ರಾಜತಂತ್ರ
ಅಜಿತ್ ಶೆಟ್ಟಿ ಹೆರಂಜೆ
ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಎಂದರೆ ಒಂದು ನೀರಸ ಕಲೆ ಎಂಬ ಭಾವನೆ ಜಗತ್ತಿ ನಾದ್ಯಂತ ಮನೆ ಮಾಡಿತ್ತು. ಅದು ಬೈನರಿ ಆಟ - ಅಂದರೆ ಹೌದು ಅಥವಾ ಇಲ್ಲ, ಒಂದಷ್ಟು ಸಂದರ್ಭದಲ್ಲಿ ಜಾಣ ಮೌನ. ನಾಯಕರ ಪ್ರತಿಯೊಂದು ಸಾರ್ವಜನಿಕ ನೋಟವೂ ಅಳೆದು ತೂಗಿದ್ದಾಗಿರುತ್ತಿತ್ತು. ಎಷ್ಟು ಬಾರಿ ನಕ್ಕರು, ಕೈ ಕುಲುಕಿದ ರೀತಿ ಎಂಥದ್ದು, ಯಾವ ಬೆರಳು ಮೇಲೆ ತೋರಿಸಿದರು, ಯಾವ ಕಾಲು ಮುಂದಿಟ್ಟರು, ದೇಹಭಂಗಿ ಎಷ್ಟು ತೆರೆದಿತ್ತು, ಧ್ವನಿಯ ಏರಿಳಿತ ಹೇಗಿತ್ತು - ಇವೆಲ್ಲವನ್ನೂ ಅಳೆಯಲು ದೇಹಭಾಷೆ ತಜ್ಞರು ತಯಾರಾಗಿ ಕುಳಿತಿರುತ್ತಿದ್ದರು.
ರಾಜತಾಂತ್ರಿಕತೆ ಎಂಬುದು ಮೇಲ್ನೋಟಕ್ಕೆ ಅತ್ಯಂತ ಗಂಭೀರ, ಅತ್ಯಂತ ಸಂಕೀರ್ಣ, ಅತ್ಯಂತ ಗಹನವಾದ ಆಂಗ್ಲ ಭಾಷೆಯ ಕಲೆ ಎಂದೇ ಬಿಂಬಿಸಲಾಗುತ್ತಿತ್ತು. ಅದರಲ್ಲಿ ಸಾಮಾನ್ಯ ಜನರಿಗೆ ಪ್ರವೇಶವೇ ಇಲ್ಲ ಎಂಬ ವಾತಾವರಣ ಇತ್ತು. ಡಿಪ್ಲೊಮಸಿ ಎಂದರೆ ಗಣ್ಯರ ಗೋಷ್ಠಿ - ಜನಸಾಮಾನ್ಯರಿಗೆ ಅರ್ಥವಾಗುವ ಸರಕಲ್ಲ ಎಂಬ ಭಾವನೆ ಬಲವಾಗಿ ಬೇರೂರಿತ್ತು.
