ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

G N Bhat Column: ಭಾರತದ ಅಸ್ಮಿತೆ ಎತ್ತಿಹಿಡಿದ ಏಕೈಕ ಪ್ರಧಾನಿ ಮೋದಿ

ಒಬ್ಬ ವ್ಯಕ್ತಿಯ ವಿಶೇಷಗುಣ, ಅವನನ್ನು ಇತರರಿಂದ ಬೇರ್ಪಡಿಸಿ ತೋರಿಸುವ ಲಕ್ಷಣ ಎಂದು ಈ ಮಾತಿನ ಅರ್ಥ. ಈ ವಿಶೇಷ ಲಕ್ಷಣವು ರೂಪದ್ದಾಗಿರಬಹುದು; ವಸ್ತ್ರದ್ದಾಗಿರಬಹುದು; ಮಾತಿನದ್ದಾಗಿರ ಬಹುದು; ಅಂಗಚೇಷ್ಟೆಯದ್ದಾಗಿರಬಹುದು; ಕೊರಳ ಕೊಂಕಿನದ್ದಾಗಿರಬಹುದು. ಯಾವುದೋ ಒಂದು ದೇಹಗುಣವು ಅಥವಾ ಮನೋಗುಣವು ಮಿಕ್ಕೆಲ್ಲ ವಿಷಯಗಳಲ್ಲಿಯೂ ಇತರರನ್ನೇ ಹೋಲುತ್ತಾ, ಆದರೆ ಅವರಿಂದ ಪ್ರತ್ಯೇಕ ಮಾಡಿತೋರಿಸುವ ಆ ಗುಣವೇ ವ್ಯಕ್ತಿಪ್ರಭಾವ-ಪರ್ಸನಾಲಿಟಿ.

ಮೋದಿ@77

ಗ.ನಾ.ಭಟ್ಟ

76 ಸಂವತ್ಸರ ಕಳೆದು 77ನೇ (17.09.1950) ಸಂವತ್ಸರಕ್ಕೆ ಪದಾರ್ಪಣ ಮಾಡಿದ ನರೇಂದ್ರ ದಾಮೋದರ ದಾಸ್ ಮೋದಿಯವರು ನಾವು ಕಂಡ ಎಲ್ಲಾ ಪ್ರಧಾನಮಂತ್ರಿಗಳಿಗಿಂತ ತುಂಬಾ ಭಿನ್ನರು. ಅವರು ಚೆನ್ನಾಗಿ ಮಾತನಾಡುತ್ತಾರೆ; ಒಪ್ಪವಾದ ಉಡುಪನ್ನು ಧರಿಸುತ್ತಾರೆ; ಹೊಸ ಹೊಸ ವಿಚಾರಗಳನ್ನು ಮಂಡಿಸುತ್ತಾರೆ; ಭಾರತವನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ; ತರುಣ-ತರುಣಿಯರ ಮೇಲೆ ಅಪಾರ ಭರವಸೆಯನ್ನು ಇಟ್ಟಿದ್ದಾರೆ; ಸಾಮಾಜಿಕ ಮಾಧ್ಯಮದಲ್ಲಿ ಕ್ರಿಯಾಶೀಲರಾಗಿದ್ದಾರೆ; ಸೆಲ್ಫಿಗಳನ್ನು ಕ್ಲಿಕ್ಕಿಸುತ್ತಾರೆ; ಜೊತೆಗೆ ಕಠಿಣ ಶಿಸ್ತನ್ನು ಪಾಲಿಸುತ್ತಾರೆ; ಜನರೊಡನೆ ಬೆರೆಯುತ್ತಾರೆ; ವಿದೇಶಗಳಲ್ಲಿ ಭಾರತದ ವೈಭವವನ್ನು ಎತ್ತಿಹಿಡಿಯುತ್ತಾರೆ; ಭಾರತದ ಪ್ರಗತಿಗೆ ನಿರಂತರ ಶ್ರಮಿಸುತ್ತಾರೆ.

ಹೀಗೆ-ಇಂತಹ ನೂರಾರು ಸಕಾರಾತ್ಮಕ ಗುಣಗಳನ್ನು ಹೊಂದಿದ ಮೋದಿಯವರಲ್ಲಿ ಇನ್ನೂ ಎರಡು ವಿಶೇಷ ಗುಣಗಳಿವೆ. ಒಂದು ವಿರಕ್ತಿ, ಇನ್ನೊಂದು ವ್ಯಕ್ತಿಪ್ರಭಾವ. ಅವರ ವಿರಕ್ತಿ ಮಹಾ ಯುಕ್ತಿ ವಿದನಾದ ಚಾಣಕ್ಯನಿಗೆ ಸದೃಶವಾದುದು ಎಂದರೆ ಅತ್ಯುಕ್ತಿಯಾಗಲಾರದು. ಚಾಣಕ್ಯ ಸ್ವಾರ್ಥಕ್ಕಾಗಿ ಮಂತ್ರಿ ಯಾಗಿದ್ದವನಲ್ಲ.

