ಲೋಕಮತ
ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದರೆ ಇದೇ ಸಮಯದಲ್ಲಿ, ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ಕತ್ತರಿ ಬೀಳದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿಯೂ ಸರಕಾರದ ಮೇಲಿದೆ.
ರಾಜ್ಯದಲ್ಲಿ ಹಾಲು ಮಹಾಮಂಡಳಿ (ಕೆಎಂಎಫ್) ಹಾಲು, ಮಜ್ಜಿಗೆ, ಮೊಸರು ಮತ್ತು ಇತರ ಉತ್ಪನ್ನಗಳ ದರವನ್ನು 8 ರು.ಗಳಿಂದ 12 ರು.ಗಳಷ್ಟು ಹೆಚ್ಚಿಸಿದೆ. ಬರಗಾಲದ ಸಮಯದಲ್ಲಿ ರಾಜ್ಯದ ರೈತರನ್ನು ರಕ್ಷಿಸುವ ಸಲುವಾಗಿ ಈ ಏರಿಕೆ ಮಾಡಲಾಗಿದೆ ಎನ್ನುವುದು ರಾಜ್ಯ ಸರಕಾರದ ಸಮಜಾಯಿಷಿ. ಏರಿಕೆಯಾದ 8 ರು.ಗಳಲ್ಲಿ 7 ರು.ಗಳನ್ನು ಹೈನುಗಾರರಿಗೇ ನೀಡಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿತ್ತು. ಆದರೆ ಈ ಏರಿಕೆಯು 8 ರು. ಗಳಿಗೆ ಸೀಮಿತವಾಗಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.
ಮೊಬೈಲ್ ಕಂಪನಿಗಳು ಹತ್ತಾರು ಪ್ಯಾಕೇಜ್ಗಳನ್ನು ಮುಂದಿಟ್ಟು ಗ್ರಾಹಕರನ್ನು ಗೊಂದಲಕ್ಕೆ ಬೀಳಿಸಿ ದಂತೆ ಸರಕಾರ ಕೂಡ ಒಂದೇ ಟ್ಯಾಂಕರ್ನಿಂದ ಬಂದ ಹಾಲಿಗೆ ನಾನಾ ಹೆಸರುಗಳನ್ನಿಟ್ಟು 14 ರು. ತನಕ ದರ ಏರಿಸಿದೆ. ಇದಕ್ಕೆ ರೈತರ ಹಿತಾಸಕ್ತಿಯ ಹೆಸರು ಕೊಟ್ಟು ಬೆಲೆ ಏರಿಕೆ ವಿರೋಧಿಸಿದವರಿಗೆ ರೈತ ವಿರೋಧಿಗಳೆಂಬ ಹಣೆ ಪಟ್ಟಿ ಕಟ್ಟಲು ಮುಂದಾಗಿದೆ. ರಾಜ್ಯದಲ್ಲಿ ಕೆಎಂಎಫ್ ಹಾಲಿನ ದರ ಪರಿಷ್ಕರಣೆಯ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ, ಈ ಹಿಂದೆ ಸಾಕಷ್ಟು ಅಳೆದು ತೂಗಿ ಬೆಲೆ ಏರಿಸಲಾಗುತ್ತಿತ್ತು.
