Rangaswamy Mookanahalli Column: ನನ್ನ ತಾತ ಜಿಡಿಪಿಗೂ ದೇಣಿಗೆ ನೀಡಲಿಲ್ಲ !
ವಿತ್ತಜಗತ್ತಿನ ಪಂಡಿತರು, ‘ವ್ಯಕ್ತಿಯ ಬಳಿ ಇಷ್ಟು ಹಣವಿದ್ದರೆ ಆತ ಖುಷಿಯಾಗಿರಲು ಸಾಧ್ಯ; ಈ ಪ್ರಮಾಣಕ್ಕಿಂತ ಹೆಚ್ಚಾಗಿದ್ದರೆ ಅಥವಾ ಕಡಿಮೆಯಾದರೂ ಆತ ಖುಷಿಯಾಗಿರಲು ಸಾಧ್ಯವಿಲ್ಲ’ ಅಂತ ಏನಾದರೂ ಒಂದು ಮಾನ ದಂಡವನ್ನು ಇಟ್ಟಿದ್ದಾರೆಯೇ? ಹೌದಾದರೆ ಅದು ಸರಿ ಅಥ ವಾ ತಪ್ಪು ಎನ್ನಲು ಏನಾದರೂ ಪುರಾವೆ ಇದೆಯೇ? ಇಂಥ ಪ್ರಶ್ನೆಗಳು ಹುಟ್ಟುವುದು ಸಹಜ

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಖುಷಿಯಾಗಿರಲು ಮನಸ್ಸು ಸರಿಯಿರಬೇಕು. ಎಷ್ಟು ಹಣವಿದ್ದರೇನು? ಕೈ ಬಿಚ್ಚಿ ಖರ್ಚು ಮಾಡುವಷ್ಟು ಇದ್ದರೆ ಸಾಕು! ನಿಖರ ಮೊತ್ತ ಹೇಳುವುದು ಕಷ್ಟ. ನಮ್ಮ ಕುಟುಂಬದ ಖರ್ಚು, ನಮ್ಮನ್ನು ನಂಬಿದವರ ಬೇಡಿಕೆಗಳನ್ನು ಪೂರೈಸುವಷ್ಟು ಹಣ ಇದ್ದರೆ ಸಾಕು ಎಂಬುದು ಬಹುತೇಕರ ಅಭಿಮತ.
ಜನಕ್ಕೆ ಒಳ್ಳೆಯ ಊಟ ಹಾಕಿ ನೋಡಿ, ಹೊಟ್ಟೆ ತುಂಬುವ ಸಮಯದಲ್ಲಿ ‘ಸಾಕಪ್ಪಾ’ ಎಂದು ಕೈ ಅಡ್ಡ ತರುತ್ತಾರೆ. ‘ತಟ್ಟೆಗೆ ಇನ್ನು ಹಾಕಬೇಡಿ’ ಎನ್ನುತ್ತಾರೆ. ಇದೇ ಮಾತನ್ನ ನಾವು ಬೇರೆ ವಿಷಯಗಳಲ್ಲೂ ಹೇಳಬಹುದು. ಆದರೆ ಹಣದ ವಿಷಯದಲ್ಲಿ ‘ನನಗಿನ್ನು ಸಾಕು’ ಎಂದವರನ್ನ ನಾವು ಕಂಡಿದ್ದೇವೆಯೇ? ‘ಎಲ್ಲವನ್ನೂ ತ್ಯಜಿಸಿದೆ’ ಎಂದವರನ್ನೂ ಹಣದ ಮೋಹ ಬಿಟ್ಟಿಲ್ಲ. ಇನ್ನು ಜನಸಾಮಾನ್ಯರ ಪಾಡೇನು? ಹಣ ನೀಡುವ ಮನ್ನಣೆಯ ದಾಹವದು.
ಇದನ್ನೂ ಓದಿ: Rangaswamy Mookanahalli Column: ಕಸವೇ ನಮ್ಮೂರು, ಕಸವೇ ನಮ್ಮ ದೈವ !
