ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R T Vittalmurthy Column: ಜಮೀರ್‌ ಕೋಟೆಗೆ ʼನಾಹುʼ ಸಾಬ್‌ ಲಗ್ಗೆ

ಯಾವಾಗ ‘ನಾಹು’ಸಾಬ್ ತಮ್ಮ ಕೋಟೆಗೆ ಲಗ್ಗೆ ಹಾಕಲು ಹೊರಟಿದ್ದಾರೆ ಮತ್ತು ಎಐಸಿಸಿ ಲೆವೆಲ್ಲಿನಲ್ಲಿ ಕೆಲ ನಾಯಕರು ಇದಕ್ಕೆ ‘ತಾಕತ್ ಕೀ ದವಾ’ ನೀಡುತ್ತಿದ್ದಾರೆ ಎಂಬುದು ಕನರ್ಮ್ ಆಯಿತೋ ಅಗ ಜಮೀರ್ ಅಹ್ಮದ್ ಅವರು ಈ ಗೇಮ್ ಪ್ಲಾನಿಗೆ ಶಕ್ತಿ ತುಂಬುವ ಜಾಗದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಂಪರ್ಕಿಸಿದ್ದಾರೆ.

ಮೂರ್ತಿಪೂಜೆ

ಮೊನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಸಂಪರ್ಕಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಅವರು ಹಲವು ಧರ್ಮಸೂಕ್ಷ್ಮಗಳನ್ನು ವಿವರಿಸಿದ್ದಾರಂತೆ. ಅಂದ ಹಾಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜಮೀರ್ ಅಹ್ಮದ್ ಈ ರೀತಿ ತಗಲಿಕೊಳ್ಳಲು ಅಷ್ಟೊತ್ತಿಗಾಗಲೇ ಹಬ್ಬಿದ್ದ ಪುಕಾರುಗಳು ಕಾರಣ.

ಇಂತಹ ಪುಕಾರುಗಳ ಪ್ರಕಾರ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಸೋಲಿಸಲು ಜಮೀರ್ ಅಹ್ಮದ್ ಒಳಸಂಚು ಮಾಡಿದರು. ಕಣದಲ್ಲಿದ್ದ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿಗೆ ಫಂಡು ಕೊಟ್ಟು ಮುಸ್ಲಿಂ ಮತಗಳು ವಿಭಜನೆಯಾಗಲು ಕಾರಣರಾದರು. ಅವರ ಇಂತಹ ಪ್ರಯತ್ನಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮತ್ತು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಕೂಡಾ ಸಾಥ್ ನೀಡಿದರು. ಹೀಗಾಗಿ ಈ ಮೂವರ ವಿರುದ್ಧ ಶಿಸ್ತುಕ್ರಮ ಗ್ಯಾರಂಟಿ ಎಂಬುದು.

ಅಂದ ಹಾಗೆ ಇಂತಹ ಪುಕಾರುಗಳಿಗೆ ಪುಷ್ಟಿ ನೀಡುವಂತೆ ಎಐಸಿಸಿ ವಿಪರೀತ ಆಕ್ಟೀವ್ ಆಗಿದ್ದಲ್ಲದೆ ಜಬ್ಬಾರ್ ಖಾನ್ ಅವರನ್ನು ಪಕ್ಷದ ಅಲ್ಪಸಂಖ್ಯಾತರ ಘಟಕದಿಂದ, ನಜೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿತ್ತು.

ಮೂಲಗಳ ಪ್ರಕಾರ, ಎಐಸಿಸಿ ಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಂದ ಸಂದೇಶ ಜಮೀರ್ ಅಹ್ಮದ್ ವಿರುದ್ಧ ಕೋಪ ಪ್ರದರ್ಶಿಸಿತ್ತು. ಆದರೆ ಈ ಎಲ್ಲ ವಿವರ ಪಡೆದ ಸಚಿವ ಜಮೀರ್ ಅಹ್ಮದ್ ಅವರಿಗೆ ಒಂದು ವಿಷಯವನ್ನು ಕನ್ಫರ್ಮ್ ಮಾಡಿದೆ. ಅದರ ಪ್ರಕಾರ ಕರ್ನಾಟಕದ ಮುಸ್ಲಿಂ ಮತ ಬ್ಯಾಂಕಿನ ಮೇಲೆ ತಮಗಿರುವ ಹಿಡಿತವನ್ನು ತಪ್ಪಿಸಿ, ತಾವು ಅದರ ಮೇಲೆ ಹಿಡಿತ ಸಾಧಿಸಲು ಎಐಸಿಸಿ ಲೆವೆಲ್ಲಿನಲ್ಲಿ ಸುಳಿದಾಡುತ್ತಿರುವ ‘ನಾಹು’ಸಾಬ್ ಪ್ರಯತ್ನಿಸುತ್ತಿದ್ದಾರೆ ಎಂಬು ದು. ಮತ್ತು ‘ನಾಹು’ಸಾಬ್ ಕೊಟ್ಟ ಸಿಗ್ನಲ್ಲಿನ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲ ಮುಸ್ಲಿಂ ನಾಯಕರು ತಮ್ಮ ವಿರುದ್ಧ ಮಾತನಾಡಿದ್ದಾರೆ ಎಂಬುದು ಜಮೀರ್ ಅಹ್ಮದ್ ಅವರಿಗೆ ಬಂದ ಮಾಹಿತಿ.

