Rangaswamy Mookanahalli Column: ದೃಷ್ಟಿಕೋನ ಬದಲಾಗದೇ ಬದುಕು ಹೇಗೆ ಬದಲಾದೀತು ?
ಸಾಲ ಮಾಡಲೇ ಬಾರದು ಎಂದಲ್ಲ. ಅವಶ್ಯಕತೆ ಇಲ್ಲದ ಸಾಲ ಮಾಡಬಾರದು. ನೀವು ಭಾರತದಲ್ಲಿ ಇರುವುದಾದರೆ ಸಾಲ ಮಾಡಿ ಮನೆಯನ್ನು ಕೊಳ್ಳಬಾರದು ಎನ್ನುವುದು ಲೆಕ್ಕಾಚಾರ ಮಾಡಿ ಲಾಭಕ್ಕಿಂತ ಹೆಚ್ಚು ನಷ್ಟ ಎನ್ನುವುದನ್ನು ಪರಿಗಣಿಸಿ ನೀಡುವ ಸಲಹೆ. ಮನೆ ಎನ್ನುವುದು ಭದ್ರತೆಯ ಭಾವವನ್ನು ನೀಡುತ್ತದೆ, ಹೀಗಾಗಿ ನಾನು ಮನೆಕೊಳ್ಳಬೇಕು ಎನ್ನುವವರ ಒಂದು ದೊಡ್ಡ ವರ್ಗವಿದೆ.

-

ವಿಶ್ವರಂಗ
ಯಾವುದೇ ಒಂದು ವಸ್ತು ಅಥವಾ ವಿಷಯಕ್ಕೆ ಒಂದಕ್ಕಿಂತ ಹೆಚ್ಚಿನ ಆಯಾಮಗಳಿರುತ್ತವೆ ಎನ್ನುವುದು ನನಗೆ ಬದುಕು ಕಲಿಸಿದ ಅನುಭವ ಪಾಠ. ಹೀಗಾಗಿ ನಾನು ಹೇಳಿದ್ದು ಸರಿ ಅಥವಾ ನಾನು ಹೇಳಿದ್ದೇ ಸರಿ ಎನ್ನುವ ಹುಂಬುತನವಂತೂ ಇಲ್ಲ. ನನ್ನ ಬಳಿ ಹಣಕಾಸು ಸಲಹೆ ಕೇಳಿ ಬರುವವರಿಗೆ ಮೊದಲು ಹೇಳುವುದು ’ಸಾಲವಿಲ್ಲದವನೆ ಸರದಾರ’ ಎನ್ನುವ ಮಾತುಗಳು. ಇವತ್ತಿನ ಕಾಲಘಟ್ಟ ಹೇಗಿದೆ ಎಂದರೆ ಸಾಲ ಮಾಡದವನು ಪರಮಪಾಪಿ ಎನ್ನುವಂತಾಗಿದೆ.
ಸಾಲ ಮಾಡಲೇ ಬಾರದು ಎಂದಲ್ಲ. ಅವಶ್ಯಕತೆ ಇಲ್ಲದ ಸಾಲ ಮಾಡಬಾರದು. ನೀವು ಭಾರತದಲ್ಲಿ ಇರುವುದಾದರೆ ಸಾಲ ಮಾಡಿ ಮನೆಯನ್ನು ಕೊಳ್ಳಬಾರದು ಎನ್ನುವುದು ಲೆಕ್ಕಾಚಾರ ಮಾಡಿ ಲಾಭಕ್ಕಿಂತ ಹೆಚ್ಚು ನಷ್ಟ ಎನ್ನುವುದನ್ನು ಪರಿಗಣಿಸಿ ನೀಡುವ ಸಲಹೆ. ಮನೆ ಎನ್ನುವುದು ಭದ್ರತೆಯ ಭಾವವನ್ನು ನೀಡುತ್ತದೆ, ಹೀಗಾಗಿ ನಾನು ಮನೆಕೊಳ್ಳಬೇಕು ಎನ್ನುವವರ ಒಂದು ದೊಡ್ಡ ವರ್ಗವಿದೆ.