‘ಪಂಚತಂತ್ರ’ದ ಮಿತ್ರಭೇದದಲ್ಲಿನ ಶ್ಲೋಕವೊಂದು ಹೀಗೆನ್ನುತ್ತದೆ: ‘ಪೂಜ್ಯತೇ ಯದ ಪೂಜ್ಯೋಪಿ ಯದಗಮ್ಯೋಪಿ ಗಮ್ಯತೆ| ವಂದ್ಯತೆ ಯದವಂದ್ಯೋಪಿ ಪ್ರಭಾವೋ ಧನಸ್ಯ ಚ||’- ಅಂದರೆ, ಪೂಜೆಗೆ ಅನರ್ಹನಾದವನನ್ನು ಪೂಜೆ ಮಾಡಿದರೆ, ಯಾರಲ್ಲಿಗೆ ಹೋಗ ಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸಬಾರದೋ ಅವರಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವವೇ ಕಾರಣ ಎಂದರ್ಥ.
ಹಣವು ತಂದುಕೊಡುವ ಗೌರವ-ಮರ್ಯಾದೆಯ ಬಗ್ಗೆ ಮಹಾಭಾರತದ ಶಾಂತಿಪರ್ವ ದಲ್ಲಿನ ಉಲ್ಲೇಖವೊಂದು ಹೀಗೆನ್ನುತ್ತದೆ: ‘ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ | ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾ ರ್ಥಾಃ ಸ ಚ ಪಂಡಿತಃ ||’- ಅಂದರೆ, ಯಾರ ಬಳಿ ಹಣ ಇರುತ್ತದೆಯೋ ಅವನಿಗೆ ಸ್ನೇಹಿತರೂ ಇರುತ್ತಾರೆ, ಬಂಧುಗಳೂ ಇರುತ್ತಾರೆ. ಅಷ್ಟೇಕೆ, ಲೋಕದಲ್ಲಿ ಅವನು ಗಂಡಸು ಎನಿಸಿಕೊಳ್ಳುತ್ತಾನೆ; ಕೊನೆಗೆ ವಿದ್ವಾಂಸನೂ ಅವನೇ’ ಎಂದರ್ಥ.

ಈ ಎಲ್ಲ ಕಾರಣಗಳಿಂದ ಮನುಷ್ಯನಿಗೆ ಹಣದ ಮೇಲಿನ ವ್ಯಾಮೋಹ ಹೆಚ್ಚಾಗುತ್ತಾ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ರಕ್ತದಲ್ಲಿನ ಸಕ್ಕರೆಯ ಅಂಶವು ಇಷ್ಟು ಮಟ್ಟಕ್ಕಿಂತ ಹೆಚ್ಚಾಗಬಾರದು ಕಡಿಮೆಯೂ ಆಗಬಾರದು ಅಂತಿದೆ, ಅಲ್ಲವೇ? ಹಾಗೆಯೇ ರಕ್ತದೊತ್ತಡವೂ. ಜತೆಗೆ, ದೇಹದಲ್ಲಿ ಇರಬೇಕಾದ ಪ್ರೋಟೀನ್, ವಿಟಮಿನ್ ಇತ್ಯಾದಿಗಳ ಪ್ರಮಾಣವು ನಿಖರವಾಗಿ ಇಷ್ಟಕ್ಕಿಂತ ಜಾಸ್ತಿ ಆಗಬಾರದು, ಕಡಿಮೆಯೂ ಆಗಬಾರದು ಅಂತ ವೈದ್ಯವಿಜ್ಞಾನವು ಒಂದಷ್ಟು ಮಾನದಂಡಗಳನ್ನು ಸೃಷ್ಟಿಸಿದೆ.
ಇದು ನಮಗೆಲ್ಲಾ ತಿಳಿದಿರುವ ವಿಷಯ. ವಿತ್ತಜಗತ್ತಿನ ಪಂಡಿತರು, ‘ವ್ಯಕ್ತಿಯ ಬಳಿ ಇಷ್ಟು ಹಣವಿದ್ದರೆ ಆತ ಖುಷಿಯಾಗಿರಲು ಸಾಧ್ಯ; ಈ ಪ್ರಮಾಣಕ್ಕಿಂತ ಹೆಚ್ಚಾಗಿದ್ದರೆ ಅಥವಾ ಕಡಿಮೆಯಾದರೂ ಆತ ಖುಷಿಯಾಗಿರಲು ಸಾಧ್ಯವಿಲ್ಲ’ ಅಂತ ಏನಾದರೂ ಒಂದು ಮಾನ ದಂಡವನ್ನು ಇಟ್ಟಿದ್ದಾರೆಯೇ? ಹೌದಾದರೆ ಅದು ಸರಿ ಅಥವಾ ತಪ್ಪು ಎನ್ನಲು ಏನಾದರೂ ಪುರಾವೆ ಇದೆಯೇ? ಇಂಥ ಪ್ರಶ್ನೆಗಳು ಹುಟ್ಟುವುದು ಸಹಜ.