ಇದನ್ನೂ ಓದಿ: R‌ T Vittalmurthy Column: ಶಾಮನೂರು ಕೋಟೆಯಲ್ಲಿ ಸಂಪತ್ತಿಗೆ ಸವಾಲ್

ಯಾವಾಗ ‘ನಾಹು’ಸಾಬ್ ತಮ್ಮ ಕೋಟೆಗೆ ಲಗ್ಗೆ ಹಾಕಲು ಹೊರಟಿದ್ದಾರೆ ಮತ್ತು ಎಐಸಿಸಿ ಲೆವೆಲ್ಲಿ ನಲ್ಲಿ ಕೆಲ ನಾಯಕರು ಇದಕ್ಕೆ ‘ತಾಕತ್ ಕೀ ದವಾ’ ನೀಡುತ್ತಿದ್ದಾರೆ ಎಂಬುದು ಕನ್ಫರ್ಮ್ ಆಯಿತೋ ಅಗ ಜಮೀರ್ ಅಹ್ಮದ್ ಅವರು ಈ ಗೇಮ್ ಪ್ಲಾನಿಗೆ ಶಕ್ತಿ ತುಂಬುವ ಜಾಗದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಂಪರ್ಕಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ತಮ್ಮ ಬಳಿ ಎತ್ತಿದ ಧರ್ಮಸೂಕ್ಷ್ಮಗಳು ಮತ್ತು ಒಳವಿವರವನ್ನು ಕೇಳಿದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ‘ನನಗೂ ಇದರ ಬಗ್ಗೆ ಒಂದಷ್ಟು ಮಾಹಿತಿ ಇದೆ ಜಮೀರ್ ಜೀ. ಹೀಗಾಗಿ ನಿಮ್ಮ ವಿರುದ್ಧ ತಕ್ಷಣ ಆಕ್ಷನ್ ಆಗಬೇಕು ಎಂಬ ಒತ್ತಾಯಗಳನ್ನು ನಾನು ತಳ್ಳಿ ಹಾಕಿದ್ದೇನೆ’ ಎಂದರಂತೆ.

ಜಮೀರ್ ಅಹ್ಮದ್ ಹೇಳಿದ್ದೇನು?

ಅಂದ ಹಾಗೆ ಅವತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಬಳಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು? ಮೂಲಗಳ ಪ್ರಕಾರ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಣದಲ್ಲಿ ತಾವು, ನಜೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಸಕ್ರಿಯವಾಗಿ ಕೆಲಸ ಮಾಡಲು ಏಕೆ ಸಾಧ್ಯವಾಗಿಲ್ಲ ಅಂತ ಜಮೀರ್ ಅಹ್ಮದ್ ವಿವರಿಸಿದ್ದಾರೆ.

ಅದರ ಪ್ರಕಾರ,‘ತಮಗೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಿರುಗಾಡುವಂತೆ ಪಕ್ಷ ಸೂಚಿಸಿತ್ತು. ಹೀಗೆ ಅಲ್ಲಿನ ಜವಾಬ್ದಾರಿ ಇರುವಾಗ ಇಲ್ಲಿ ಎಷ್ಟು ಅಂತ ತಿರುಗಾಡಲು ಸಾಧ್ಯ? ಇದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರ ತಂದೆ, ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ‘ನಮ್ಮ ಕ್ಷೇತ್ರದ ವಿಷಯ ಮಾತನಾಡಲು ಜಮೀರ್ ಯಾರು? ಅಂತ ಕೇಳಿದ್ದಾರೆ.