ಮೋದಿಗೊಡ್ಡಿದ ಸವಾಲು
2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದಾಗ ವಿರೋಧ ಪಕ್ಷಗಳು ಮತ್ತು ಟೀಕಾಕಾರರು ಎಸೆದ ಅತ್ಯಂತ ದೊಡ್ಡ ಸವಾಲೆಂದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹೇಗೆ ನಿಭಾಯಿಸುತ್ತಾರೆ? ಆರ್ಥಿಕತೆ, ಭದ್ರತೆ, ಕೋಮು ರಾಜಕಾರಣ- ಇವೆಲ್ಲ ಸಮಸ್ಯೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಎದುರಿಸಬಹುದು. ಆದರೆ ಜಾಗತಿಕ ವೇದಿಕೆ? ಅಲ್ಲಿ ಮೋದಿ ಉಳಿಯಲಾರರು ಎಂದು ಅಂದಿನ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರು ಭವಿಷ್ಯ ನುಡಿದಿದ್ದರು. ಮೋದಿ ಈ ಪ್ರಶ್ನೆ ಗಳಿಗೆ ಮಾತಿನಲ್ಲಿ ಯಾವತ್ತೂ ಉತ್ತರಿಸಲಿಲ್ಲ. ಅವರು ಜಗತ್ತಿಗೇ ಒಂದು ಹೊಸ ಪಾಠ ಕಲಿಸಿದರು- ರಾಜತಾಂತ್ರಿಕತೆ ಎಂದರೆ ಕೇವಲ ಗಂಭೀರ ಮಾತಲ್ಲ, ಅದು ಹೃದಯದ ಭಾಷೆ ಕೂಡ. ರಾಜತಾಂತ್ರಿಕತೆ ಎಂದರೆ ಕೇವಲ ಒಪ್ಪಂದಗಳ ರಾಶಿಯಲ್ಲ, ಅದು ವೈಯಕ್ತಿಕ ಸಂಬಂಧಗಳನ್ನು ಅತ್ಯಂತ ಸಹಜವಾಗಿ ಗೌರವದಿಂದ ನೋಡುವ ಅತ್ಯಂತ ಭಾವನಾತ್ಮಕ, ಆದರೂ ಅಷ್ಟೇ ಕುಶಲ- ಪ್ರಾಯೋಗಿಕ ಕೆಲಸ ಎಂದು ಜಗತ್ತಿಗೆ ತೋರಿಸಿದರು.
ಇದನ್ನೂ ಓದಿ: Ajith Shetty Column: ಅಂಬೇಡ್ಕರ್ ಎಂಬ ಅರ್ಥನೀತಿಯ ದಾರಿ
ಮೋದಿ ಅವರ ರಾಜತಾಂತ್ರಿಕ ಶೈಲಿಯಲ್ಲಿ ಮೂರು ಅಂಶಗಳು ಒಟ್ಟಿಗೆ ಕೆಲಸ ಮಾಡುತ್ತವೆ- ಮೊದಲನೆಯದು ಭಾವನಾತ್ಮಕ ಸಂಪರ್ಕ, ಎರಡನೆಯದು ನಿಖರ ಪ್ರಾಯೋಗಿಕತೆ, ಮೂರನೆಯದು ಸರ್ಪ್ರೈಸ್. ಇದು ಒಂದು ವಿರೋಧಾಭಾಸ ಎಂದು ಕಾಣಬಹುದು- ಆದರೆ ಮೋದಿ ಅವರ ಶಕ್ತಿ ಇರುವುದೇ ಇಲ್ಲಿ. ಅವರು ಒಬ್ಬ ನಾಯಕನನ್ನು ಭೇಟಿ ಮಾಡಿದಾಗ, ಅದು ಕೇವಲ ಅಜೆಂಡಾ ಚರ್ಚೆ ಮಾತ್ರ ಆಗಿರುವುದಿಲ್ಲ - ಅಲ್ಲಿ ಒಂದು ವೈಯಕ್ತಿಕ ಬಾಂಧವ್ಯ ಸ್ಥಾಪನೆಯಾಗುತ್ತದೆ.
ಜಪಾನಿನ ಶಿಂಜೋ ಅಬೆ ಅವರೊಂದಿಗೆ ಗುಜರಾತಿನ ಅಹಮದಾಬಾದಿನ ಬೀದಿಯಲ್ಲಿ ರೋಡ್ ಶೋ ಮಾಡಿದ ಮೋದಿ, ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಮರಳಿನ ಬೀಚ್‌ನಲ್ಲಿ ನೇತಾನ್ಯಾಹು ಅವರೊಂದಿಗೆ ನಡೆದ ಮೋದಿ, ಅಮೆರಿಕಾದ ಹ್ಯೂಸ್ಟನ್‌ನಲ್ಲಿ ಲಕ್ಷಾಂತರ ಜನರ ಮುಂದೆ ಟ್ರಂಪ್ ಅವರೊಂದಿಗೆ ‘ಹೌಡಿ ಮೋದಿ’ ನಡೆಸಿದ ರೀತಿ- ಇವು ಕೇವಲ ಚಿತ್ರಗಳಲ್ಲ. ಇವು ಒಂದು ಹೊಸ ರಾಜತಾಂತ್ರಿಕ ಭಾಷೆ.