FOMO ಅಂದರೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ನಿಂದ ಬಳಲುತ್ತಾ ಆಸ್ತಿಯ ಮೇಲೆ ಸಾಲ ಮಾಡಿ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಬಹಳಷ್ಟಿದೆ. ಬೇರೆ ಎಲ್ಲರೂ ಹೀಗೆ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುತ್ತಾರೆ, ನಾನೊಬ್ಬ ಹಿಂದುಳಿದು ಬಿಟ್ಟರೆ ಎನ್ನುವ ಭಯಕ್ಕೆ FOMO ಎಂದು ಹೆಸರಿಸಲಾಗಿದೆ.
ಭಾರತದಲ್ಲಿ ಈ ರೀತಿ ಸಾಲ ಮಾಡಿ ಮನೆಯ ಮೇಲೆ ಹೂಡಿಕೆ ಮಾಡುವುದು ಮೂರ್ಖತನ ಎನ್ನಿಸಿಕೊಳ್ಳುತ್ತದೆ. ವಾಸಕ್ಕೆ ಮಾತ್ರವಲ್ಲದೆ ಅದರಿಂದ ಬಾಡಿಗೆ ಬರುತ್ತದೆ ಎನ್ನುವ ಕಾರಣಕ್ಕೆ ಹೂಡಿಕೆ ಮಾಡುವುದು ಇನ್ನೂ ದಡ್ಡತನ. ಭಾರತದಲ್ಲಿ ಬರುವ ಬಾಡಿಗೆ ಮತ್ತು ಹೂಡಿಕೆಯ ನಡುವಿನ ಅಂತರ ಬಹಳ ದೊಡ್ಡದು. ಖಾಲಿ ನಿವೇಶನದ ಕಥೆ ಬೇರೆ. ಇನ್ನು ಅಮೆರಿಕಾ ಅಥವಾ ಯೂರೋಪಿನಲ್ಲಿ ಇದ್ದ ಮಾತ್ರಕ್ಕೆ ಸಾಲ ಮಾಡಿ ಮನೆ ಕೊಳ್ಳುವುದು ಕೂಡ ಉತ್ತಮ ನಿರ್ಧಾರ ವಲ್ಲ. ದಶಕದ ಹಿಂದಿನ ಮಾತು ಬೇರೆ.
ಇದನ್ನೂ ಓದಿ: Rangaswamy Mookanahally Column: ಟ್ರಂಪಾಘಾತಕ್ಕೆ ಕರಗಿದ ಅಮೆರಿಕನ್ ಡ್ರೀಮ್ !
ಇವತ್ತಿನ ದಿನದಲ್ಲಿ ಜಗತ್ತಿನಲ್ಲಿ ಅಸ್ಥಿರತೆ ಬಹಳ ಹೆಚ್ಚಾಗಿದೆ. ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ, ಏನು ಬೇಕಾದರೂ ಆಗಬಹುದು ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಅಲ್ಲದೆ ಅಮೆರಿಕಾದಂತಹ ದೇಶದಲ್ಲಿ ವರ್ಷಕ್ಕೊಮ್ಮೆ ಅಥವಾ ಅರ್ಧ ವರ್ಷಕ್ಕೊಮ್ಮೆ ಹಾಕುವ ಪ್ರಾಪರ್ಟಿ ಟ್ಯಾಕ್ಸ್ ಲೆಕ್ಕಾಚಾರ ಕೇಳಿದರೆ ಮನೆ ಕೊಳ್ಳುವುದೇ ಬೇಡ ಎನ್ನಿಸುತ್ತದೆ.
