ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sowmya Kanti Ghosh Column: ಆರ್ಥಿಕ ಸ್ಥಿತಿಗತಿಯ ಸುಧಾರಕ ಮುದ್ರಾ

ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಈಶಾನ್ಯ ಭಾರತ ದಂಥ ಹಿಂದುಳಿದ ಪ್ರದೇಶಗಳಿಗೆ ನಿಧಿಯ ವಿತರಣೆ ಪಾಲು ಹೆಚ್ಚಾಗಿದೆ. ಈ ಎಲ್ಲಾ ಸಂಶೋಧನೆಗಳು ಒಟ್ಟಾಗಿ, ‘ಮುದ್ರಾ’ ಸಾಲಗಳು ಆರ್ಥಿಕ ಒಳಗೊಳ್ಳುವಿಕೆಯನ್ನು ಸುಧಾರಿಸುವುದಲ್ಲದೆ ಆರ್ಥಿಕವಾಗಿ ದುರ್ಬಲ ರಾಜ್ಯಗಳನ್ನು ತಲುಪಲು ನೆರವಾಗುತ್ತಿವೆ ಎಂಬು ದನ್ನು ಸೂಚಿಸುತ್ತವೆ. ಈ ಅವಳಿ ಪುರಾವೆಗಳು, ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚು ಅಗತ್ಯ ವಿರುವ ಪ್ರದೇಶಗಳತ್ತ ಹರಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸಲು ಯೋಜನೆಯ ಕಾರ್ಯತಂತ್ರವನ್ನು ಒತ್ತಿಹೇಳುತ್ತವೆ

ಆರ್ಥಿಕ ಸ್ಥಿತಿಗತಿಯ ಸುಧಾರಕ ಮುದ್ರಾ

Profile Ashok Nayak Apr 21, 2025 7:26 AM

ಮಾರ್ಗದರ್ಶಿ

ಡಾ.ಸೌಮ್ಯ ಕಾಂತಿ ಘೋಷ್

ಪ್ರಧಾನಿ ನರೇಂದ್ರ ಮೋದಿಯವರು 2015ರ ಏಪ್ರಿಲ್ 8ರಂದು ಪ್ರಾರಂಭಿಸಿದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಗೆ (ಪಿಎಂಎಂವೈ) ಒಂದು ದಶಕ ಸಂದಿದೆ. ‘ಶಿಶು’, ‘ಕಿಶೋರ್’, ‘ತರುಣ್’ ಮತ್ತು 2024-25ರಲ್ಲಿ ಪರಿಚಯಿಸಲಾದ ‘ತರುಣ್ ಪ್ಲಸ್’ ಎಂಬ 4 ವರ್ಗಗಳಡಿ ‘ಪಿಎಂಎಂವೈ’ ಒಟ್ಟು 20 ಲಕ್ಷ ರುಪಾಯಿಗಳವರೆಗೆ ಮೇಲಾಧಾರರಹಿತ ಸಾಂಸ್ಥಿಕ ಸಾಲವನ್ನು ಖಾತರಿಪಡಿಸಿದೆ. ಈ ಹಿಂದೆ ಸಾಲಗಳನ್ನು ಪಡೆದುಕೊಂಡು ಮತ್ತು ಸಕಾಲಿಕ ಮರುಪಾವತಿ ಮೂಲಕ ತಮ್ಮ ಸಾಲ ಯೋಗ್ಯತೆ ಯನ್ನು ಸಾಬೀತುಪಡಿಸಿದ ‘ತರುಣ್’ ವರ್ಗಕ್ಕಾಗಿ ‘ತರುಣ್ ಪ್ಲಸ್’ ವರ್ಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕ್ರಾಂತಿಕಾರಿ ಯೋಜನೆಯ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಭಾರತ ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು ಅವುಗಳಲ್ಲಿ, ಸಾಲದ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಬೆಂಬಲ, ‘ಪಿಎಸ್‌ಬಿ’ ಮತ್ತು ‘ಜನಸಮರ್ಥ್’ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿಗಳ ಸಲ್ಲಿಕೆ ಹಾಗೂ ‘ಶಿಶು’ ಸಾಲಗಳ ಸಕಾಲಿಕ ಮರುಪಾವತಿಗೆ ಶೇ.2ರ ಬಡ್ಡಿ ರಿಯಾಯಿತಿಯಂಥ ಉಪಕ್ರಮಗಳು ಸೇರಿವೆ.

