ತಿಳಿರು ತೋರಣ
ಅಮರುಶತಕ ಎಂಬುದು ಸಂಸ್ಕೃತ ಸಾಹಿತ್ಯದ ಒಂದು ಸುಪ್ರಸಿದ್ಧ ಮತ್ತು ಸುಂದರವಾದ ಪ್ರಣಯ ಕಾವ್ಯಗ್ರಂಥ. ಸುಮಾರು ಕ್ರಿ.ಶ 7ನೆಯ ಅಥವಾ ೮ನೆಯ ಶತಮಾನದಲ್ಲಿ ಬಾಳಿದ್ದನೆನ್ನಲಾದ ಅಮರುಕನೆಂಬ ಕವಿಯ ರಚನೆ. ಶೃಂಗಾರ ರಸಪ್ರಧಾನವಾದ ಈ ಕೃತಿಯಲ್ಲಿ ಪ್ರೇಮಿಗಳ ನಡುವಿನ ಪ್ರೀತಿ, ವಿರಹ (ಅಗಲಿಕೆ), ಕೋಪ, ಹುಸಿಮುನಿಸು, ದ್ರೋಹ, ಸಮಾಧಾನ ಮತ್ತು ಮಿಲನಗಳನ್ನೆಲ್ಲ ಅತ್ಯಂತ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಅಮರುಶತಕದ ಒಂದು ಶ್ಲೋಕದಲ್ಲಿ ಬರುವ ದಾಳಿಂಬೆಯ ಉಲ್ಲೇಖವಂತೂ ಬೆರಗುಗೊಳಿಸುವ ಕವಿಕಲ್ಪನೆ. ಆ ಶ್ಲೋಕ ಹೀಗಿದೆ: “ದಂಪತ್ಯೋರ್ನಿಶಿ ಜಲ್ಪತೋರ್ಗೃಹಶುಕೇನಾಕರ್ಣಿತಂ ಯದ್ವಚಃ| ತತ್ಪ್ರಾತರ್ಗುರುಸನ್ನಿಧೌ ನಿಗದತಃ ಶ್ರುತ್ವೈವ ತಾರಂ ವಧೂಃ| ಕರ್ಣಾಲಂಬಿತ ಪದ್ಮರಾಗಶಕಲಂ ವಿನ್ಯಸ್ಯ ಚಂಚ್ವಾಃ ಪುರೋ| ವ್ರೀಡಾರ್ತಾ ಪ್ರಕರೋತಿ ದಾಡಿಮ-ಲವ್ಯಾಜ್ಯೇನ ವಾಗ್ಬಂಧನಮ್||" ಇದನ್ನು ಕನ್ನಡದಲ್ಲಿ ಪದ್ಯರೂಪದಲ್ಲೇ ಅನುವಾದ ಮಾಡಿದ್ದಾರೆ ಡಾ.ಎಸ್.ವಿ.ಪರಮೇಶ್ವರ ಭಟ್ಟರು: “ಗಂಡ ಹೆಂಡಿರು ರಾತ್ರಿ ಆಡಿದ ಮಾತನಾಲಿಸಿ ಮನೆಯ ಗಿಣಿ ಬೆಳ| ಗಿನೊಳು ಹಿರಿಯರ ಮುಂದೆ ಹೇಳಲು ದೊಡ್ಡ ದನಿಗೈದು| ನಾಚಿ ದಾಳಿಂಬೆಯನು ತಿನಿಸುವ ನೆವದೊಳಾ ವಧು ಕಿವಿಯ ಓಲೆಯ| ಕೆಂಪು ಹರಳನು ಕೊಕ್ಕಿನೊಳಗಿಟ್ಟದರ ಬಾಯನು ಮುಚ್ಚಿಸಿದಳಂದು||" ನವದಂಪತಿಯ ಶೃಂಗಾರ ಮತ್ತು ನಾಚಿಕೆಯ ಅತಿ ಮನೋಹರ ಚಿತ್ರಣ ಇದರಲ್ಲಿರುವುದು.
ರಾತ್ರಿಯ ಸಮಯದಲ್ಲಿ ವಧೂವರ ಜೋಡಿಯು ಆಡಿದ ಖಾಸಗಿ ಸರಸದ ಮಾತುಗಳನ್ನು ಮನೆಯಲ್ಲಿದ್ದ ಸಾಕುಗಿಳಿಯು ಕದ್ದು ಕೇಳಿರುತ್ತದೆ. ಮಾರನೆಯ ದಿನ ಬೆಳಗ್ಗೆ, ಮನೆಮಂದಿಯೆಲ್ಲ ಒಟ್ಟಿಗೆ ಕುಳಿತಿರುವಾಗ, ಆ ಗಿಳಿಯು ರಾತ್ರಿ ಕೇಳಿದ ಮಾತುಗಳನ್ನು ಅವರೆಲ್ಲರ ಮುಂದೆಯೇ ಪಟಪಟನೆ ಗಿಣಿಪಾಠದಂತೆ ಒಪ್ಪಿಸಲು ಶುರು ಮಾಡುತ್ತದೆ. ಇದನ್ನು ಕೇಳಿದ ನವವಧುವಿಗೆ ತೀವ್ರ ಮುಜುಗರವಾಗುತ್ತದೆ.
ಇದನ್ನೂ ಓದಿ: Srivathsa Joshi Column: ದಾಳಿಂಬೆ ನಿನ್ನ ರೂಪ ಗುಣ ಮಹಿಮೆಯನು ಏನೆಂಬೆ !
