ಸಂಪಾದಕರ ಸದ್ಯಶೋಧನೆ
ಜೇಮ್ಸ್ ಗ್ಲೋವರ್ ಥರ್ಬರ್ ಅಮೆರಿಕನ್ ಹಾಸ್ಯ ಸಾಹಿತ್ಯ ಮತ್ತು ವ್ಯಂಗ್ಯಚಿತ್ರ ಲೋಕ ಕಂಡ ಅಪರೂಪದ ಪ್ರತಿಭೆ. ಇಪ್ಪತ್ತನೇ ಶತಮಾನದ ಶ್ರೇಷ್ಠ ಹಾಸ್ಯಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡ ಥರ್ಬರ್, ದೈನಂದಿನ ಜೀವನದ ಸಣ್ಣಪುಟ್ಟ ವಿಚಿತ್ರಗಳು, ಕೌಟುಂಬಿಕ ತಲ್ಲಣಗಳು ಮತ್ತು ಮನುಷ್ಯನ ಅಸಹಾಯಕತೆಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದರು.
ಕೇವಲ ಲೇಖಕರಾಗಿ ಮಾತ್ರವಲ್ಲ, ಸರಳ ರೇಖೆಗಳ ಮೂಲಕ ಅಪಾರ ಭಾವನೆಗಳನ್ನು ಕಟ್ಟಿಕೊಡುವ ವ್ಯಂಗ್ಯಚಿತ್ರಕಾರರಾಗಿಯೂ ಅವರು ಜಾಗತಿಕ ಗಮನ ಸೆಳೆದರು. ಥರ್ಬರ್ ಜನಿಸಿದ್ದು ಅಮೆರಿಕದ ಒಹಾಯೊ ರಾಜ್ಯದ ಕೊಲಂಬಸ್ನಲ್ಲಿ. ಅವರ ಬಾಲ್ಯವು ಸಾಮಾನ್ಯವಾಗಿದ್ದರೂ, ಅಲ್ಲಿ ನಡೆದ ಒಂದು ದುರಂತ ಘಟನೆ ಅವರ ಇಡೀ ಜೀವನದ ಗತಿಯನ್ನೇ ಬದಲಿಸಿತು. ಸಹೋದರ ನೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಣವೊಂದು ಬಡಿದು ಅವರ ಎಡಗಣ್ಣಿನ ದೃಷ್ಟಿ ಕಳೆದುಹೋಯಿತು.
ಕಾಲಕ್ರಮೇಣ ಅವರ ಮತ್ತೊಂದು ಕಣ್ಣಿನ ದೃಷ್ಟಿಯೂ ಮಂಕಾಗುತ್ತಾ ಬಂತು. ಆದರೆ, ಈ ದೈಹಿಕ ನ್ಯೂನತೆಯು ಅವರ ಕಲ್ಪನಾಶಕ್ತಿಯನ್ನು ಕುಂಠಿತಗೊಳಿಸಲಿಲ್ಲ. ಬದಲಿಗೆ ಅವರ ಅಂತರಂಗದ ನೋಟವನ್ನು ಇನ್ನಷ್ಟು ಹರಿತಗೊಳಿಸಿ, ವಿಶಿಷ್ಟ ಹಾಸ್ಯಪ್ರಜ್ಞೆಯನ್ನು ರೂಪಿಸಲು ಕಾರಣವಾಯಿತು.
ಇದನ್ನೂ ಓದಿ: Vishweshwar Bhat Column: ಕೊಟ್ಟು ಕಿತ್ತುಕೊಂಡ ಸರಕಾರ, ನೈಜ ಸಾಧಕನಿಗೆ ರಾಜ್ಯೋತ್ಸವ ಪ್ರಶಸ್ತಿ ʼಅಪಚಾರ!
ಓಹಾಯೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ, ಥರ್ಬರ್ ಪತ್ರಿಕೋದ್ಯಮದತ್ತ ಆಕರ್ಷಿತರಾದರು. ‘ಕೊಲಂಬಸ್ ಡಿಸ್ಪ್ಯಾಚ್’ ಪತ್ರಿಕೆಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ನಂತರ ಪ್ಯಾರಿಸ್ ಮತ್ತು ನ್ಯೂಯಾರ್ಕ್ಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು. 1927ರಲ್ಲಿ ಪ್ರಸಿದ್ಧ ಸಾಪ್ತಾಹಿಕವಾದ ‘ದಿ ನ್ಯೂಯಾರ್ಕರ್’ ಪತ್ರಿಕೆಯ ಸಂಪಾದಕೀಯ ಬಳಗವನ್ನು ಸೇರಿದ್ದು ಅವರ ಬದುಕಿನ ಮಹತ್ವದ ತಿರುವು.