ಹೀಗೆ ಕೊಂಡ ಮನೆಯ ಬೆಲೆ ಕೂಡ ಎಡೆ ಏರಿಕೆ ಕೂಡ ಕಾಣುವುದಿಲ್ಲ ಎನ್ನುವುದನ್ನು ಕೂಡ ಗಮನಿಸಬೇಕು. ಜಾಗತಿಕ ತಲ್ಲಣಗಳು ಹೆಚ್ಚಾಗಿರುವ ಸಮಯದಲ್ಲಿ ಯಾವ ಕ್ಷಣದಲ್ಲೂ ಕೂಡ ಕೆಲಸ ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಸಾಲ ಮತ್ತು ಕಂತು ಎನ್ನುವುದು ನೇಣಿನ ಕುಣಿಕೆ ಇದ್ದಂತೆ. ನೀವೆಷ್ಟೇ ಬುದ್ದಿ ಹೇಳಿ ಮನೆ ಕೊಳ್ಳುವವರ ಸಂಖ್ಯೆಯಲ್ಲಿ ಕುಸಿತವೇನೂ ಆಗುವುದಿಲ್ಲ.
ಸಾಲ ಮಾಡುವವರ ಸಂಖ್ಯೆ ಹೆಚ್ಚುತ್ತಲೆ ಇರುತ್ತದೆ. ಸಾಲ ಮಾಡಬೇಡಿ ಎನ್ನುವ ಮಾತುಗಳನ್ನು ಕೇಳಿದ ತಕ್ಷಣ ಬಹುತೇಕರು ಪ್ರಶ್ನಿಸುವುದು ’ಸಾಲವಿಲ್ಲದ ಮೇಲೆ ಅಭಿವೃದ್ಧಿ ಹೇಗೆ ಸಾಧ್ಯ ?’ . ಸಾಲ ಎಂದರೇನು ಗೊತ್ತೇ ? ಮುಂದಿನ ಹತ್ತಾರು ವರ್ಷದಲ್ಲಿ ನಾವು ಗಳಿಸಬಹುದಾದ ಸಂಭಾವ್ಯ ಹಣವನ್ನು ಮುಂಗಡವಾಗಿ ಪಡೆಯುವುದು !
ನೀವು ಕೆಲಸ ಬಿಡಬಹುದು, ಸಿಗರೇಟು ಬಿಡಬಹುದು, ಮದ್ಯಪಾನವನ್ನು ಸಹ ಬಿಡಬಹುದು, ಆದರೆ ಸಾಲವನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ. ಒಂದು ಕೋಟಿ ರೂಪಾಯಿ ಸಾಲ ಮಾಡಿದರೆ ಮತ್ತು ಅದನ್ನು 15 ವರ್ಷದ ಕಂತಿನಲ್ಲಿ ಕಟ್ಟುವ ತೀರ್ಮಾನ ಮಾಡಿದ್ದರೆ ಮತ್ತು ಬಡ್ಡಿಯ ದರ ಎಂಟೂವರೆ ಪ್ರತಿಶತ ಎಂದುಕೊಂಡರೆ, ಹದಿನೈದು ವರ್ಷದಲ್ಲಿ ಅಸಲು ಕೋಟಿಯ ಜೊತೆಗೆ ನೀವು ಕಟ್ಟಿದ ಬಡ್ಡಿಯ ಮೊತ್ತ ಎಂಭತ್ತು ಲಕ್ಷವಾಗಿರುತ್ತದೆ.
ಅಂದರೆ ಒಟ್ಟಾರೆ ನೀವು ಒಂದು ಕೋಟಿ ಎಂಭತ್ತು ಲಕ್ಷ ರೂಪಾಯಿ ಕಟ್ಟಿರುತ್ತೀರಿ. ಮಾಸಿಕ ಕಂತು ಸರಿಸುಮಾರು ಒಂದು ಲಕ್ಷವಿರುತ್ತದೆ. ಇದರ ಅರ್ಧ ಹಣವನ್ನು ಹೂಡಿಕೆ ಮಾಡುತ್ತಾ ಹೋದರೂ ಹದಿನೈದು ವರ್ಷದಲ್ಲಿ 12 ಪ್ರತಿಶತ ರಿಟರ್ನ್ಸ್ ಲೆಕ್ಕಾಚಾರದಲ್ಲಿ ಎರಡು ಕೋಟಿ ನಲವತ್ತು ಲಕ್ಷ ರೂಪಾಯಿ ನಮ್ಮ ಬಳಿ ಇರುತ್ತದೆ.