ನಮ್ಮ ಸಮಾಜ, ನಮ್ಮ ವಾತಾವರಣ, ವ್ಯಕ್ತಿಯ ಹಿನ್ನೆಲೆಯ ಜತೆಗೆ ಹಣ ಬೇಕೇ ಬೇಡವೇ ಎನ್ನುವ ತತ್ವಜ್ಞಾನದವರೆಗೂ ಹಲವು ವಿಷಯಗಳು ಇದನ್ನ ನಿರ್ಣಯಿಸುತ್ತವೆ. ಖುಷಿ ಯಾಗಿರಲು ಮನಸ್ಸು ಸರಿಯಿರಬೇಕು. ಎಷ್ಟು ಹಣವಿದ್ದರೇನು? ಕೈ ಬಿಚ್ಚಿ ಖರ್ಚು ಮಾಡು ವಷ್ಟು ಇದ್ದರೆ ಸಾಕು! ನಿಖರ ಮೊತ್ತ ಹೇಳುವುದು ಕಷ್ಟ. ನಮ್ಮ ಕುಟುಂಬದ ಖರ್ಚು,
ನಮ್ಮನ್ನು ನಂಬಿದವರ ಬೇಡಿಕೆಗಳನ್ನು ಪೂರೈಸುವಷ್ಟು ಇದ್ದರೆ ಸಾಕು. ‘ಮನಸಿಚ ಪರಿತುಷ್ಟೇ ಕೋರ್ಥವಾನ್? ಕೋ ದರಿದ್ರಃ?’, ‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು’ ವರ್ಕ್ ಆಗುತ್ತಾ? ಮೂಲಸೌಕರ್ಯಗಳಿಗೆ ಆಗುವಷ್ಟು ಇದ್ದರೆ ಸಾಕು!- ಹೀಗೆ ಹಣವನ್ನು ಕುರಿತು ನಮ್ಮ ಸಮಾಜದಲ್ಲಿ ಒಬ್ಬೊಬ್ಬರದು ಒಂದೊಂದು ನಿಲುವು.
ತಪ್ಪು ಅಥವಾ ಸರಿ ಎನ್ನುವುದು ಇಲ್ಲಿನ ಉದ್ದೇಶವಲ್ಲ. ಇವುಗಳಲ್ಲಿ ಸಾಮ್ಯತೆ ಇರಲಿ ಬಿಡಲಿ, ಒಂದಂತೂ ಸತ್ಯ- ಹಣವು ಬದುಕಿಗೆ ಬೇಕು! ಎಷ್ಟು ಎನ್ನುವುದಷ್ಟೇ ಪ್ರಶ್ನೆಯಾಗಿ ಉಳಿಯುವುದು. ಯಾವ ರೀತಿಯ ಬದುಕು ಬೇಕು ಎನ್ನುವುದು, ಎಷ್ಟು ಹಣ ಬೇಕು ಎನ್ನು ವುದಕ್ಕೆ ನೇರವಾಗಿ ಹೊಂದಿಕೊಂಡಿದೆ.
ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ಎಷ್ಟು ಹಣ ಬೇಕೋ ಅಷ್ಟು ಸಾಕು ಎನ್ನುತ್ತಾರೆ ಇದರ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ ವಿಜ್ಞಾನಿಗಳು. ಆ ಮೊತ್ತ ಎಷ್ಟು ಎನ್ನುವುದು ನೀವು ಎಲ್ಲಿ ವಾಸಿಸುತ್ತಿದ್ದೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ನೀವು ಬೋಸ್ಟನ್‌ನಲ್ಲಿದ್ದರೆ ಆ ಮೊತ್ತವು ಒಂದು ತೆರನಾಗಿದ್ದರೆ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಗ ಬೇಕಾಗುವ ಮೊತ್ತ ಬದಲಾಗಿರುತ್ತದೆ.
