ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keshava Prasad B Column: ಮೋದಿಯವರ ಮುಂದಿನ ಟಾರ್ಗೆಟ್‌ ವಿಕಸಿತ ಭಾರತ

ದೇಶದಲ್ಲಿ ಒಟ್ಟಾರೆ ವಿದೇಶಿ ಹೂಡಿಕೆ ಪ್ರಮಾಣವು ಸುಮಾರು 95 ಲಕ್ಷ ಕೋಟಿ ರೂಪಾಯಿಗಳನ್ನು (1 ಟ್ರಿಲಿಯನ್ ಡಾಲರ್) ದಾಟಿದ್ದು, ಜಾಗತಿಕ ಹೂಡಿಕೆದಾರರಿಗೆ ಭಾರತ ನೆಚ್ಚಿನ ತಾಣವಾಗಿದೆ. ನವೀಕರಿಸ ಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಬೆಳೆದಿದೆ. ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ.

ಮನಿಮೈಂಡೆಡ್

ಹಿಂದಿನ ಸರಕಾರಗಳ ಆಡಳಿತಾವಧಿಗೆ ಹೋಲಿಸಿದರೆ, ಕಳೆದ 12 ವರ್ಷಗಳಲ್ಲಿ ಭಾರತದ ಆಡಳಿತ ಶೈಲಿ ಮತ್ತು ಆರ್ಥಿಕ ವೇಗ ಸಂಪೂರ್ಣ ಬದಲಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತ ವನ್ನು ಸುರಕ್ಷಿತವಾಗಿ ಮತ್ತು ಬಲಿಷ್ಠವಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರು ಭಾರತದ ಇತಿಹಾಸದ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದಾರೆ ಎಂದು ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅವರು ಹೀಗೆನ್ನುತ್ತಾರೆ- ಭಾರತದಲ್ಲಿ 2014ರಲ್ಲಿ ಕೇವಲ 25 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ, ಇಂದು 100 ಕೋಟಿಗೂ ದಾಟಿದೆ.

ಜಾಗತಿಕವಾಗಿ ಡಿಜಿಟಲ್ ಪಾವತಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಹಳ್ಳಿಗಳ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಮಾಲ್ʼಗಳವರೆಗೆ ಯುಪಿಐ ಕ್ರಾಂತಿ ನಡೆದಿದೆ. ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ, ಇಂದು ವಿಶ್ವದ ಅತಿ ಹೆಚ್ಚು ಮೊಬೈಲ್ ರಫ್ತು ಮಾಡುವ ಎರಡನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ಹೊಸ ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆ ಮತ್ತು ಮೋದಿಯವರ ಮಾನವ್ ಎಐ ವಿಷನ್ ತಂತ್ರಜ್ಞಾನ ಲೋಕದಲ್ಲಿ ಭಾರತದ ಸಾರ್ವಭೌಮತ್ವವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತ ಮತ್ತು ಯುದ್ಧಗಳಂತಹ ಅಸ್ಥಿರತೆ ಇದ್ದಾಗಲೂ, ಭಾರತವು ಶೇಕಡಾ 7.5ರ ದರದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಾ ಮುನ್ನುಗ್ಗುತ್ತಿದೆ.

ವಸೂಲಾಗದ ಸಾಲಗಳ (ಎನ್‌ಪಿಎ) ಸುಳಿಯಲ್ಲಿ ಸಿಲುಕಿದ್ದ ಭಾರತದ ಬ್ಯಾಂಕಿಂಗ್ ವಲಯವನ್ನು ಪುನಶ್ಚೇತನಗೊಳಿಸಿ, ಇಂದು ಅತ್ಯಂತ ಸದೃಢ ಸ್ಥಿತಿಗೆ ತರಲಾಗಿದೆ. ಸಾರ್ವಜನಿಕ ಬ್ಯಾಂಕ್‌ಗಳು ಲಾಭದ ಹಳಿಗೆ ಮರಳಿವೆ.

ಇದನ್ನೂ ಓದಿ: Keshava Prasad B Column: ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?

