ಒಂದೊಳ್ಳೆ ಮಾತು
ಒಮ್ಮೆ ಒಬ್ಬ ವ್ಯಕ್ತಿ ತನ್ನ ಸಮಸ್ಯೆಗೆ ಪರಿಹಾರ ಕೇಳಲು ಝೆನ್ ಗುರುವಿನ ಬಳಿ ಬಂದನು. ಆಗ ಆಶ್ರಮದಲ್ಲಿದ್ದ ಝೆನ್ ಗುರುಗಳಿಗೆ ಸಮಯವಿರಲಿಲ್ಲ. ಆಗಲೇ ಒಂದಷ್ಟು ಜನ ಝೆನ್ ಗುರುಗಳನ್ನು ಕಾಣಲು ಬಂದಿದ್ದು ಹೊರಗೆ ಕಾಯುತ್ತಿದ್ದರು. ಇದರಿಂದ ಆಗಿನ್ನೂ ಬಂದ ವ್ಯಕ್ತಿ ತನ್ನ ಸರದಿಗೆ ಕಾಯುತ್ತಾ ಕುಳಿತನು. ಬಹಳ ಹೊತ್ತು ಕಾದುಕಾದು ಸಾಕಾಗಿ ಅವನಿಗೆ ಕಿರಿಕಿರಿಯಾಗಿತ್ತು.
ಅಂತೂ ಅವನ ಸರದಿ ಬಂದು ಗುರುಗಳು ಆತನಿಗೆ ಬರಲು ಹೇಳಿ ಕಳಿಸಿದರು. ಕಾದು ಸಾಕಾ ಗಿದ್ದ ವ್ಯಕ್ತಿಗೆ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತ್ತು. ಆಶ್ರಮದೊಳಗೆ ಹೋಗುವ ಮೊದಲು ಅವನು ತನ್ನ ಪಾದರಕ್ಷೆಗಳನ್ನು ಬಿಚ್ಚಿ ಅ ಬಿಸಾಕಿ, ಆಶ್ರಮದ ಬಾಗಿಲನ್ನು ಧಡಾರ್ ಅಂತ ತಳ್ಳಿ, ಒಳಗೆ ಬಂದು ಬಾಗಿಲನ್ನು ಜೋರಾಗಿ ಹಾಕಿ ಗುರುಗಳ ಬಳಿ ಬಂದನು.
ಗುರುಗಳು ಮುಗುಳ್ನಗುತ್ತಾ ಅವನನ್ನೇ ಗಮನಿಸುತ್ತಿದ್ದರು. ಸರಿ, ಆತ ಒಳಗೆ ಬಂದು ಗುರು ಗಳ ಮುಂದೆ ನಿಂತು, ಏನೋ ಹೇಳಲು ಹೊರಟ. ತಕ್ಷಣ ಗುರುಗಳು, “ನೀನು ಏನನ್ನೇ ಹೇಳುವ ಮೊದಲು, ನೀನು ಬರುವಾಗ ಹಾಕಿಕೊಂಡು ಬಂದ ಬಾಗಿಲಿಗೆ ಮತ್ತು ನಿನ್ನ ಪಾದರಕ್ಷೆಗಳಿಗೆ ಕ್ಷಮೆ ಕೇಳಿ ಬಾ" ಎಂದರು.
ಇದನ್ನೂ ಓದಿ: Roopa Gururaj Column: ಕಷ್ಟ ಬಂದಾಗ ನಾವು ಏನಾಗುತ್ತೇವೆ ?