ಹಿರಿಯರ ಮುಂದೆ ಆಗಬಹುದಾದ ಅಪಮಾನವನ್ನು ತಪ್ಪಿಸಲು ಅವಳು ಒಡನೆಯೇ ಒಂದು ಉಪಾಯ ಹೂಡುತ್ತಾಳೆ. ತನ್ನ ಕಿವಿಯಲ್ಲಿ ತೂಗಾಡುತ್ತಿದ್ದ ಕೆಂಪು ಮಾಣಿಕ್ಯದ (ಪದ್ಮರಾಗ) ಓಲೆಯನ್ನು ಕಳಚಿ, ಗಿಳಿಯ ಕೊಕ್ಕಿನ ಮುಂದೆ ಹಿಡಿಯುತ್ತಾಳೆ. ಅದು ಗಿಳಿಗೆ ಕೆಂಪು ದಾಳಿಂಬೆ ಬೀಜದಂತೆ ಕಾಣಿಸುತ್ತದೆ. ಅದನ್ನು ತಿನ್ನಲೆಂದು ತನ್ನ ಕೊಕ್ಕನ್ನು ತೆರೆದು ಆ ಮಣಿಯನ್ನು ಕಚ್ಚಿದಾಗ, ವಾಚಾಳಿ ಗಿಳಿಯ ಮಾತು ತಾನಾಗಿಯೇ ನಿಂತುಹೋಗುತ್ತದೆ.
ಹೀಗೆ ದಾಳಿಂಬೆ ಹಣ್ಣಿನ ನೆಪದಲ್ಲಿ ಆಕೆ ಚಾಣಾಕ್ಷತನದಿಂದ ಗಿಳಿಯ ಬಾಯ್ಮುಚ್ಚಿಸಿ, ತನ್ನ ರಹಸ್ಯವನ್ನು ಕಾಪಾಡಿಕೊಳ್ಳುತ್ತಾಳೆ! ಇನ್ನೊಂದು ಸಂಸ್ಕೃತ ಶ್ಲೋಕ, ಸರಸ್ವತಿದೇವಿಯನ್ನು ಸ್ತುತಿಸುವುದಿದೆ. ಕವಿ ಯಾರೆಂದು ಗೊತ್ತಿಲ್ಲ, ಇದರಲ್ಲಿಯೂ ಗಿಳಿ ಮತ್ತು ದಾಳಿಂಬೆ ಬರುತ್ತವೆ. ಶ್ಲೋಕ ಹೀಗಿದೆ: “ತವ ಕರಕಮಲಸ್ಥಾಂ ಸಾಟಿಕೀಮಕ್ಷಮಾಲಾಂ| ನಖಕಿರಣವಿಭಿನ್ನಾಂ ದಾಡಿಮೀಬೀಜಬುದ್ಧ್ಯಾ| ಪ್ರತಿಕಲಮನುಕರ್ಷನ್ ಯೇನ ಕೀರೋ ನಿಷಿದ್ಧಃ| ಸ ಭವತು ಮಮ ಭೂತ್ಯೈ ವಾಣಿ ತೇ ಮಂದಹಾಸಃ||" ಇದರ ಭಾವಾರ್ಥ: “ಓ ವಾಗ್ದೇವಿ ಸರಸ್ವತಿ, ನಿನ್ನ ಕಮಲದಂತಹ ಹಸ್ತದಲ್ಲಿ ಸ್ಫಟಿಕದ ಜಪಮಾಲೆ ಇದೆ.
ನಿನ್ನ ಉಗುರುಗಳ ಕೆಂಪು ಕಾಂತಿಯು ಆ ಸ್ಫಟಿಕದ ಮಣಿಗಳ ಮೇಲೆ ಬಿದ್ದಾಗ, ಅವು ದಾಳಿಂಬೆ ಹಣ್ಣಿನ ಬೀಜಗಳಂತೆ ಕಾಣಿಸುತ್ತಿವೆ. ಇದನ್ನು ನಿಜವಾದ ದಾಳಿಂಬೆ ಬೀಜಗಳೆಂದು ತಪ್ಪಾಗಿ ಭಾವಿಸಿದ ನಿನ್ನ ಮುದ್ದಿನ ಗಿಳಿಯು, ಮತ್ತೆಮತ್ತೆ ಆ ಮಣಿಗಳನ್ನು ಕುಕ್ಕಿ ಎಳೆಯಲು ಪ್ರಯತ್ನಿಸು ತ್ತಿದೆ. ಗಿಳಿಯ ಮುಗ್ಧತೆಯನ್ನು ನೋಡಿ ನೀನು ಮೃದುವಾಗಿ ನಗುತ್ತಾ ಅದನ್ನು ತಡೆಯುತ್ತಿದ್ದೀಯೆ.
ಅಮ್ಮಾ ಸರಸ್ವತಿ, ನಿನ್ನ ಆ ಸುಂದರವಾದ ಮಂದಹಾಸವು ನನಗೆ ಸಕಲ ಮಂಗಳ ಹಾಗೂ ಐಶ್ವರ್ಯಗಳನ್ನು ಕರುಣಿಸಲಿ." ಗಿಳಿ ಮತ್ತು ದಾಳಿಂಬೆ ರೂಪಕವನ್ನು ಬಳಸಿದ ಒಂದು ಪ್ರಖ್ಯಾತ ಮರಾಠಿ ಕವಿತೆಯೂ ಇದೆ ‘ಪಾಳೀಂವ ಪೋಪಟಾಸ’ ಎಂಬ ಶೀರ್ಷಿಕೆಯದು. ಕಾವ್ಯವಿಹಾರಿ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಧೋಂಡೋ ವಾಸುದೇವ ಗದ್ರೆ ಇದರ ಕವಿ. ಪಾಳೀಂವ ಪೋಪಟಾಸ ಅಂದರೆ ಸಾಕಿರುವ ಗಿಳಿಗೆ ಎಂದರ್ಥ.