ಗ್ರಾಹಕರು ಹೌಹಾರುವ ಮಟ್ಟಕ್ಕೆ ಹಿಂದೆಂದೂ ದರ ಏರಿಕೆ ಆಗಿರಲಿಲ್ಲ. ಸಾರ್ವಜನಿಕರ ಜೇಬಿಗೆ ಏಕಾಏಕಿ ಹೊರೆಯಾಗಬಾರದು ಎನ್ನುವ ಕಾಳಜಿಯಿಂದ, ಗರಿಷ್ಠ ಎಂದರೆ ಪ್ರತಿ ಲೀಟರ್ಗೆ 2 ರಿಂದ 4 ರವರೆಗೆ ಮಾತ್ರ ಏರಿಕೆ ಮಾಡಲಾಗುತ್ತಿತ್ತು. ಮಾರುಕಟ್ಟೆಯು ಆರ್ಥಿಕ ಬದಲಾವಣೆಗೆ ಕ್ರಮೇಣ ಹೊಂದಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಕಳೆದ ಐದು ವರ್ಷಗಳಲ್ಲಿ (2022 ರಿಂದ 2026ರ ನವೆಂಬರ್ವರೆಗೆ) ಕೆಎಂಎಫ್ ಐದು ಬಾರಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಏರಿಕೆ ಮಾಡಿದೆ.
ಇದನ್ನೂ ಓದಿ: Lokesh Kayarga Column: ಮೋದಿ ಮೇಲಿನ ದ್ವೇಷ ದೇಶಕ್ಕೆ ಆಪತ್ತು ತರದಿರಲಿ
2022 ಮತ್ತು 2023ರಲ್ಲಿ ತಲಾ ಮೂರು ರುಪಾಯಿ ಏರಿಕೆ ಮಾಡಲಾಗಿತ್ತು. 2024ರಲ್ಲಿ ಕೇವಲ 2ರು. ಏರಿಕೆ ಮಾಡಿದ್ದರೆ ಕಳೆದ ವರ್ಷ 4 ರು.ಗಳಷ್ಟು ಹೆಚ್ಚಳ ಮಾಡಲಾಗಿತ್ತು. ಅಂದರೆ ಹಿಂದಿನ ನಾಲ್ಕು ವರ್ಷಗಳ ಒಟ್ಟು ಏರಿಕೆ 12 ರು.ಗಳನ್ನು ದಾಟಿರಲಿಲ್ಲ. ನಾಲ್ಕು ವರ್ಷಗಳಲ್ಲಿ ಏರಿಸಿದ್ದನ್ನು ಮೀರಿ ಈ ಬಾರಿ ಒಂದೇ ಏಟಿಗೆ 12ರಿಂದ 14 ರು. ಗಳಷ್ಟು ಏರಿಕೆಯಾಗಿದೆ. ಈ ಬೆಲೆ ಏರಿಕೆಯ ಅಸಮಾಧಾನ ವನ್ನು ಮುಚ್ಚಿಡಲು ಮತ್ತು ಸಾರ್ವಜನಿಕರ ದಿಕ್ಕು ತಪ್ಪಿಸಲು ಕೆಎಂಎಫ್ ಅರ್ಥಾತ್ ಸರಕಾರ ಅನುಸರಿಸುತ್ತಿರುವ ತಂತ್ರಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ.
ಬಹುರಾಷ್ಟ್ರೀಯ ಕಂಪನಿಗಳು ನಿತ್ಯಬಳಕೆಯ ಉತ್ಪನ್ನಗಳನ್ನು ಬೇರೆ, ಬೇರೆ ಪ್ಯಾಕೆಟ್ಗಳಲ್ಲಿ ಬೇರೆ, ಬೇರೆ ದರ ವಿಧಿಸಿ ಮಾರಾಟ ಮಾಡುವಂತೆ ಕೆಎಂಎಫ್ ಕೂಡ ಹಾಲಿನಲ್ಲಿರುವ ಕೊಬ್ಬಿನ ಅಂಶ ವನ್ನು ಮುಂದಿಟ್ಟು ವಿಭಿನ್ನ ದರ ನಿಗದಿ ಮಾಡಿದೆ. ಸರಕಾರ ತಿಳಿಸಿದಂತೆ ನೀಲಿ ಬಣ್ಣದ ಟೋನ್ಡ್ ಹಾಲಿನ ದರವಷ್ಟೇ 8 ರು. ಹೆಚ್ಚಳವಾಗಿದೆ.