ಯೋಜನೆಯ ಪ್ರಾರಂಭದಿಂದಲೂ ಇದು ಭಾರಿ ಆಕರ್ಷಣೆಯನ್ನು ಪಡೆಯುತ್ತಿದ್ದು, ಈ ನಿಟ್ಟಿ ನಲ್ಲಿನ ಪ್ರಗತಿಯು ಸಾಕಷ್ಟು ಅದ್ಭುತ ವಾಗಿದೆ ಮತ್ತು ಇದರ ಪರಿಣಾಮವು ಬಹಳ ವ್ಯಾಪಕವಾಗಿದೆ. ಒಟ್ಟಾರೆಯಾಗಿ (2025ರ ಫೆಬ್ರವರಿವರೆಗೆ), 52 ಕೋಟಿಗೂ ಹೆಚ್ಚು ‘ಪಿಎಂಎಂವೈ’ ಖಾತೆಗಳನ್ನು ತೆರೆಯಲಾಗಿದ್ದು, ಒಟ್ಟು 32.4 ಲಕ್ಷ ಕೋಟಿ ರು.ಗಳ ಸಾಲ ವಿತರಣೆಯಾಗಿದೆ.

ಇದರಲ್ಲಿ ‘ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ’ಗಳಿಗೆ (ಎಂಎಸ್‌ಎಂಇ) ನೀಡಿದ ಸಾಲದ ಪಾಲು ಸುಮಾರು ಶೇ.20ರಷ್ಟಿದೆ. ಆದ್ಯತಾ ವಲಯದ ಪೈಕಿ 2024ರ ಹಣಕಾಸು ವರ್ಷ ದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳ (ಎಸ್‌ಸಿಬಿ) ಸರಿಹೊಂದಿಸಿದ ‘ನಿವ್ವಳ ಬ್ಯಾಂಕ್ ಸಾಲ’ದಲ್ಲಿ (ಎಎನ್‌ಬಿಸಿ), ‘ಎಂಎಸ್‌ಎಂಇ’ಗಳಿಗೆ ನೀಡಿದ ಸಾಲವು ಶೇ.19.3ರಷ್ಟಿದೆ. ಈ ಪ್ರಮಾಣವು 2014ರ ಹಣಕಾಸು ವರ್ಷದಲ್ಲಿ ಕೇವಲ ಶೇ.15.8ರಷ್ಟಿತ್ತು.

ಇದನ್ನೂ ಓದಿ: Srivathsa Joshi Column: ಈಸ್ಟರ್‌ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !

ಮೊದಲನೆಯದಾಗಿ, ಈ ಸಾಲ ಒದಗುವ ‘ಎಂಎಸ್‌ಎಂಇ‘ ಘಟಕಗಳನ್ನು ಆರ್ಥಿಕವಾಗಿ ಸ್ವತಂತ್ರ ಗೊಳಿಸುವುದಲ್ಲದೆ, ಅವುಗಳ ಗಾತ್ರವೂ ಬೆಳೆಯುತ್ತಿದೆ. ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಒಟ್ಟು ‘ಪಿಎಂಎಂವೈ’ ಖಾತೆಗಳಲ್ಲಿ ‘ಶಿಶು’ ವರ್ಗದ ಪಾಲು 2016ರ ಆರ್ಥಿಕ ವರ್ಷದಲ್ಲಿ ಶೇ.93ರಷ್ಟು ಇದ್ದುದು, 2025ರಲ್ಲಿ ಶೇ.51.7ಕ್ಕೆ ಇಳಿದಿದೆ.