ಅಲ್ಲದೆ, ಈ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಕೂಡ ಬದಲಾಗುತ್ತದೆ. ಅಮೆರಿಕದಲ್ಲಿ ಕೂಡ ನೀವು ಯಾವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದೀರಿ ಎನ್ನುವುದರ ಮೇಲೆ ಈ ಮೊತ್ತ ಬದಲಾಗು ತ್ತಾ ಹೋಗುತ್ತದೆ. ಭಾರತಕ್ಕೂ ಈ ನಿಯಮ ಲಾಗೂ ಆಗುತ್ತದೆ. ಉದಾಹರಣೆಗೆ, ಬೆಂಗಳೂರಿ ನಂಥ ನಗರದಲ್ಲಿ ತರಕಾರಿ ಬೆಲೆಯು ಕೆ.ಜಿ.ಗೆ ಐವತ್ತು ಅಥವಾ ಅರವತ್ತು ರುಪಾಯಿಯಷ್ಟಿ ದ್ದರೆ, ಅದೇ ತರಕಾರಿಯು ಹಳ್ಳಿಯಲ್ಲಿ ಹತ್ತು ರುಪಾಯಿಗೆ ಸಿಗುತ್ತದೆ.
ಹೀಗಾಗಿ ಈ ಪ್ರಮಾಣವನ್ನು ಸಾರ್ವಜನಿಕವಾಗಿ ಎಲ್ಲರಿಗೂ ಒಪ್ಪಿಗೆಯಾಗುವಂತೆ ‘ಇಷ್ಟೇ’ ಎಂದು ನಿಗದಿಪಡಿಸಲು ಬರುವುದಿಲ್ಲ. ಆದರೂ ಒಂದು ಮಟ್ಟ/ಪ್ರಮಾಣವನ್ನು ನಿಗದಿ ಪಡಿಸಬಹುದು. ಅದೊಂದು ಬೆಂಚ್‌ಮಾರ್ಕ್ ಇದ್ದಹಾಗೆ! ನಮ್ಮ ರಕ್ತದೊತ್ತಡವು ಹೇಗೆ ಮಾನದಂಡದಲ್ಲಿ ಹೇಳಿರುವಷ್ಟೇ ಇರುವುದಿಲ್ಲವೋ ಹಾಗೆಯೂ ಇದೂ. ಇದರ ಸುತ್ತ ಮುತ್ತ ಬದುಕು ಇದ್ದರೆ ಸೇಫ್ ಎನ್ನುವ ನಿರಾಳ ಭಾವನೆಯಷ್ಟೇ.
ಅಮೆರಿಕದಂಥ ದೇಶದಲ್ಲಿ 75000 ಡಾಲರ್ ವಾರ್ಷಿಕ ಸಂಪಾದನೆಯಿದ್ದರೆ ಅವರು ಖುಷಿ ಯಾಗಿರಲು ಸಾಧ್ಯ ಎನ್ನುತ್ತದೆ ಅಲ್ಲಿ ನಡೆದ ಸಂಶೋಧನೆಯೊಂದು. ಇದು ಲಕ್ಷದವರೆಗೆ ಓಕೆ, ಆದರೆ ಅದಕ್ಕೂ ಮೀರಿದ ಹಣವನ್ನು ಸಂಪಾದನೆ ಮಾಡುತ್ತಾ ಹೋದಂತೆ ಮನುಷ್ಯ ರಲ್ಲಿ ಸಂತೋಷ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ಕೂಡ ಸಂಶೋಧನೆ ಯಿಂದ ತಿಳಿದುಬಂದಿದೆ.
ನೀವೀಗ ಪ್ರಶ್ನೆ ಕೇಳಬಹುದು- ಇದು ಹೇಗೆ ಸಾಧ್ಯ, ಎಷ್ಟು ಹಣ ಬಂದರೂ ಖುಷಿಯೇ ತಾನೇ? ಹೆಚ್ಚು ಹಣ ಬಂದರೆ ಅದಕ್ಕೆ ಬೇಜಾರೇ? ಅಸಂತೋಷವೇ? ಹೌದು, ಎಲ್ಲವೂ ಒಂದು ಮಿತಿಯಲ್ಲಿ ಇದ್ದರಷ್ಟೇ ಬದುಕಿನಲ್ಲಿ ಉತ್ಸಾಹ ಮತ್ತು ಸಂತೋಷ ಸಾಧ್ಯ. ‘ಅತಿ ಯಾದರೆ ಅಮೃತವೂ ವಿಷ’ ಎಂಬ ತತ್ವಜ್ಞಾನವನ್ನು ನಮ್ಮ ಹಿರಿಯರು ಬಹಳ ಹಿಂದೆ ಯೇ ಹೇಳಿದ್ದರು.