ಉಳಿದಂತೆ ಕಿತ್ತಳೆ ಬಣ್ಣದ ಶುಭಂ ಹಾಲು, ಹಸಿರು ಪ್ಯಾಕೆಟ್ನ ಸಮೃದ್ಧಿ, ಹೊಮೋಜಿನೈಸ್ಡ್ ಹಾಲು ಹೀಗೆ ವಿವಿಧ ಪ್ರಕಾರಗಳನ್ನು ಸೃಷ್ಟಿಸಲಾಗಿದೆ. ಇವುಗಳ ನಡುವಿನ ಕೊಬ್ಬಿನಾಂಶದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ ಬೆಲೆ ಏರಿಕೆಯ ಪ್ರಮಾಣ ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೊಸರಿನ ದರವನ್ನು 14 ರು.ಗಳಷ್ಟು ಏರಿಸಿರುವುದು ಸಂಸ್ಥೆ ಯಾವ ಮಟ್ಟದ ಲಾಭ ಬಡುಕತನಕ್ಕೆ ಮುಂದಾಗಿದೆ ಎನ್ನುವುದಕ್ಕೆ ಸಾಕ್ಷಿ.
ಸದ್ಯಕ್ಕೆ ಸಿಎಂ ಸೂಚನೆ ಮೇರೆಗೆ ಮೊಸರಿನ ಬೆಲೆ 2 ರು.ಗಳಷ್ಟು ಇಳಿಕೆಯಾಗಿದೆ. ಆದರೆ ಉಳಿದ ಉತ್ಪನ್ನಗಳ ಬೆಲೆ ಇಳಿಸುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಸಾರಿದೆ. ಈ ಹಿಂದೆ ಬೆಲೆ ಏರಿಕೆ ಆದಾಗಲೆಲ್ಲಾ ಎಲ್ಲ ಉತ್ಪನ್ನಗಳ ದರವನ್ನು ಏಕ ಪ್ರಕಾರವಾಗಿ ಏರಿಸಲಾಗುತ್ತಿತ್ತು. ಹೈನುಗಾರರಿಗೂ ತಮಗೆ ಸಿಗುವ ಪಾಲಿನ ಬಗ್ಗೆ ಸ್ಪಷ್ಟತೆ ಇರುತ್ತಿತ್ತು. ಈ ಬಾರಿ 8 ರು. ದರ ವಿಧಿಸಿ, 7 ರು.ಗಳನ್ನು ರೈತರಿಗೆ ಕೊಡುತ್ತೇವೆ ಎಂದಿರುವ ಕೆಎಂಎಫ್, 14 ರು. ಹೆಚ್ಚಿಸಿದ ಉತ್ಪನ್ನಗಳಲ್ಲಿ ಆರು ರುಪಾಯಿಗಳನ್ನು ತಾನೇ ಜೇಬಿಗಿಳಿಸಿಕೊಳ್ಳಲು ಮುಂದಾಗಿದೆ.
ಸದ್ಯ ಕೆಎಂಎಫ್ ತನ್ನ ಅಧೀನದ 15 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಪ್ರತಿದಿನ 90ರಿಂದ ಒಂದು ಕೋಟಿ ಲೀಟರ್ಗಳಷ್ಟು ಹಾಲು ಸಂಗ್ರಹಿಸುತ್ತಿದೆ. ಪ್ರತಿದಿನ 60 ರಿಂದ 65 ಲೀಟರ್ ಹಾಲು ಮಾರಾಟವಾಗುತ್ತದೆ. ಇದರಲ್ಲಿ ನೀಲಿ ಕಲರ್ ಪ್ಯಾಕೆಟ್ ಅಜುಬಾಜು 35 ಲಕ್ಷ ಮಾರಾಟವಾದರೆ, ಇತರ ಪ್ಯಾಕೆಟ್ಗಳು ಸುಮಾರು 30 ಲಕ್ಷ ಲೀಟರ್ ಮಾರಾಟವಾಗುತ್ತವೆ.