ಕೆಲಸ ಇಲ್ಲದಿದ್ದರೂ ಕಂತು ಕಟ್ಟಬೇಕು ಎನ್ನುವ ಒತ್ತಡ ಇರುವುದಿಲ್ಲ. ಮೂರು ಕಂತು ಕಟ್ಟದಿದ್ದರೆ ’ನಮ್ಮ ಮನೆ ’ ಬ್ಯಾಂಕಿನವರದಾಗಿರುತ್ತದೆ. ಕಾರು , ಮನೆ ಇತ್ಯಾದಿಗಳನ್ನು ಕೊಳ್ಳಲು ಸಾಲ ಮಾಡ ಬಾರದು. ಚಕ್ರಬಡ್ಡಿಯ ಶಕ್ತಿಯನ್ನು ನಮ್ಮ ಪರವಾಗಿ ದುಡಿಸಿಕೊಂಡವರು ಮಾತ್ರ ಸ್ಥಿತಿವಂತ ರಾಗುತ್ತಾರೆ. ಉಳಿದವರು ಕಂತಿನ ಜೀವನ ನಡೆಸುತ್ತಾರೆ.
ಸಾಲ ಮಾಡುವ ಬಗ್ಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ರೀತಿಯದ್ದಾಗಿರುತ್ತದೆ. ಸಾಲದ ಬಗ್ಗೆ ಮಾತ್ರವಲ್ಲ ಬದುಕಿನ ಎಲ್ಲಾ ವಿಷಯಗಳ ಬಗ್ಗೆಯೂ ದೃಷ್ಟಿಕೋನ ಬದಲಿರುತ್ತದೆ. ಎಲ್ಲವೂ ಒಪ್ಪಿತವಾಗಬೇಕು ಎಂದಿಲ್ಲ. ಮೊನ್ನೆ ಸ್ನೇಹಿತರೊಬ್ಬರು ಒಂದು ಸಂದೇಶ ಕಳಿಸಿದ್ದರು. ಅದರ ಸಾರಾಂಶವನ್ನು ಹೇಳುವೆ. ಕಳ್ಳ ಮತ್ತು ಕಳ್ಳತನ ತಪ್ಪು ಎನ್ನುವುದು ಸಮಾಜ ಒಪ್ಪಿಕೊಂಡಿರುವ ಅಂಶ. ಆದರೆ ಕಳ್ಳತನ ಮತ್ತು ಕಳ್ಳ ನಾವೆಂದುಕೊಂಡಂತೆ ತಪ್ಪಲ್ಲ.
ಸಮಾಜ ಬಿಂಬಿಸಿರುವಂತೆ ಅದು ಕೆಟ್ಟದ್ದಲ್ಲ ಎನ್ನುವ ಸಾರಾಂಶ ಆ ಸಂದೇಶದ್ದು ! ಅದನ್ನು ಸರಿ ಎಂದು ಹೇಳಲು ಕೊಟ್ಟ ಕಾರಣಗಳು ಓದಿ ತಲೆ ಸುತ್ತು ಬಂದಿತ್ತು. ಮೊದಲಿಗೆ ಕಳ್ಳತನ ಜಗತ್ತಿನಾ ದ್ಯಂತ ಲಕ್ಷಾಂತರ ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡಿದೆ. ಎರಡನೆಯದಾಗಿ ಕಳ್ಳ ಮತ್ತು ಕಳ್ಳತನದ ಭಯ ಇರುವುದರಿಂದ ಪೊಲೀಸರ ನೇಮಕವಾಗಿದೆ.
ಎಟಿಎಂ ಸಹಿತ ಕೋಟ್ಯಂತರ ಅಂಗಡಿ ಮತ್ತು ಕಚೇರಿಗಳ ಮುಂದೆ ಸೆಕ್ಯುರಿಟಿ ನೇಮಕವಾಗಿರುವು ದಕ್ಕೂ ಈ ಭಯ ಕಾರಣ, ಹೀಗಾಗಿ ಇದು ಕೋಟ್ಯಂತರ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಇನ್ನು ಸಿಸಿಟಿವಿ ಮಾರಾಟ, ಹೋಂ ಸೆಕ್ಯುರಿಟಿ ಅಲಾರಾಂ ಗಳ ಮಾರಾಟ ಇತ್ಯಾದಿ ಲೆಕ್ಕಾಚಾರ ಮಾಡಿದರೆ ಇದು ಬಹು ಕೋಟಿ ಉದ್ಯಮಕ್ಕೂ ಕಾರಣವಾಗಿದೆ.