ದೇಶದಲ್ಲಿ ಒಟ್ಟಾರೆ ವಿದೇಶಿ ಹೂಡಿಕೆ ಪ್ರಮಾಣವು ಸುಮಾರು 95 ಲಕ್ಷ ಕೋಟಿ ರೂಪಾಯಿಗಳನ್ನು (1 ಟ್ರಿಲಿಯನ್ ಡಾಲರ್) ದಾಟಿದ್ದು, ಜಾಗತಿಕ ಹೂಡಿಕೆದಾರರಿಗೆ ಭಾರತ ನೆಚ್ಚಿನ ತಾಣವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಬೆಳೆದಿದೆ. ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. ಪೆಟ್ರೋಲ್'ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡಲಾಗಿದೆ ಮತ್ತು ರೈತರಿಗೆ ಆರ್ಥಿಕ ನೆರವು ಸಿಕ್ಕಿದೆ.

ವಿಶ್ವದ 3ನೇ ದೊಡ್ಡ ಸ್ಟಾರ್ಟಪ್ ಹಬ್ ಆಗಿ ಕಳೆದ 11-12 ವರ್ಷಗಳಲ್ಲಿ ಭಾರತ ಮುಂಚೂಣಿ ಯಲ್ಲಿದೆ. ದೇಶದ ಸ್ಟಾರ್ಟಪ್'ಗಳು ಸುಮಾರು 160 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಿವೆ. ಇಪಿಎಫ್ಒ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಉದ್ಯೋಗ ಸೃಷ್ಟಿ ವೇಗವಾಗಿ ನಡೆಯುತ್ತಿದೆ.

ಹೀಗಿದ್ದರೂ, ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸರಕಾರ ಇನ್ನೂ ಹೆಚ್ಚಿನ ಹಣ ಮೀಸಲಿಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಜನ್ ಧನ್ ಮತ್ತು ನೇರ ನಗದು ವರ್ಗಾವಣೆ ಮೂಲಕ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಬಡವರ ಖಾತೆಗೆ ನೇರವಾಗಿ ಸರಕಾರದ ಸವಲತ್ತುಗಳು ತಲುಪುತ್ತಿರುವುದು ಭ್ರಷ್ಟಾಚಾರಕ್ಕೆ ದೊಡ್ಡ ಬ್ರೇಕ್ ಹಾಕಿದೆ. ಹೆದ್ದಾರಿಗಳು, ಡಿಜಿಟಲ್ ಕನೆಕ್ಟಿವಿಟಿ ಮತ್ತು ಸಣ್ಣ ನಗರಗಳ ಅಭಿವೃದ್ಧಿಗೆ ನೀಡಿರುವ ಆದ್ಯತೆಯು ಭಾರತದ ಚಹರೆಯನ್ನೇ ಈಗ ಬದಲಾಯಿಸಿದೆ ಎನ್ನುತ್ತಾರೆ ಮೋಹನ್ ದಾಸ್ ಪೈ.

ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ ೫೨ನೇ ಜಿ೭ ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ದ್ವಿಪಕ್ಷೀ ಯ ಮಾತುಕತೆ ನಡೆದಿದೆ. ಆ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಂಬಂಧಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡೊನಾಲ್ಡ ಟ್ರಂಪ್ ನೀಡಿರುವ ಹೇಳಿಕೆಯನ್ನು ಗಮನಿಸಿ- ‘ಭಾರತ ಮತ್ತು ಅಮೆರಿಕ ನಡುವೆ ಮಿಲಿಟರಿ ನೆರವಿನ ಯಾವುದೇ ಅಧಿಕೃತ ಲಿಖಿತ ಒಪ್ಪಂದ ಅಥವಾ ಕರಾರು ಇಲ್ಲ.