ಪ್ರತಿದಿನ ಈ ಪ್ಯಾಕೆಟ್ಗಳಿಗೆ 4 ರು. ಹೆಚ್ಚುವರಿಯಾಗಿ ದರ ವಿಧಿಸಿದರೂ ಪ್ರತಿ ತಿಂಗಳಿಗೆ 1.20 ಕೋಟಿ ಹಣ ಕೆಎಂಎಫ್ʼಗೆ ಸಂದಾಯವಾಗುತ್ತದೆ. ಅಂದರೆ ವರ್ಷಕ್ಕೆ ಸುಮಾರು 460 ಕೋಟಿ ಹಣ ಹೆಚ್ಚುವರಿಯಾಗಿ ಜಮೆಯಾಗುತ್ತದೆ. ಈ ಹಣದಲ್ಲಿ ರೈತರಿಗೆ ಪಾಲು ಸಿಗದಿದ್ದರೆ ಇನ್ನಾರಿಗೆ ಪಾಲು ಸಿಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಬೇಕಾಗಿದೆ. ರೈತರಿಗೆ ಈ ತನಕ ೫ರು ಪ್ರೋತ್ಸಾಹ ಧನ ಸೇರಿದಂತೆ ಲೀಟರ್ ಹಾಲಿಗೆ 40 ರು. ನೀಡಲಾಗುತ್ತಿತ್ತು.
ಇನ್ನು ಮುಂದೆ 47 ರು. ಸಿಗಲಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಈ ದರ ಏಕಪ್ರಕಾರ ವಾಗಿರುವುದಿಲ್ಲ ಎನ್ನುವುದೂ ಗಮನಿಸಬೇಕಾದ ವಿಚಾರ. ರೈತರು ನೀಡುವ ಹಾಲಿನಲ್ಲಿ ಇರುವ ಕೊಬ್ಬಿನಂಶವನ್ನು ಆಧರಿಸಿ ಹಣ ನೀಡಲಾಗುತ್ತದೆ. ಕೊಬ್ಬಿನಂಶ 4 ಅಥವಾ ಅದಕ್ಕಿಂತ ಮೇಲಿದ್ದರಷ್ಟೇ ಈ ಮೊತ್ತ ಸಿಗಲಿದೆ. ಇದಕ್ಕಿಂತ ಕಡಿಮೆಯಾದರೆ ನೀಡುವ ದರವೂ ಕಡಿಮೆ ಯಾಗುತ್ತದೆ. 3ಕ್ಕಿಂತ ಕಡಿಮೆ ಜಿಡ್ಡಿನಂಶ ಇರುವ ಹಾಲನ್ನು ತಿರಸ್ಕರಿಸಲಾಗುತ್ತದೆ.
ಇಲ್ಲೂ ಮಂಡಳಿಗೆ ಉಳಿತಾಯದ ದಾರಿಗಳಿವೆ. ಪ್ರತಿ ಬಾರಿಯೂ ಹಾಲಿನ ದರ ಏರಿಸಿದಾಗ ರಾಜ್ಯ ಸರಕಾರ ನೆರೆ ರಾಜ್ಯಗಳಲ್ಲಿ ಪ್ರಚಲಿತವಿರುವ ಹಾಲಿನ ದರದ ಜತೆ ಹೋಲಿಸುವುದು ಸಂಪ್ರದಾಯ. ಈ ಬಾರಿಯೂ ಅದನ್ನೇ ಮಾಡಿದೆ. ಆದರೆ ಅಮುಲ್ ಹೊರತುಪಡಿಸಿದರೆ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಲಾಭದಲ್ಲಿರುವ ಹಾಲು ಉತ್ಪಾದಕ ಒಕ್ಕೂಟಗಳಲ್ಲಿ ಕೆಎಂಎಫ್ ಕೂಡ ಒಂದು. ಕೆಎಂಎಫ್ ಮೂಲಗಳು ತಿಳಿಸಿದಂತೆ ಒಕ್ಕೂಟ ಸದ್ಯ 500 ಕೋಟಿ ರು. ಲಾಭದಲ್ಲಿದೆ.