ಇದು ಮಹಾರಾಷ್ಟ್ರದಲ್ಲಿ ಬಾಲಬೋಧೆ ಬಾಲಭಾರತಿ ರೀತಿಯ ಪುಸ್ತಕಗಳಲ್ಲಿ ಇರುವುದರಿಂದ ಮಕ್ಕಳ ಕವಿತೆ ಎಂದು ಪರಿಗಣಿಸಬಹುದಾದರೂ ಬಹುಶಃ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಜನರನ್ನು ಬಡಿದೆಚ್ಚರಿಸಲಿಕ್ಕೆಂದೇ ಬರೆದ ಕವಿತೆ. ಪಂಜರದಲ್ಲಿ ಬಂದಿಯಾಗಿರುವ ಗಿಳಿಯ ಸ್ಥಿತಿಯ ಮೂಲಕ ಮಾನವನ ಸ್ವಾತಂತ್ರ್ಯದ ಮಹತ್ತ್ವ ಹಾಗೂ ದಾಸ್ಯದ ದುರಂತವನ್ನು ಮಾರ್ಮಿಕವಾಗಿ ವಿವರಿಸುತ್ತದೆ.
ತಾತ್ಕಾಲಿಕ ಸುಖ ಮತ್ತು ಆಮಿಷಗಳಿಗೆ ಒಳಗಾಗಿ ತನ್ನ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನವನ್ನು ಕಳೆದುಕೊಳ್ಳುವ ಮನುಷ್ಯನ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಕವಿತೆಯ ಸಾರಾಂಶವನ್ನು ಕನ್ನಡದಲ್ಲಿ ಬರೆಯುವುದಾದರೆ- “ಓ ಹುಚ್ಚು ಗಿಳಿಯೇ, ನೀನು ತಿನ್ನುತ್ತಿರುವ ಈ ದಾಳಿಂಬೆ ಹಣ್ಣಿನ ಕಾಳುಗಳು ನಿನ್ನ ವಿನಾಶಕ್ಕೆ ಕಾರಣವಾಗುತ್ತಿವೆ.
ಒಂದು ಕಾಲದಲ್ಲಿ ಗಟ್ಟಿಯಾದ ಹಣ್ಣುಗಳನ್ನೂ ಬಲವಾದ ಕೊಕ್ಕಿನಿಂದ ಒಡೆಯುತ್ತಿದ್ದ ನೀನು, ಇಂದು ಪಂಜರದಲ್ಲಿ ಬಂದಿಯಾಗಿ ಯಜಮಾನ ಹಾಕುವ ಎಂಜಲು ತುಂಡುಗಳಿಗಾಗಿ ಕಾಯು ತ್ತಿದ್ದೀಯಾ. ಇದರಿಂದ ನಿನ್ನ ಕೊಕ್ಕು ಈಗ ಮೊಂಡಾಗಿದೆ. ನಿನ್ನ ಯಜಮಾನ ನಿನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿರಬಹುದು, ಮೇಲಿಂದ ಮೇಲೆ ನಿನ್ನ ಮೈಯನ್ನು ಸವರುತ್ತಿರ ಬಹುದು. ಆದರೆ ನೀನು ಕೇವಲ ಅವನ ಸಾಕು ಗಿಳಿಯಾಗಿದ್ದಿಯೇ ಹೊರತು ನಿನಗೆ ಸ್ವಂತ ಅಸ್ತಿತ್ವವಿಲ್ಲ. ಈ ದಾಸ್ಯದ ಬದುಕಿನಿಂದಾಗಿ ನಿನ್ನ ನಿಜವಾದ ಗೌರವ ನಾಶವಾಗಿದೆ.
ಹಿಂದೆ ನೀನು ಕಾಡಿನಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಆ ಚಿನ್ನದಂತಹ ಸ್ವಾತಂತ್ರ್ಯದ ದಿನಗಳನ್ನು ಒಮ್ಮೆ ನೆನಪಿಸಿಕೋ. ನಿನಗೆ ಇಷ್ಟ ಬಂದ ಮರಗಳ ಮೇಲೆ ಕುಳಿತು, ಕಣ್ಣಿಗೆ ಕಂಡ ಹಣ್ಣುಗಳನ್ನು ಕೊಕ್ಕಿನಿಂದ ಕುಕ್ಕಿ ತಿಂದು, ಮನಬಂದಂತೆ ಆಕಾಶದಲ್ಲಿ ಹಾರಾಡುತ್ತಿದ್ದ ಆ ದಿನಗಳ ವೈಭವವೇ ಬೇರೆಯಾಗಿತ್ತು. ಆದರೆ ಇಂದು ಪಂಜರ ಸೇರಿ ನಿನ್ನ ಜೀವನ ಮಣ್ಣುಪಾಲಾಗಿದೆ.
ಹಸಿವಿಗಾಗಿ ಮತ್ತು ಯಜಮಾನನ ಮೆಚ್ಚುಗೆಗಾಗಿ ನೀನು ನಿನ್ನ ಧೈರ್ಯ ಮತ್ತು ಸ್ವಾವಲಂಬನೆ ಯನ್ನು ಕಳೆದುಕೊಂಡಿದ್ದೀಯಾ. ಹೊಟ್ಟೆಪಾಡಿಗಾಗಿ ಯಜಮಾನನಿಗೆ ‘ಜೀ ಹುಜೂರ್’ ಎನ್ನುತ್ತಾ ಗುಲಾಮನಾಗಿದ್ದೀಯಾ. ಅವನು ಬಂದಾಗಲೆಲ್ಲಾ ಕುಣಿದು ಕುಪ್ಪಳಿಸಿ, ಅವನು ಹೇಳಿಕೊಟ್ಟಂತೆ ಮಾತನಾಡಿದರಷ್ಟೇ ನಿನಗೆ ಆಹಾರ ಸಿಗುತ್ತದೆ.