ಆ ವ್ಯಕ್ತಿಗೆ ಆಶ್ಚರ್ಯವಾಗಿ, “ಇದೇನು ಗುರುಗಳೇ, ನಾನು ಕಾಲಲ್ಲಿ ಧರಿಸುವ ಪಾದರಕ್ಷೆ ಹಾಗೂ ಬಾಗಿಲಿಗೆ ಕ್ಷಮೆ ಕೇಳಬೇಕೇ? ಏನು ಅಂತ ಹೇಳುತ್ತಿದ್ದೀರಿ?" ಎಂದ. ಗುರುಗಳು ಶಾಂತಚಿತ್ತದಿಂದ, “ಇಲ್ಲಪ್ಪ, ನೀನು ಅವುಗಳ ಮೇಲೆ ಕೋಪ ಮಾಡಿಕೊಂಡೆ ಎಂದ ಮೇಲೆ ಅವುಗಳಿಗೂ ನಿನಗೂ ಏನಾದರೂ ಸಂಬಂಧವಿರಬೇಕು ಅಲ್ಲವೇ? ನಿನಗೆ ಯಾರ ಮೇಲೆ ಕೋಪ ಮಾಡಿಕೊಳ್ಳುವ ಅರ್ಹತೆ ಇದೆಯೋ ಅವನ್ನು ಪ್ರೀತಿಸುವ ಅರ್ಹತೆಯೂ ಇರಬೇಕು.
ಆದ್ದರಿಂದ ನೀನು ಯಾವ ವಸ್ತುಗಳ ಮೇಲೆ ಅಥವಾ ವ್ಯಕ್ತಿಗಳ ಮೇಲೆ ಕೋಪ ಮಾಡಿ ಕೊಳ್ಳುವೆಯೋ ಅವರಿಗೆ ಕ್ಷಮೆ ಕೇಳಲೇಬೇಕು. ಆಗ ಮಾತ್ರ ನಿನ್ನ ಮತ್ತು ಅವುಗಳ ಬಾಂಧವ್ಯ ಗಟ್ಟಿಯಾಗಿರುತ್ತದೆ. ಸಂಬಂಧಗಳು ಹುಟ್ಟುವುದು ಮನಸ್ಸಿನಿಂದ. ಆದ್ದರಿಂದ ಅವುಗಳ ಮೇಲೆ ಸುಖಾಸುಮ್ಮನೆ ಕೋಪ ಮಾಡಿಕೊಂಡರೆ, ಅದಕ್ಕಾಗಿ ಕ್ಷಮೆ ಕೇಳಬೇಕು" ಎಂದರು.
ಇದೆಲ್ಲವನ್ನೂ ಕೇಳಿದ ವ್ಯಕ್ತಿ ತಾನು ಬಾಗಿಲಿಗೆ ತಟ್ಟಿದ ಶಬ್ದಕ್ಕಿಂತಲೂ ತನ್ನೊಳಗಿನ ಅಹಂಕಾರ ಹೆಚ್ಚು ಗದ್ದಲ ಮಾಡಿದೆ ಎಂದು ನಿಧಾನವಾಗಿ ಹೊಳೆಯಿತು. ತಾನು ಪಾದರಕ್ಷೆ ಯನ್ನು ಬಿಸಾಕಿದಷ್ಟೆ ಕೋಪ ತನ್ನೊಳಗೆ ಆಳವಾಗಿ ನಾಟಿಕೊಂಡಿರುವುದೂ ಗೊತ್ತಾಯಿತು. ಗುರುವಿನ ಮಾತುಗಳು ಕೋಪವನ್ನು ಕರಗಿಸಿದವು,
ಮನಸ್ಸು ನಿರಾಳವಾಯಿತು. ಅವನು ಮೆಲ್ಲಗೆ ಗುರುಗಳ ಮುಂದೆ ತಲೆಬಾಗಿ, ಹೊರಗೆ ಹೋಗಿ ಪಾದರಕ್ಷೆಗಳನ್ನು ಸರಿಯಾಗಿ ಜೋಡಿಸಿ, ಸಣ್ಣ ಮಗುವಿನಂತೆ ಬಾಗಿಲಿಗೆ ಕೈ ಜೋಡಿಸಿ ಕ್ಷಮೆ ಕೇಳಿದ.