ನಮ್ಮ ನೆರೆಯ ರಾಜ್ಯಗಳಲ್ಲಿ ಹಾಲು ಒಕ್ಕೂಟಗಳು ಕರ್ನಾಟಕದಷ್ಟು ಸದೃಢವಾಗಿಲ್ಲ. ಅಲ್ಲಿ ಖಾಸಗಿ ಹಾಲು ಉತ್ಪಾದಕರು ಮತ್ತು ಸಹಕಾರಿ ರಂಗದ ಹಾಲು ಒಕ್ಕೂಟಗಳ ನಡುವೆ ಹಾಲು ಖರೀದಿಯಲ್ಲಿ ತೀವ್ರ ಪೈಪೋಟಿ ಇದೆ. ರೈತರಿಂದ ಹೆಚ್ಚಿನ ದರಕ್ಕೆ ಹಾಲು ಖರೀದಿಸುವುದು ಅಲ್ಲಿನ ಒಕ್ಕೂಟಗಳಿಗೆ ಅನಿವಾರ್ಯ ವೂ ಹೌದು. ರಾಜ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸದ್ಯಕ್ಕಂತೂ ಕೆಎಂಎಫ್ʼಗೆ ಪೈಪೋಟಿ ನೀಡುವ ಯಾವುದೇ ಸಂಸ್ಥೆಗಳು ಇಲ್ಲಿಲ್ಲ. ಹೀಗಿರುವಾಗ ಏಕಾಏಕಿ 8 ರಿಂದ 14 ರು. ಏರಿಸುವ ಅನಿವಾರ್ಯತೆಯಂತೂ ಇರಲಿಲ್ಲ.
ಗ್ರಾಹಕರಿಂದ 40 ರು ಒಳಗೆ ಖರೀದಿಸುವ ಹಾಲನ್ನು ಖರೀದಿಸುವ ಕೆಎಂಎಫ್ʼಗೆ ಸಂಸ್ಕರಣ ವೆಚ್ಚ, ಸಾಗಾಟ ವೆಚ್ಚ ಮತ್ತು ಸಾವಿರಾರು ಸಿಬ್ಬಂದಿಗಳ ವೇತನ ಪಾವತಿಯ ಹೊರೆ ಇರುವುದು ನಿಜ. ಆದರೆ 40 ರು. ಬೆಲೆಯ ಹಾಲಿನಿಂದ ಕೊಬ್ಬನ್ನು ಪ್ರತ್ಯೇಕಿಸಿ, ಮಜ್ಜಿಗೆ, ಮೊಸರು, ತುಪ್ಪ, ಚೀಸ್, ಸಿಹಿತಿಂಡಿ, ಪೌಡರ್, ಐಸ್ಕ್ರೀಂ ಮುಂತಾದ ಉಪ ಉತ್ಪನ್ನಗಳನ್ನು ಮಾರಲಾಗುತ್ತಿದೆ. ಅಂದರೆ ಕೆಎಂಎಫ್ ಪಡೆಯುವ ಒಂದು ಲೀಟರ್ ಹಾಲನ್ನು ಮೌಲ್ಯವರ್ಧಿತ ಉತ್ಪನ್ನವಾಗಿಸಿದಾಗ ಎರಡರಿಂದ ಮೂರು ಪಟ್ಟು ಲಾಭ ಸಿಗುವುದು ಎಲ್ಲರಿಗೂ ತಿಳಿದ ಸಂಗತಿ. ಈ ಲಾಭದಲ್ಲಿ ಅಲ್ಪಾಂಶವನ್ನು ರೈತರಿಗೆ ವರ್ಗಾಯಿಸಿದರೂ ಕೋಟ್ಯಂತರ ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲು ಅವಕಾಶ ವಿತ್ತು.