ಅವನು ತೀರಾ ವಿರಕ್ತ; ಒಬ್ಬ ವೈದಿಕ ಬ್ರಾಹ್ಮಣ. ಅವನ ಕುರಿತಾದ ಒಂದು ಮಾತು ಹೀಗಿದೆ- ಅಹೋ ರಾಜಾಧಿರಾಜ ಮಂತ್ರಿಣೋ ವಿಭೂತಿಃ | ಉಪಲಶಕಲಮೇತತ್ ಭೇದಕಂ ಗೋಮಯಾನಾಮ್ || ವಟುಭಿರುಪಹೃತಾನಾಂ ಬರ್ಹಿಣಾಂ ಕೂಟಮೇತತ್ | ಶರಣಮಪಿ ಸಮಿದ್ಭಿಃ ಶುಷ್ಯಮಾಣಾಭಿರಂತರ್ವಿ ನಮಿತಪಟಲಾಂತಂ ದೃಶ್ಯತೇ ಜೀರ್ಣಕುಡ್ಯಮ್ | ತತ್ಸ್ಥಾನೇ ಖಲ್ವಸ್ಯ ವೃಷಲೋ ದೇವಶ್ಚಂದ್ರಗುಪ್ತಃ | ಕುತಃ | ನಿರೀಹಾಣಾಮೀಶಸ್ತಣಮಿವ ತಿರಸ್ಕಾರವಿಷಯಃ || ‘ಆಹಾ, ರಾಜಾಧಿರಾಜ ಚಂದ್ರಗುಪ್ತನ ಮಂತ್ರಿಯ ವೈಭವವನ್ನು ಏನೆಂದು ವರ್ಣಿಸೋಣ!

ಇದನ್ನೂ ಓದಿ: G N Bhat Column: ಶ್ರೀಕೃಷ್ಣನ ಗೋಪೀವಿಲಾಸದ ಮರ್ಮ

ಹೋಮಕ್ಕಾಗಿ ಮಾಡಿಟ್ಟ ಗೋಮಯದ ಉಂಡೆ (ಬೆರಣಿ)ಗಳನ್ನು ಒಡೆಯುವ ಕಲ್ಲುತುಂಡು ಬಿದ್ದಿದೆ; ಶಿಷ್ಯರು ತಂದು ಹಾಕಿದ ದರ್ಭೆ ಹುಲ್ಲಿನ ಹೊರೆಗಳು ಬಿದ್ದಿವೆ; ಈ ಮನೆಯಾದರೋ ಪಾಳುಗೋಡೆ ಗಳದು; ಒಣಗಿದ ಸಮಿತ್ತುಗಳ ಭಾರದಿಂದ ಇದರ ಛಾವಣಿ ಬಗ್ಗಿ ಹೋಗಿದೆ; ಇಂತಹ ಮನೆಯಲ್ಲಿರು ವವನು ತನ್ನ ಒಡೆಯನಾದ ಚಂದ್ರಗುಪ್ತನನ್ನು ‘ಎಲೋ ಹುಡುಗ’ ಎಂದು ಕರೆಯುವುದು ಯುಕ್ತವಾಗಿಯೇ ಇದೆ.