ಮೋದಿ ಅವರ ರಾಜತಾಂತ್ರಿಕ ಶೈಲಿ ಜನಸಾಮಾನ್ಯರನ್ನು ತಲುಪುತ್ತದೆ. ಒಬಾಮಾ ಅವರೊಂದಿಗೆ ಸಾರ್ವಜನಿಕ ಚೌಕದಲ್ಲಿ ನಡೆದಾಡುವ, - ಅಧ್ಯಕ್ಷ ಮ್ಯಾಕ್ರೋನ್ ಅವರೊಂದಿಗೆ ಭೀಮ್ ಆಪ್ ಪ್ರದರ್ಶಿಸುವ, ಫಿಜಿಯ ನಾಯಕ ಮೋದಿಯವರ ಕಾಲಿಗೆ ಬೀಳುವುದು- ಈ ಪ್ರತಿಯೊಂದು ಕ್ಷಣವೂ ಜಾಗತಿಕ ಮಾಧ್ಯಮದಲ್ಲಿ ಸ್ಥಾನ ಪಡೆಯುತ್ತದೆ.
ಅದು ಮಾಡಿದ ಕೆಲಸ ಯಾವ ಔಪಚಾರಿಕ ಒಪ್ಪಂದಕ್ಕಿಂತಲೂ ಮಿಗಿಲಾದದ್ದು - ಅದು ಭಾರತದ ಬಗ್ಗೆ ಜಗತ್ತಿನ ಭಾವನೆಯನ್ನು ಬದಲಿಸಿದೆ. ಇದೇ ರೀತಿ ಅಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀ- ಅವರ ಜನ್ಮದಿನ ಹಾಗೂ ಅವರ ಮೊಮ್ಮಗಳ ವಿವಾಹದ ಸಂಭ್ರಮವಿದ್ದ ಹಿನ್ನೆಲೆಯಲ್ಲಿ ಮೋದಿ ಅವರು ನೇರವಾಗಿ ಅವರ ಪಾಕಿಸ್ತಾನಕ್ಕೆ ತೆರಳಿ ಶುಭ ಹಾರೈಸಿದರು.
ಯಾವುದೇ ಪೂರ್ವಸಿದ್ಧತೆ ಇಲ್ಲದೆ ಉಭಯ ದೇಶಗಳ ನಾಯಕರು ಪ್ರೋಟೋಕಾಲ್ ಬ ದಿಗಿಟ್ಟು ಭೇಟಿಯಾದ ಈ 80 ನಿಮಿಷಗಳ ಘಟನೆ ಜಾಗತಿಕ ರಾಜತಾಂತ್ರಿಕ ಇತಿಹಾಸದಲ್ಲಿ ಒಂದು ಅಪರೂಪದ ಮೈಲಿಗಗಿ ದಾಖಲಾಯಿತು.