ಸಹಕಾರ ರಂಗದಲ್ಲಿ ಇರುವ ಎಲ್ಲರಿಗೂ ತಿಳಿದಿರುವಂತೆ ಕಳೆದ ಹಲವು ದಶಕಗಳಿಂದ ಕೆಎಂಎ- ಕೂಡ ರಾಜಕೀಯ ನಾಯಕರ ಹಿಡಿತದಲ್ಲಿ ಸಿಲುಕಿ ನಲುಗುತ್ತಿದೆ. ಕೆಎಂಎಫ್ ಚುಕ್ಕಾಣಿ ಹಿಡಿಯಲು ನಡೆಯುವ ಪೈಪೋಟಿ ಸಿಎಂ ಸ್ಥಾನ, ಮಂತ್ರಿ ಸ್ಥಾನದ ಪೈಪೋಟಿಗಿಂತ ಕಡಿಮೆ ಏನಿಲ್ಲ. ಬಹುತೇಕ ಸಂದರ್ಭಗಳಲ್ಲಿ ಆಡಳಿತ ಪಕ್ಷದ ನಾಯಕರು ಇಲ್ಲವೇ ಅವರ ನಿಕಟವರ್ತಿಗಳೇ ಈ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ನಿರ್ದೇಶಕ ಮಂಡಳಿಯಲ್ಲೂ ಹೆಚ್ಚಿನವರು ರಾಜಕೀಯ ಪಕ್ಷಗಳ ನೇತಾರರು. ಜಿಲ್ಲಾ ಉತ್ಪಾದಕ ಒಕ್ಕೂಟಗಳಲ್ಲಿ ನಡೆಯುವ ನೇಮಕ ಮತ್ತು ಇತರ ಪ್ರಕ್ರಿಯೆಗಳಲ್ಲಿ ನಿರ್ದೇಶಕ ಮಂಡಳಿ ಮತ್ತು ಉಳಿದ ರಾಜಕೀಯ ನಾಯಕರ ಹಸ್ತಕ್ಷೇಪ ಇದ್ದೇ ಇರುತ್ತದೆ. ಹೀಗಾಗಿ ಬಹುತೇಕ ಒಕ್ಕೂಟಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಸೇರಿಕೊಂಡಿದ್ದಾರೆ.
ರಾಜಕೀಯ ಒತ್ತಡಕ್ಕೆ ಮಣಿದು ಕಾಯಂ ಸಿಬ್ಬಂದಿಗಳಿಂದ ಹಲವು ಪಟ್ಟು ಹೊರಗುತ್ತಿಗೆ ಸಿಬ್ಬಂದಿ ಗಳನ್ನು ನೇಮಿಸಿಕೊಳ್ಳಲಾಗಿದೆ. ಹೆಚ್ಚಿನ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ಮೌಲ್ಯವರ್ಧನೆಗಿಂತ ಸಿಬ್ಬಂದಿ ವೇತನ ಪಾವತಿಯೇ ದೊಡ್ಡ ಹೊರೆಯಾಗಿದೆ. ಕರ್ನಾಟಕದಲ್ಲಿ ‘ನಂದಿನಿ’ ಎನ್ನುವುದು ಕೇವಲ ಹಾಲಿನ ಬ್ರ್ಯಾಂಡ್ ಅಲ್ಲ. ಅದು ಕರುನಾಡಿನ ಕೋಟ್ಯಂತರ ರೈತರ ಆರ್ಥಿಕ ಬೆನ್ನೆಲುಬು ಹಾಗೂ ಕನ್ನಡಿಗರ ಮನೆಮಾತಾಗಿರುವ ವಿಶ್ವಾಸದ ಪ್ರತೀಕ.