ಅಲ್ಲಿ ಸಹೋದ್ಯೋಗಿ ಮತ್ತು ಶ್ರೇಷ್ಠ ಲೇಖಕ ಇ.ಬಿ.ವೈಟ್ ಅವರೊಂದಿಗೆ ಬೆಳೆದ ಒಡನಾಟವು ಥರ್ಬರ್ ಅವರ ಬರವಣಿಗೆಗೆ ಹೊಸ ಆಯಾಮವನ್ನು ನೀಡಿತು. ಥರ್ಬರ್ ಅವರ ಕಥೆಗಳಲ್ಲಿ ನೈಜ ಬದುಕಿನ ವಿಚಿತ್ರ ಸನ್ನಿವೇಶಗಳು ಮತ್ತು ಅತಿವಾಸ್ತವಿಕ (surreal) ಅಂಶಗಳು ಅದ್ಭುತವಾಗಿ ಸಮ್ಮಿಳಿತಗೊಂಡಿರುತ್ತವೆ. ಅವರ ಕೃತಿಗಳ ಪೈಕಿ ಅತ್ಯಂತ ಪ್ರಸಿದ್ಧವಾದುದು 1939ರಲ್ಲಿ ಪ್ರಕಟವಾದ ‘ದಿ ಸೀಕ್ರೆಟ್ ಲೈಫ್ ಆಫ್ ವಾಲ್ಟರ್ ಮಿಟ್ಟಿ’.
ದೈನಂದಿನ ವಾಸ್ತವದ ಜಂಜಾಟ ಮತ್ತು ದಬಾವಣೆಗಳಿಂದ ತಪ್ಪಿಸಿಕೊಳ್ಳಲು ಸದಾ ಧೀರ ಸಾಹಸಿಗನಂತೆ ಹಗಲುಗನಸು ಕಾಣುವ ಸಾಮಾನ್ಯ ವ್ಯಕ್ತಿಯೊಬ್ಬನ ಕಥೆಯಿದು. ಈ ಕಥೆ ಜಾಗತಿಕವಾಗಿ ಎಷ್ಟು ಜನಪ್ರಿಯ ವಾಯಿತೆಂದರೆ, ಹಗಲುಗನಸು ಕಾಣುವ ವ್ಯಕ್ತಿಗಳಿಗೆ ಇಂಗ್ಲಿಷ್ನಲ್ಲಿ ‘ಮಿಟ್ಟಿಯೆ’ (Mittyesque) ಎಂಬ ಶಬ್ದವೇ ಬಳಕೆಗೆ ಬಂದಿತು. ಲೇಖಕನಾಗಿ ಮಾತ್ರವಲ್ಲ, ವ್ಯಂಗ್ಯಚಿತ್ರಕಾರರಾಗಿಯೂ ಥರ್ಬರ್ ಸೃಷ್ಟಿಸಿದ ಛಾಪು ಅನನ್ಯ. ಕಣ್ಣಿನ ದೃಷ್ಟಿ ಮಂಕಾಗಿದ್ದ ಕಾರಣ, ಅವರು ಯಾವುದೇ ಅಲಂಕಾರವಿಲ್ಲದ, ತೀರಾ ಸರಳವಾದ ರೇಖೆಗಳಿಂದ ಚಿತ್ರಗಳನ್ನು ಬಿಡಿಸುತ್ತಿದ್ದರು. ಅವರ ಚಿತ್ರಗಳಲ್ಲಿ ಬರುವ ವಿಷಣ್ಣ ಮುಖದ ಮನುಷ್ಯರು, ಅಗಲ ಕಿವಿಗಳುಳ್ಳ ವಿಚಿತ್ರ ನಾಯಿಗಳು ಅವರ ಹೆಗ್ಗುರುತಾಗಿದ್ದವು.