ಆದರೆ ಇದೇ ವೇಳೆ, ‘ಕಿಶೋರ್’ ವರ್ಗದ ಪಾಲು 2016ರಲ್ಲಿದ್ದ ಶೇ.5.9ರ ಮಟ್ಟದಿಂದ 2025ರಲ್ಲಿನ ಶೇ.44.7ರ ಮಟ್ಟಕ್ಕೆ ಏರಿದೆ. ಅನೇಕ ‘ಶಿಶು’ ಖಾತೆಗಳು ಬೆಳವಣಿಗೆ ಕಂಡಿವೆ ಮತ್ತು ಹೆಚ್ಚಿನ ಸಾಲದ ಮಿತಿಯ ‘ಕಿಶೋರ್’ ಸಾಲಗಳನ್ನು ಪಡೆದುಕೊಂಡಿವೆ. ಆ ಮೂಲಕ ದೊಡ್ಡ ‘ಎಂಎಸ್‌ಎಂಇ’ ಘಟಕಗಳಾಗಿ ಮಾರ್ಪಟ್ಟಿವೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ವಿತರಿಸಲಾದ ಸಾಲದ ಸರಾಸರಿ ಗಾತ್ರವು ಸುಮಾರು 3 ಪಟ್ಟು ಹೆಚ್ಚಾಗಿದೆ; 2016ರಲ್ಲಿ 39000 ರು. ಗಳಷ್ಟಿದ್ದ ಈ ಪ್ರಮಾಣ ವು 2025ರಲ್ಲಿ 1.05 ಲಕ್ಷ ರು.ಗೆ ಏರಿಕೆಯಾಗಿದೆ.

Mudra R

ಎರಡನೆಯದಾಗಿ, ‘ಪಿಎಂಎಂವೈ’ನ ಮತ್ತೊಂದು ಸಾಧನೆಯೆಂದರೆ, ಮಹಿಳೆಯರು ಮತ್ತು ಸಾಮಾನ್ಯವಲ್ಲದ ಸಾಮಾಜಿಕ ವರ್ಗಗಳ (ಎಸ್‌ಸಿ/ಎಸ್‌ಟಿ/ಒಬಿಸಿ) ಸಬಲೀಕರಣ. 52 ಕೋಟಿ ‘ಪಿಎಂಎಂವೈ’ ಖಾತೆಗಳಲ್ಲಿ, ಶೇ.50ರಷ್ಟು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಾಮಾಜಿಕ ವರ್ಗಕ್ಕೆ ಸೇರಿವೆ. ಈ ವರ್ಗಗಳು, ವಿತರಿಸಿದ ಒಟ್ಟು ಸಾಲದ ಮೊತ್ತದಲ್ಲಿ ಶೇ.35ರಷ್ಟು ಪಾಲನ್ನು ಹೊಂದಿವೆ. ಮೂರನೆಯದಾಗಿ, ಮಹಿಳಾ ಉದ್ಯಮಿಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ‘ಪಿಎಂ ಎಂವೈ’ ಬದಲಾಯಿಸುತ್ತಿದೆ.