ಏಕೆಂದರೆ ಆಸೆಯಿಲ್ಲದವರಿಗೆ ರಾಜನೆಂಬುದು ಹುಲ್ಲಿನಂತೆ ಲೆಕ್ಕಕ್ಕೆ ಬಾರದ ವಸ್ತುವೇ ಆಗಿದೆ’ ಎಂದು ವಿಶಾಖಾದತ್ತನ ಮುದ್ರಾರಾಕ್ಷಸದಲ್ಲಿ ಬರುತ್ತದೆ. ಇಂಥಾದ್ದು ನರೇಂದ್ರ ಮೋದಿಯವರ ವ್ಯಕ್ತಿತ್ತ್ವ. ಅವರಿಗೆ ಸ್ವಂತದ್ದು ಅಂತ ಹೇಳಿಕೊಳ್ಳುವುದು ಏನೂ ಇಲ್ಲ. ಇತರ ರಾಜಕಾರಣಿಗಳಲ್ಲಿ ಇರುವಂತಹ ಐಶ್ವರ್ಯ, ಸಂಪತ್ತು, ಕೋಟಿ ಕೋಟಿ ಹಣ, ಹತ್ತಿಪ್ಪತ್ತು ಸೈಟ್, ರಾಜಕಾರಣವನ್ನೇ ಒಂದು ವೃತ್ತಿಯಾಗಿ ಮಾಡಿ ಕೊಂಡು ತಮ್ಮ ಆಸ್ತಿಯನ್ನು ಮಕ್ಕಳು- ಮೊಮ್ಮಕ್ಕಳು- ಮರಿಮಕ್ಕಳು, ಹೆಂಡತಿ -ಸೊಸೆ-ಮಗಳು ಮುಂತಾ ದವರಿಗೆ ಹಂಚುವುದಕ್ಕೆ ಅವರಿಗೆ ಕುಂಟುಂಬ ಅಂತ ಏನಾದರೂ ಇದೆಯೇ? ಖಂಡಿತ ಇಲ್ಲ.

ಇರುವ ಸಹೋದರರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ. ಇಂತಹವರನ್ನು ವಿರಕ್ತರು ಅಂತ ಹೇಳುತ್ತೀರೋ ಅಥವಾ ಅನುರಕ್ತರು ಅಂತ ಹೇಳುತ್ತೀರೋ? ಈ ನೆಲೆಯಲ್ಲೇ ಮೋದಿಯವರನ್ನು ಮಹಾನೀತಿವಿದ ಚಾಣಕ್ಯನಿಗೆ ಹೋಲಿಸಿದ್ದು. ಇನ್ನು ಅವರ ವ್ಯಕ್ತಿ ಪ್ರಭಾವ ಅಥವಾ ವ್ಯಕ್ತಿ ಮಹಿಮೆ. ಇದನ್ನೇ ಇಂಗ್ಲಿಷಿನಲ್ಲಿ ‘ಪರ್ಸನಾಲಿಟಿ’ ಅಂತ ಕರೆಯುವುದು.

ಒಬ್ಬ ವ್ಯಕ್ತಿಯ ವಿಶೇಷಗುಣ, ಅವನನ್ನು ಇತರರಿಂದ ಬೇರ್ಪಡಿಸಿ ತೋರಿಸುವ ಲಕ್ಷಣ ಎಂದು ಈ ಮಾತಿನ ಅರ್ಥ. ಈ ವಿಶೇಷ ಲಕ್ಷಣವು ರೂಪದ್ದಾಗಿರಬಹುದು; ವಸ್ತ್ರದ್ದಾಗಿರಬಹುದು; ಮಾತಿನದ್ದಾಗಿರಬಹುದು; ಅಂಗಚೇಷ್ಟೆಯದ್ದಾಗಿರಬಹುದು; ಕೊರಳ ಕೊಂಕಿನದ್ದಾಗಿರಬಹುದು. ಯಾವುದೋ ಒಂದು ದೇಹಗುಣವು ಅಥವಾ ಮನೋಗುಣವು ಮಿಕ್ಕೆಲ್ಲ ವಿಷಯಗಳಲ್ಲಿಯೂ ಇತರರನ್ನೇ ಹೋಲುತ್ತಾ, ಆದರೆ ಅವರಿಂದ ಪ್ರತ್ಯೇಕ ಮಾಡಿತೋರಿಸುವ ಆ ಗುಣವೇ ವ್ಯಕ್ತಿಪ್ರಭಾವ-ಪರ್ಸನಾಲಿಟಿ. ನರೇಂದ್ರ ಮೋದಿಯವರು ಈ ಗುಣಗಳನ್ನು ಸಮೃದ್ಧವಾಗಿ ಹೊಂದಿದ್ದಾರೆ. ಅವರ ಭಾಷಣಕ್ಕೆ ಲಕ್ಷಾಂತರ ಜನ ಸೇರುವುದು ಇದೇ ಕಾರಣಕ್ಕಾಗಿ. ಅವರು ಅಷ್ಟೇ ಔಚಿತ್ಯಪೂರ್ಣವಾಗಿ ಮಾತನಾಡುತ್ತಾರೆ.