ಹೀಗೆ ಇನ್ನಷ್ಟು ಪಟ್ಟಿಯನ್ನು ಬೆಳಸಬಹುದು. ಹೀಗಾಗಿ ಸಮಾಜ ಹೇಳಿದಷ್ಟು ಕೆಟ್ಟವರು ಕಳ್ಳರು ಮತ್ತು ಕಳ್ಳತನ ಎರಡೂ ಅಲ್ಲ. ನಿಜ ಹೇಳಬೇಕೆಂದರೆ ನಾವು ಅವರಿಗೆ ಕೃತಜ್ಞರಾಗಿರಬೇಕು ಎನ್ನುವ ಒಕ್ಕಣೆಯೊಂದಿಗೆ ಸಂದೇಶ ಮುಗಿದಿತ್ತು. ಇದೆ ರೀತಿ ಬೀಡಿ, ಸಿಗರೇಟು ಮತ್ತು ಆಲ್ಕೋಹಾಲ್ ನಿಷೇಧದ ಮಾತುಗಳು ಬಂದಾಗ ಕೂಡ ಹಲವಾರು ಮಾತುಗಳು ಮುನ್ನೆಲೆಗೆ ಬರುತ್ತವೆ.
ಅವು ನಮ್ಮ ಜಿಡಿಪಿಗೆ ದೇಣಿಗೆ ನೀಡುತ್ತಿವೆ. ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದೆ. ಸರಕಾರ ಕ್ಕೂ ಅದು ರೆವೆನ್ಯೂ ನೀಡುತ್ತಿದೆ. ಇವನ್ನೆ ಬ್ಯಾನ್ ಮಾಡಿ ಬಿಟ್ಟರೆ ಇದನ್ನು ನಂಬಿ ಬದುಕುವವರ ಗತಿಯೇನು ? ಇತ್ಯಾದಿ ಗೋಳಾಟ ಶುರುವಾಗುತ್ತದೆ. ತಿಂಗಳ ಹಿಂದೆ ಆನ್‌ಲೈನ್ ಗೇಮಿಂಗ್ ಬಗ್ಗೆ ಅದು ಮಾಡುವ ನಷ್ಟದ ಬಗ್ಗೆ ಬರೆದಾಗಲೂ ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಮಾತು ಗಳನ್ನು ನಾನು ಕೇಳಬೇಕಾಯ್ತು.
ಆನ್‌ಲೈನ್ ಆಟವನ್ನು ಆಡು ಎಂದು ಯಾರೂ ಒತ್ತಾಯಿಸಿಲ್ಲವಲ್ಲ ಎನ್ನುವ ಮಟ್ಟಿಗೆ ಒಪ್ಪಕ್ಕೆ ಇಟ್ಟುಕೊಂಡು ಅದನ್ನು ಬೆಂಬಲಿಸಿ ಕಾಮೆಂಟ್ ಹಾಕಿದ್ದರು. ನಮ್ಮ ಭಾರತೀಯ ಕ್ರಿಕೆಟಿಗರು ಆನ್‌ಲೈನ್ ಗೇಮ್ ಗಳಿಗೆ ರಾಯಭಾರಿಯಾದ ಮೇಲೆ ಆಟ ಆಡುವಂತೆ ಒತ್ತಾಯಿಸಿಲ್ಲ ಎನ್ನುವ ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ. ನಮ್ಮಲ್ಲಿ ಸೆಲೆಬ್ರೆಟಿಗಳನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತೇವೆ.