ಏಕೆಂದರೆ ಒಟ್ಟು ‘ಪಿಎಂಎಂವೈ’ ಖಾತೆಗಳಲ್ಲಿ ಶೇ.68ರಷ್ಟು ಭಾಗವು ಮಹಿಳಾ ಉದ್ಯಮಿಗಳಿಗೆ ಸೇರಿದೆ. ರಾಜ್ಯವಾರು ಪ್ರವೃತ್ತಿಯೂ ಉತ್ತೇಜನಕಾರಿಯಾಗಿದೆ. ರಾಜ್ಯಗಳ ಪೈಕಿ, ಬಿಹಾರದಲ್ಲಿ ಅತಿ ಹೆಚ್ಚು ‘ಪಿಎಂಎಂವೈ’ ಮಹಿಳಾ ಉದ್ಯಮಿಗಳು (3.7 ಕೋಟಿ) ಇದ್ದಾರೆ. ತಮಿಳುನಾಡು (4 ಕೋಟಿ) ಮತ್ತು ಪಶ್ಚಿಮ ಬಂಗಾಳ (3.7 ಕೋಟಿ) ನಂತರದ ಸ್ಥಾನದಲ್ಲಿವೆ. ಒಟ್ಟು ಖಾತೆಗಳಲ್ಲಿ ಮಹಾ ರಾಷ್ಟ್ರವು ಗಣನೀಯ ಮಹಿಳಾ ಖಾತೆದಾರರ ಪಾಲನ್ನು (ಶೇ.79) ಹೊಂದಿದ್ದರೆ, ಜಾರ್ಖಂಡ್ (ಶೇ.75) ಮತ್ತು ಪಶ್ಚಿಮ ಬಂಗಾಳ (ಶೇ.3) ನಂತರದ ಸ್ಥಾನಗಳಲ್ಲಿವೆ.

ನಾಲ್ಕನೆಯದಾಗಿ, 2020ರ ಜುಲೈ 1ರಂದು ‘ಉದ್ಯೋಗ್ ಪೋರ್ಟಲ್’ ಪ್ರಾರಂಭವಾದಾಗಿನಿಂದ ಅಲ್ಲಿ ನೋಂದಾಯಿಸಲಾದ ಒಟ್ಟು ‘ಎಂಎಸ್‌ಎಂಇ’ಗಳ ಸಂಖ್ಯೆಯಲ್ಲಿ ಮಹಿಳಾ ಮಾಲೀಕತ್ವದವು ಶೇ.20.5ರಷ್ಟಿವೆ. ಒಟ್ಟು ‘ಉದ್ಯೋಗ್’ ನೋಂದಾಯಿತ ಘಟಕಗಳಿಂದ ಸೃಷ್ಟಿಯಾದ ಉದ್ಯೋ ಗಾವಕಾಶಗಳಿಗೆ ಈ ಮಹಿಳಾ ಮಾಲೀಕತ್ವದ ‘ಎಂಎಸ್‌ಎಂಇ’ಗಳ ಕೊಡುಗೆ ಶೇ.18.7ರಷ್ಟಿದೆ.

ಮಹಿಳಾ ನೇತೃತ್ವದ ‘ಎಂಎಸ್‌ಎಂಇ’ಗಳ ಪೈಕಿ ತಮಿಳುನಾಡಿನಲ್ಲಿ ಅತಿಹೆಚ್ಚು (ಶೇ.15.7) ಉದ್ಯೋಗ ಸೃಷ್ಟಿಯಾಗಿದೆ. ಮಹಾರಾಷ್ಟ್ರ (ಶೇ.12.1), ಕರ್ನಾಟಕ ಮತ್ತು ಉತ್ತರ ಪ್ರದೇಶ (ಶೇ.8) ನಂತರದ ಸ್ಥಾನಗಳಲ್ಲಿವೆ. ಹೀಗಾಗಿ, ‘ಪಿಎಂಎಂವೈ’ನಂಥ ಆರ್ಥಿಕ ಒಳಗೊಳ್ಳುವಿಕೆ ಯೋಜನೆಗಳು ಮಹಿಳಾ ನೇತೃತ್ವದ ‘ಎಂಎಸ್‌ಎಂಇ’ಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಐದನೆಯದಾಗಿ, ಮಹಿಳೆಯರಿಗೆ ಹೆಚ್ಚಿನ ಸಾಲವನ್ನು ವಿತರಿಸಿದ ರಾಜ್ಯಗಳಲ್ಲಿ ಮಹಿಳಾ ನೇತೃತ್ವದ ‘ಎಂಎಸ್ ಎಂಇ’ಗಳ ಮೂಲಕ ಉದ್ಯೋಗ ಸೃಷ್ಟಿ ಗಮನಾರ್ಹವಾಗಿ ಹೆಚ್ಚಾಗಿರುವುದನ್ನು ನಮ್ಮ ಸಂಶೋಧನೆ ಸೂಚಿಸುತ್ತದೆ. ಇದು ಆರ್ಥಿಕ ಸಬಲೀಕರಣ ಮತ್ತು ಕಾರ್ಮಿಕ ಮಾರುಕಟ್ಟೆಯ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಉದ್ದೇಶಿತ ಹಣಕಾಸು ಒಳಗೊಳ್ಳುವಿಕೆ ನೀತಿಗಳ ಪರಿಣಾಮಕಾರಿತ್ವವನ್ನು ಬಲಪಡಿಸುತ್ತದೆ.