ಇದನ್ನೇ ನಮ್ಮ ಇಕನಾಮಿಕ್ಸ್‌ನಲ್ಲಿ, The Law of diminishing marginal utility ಎನ್ನು ತ್ತಾರೆ. ಈ ನಿಯಮದ ಪ್ರಕಾರ, ಯಾವುದೇ ವಸ್ತುವಿರಲಿ ಅದು ನಮಗೆ ಮೊದಲು ಕೊಟ್ಟ ಸುಖಾನುಭವ ಎರಡನೇ ಬಾರಿಗೆ ಕಡಿಮೆಯಾಗಿರುತ್ತದೆ. ಮೂರನೇ ಬಾರಿಗೆ ಅದು ಇನ್ನಷ್ಟು ಕುಸಿತವನ್ನು ಕಾಣುತ್ತದೆ. ಹೀಗೆ ಒಂದಷ್ಟು ಪುನರಾವರ್ತನೆಯಿಂದ ಅದು ಕೊಡುವ ಸುಖವು ಇಲ್ಲವೆನ್ನುವಷ್ಟು ಕಡಿಮೆಯಾಗುತ್ತದೆ. ಇದು ತಿನ್ನುವ ವಿಷಯ ದಲ್ಲಿ ಸರಿ, ಹಣದ ವಿಷಯದಲ್ಲೂ ಈ ‘ಲಾ’ ಲಾಗೂ ಆಗುತ್ತದೆಯೇ ಎನ್ನುವ ಸಂಶಯ ಹಲವರದು. ಆದರೆ ಒಂದು ಹಂತದ ನಂತರ ಹಣ ಅಥವಾ ಸಂಬಳವು ನೌಕರನನ್ನ ಅಥವಾ ಮನುಷ್ಯರನ್ನ ಮೋಟಿವೇಟ್ ಮಾಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಕಾರ್ಪೊರೇಟ್ ಕಂಪನಿಗಳಲ್ಲಿ ಇರುವ ಮಾಹಿತಿ ಪುರಾವೆ ಒದಗಿಸುತ್ತದೆ.
ಇನ್ನೊಂದು ಅಚ್ಚರಿಯ ಅಂಶವೆಂದರೆ, ತಾವು ಸಂಪಾದಿಸಿದ ಹಣವನ್ನೆಲ್ಲಾ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಖರ್ಚುಮಾಡಿಕೊಂಡವರಲ್ಲಿ ಇರುವ ಸಂತೋಷದ ಪ್ರಮಾಣ ಕ್ಕೂ, ಇತರರಿಗಾಗಿ ಖರ್ಚು ಮಾಡಿದ ಜನರ ಸಂತೋಷದ ಪ್ರಮಾಣಕ್ಕೂ ವ್ಯತ್ಯಾಸ ಕಂಡುಬಂದಿದೆ. ಬೇರೆಯವರಿಗೆ ಅಥವಾ ಸಮಾಜದ ಒಳಿತಿಗೆ ತಮ್ಮ ಹಣವನ್ನು ಖರ್ಚು ಮಾಡಿದ ವ್ಯಕ್ತಿಗಳ ಮಾನಸಿಕ ದೃಢತೆ ಹಾಗೂ ಸಂತೋಷದ ಪ್ರಮಾಣವು ಹೆಚ್ಚಾಗಿರುವು ದನ್ನು ಅಧ್ಯಯನಗಳು ಸಾಬೀತುಪಡಿಸಿವೆ.
ಭಾರತದಂಥ ದೇಶದಲ್ಲಿ ನಗರ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ವಾರ್ಷಿಕ ಆದಾಯವು 10 ರಿಂದ 15 ಲಕ್ಷ ರುಪಾಯಿಯಷ್ಟಿದ್ದರೆ ಅವರು ಖುಷಿಯಾಗಿರಲು ಸಾಧ್ಯ. ಹಳ್ಳಿ ಪ್ರದೇಶ ಗಳಲ್ಲಿ 2ರಿಂದ 5 ಲಕ್ಷವಿದ್ದರೆ ಅದೇ ಮಟ್ಟದ ಖುಷಿ ಅವರದಾದೀತು. ಇದೊಂದು ಮಾನ ದಂಡ, ಇಷ್ಟೇ ಸರಿ ಎಂದು ಹೇಳಲು ಬರುವುದಿಲ್ಲ.