ನಿನ್ನ ಮುಂದೆ ಇರುವ ದಾಳಿಂಬೆ ಕಾಳುಗಳು ಕೆಂಪಾಗಿ, ರಸಭರಿತವಾಗಿ ಕಂಡರೂ ಅವು ವಿಷಕ್ಕೆ ಸಮಾನ. ನಿನ್ನ ಸ್ವಾತಂತ್ರ್ಯವನ್ನು ಕಸಿದುಕೊಂಡು ಪಂಜರದಲ್ಲಿ ಸಿಗುತ್ತಿರುವಂಥವು. ಕೇವಲ ತಿನ್ನುವ ಆಹಾರದ ಆಸೆಗೆ ಬಿದ್ದು, ಈ ಜಗತ್ತಿನಲ್ಲಿ ಎಷ್ಟೋ ನತದೃಷ್ಟ ಗಿಳಿಗಳು ಪಂಜರದೊಳಗೇ ಪ್ರಾಣ ಬಿಟ್ಟಿವೆ. ಒಂದುದಿನ ನಿನ್ನ ಸ್ಥಿತಿಯೂ ಹಾಗೇ ಆಗುತ್ತದೆ." ಇದೇನಿದು ಕಳೆದ ವಾರದ ದಾಳಿಂಬೆ ಪುರಾಣ ಈ ವಾರಕ್ಕೂ ಮುಂದುರಿದಿದೆಯಲ್ಲ ಅಂತ ನೀವೀಗ ಯೋಚಿಸುತ್ತಿದ್ದೀರಿ, ಅಲ್ಲವೇ? ಈ ಮುಂದುವರಿಕೆಗೆ ಕಾರಣವಿದೆ.
ಓದುಗರಿಗೆ ನನಗಿಂತ ಹೆಚ್ಚು ಜ್ಞಾನಾನುಭವ ಇರುತ್ತದೆ; ಅಂಕಣದಲ್ಲಿ ನಾನು ಪ್ರಸ್ತಾವಿಸುವ ವಿಚಾರಗಳಿಗೆ ಸಂಬಂಽಸಿದಂತೆ ಪೂರಕ ಸ್ವಾರಸ್ಯಕರ ಮಾಹಿತಿಯನ್ನು, ತಮ್ಮತಮ್ಮ ಅನುಭವದ ಬುತ್ತಿಯಿಂದ ರುಚಿವರ್ಧಕವನ್ನು ಒದಗಿಸುವ ಶಕ್ತಿ-ಆಸಕ್ತಿಗಳು ಇರುತ್ತವೆ- ಎಂದು ನನ್ನ ದೃಢನಂಬಿಕೆ. ಇದಕ್ಕನುಗುಣವಾಗಿಯೇ ಇದ್ದವು ದಾಳಿಂಬೆ ಆಖ್ಯಾನಕ್ಕೆ ಬಂದ ಪ್ರತಿಕ್ರಿಯೆಗಳೂ.
“ಮಣಿಯನ್ನೇ ದಾಳಿಂಬೆ ಬೀಜ ಎಂದು ಭಾವಿಸುವಂತೆ ಮಾಡಿ ಗಿಳಿಯನ್ನು ಯಾಮಾರಿಸಿದ ಕಥೆ ನಿಮಗೆ ಗೊತ್ತಿರಬಹುದು" ಎಂದು ಅಮರುಕ ಕವಿಯ ಶ್ಲೋಕವನ್ನು ಸಂಸ್ಕೃತ ವಿದ್ವಾಂಸ ಅವಧಾನಿ ಸೂರ್ಯ ಹೆಬ್ಬಾರರು ನೆನಪಿಸಿದರು. ಜೊತೆಗೆ ಆ ಶ್ಲೋಕದ ಸುಂದರ ವ್ಯಾಖ್ಯಾನ, ಯುವ ಅಮೆರಿಕನ್ನಡಿಗ ನವನೀತ ಗಲಗಲಿ ಇಂಗ್ಲಿಷ್ನಲ್ಲಿ ಮಾಡಿದ್ದರ ಲಿಂಕ್ ಸಹ ಕಳುಹಿಸಿದರು. ಸರಸ್ವತೀಸ್ತುತಿಯಲ್ಲಿ ಗಿಳಿ-ದಾಳಿಂಬೆ ಬೀಜ ನೆನಪಿಸಿಕೊಂಡವರು ಅರ್ಪಣಾ ಕುಂದಾಪುರ.
“ಕಾಲೇಜಿನಲ್ಲಿ ಸಂಸ್ಕೃತ ತರಗತಿಯಲ್ಲಿ ಮಹೇಶ ಅಡಕೋಳಿ ಸರ್ ಒಂದು ಶ್ಲೋಕ ಬಣ್ಣಿಸಿದ್ದರು. ಕ್ಷಮಿಸಿ, ಅದರ ಅರ್ಥವಷ್ಟೇ ನೆನಪಿದೆ. ಪೂರ್ತಿ ಶ್ಲೋಕ ನೆನಪಾಗುತ್ತಿಲ್ಲ" ಎಂದು ಅವರು ಬರೆದರು. ‘ಪಾಳೀಂವ ಪೋಪಟಾಸ’ ಮರಾಠಿ ಕವಿತೆಯ ಬಗ್ಗೆ ತಿಳಿಸಿದವರು ಪುಣೆ ನಿವಾಸಿ ಮಹೇಶ ನಾಯಕ್. ನನಗೆ ಆ ಮರಾಠಿ ಕವಿತೆ ಗೊತ್ತೇ ಇರಲಿಲ್ಲ.
