Vishweshwar Bhat Column: ಸಾಯಂಕಾಲ ಐದು ಗಂಟೆ ಸಂಗೀತ
ಜಪಾನ್ ಒಂದು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ದೇಶ ಎಂಬುದು ಗೊತ್ತಿರುವ ಸಂಗತಿ. ಜಪಾ ನಿನ ಪ್ರಮುಖ ನಗರಗಳಲ್ಲಿ ಶಾಲೆ, ಉದ್ಯಾನ, ಆಫೀಸುಗಳು ಇರುವ ತಾಣಗಳಲ್ಲಿ ಸುತ್ತಲೂ ಕೇಳಿಸು ವಂಥ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಸಾಯಂಕಾಲ ಐದು ಗಂಟೆಗೆ ಆ ಧ್ವನಿವರ್ಧಕ ಗಳಿಂದ ಸಂಗೀತ ಹೊರ ಹೊಮ್ಮುತ್ತದೆ. ಇದನ್ನು Five o' Clock Music’ ಎಂದು ಕರೆಯುತ್ತಾರೆ.


ಸಂಪಾದಕರ ಸದ್ಯಶೋಧನೆ
ಜಪಾನ್ ಒಂದು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ದೇಶ ಎಂಬುದು ಗೊತ್ತಿರುವ ಸಂಗತಿ. ಜಪಾನಿನ ಪ್ರಮುಖ ನಗರಗಳಲ್ಲಿ ಶಾಲೆ, ಉದ್ಯಾನ, ಆಫೀಸುಗಳು ಇರುವ ತಾಣಗಳಲ್ಲಿ ಸುತ್ತಲೂ ಕೇಳಿಸುವಂಥ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಸಾಯಂಕಾಲ ಐದು ಗಂಟೆಗೆ ಆ ಧ್ವನಿವರ್ಧಕಗಳಿಂದ ಸಂಗೀತ ಹೊರ ಹೊಮ್ಮುತ್ತದೆ. ಇದನ್ನು Five o' Clock Music’ ಎಂದು ಕರೆಯುತ್ತಾರೆ. ಕೆಲವು ಪ್ರದೇಶಗಳಲ್ಲಿ ಇದನ್ನು Yuukan Chime ಅಥವಾ Evening bell ಎಂದೂ ಕರೆಯುತ್ತಾರೆ. ಇದು ಕೇಳಲು ಸೌಮ್ಯವಾಗಿರುವ ಸಂಗೀತ ಧ್ವನಿಯಾಗಿದ್ದು, ದಿನದ ಅಂತ್ಯವನ್ನು ಸೂಚಿಸುತ್ತದೆ.
ಇದು ಬಹುಪಾಲು ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಪೀಕರ್‌ಗಳ ಮೂಲಕ ಪ್ರಸಾರವಾಗುತ್ತದೆ. ಈ ಸಂಪ್ರದಾಯಕ್ಕೆ ಒಂದು ಉದ್ದೇಶವಿದೆ. ಇದು ಆರಂಭವಾಗಿದ್ದು ಒಂದು ಸರಳ ಉದ್ದೇಶಕ್ಕಾಗಿ- ಅದೆಂದರೆ ಮಕ್ಕಳ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳುವುದು.
ಇದನ್ನೂ ಓದಿ: Vishweshwar Bhat Column: ಮನೆಯಲ್ಲಿ ಪತಿಯೇ ಪರಾಧೀನ
ಎರಡನೇ ಮಹಾಯುದ್ಧದ ನಂತರ, ಜನಸಂಖ್ಯೆ ಹೆಚ್ಚಾಗುತ್ತಿರುವಾಗ, ಮಕ್ಕಳಿಗೆ ಸಂಜೆಯ ಹೊತ್ತಿ ನಲ್ಲಿ ಮನೆಗೆ ಹಿಂತಿರುಗುವ ಸಮಯವನ್ನು ತಿಳಿಸುವ ಮಾರ್ಗವಾಗಿ ಈ ಸಂಗೀತವನ್ನು ಬಳಸ ಲಾಯಿತು. ಪೋಷಕರಿಗೂ ಮಕ್ಕಳಿಗೂ ಸಂಜೆ ಮನೆಗೆ ಮರಳಲು ಎಚ್ಚರಿಕೆಯ ಗಂಟೆಯಂತೆ ಈ ಸಂಗೀತವನ್ನು ಬಳಸಲಾಗುತ್ತಿತ್ತು. ಇದು ಇನ್ನೊಂದು ಅರ್ಥದಲ್ಲಿ Curfew Chime ಕೂಡ ಹೌದು.
ಜಪಾನಿನ ವಿವಿಧ ನಗರಗಳು ತಮ್ಮ ತಮ್ಮ ಪಾಲಿಗೆ ದಿನದ ಕೆಲವು ಸಮಯಗಳಲ್ಲಿ ಹಾಡುಗಳನ್ನು ಅಥವಾ ಸುಮಧುರ ಸಂಗೀತವನ್ನು ಹೊರಡಿಸುತ್ತವೆ. ಸಾಮಾನ್ಯವಾಗಿ ಈ ಹಾಡುಗಳು ಅಗ್ನಿ ಶಾಮಕ ಇಲಾಖೆ ಅಥವಾ ನಗರಾಡಳಿತ ಇಲಾಖೆಯಿಂದ ಪ್ರಸಾರವಾಗುತ್ತವೆ. ಈ ಹಾಡು ಗಳನ್ನು ಬಹುಪಾಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ (ಧ್ವನಿವರ್ಧಕ) ಮೂಲಕ ಪ್ರಸಾರ ಮಾಡಲಾಗುತ್ತದೆ.