ವಿರೊಧಪಕ್ಷದವರು ಯಾರೇ ಇರಲಿ. ಅವರನ್ನು ನಿಂದಿಸದೇ, ಅವರ ಕ್ಷುಲ್ಲಕ, ನೀಚ ಮಟ್ಟಕ್ಕೆ ಇಳಿಯದೆ, ಅವರ ಹೆಸರನ್ನು ಹೇಳದೇ, ವ್ಯಂಗ್ಯದ ಚಾಟಿಯೇಟು ಬೀಸುವುದರ ಮೂಲಕ ಅವರ ಹೀನಾತಿಹೀನ ನೈಚ್ಯವನ್ನು ಬಯಲಿಗೆಳೆಯುತ್ತಾರೆ. ಜೊತೆ ಜೊತೆಗೆ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತಾರೆ. ಭಾರತದ ಪುರೋಭಿವೃದ್ಧಿಗಾಗಿ ಸದಾ ಚಿಂತಿಸುತ್ತಾರೆ ಮತ್ತು ಅವನ್ನು ಅನುಷ್ಠಾನ ಗೊಳಿಸಲು ಸ್ವಲ್ಪವೂ ತಡ ಮಾಡುವುದಿಲ್ಲ.

ಖಚಿತ ನಿಲುವು; ಖಚಿತ ಅಭಿಪ್ರಾಯ, ದೀರ್ಘದರ್ಶಿತ್ವ-ಇವೇ ಮೊದಲಾದ ಗುಣಗಳು ಅವರನ್ನು ಇತರರಿ ಗಿಂತ ಭಿನ್ನವಾಗಿಸಿವೆ. ನಮ್ಮ ದೇಶ, ನಮ್ಮ ರಾಷ್ಟ್ರ ಎಂಬ ಅಭಿಮಾನ ಅವರ ಧಮನಿ ಧಮನಿಗಳಲ್ಲೂ ಹರಿದಾಡುತ್ತಿರುತ್ತದೆ. ಇಂತಹ ವ್ಯಕ್ತಿ ಅನೇಕ ಕಾರಣಗಳಿಂದ ನಮಗೆ ಅಚ್ಚುಮಚ್ಚಿ ನವರಾಗಿದ್ದಾರೆ. ಮಾತ್ರವಲ್ಲ, ಮಾದರಿಯೂ ಆಗಿದ್ದಾರೆ.

ಒಂದನೆಯ ಕಾರಣ-ಮೋದಿಯವರು ತಮಗೆ ಅಷ್ಟೇನೂ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂಬುದರ ಬಗ್ಗೆ ತಪ್ಪಿತಸ್ಥ ಮನೋಭಾವವನ್ನೇನೂ ಹೊಂದಿಲ್ಲ. ಆ ಮೂಲಕ ಅವರು- ಅಧಿಕಾರ ಸ್ಥಾನದಲ್ಲಿದ್ದುಕೊಂಡು ದೇಶದ ಸೇವೆ ಮಾಡಬೇಕೆಂದರೆ ಅಂತಹವರು ಇಂಗ್ಲಿಷನ್ನು ಬಲ್ಲ ಭಾರತೀಯ ಕುಲೀನ ವರ್ಗಕ್ಕೆ ಸೇರಿರಬೇಕು ಎಂಬ ಜನಜನಿತ ಅಭಿಪ್ರಾಯನ್ನು ಅಲ್ಲಗಳೆದಿದ್ದಾರೆ. ಅಂತಹ ಅಭಿಪ್ರಾಯ ಅಪ್ರಸ್ತುತ ಎಂಬ ಪ್ರಬಲ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.

ಅಧಿಕಾರದಲ್ಲಿದ್ದು ಯಶಸ್ವಿಯಾಗಬೇಕಾದರೆ ಬದ್ಧತೆ ಮತ್ತು ತಾಯಿನಾಡಿನ ಸೇವೆ ಮಾಡಲು ನಿಮಗೆ ಎಷ್ಟು ಸಾಮರ್ಥ್ಯವಿದೆ ಎನ್ನುವುದು ಮುಖ್ಯವೇ ಹೊರತು ಇಂಗ್ಲಿಷ್ ಮೇಲಿನ ಪ್ರಭುತ್ವವಲ್ಲ ಎಂಬು ದನ್ನು ಅವರು ಮತ್ತೆ ಮತ್ತೆ ರುಜುವಾತುಪಡಿಸಿದ್ದಾರೆ. ಎರಡನೆಯ ಕಾರಣ-ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಕುಲೀನ ಅಥವಾ ಎಲೈಟ್ ವರ್ಗಗಳಿಗೆ ಸೇರದ ಮತ್ತು ಬ್ರಾಹ್ಮಣೇತರರಾಗಿ ತೀರಾ ಸಾಮಾನ್ಯ ಹಿನ್ನೆಲೆ ಯಿಂದ ಬಂದು, ಪ್ರಧಾನಿ ಹುದ್ದೆಗೇರಿದ ಮೂರು ವ್ಯಕ್ತಿಗಳಲ್ಲಿ ನರೇಂದ್ರ ಮೋದಿ ಒಬ್ಬರು.

