ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arch Collapses: ತಮಿಳುನಾಡಿನಲ್ಲಿ ಮತ್ತೊಂದು ದುರಂತ; ಚೆನ್ನೈನ ವಿದ್ಯುತ್ ಸ್ಥಾವರ ಬಳಿ ಕಟ್ಟಡ ಕುಸಿದು 9 ಮಂದಿ ಸಾವು

ತಮಿಳುನಾಡಿನ ಉತ್ತರ ಚೆನ್ನೈನ ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರ ಘಟಕದೊಳಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಚೆನ್ನೈನ ವಿದ್ಯುತ್ ಸ್ಥಾವರ ಬಳಿ ಕಟ್ಟಡ ಕುಸಿದು 9 ಮಂದಿ ಸಾವು

-

Ramesh B Ramesh B Sep 30, 2025 10:35 PM

ಚೆನ್ನೈ: ತಮಿಳುನಾಡಿನ ಉತ್ತರ ಚೆನ್ನೈನ ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರ ಘಟಕದೊಳಗೆ (Thermal Power Station construction site in Ennore) ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ (Arch Collapses). ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಾಥಮಿಕ ವರದಿಯ ಪ್ರಕಾರ ಸುಮಾರು 30 ಅಡಿ ಎತ್ತರರಲ್ಲಿ ನಿರ್ಮಾಣ ಹಂತದಲ್ಲಿದ್ದ ಕಮಾನು ಕುಸಿದು ಈ ದುರ್ಘಟನೆ ನಡೆದಿದೆ. ಅವಶೇಷಗಳ ಅಡಿಯಲ್ಲಿ ಹಲವು ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ಉತ್ತರ ಚೆನ್ನೈಯ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಕರೂರ್‌ ದುರಂತಕ್ಕೆ ಮಿಡಿದ ಹೊಂಬಾಳೆ ಫಿಲ್ಮ್ಸ್‌; ಚೆನ್ನೈಯಲ್ಲಿ ನಾಳೆ ಆಯೋಜಿಸಿದ್ದ ʼಕಾಂತಾರ: ಚಾಪ್ಟರ್‌ 1' ಚಿತ್ರದ ಪ್ರಮೋಷನಲ್‌ ಇವೆಂಟ್‌ ಕ್ಯಾನ್ಸಲ್‌



ತಮಿಳುನಾಡು ವಿದ್ಯುತ್ ಮಂಡಳಿಯ ಕಾರ್ಯದರ್ಶಿ ಮತ್ತು ತಮಿಳುನಾಡು ಉತ್ಪಾದನೆ ಹಾಗೂ ವಿತರಣಾ ನಿಗಮ ಲಿಮಿಟೆಡ್ (TANGEDCO) ಅಧ್ಯಕ್ಷ ಡಾ. ಜೆ. ರಾಧಾಕೃಷ್ಣನ್ ಗಾಯಗೊಂಡ ಕಾರ್ಮಿಕರನ್ನು ಭೇಟಿ ಮಾಡಲು ಮತ್ತು ಪರಿಸ್ಥಿತಿಯನ್ನು ನಿರ್ಣಯಿಸಲು ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಕಟ್ಟಡ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವಡಿ ಪೊಲೀಸ್ ಕಮಿಷನರೇಟ್ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ.

4 ದಿನಗಳ ಅಂತರದಲ್ಲಿ 2ನೇ ದುರಂತ

ಕರೂರ್‌ನಲ್ಲಿ ನಟ-ರಾಜಕಾರಣಿ ದಳಪತಿ ವಿಜಯ್‌ ಪಾಲ್ಗೊಂಡಿದ್ದ ರ‍್ಯಾಲಿಯಲ್ಲಿ ನಡೆದ 41 ಮಂದಿ ಮೃತಪಟ್ಟ ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ದುರಂತ ನಡೆದಿದೆ. ತಮಿಳುನಾಡಿನ ಕರೂರಿನಲ್ಲಿ ಶನಿವಾರ (ಸೆಪೆಂಬರ್‌ 27) ಜನಪ್ರಿಯ ನಟ ಮತ್ತು ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್‌ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತು. ಘಟನೆಯಲ್ಲಿ ಗಾಯಗೊಂಡ ಹಲವರ ಪರಿಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ದುರಂತಕ್ಕೆ ಸಂಬಂಧಿಸಿ ನಟ ವಿಜಯ್‌ ಮತ್ತು ಪಕ್ಷದ ಸ್ಥಳೀಯ ಪದಾಧಿಕಾರಿಗಳ ವಿರುದ್ದ ದೂರು ದಾಖಲಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಭಾನುವಾರ ಗಾಯಾಳುಗಳನ್ನು ಮತ್ತು ಮೃತರ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಇನ್ನು ನಟ ವಿಜಯ್‌ ಮಡಿದ 40 ಮಂದಿಯ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ಧನ ನೀಡುವುದಾಗಿಯೂ ತಿಳಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂ. ಮತ್ತು ಕೇಂದ್ರ ಸರ್ಕಾರ 2 ಲಕ್ಷ ರೂ. ಘೋಷಿಸಿದೆ.