‌662

ಆದರೆ, ಒಂದು ವೇಳೆ ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ, ನಾವು ಖಂಡಿತವಾಗಿಯೂ ಭಾರತದ ಸಹಾಯಕ್ಕೆ ನಿಲ್ಲುತ್ತೇವೆ’ ಎಂದು ಟ್ರಂಪ್ ಭರವಸೆ ನೀಡಿದ್ದಾರೆ. ಈ ಹೇಳಿಕೆಗೆ ಟ್ರಂಪ್ ತಮ್ಮದೇ ಶೈಲಿಯಲ್ಲಿ ಒಂದು ಷರತ್ತನ್ನು ಕೂಡ ಸೇರಿಸಿದ್ದಾರೆ- ಒಂದು ವೇಳೆ ಭಾರತದ ಮೇಲೆ ದಾಳಿಯಾದಾಗ ನರೇಂದ್ರ ಮೋದಿಯವರೇ ದೇಶದ ಪ್ರಧಾನಿಯಾಗಿದ್ದರೆ, ನಾವು ನೂರಕ್ಕೆ ನೂರು ಸಹಾಯಕ್ಕೆ ಬಂದೇ ಬರುತ್ತೇವೆ. ಯಾರಾದರೂ ಮೋದಿ ನಾಯಕತ್ವದ ಭಾರತದ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ. ಬೇರೆ ಯಾರಾದರೂ ನಾಯಕರಾಗಿದ್ದರೆ ನನಗೆ ಗೊತ್ತಿಲ್ಲ, ಆದರೆ ಮೋದಿ ನಾಯಕರಾಗಿದ್ದರಂತೂ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಮೋದಿಯವರೊಂದಿಗಿನ ತಮ್ಮ ವೈಯಕ್ತಿಕ ಸ್ನೇಹವನ್ನು ಹೇಳಿದ್ದಾರೆ.

ಅಮೆರಿಕವು ಸಾಮಾನ್ಯವಾಗಿ ನ್ಯಾಟೋ (NATO) ದೇಶಗಳು ಅಥವಾ ಜಪಾನ್, ದಕ್ಷಿಣ ಕೊರಿಯಾ ದಂತಹ ದೇಶಗಳೊಂದಿಗೆ ಮಾತ್ರ ಒಂದು ದೇಶದ ಮೇಲೆ ದಾಳಿಯಾದರೆ ಅದು ನಮ್ಮ ಮೇಲಿನ ದಾಳಿ ಎಂಬ ಅಧಿಕೃತ ರಕ್ಷಣಾ ಒಪ್ಪಂದವನ್ನು ಹೊಂದಿದೆ.

ಭಾರತದೊಂದಿಗೆ ಅಂತಹ ಯಾವುದೇ ಒಪ್ಪಂದವಿಲ್ಲದಿದ್ದರೂ ಟ್ರಂಪ್ ಈ ಮಟ್ಟದ ಭರವಸೆ ನೀಡಿರುವುದು ಜಾಗತಿಕ ರಕ್ಷಣಾ ವಲಯದಲ್ಲಿ ಸಂಚಲನ ಮೂಡಿಸಿದೆ. ಗಡಿ ಭಾಗದಲ್ಲಿ ಭಾರತ ದೊಂದಿಗೆ ಸದಾ ಸಂಘರ್ಷಕ್ಕೆ ಇಳಿಯುವ ಚೀನಾ ಹಾಗೂ ಪಾಕಿಸ್ತಾನದಂತಹ ನೆರೆಹೊರೆಯ ದೇಶಗಳಿಗೆ ಅಮೆರಿಕ ಈ ಮೂಲಕ ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಚೀನಾವನ್ನು ನಿಯಂತ್ರಿಸಲು ರಚನೆಯಾಗಿರುವ ಕ್ವಾಡ್ (Quad-ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್) ಒಕ್ಕೂಟದ ಬಲವರ್ಧನೆಗೆ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಕಾಪಾಡಲು ಈ ಹೇಳಿಕೆ ಭರವಸೆದಾಯಕವಾಗಿದೆ.

ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರದ ಪೂರ್ಣ ಗೊಳ್ಳಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಮೋದಿಯವರನ್ನು ಅವರು ಬಹಳ ಕಠಿಣ ಸಂಧಾನಕಾರ ಎಂದೂ ಹೊಗಳಿದ್ದಾರೆ. ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿ (ಇರಾನ್ - ಅಮೆರಿಕ ಸಂಘರ್ಷ) ಉಂಟಾ ಗಿರುವ ಉದ್ವಿಗ್ನತೆ ಮತ್ತು ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಾಗತಿಕ ರಾಜಕಾರಣದಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಗಟ್ಟಿಯಾಗಿದೆ ಎಂಬುದನ್ನು ಡೊನಾಲ್ಡ ಟ್ರಂಪ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಭಾರತದ ಭದ್ರತೆಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ್ದಾರೆ.