ಆರನೆಯದಾಗಿ, ನಿರ್ದಿಷ್ಟ ಉದ್ದೇಶದ ‘ಮುದ್ರಾ’ ಸಾಲ ವಿತರಣೆಗಳು ರಾಜ್ಯಗಳ ಹಣಕಾಸು ಸೇರ್ಪಡೆ ಸ್ಥಿತಿಗತಿಯ ಮೇಲೆ ವಿವಿಧ ಹಂತಗಳಲ್ಲಿ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ನಾವು ಅನ್ವೇಷಿಸಿ ದ್ದೇವೆ. ‘ಹಣಕಾಸು ಲಭ್ಯತೆ’ (ತೆರೆಯಲಾದ ಬ್ಯಾಂಕ್ ಖಾತೆಗಳ ಸಂಖ್ಯೆ ಮತ್ತು ‘ರುಪೇ ಕಾರ್ಡ್’ಗಳ ವಿತರಣೆಯ ಮೂಲಕ ಗಣನೆ ಮಾಡಲಾಗಿದೆ), ‘ಬಳಕೆ’ (ಫಲಾನುಭವಿ ಖಾತೆಗಳಲ್ಲಿನ ಬ್ಯಾಲೆನ್ಸ್ ಮೂಲಕ ಗಣನೆ ಮಾಡಲಾಗಿದೆ) ಹಾಗೂ ‘ಸಬಲೀಕರಣ’ವನ್ನು (ಮಹಿಳಾ ಮಾಲೀಕತ್ವದ ‘ಎಂಎಸ್ ಎಂಇ’ಗಳು) ಅಳೆಯುವ ಸೂಚ್ಯಂಕಗಳನ್ನು ಒಳಗೊಂಡಿರುವ ‘ಸಂಯೋಜಿತ ಹಣಕಾಸು ಸೇರ್ಪಡೆ ಸೂಚ್ಯಂಕ’ದ ಆಧಾರದ ಮೇಲೆ ವಿಶ್ಲೇಷಣೆ ಮಾಡಲಾಗಿದೆ.

ಅಲ್ಪಸಂಖ್ಯಾತರು ಮತ್ತು ಮಹಿಳಾ ಉದ್ಯಮಿಗಳಿಗೆ ಮೀಸಲಾದ ನಿಧಿಗಳಿಂದ ಕಡಿಮೆ ಆರ್ಥಿಕ ಒಳಗೊಳ್ಳುವಿಕೆ ಮಟ್ಟವನ್ನು ಹೊಂದಿರುವ ರಾಜ್ಯಗಳು ಹೆಚ್ಚಿನ ಪ್ರಯೋಜನ ಪಡೆಯುತ್ತವೆ ಎಂಬುದನ್ನು ಈ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಇದು ಕಡಿಮೆ ಸೇವೆಯ ಪ್ರದೇಶಗಳಲ್ಲಿ ಯೋಜ ನೆಯ ಸಕಾರಾತ್ಮಕ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