“ಕನ್ನಡಿ ಕೈತಪ್ಪಿ ಹನ್ನೆರಡು ಚೂರಾಗಿ ಹೆಣ್ಣಿನ ಮನಸು ಎರಡಾಗಿ ದಾಳಿಂಬೆ ಹಣ್ಣಾದರೇನು ಫಲವಿಲ್ಲ ಎಂಬ ತ್ರಿಪದಿಯೊಂದಿದೆ. ಇದರ ಅರ್ಥವೇನೆಂದು ನನಗೆ ಸರಿಯಾಗಿ ತಿಳಿದಿಲ್ಲ." ಎಂದು ಮುಂಬೈಯಿಂದ ಡಾ.ಉಮಾ ರಾಮರಾವ್ ಬರೆದರು. ಆ ತ್ರಿಪದಿಯೂ ನನಗೆ ಹೊಸದೇ. ಹಳೆಯ ಗ್ರಂಥವೊಂದರಲ್ಲಿ ಕನ್ನಡ ಜನಪದ ಕಾವ್ಯಗಳ ಬಗೆಗಿನ ಲೇಖನದಲ್ಲಿ ಆ ತ್ರಿಪದಿಯ ಉಲ್ಲೇಖ ಮತ್ತು “ಬಾಳೊಂದು ಹಣ್ಣಾಗಿ ನಿಂತಾಗ ಉಸುರಿದ ಮಾತುಗಳಿವು.
ಇಂದಿನವರಿಗೆ ಬಾಳೊಂದು ಹನ್ನೆರಡು ಚೂರಾದ ಕನ್ನಡಿಯಂತೆ ಕಂಡರೆ, ಅಂದಿನ ತಲೆಮಾರಿ ನವರಿಗೆ ದಾಳಿಂಬೆಯಾಗಿತ್ತು" ಎಂಬ ವಿವರಣೆಯೇನೋ ಸಿಕ್ಕಿತು; ಆದರೆ ಸ್ಪಷ್ಟ ಅರ್ಥವೇನೆಂದು ನನಗೂ ಸರಿಯಾಗಿ ತಿಳಿಯಲಿಲ್ಲ. ಇನ್ನು, ದಾಳಿಂಬೆ ಪುರಾಣದಲ್ಲಿ ಅನಾರ್ಕಲಿಯ ಪ್ರಸ್ತಾವ ಬರದಿದ್ದರೆ ಹೇಗೆ ಎಂದು ಕೂಡ ಒಬ್ಬಿಬ್ಬರು ಪ್ರಶ್ನಿಸಿದ್ದಾರೆ. “ದಾಳಿಂಬೆಯನ್ನೇನೋ ಚೆನ್ನಾಗಿ ವರ್ಣಿಸಿದ್ದೀರಾ. ಆದರೆ ಒಂದು ಇಂಪಾರ್ಟೆಂಟು ಪಾಯಿಂಟು ಬಿಟ್ಟು ಹೋಗಿದೆ ಮಾರಾಯ್ರೇ! ಅದು ‘ಅನಾರಕಲಿ’.
ನಾದಿರಾ ಹೆಸರಿನ ರಾಜನರ್ತಕಿ ತನ್ನ ಸೌಂದರ್ಯದಿಂದಾಗಿ ಈ ಬಿರುದು ಪಡೆದು, ರಾಜಕುಮಾರ ಸಲೀಂನನ್ನೇ ಮೋಹಪಾಶದಲ್ಲಿ ಬೀಳುವಂತೆ ಮಾಡಿದ ಘಟನೆಯ ಉಲ್ಲೇಖ ಕೂಡ ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು. ಅಂದಹಾಗೆ ಹೋಲಿಕೆಯಿಂದ ಹೆಚ್ಚುಗಾರಿಕೆ ಬಂದದ್ದು ಆ ನರ್ತಕಿಗೋ ಅಥವಾ ದಾಳಿಂಬೆ ಮೊಗ್ಗಿಗೋ ಗೊತ್ತಿಲ್ಲ!" ಎಂದು ಹೇಮಂತ ಸಂಪಗಾಂವಕರ ಬರೆದರೆ “ದಾಳಿಂಬೆ ವರ್ಣನೆ ಸೊಗಸಾಗಿತ್ತು.
ಆದರೆ ಅದರ ಮೊಗ್ಗಿನ ಬಗ್ಗೆ ಅರ್ಥಾತ್ ಅನಾರ್ಕಲಿಯ ಬಗ್ಗೆಯೂ ಏನಾದರೂ ಇರಬಹುದೇನೋ ಎಂದು ಹುಡುಕಿದೆ. ಬಹುಶಃ ಸಲೀಂ ಜೋಶಿಯವರಿಗೆ ಅನಾರ್ಕಲಿ ಬಗ್ಗೆ ಒಲವಿಲ್ಲವೇನೋ?!" ಎಂದು ಕಾಲೆಳೆದಿದ್ದಾರೆ ಬೆಂಗಳೂರಿನ ವಸಂತಕುಮಾರ್ ಕಲ್ಯಾಣಿ. ನಿಜ, ‘ಮೊಘಲ್-ಎ-ಅಜಮ್’ ಅಮರಪ್ರೇಮಕಥೆಯ ಅನಾರ್ಕಲಿ ಒಬ್ಬ ಪೌರಾಣಿಕ ನರ್ತಕಿಯಾಗಿದ್ದು ರಾಜದರ್ಬಾರಿನಲ್ಲಿ ದಾಸಿಯಾಗಿದ್ದವಳು.