ಸಾಮಾನ್ಯವಾಗಿ ವರ್ಗೀಕರಣ ಮಾಡುವಾಗ ಇಷ್ಟಿದ್ದರೆ ಬಹುತೇಕವಾಗಿ ಚೆನ್ನಾಗಿ ಬದುಕ ಬಹುದು, ಖುಷಿಯಾಗಿರಬಹುದು ಎನ್ನುವ ಒಂದು ಕಾಲ್ಪನಿಕ ಮಟ್ಟವಿದು. ಆದರೆ ಮುಕ್ಕಾಲು ಪಾಲು ಜನರು ಈ ಕಾಲ್ಪನಿಕ ಮಟ್ಟದ ಆಜುಬಾಜಿನಲ್ಲಿ ಬರುತ್ತಾರೆ ಎಂಬುದು ಕಲ್ಪನೆಯನ್ನು ನಿಜವಾಗಿಸುತ್ತದೆ.
ಖುಷಿಯಾಗಿರಲು ನಿಗದಿಪಡಿಸಿರುವ ಹಣದ ಪ್ರಮಾಣದ ದುಪ್ಪಟ್ಟು ಅಥವಾ ಅದಕ್ಕೂ ಹೆಚ್ಚು ಸಂಪಾದಿಸುವ ಜನರಲ್ಲಿ ಖಿನ್ನತೆ, ಅಶಿಸ್ತು, ಬದುಕಿನಲ್ಲಿ ಆಸಕ್ತಿ ಇಲ್ಲದಿರುವಿಕೆ, ಏನು ಮಾಡಬೇಕು ಎನ್ನುವ ನಿಖರತೆಯ ಕೊರತೆ, ಸುಖಾಸುಮ್ಮನೆ ಬೇಜಾರು ಇಂಥ ಮಾನಸಿಕ ತುಮುಲಗಳು ಹೆಚ್ಚಾಗಿರುವುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ.
ಕೊನೆಗೆ ಇಂಥವರು ತಮ್ಮ ಬದುಕನ್ನು ಮಾದಕ ವಸ್ತುಗಳ ಸೇವನೆಯಂಥ ದಾರುಣ ಅಂತ್ಯಕ್ಕೆ ಕರೆದುಕೊಂಡು ಹೋದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆದರೆ, ಮಜಾ ನೋಡಿ- ನಿಗದಿತ ಮೊತ್ತಕ್ಕಿಂತ ಕಡಿಮೆ ಹಣ ದುಡಿಯುವ ಜನರಲ್ಲಿ ಬದುಕಿನ ಬಗ್ಗೆ ಇನ್ನಷ್ಟು ಹೆಚ್ಚು ಪ್ರೀತಿ ಇರುವುದನ್ನು ಕಾಣುತ್ತೇವೆ. ಹೇಗಾದರೂ ಮಾಡಿ ಬದುಕನ್ನು ಇನ್ನಷ್ಟು ಹಸನಾಗಿಸಿಕೊಳ್ಳಬೇಕೆನ್ನುವ, ನಮ್ಮಂತೆ ನಮ್ಮ ಮುಂದಿನ ಪೀಳಿಗೆ ಯವರು ನೋವು ತಿನ್ನಬಾರದು ಎನ್ನುವ ಹಪಾಹಪಿ ಅವರಲ್ಲಿ ಕೆಲಸ ಮಾಡುತ್ತದೆ. ಇದು ಭಾರತದ ವೈಶಿಷ್ಟ್ಯ. ಮುಂದುವರಿದ ದೇಶಗಳಲ್ಲಿ ಹಾಗಲ್ಲ, ಅಲ್ಲಿ ಕಡಿಮೆಯಿದ್ದ ವರೂ ಅತಿಹೆಚ್ಚು ಇದ್ದವರೂ ನೋವಿನಲ್ಲಿ ಸಮಭಾಗಿಗಳು. ಎಷ್ಟು ಹಣ ಬೇಕು ಎಂದು ಕೇಳಿ ದಾಗ, ಇಷ್ಟೇ ಎಂದು ಹೇಳಲು ಸಾಧ್ಯವಾಗದೆ ಹೋಗಬಹುದು.
