಲಿ ಕಳೆಯಿತು. ಅವನು ಸಾಕುತಾಯಿ ಯಶೋಧ, ತಂದೆ ನಂದ, ಗೋಪಿಯರು, ಗೋಪಾಲಕರು ಇವರುಗಳೊಂದಿಗೆ ಕಳೆದ ಬಾಲ್ಯದ ದಿನಗಳು ಮನಮೋಹಕ ವಾಗಿತ್ತು, ರಂಜನೀಯವಾಗಿತ್ತು.

ಆದರೆ ಅವನ ಈ ಸಂತಸ ಹೆಚ್ಚು ದಿವಸ ಇರಲಿಲ್ಲ. ಕಂಸನನ್ನು ಎದುರಿಸಲು ಅವನು ಗೋಕುಲ ಬಿಟ್ಟು ಮಧುರೆಗೆ ಬರಬೇಕಾಯಿತು. ಅಷ್ಟು ಚಿಕ್ಕ ವಯಸ್ಸಿಗೆ ಅವನಿಗೆ ಜವಾಬ್ದಾರಿ ಬಂದಿತ್ತು. ಕೆಲವು ಕಠಿಣವಾದ ನಿರ್ಧಾರಗಳನ್ನು ಅವನು ತೆಗೆದುಕೊಳ್ಳಬೇಕಾಗಿತ್ತು. ತನ್ನ ಗುರಿಯನ್ನೇ ಅನುಸರಿಸಿ ಯಾವ ಸಂಬಂಧಗಳಿಗೂ, ಪ್ರದೇಶಗಳ ಬಗೆಗೂ ಯಾವುದೇ ಮೋಹವನ್ನು ಅಂಟಿಸಿ ಕೊಳ್ಳದೇ ಕೇವಲ ಅವುಗಳ ನೆನಪುಗಳ ಬುತ್ತಿ ಕಟ್ಟಿಕೊಂಡು ಮುಂದುವರಿಯುತ್ತಿದ್ದ. ಹಾಗೆಯೇ ನಮಗೂ ನಮ್ಮ ಜೀವನದಲ್ಲಿ ಜವಾಬ್ದಾರಿ ಮತ್ತು ಗುರಿ ಮುಟ್ಟುವುದು ಬಹಳ ಮುಖ್ಯ ಎನ್ನುವ ಸಂದೇಶವನ್ನು ಕೊಟ್ಟಿದ್ದಾನೆ. ಮುಖದಲ್ಲಿ ನಗೆ ಇದೆ ಎಂದಾಕ್ಷಣ ಕೃಷ್ಣನಿಗೆ ಸಮಸ್ಯೆಗಳೇ ಇರಲಿಲ್ಲವೆಂದಲ್ಲ.

ಅಂತರಂಗದ ನೋವು ಎಷ್ಟೇ ಇದ್ದರೂ ಅವುಗಳನ್ನು ಮುಖದ ಮೇಲೆ ತೋರಿಸದೇ ಮುಗುಳುನಗೆ ಯಿಂದಲೇ ಸಮಸ್ಯೆಗಳ ನಿರ್ವಹಣೆ ಮಾಡಬೇಕು ಎನ್ನುವ ಸಂದೇಶ ಕೊಟ್ಟಿದ್ದಾನೆ. ಜೊತೆಗೆ ನಮ್ಮ ಬದುಕಿನಲ್ಲಿ ಹಂತಹಂತವಾಗಿ ಸಮಸ್ಯೆಗಳು ಬರುತ್ತಲೇ ಇದ್ದರೂ ಅವುಗಳನ್ನು ನಗುಮುಖ ದಿಂದಲೇ ಎದುರಿಸಬೇಕು ಎಂದಿದ್ದಾನೆ. ಶ್ರೀಕೃಷ್ಣ ಕೊಟ್ಟ ಬಹುದೊಡ್ಡ ಸಂದೇಶ ಕುರುಕ್ಷೇತ್ರ ಯುದ್ಧದಲ್ಲಿದೆ. ಅದೊಂದು ಕ್ಲಿಷ್ಟಕರ ಸನ್ನಿವೇಶ.

ಯುದ್ಧಕ್ಕೆ ಎಂದು ಬಂದ ಅರ್ಜುನ ಹಿಮ್ಮೆಟ್ಟಿದಾಗ ಅವನಿಗೆ ಮಾರ್ಗದರ್ಶನ ಮಾಡೋದು ಸುಲಭವಾಗಿರಲಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬೇಕಾಯ್ತು. ಮನುಷ್ಯ ಹುಟ್ಟುವುದು ಏತಕ್ಕೆ, ಅವನ ಜವಾಬ್ದಾರಿ ಏನು, ಮನುಷ್ಯ ಸಂಬಂಧಗಳು ಅಂದರೆ ಏನು, ಪ್ರತಿಯೊಬ್ಬ ಮನುಷ್ಯನೂ ಎಂಥದೇ ಸಂದರ್ಭ ಆದರೂ ತನ್ನ ಕರ್ತವ್ಯವನ್ನು ಮಾಡುವುದು ಬಿಡಬಾರದು ಎನ್ನುವ ಸಂದೇಶವನ್ನು ಭಗವದ್ದೀತೆಯ ಮುಖಾಂತರ ನಮಗೆ ನೀಡಿದ್ದಾನೆ. ಬಗೆದಷ್ಟೂ ಬಂಗಾರ ಎನಿಸಿಕೊಂಡಿರುವ ಭಗವದ್ಗೀತೆ ಯಾರಿಗೆ ಎಷ್ಟು ಸಾಮರ್ಥ್ಯ ಇದೆಯೋ ಅಷ್ಟು ಅರ್ಥವಾಗುತ್ತಿದೆ.

ಇವೆಲ್ಲವನ್ನೂ ನಾವು ಗಮನಿಸಿದಾಗ ಸುಮ್ಮನೇ ಶ್ರೀಕೃಷ್ಣಜನ್ಮಾಷ್ಟಮಿ ಯನ್ನು ಬರೀ ಒಂದು ಹಬ್ಬದಂತೆ ಆಚರಿಸುವ ಬದಲು ಶ್ರೀಕೃಷ್ಣನ ಬದುಕನ್ನು ಅರ್ಥ ಮಾಡಿ ಕೊಂಡು, ಅವನ ಉಪದೇಶಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾ ಅವುಗಳನ್ನು ನಮ್ಮ ಬದುಕಿನಲ್ಲಿ ಆದಷ್ಟೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಅದೇ ಸಾರ್ಥಕ, ಅಲ್ಲವೇ?