ಈ ಸಂಗೀತದ ಸ್ವರೂಪ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಕೆಲವೆಡೆ ಪೌರಾಣಿಕ ಜಪಾನಿ ಹಾಡು ಗಳನ್ನು ಬಳಸುತ್ತಾರೆ, ಇನ್ನೊಂದೆಡೆ ಪಾಶ್ಚಾತ್ಯ ಸುಮಧುರ ಸಂಗೀತವನ್ನು ಕೇಳಬಹುದು. ಹೆಚ್ಚಿನ ಕಡೆಗಳಲ್ಲಿ ಜನಪ್ರಿಯ ಜಪಾನಿ ಮಕ್ಕಳ ಹಾಡಾದ ‘ಯುಯಕೆ ಕೊಯಕೆ’ ಹಾಡನ್ನು ಪ್ರಸಾರ ಮಾಡಲಾಗುತ್ತದೆ.
ಹವಾಮಾನ, ಋತುಚಕ್ರ ಅಥವಾ ದೇಶೀಯ ಘಟನೆಗಳಿಗೆ ಅನುಗುಣವಾಗಿ ಈ ಹಾಡುಗಳನ್ನು ದಿನದ ಪ್ರಕಾರ ಬದಲಿಸುವ ಸಂಪ್ರದಾಯವಿದೆ. ಕೆಲವು ಸಂದರ್ಭಗಳಲ್ಲಿ ಈ ಧ್ವನಿವರ್ಧಕಗಳನ್ನು ವಿಪತ್ತು ಎಚ್ಚರಿಕೆ ವ್ಯವಸ್ಥೆಗಳ ಭಾಗವಾಗಿಯೂ ಬಳಸುವುದುಂಟು. ಪರಿಣಾಮವಾಗಿ, ದಿನನಿತ್ಯದ ಸಂಗೀತದ ಜತೆಗೆ ಭೂಕಂಪ, ಸುನಾಮಿ ಅಥವಾ ಇತರ ತುರ್ತು ಸಂದರ್ಭಗಳಲ್ಲಿನ ಘೋಷಣೆ ಗಳಿಗಾಗಿ ಕೂಡಾ ಬಳಸಲಾಗುತ್ತವೆ. ಇದು ತುರ್ತು ನಿರ್ವಹಣಾ ವ್ಯವಸ್ಥೆ(Disaster Prevention System) ಜತೆ ಸಹ ಸಂಯೋಜಿತವಾಗಿದೆ. ಆ ಧ್ವನಿವರ್ಧಕದಿಂದ ಹಾಡು ಮೊಳಗುತ್ತಿದ್ದಂತೆ, ಸಾರ್ವಜನಿಕರು ದಿನದ ಸಂಜೆಯ ಆರಂಭ ಎಂದು ಭಾವಿಸುತ್ತಾರೆ.
ಮನೆಗಳಿಗೆ ಹಿಂತಿರುಗುತ್ತಿರುವ ಮಕ್ಕಳು, ಕೆಲಸ ಮುಗಿಸಿದ ಕಾರ್ಮಿಕರು ಈ ಧ್ವನಿಯೊಂದಿಗೆ ದಿನದ ಒಂದು ಹಂತ ಮುಕ್ತಾಯವಾಯಿತು ಎಂಬ ಭಾವನೆ ಹೊಂದುತ್ತಾರೆ. ಈ ವ್ಯವಸ್ಥೆ ಮನಸ್ಸಿಗೆ ನೆಮ್ಮದಿಯ ಅನುಭವ ನೀಡುವಂಥದ್ದು. ಕೆಲವರು ಹಳೆಯ ನೆನಪಿನ ಭಾಗವಾಗಿ ಇದನ್ನು ಕೇಳು ತ್ತಾರೆ- ನಾನು ಬಾಲ್ಯದಲ್ಲಿ ಈ ಹಾಡು ಕೇಳಿದಾಗ ಮನೆಗೆ ಓಡುತ್ತಿದ್ದೆ ಎಂಬ ನೆನಪುಗಳು ಸಹಜವಾಗಿ ಮರುಕಳಿಸುವುದುಂಟು.
ಈ ರೀತಿ ಧ್ವನಿವರ್ಧಕಗಳನ್ನು ಸಾರ್ವಜನಿಕವಾಗಿ ಪ್ರತಿದಿನ ಬಳಸುವುದು ಶಬ್ದಮಾಲಿನ್ಯಕ್ಕೆ ಕಾರಣ ವಾಗಿದೆ ಎಂದು ವಾದಿಸುವವರೂ ಇದ್ದಾರೆ. ಕೆಲವರಿಗೆ ಇದು ಕಿರಿಕಿರಿ ಎಂದೂ ಅನಿಸುತ್ತಿದೆ. ಇಂದಿನ ಕಾಲದಲ್ಲಿ ಮೊಬೈಲ್, ಗಡಿಯಾರ, ಡಿಜಿಟಲ್ ಉಪಕರಣಗಳಿರುವುದರಿಂದ ಇದರ ಅವಶ್ಯಕತೆ ಇಲ್ಲವೆಂದು ಹೇಳುವವರೂ ಇದ್ದಾರೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗ, ಅದನ್ನು ತೆಗೆಯ ಕೂಡದು ಎಂದು ಹೇಳುವವರೂ ಇದ್ದಾರೆ. ಇವೆಲ್ಲವುಗಳ ನಡುವೆಯೂ ಅದು ತನ್ನ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿಕೊಂಡಿರುವುದು ಗಮನಾರ್ಹ.