ರಾಜ್ಯ ಸುಮಾರು 25 ಲಕ್ಷ ಹೈನುಗಾರರಿಗೆ ಒಕ್ಕೂಟವು ಆಸರೆಯಾಗಿದೆ. ಒಂದು ಕುಟುಂಬಕ್ಕೆ 4 ಜನ ಎಂದುಕೊಂಡರೂ ರಾಜ್ಯದ ಒಂದು ಕೋಟಿ ಜನತೆ ಕೆಎಂಎಫ್ ಎಂಬ ಮಹಾಸಂಸ್ಥೆಯನ್ನು ನೆಚ್ಚಿಕೊಂಡಿದ್ದಾರೆ. ದೇಶದ ಇನ್ಯಾವುದೇ ಕಂಪನಿ ಅಥವಾ ಸಂಸ್ಥೆ ಇಷ್ಟೊಂದು ಜನರಿಗೆ ಆಸರೆ ಯಾದ ಉದಾಹರಣೆಗಳು ಕಡಿಮೆ. ಹೀಗಿರುವಾಗ ಸಂಸ್ಥೆಯ ವ್ಯವಹಾರ ಮತ್ತು ನಡೆಯಲ್ಲಿ ಅತಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬೇಕಾಗಿದೆ.
ಗುಜರಾತ್ನ ‘ಅಮುಲ್’ ಅಥವಾ ಕೇರಳದ ‘ಮಿಲ್ಮಾ’ ಒಕ್ಕೂಟಗಳು ತಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಲೇ, ರೈತರಿಗೂ ನ್ಯಾಯಯುತ ಬೆಲೆ ಸಿಗುವಂತೆ ಆಡಳಿತಾತ್ಮಕ ದಕ್ಷತೆಯನ್ನು ಮೆರೆದಿವೆ. ತಮಿಳುನಾಡಿನ ‘ಆವಿನ್’ ಕೂಡ ತನ್ನದೇ ಆದ ಬೆಲೆ ನಿಯಂತ್ರಣ ಮಾದರಿಯನ್ನು ಹೊಂದಿದೆ. ಆದರೆ ಕರ್ನಾಟಕದಲ್ಲಿ ಒಕ್ಕೂಟದ ಗಾತ್ರ ಮತ್ತು ವ್ಯಾಪ್ತಿ ಮಾತ್ರವಲ್ಲ ರಾಜಕೀಯ ಹಸ್ತಕ್ಷೇಪ ಹಾಗೂ ಆಡಳಿತಾತ್ಮಕ ಸೋರಿಕೆಯೂ ದೊಡ್ಡ ಸವಾಲಾಗಿ ಉಳಿದಿದೆ.
ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದರೆ ಇದೇ ಸಮಯದಲ್ಲಿ, ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ಕತ್ತರಿ ಬೀಳದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿಯೂ ಸರಕಾರದ ಮೇಲಿದೆ.
ರೈತರ ಪರವಾಗಿ ನಿಲ್ಲುವುದು ಎಂದರೆ ಗ್ರಾಹಕರನ್ನು ಕಡೆಗಣಿಸುವುದು ಎಂದರ್ಥವಲ್ಲ. ದರ ಏರಿಕೆಯ ಅನಿವಾರ್ಯತೆಯನ್ನು ಜನರಿಗೆ ಪಾರದರ್ಶಕವಾಗಿ ಮನವರಿಕೆ ಮಾಡಿಕೊಡುವ ಜೊತೆಗೆ, ಆಡಳಿತಾತ್ಮಕ ದಕ್ಷತೆಯನ್ನು ಮೆರೆಯುವ ಮೂಲಕ ಮಧ್ಯಮ ಮಾರ್ಗವನ್ನು ಕಂಡುಕೊಳ್ಳು ವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಶಸ್ವಿ ಆಡಳಿತದ ಲಕ್ಷಣ. ಸಿಎಂ ಡಿಕೆಶಿ ಹಾಲಿನ ದರ ಹೆಚ್ಚಳವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು.