ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಇತ್ತೀಚೆಗೆ ನನ್ನ ಚಿಕಿತ್ಸಾಲಯಕ್ಕೆ ಸುಮಾರು 35 ವರ್ಷದ ವ್ಯಕ್ತಿಯೊಬ್ಬರು ಬಂದರು. ಉದ್ಯೋಗದ ಒತ್ತಡ, ಅನಿಯಮಿತ ಜೀವನಶೈಲಿ ಮತ್ತು ನಿರಂತರ ಪ್ರಯಾಣ- ಇವೆಲ್ಲವೂ ಅವರ ದಿನಚರಿಯ ಭಾಗವಾಗಿದ್ದವು. ಆದರೆ ಅವರನ್ನು ಅತ್ಯಂತ ಕಂಗೆಡಿಸಿದ್ದ ಸಮಸ್ಯೆ ಒಂದೇ- ಬಾಯಿಯಲ್ಲಿ ಪದೇ ಪದೆ ಕಾಣಿಸಿಕೊಳ್ಳುವ ಹುಣ್ಣು.
“ಡಾಕ್ಟರ್, ಇದು ಸಣ್ಣ ಸಮಸ್ಯೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ತಿಂಗಳಿಗೆ ಒಂದು ಬಾರಿ ಬಂದರೂ ಸಾಕು, ಊಟ ಮಾಡಲಾಗುವುದಿಲ್ಲ, ಮಾತಾಡಲು ನೋವು, ಮನಸ್ಸಿಗೂ ಬೇಸರ. ನಾನು ಎಲ್ಲ ಪರೀಕ್ಷೆಗಳನ್ನೂ ಮಾಡಿಸಿದ್ದೇನೆ. ವಿಟಮಿನ್ ಕೊರತೆ ಎಂದು ಹೇಳಿ ವಿವಿಧ ಮಾತ್ರೆಗಳನ್ನು ಕೊಟ್ಟರು. ತಿಂಗಳ ತಿಂಗಳು ತೆಗೆದುಕೊಂಡಿದ್ದೇನೆ. ಆದರೆ ಹುಣ್ಣು ಮತ್ತೆ ಬರುತ್ತಲೇ ಇದೆ" ಎಂದು ಅವರು ಹೇಳಿದರು.
ಅವರು ತಮ್ಮೊಂದಿಗೆ ತಂದಿದ್ದ ವೈದ್ಯಕೀಯ ವರದಿಗಳ ದಟ್ಟ ಕಡತವನ್ನು ನನ್ನ ಮುಂದೆ ಇಟ್ಟರು. ರಕ್ತಪರೀಕ್ಷೆಗಳು, ವಿಟಮಿನ್ ಬಿ-12 ಮಟ್ಟ, ಐರನ್ ಪ್ರಮಾಣ- ಎಲ್ಲವೂ ಸಮಾನ ವಾಗಿದ್ದವು. ಪ್ರತಿ ಬಾರಿ ಹುಣ್ಣು ಉಂಟಾದಾಗ ಹೊಸ ಜೆಲ, ಹೊಸ ಮೌತ್ ವಾಶ್, ಹೊಸ ವಿಟಮಿನ್ ಪೂರಕ. ತಾತ್ಕಾಲಿಕವಾಗಿ ಶಮನವಾಗುತಿತ್ತು; ಆದರೆ ಕೆಲವು ವಾರಗಳ ಮತ್ತೆ ಅದೇ ನೋವು, ಅದೇ ಕಿರಿಕಿರಿ.
ಅವರ ಮಾತುಗಳನ್ನು ಕೇಳಿದ ನಂತರ ನಾನು ಕೆಲ ಸರಳ ಪ್ರಶ್ನೆಗಳು ಕೇಳಿದೆ- “ಊಟದ ಸಮಯ ನಿಯತವಾಗಿದೆಯೇ? ಹಸಿವು ಸರಿಯಾಗಿ ಕಾಣಿಸುತ್ತಿದೆಯೇ? ಮಲವಿಸರ್ಜನೆ ಹೇಗಿದೆ? ಹೊಟ್ಟೆಯಲ್ಲಿ ಉಬ್ಬರವಿರುವ ಅನುಭವವಿದೆಯೇ?" ಇತ್ಯಾದಿ.