ಈ ರೀತಿಯ ನಡವಳಿಕೆ ನಮ್ಮಲ್ಲೂ ಕಂಡುಬರುತ್ತದೆ. ಮಾಡಿದ ಅಡುಗೆ ಇಷ್ಟವಿಲ್ಲವೆಂದು ತಟ್ಟೆ-ಲೋಟದ ಮೇಲೆ ಸಿಟ್ಟನ್ನು ತೋರಿಸಿರುತ್ತೇವೆ. ಯಾರೊಡನೆಯಾದರೂ ವಾದ ಮಾಡುವಾಗ ವಿಷಯ ನಮಗೆ ವಿರುದ್ಧವಾಗುತ್ತಿದೆ ಎಂದಾದಾಗ ಸಿಟ್ಟಿನಿಂದ ಮೇಜು, ಕುರ್ಚಿ, ಬಾಗಿಲು, ಗೋಡೆ ಇವುಗಳನ್ನು ಬಡಿದು ನಾವು ಹೆಚ್ಚು ನೋವು ಅನುಭವಿಸುತ್ತೇವೆ.
ಕೋಪಗೊಂಡಾಗ ಮಾಡಿದ ಅಡುಗೆಯನ್ನು ಊಟ ಮಾಡದೆ ನಮ್ಮನ್ನು ನಾವು ಶಿಕ್ಷಿಸಿ ಕೊಳ್ಳುತ್ತೇವೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬಂದರೆ ಪುಸ್ತಕದ ಮೇಲೆ ನಮ್ಮ ಸಿಟ್ಟು ಹರಿಯುತ್ತದೆ. ಆದರೆ ಇದ್ಯಾವುದರಿಂದಲೂ ಆ ಸಿಟ್ಟು ಪ್ರಾರಂಭವಾಗಿರುವುದಿಲ್ಲ; ಅದು ನಮ್ಮೊಳಗೆ ಬೇರೆಯೇ ಕಾರಣಕ್ಕೆ ಹುಟ್ಟಿ ಅನಗತ್ಯವಾಗಿ ಅವುಗಳ ಮೇಲೆ ಹರಿದಿರುತ್ತದೆ.
ಕೆಲವೊಮ್ಮೆ ಸಂಬಂಧಪಡದ ಮನುಷ್ಯರ ಮೇಲೆ ಕೂಡ ಸಿಟ್ಟು ಮಾಡಿಕೊಳ್ಳುತ್ತೇವೆ. ಇವೆಲ್ಲವೂ ಕೊನೆಗೆ ಸಂಬಂಧಗಳನ್ನು ಹಾಳುಮಾಡುತ್ತವೆ. ಆದ್ದರಿಂದ ಸಿಟ್ಟಿನ ಮೇಲೆ, ಅಹಂಕಾರದ ಮೇಲೆ ನಿಯಂತ್ರಣ ಪಡೆದುಕೊಳ್ಳುವುದು ಬಹಳ ಮುಖ್ಯ. ಎಂಥದೇ ಸಮಯದಲ್ಲೂ ಮನಸ್ಸಿನ ನಿಯಂತ್ರಣವನ್ನು ಕಾಯ್ದುಕೊಂಡಾಗ ನಮ್ಮ ಯೋಚನೆಗಳು, ಮಾತನಾಡುವ ರೀತಿ ಸಂಬಂಧಗಳನ್ನು ನಿಭಾಯಿಸುವ ಪರಿ ಸುಧಾರಿಸುತ್ತಾ ಹೋಗುತ್ತದೆ.
ಸಿಟ್ಟಿಗೆ, ಅಹಂಕಾರಕ್ಕೆ ಎಲ್ಲವನ್ನೂ ಹಾಳು ಮಾಡಲು ಒಂದು ಕ್ಷಣ ಸಾಕು. ಸಮಾಧಾನ ದಿಂದ ಬದುಕು ಕಟ್ಟಿಕೊಳ್ಳಲು ನಿತ್ಯ ಪ್ರಯತ್ನಿಸಬೇಕು.