ಆಕೆಯ ಮೂಲ ಹೆಸರು ‘ನಾದಿರಾ ಬೇಗಂ’ ಅಥವಾ ‘ಶರೀಫ್-ಉನ್-ನಿಸಾ’ ಎಂದಾಗಿತ್ತು, ಆಕೆಯ ಅಪ್ರತಿಮ ಸೌಂದರ್ಯವನ್ನು ನೋಡಿ ಚಕ್ರವರ್ತಿ ಅಕ್ಬರನೇ ಆಕೆಗೆ ‘ಅನಾರ್ಕಲಿ’ (ದಾಳಿಂಬೆ ಹೂವಿನ ಮೊಗ್ಗು) ಎಂಬ ಹೆಸರನ್ನು ನೀಡಿದ್ದನೆಂದು ಪ್ರತೀತಿ. ಆದರೆ ಅಕ್ಬರನ ಮಗನಾದ ಯುವರಾಜ ಸಲೀಂ ಮತ್ತು ಅನಾರ್ಕಲಿ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದದ್ದು, ಒಬ್ಬ ಸಾಮಾನ್ಯ ನರ್ತಕಿ ದಾಸಿಯೊಡನೆ ತನ್ನ ಸಾಮ್ರಾಜ್ಯದ ಉತ್ತರಾಧಿಕಾರಿಯ ಪ್ರಣಯ ಅಕ್ಬರನಿಗೆ ಸ್ವಲ್ಪವೂ ಇಷ್ಟವಿಲ್ಲದ್ದು, ಅಕ್ಬರನ ಆಜ್ಞೆಯನ್ನು ಮೀರಿದ ಕಾರಣಕ್ಕಾಗಿ ಅನಾರ್ಕಲಿಗೆ ಕ್ರೂರ ಶಿಕ್ಷೆ ವಿಧಿಸಿದ್ದು, ಆಕೆಯನ್ನು ಲಾಹೋರ್ ಕೋಟೆಯ ಇಟ್ಟಿಗೆಯ ಗೋಡೆಯೊಳಗೆ ಜೀವಂತವಾಗಿ ಇರಿಸಿ ಸಮಾಧಿ ಮಾಡಿದ್ದು... ಮುಂತಾಗಿ ಕಥೆಗಳಿವೆ.
ಹಾಗೆ ನೋಡಿದರೆ ದಾಳಿಂಬೆಗೂ ಪ್ರಣಯಕ್ಕೂ ನಂಟಿರುವ ಕಥೆಗಳು ಭಾರತದ ಇತಿಹಾಸ ಪುರಾಣ ಗಳಲ್ಲಷ್ಟೇ ಅಲ್ಲ, ಪ್ರಪಂಚದ ಬೇರೆ ಕಡೆಗಳಲ್ಲೂ ಬೇಕಾದಷ್ಟಿವೆ. ಗ್ರೀಕ್ ಪುರಾಣದ ಒಂದು ಕಥೆಯ ಪ್ರಕಾರ, ಪರ್ಸೆಫೋನಿಯಳನ್ನು ಹೇಡೀಸ್ ಅಪಹರಿಸಿ ತನ್ನ ಹೆಂಡತಿಯಾಗಿ ಬದುಕಲು ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗಿದ್ದನು. ಅವಳ ತಾಯಿ ಡಿಮೀಟರ್ (ಸುಗ್ಗಿಯ ದೇವತೆ) ತನ್ನ ಕಳೆದುಹೋದ ಮಗಳಿಗಾಗಿ ಶೋಕತಪ್ತಳಾದಳು.
ಭೂಮಿಯ ಮೇಲಿನ ಸಸ್ಯವರ್ಗ ಬೆಳೆಯುವುದು ನಿಂತುಹೋಯಿತು. ಗ್ರೀಕ್ ದೇವತೆಗಳಲ್ಲೇ ಅತ್ಯುನ್ನತ ಸ್ಥಾನದ ಝೀಯಸ್, ಹೀಗೆ ಭೂಮಿಯು ನಾಶವಾಗಲು ಬಿಡಲಿಲ್ಲ. ಪರ್ಸೆಫೋನಿಯ ಳನ್ನು ಮರಳಿಸುವಂತೆ ಹೇಡೀಸ್ಗೆ ಆದೇಶಿಸಿದನು. ಪಾತಾಳ ಲೋಕದಲ್ಲಿ ಯಾರಾದರೂ ಆಹಾರ ಅಥವಾ ಪಾನೀಯವನ್ನು ಸೇವಿಸಿದರೆ ಅವರು ಶಾಶ್ವತವಾಗಿ ಅಲ್ಲೇ ಕಳೆಯಬೇಕು ಎಂಬುದು ಫೇಟ್ಸ್ ದೇವತೆಯ ನಿಯಮ.
ಪರ್ಸೆಫೋನಿಯಳು ಯಾವುದೇ ಆಹಾರವನ್ನು ಸೇವಿಸಿರಲಿಲ್ಲ, ಆದರೆ ಹೇಡೀಸ್ ಅವಳನ್ನು ವಂಚಿಸಿ ಆರು ದಾಳಿಂಬೆ ಬೀಜಗಳನ್ನು ತಿನ್ನುವಂತೆ ಮಾಡಿದ್ದನು. ಆದ್ದರಿಂದ ಅವಳು ಪ್ರತಿ ವರ್ಷ ಆರು ತಿಂಗಳ ಕಾಲ ಪಾತಾಳ ಲೋಕದಲ್ಲಿ ಕಳೆಯುವಂತೆ ಶಿಕ್ಷೆಗೊಳಗಾದಳು. ಈ ಆರು ತಿಂಗಳು ಗಳಲ್ಲಿ, ಆಕೆ ಪಾತಾಳದಲ್ಲಿರು ವಾಗ, ಅವಳ ತಾಯಿ ಡಿಮೀಟರ್ ದುಃಖಿಸುತ್ತಾ ಭೂಮಿಗೆ ಫಲವತ್ತತೆ ನೀಡುವುದನ್ನು ನಿಲ್ಲಿಸುತ್ತಾಳೆ.
