Roopa Gururaj Column: ಮುಕುಂದೂರು ಸ್ವಾಮಿಗಳ ಮಡಿಯ ವ್ಯಾಖ್ಯಾನ
ಒಮ್ಮೆ ಒಬ್ಬ ಶಿಷ್ಯರು ಮತ್ತೊಬ್ಬ ಮಡಿವಂತರ ಬಗ್ಗೆ ಹೇಳುತ್ತ, ಅವರದ್ದು ಬಾಳಾ ಮಡಿ, ದಿನಕ್ಕೆ ಐದು ಬಾರಿ ಸ್ನಾನ ಮಾಡುತ್ತಾರಂತೆ, ಎಂದರಂತೆ. ಅದಕ್ಕೆ ಸ್ವಾಮಿಗಳು, ಅದ್ಯಾಕೆ ಅವ್ರು ಅಷ್ಟು ಸಲ ಮೈಲಿಗೆ ಆಗ್ತಾರಂತೆ? ಎಂದು ಕೇಳಿ, ಬಾಹ್ಯ ಮಡಿವಂತಿಕೆಗಿಂತ, ಅಂತರಂಗ ಶುದ್ಧತೆ ಮಹತ್ವದ್ದು ಎಂದು ಹೇಳಿದರು. ಇಂತಹ ನೂರಾರು ಘಟನೆಗಳನ್ನು ಜನಕ್ಕೆ ತಿಳಿಸುತ್ತಲೇ ಇದ್ದರು.


ಒಂದೊಳ್ಳೆ ಮಾತು
rgururaj628@gmail.com
ಸಿದ್ಧಿಯನ್ನು ಪಡೆದೂ, ಪ್ರಸಿದ್ಧಿಗೆ ಮನಗೊಡದ, ಸಹಸ್ರಾರು ಸಾಧಕರ ಬೀಡು ನಮ್ಮ ಭಾರತ ದೇಶ. ಹಾಗೆ ಸಿದ್ಧಿಯನ್ನು ಪಡೆದ ಸಿದ್ಧರ ಸಾಲಿನಲ್ಲಿ ಮುಕುಂದೂರು ಸ್ವಾಮಿಗಳು ಪ್ರಮುಖರು. ಕಡೂರು ತಾಲೂಕಿನ ದೇವನೂರು ಗ್ರಾಮದ ಹತ್ತಿರದಲ್ಲಿ, ಮುಕುಂದೂರು ಆಶ್ರಮದಲ್ಲಿದ್ದು, ಬದುಕಿದ್ದಾಗಲೇ ದಂತಕಥೆಯಾದವರು ಈ ಸ್ವಾಮಿಗಳು. ಅವರಿಗೆಷ್ಟು ವಯಸ್ಸು ಎಂಬುದು ಯಾರಿಗೂ ತಿಳಿದಿರ ಲಿಲ್ಲ. ನಿಮಗೆ ವಯಸ್ಸೆಷ್ಟು ಎಂದು ಯಾರಾದರೂ ಕೇಳಿದರೆ, ಬೆಟ್ಟ ಗುಡ್ಡಗಳಿಗೆ, ವಯಸ್ಸೆಷ್ಟು : ಕೇಳಿಕೊಂಡು ಬಾ ಎಂದು ನಗುತ್ತಿದ್ದ ರಂತೆ. ಅವರ ಪವಾಡಗಳ ಬಗ್ಗೆ, ಬೇಕಾದಷ್ಟು ಕಥೆಗಳ ಸಾಲು ಸಾಲೇ ಇದೆ. ಇಲ್ಲಿ ಅವೆಲ್ಲಾ ಮುಖ್ಯವಲ್ಲ, ಆದರೆ ಅವರು ತಮ್ಮ ಗ್ರಾಮ್ಯ ಭಾಷೆಯಲ್ಲಿ ತೋರುತ್ತಿದ್ದ ಸಾಮಾಜಿಕ ಚಿಂತನೆ ಅನನ್ಯವಾದದ್ದು.
ಒಮ್ಮೆ ಒಬ್ಬ ಶಿಷ್ಯರು ಮತ್ತೊಬ್ಬ ಮಡಿವಂತರ ಬಗ್ಗೆ ಹೇಳುತ್ತ, ಅವರದ್ದು ಬಾಳಾ ಮಡಿ, ದಿನಕ್ಕೆ ಐದು ಬಾರಿ ಸ್ನಾನ ಮಾಡುತ್ತಾರಂತೆ, ಎಂದರಂತೆ. ಅದಕ್ಕೆ ಸ್ವಾಮಿಗಳು, ಅದ್ಯಾಕೆ ಅವ್ರು ಅಷ್ಟು ಸಲ ಮೈಲಿಗೆ ಆಗ್ತಾರಂತೆ? ಎಂದು ಕೇಳಿ, ಬಾಹ್ಯ ಮಡಿವಂತಿಕೆಗಿಂತ, ಅಂತರಂಗ ಶುದ್ಧತೆ ಮಹತ್ವದ್ದು ಎಂದು ಹೇಳಿದರು. ಇಂತಹ ನೂರಾರು ಘಟನೆಗಳನ್ನು ಜನಕ್ಕೆ ತಿಳಿಸುತ್ತಲೇ ಇದ್ದರು.