ಒಬ್ಬರು ದೇವೇಗೌಡರು, ಇನ್ನೊಬ್ಬರು ಲಾಲ್ ಬಹಾದೂರ್ ಶಾಸಿ, ಮತ್ತೊಬ್ಬರು ಮೋದಿಯವರು. ಮಿಕ್ಕಂತೆ ದೇಶದ ಚುಕ್ಕಾಣಿ ಹಿಡಿದಿದ್ದ ನೆಹರೂ, ಇಂದಿರಾ, ರಾಜೀವ್, ವಿ.ಪಿ.ಸಿಂಗ್, ಪಿವಿಎನ್, ವಾಜಪೇಯಿ, ಐ.ಕೆ ಗುಜ್ರಾಲ್, ಮೊರಾರ್ಜಿ, ಮನಮೋಹನ್ ಸಿಂಗ್- ಇವರೆಲ್ಲರೂ ಒಂದೋ ಜಾತಿಯಿಂದ ಬ್ರಾಹ್ಮಣರು; ಇಲ್ಲವೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕುಲೀನ ವರ್ಗಕ್ಕೆ ಸೇರಿದವರೇ ಆಗಿದ್ದಾರೆ.

ವಿ.ಪಿ.ಸಿಂಗ್ ಮತ್ತು ಮನಮೋಹನ್ ಬ್ರಾಹ್ಮಣರಲ್ಲದಿದ್ದರೂ ಅಧಿಕಾರಾರೂಢ ಎಲೈಟ್ ವರ್ಗದ ಭಾಗವೇ ಆಗಿದ್ದಾರೆ. ಮೋದಿಯವರ ವಿಚಾರ ಹಾಗಲ್ಲ. ಅವರು ಸಾಮಾನ್ಯ ಬಡ ಕುಟುಂಬದಿಂದ ಬಂದವರು. ಬಡಬೋರೇಗೌಡನ ದುಃ ಖದುಮ್ಮಾನಗಳನ್ನು, ಅವರು ಎದುರಿಸುತ್ತಿರುವ ಕುಂದು ಕೊರತೆಗಳನ್ನು, ಅವರು ಅಂತರಂಗದಲ್ಲಿ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಚೆನ್ನಾಗಿ ಬಲ್ಲವರು. ಜನರ ನಾಡಿಮಿತ ವನ್ನು ಅವರಷ್ಟು ಚೆನ್ನಾಗಿ ಅರಿತ ಮತ್ತೊಬ್ಬ ವ್ಯಕ್ತಿಯನ್ನು ಕಾಣುವುದು ಅಷ್ಟು ಸುಲಭವಲ್ಲ.

ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಅವರು ಗಳಿಸಿದ ಪ್ರಚಂಡ ವಿಶ್ವಾಸಕ್ಕೆ ಇಂತಹ ಗುಣಗಳೇ ಕಾರಣ. ಮೂರನೆಯ ಕಾರಣ- ವಾರ್ಡ್ ನಗರದ ರೈಲ್ವೆ ಸ್ಟೇಷನ್‌ನಲ್ಲಿ ತನ್ನ ತಂದೆಗೆ ಟೀ ಅಂಗಡಿಯನ್ನು ನಡೆಸಲು ಸಹಾಯ ಮಾಡುತ್ತಿದ್ದ ಮತ್ತು ಮುಂದೆ ಅದೇ ನಗರದ ಬಸ್ ಸ್ಟಾಪ್‌ನ ಹತ್ತಿರ ತನ್ನ ಸಹೋದರನ ಜೊತೆ ಟೀ ಅಂಗಡಿ ತೆರೆದವನೊಬ್ಬ, ಕೆಳಮಧ್ಯಮ ಕುಟುಂಬದವ ನೊಬ್ಬ ದೇಶವೊಂದರ ಪ್ರಧಾನಿಯೂ ಆಗಬಲ್ಲ, ದಕ್ಷ ಆಡಳಿತವನ್ನೂ ನಡೆಸಬಲ್ಲ, ಅಷ್ಟೇ ಜನಾನುರಾಗಿಯೂ ಆಗಬಲ್ಲ ಎಂಬುದನ್ನು ತೋರಿಸಿಕೊಟ್ಟವರು ಇದೇ ನರೇಂದ್ರ ಮೋದಿ. ಇಂತಹ ಹಲವು ಕಾರಣಗಳಿಂದ ಮೋದಿ ನಮಗೆಲ್ಲ ಅಚ್ಚುಮೆಚ್ಚಿನ, ಮಾದರಿಯ ವ್ಯಕ್ತಿಯೇ ಆಗಿದ್ದಾರೆ. ‌