ಭೂಗೋಲದಲ್ಲಿ ಆರು ತಿಂಗಳು ಬೇಸಗೆ, ಆರು ತಿಂಗಳು ಚಳಿಗಾಲ ಎನ್ನುವುದಕ್ಕೆ ಪ್ರಾಚೀನ ಗ್ರೀಕರು ನೀಡುವ ವಿವರಣೆಯಿದು. ಆದರೆ ಪ್ರಪಂಚಪರ್ಯಟನೆಗಿಂತ ಬಿ ವೋಕಲ್ ಫಾರ್ ಲೋಕಲ್ ಎಂಬಂತೆ, ಮತ್ತು ಓದುಗರು ಅನುಭವದ ಬುತ್ತಿಯಿಂದ ರುಚಿವರ್ಧಕವನ್ನು ಒದಗಿಸುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿಯೂ, ಒಂದೆರಡು ಪತ್ರಗಳನ್ನು ಆಯ್ದುಕೊಂಡಿದ್ದೇನೆ.
ಬೆಂಗಳೂರಿನಿಂದ ಸಿ.ಆರ್.ಮೋಹನಕುಮಾರ್ ಬರೆದಿದ್ದಾರೆ: “ನನ್ನ ಪ್ರಾಥಮಿಕ ವಿದ್ಯಾಭ್ಯಾಸ ತಾತನ (ತಾಯಿಯ ತಂದೆ) ಆಶ್ರಯದಲ್ಲಿ. ಅವರಿಗೆ ಆಯುರ್ವೇದದಲ್ಲಿ ನಂಬಿಕೆ. ಆಗಾಗ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಹತ್ತಿರವೇ ಇದ್ದ ಪೂರ್ಣಯ್ಯ ಛತ್ರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಿಂದ ಔಷಧಿ ತರಲು ನನ್ನನ್ನೇ ಕಳಿಸುತ್ತಿದ್ದರು. ನನ್ನ ದೊಡ್ಡಮ್ಮನ ಊರು ಮಧುಗಿರಿ. ದಾಳಿಂಬೆಗೆ ಹೆಸರುವಾಸಿ.
ದೊಡ್ಡಮ್ಮ ಬೆಂಗಳೂರಿಗೆ ಬಂದಾಗ ಎಲ್ಲರಿಗೂ ಸಿಹಿ ದಾಳಿಂಬೆ ಮತ್ತು ನಮ್ಮ ತಾತನವರಿಗೆ ಹುಳಿ ದಾಳಿಂಬೆ ತರುತ್ತಿದ್ದರು. ತಾತನವರಿಗೆ ಹುಳಿ ದಾಳಿಂಬೆ ಕಂಡರೆ ‘ಲೇಹ್ಯ’ ತಯಾರಿಸುವ ಹುಚ್ಚು. ಧೂತಪಾಪೇಶ್ವರ ಆಯುರ್ವೇದ ಮಳಿಗೆಯಲ್ಲಿ ಸಿಗುವ ಲೇಹ್ಯ ಆಗಾಗ ಸೇವಿಸುತ್ತಿದ್ದರು. ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಧೂತಪಾಪೇಶ್ವರ ಬಾಟಲಿಯ ಅಂಟುಚೀಟಿಯಿಂದ ಓದಿ ಪಟ್ಟಿ ಮಾಡಿ ಸಾಮಗ್ರಿಗಳನ್ನು ಅಕ್ಕಿಪೇಟೆಯ ಗ್ರಂಥಿಗೆ ಅಂಗಡಿಯಿಂದ ಕೊಂಡುತರಲು ನನಗೆ ಹೇಳುತ್ತಿದ್ದರು.
ಬೆಲ್ಲದ ಪಾಕ ಹದಕ್ಕೆ ತಂದು ಅದಕ್ಕೆ ಮಧುಗಿರಿ ಹುಳಿ ದಾಳಿಂಬೆ ರಸ, ಹಿಪ್ಪಲಿ, ಜೀರಿಗೆ ಮಿಶ್ರಣ ಮಾಡಿ ಲೇಹ್ಯ ತಯಾರಿಸಿ ಬಾಟಲಿಯಲ್ಲಿ ಶೇಖರಿಸಿಡುತ್ತಿದ್ದರು. ಊಟವಾದ ಮೇಲೆ ಗುಳಿಗೆಯಷ್ಟು ಸೇವಿಸಿ, ನಮಗೂ ಕೊಡುತ್ತಿದ್ದರು. ಅದೊಂದು ಸವಿನೆನಪು!" ಇನ್ನೊಂದು ಪತ್ರ ಮೈಸೂರಿನಿಂದ ಜಯಂತಿ ಶಾಸ್ತ್ರಿ ಅವರದು: “ನಾನು ಎರಡನೇ ಮಗಳ ಸರ್ತಿಯ ಬಸುರಿಯಾಗಿದ್ದಾಗ, ನಮ್ಮ ಸೋದರಮಾವ ಅವರ ಮನೆಹಿತ್ತಿಲಲ್ಲಿ ಬೆಳೆದ ದಾಳಿಂಬೆ ಹಣ್ಣುಗಳನ್ನು ತಿನ್ನಲು ತಂದು ಕೊಡುತ್ತಿದ್ದರು.