ಅವರು ಸ್ವಲ್ಪ ತಡಕಾಡಿ ಉತ್ತರಿಸಿದರು- “ಬೆಳಗ್ಗೆ ಕಾಫಿಯೇ ಮುಖ್ಯ. ದಿನದಲ್ಲಿ 4-5 ಬಾರಿ ಕಾಫಿ ಇದ್ದೇ ಇರುತ್ತದೆ. ಜತೆಗೆ ಸುಮಾರು 2-3 ಲೀ. ನೀರು ಕೂಡ. ಮಧ್ಯಾಹ್ನ ಕೆಲಸದ ಮಧ್ಯೆ ಏನಾದರೂ ಸಿಕ್ಕರೆ ತಿನ್ನುತ್ತೇನೆ. ಕೆಲವೊಮ್ಮೆ ಊಟವೇ ತಪ್ಪುತ್ತದೆ. ರಾತ್ರಿ ಮನೆಗೆ ತಡವಾಗಿ ಬಂದು ಹೆಚ್ಚು ತಿನ್ನುತ್ತೇನೆ. ಗ್ಯಾಸು, ಹೊಟ್ಟೆ ಬಿಗಿತ, ಮಲಬದ್ಧತೆ- ಇವುಗಳೆ ಸಹಜವೇ ಎಂದುಕೊಂಡಿದ್ದೆ".
ಇದನ್ನೂ ಓದಿ: Dr Sadhanashree Column: ಶಿವರಾತ್ರಿ: ದೇಹಶುದ್ಧಿಯೆಂಬ ಚಿತ್ತಶುದ್ಧಿವರೆಗೆ
ಅವರ ನಾಲಿಗೆಯನ್ನು ಪರಿಶೀಲಿಸಿದಾಗ ಮೇಲ್ಮೈಯಲ್ಲಿ ಬಿಳಿ ಆವರಣ ಕಂಡಿತು- ಆಮದ ಸ್ಪಷ್ಟ ಸೂಚನೆ. ಜೀರ್ಣಾಗ್ನಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದಾಗ, ಆಹಾರವು ಸಂಪೂರ್ಣವಾಗಿ ಪಚನಗೊಳ್ಳದೆ ದೇಹದಲ್ಲಿ ಅಜೀರ್ಣ ಅವಶೇಷಗಳು ಸಂಗ್ರಹವಾಗುತ್ತವೆ. ಅವು ದೋಷಗಳನ್ನು ಕೋಪಗೊಳಿಸಿ ಸೂಕ್ಷ್ಮ ಮಾರ್ಗಗಳಲ್ಲಿ ಸಂಚರಿಸಿ, ಅಂತಿಮವಾಗಿ ಬಾಯಿಯ ಒಳಪರದೆಯಲ್ಲಿ ಹುಣ್ಣಾಗಿ ವ್ಯಕ್ತವಾಗುತ್ತವೆ.
ಆಯುರ್ವೇದದ ದೃಷ್ಟಿಯಲ್ಲಿ ಇದು ಕೇವಲ ಸ್ಥಳೀಯ ತೊಂದರೆ ಅಲ್ಲ; ಜೀರ್ಣ ದೌರ್ಬ ಲ್ಯದ, ಹೊರಪ್ರತಿಫಲ. ನಾನು ಅವರಿಗೆ ಸ್ಪಷ್ಟವಾಗಿ ತಿಳಿಸಿದೆ- “ನೀವು ವಿಟಮಿನ್ ಕೊರತೆ ಯನ್ನು ಚಿಕಿತ್ಸೆ ಮಾಡುತ್ತಿದ್ದೀರಿ; ಆದರೆ ನಿಮ್ಮ ಜೀರ್ಣಶಕ್ತಿಯನ್ನು ಪರಿಶೀಲಿಸಿಲ್ಲ. ದೇಹಕ್ಕೆ ನೀಡಿದ ಪೋಷಕಾಂಶಗಳು ಸರಿಯಾಗಿ ಜೀರ್ಣವಾಗದಿದ್ದರೆ ಮಾತ್ರೆಗಳ ಪ್ರಯೋಜನ ಸೀಮಿತವಾಗಿರುತ್ತದೆ.
ಅಗ್ನಿ ದುರ್ಬಲವಾದರೆ ಆಮ ಉತ್ಪತ್ತಿಯಾಗಿ ದೋಷಗಳನ್ನು ಕೆರಳಿಸುತ್ತದೆ. ಹುಣ್ಣು ಆ ಅಸಮತೋಲನದ ಸೂಚನೆ". ಅವರಿಗೆ ಇದು ಹೊಸ ದೃಷ್ಟಿಕೋನವಾಗಿತ್ತು. “ಹಾಗಾದರೆ ನನಗೆ ಇನ್ನಷ್ಟು ಔಷಧಗಳು ಬೇಕೇ?" ಎಂದು ಅವರು ಕೇಳಿದರು.