ದೇಶವನ್ನು ಆಮೂಲಾಗ್ರವಾಗಿ ಪರಿವರ್ತಿಸಬಲ್ಲ ದೂರದೃಷ್ಟಿ, ರಾಜನೀತಿಜ್ಞತೆ ಮತ್ತು ಧೈರ್ಯ ವನ್ನು ಹೊಂದಿರುವ ನಾಯಕರು ನಮ್ಮಲ್ಲಿ ತುಂಬಾ ಕಡಿಮೆಯೇ ಇದ್ದಾರೆ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ನರೇಂದ್ರ ಮೋದಿ ಒಬ್ಬರು. ಇದಕ್ಕೊಂದು ಉದಾಹರಣೆ ಕೊಡುವು ದಾದರೆ- ಸ್ವಾತಂತ್ರ್ಯ ಬಂದು 60-70 ವರ್ಷಗಳಾದರೂ ನಮ್ಮ ಈಶಾನ್ಯ ಭಾರತ (ಅಸ್ಸಾಂ, ಸಿಕ್ಕಿಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ) ಕಡೆಗಣಿಸಲ್ಪಟ್ಟಷ್ಟು ಇತರ ಯಾವ ರಾಜ್ಯಗಳೂ ಕಡೆಗಣಿಸಲ್ಪಟ್ಟಿರಲಿಲ್ಲ.

ಯಾವ ಸರಕಾರವೂ ಅದರ ಅಭಿವೃದ್ಧಿ ಕಡೆಗೆ ಗಮನವೇ ಹರಿಸಿರಲಿಲ್ಲ. ನಮ್ಮ ಎಷ್ಟೋ ರಾಜಕಾರಣಿಗಳಿಗೆ ಈಶಾನ್ಯ ಭಾರತದ ಬಗ್ಗೆ ಸದ್ಭಾವನೆಯೇ ಇರಲಿಲ್ಲ. ಅದು ಅತ್ಯಂತ ಔದಾ ಸೀನ್ಯಕ್ಕೆ ಒಳಗಾದ ಪ್ರದೇಶ ವಾಗಿತ್ತು. ಅನೇಕರಿಗೆ ಅದು ಭಾರತದ ಮುಖ್ಯವಾಹಿನಿಗಳಲ್ಲಿ ಒಂದು ಎಂಬ ಭಾವವೇ ಇರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಈಗ ಏಳೆಂಟು ವರ್ಷಗಳಲ್ಲಿ ಅಲ್ಲಿಯ ಮೂಲಸೌಲಭ್ಯಗಳ ಕೊರತೆಯು ಗಣನೀಯ ವಾಗಿ ಸುಧಾರಿಸಿದೆ.

ಎಷ್ಟೋ ಪ್ರದೇಶಗಳು ರೈಲು, ಆಧುನಿಕ ಹೆದ್ದಾರಿಗಳು ಮತ್ತು ಸೇತುವೆಯನ್ನು ಕಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈಶಾನ್ಯ ರಾಜ್ಯಗಳು ಭಾವನಾತ್ಮಕವಾಗಿ ಭಾರತದೊಂದಿಗೆ ಹೆಚ್ಚಿಗೆ ಬೆರೆಯುತ್ತಾ ತಾನೂ ಈ ದೇಶದ ಒಂದು ಭಾಗ ಎಂಬ ಭಾವವನ್ನು ತಳೆದಿದೆ. ಈ ಭಾಗಗಳಿಂದ ಮೂಡಿಬರುತ್ತಿರುವ ನೂರಾರು ಕ್ರೀಡಾಪಟುಗಳು ಮಾಡುತ್ತಿರುವ ಸಾಧನೆಯನ್ನು ಕಂಡು ಇಡೀ ಭಾರತವೇ ಸಂಭ್ರಮಿಸುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ನರೇಂದ್ರ ಮೋದಿ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಇಲ್ಲಿ ನಾವು ಕಾಣುವುದು ಮೋದಿ ಯವರ ಇಂಟೆಗ್ರಿಟಿ-ಸಮಗ್ರತೆ. ವಸುಧೈವ ಕುಟುಂಬಕಮ್ ಎಂಬ ಉದಾರ ತತ್ತ್ವ.