ಈಗ ಮರಳಿ ಸಾಲದ ವಿಷಯಕ್ಕೆ ಬರೋಣ. ಇವತ್ತು ಸಾಲ ಮಾಡಿಯಾದರೂ ಸರಿಯೇ ತುಪ್ಪ ತಿನ್ನಬೇಕು ಎನ್ನುವ ಸಮಯ. ಇಂತಹ ಸಮಯದಲ್ಲಿ ಸಾಲ ಮಾಡಬೇಡಿ ಎಂದರೆ ಹಾಗೆ ಹೇಳಿದವ ನನ್ನು ಈ ಜಗತ್ತು ಪೆದ್ದನಂತೆ ನೋಡುತ್ತದೆ. ಅದರಲ್ಲೂ ನೀವು ಅಮೆರಿಕಾದಂತಹ ದೇಶದಲ್ಲಿದ್ದರೆ ಸಾಲ ಮಾಡಲೇಬೇಕು. ಸಾಲ ಮಾಡದವನು ಆ ಸಮಾಜದಲ್ಲಿ ಬದುಕಲು ಅನರ್ಹ ಎನ್ನುವಂತಹ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿದೆ.
ಅಲ್ಲಿಗೆ ವಿದ್ಯಾರ್ಥಿಯಾಗಿ ಹೋದಾಗ ಶುರುವಾಗುವ ಸಾಲದ ಖೆಡ್ಡಾ ಮುಗಿಯುವುದೇ ಇಲ್ಲ. ಒಂದರ ನಂತರ ಮತ್ತೊಂದು ಸಾಲದ ವರ್ತುಲದಲ್ಲಿ ಸಿಲುಕಿ ಬದುಕು ಸವೆಸಿ ಬಿಡುತ್ತಾರೆ. ಅಮೆರಿ ಕಕ್ಕೆ ಸೀಮಿತವಾಗಿದ್ದ ಈ ಕೆಟ್ಟ ಜೀವನಶೈಲಿ ಭಾರತವನ್ನೂ ಸಹ ತನ್ನ ಕಬಂಧ ಬಾಹುಗಳಲ್ಲಿ ಬೆಸೆದು ಬಿಟ್ಟಿದೆ.
ಬೇಡ ಎಂದರೆ ಜನರಿಗೆ ಕೋಪ. ಇದರ ಜೊತೆಗೆ ಫೋಮಾ ಕೂಡ ಸೇರಿಕೊಳ್ಳುವುದರಿಂದ ಬೇಡ ವೆಂದರೂ ಅವರು ಸಾಲ ಮಾಡುತ್ತಾರೆ. ನೀವು ಸ್ವಚ್ಛಂದವಾಗಿ ಓಡಾಡಿಕೊಂಡು ಇದ್ದೀರಾ, ನಿಮ್ಮನ್ನು ಯಾರಾದರೂ ಯಾವುದಾದರೂ ಮರಕ್ಕೋ ಅಥವಾ ಕಂಬಕ್ಕೋ ದಾರ ದಿಂದ ಕಟ್ಟಿ ಹಾಕಲು ಪ್ರಯತ್ನಿಸಿದರೆ ನೀವೇನು ಮಾಡುವಿರಿ? ಅದನ್ನು ವಿರೋಧಿಸುತ್ತೀರಾ ಅಲ್ಲವೇ? ಸಾಧ್ಯ ವಾದಷ್ಟೂ ಬಂಧನಕ್ಕೆ ಒಳಗಾಗದಂತೆ ಇರಲು ಪ್ರಯತ್ನಿಸುತ್ತೀರಿ ಅಲ್ಲವೇ? ಬದಲಿಗೆ ನೀವೇ ಹಗ್ಗ ತೆಗೆದುಕೊಂಡು ಕಂಬಕ್ಕೆ ಕಟ್ಟಿ ಹಾಕಿ ಕೊಳ್ಳುವಿರಾ? ಇದೆಂತಹ ಪ್ರಶ್ನೆ, ನಾವೇಕೆ ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳೋಣ ಎನ್ನುವ ಉತ್ತರ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಿರುತ್ತದೆ.