ಇದು ಮೋದಿಯವರ ವಿದೇಶಾಂಗ ನೀತಿಯ ಎಫೆಕ್ಟ್. ರಷ್ಯಾ, ಯುಎಇಯಂತಹ ಪ್ರಬಲ ದೇಶಗಳೊಂದಿಗೆ ಭಾರತದ ಸಂಬಂಧ ಅತ್ಯಂತ ಗಟ್ಟಿಯಾಗಿದೆ. ಆರ್ಟಿಕಲ್ 370 ರದ್ದುಪಡಿಸಿ ಜಮ್ಮು-ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನಗೊಳಿಸಿದ್ದು, ಸರ್ಜಿಕಲ್ ಸ್ಟ್ರೈಕ್ ಮೂಲಕ ಗಡಿ ದಾಟಿ ಭಯೋತ್ಪಾದನೆಯನ್ನು ಹತ್ತಿಕ್ಕಿದ್ದು ಮೋದಿಯವರ ಧೈರ್ಯಶಾಲಿ ನಿರ್ಧಾರಗಳಿಗೆ ಸಾಕ್ಷಿ.

ಮೋದಿ ಅತ್ಯಂತ ಚತುರ ರಾಜಕಾರಣಿ ಕೂಡ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸೀಟುಗಳನ್ನು ಗೆದ್ದು ಸರಕಾರ ರಚಿಸಿತ್ತು. ಆದರೆ ಇತ್ತೀಚೆಗೆ ಪ್ರತಿಪಕ್ಷಗಳ ಮೈತ್ರಿ ಕೂಟದಲ್ಲಿ ಬಿರುಕುಗಳು ಮತ್ತು ಪ್ರಾದೇಶಿಕ ಪಕ್ಷಗಳ ಆಂತರಿಕ ಬಂಡಾಯಗಳು ಎನ್‌ಡಿಎ ಬಲ ಹೆಚ್ಚಲು ಕಾರಣವಾಗಿವೆ.

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಪ್ರಮುಖ ಭಿನ್ನಮತ ಇದಕ್ಕೆ ಪ್ರೇರಣೆ ನೀಡಿದೆ. ಟಿಎಂಪಿಯ ಸುಮಾರು 20 ಸಂಸದರು ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡು ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಲು ಮುಂದಾ ಗಿದ್ದಾರೆ.

ಇದರೊಂದಿಗೆ ತೆಲುಗು ದೇಶಂ ಪಾರ್ಟಿ ಮತ್ತು ಸಂಯುಕ್ತ ಜನತಾದಳದಂತಹ ಮಿತ್ರಪಕ್ಷಗಳ ಸ್ಥಿರ ಬೆಂಬಲದ ಜೊತೆಗೆ ಎನ್ʼಡಿಎ ಬಲ ಪ್ರಸ್ತುತ 312ರಿಂದ 318ರ ಆಸುಪಾಸಿಗೆ ಹೆಚ್ಚಳವಾಗಿದೆ. ಕೇಂದ್ರ ಸರಕಾರವು ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮೂರನೇ ಎರಡರಷ್ಟು ಬಹುಮತವನ್ನು ಸಾಧಿಸಲು ಸತತ ಪ್ರಯತ್ನ ನಡೆಸುತ್ತಿದೆ.

ಲೋಕಸಭೆಯ ಒಟ್ಟು 543 ಸೀಟುಗಳಲ್ಲಿ 2/3 ರಷ್ಟು ಬಹುಮತ ಪಡೆಯಲು 363 ಸಂಸದರ ಬೆಂಬಲದ ಅಗತ್ಯವಿದೆ. ಅಥವಾ ಕೆಲ ಪಕ್ಷಗಳ ವಿಷಾಯಾಧಾರಿತ ಬೆಂಬಲ ಸಿಕ್ಕಿದರೂ ಅನುಕೂಲ ವಾಗಲಿದೆ. ಕೇಂದ್ರ ಸರಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಸಿಕ್ಕರೆ, ಅದು ಭಾರತದ ರಾಜಕೀಯ ಮತ್ತು ಶಾಸಕಾಂಗ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ. ಮಹತ್ವದ ವಿಧೇಯಕಗಳು ಸುಲಭವಾಗಿ ಅಂಗೀಕಾರವಾಗಲಿವೆ.