ಏಳನೆಯದಾಗಿ, ಕಳೆದ 10 ವರ್ಷಗಳಲ್ಲಿ, ರಾಜ್ಯಗಳಿಗೆ ಸಾಲನಿಧಿ ಹಂಚಿಕೆಯಲ್ಲಿ ಹೆಚ್ಚಳವಾಗಿರುವು ದನ್ನು ಪ್ರಾದೇಶಿಕ ವಿತರಣೆ ವಿಶ್ಲೇಷಣೆಯು ತೋರಿಸುತ್ತದೆ. ಮುಖ್ಯವಾಗಿ, ಈ ಹೆಚ್ಚಳವು ಕಾರ್ಯ ತಂತ್ರದ ಬದಲಾವಣೆಯನ್ನು ಸೂಚಿಸುತ್ತದೆ: ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ನಿಗದಿಪಡಿಸಿದ ನಿಧಿಯ ಪಾಲು ಇಳಿಕೆಯಾಗಿದೆ. ಆದರೆ ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಈಶಾನ್ಯ ಭಾರತ ದಂಥ ಹಿಂದುಳಿದ ಪ್ರದೇಶಗಳಿಗೆ ನಿಧಿಯ ವಿತರಣೆ ಪಾಲು ಹೆಚ್ಚಾಗಿದೆ. ಈ ಎಲ್ಲಾ ಸಂಶೋಧನೆಗಳು ಒಟ್ಟಾಗಿ, ‘ಮುದ್ರಾ’ ಸಾಲಗಳು ಆರ್ಥಿಕ ಒಳಗೊಳ್ಳುವಿಕೆಯನ್ನು ಸುಧಾರಿಸುವುದಲ್ಲದೆ ಆರ್ಥಿಕವಾಗಿ ದುರ್ಬಲ ರಾಜ್ಯಗಳನ್ನು ತಲುಪಲು ನೆರವಾಗುತ್ತಿವೆ ಎಂಬು ದನ್ನು ಸೂಚಿಸುತ್ತವೆ. ಈ ಅವಳಿ ಪುರಾವೆಗಳು, ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚು ಅಗತ್ಯ ವಿರುವ ಪ್ರದೇಶಗಳತ್ತ ಹರಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸಲು ಯೋಜನೆಯ ಕಾರ್ಯತಂತ್ರವನ್ನು ಒತ್ತಿಹೇಳುತ್ತವೆ.

ಅಲ್ಲದೆ, ‘ಅಕೌಂಟ್ ಅಗ್ರಿಗೇಟರ್ ನೀತಿಯ ಬಳಕೆ’ ಮುಂತಾದ ‘ಎನ್‌ಬಿಎಫ್‌ ಸಿ’ಗಳ ‘ಡಿಜಿಟಲ್ ಮೊದಲು’ ಕಾರ್ಯವಿಧಾನವು, ‘ಎಂಎಸ್‌ಎಂಇ’ಗಳಿಗೆ ಸಾಲದ ಹರಿವಿಗೆ ಮತ್ತಷ್ಟು ಸಹಾಯ ಮಾಡುತ್ತದೆ. ‘ಆರ್‌ಬಿಐ’ನ ‘ಉದ್ದೇಶಿತ ಏಕೀಕೃತ ಸಾಲ ವ್ಯವಸ್ಥೆ’ (ಯುಎಲ್‌ಐ) ಉಪಕ್ರಮದಿಂದ ಇದು ಉತ್ತೇಜನ ಪಡೆಯುವ ನಿರೀಕ್ಷೆಯಿದೆ. ‘ಯುಎಲ್‌ಐ’ನ ಪ್ರಾಯೋಗಿಕ ಜಾರಿ ವೇಳೆ, ‘ಎಂಎಸ್‌ ಎಂಇ’ ಗಳಿಗೆ ವಿತರಿಸಲಾದ ಸಾಲಗಳ ಸರಾಸರಿ ಗಾತ್ರವು 9 ಲಕ್ಷ ರು.ಗಳಾಗಿದೆ. ಆದ್ದರಿಂದ ಇದು ವೆಚ್ಚ-ಪರಿಣಾಮಕಾರಿ ರೀತಿಯಲ್ಲಿ ಪ್ರಕ್ರಿಯೆಯ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

(ಲೇಖಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಮುಖ್ಯ ಆರ್ಥಿಕ ಸಲಹೆಗಾರರು)