ಉತ್ತರ ಸರಿಯಿದೆ. ಸಾಲ ಎನ್ನುವುದು ನಿಮ್ಮ ಕೈಗಳನ್ನು ನೀವೇ ಕಟ್ಟಿ ಹಾಕಿಕೊಂಡಂತೆ, ನಿಮ್ಮ ಸಂತಂತ್ರ್ಯವನ್ನು ನೀವೇ ಒತ್ತೆ ಇಟ್ಟಂತೆ. ನಮ್ಮದು ಎನ್ನುವ ಯಾವುದೂ ಸಾಲ ಪೂರ್ಣವಾಗಿ ತೀರಿಸದ ಹೊರತು ನಮ್ಮದಲ್ಲ ಎಂದು ಗೊತ್ತಾಗುವ ವೇಳೆಗೆ ಸಾಲದ ಖೆಡ್ಡದಲ್ಲಿ ಬಿದ್ದಿರುತ್ತೇವೆ. ಹೀಗಾಗಿ ಎಚ್ಚರ, ಎಚ್ಚರ.
ಮನುಷ್ಯ ಮೂಲತಃ ನಕಲು ಮಾಡುವುದರಲ್ಲಿ ಸಿದ್ಧಹಸ್ತ. ನೀವು ನಾಗರಿಕತೆಯನ್ನು ಗಮನಿಸುತ್ತಾ ಬನ್ನಿ. ಆತ ಅಥವಾ ಆಕೆ ಒಬ್ಬರನ್ನು ಒಬ್ಬರು ನಕಲು ಮಾಡುತ್ತಾ ಸಮಾಜವನ್ನು ಕಟ್ಟಿದ್ದಾರೆ. ಭಾಷೆ ಇರಬಹುದು ಅಥವಾ ರೀತಿ ರಿವಾಜುಗಳು ಇವೆಲ್ಲವೂ ಒಬ್ಬರನ್ನು ನೋಡಿ ಒಬ್ಬರು ಮಾಡುತ್ತಾ ಅದು ಸಂಪ್ರದಾಯ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತದೆ.
ಹತ್ತಾರು ವರ್ಷ ಅದನ್ನು ಪುನರಾ ವರ್ತನೆ ಮಾಡುವುದರಿಂದ ಅದು ನಮ್ಮ ಸಂಪ್ರದಾಯ, ಪದ್ಧತಿ ಎನ್ನಿಸಿಕೊಳ್ಳುತ್ತವೆ. ಈ ಜಗತ್ತಿನಲ್ಲಿ ಒಂದಕ್ಕಿಂತ ಕಡಿಮೆ ಪ್ರತಿಶತ ಜನರು ಮಾತ್ರ ಸ್ವಂತಂತ್ರವಾಗಿ ಚಿಂತಿಸಬಲ್ಲರು. ಇಂತಹ ವರ್ಗ ತಮ್ಮ ಅನುಕೂಲಕ್ಕೆ ತಕ್ಕಹಾಗೆ ವ್ಯವಸ್ಥೆಯನ್ನು ಕಟ್ಟಿದ್ದಾರೆ.
ನಕಲು ಮಾಡುವ ಜನರನ್ನು ವ್ಯವಸ್ಥೆಗೆ ಒಗ್ಗಿಸಿಕೊಳ್ಳುವುದು ಬಹಳ ಸುಲಭ. ಕಳೆದ ನೂರು ಅಥವಾ ನೂರಿಪ್ಪತ್ತು ವರ್ಷದಲ್ಲಿ ಹೊಸೆದಿರುವ ಈ ಹಣಕಾಸು ವ್ಯವಸ್ಥೆಯನ್ನು ಅರ್ಥ ಮಾಡಿ ಕೊಳ್ಳುವುದು ದೂರದ ಮಾತು. ದಿನದಿಂದ ದಿನಕ್ಕೆ ಈ ಬಲೆಯಲ್ಲಿ ಸಿಲುಕಿ ಬದುಕನ್ನು ಮೂರಾ ಬಟ್ಟೆ ಮಾಡಿಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗಿದೆ. ಬೇರೊಬ್ಬರನ್ನು ನೋಡಿ ನಕಲು ಮಾಡುವ ಕಾಲದಲ್ಲಿ ನಾವಿಂದು ಇಲ್ಲ ಎನ್ನುವುದು ಅರಿತುಕೊಳ್ಳಬೇಕಾಗಿದೆ.