ನಾನು ಹೀಗೆ ಉತ್ತರಿಸಿದೆ- “ಬಹುಶಃ ಕಡಿಮೆ ಔಷಧ ಮತ್ತು ಹೆಚ್ಚು ಶಿಸ್ತಿನ ಜೀವನವೇ ಬೇಕು". ಅವರಿಗೆ ನೀಡಿದ ಮಾರ್ಗದರ್ಶನ ಅತಿ ಸರಳವಾಗಿತ್ತು. ಮೊದಲ ತಿಂಗಳು ಕಳೆದರೂ ಹುಣ್ಣು ಕಾಣಿಸಲಿಲ್ಲ. ಅವರು ಸ್ವಲ್ಪ ಆಶ್ಚರ್ಯದಿಂದಲೇ ವಿಚಾರಿಸಿದರು- “ಇದು ಯಾದೃಚ್ಛಿಕವೋ?".
ಮೂರು ತಿಂಗಳು ಕಳೆದಾಗಲೂ ಸಮಸ್ಯೆ ಮರುಕಳಿಸಲಿಲ್ಲ. ಅವರ ಹೊಟ್ಟೆಯ ಭಾರ ಕಡಿಮೆಯಾಯಿತು, ಮಲವಿಸರ್ಜನೆ ನಿಯತವಾಯಿತು, ದೇಹದಲ್ಲಿ ಹಗುರತೆ ಮತ್ತು ಚೈತನ್ಯ ಹೆಚ್ಚಾಯಿತು. ಒಂದು ದಿನ ಸ್ವಲ್ಪ ಸಮಾಧಾನದಿಂದ ಹೇಳಿದರು- “ಇಷ್ಟು ದಿನ ನಾನು ಹುಣ್ಣನ್ನು ಶತ್ರುವೆಂದು ಕಂಡಿದ್ದೆ. ಈಗ ಅದು ನನ್ನ ದೇಹದ ಎಚ್ಚರಿಕೆಯ ಸಂಕೇತ ಎಂದು ತಿಳಿದುಬಂದಿದೆ".
ಸ್ನೇಹಿತರೆ, ಈ ಹಿನ್ನೆಲೆಯಲ್ಲಿಯೇ ಮುಖಪಾಕವನ್ನು/ಬಾಯಿಹುಣ್ಣನ್ನು ಆಯುರ್ವೇದದ ದೃಷ್ಟಿಯಿಂದ ಅವಲೋಕಿಸುವುದು ಅಗತ್ಯ. ಅದರ ಸ್ವರೂಪ, ವಿಧಗಳು, ಕಾರಣಗಳು ಮತ್ತು ದೋಷಾನುಸಾರ ನಿರ್ವಹಣೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸೋಣ.
ಮುಖಪಾಕ: ಜೀರ್ಣದೋಷದ ಪ್ರತಿಫಲ
ಇಂದಿನ ಜೀವನಶೈಲಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆಗಳಲ್ಲಿ ‘ಮೌತ್ ಅಲ್ಸರ್’ ಒಂದು. ಬಾಯಿಯ ಒಳಭಾಗದಲ್ಲಿ ಉಂಟಾಗುವ ಸಣ್ಣ ಹುಣ್ಣುಗಳು, ಉರಿಯೂತ, ನೋವು, ಊಟ ಮಾಡುವಾಗ ತೊಂದರೆ- ಇವೆಲ್ಲವೂ ಇದರ ಲಕ್ಷಣಗಳು. ಆದರೆ ಆಯುರ್ವೇದದ ಪರಿಕಲ್ಪನೆಯಲ್ಲಿ ಈ ಸಮಸ್ಯೆಯನ್ನು ಕೇವಲ ಬಾಯಿಯ ರೋಗವೆಂದು ಪರಿಗಣಿಸಲಾಗುವುದಿಲ್ಲ.
ಇದನ್ನು ‘ಮುಖಪಾಕ’ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ದೇಹದ ಒಳಗಿನ ಜೀರ್ಣದೋಷದ ಪ್ರತಿಫಲವೆಂದು ವಿವರಿಸಲಾಗುತ್ತದೆ. ಆಯುರ್ವೇದದ ಪ್ರಕಾರ ದೇಹದ ಆರೋಗ್ಯವು ‘ಅಗ್ನಿ’ಯ ಸಮತೋಲನದ ಮೇಲೆ ನಿಂತಿದೆ.
ಜೀರ್ಣಾಗ್ನಿ ಕ್ಷೀಣಿಸಿದಾಗ ಆಹಾರ ಸಮರ್ಪಕವಾಗಿ ಜೀರ್ಣವಾಗದೆ ‘ಆಮ’ ಎಂಬ ಅಪಕ್ವ ದೋಷ ಪದಾರ್ಥ ರೂಪುಗೊಳ್ಳುತ್ತದೆ. ಈ ಆಮವು ದೇಹದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ದೋಷಗಳನ್ನು ಕೆರಳಿಸಿ ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಬಾಯಿಯಲ್ಲಿ ರುವ ಒಳಪದರವೇ ಇಡೀ ಜೀರ್ಣಾಂಗವ್ಯೂಹದಲ್ಲಿದೆ. ಆದ್ದರಿಂದ ಬಾಯಿಯಲ್ಲಿ ಆಗುವ ತೊಂದರೆಗೆ ಮೂಲಕಾರಣ ಜೀರ್ಣಾಂಗವ್ಯೂಹದಲ್ಲಿದೆ.
ದೇಹದ ಪ್ರವೇಶದ್ವಾರವಾದ್ದರಿಂದ, ಒಳಗಿನ ಅಸಮತೋಲನವು ಬಹುಸಾರಿ ಇಲ್ಲಿ ಮೊದಲ ಲಕ್ಷಣವಾಗಿ ವ್ಯಕ್ತವಾಗುತ್ತದೆ. ಹೀಗಾಗಿ ಮುಖಪಾಕವು ಕೇವಲ ಗಾಯವಲ್ಲ; ಅದು ದೇಹದ ಅಂತರಂಗದ ಅಸಮತೋಲನದ ಸೂಚನೆ. ಮುಖಪಾಕದ ದೋಷಾನುಸಾರ ವಿಭಾಗಗಳು ಆಯುರ್ವೇದವು ಮುಖಪಾಕವನ್ನು ಮುಖ್ಯವಾಗಿ ನಾಲ್ಕು ವಿಧಗಳಾಗಿ ವರ್ಗೀ ಕರಿಸುತ್ತದೆ: ವಾತಜ, ಪಿತ್ತಜ, ಕಫಜ ಮತ್ತು ರಕ್ತಜ. ಪ್ರತಿ ವಿಧಕ್ಕೂ ವಿಭಿನ್ನ ಲಕ್ಷಣಗಳು ಹಾಗೂ ನಿರ್ವಹಣಾ ವಿಧಾನಗಳಿವೆ.
1. ವಾತಜ ಮುಖಪಾಕ: ಚಿಕ್ಕ-ಚಿಕ್ಕ, ಒಣಗಿದ ಹುಣ್ಣುಗಳು, ಚುಚ್ಚುವಂಥ ತೀವ್ರನೋವು, ನಾಲಿಗೆಯ ಅಂಚಿನಲ್ಲಿ ಸುಕ್ಕುಗಟ್ಟಿದ ಗಾಯ, ಬಾಯಿಯ ಒಣಗುವಿಕೆ, ಕಪ್ಪು ಛಾಯೆಯ ಒಣಗಿದ ಒಳಪದರ, ಮಾತನಾಡುವಾಗ ಅಥವಾ ಊಟ ಮಾಡುವಾಗ ಹೆಚ್ಚುವ ನೋವು. ಕಾರಣಗಳು: ಅತಿಯಾದ ಖಾರ, ಕಹಿ, ಒಗರು ರುಚಿ. ಜಿಡ್ಡುರಹಿತ, ಒಣ, ಶೀತ ಆಹಾರ. ಹಸಿ ತರಕಾರಿಗಳ ಅತಿಸೇವನೆ. ಕಾಳುಗಳ ಅಧಿಕ ಬಳಕೆ. ಅಲ್ಪಾಹಾರ ಅಥವಾ ನಿಯಮವಿಲ್ಲದ ಉಪವಾಸ. ಅಲ್ಪನಿದ್ರೆ, ಮಾನಸಿಕ ಒತ್ತಡ
2. ಪಿತ್ತಜ ಮುಖಪಾಕ: ಕೆಂಪು ಅಥವಾ ಹಳದಿ ಛಾಯೆಯ ಗಾಯ. ಉರಿ, ದಾಹ. ಕಹಿ ಅಥವಾ ಅಮ್ಲ ರುಚಿ. ಕೆಲವೊಮ್ಮೆ ಹಳದಿ ಸ್ರಾವ. ಕೆಲವೊಮ್ಮೆ ಜ್ವರದ ಅನುಭವ.
ಕಾರಣಗಳು: ಅತಿಯಾದ ಖಾರ, ಹುಳಿ, ಉಪ್ಪು. ಮಸಾಲೆ ಮತ್ತು ತೀಕ್ಷ್ಣ ಪದಾರ್ಥಗಳು. ಜಂಕ್ ಫುಡ್, ಕರಿದ ಪದಾರ್ಥಗಳು. ಜೀರ್ಣಶಕ್ತಿಗಿಂತ ಹೆಚ್ಚು ಆಹಾರ. ಅತಿಯಾದ ಉಷ್ಣ ಗುಣದ ಆಹಾರ. ಕೋಪ, ಹೆಚ್ಚು ಬಿಸಿಲಿನ ಸಂಪರ್ಕ
3. ಕಫಜ ಮುಖಪಾಕ: ಬಾಯಿಯ ಬಣ್ಣದಂತೆಯೇ ಮೃದುವಾದ ಗಾಯ. ತೀವ್ರ ನೋವು ಇಲ್ಲ. ಅಂಟಿನಂತೆ ಲೇಪಸ್ವರೂಪ. ಹೆಚ್ಚಿನ ಲಾಲಾಸ್ರಾವ.
ಮೈಭಾರದ ಅನುಭವ ಕಾರಣಗಳು: ಅತಿಯಾದ ಸಿಹಿ ಮತ್ತು ಜಿಡ್ಡಿನ ಆಹಾರ. ಹಾಲು, ಮೊಸರು, ಐಸ್‌ಕ್ರೀಮ್, ಶೀತಲೀಕೃತ ಆಹಾರ, ಅತಿಯಾದ ನಿದ್ರೆ, ವ್ಯಾಯಾಮರಹಿತ ಜೀವನ ಶೈಲಿ- ಇವು ಕಫದ ಹೆಚ್ಚಳಕ್ಕೆ ಕಾರಣವಾಗುತ್ತವೆ.
4. ರಕ್ತಜ ಮುಖಪಾಕ: ರಕ್ತದ ದೋಷದಿಂದ ಉಂಟಾಗುವ ಈ ಪ್ರಕಾರ ಹೆಚ್ಚು ತೀವ್ರ ವಾಗಿರುತ್ತದೆ. ತೀವ್ರ ಕೆಂಪುಗಾಯ. ವಿಪರೀತ ಉರಿ. ಎಂಜಲು ನುಂಗಲು ಕಷ್ಟ. ಕೆಲವೊಮ್ಮೆ ರಕ್ತಸ್ರಾವಬಾಯಿಹುಣ್ಣಿನ ನಿರ್ವಹಣೆ: ದೋಷಾನುಸಾರ ಕ್ರಮಗಳು
ಮುಖಪಾಕದ ಚಿಕಿತ್ಸೆಯಲ್ಲಿ ಮೊದಲ ಗುರಿ ಜೀರ್ಣಾಗ್ನಿಯನ್ನು ಪುನಃಸ್ಥಾಪಿಸುವುದು. ಕೇವಲ ಹೊರಗೆ ‘ಜೆಲ’ ಹಚ್ಚುವುದರಿಂದ ತಾತ್ಕಾಲಿಕ ಶಮನ ಸಿಗಬಹುದು; ಆದರೆ ಮೂಲ ಕಾರಣ ನಿವಾರಣೆಯಾಗದಿದ್ದರೆ ಸಮಸ್ಯೆ ಮರುಕಳಿಸುತ್ತದೆ.
ಪಾಲಿಸಬೇಕಾದ ನಿಯಮಗಳು
ದಿನದಲ್ಲಿ ಎರಡು ಅಥವಾ ಮೂರು ಹೊತ್ತಿಗಿಂತ ಹೆಚ್ಚು ಬಾರಿ ಆಹಾರ ಸೇವನೆ ಮಾಡ ಬಾರದು. ಊಟದ ನಡುವಿನ ಸಮಯವನ್ನು ಸಮರ್ಪಕವಾಗಿ ಬಿಡುವುದು ಜೀರ್ಣಾಗ್ನಿಯ ರಕ್ಷಣೆಗೆ ಅಗತ್ಯ. ಪದೇ ಪದೆ ಏನಾದರೂ ತಿನ್ನುವ ಅಭ್ಯಾಸವನ್ನು ತಪ್ಪಿಸಬೇಕು. ನಿರಂತರ ಆಹಾರ ಸೇವನೆ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಆಹಾರ ಸೇವಿಸುವ ಸಮಯದಲ್ಲಿಯೇ ಅಗತ್ಯವಿರುವ ಪ್ರಮಾಣದ ನೀರನ್ನು ಸೇವಿಸಬೇಕು.
ಅನಿಯತವಾಗಿ, ಅತಿಯಾಗಿ ನೀರು ಕುಡಿಯುವ ಅಭ್ಯಾಸವೂ ಜೀರ್ಣಾಗ್ನಿಯನ್ನು ಕ್ಷೀಣ ಗೊಳಿಸಿ ಮುಖಪಾಕಕ್ಕೆ ಕಾರಣವಾಗಬಹುದು. ವಾತಜ ಮತ್ತು ಕಫಜ ಮುಖಪಾಕ ದಲ್ಲಿ- ಕುದಿಸಿದ ನೀರನ್ನು ಬೆಚ್ಚಗಿನ ಸ್ಥಿತಿಯಲ್ಲಿಯೇ ಊಟದ ಜತೆ ಸೇವಿಸುವುದು ಹಿತಕರ.
ಪಿತ್ತಜ ಮತ್ತು ರಕ್ತಜ ಮುಖಪಾಕದಲ್ಲಿ- ಕುದಿಸಿ ಆರಿಸಿದ (ಶೀತಲಗೊಳಿಸಿದ) ನೀರನ್ನು ಸೇವಿಸುವುದು ಶ್ರೇಯಸ್ಕರ. ನಿಯತ ಹಾಗೂ ಸಮರ್ಪಕ ನಿದ್ರೆ ಅತ್ಯಂತ ಮುಖ್ಯ.
ಸಕಾಲದಲ್ಲಿ ಮಲಗುವುದು ಮತ್ತು ಯಥಾಶಕ್ತಿ ವಿಶ್ರಾಂತಿ ಪಡೆಯುವುದು ಮುಖಪಾಕದ ಶಮನಕ್ಕೆ ಸಹಾಯಕ. ಈ ಸರಳ ಜೀವನಕ್ರಮದ ನಿಯಮಗಳ ಪಾಲನೆಯಿಂದ ಜೀರ್ಣಾಗ್ನಿ ಸಮತೋಲನದಲ್ಲಿದ್ದು, ಮುಖಪಾಕವು ಬೇಗ ಗುಣಮುಖವಾಗಲು ಸಹಕಾರಿಯಾಗುತ್ತದೆ.
ವಾತಜ ಮುಖಪಾಕಕ್ಕೆ
ಸಾಮಾನ್ಯವಾಗಿ ಎಲ್ಲ ರೀತಿಯ ಮುಖ ಪಾಕದಲ್ಲಿಯೂ ಅನ್ನ, ಹೆಸರುಬೇಳೆ ಕಟ್ಟುಸಾರು ಹಿತ. ವಿಶೇಷವಾಗಿ ವಾತದಲ್ಲಿ ತುಪ್ಪದಲ್ಲಿ ಹುರಿದ ಅಕ್ಕಿಯ ಅನ್ನ, ತುಪ್ಪದಲ್ಲಿ ಹುರಿದ ಹೆಸರುಬೇಳೆಯ ಕಟ್ಟುಸಾರು ಹಿತ. ತುಪ್ಪದಲ್ಲಿ ಹುರಿದು ಮಾಡಿದ ಪೊಂಗಲ, ವಿವಿಧ ರೀತಿಯ ಪಾಯಸ ಹಿತಕರ.
ದಿನಚರ್ಯೆಯಲ್ಲಿ ಪಾಲಿಸಬಹುದಾದ ಕ್ರಮಗಳು: ರಾತ್ರಿ ಊಟವಾದ ತಕ್ಷಣ ಸ್ವಲ್ಪ ತುಪ್ಪ ಮತ್ತು ಕಲ್ಲುಸಕ್ಕರೆಯ ಮಿಶ್ರಣವನ್ನು ನೆಕ್ಕುವುದು ಹಿತಕರ. ಬೆಳಿಗ್ಗೆ ಹಲ್ಲುಜ್ಜಿದ ನಂತರ, ಬಾಯಿ ಒಳಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಸ್ವಲ್ಪ ಬೆಚ್ಚಗೆ ಮಾಡಿ 2-3 ನಿಮಿಷ ಇಟ್ಟುಕೊಳ್ಳುವುದು (ಗಂಡೂಷ/ಕವಳ) ಪ್ರಯೋಜನಕಾರಿ. 2-3 ಚಮಚದಷ್ಟು ಎಳ್ಳನ್ನು ಸ್ವಲ್ಪ ಅಗಿದು ಬಾಯಿಯಲ್ಲಿ ಇಟ್ಟುಕೊಳ್ಳುವುದು ಪರಿಣಾಮಕಾರಿ.
ಪಿತ್ತಜ ಮತ್ತು ರಕ್ತಜ ಮುಖಪಾಕಕ್ಕೆ
ಲಕ್ಷಣಗಳ ಹಿನ್ನೆಲೆ: ಉರಿಯಿಂದಾಗಿ ಹಸಿವೆ ಹೆಚ್ಚಿದಂತೆ ಭ್ರಮೆ ಉಂಟಾಗುವುದು. ಒಳಗೆ ಬಿಸಿ, ಅಮ್ಲದ್ರವದಂಥ ಪಿತ್ತದ ಕಾವು ಇದಕ್ಕೆ ಕಾರಣ
ಹಿತಕರ ಆಹಾರ: ಸಾದಾ ಅನ್ನ, ಬೇಳೆ ಕಟ್ಟುಸಾರು, ನೆಲ್ಲಿಪುಡಿ/ನೆಲ್ಲಿಕಾಯಿ ಹೆಸರುಬೇಳೆ ಸಾರು, ದಾಳಿಂಬೆ ಹಣ್ಣಿನ ರಸದ ಸಾರು
ಪಾನೀಯ ಕ್ರಮಗಳು: ಆಹಾರದ ನಡುವೆ ಮಧ್ಯೆ ಕುದಿಸಿದ ನೀರಿನಲ್ಲಿ ಸ್ವಲ್ಪ ತ್ರಿಫಲಾ ಪುಡಿ ಹಾಗೂ ಬೆಣ್ಣೆ ಸೇರಿಸಿ ಸೇವಿಸುವುದು. ಒಣದ್ರಾಕ್ಷಿಯನ್ನು ನೆನೆ ಹಾಕಿ ಕಿವುಚಿದ ನೀರು ಸೇವನೆ. ಕೊತ್ತಂಬರಿ ಬೀಜವನ್ನು ರಾತ್ರಿ ನೆನೆ ಹಾಕಿದ ತಂಪಾದ ನೀರು ಕುಡಿಯುವುದು
ಬಾಯಿ ಶುದ್ಧಿಗಾಗಿ: ತ್ರಿಫಲಾ ಪುಡಿಯಿಂದ ಹಲ್ಲುಜ್ಜುವುದು. ತ್ರಿಫಲಾ ಕಷಾಯದಿಂದ ಬಾಯಿ ಮುಕ್ಕಳಿಸುವುದು ಕಫಜ ಮುಖಪಾಕಕ್ಕೆ ಹಿತಕರ ಆಹಾರ ಮತ್ತು ಸಾರು: ಶುಂಠಿ, ಮೆಣಸು, ಜೀರಿಗೆ ಹಾಕಿ ತಯಾರಿಸಿದ ಸಾರು (ಉಷ್ಣ, ದೀಪನ ಗುಣಯುಕ್ತ). ಲಘು ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ. ಹಸಿವಿಲ್ಲದಿದ್ದಾಗ ಘನ ಆಹಾರವನ್ನು ತಾತ್ಕಾಲಿಕ ವಾಗಿ ವರ್ಜಿಸಿ ಕೇವಲ ಬಿಸಿ ಕಟ್ಟುಸಾರು (ಲಘು ಬೇಳೆಸಾರು) ಸೇವಿಸಬಹುದು.
ಬಾಯಿ ಶುದ್ಧಿಗಾಗಿ: ಸ್ವಲ್ಪ ಖಾರ ರಸಯುಕ್ತ ದಂತಮಂಜನ ಪುಡಿಯನ್ನು ಹಲ್ಲುಜ್ಜಲು ಉಪಯೋಗಿಸಬಹುದು. ಚೇನುತುಪ್ಪವನ್ನು ಬಾಯಿ ಒಳಗೆ ಇಟ್ಟುಕೊಳ್ಳುವುದು ಹಿತಕರ.
ಪಾನೀಯ: ಕುದಿಸಿದ ಬಿಸಿನೀರಿಗೆ ಸ್ವಲ್ಪ ಶುಂಠಿ ಪುಡಿ ಅಥವಾ ತ್ರಿಕಟು ಪುಡಿ ಸೇರಿಸಿ ಸೇವಿಸುವುದು ಉತ್ತಮ. ಸ್ನೇಹಿತರೆ, ಮುಖಪಾಕದ ಉದಾಹರಣೆ ನಮ್ಮ ಆರೋಗ್ಯದ ಕುರಿತು ನಾವು ಹೊಂದಿರುವ ಮನೋಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಬಾಯಿಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಾಗ ನಾವು ತಕ್ಷಣವೇ ಜೆಲ್ ಹಚ್ಚುವುದು, ಮೌತ್ವಾಷ್ ಬಳಸುವುದು, ನೋವು ಕಡಿಮೆಯಾಗುವ ತನಕ ತಾತ್ಕಾಲಿಕ ಪರಿಹಾರ ಹುಡುಕುವುದು- ಇದುವೇ ನಮ್ಮ ಸಾಮಾನ್ಯ ಪ್ರವೃತ್ತಿ. ಹುಣ್ಣು ಕೆಲವು ದಿನಗಳಲ್ಲಿ ಶಮನವಾದರೆ, ಸಮಸ್ಯೆ ಮುಗಿಯಿತೆಂದೇ ಭಾವಿಸುತ್ತೇವೆ. ಆದರೆ ಒಳಗಿನ ಅಜೀರ್ಣ, ದೋಷಗಳ ಅಸಮತೋಲನ, ಜೀವನಶೈಲಿಯ ಎಡವಟ್ಟುಗಳು- ಇವೆಲ್ಲವೂ ಹಾಗೆಯೇ ಉಳಿದುಕೊಳ್ಳುತ್ತವೆ.