ಸುಮಾರು 20 ವರ್ಷಗಳಿಂದ ಇರುವ ಗಿಡವದು. ಬೀಜಗಳ ಬಣ್ಣ ಕಡುಕೆಂಪು ಅಲ್ಲ, ತಿಳಿಗುಲಾಬಿ. ರುಚಿ ಮಾತ್ರ ಬಹಳ ಸ್ವಾದಿಷ್ಟ. ನನ್ನ ತಾಯಿ ಅದರ ಕೆಲವು ಬೀಜಗಳನ್ನು ನಮ್ಮ ಕಾಂಪೌಂಡಿನಲ್ಲಿ ಹಾಕಿದ್ದರು. ಅವು ಮೊಳೆತು ಸಸಿಯಾದವು. ನಂತರದ ವರ್ಷಗಳಲ್ಲಿ ಆ ಗಿಡವನ್ನು ಕಾರಣಾಂತರ ದಿಂದ ಅಲ್ಲಿಂದ ತೆಗೆದು ಬೇರೆ ಜಾಗಕ್ಕೆ ಹಾಕಬೇಕಾಯಿತು. ಅದು ಅಲ್ಲಿ ಬೆಳೆಯದೆ ಸತ್ತು ಹೋಗುತ್ತದೆ ಎಂದು ನನಗೆ ಬಹಳ ನೋವಾಗಿತ್ತು. ಏಕೆಂದರೆ ಅದರಲ್ಲಿ ನನಗೆ ಇಬ್ಬರ ನೆನಪುಗಳಿದ್ದವು.
ಒಂದು- ಆ ಗಿಡ ನನ್ನ ಸೋದರಮಾವನ ಮನೆಯ ಹಣ್ಣಿನಿಂದ ಬಂದದ್ದು, ಇನ್ನೊಂದು ಅದನ್ನು ನನ್ನ ತಾಯಿ ಪ್ರೀತಿಯಿಂದ ಬೆಳೆಸಿದ್ದು ಎಂದು. ಅಂತೂ ಇಂತೂ ಹೊಸ ಜಾಗದಲ್ಲೂ ಗಿಡ ಚೆನ್ನಾಗಿಯೇ ಬೆಳೆದು ಫಲ ಕೊಡಲು ಶುರು ಮಾಡಿತು. ವರ್ಷಕ್ಕೆ 2-3 ಸರ್ತಿ ಹಣ್ಣು ಬಿಡುತ್ತಿತ್ತು. ಎರಡು ವರ್ಷಗಳ ಹಿಂದೆ ತುಂಬಾ ಜೋರು ಮಳೆ-ಗಾಳಿಯಿಂದ ಆ ಗಿಡವು ಬುಡಸಮೇತ ನೆಲಕ್ಕೆ ಬಿದ್ದು ಮಲಗಿಕೊಂಡುಬಿಟ್ಟಿತು.
ನಮ್ಮ ಮಾಲಿಯನ್ನು ಕರೆದು ಅದನ್ನು ಎತ್ತಿ ಹಗ್ಗದ ಸಹಾಯದಿಂದ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಕಟ್ಟಿ ನಿಲ್ಲಿಸುವಂತೆ ಹೇಳಿದೆ. ಇನ್ನು ಅದು ಚಿಗುರುತ್ತದೋ ಇಲ್ಲವೋ ಎಂದು ನನಗೆ ಬಹಳ ದುಃಖವಾಗಿತ್ತು. ಆದರೆ ನಿಧಾನವಾಗಿ ಮತ್ತೆ ಚಿಗುರಿ ಸಿಕ್ಕಾಪಟ್ಟೆ ಹಣ್ಣು ಬಿಡಲು ಶುರುವಾಗಿದೆ, ಹೆಮ್ಮರವಾಗಿ ನಿಂತಿದೆ. ಈ ವರ್ಷವಂತೂ ತುಂಬಾ ಫಲ ಕೊಟ್ಟಿತು. ಎಲ್ಲರಿಗೂ ಹಂಚಿದೆ.
ಈ ದಾಳಿಂಬೆ ಹಣ್ಣಿನ ಹಿಂದೆ ಇದ್ದ, ನನ್ನ ಸೋದರಮಾವ, ಅತ್ತೆ, ನನ್ನ ತಾಯಿ ಇವರಾರೂ ಇಂದು ನಮ್ಮೊಂದಿಗೆ ಇಲ್ಲ. ಆದರೆ ದಿನಾ ಬೆಳಗ್ಗೆ ಎದ್ದ ಕೂಡಲೇ ಗಿಡವನ್ನು ನೋಡಿದಾಗ ಅವರೆಲ್ಲರ ನೆನಪು ಒತ್ತರಿಸಿ ಬರುತ್ತದೆ." ಯಃಕಶ್ಚಿತ್ ದಾಳಿಂಬೆ ಹಣ್ಣಿನ ಬಗ್ಗೆ ಸಿಂಪಲ್ಲಾಗ್ ಒಂದು ಅಂಕಣ ಬರೆದಿದ್ದಕ್ಕೆ ಇಷ್ಟು ಸ್ವಾರಸ್ಯಕರವೂ ಸೆಂಟಿಮೆಂಟಲ್ಲೂ ಆದ ಪ್ರತಿಕ್ರಿಯೆಗಳು ಬಂದವೆಂದರೆ ಇನ್ನೇನು ಬೇಕು! ಎಲ್ಲರಿಗೂ ನವರಾತ್ರಿ ಮತ್ತು ವಿಜಯದಶಮಿ ಪರ್ವಕಾಲದ ಫಲಪ್ರದ ಶುಭಾಶಯಗಳು.