ಪ್ರತಿಯೊಬ್ಬರಿಗೂ ಭಗವಂತ ನೀಡಿರುವ ಪ್ರಶ್ನೆಪತ್ರಿಕೆ ಬೇರೆಯದಿದೆ. ಹೀಗಾಗಿ ನಾವು ಬೇರೊಬ್ಬರ ಉತ್ತರವನ್ನು ನಕಲು ಮಾಡುವುದರಿಂದ ಉತ್ತರ ತಪ್ಪಾಗುತ್ತದೆ. ಏಕೆಂದರೆ ಅವರ ಪ್ರಶ್ನೆಗೆ ಆ ಉತ್ತರ ಸರಿಯಿರಬಹುದು. ನಮ್ಮ ಪ್ರಶ್ನೆಯೇ ಬೇರೆಯದಿದೆಯಲ್ಲ ! ಅದನ್ನು ನಕಲು ಮಾಡುವ ಮುನ್ನ ಗಮನಿಸಬೇಕಲ್ಲವೇ ? ಜಗತ್ತಿನ ಮುಂದುವರೆದ ದೇಶಗಳಲ್ಲಿ ಅತ್ಯಂತ ಪ್ರಮುಖವಾದ ದೇಶಗಳನ್ನು ಕಳೆದ ಇಪ್ಪತೈದು ವರ್ಷದಿಂದ ಭೇಟಿ ನೀಡುತ್ತಿದ್ದೇನೆ. ಈ ಇಪ್ಪತೈದು ವರ್ಷದಲ್ಲಿ ಈ ಹಣಕಾಸು ವ್ಯವಸ್ಥೆಗೆ ಸಿಲುಕಿ ಬೀದಿಗೆ ಬಿದ್ದಿರುವವರ (ಹೋಂ ಲೆಸ್) ಸಂಖ್ಯೆ ಹೆಚ್ಚಾಗಿದೆ.
ಎಲ್ಲಾ ಪ್ರಮುಖ ನಗರಗಳಲ್ಲೂ ಇವರ ಇರುವಿಕೆ ಕಣ್ಣಿಗೆ ರಾಚುವಷ್ಟು ಹೆಚ್ಚಾಗಿದೆ. ಯಾವುದೇ ಮುಲಾಜಿಲ್ಲದೆ ಕೋರ್ಟ್ ಆರ್ಡರ್ ಹಿಡಿದು ಬಂದು ಮನೆಯಲ್ಲಿರುವ ಹಿರಿಯರು, ಮಕ್ಕಳು ಎನ್ನುವ ಯಾವ ಮುಲಾಜು ಇಲ್ಲದೆ ಬೀದಿಗೆ ದಬ್ಬಿರುವ ಅನೇಕ ಘಟನೆಗಳನ್ನು ಯೂರೋಪಿನಲ್ಲಿ ಕಣ್ಣಾರೆ ಕಂಡಿದ್ದೇನೆ. ಅಲ್ಲಿನ ದುಃಖಕ್ಕೆ ಸಾಕ್ಷಿಯಾಗಿದ್ದೇನೆ. ಯಾವುದು ಸರಿ ? ಯಾವುದು ತಪ್ಪು ? ಎನ್ನುವ ದೃಷಿಕೋನ ಬಹಳ ಮುಖ್ಯ.
ನಮಗೆ ಮಾರಾಟ ಮಾಡಲಾಗಿರುವ ದೃಷಿಕೋನ ಎಷ್ಟು ಸರಿ ಎನ್ನುವ ವಿವೇಚನೆ ನಮಗಿರಬೇಕು. ಸೃಷ್ಟಿತ ದೃಷಿಕೋನ ನಾವು ಬದಲು ಮಾಡಿಕೊಳ್ಳದೆ ಇದ್ದಲ್ಲಿ ಬದುಕು ಹೇಗೆ ಬದಲಾದೀತು?