ಆರೋಗ್ಯ ಸಂರಕ್ಷಣೆ ಎಂದರೆ ಲಕ್ಷಣಗಳನ್ನು ಮುಚ್ಚಿಹಾಕುವುದು ಅಲ್ಲ. ಅದು ಮೂಲ ಕಾರಣವನ್ನು ಗುರುತಿಸಿ, ಅದನ್ನು ಸರಿಪಡಿಸುವ ಪ್ರಕ್ರಿಯೆ. ಮುಖಪಾಕವು ಮೇಲ್ನೋಟಕ್ಕೆ ಸಣ್ಣ ಸಮಸ್ಯೆಯಂತೆ ಕಂಡರೂ, ಅದು ದೇಹದ ಆಂತರಿಕ ಏರುಪೇರಿನ ಪ್ರತಿಬಿಂಬ. ಅದನ್ನು ಕೇವಲ ಹೊರಗೆ ಜೆಲ್ ಹಚ್ಚಿ ಶಮನಗೊಳಿಸುವುದು, ಮನೆಯ ಗೋಡೆಯಲ್ಲಿ ಕಾಣಿಸಿಕೊಂಡ ಬಿರುಕಿನ ಮೇಲೆ ಬಣ್ಣ ಹಚ್ಚಿದಂತೆಯೇ. ಬಿರುಕು ಮತ್ತೆ ಮೂಡುತ್ತದೆ, ಏಕೆಂದರೆ ಮೂಲಸಮಸ್ಯೆ ನಿವಾರಣೆಯಾಗಿಲ್ಲ
ನಮಗೆ ರೋಗ ಬಂದಾಗ ಹೆಚ್ಚಾಗಿ ಹೊರಗೆ ಕಾಣುವ ಲಕ್ಷಣಗಳು ಹೋದರೆ ಸಾಕಪ್ಪ ಎಂಬ ಮನೋಭಾವದ ಇರುತ್ತೇವೆ; ‘ರೋಗದ ಮೂಲ ನಾಶವಾಗಬೇಕು’ ಎಂಬ ಚಿಂತನೆ ವಿರಳ. ಇದು ಕೇವಲ ಮುಖಪಾಕದ ವಿಚಾರವಲ್ಲ; ನಮ್ಮ ಸಮಗ್ರ ಆರೋಗ್ಯದ ವಿಚಾರ. ತಾತ್ಕಾಲಿಕ ಆರಾಮದ ಹಿಂದೆ ಓಡುವ ಮನಸ್ಥಿತಿಯಿಂದ ಹೊರಬಂದು, ದೇಹದ ಒಳಗಿನ ಸಮತೋಲನವನ್ನು ಪುನಃಸ್ಥಾಪಿಸುವತ್ತ ಗಮನ ಹರಿಸುವುದು ಅಗತ್ಯ. ಆಯುರ್ವೇದವು ನಮಗೆ ನೀಡುವ ಮಹತ್ವದ ಸಂದೇಶವೇ ಇದು- ಸ್ವಾಸ್ಥ್ಯ ಒಳಗಿನಿಂದ ನಿರ್ಮಾಣ ವಾಗುತ್ತದೆ.
ಲಕ್ಷಣಗಳು ಕೇವಲ ಸೂಚನೆಗಳು; ಅವುಗಳನ್ನು ಬಲವಂತವಾಗಿ ಮೌನಗೊಳಿಸುವುದಲ್ಲ, ಬದಲಿಗೆ ಅವು ಹೇಳುವ ಸಂದೇಶವನ್ನು ಆಲಿಸುವುದು ಮುಖ್ಯ. ಆದ್ದರಿಂದ ತ್ವರಿತ ಪರಿಹಾರಗಳ ಹಿಂದೆ ಓಡುವುದನ್ನು ಬಿಟ್ಟು, ಶಾಶ್ವತ ಆರೋಗ್ಯದತ್ತ ಸಾಗುವ ಮನೋ ಭಾವವನ್ನು ಬೆಳೆಸಿಕೊಳ್ಳೋಣ. ಬಾಹ್ಯ ಶಮನಕ್ಕಿಂತ ಆಂತರಿಕ ಶುದ್ಧೀಕರಣ, ತಾತ್ಕಾಲಿಕ ಆರಾಮಕ್ಕಿಂತ ಶಾಶ್ವತ ಸಮತೋಲನ- ಇದುವೇ ನಿಜವಾದ ಆರೋಗ್ಯಪಥ.