ಇದನ್ನೂ ಓದಿ: Roopa Gururaj Column: ಆರೋಗ್ಯವಿಲ್ಲದ ದೀರ್ಘಾಯಸ್ಸು ಶಾಪದಂತೆ
ಒಂದು ಸಲ ಕೆಳವರ್ಗದ ಹುಡುಗನೊಬ್ಬ, ಶಿವ ದೇವಾಲಯದೊಳಗೆ ಹೋಗಿ ಬಂದನೆಂಬ ಸುದ್ದಿ ಹರಡಿತು. ಆಗ ಊರಿನ ಮೇಲ್ವರ್ಗದ ಜನರು ಸೇರಿ ಹುಡುಗನನ್ನು ಪತ್ತೆ ಹಚ್ಚಿ ,ಅವನಿಗೆ ದಂಡ ವಿಽಸಿ, ಕತ್ತೆಯ ಮೇಲೆ ಕೂರಿಸಿ, ಊರಿನೊಳಗೆಲ್ಲಾ, ಮೆರವಣಿಗೆ ಮಾಡಿಸಿದರು. ನಂತರ ದೇವಸ್ಥಾನ ಅಶುದ್ಧವಾಗಿ, ದೇವರಿಗೆ ಮೈಲಿಗೆಯಾಯಿತೆಂದು, ಶಿವನಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಲಕ್ಷ ಶಿವ ಮಂತ್ರ, ಜಪ, ಅಖಂಡ ಭಜನೆ,ಅನ್ನ ಸಂತರ್ಪಣೆ ಮಾಡಿಸಿ, ದೇವರನ್ನು ಶುದ್ಧಗೊಳಿಸಿದರಂತೆ.
ಅಷ್ಟೇ ಅಲ್ಲದೇ ಊರಿನ ಸುತ್ತ ಬಲಿ ಹಾಕಿಸಿ, ಗ್ರಾಮ ಶಾಂತಿ ಮಾಡಿಸಿದರಂತೆ. ಇದನ್ನು ಊರಿನವ ರೊಬ್ಬರು ಬಂದು, ಸ್ವಾಮಿಗಳಿಗೆ, ವಿಸ್ತಾರವಾಗಿ ತಿಳಿಸಿದರು. ಇದರ ಕುರಿತು ಆ ಊರಿನವರೊಬ್ಬರ ಬಳಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸ್ವಾಮಿಗಳು ಮುಂದುವರಿಸಿ, ನಗುತ್ತಾ, ನೋಡಪ್ಪಾ, ಒಬ್ಬ ಕೆಳವರ್ಗದ ಹುಡುಗ, ದೇವರು ಗುಡಿಯೊಳಗೆ ಹೋದ್ರೆ, ಆ ದೇವರಿಗೆ ಮೈಲಿಗೆ ಆಗಿ ಸೂತಕ ಬಂತು ಅಂದ್ಮೇಲೆ, ಆ ನಮ್ಮ ವಿಳಾಸ ಹಿಂದುಳಿದ ಹುಡುಗನ ಶಕ್ತಿ, ಎಂಥಾದ್ದಿರಬೇಕು ನೋಡು! ದೇವರ ಶಕ್ತಿಗಿಂತ ಅವನ ಶಕ್ತಿಯೇ ದೊಡ್ಡದು!
ದೇವರ ಶಕ್ತಿಯಿಂದ ಆ, ಹುಡುಗ ಶುದ್ಧವಾಗಬೇಕಪ್ಪ, ಅದು ಬಿಟ್ಟು, ಹುಡುಗನ ಶಕ್ತಿನೇ ದೊಡ್ಡ ದಾಗಿ, ದೇವರೇ ಮೈಲಿಗೆಯಾದ ಅಂದ್ರೆ, ಅವನೆಂಥ ದೇವರಪ್ಪಾ? ಇದು ಸೋಜಿಗ ಅಲ್ಲವೇ, ಇದಕ್ಕೇನಂತಿ? ಎಂದು ಮತ್ತೆ ನಕ್ಕರು.
ವಿಷಯ ತಿಳಿಸಿದ ಮನುಷ್ಯ ಕಕ್ಕಾಬಿಕ್ಕಿಯಾಗಿ ಹೋದ. ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತೆ ’ಗ್ರಂಥದ ಆಧಾರದಿಂದ ಸಿಕ್ಕ ಈ ಘಟನೆ ಸದಾ ಪ್ರಸ್ತುತವೇ. ಜಾತಿಯ ಹೆಸರಿನಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುತ್ತಾ, ಅಪ್ರಸ್ತುತವಾದ ಮಡಿ ಮೈಲಿಗೆಗಳನ್ನು ಆಚರಿಸಿ ಮನಸ್ಸನ್ನು ರಾಡಿ ಮಾಡಿ ಕೊಳ್ಳುವುದಕ್ಕಿಂತ, ನೈರ್ಮಲ್ಯಕ್ಕೆ ಒತ್ತು ನೀಡಿ, ಆರೋಗ್ಯದ ಮನಸ್ಸು ದೇಹವನ್ನು ಪೋಷಿಸುವುದು ಮನುಷ್ಯ ಗುಣವಾಗಬೇಕು ಅಲ್ಲವೇ?