ನಿಯಮ ಮುರಿಯುವ ಚಾಣಾಕ್ಷ
ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್. ಅವರು ಕೂಡ ಸಾಂಪ್ರದಾಯಿಕ ರಾಜತಾಂತ್ರಿಕ ನಿಯಮಗಳನ್ನು ಮುರಿದರು - ಆದರೆ ಸಂಪೂರ್ಣ ಭಿನ್ನ ರೀತಿಯಲ್ಲಿ. ಟ್ರಂಪ್ ಅವರ ಶೈಲಿ ಎಂದರೆ - ಯಾರಿಗೂ ಹೆದರದ ನೇರ ಮಾತು, ಮಿತ್ರರಾಷ್ಟ್ರಗಳನ್ನುಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳುವುದು, ವ್ಯವಹಾರ ದೃಷ್ಟಿಕೋನದಿಂದ ಎಲ್ಲವನ್ನೂ ಅಳೆಯುವ ಮನಃಸ್ಥಿತಿ. ಉಕ್ರೇನ್‌ನ ಅಧ್ಯಕ್ಷ ಜೆಲೆನ್ಸ್ಕಿ ಅವರನ್ನು ವೈಟ್‌ಹೌಸ್‌ನ ಸಾರ್ವಜನಿಕವಾಗಿ ಟೀಕಿಸಿದ್ದು, ನ್ಯಾಟೋ ಒಕ್ಕೂಟಕ್ಕೆ ‘ನೀವು ಹಣ ನೀಡದಿದ್ದರೆ ನಾವಿಲ್ಲ’ ಎಂದು ಸಾರ್ವ ಜನಿಕ ಹೇಳಿಕೆ, - ಅಧ್ಯಕ್ಷ ಮ್ಯಾಕ್ರೋನ್ ಅವರ ನೀತಿಯನ್ನು ಟ್ವಿಟರ್‌ನ ಟೀಕಿಸಿದ್ದು, ಜಪಾನಿನ ಪ್ರಧಾನಿಯ ಮೇಲೆ ವ್ಯಾಪಾರ ಒತ್ತಡ, ಇಂಗ್ಲೆಂಡ್ ಪ್ರಧಾನಿಯನ್ನು ನೇರವಾಗಿ ಕುಹಕ ಮಾಡಿದ ಟ್ರಂಪ್ ಅವರ ಶೈಲಿ ಅನೇಕರಿಗೆ ಆಘಾತ ನೀಡಿತು.
ಮಿತ್ರ ರಾಷ್ಟ್ರಗಳ ನಾಯಕರು ಟ್ರಂಪ್ ಅವರ ಜೊತೆ ಮಾತನಾಡಲು ಹಿಂಜರಿಯಲಾ ರಂಭಿಸಿದರು. ಟ್ರಂಪ್ ಜೊತೆ ಅಂತಾರಾಷ್ಟ್ರೀಯ ವೇದಿಕೆ ಹಂಚಿಕೊಳ್ಳುವ ಮುನ್ನ ನಾಯಕರು ತಮ್ಮ ತಂಡಕ್ಕೆ ಹೇಳುತ್ತಿದ್ದ ಮಾತೆಂದರೆ- ‘ಟ್ರಂಪ್ ಏನು ಬೇಕಾದರೂ ಹೇಳಬಹುದು, ಎಚ್ಚರ’ ಎಂದು. ಇದು ರಾಜತಾಂತ್ರಿಕ ಜಗತ್ತು ಹಿಂದೆಂದೂ ಕಾಣದ ವಾತಾವರಣ.