ಹೀಗಾಗಿ ನನಗೂ ಇಗೋ ಹರ್ಟ್ ಆಗಿರುತ್ತೆ ಸಾರ್. ಇನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ನಜೀರ್ ಅಹ್ಮದ್ ಅವರಿಗೆ ಬಾಗಲಕೋಟೆಯಲ್ಲಿ ಕೆಲಸ ಮಾಡಲು ಸೂಚಿಸಲಾಗಿತ್ತು. ಹೀಗಿರು ವಾಗ ಅವರು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎಷ್ಟು ಅಂತ ಕೆಲಸ ಮಾಡಲು ಸಾಧ್ಯ? ಇನ್ನು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಪಕ್ಕದ ಮನೆಗೆ ಹೋದರೂ ಸಚಿವ ಮಲ್ಲಿಕಾರ್ಜುನ್ ಅವರು ಜಬ್ಬಾರ್ ಅವರ ಮನೆಗೆ ಹೋಗಲಿಲ್ಲ.

ಅವರೂ ಸೀನಿಯರ್ ಲೀಡರು ತಾನೇ? ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ತಾನೇ?’ ಅಂತ ಜಮೀರ್ ಕೇಳಿದ್ದಾರೆ. ಹಾಗೆಯೇ ಮುಂದುವರಿದು: ಇನ್ನು ಸಮರ್ಥ ಅವರನ್ನು ಸೋಲಿಸಲು ಕ್ಷೇತ್ರದಲ್ಲಿ ನಿಂತ ಇಬ್ಬರಿಗೆ ನಾನು ಫಂಡಿಂಗ್ ಮಾಡಿದ್ದೇನೆ ಎಂಬುದು ಬೇಸ್ ಲೆಸ್ ಸಾರ್. ಹೀಗೆ ಕಣದಲ್ಲಿದ್ದ ಮುಸ್ಲಿಮರ ಪೈಕಿ ಇಬ್ಬರಿಗೆ ಫಂಡ್ ಮಾಡಿದ್ದು ಬೇರೆ ಪಾರ್ಟಿ ನಾಯಕರು.

ಯಾಕೆಂದರೆ ಸಮರ್ಥ್ ಸೋತರೆ ಗೆಲ್ಲುವುದು ಯಾರು? ಅವರ ಪಾರ್ಟಿ ಕ್ಯಾಂಡಿಡೇಟ್ ತಾನೇ? ಹೀಗಾಗಿ ಇದೆಲ್ಲ ಸುಳ್ಳು. ಇನ್ನು ನೇರವಾಗಿ ಹೇಳುವುದಾದರೆ ಬೈ ಎಲೆಕ್ಷನ್ ರಿಸಲ್ಟೇ ಬಂದಿಲ್ಲ. ಹೀಗಿರುವಾಗ ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇವೆ ಎಂಬ ತೀರ್ಮಾನಕ್ಕೆ ಹೇಗೆ ಬಂದಿರಿ?ಕಳೆದ ಪಾರ್ಲಿಮೆಂಟ್ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಹೋದ ಶಾಮನೂರು ಶಿವಶಂಕರಪ್ಪನವರು,‘ಇಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಅಂತ ಓಪನ್ನಾಗಿ ಹೇಳಿದರು. ಅವರಿಗೆ ಪಕ್ಷ ಒಂದು ನೋಟೀಸ್ ಕೊಡಲಿಲ್ಲ. ಆದರೆ ಈ ಪ್ರಕರಣದಲ್ಲಿ ನೋಟಿಸೂ ಕೊಡದೆ ಕ್ರಮ ಜರುಗಿಸಲು ಹೊರಟಿದ್ದೀರಿ. ಇದ್ಯಾವ ನ್ಯಾಯ?’ ಅಂತ ಕೇಳಿದಾಗ, ‘ನೋ ನೋ, ನಾನು ಶಾಮನೂರು ಶಿವಶಂಕರಪ್ಪ ಅವರಿಗೆ ನೋಟೀಸು ಕೊಡಲು ಮುಂದಾಗಿದ್ದೆ. ಆದರೆ ಎಐಸಿಸಿಯ ಟಾಪ್ ಲೀಡರ್ ಒಬ್ಬರು ನೋಟೀಸು ಕೊಡುವುದು ಬೇಡ ಅಂತ ತಡೆದರು’ ಅಂತ ಹೇಳಿದ್ದಾರೆ.