ಅದರಲ್ಲೂ, ಭಾರತದಂಥ ಅತ್ಯಂತ ವಿಭಿನ್ನ ಆರ್ಥಿಕ ಹಿನ್ನೆಲೆಯುಳ್ಳ ಸಮಾಜದಲ್ಲಿ ಅದು ಕಷ್ಟವೇ ಸರಿ. ಆದರೆ ದುಡ್ಡೇ ಬೇಡ ಎನ್ನುವ, ಆಸೆಗಳನ್ನು ಅಮುಕಿ ಇಷ್ಟು ಸಾಕು ಎನ್ನುವ ಅಭಾವ ವೈರಾಗ್ಯ ಕೂಡ ತಪ್ಪು. ಉತ್ತಮ ಬದುಕಿಗೆ ಹಣದ ಅವಶ್ಯಕತೆ ಇದೆ.
ಇವತ್ತು ವಿದ್ಯಾಭ್ಯಾಸ, ಊಟ, ವಸತಿ ಜತೆಗೆ ಮನರಂಜನೆಯು ಕೂಡ ಸಾಕಷ್ಟು ಹಣವನ್ನ ಬಯಸುತ್ತದೆ. ಇಂದು ಕಾರು, ಫೋನು ಅಥವಾ ವರ್ಷಕ್ಕೊಂದು ಪ್ರವಾಸ ಅವಶ್ಯಕತೆಯಾಗಿ ಮಾರ್ಪಟ್ಟಿವೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತ, ಅದಕ್ಕೆ ಹೊಂದಿಕೊಂಡು ಹೋಗುವುದರಲ್ಲಿ ಖುಷಿಯಿದೆ. ಮನಸ್ಸು ಬಹಳ ಮುಖ್ಯ, ಆದರೆ ಹಣವೂ ಅಷ್ಟೇ ಮುಖ್ಯ.
‘ಹೊಟ್ಟೆ ತುಂಬಿದೆ’ ಎಂಬ ಭಾವನೆಯಿಂದ ಹೊಟ್ಟೆ ತುಂಬುತ್ತದೆಯೇ? ಹೊಟ್ಟೆ ತುಂಬಲು ಆಹಾರ ಬೇಕು, ಬರೀ ಭಾವನೆಯಿಂದ ಅದು ಸಾಧ್ಯವಿಲ್ಲ. ಒಟ್ಟಾರೆ ಹೇಳಬೇಕೆಂದರೆ, ಸರಳ ವಾಗಿದ್ದ ಬದುಕು ಸಂಕೀರ್ಣವಾಗಿದೆ. ನನ್ನ ತಾತ, ಮುತ್ತಾತ ಯಾವ ಕಾರ್ಪೊರೇಟ್ ಸಂಸ್ಥೆ ಯಲ್ಲೂ ಕೆಲಸ ಮಾಡಲಿಲ್ಲ. ಇಂದು ನಾವು ನೋಡುತ್ತಿರುವಷ್ಟು ಹಣವನ್ನೂ ಅವರು ನೋಡಲಿಲ್ಲ.
ಯಾರ ಹಂಗಿನಲ್ಲೂ ಕೆಲಸ ಮಾಡಲಿಲ್ಲ. ಆ ಲೆಕ್ಕಾಚಾರದಲ್ಲಿ ಆತ ‘ನೆವರ್ ಎಂಪ್ಲಾಯ್ಡ್’! ಅವರು ಜಿಡಿಪಿ ಲೆಕ್ಕವನ್ನು ಹೆಚ್ಚಿಸಲಿಲ್ಲ. ಆದರೆ ನಮಗಿಂತ ಹೆಚ್ಚು ಆರೋಗ್ಯಕರವಾಗಿ, ನೆಮ್ಮದಿಯಾಗಿ ಬದುಕಿ ಹೋದರು, ಅಲ್ಲವೇ? ಇದೆಲ್ಲವನ್ನೂ ನಾವು ಮತ್ತೆ ಯೋಚಿಸ ಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಅದಕ್ಕೆ ಬಹಳ ಕಾಯುವ ಅವಶ್ಯಕತೆ ಕೂಡ ಇಲ್ಲ.