ಎರಡು ತುದಿಗಳ ನಡುವೆ
ಮೋದಿ ಮತ್ತು ಟ್ರಂಪ್- ಇಬ್ಬರೂ ಸಾಂಪ್ರದಾಯಿಕ ರಾಜತಾಂತ್ರಿಕ ನಿಯಮಗಳನ್ನು ಮೀರಿದವರು. ಆದರೆ ಅವರ ದಿಕ್ಕು ಸಂಪೂರ್ಣ ವಿರುದ್ಧ. ಟ್ರಂಪ್ ಅವರದ್ದು ಒರಟು ತನದ, ಒತ್ತಡದ, ಲೆಕ್ಕಾಚಾರದ ರಾಜತಾಂತ್ರಿಕತೆಯಾದರೆ ಮೋದಿ ಪ್ರೀತಿ, ಭಾವನಾತ್ಮಕ ಸಂಬಂಧದಿಂದ ಮತ್ತು ಜಗತ್ತಿಗೆ ಸರ್ಪ್ರೈಸ್ ಕೊಡುವ ಮೂಲಕ ಭಿನ್ನವಾದರು. ಆದರೆ ಅತ್ಯಂತ ಸ್ವಾರಸ್ಯಕರ ಸಂಗತಿ ಏನೆಂದರೆ ವರ್ತಮಾನದ ಭೂರಾಜಕೀಯ ಬೆಳವಣಿಗೆಯಲ್ಲಿ ತಮ್ಮ ನಡುವಿನ ಸಂಬಂಧಗಳು ಕೊಂಚ ಹಳಸಿದಾಗಲೂ ಟ್ರಂಪ್ ಎಂದೂ ಉಳಿದ ನಾಯಕರ ಜೊತೆಗೆ ನಡೆದುಕೊಂಡಂತೆ ಮೋದಿಯವರ ಜೊತೆ ನಡೆದುಕೊಳ್ಳಲಿಲ್ಲ.
ಮೋದಿ ಅವರಿಗೆ ಗೊತ್ತು- ಯಾವಾಗ ಎಷ್ಟು ಹೇಳಬೇಕು, ಯಾವಾಗ ಮೌನ ಅಗತ್ಯ. ಟ್ರಂಪ್ ವಿಚಾರದಲ್ಲಿ ಅವರು ತೋರಿದ ಜಾಣ ಮೌನ ಹಾಗು ಸಂಯಮ ಸಂಬಂಧ ಹಳಸದಂತೆ ಉಳಿಯಲು ಪ್ರಮುಖ ಕಾರಣ. ಮೋದಿಯವರಿಗೆ ಪ್ರತಿ ನಾಯಕನ ವ್ಯಕ್ತಿತ್ವವನ್ನು ಓದುವ ಸಾಮರ್ಥ್ಯ ಇದೆ. ರಾಜತಾಂತ್ರಿಕತೆಯಲ್ಲಿ ಇದನ್ನು ಸಿದ್ಧಿಸಿಕೊಂಡವರು ಪ್ರಭಾವಶಾಲಿ ಗಳಾಗುತ್ತಾರೆ. ಟ್ರಂಪ್ ವಿಚಾರದಲ್ಲಿ ಮೋದಿಯವರ ರಾಜತಾಂತ್ರಿಕತೆ ಗೆಲ್ಲಲು ಇದು ಮುಖ್ಯ ಕಾರಣ.
ಜಗತ್ತು ಯಾವ ಮಾದರಿ ಆಯ್ಕೆ ಮಾಡಿದೆ?
ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇದೇ ಮೇ ತಿಂಗಳಿನಲ್ಲಿ ಜಗತ್ತಿನ ಮೂರು ದಿಗ್ಗಜ ನಾಯಕರು ಕೈಗೊಂಡ ವಿದೇಶ ಪ್ರವಾಸವನ್ನು ವಿಶ್ಲೇಷಣೆ ಮಾಡಿದರೆ ಉತ್ತರ ಸಿಗುತ್ತದೆ. ಟ್ರಂಪ್- ಕ್ಸಿ ಭೇಟಿ ಮತ್ತು ಪುತಿನ್- ಕ್ಸಿ ಭೇಟಿ ಎರಡೂ ಹೆಚ್ಚಾಗಿ ಹೇಳಿಕೆಗಳಿಗೆ ಸೀಮಿತ ವಾದವು. ಟ್ರಂಪ್- ಕ್ಸಿ ಶೃಂಗಸಭೆಯಲ್ಲಿ ಉಭಯ ನಾಯಕರು ಸಂಬಂಧ ಸುಧಾರಿಸಿದೆ ಎಂದು ಹೊಗಳಿಕೊಂಡರಾದರೂ ನಿರ್ದಿಷ್ಟ ಸಾರ್ವಜನಿಕ ಒಪ್ಪಂದಗಳು