ಕಲಾತ್ಮಕ ನಿಖರತೆಗಿಂತ ಸನ್ನಿವೇಶದ ಹಾಸ್ಯ ಮತ್ತು ಮನುಷ್ಯನ ಆಂತರಿಕ ಅಸಹಾಯಕತೆಯನ್ನು ಈ ಸರಳ ರೇಖಾಚಿತ್ರಗಳು ಮಾರ್ಮಿಕವಾಗಿ ತೆರೆದಿಡುತ್ತಿದ್ದವು. ದಿ ನ್ಯೂಯಾರ್ಕರ್ ಪತ್ರಿಕೆಯ ಪುಟಗಳಲ್ಲಿ ಅವರ ಕಾರ್ಟೂನ್ಗಳಿಗೆ ಪ್ರತ್ಯೇಕ ಓದುಗ ಬಳಗವೇ ಇತ್ತು. ಥರ್ಬರ್ ಅವರ ಹಾಸ್ಯವು ಮೇಲ್ನೋಟಕ್ಕೆ ನಗೆ ತರಿಸಿದರೂ, ಅದರ ಆಳದಲ್ಲಿ ವಿಷಾದದ ಎಳೆಯೊಂದು ಸದಾ ಹರಿಯುತ್ತಿರುತ್ತದೆ.
ಪುರುಷ ಮತ್ತು ಮಹಿಳೆಯರ ನಡುವಿನ ದಾಂಪತ್ಯ ಕಲಹಗಳು, ಪರಸ್ಪರ ಅರ್ಥಮಾಡಿಕೊಳ್ಳ ಲಾಗದ ಅಂತರಂಗದ ಸಂಘರ್ಷಗಳು ಹಾಗೂ ಬದಲಾಗುತ್ತಿರುವ ಆಧುನಿಕ ಯಂತ್ರಯುಗಕ್ಕೆ ಹೊಂದಿಕೊಳ್ಳ ಲಾಗದ ಸಾಮಾನ್ಯ ಮನುಷ್ಯನ ಪರದಾಟ ಅವರ ಬರವಣಿಗೆಯ ಕೇಂದ್ರಬಿಂದು ವಾಗಿತ್ತು. ಎಲ್ಲಿಯೂ ಕಟುವಾದ ನಿಂದನೆಗೆ ಇಳಿಯದೇ, ಕರುಣೆಯ ಬೆಸುಗೆಯೊಂದಿಗೆ ವಿಡಂಬನೆ ಮಾಡುವುದು ಅವರ ಶೈಲಿಯ ದೊಡ್ಡ ಶಕ್ತಿಯಾಗಿತ್ತು. ಅವರ ಆತ್ಮಕಥನಾತ್ಮಕ ಕೃತಿ ‘ಮೈ ಲೈಫ್ ಆಂಡ್ ಹಾರ್ಡ್ ಟೈಮ್ಸ್’ ಅಮೆರಿಕನ್ ಹಾಸ್ಯ ಸಾಹಿತ್ಯದ ಅತ್ಯುತ್ತಮ ಕ್ಲಾಸಿಕ್ಗಳಲ್ಲಿ ಒಂದೆಂದು ಪರಿಗಣಿತವಾಗಿದೆ.
ತಮ್ಮ ಕುಟುಂಬದ ಸದಸ್ಯರ ವಿಚಿತ್ರ ಸ್ವಭಾವಗಳು, ರಾತ್ರೋರಾತ್ರಿ ಮನೆಯಲ್ಲಿ ಸೃಷ್ಟಿಯಾಗುತ್ತಿದ್ದ ಗೊಂದಲಗಳು ಮತ್ತು ಬಾಲ್ಯದ ಮೋಜಿನ ದಿನಗಳನ್ನು ಇದರಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಇಷ್ಟೇ ಅಲ್ಲದೆ, ‘ದಿ ಥರ್ಬರ್ ಕಾರ್ನಿವಲ್’, ‘ದಿ 13 ಕ್ಲಾಕ್ಸ್’ ಹಾಗೂ ಸಾಂಪ್ರದಾಯಿಕ ನೀತಿಕಥೆಗಳನ್ನು ಆಧುನಿಕ ಜಗತ್ತಿಗೆ ತಕ್ಕಂತೆ ಹೊಸದಾಗಿ ಹೆಣೆದ ‘ಫೇಬಲ್ಸ್ ಫಾರ್ ಅವರ್ ಟೈಮ್’ ಕೃತಿಗಳು ಅವರ ಸೃಜನಶೀಲತೆಗೆ ಹಿಡಿದ ಕನ್ನಡಿ.