ನಮ್ಮ ದುರದೃಷ್ಟವೆಂದರೆ ಭಾರತದ ಎಷ್ಟೋ ರಾಜಕಾರಣಿಗಳಿಗೆ ಇಂತಹ ಅನುಪಮ, ಸುಂದರ, ಅರ್ಥಪೂರ್ಣ ಧ್ಯೇಯವಾಕ್ಯ ಅರ್ಥವೇ ಆಗುವುದಿಲ್ಲ. ಆದರೂ ಅವರು ನಮ್ಮನ್ನು ಆಳುವವರು. ಎಂತಹ ಚೋದ್ಯ!

ಇನ್ನೊಂದು ಮಹತ್ವದ ಸಂಗತಿಯೆಂದರೆ- ಮೋದಿಯವರು ಭಾರತದ ಜೀವನಾಡಿಯಾದ ದೇವಾಲಯಗಳ ಬಗ್ಗೆ, ನಮ್ಮ ಸಂಸ್ಕೃತಿ, ಪುರಾಣ-ಇತಿಹಾಸಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಭಾರತದ ಮೂಲೆ ಮೂಲೆಯಲ್ಲೂ ಇರುವ ದೇವಾಲಯಗಳಿಗೆ ಭೇಟಿಯಿತ್ತು ಅಲ್ಲಿ ಪೂಜೆ, ಗೌರವ ಸಲ್ಲಿಸುತ್ತಾರೆ. ವಿದೇಶಿ ಗಣ್ಯರನ್ನೂ ಆಹ್ವಾನಿಸಿ ದೇವಾಲಯಗಳಿಗೆ ಕರೆದೊಯ್ಯುತ್ತಾರೆ.

ಹಿಂದಿನ ಪ್ರಧಾನಿಗಳು ನಮ್ಮದು ಧರ್ಮನಿರಪೇಕ್ಷ-ಸೆಕ್ಯೂಲರ್ ನಾಡು ಅನ್ನುತ್ತಾ ನಮ್ಮ ಸಂಸ್ಕೃತಿ, ದೇವಸ್ಥಾನಗಳು, ನಮ್ಮ ರೀತಿ-ರಿವಾಜುಗಳನ್ನು ತೋರಿಸಲು ಹಿಂದೇಟು ಹಾಕುತ್ತಿದ್ದರು. ನಾವು ಹೆಮ್ಮೆ ಪಡಬಹುದಾದ ಸಂಗತಿಗಳನ್ನು ಕೀಳು ಎಂಬಂತೆ ಬಿಂಬಿಸುತ್ತಾ ಅವನ್ನು ಮರೆಮಾಚುತ್ತಿದ್ದರು. ನಮ್ಮ ದೇವಾಲಯಗಳು, ನಮ್ಮ ವೇದ-ಪುರಾಣ-ಇತಿಹಾಸ-ಕಾವ್ಯ ಮುಂತಾದ ಶ್ರೀಮಂತ ಸಾಹಿತ್ಯಗಳನ್ನು ಅದು ಮೂಢನಂಬಿಕೆಯ ಪಳೆಯುಳಿಕೆ ಎಂದು ಭಾವಿಸುತ್ತಾ ಅವುಗಳ ಬಗ್ಗೆ ತೀವ್ರತರವಾದ ಅನಾದರ, ತಿರಸ್ಕಾರಗಳನ್ನೇ ಹೊಂದಿದ್ದರು. ಮೋದಿ ಇದಕ್ಕೆ ಅಪವಾದ.

ಮಾತ್ರವಲ್ಲ, ಅವುಗಳ ಬಗ್ಗೆ ಎಣೆಯಿಲ್ಲದ ಗೌರವ ಹೊಂದಿದ್ದಾರೆ. ಅವುಗಳ ಮೂಲಕವೇ ಭಾರತದ ಅಸ್ಮಿತೆ, ಸ್ವಂತಿಕೆಯನ್ನು ಜಗಜ್ಜಾಹೀರು ಮಾಡುತ್ತಿದ್ದಾರೆ. ಮನುಷ್ಯ ಬದುಕಿದ್ದು ಸಾರ್ಥಕವಾಗಬೇಕಾದರೆ ಅವನು ತನ್ನ ಶಕ್ತಿ-ಸಾಮರ್ಥ್ಯಗಳಿಗೆ ತಕ್ಕಂತೆ ಏನಾದರೂ ಒಂದು ಘನವಾದ, ಒಳ್ಳೆಯದಾದ ಕೆಲಸವನ್ನು ಮಾಡಬೇಕೆಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ.