ಅತ್ಯಲ್ಪ - ಅಮೆರಿಕದ ರಾಜತಾಂತ್ರಿಕ ತಂಡ ಬೀಜಿಂಗಿಗೆ ಹೋದಾಗ ಕೊಟ್ಟ ಉಡುಗೊರೆಗಳನ್ನು ಚೀನಾದ ಬಿಟ್ಟು ಬಂದರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಪುತಿನ್- ಕ್ಸಿ ಭೇಟಿಯಲ್ಲಿ 40ಕ್ಕೂ ಹೆಚ್ಚು ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದರೂ, ರಷ್ಯಾಕ್ಕೆ ತೈಲ ಕೊಳವೆ ನಿರ್ಮಾಣ ಒಪ್ಪಂದದ ನಿರೀಕ್ಷೆಯಲ್ಲಿ ಹೋಗಿದ್ದ ಕ್ಸಿ ಅವರ ಪ್ರವಾಸ ಆ ನಿರ್ದಿಷ್ಟ ಗುರಿ ಮುಟ್ಟಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ ನಿಲ್ಲುತ್ತದೆ ಮೋದಿ ಅವರ ಐದು ರಾಷ್ಟ್ರ ಪ್ರವಾಸ.
ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಯಲ್ಲಿ ಇಂಧನಗಳ ಪೂರೈಕೆ, ರಕ್ಷಣೆ ಮತ್ತು ನಿರ್ಣಾಯಕ ಖನಿಜಗಳ ವಿಚಾರದಲ್ಲಿ ಒಪ್ಪಂದಗಳಾದವು. ನೆದರ್ಲ್ಯಾಂಡ್ಸ್ ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ವಿದೇಶದಲ್ಲಿ ರುವ ಭಾರತೀಯರ ಸಾಂಸ್ಕೃತಿಕ ಗುರುತಿನ ಮಹತ್ವ ಮತ್ತು ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡಿದರು.
2014ರಲ್ಲಿ ಪ್ರಧಾನಿ ಆದ ತಕ್ಷಣ ನ್ಯೂಯಾಕ್ʼನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯ ಡಯಾಸ್ಪೊರಾ ಸಮುದಾಯ ಕಾರ್ಯಕ್ರಮ ಆರಂಭಿಸಿದ ಮೋದಿ, ಕಳೆದ ಹನ್ನೆರಡು ವರ್ಷಗಳಲ್ಲಿ ಯಾವ ದೇಶಕ್ಕೆ ಹೋದರೂ ಈ ಪರಂಪರೆಯನ್ನು ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ.