ಪ್ರಮುಖ ರಾಜಕೀಯ ಗುರಿಗಳಾದ ‘ಒಂದು ದೇಶ, ಒಂದು ಚುನಾವಣೆ’ ಮತ್ತು ಏಕರೂಪ ನಾಗರಿಕ ಸಂಹಿತೆ (UCC) ನಂತಹ ಬೃಹತ್ ವಿಧೇಯಕಗಳನ್ನು ಯಾವುದೇ ಅಡೆತಡೆಯಿಲ್ಲದೆ ಜಾರಿಗೆ ತರಲು ಮೋದಿಯವರಿಗೆ ಇದು ಮುಕ್ತ ಅವಕಾಶ ನೀಡುತ್ತದೆ.

‘ವಿಕಸಿತ ಭಾರತ’ ಎಂಬುದು ಮೋದಿಯವರ ಮಹತ್ವಾಕಾಂಕ್ಷೆಯ ದೂರದೃಷ್ಟಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವ ಸುವರ್ಣ ಸಂದರ್ಭದಲ್ಲಿ, ಅಂದರೆ 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರ (Developed Nation) ಆಗಿ ಪರಿವರ್ತಿಸು ವುದು ಅವರ ಮುಂದಿರುವ ಪ್ರಮುಖ ಗುರಿ.

ಭಾರತದ ಆರ್ಥಿಕತೆಯನ್ನು ಸದ್ಯದ 3.7 ಟ್ರಿಲಿಯನ್ ಡಾಲರ್‌ನಿಂದ 2047ರ ವೇಳೆಗೆ 10ರಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಬೆಳೆಸುವುದು ಮತ್ತು ತಲಾವಾರು ಆದಾಯವನ್ನು ಹೆಚ್ಚಿಸುವುದು ಮೋದಿಯವರ ಕನಸು. ರಕ್ಷಣೆ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಹಬ್ ಮಾಡುವುದು. ‘ಮೇಕ್ ಇನ್ ಇಂಡಿಯಾ’ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾಗೆ ಪರ್ಯಾಯವಾಗಿಸುವುದು ಅವರ ಅಶಯ.

ವಿಶ್ವದರ್ಜೆಯ ಹೆದ್ದಾರಿಗಳು, ಬುಲೆಟ್ ರೈಲುಗಳು, ನವೀಕರಿಸಬಹುದಾದ ಇಂಧನ (ಗ್ರೀನ್ ಎನರ್ಜಿ) ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹಳ್ಳಿ ಹಳ್ಳಿಗಳಿಗೂ ವಿಸ್ತರಿಸುವುದು. ಬ್ರಿಟಿಷರ ಕಾಲದ ಹಳೆಯ ಪದ್ಧತಿಗಳನ್ನು ತೆಗೆದು ಹಾಕಿ ಸಂಪೂರ್ಣ ಭಾರತೀಯ ಪ್ರಜ್ಞೆಯನ್ನು ಮೂಡಿಸುವುದು.

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸರಕಾರಕ್ಕೆ ಮೂರನೇ ಎರಡರಷ್ಟು ವಿಶೇಷ ಬಹುಮತ ಸಿಕ್ಕರೆ ಅದು ವಿಕಸಿತ ಭಾರತದ ಗುರಿಗೆ ದೊಡ್ಡ ಮಟ್ಟದ ವೇಗ ನೀಡಬಲ್ಲದು.

ಅಗತ್ಯವಿರುವ ಕಠಿಣ ನಿರ್ಧಾರಗಳನ್ನು ಪ್ರತಿಪಕ್ಷಗಳ ರಾಜಕೀಯ ವಿರೋಧದ ನಡುವೆಯೂ ಅಂಗೀ ಕರಿಸಬಹುದು. ವಿಕಸಿತ ಭಾರತದಂತಹ ದೀರ್ಘಾವಧಿಯ ರಾಷ್ಟ್ರೀಯಗುರಿಯನ್ನು ತಲುಪಲು ರಾಜಕೀಯ ಸ್ಥಿರತೆ ಮತ್ತು ದೃಢವಾದ ಶಾಸಕಾಂಗದ ಬೆಂಬಲ ನಿರ್ಣಾಯಕವಾಗಲಿದೆ. ಆದ್ದರಿಂದ ಮೋದಿಯವರ ನಡೆಗಳು ಈಗ ಅತ್ಯಂತ ಕುತೂಹಲ ಮೂಡಿಸಿವೆ.

ಕೇಶವ ಪ್ರಸಾದ್​ ಬಿ

View all posts by this author