ಒಂದು ದೇಶವೂ ಹಾಗೆಯೇ. ಅದರ ಬಾಳು ಸಾರ್ಥಕವಾಗಬೇಕಾದರೆ ಲೋಕಪ್ರಯೋಜನಕ್ಕಾಗಿ ಅದು ತನ್ನ ಯೋಗ್ಯತೆಗೆ ತಕ್ಕಂತೆ ಏನಾದರೊಂದು ದೊಡ್ಡ ಉದ್ದೇಶವನ್ನು ನೆರವೇರಿಸಬೇಕು. ಭಾರತಕ್ಕೆ ಇಂದಿನ ಪ್ರಪಂಚದ ಜೀವನದಲ್ಲಿ ಎಂತಹ ಕರ್ತವ್ಯವಿದೆ ಅನ್ನುವುದನ್ನು ನಮ್ಮ ಆರ್ಷ ಚರಿತ್ರೆ, ಸಂಸ್ಕೃತಿ, ಇತಿಹಾಸ, ಪುರಾಣೇತಿಹಾಸಕಾವ್ಯಗಳು, ವೇದಾಂತಗಳು, ವೇದಗಳು ಸ್ಪಷ್ಟಪಡಿಸಿವೆ. ಅಂತಹ ಆತ್ಮಪಾರಮ್ಯ ಬುದ್ಧಿ, ದುರಾಶಾನಿಗ್ರಹ, ಮನಃ ಸಂಯಮ, ಧರ್ಮಶ್ರದ್ಧೆ, ಸಾತ್ವಿಕಪ್ರವೃತ್ತಿ ದೇಶ-ವಿದೇಶಗಳ ಪರಸ್ಪರ ವ್ಯವಹಾರಗಳಲ್ಲಿ, ಜನ-ಜನಾಂಗಗಳ ಅನ್ಯೋನ್ಯ ಸಂಬಂಧಗಳಲ್ಲಿ ವ್ಯಾಪಿಸಿ ಪ್ರಬಲವಾಗದ ಹೊರತು ದೇಶವೊಂದಕ್ಕೆ ನ್ಯಾಯ, ಶಾಂತಿ ನೆಲೆಸುವುದು ಅಸಾಧ್ಯವೆಂಬುದು ರಾಜ್ಯಶಾಸ್ತ್ರಜ್ಞರ ಖಂಡಿತೋಕ್ತಿ.

ಒಂದೇ ಮಾತಿನಲ್ಲಿ ಹೇಳುವುದಾದರೆ- ನರೇಂದ್ರ ಮೋದಿ ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದಾರೆ. ಭಾರತದ ಪ್ರಾಚೀನ ಸಂಸ್ಕೃತಿಯ ಘನವಾದ ಅಂಶಗಳನ್ನು ಜಗತ್ತಿಗೆ ತೋರಿಸುವುದು ತಮ್ಮ ಭುಜಕೀರ್ತಿಯೆಂದು ಭಾವಿಸಿದ್ದಾರೆ. ಭಾರತಕ್ಕೆ ಭೇಟಿ ನೀಡುವ ವಿದೇಶಗಳ ಪ್ರಧಾನಿ/ ಅಧ್ಯಕ್ಷರಂತಹ ಗಣ್ಯರ ಎದುರು ಭಾರತೀಯ ಸಂಸ್ಕೃತಿಗೆ ಸಂಬಂಽಸಿದ ಸಂಗತಿಗಳನ್ನು ತೋರಿಸುವ ಸಣ್ಣ ಅವಕಾಶ ವನ್ನೂ ಅವರು ಕಳೆದುಕೊಳ್ಳುವುದಿಲ್ಲ. ಇಂತಹ ಮೋದಿಯವರಿಗೆ ಈಗ 77 ವರ್ಷ. ಅವರು ಶತಾಯುಷಿ ಗಳಾಗಿ, ಆರೋಗ್ಯವಂತರಾಗಿ ಈ ದೇಶವನ್ನು ಇನ್ನಷ್ಟು ಕಾಲ ಮುನ್ನಡೆಸಲಿ ಎಂದು ಹಾರೈಸೋಣ.