ಜೊತೆಗೆ, ಈ ಐದು ರಾಷ್ಟ್ರ ಪ್ರವಾಸದಲ್ಲಿ ಅಸ್ಸಾಂನ ಮುಗಾ ರೇಷ್ಮೆ, ಜೈಪುರದ ಬ್ಲೂ ಪಾಟರಿ, ರೋಗನ್ ಕಲೆ, ಪಿಚ್ವಾಯಿ ಚಿತ್ರಕಲೆ ಸೇರಿದಂತೆ ದೇಶದ ವಿವಿಧ ಪ್ರದೇಶಗಳ ಕರಕುಶಲ ಕಲಾಕೃತಿಗಳನ್ನು ವಿದೇಶಿ ನಾಯಕರಿಗೆ ಉಡುಗೊರೆಯಾಗಿ ನೀಡಿದರು. ಭಾರತದ ಬುಡಕಟ್ಟು ಮತ್ತು ಪ್ರಾದೇಶಿಕ ಪರಂಪರೆಯನ್ನು ರಾಜತಾಂತ್ರಿಕ ಸಾಫ್ಟ್ ಪವರ್ ಆಗಿ ಬಳಸಿ ಸ್ಥಳೀಯ ಕುಶಲಕರ್ಮಿಗಳಿಗೆ ಜಾಗತಿಕ ವೇದಿಕೆ ಕಲ್ಪಿಸಿದರು. ಈ ಮೂರು ನಾಯಕರ ಪ್ರವಾಸವನ್ನು ತುಲನೆ ಮಾಡಿದಾಗ ವಿಶ್ವದ ಬಹುತೇಕ ಭೂ ರಾಜಕೀಯ ತಜ್ಞರು ಒಂದೇ ತೀರ್ಮಾನಕ್ಕೆ ಬರುತ್ತಾರೆ - ಟ್ರಂಪ್ ಒಪ್ಪಂದವಿಲ್ಲದೆ ಭೇಟಿ ಮಾಡಿ ಬಂದರು, ಕ್ಸಿ ಸಂದೇಶ ರವಾನಿಸಿ ಬಂದರು, ಆದರೆ ಮೋದಿ ಒಪ್ಪಂದ, ಸಂಬಂಧ, ಸಂಸ್ಕೃತಿ ಮತ್ತು ಸಮುದಾಯ - ನಾಲ್ಕನ್ನೂಒಟ್ಟಿಗೆ ತಂದರು. ಇದು ಆಧುನಿಕ ರಾಜತಾಂತ್ರಿಕ ಜಗತ್ತಿನಲ್ಲಿ ಭಾರತ ನಿರ್ಮಿಸಿಕೊಳ್ಳುತ್ತಿರುವ ವಿಶಿಷ್ಟ ಸ್ಥಾನದ ಪ್ರತೀಕ.
ಬದಲಾದ ರಾಜತಾಂತ್ರಿಕತೆ
೨೦೧೪ರ ಮೊದಲು ರಾಜತಾಂತ್ರಿಕತೆ ಎಂದರೆ ಗಂಭೀರ ಮುಖದ, ನೀರಸ ಮಾತಿನ, ಶೀತಲ ಕೊಠಡಿಗಳ ಕಲೆ. ನಂತರ ರಾಜತಾಂತ್ರಿಕತೆ ಜನರ ಹೃದಯ ಮುಟ್ಟುವ ಭಾಷೆಯಾಯಿತು. ಮೋದಿ ಮತ್ತು ಟ್ರಂಪ್- ಇಬ್ಬರೂ ಹಳೆಯ ನಿಯಮಗಳನ್ನು ಮೀರಿದರು. ಆದರೆ ಮೋದಿಯವರು ಅದನ್ನು ಪ್ರೀತಿಯಿಂದ ಮಾಡಿದರೆ, ಟ್ರಂಪ್ ಬೀರಿದ ಪರಿಣಾಮ ಜಗತ್ತಿನಲ್ಲಿ ಋಣಾತ್ಮಕ ಪರಿಣಾಮವನ್ನು ಬೀರಿತು.
ಅತ್ಯಂತ ಮಹತ್ವದ ಸಂಗತಿ ಏನೆಂದರೆ - ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೆ, ಯಾವ ಪತ್ರಕರ್ತರ ಪ್ರಶ್ನೆಗಳಿಗೂ ಔಪಚಾರಿಕವಾಗಿ ಉತ್ತರಿಸದೆ, 2014ರಿಂದ 2026ರ ವರೆಗೆ ಜಾಗತಿಕ ವೇದಿಕೆಯಲ್ಲಿ ಅತ್ಯಂತ ಗೌರವಾನ್ವಿತ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದು ಹೇಗೆ ಸಾಧ್ಯ? ಏಕೆಂದರೆ ಅವರು ತಮ್ಮ ಸ್ವಭಾವದ ಮೂಲಕ, ಸನ್ನಡತೆಯ ಮೂಲಕ, ತಮ್ಮ ವ್ಯಕ್ತಿತ್ವದ ಮೂಲಕ ದೇಶಗಳ ಗಡಿ ಮೀರಿ ಜನರ ಮನಸ್ಸನ್ನು ಗೆದ್ದರು.