ಅಷ್ಟೇ ಅಲ್ಲ,‘ನಿಮ್ಮ ವಿರುದ್ಧ ಆಕ್ಷನ್ ತೆಗೆದುಕೊಳ್ಳಬೇಕೆಂಬ ಒತ್ತಡಕ್ಕೂ ನಾನು ಬಗ್ಗಿಲ್ಲ’ ಎಂದಿದ್ದಾರೆ.

ಜಮೀರ್ ಹೋದ್ರೆ ಹಂಗ್ ಅಸೆಂಬ್ಲಿ

ಈ ಮಧ್ಯೆ ಕರ್ನಾಟಕದ ಮುಸ್ಲಿಂ ಮತ ಬ್ಯಾಂಕನ್ನು ವಶಪಡಿಸಿಕೊಳ್ಳಲು ‘ನಾಹು’ಸಾಬ್ ಅತ್ಯಾತುರ ದಲ್ಲಿರುವುದನ್ನು ಗಮನಿಸಿದ ಸಿಎಂ ಸಿದ್ದು ಪಾಳಯ, ಎಐಸಿಸಿಯ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

‘ಒಂದು ವೇಳೆ ಬೇಸ್ ಲೆಸ್ಸಾಗಿ ಜಮೀರ್ ಅಹ್ಮದ್ ಅವರ ವಿರುದ್ಧ ಕ್ರಮ ಕೈಗೊಂಡರೆ, ಆ ಮೂಲಕ ಅವರು ಪಕ್ಷ ತೊರೆದರೆ ನೆನಪಿಡಿ... ಮುಂದಿನ ಚುನಾವಣೆಯಲ್ಲಿ ಕರ್ನಾಟಕ ಹಂಗ್ ಅಸೆಂಬ್ಲಿ ನೋಡುತ್ತದೆ ಮತ್ತು ಈ ಹಂಗ್ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಪಕ್ಷ ತಪ್ಪಿಯೂ ಅಧಿಕಾರದ ಪಾಲುದಾರ ಆಗುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.

ಅದರ ಪ್ರಕಾರ,‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದ ಸೀಟುಗಳ ಪೈಕಿ ಐವತ್ತೊಂದು ಕ್ಷೇತ್ರಗಳಲ್ಲಿ ದಲಿತರು, ಮುಸ್ಲಿಮರು ಶಾಸಕರಾಗಿದ್ದಾರೆ. ಅದೇ ರೀತಿ ಆ ಸಮುದಾಯಗಳ ಬೆಂಬಲ ದಿಂದ ಉಳಿದ ಬಹುತೇಕರು ಗೆದ್ದಿದ್ದಾರೆ. ಅವತ್ತು ಮುಸ್ಲಿಮರು, ದಲಿತರು ಸಾಲಿಡ್ಡಾಗಿ ನಿಲ್ಲಲು ಅವರಿಗೆ ಬಿಜೆಪಿ ಬಗೆಗಿದ್ದ ಅತಂಕವೇ ಕಾರಣ.

ಹೀಗಿರುವಾಗ ಇವತ್ತು ಜಮೀರ್ ಅಹ್ಮದ್ ಅವರ ವಿರುದ್ಧ ಕ್ರಮವಾದರೆ ಅದನ್ನು ಮುಸ್ಲಿಂ ಮತ ಬ್ಯಾಂಕು ಪರ್ಸನಲ್ಲಾಗಿ ನೋಡುತ್ತದೆ. ಇವತ್ತು ನೀವು ಹುಡುಕಿದರೂ ಮುಸ್ಲಿಂ ಮತ ಬ್ಯಾಂಕಿನ ಮುಂದೆ ಜಮೀರ್ ಅಹ್ಮದ್ ಅವರಷ್ಟು ಪವರ್ ಪುಲ್ ನಾಯಕ ಕಾಣುವುದಿಲ್ಲ. ಹೀಗಾಗಿ ಈ ವಿಷಯದಲ್ಲಿ ತುಂಬ ಮುಂದುವರಿಯದೆ ಸುಮ್ಮನಿರುವುದು ಒಳ್ಳೆಯದು’ ಎಂಬುದು ಸಿದ್ದು ಕ್ಯಾಂಪಿನ ಮಾತು.

ಮೂಲಗಳ ಪ್ರಕಾರ, ಈ ಎಚ್ಚರಿಕೆಯನ್ನು ಮೀರಿ ಕಾಂಗ್ರೆಸ್ ವರಿಷ್ಟರು ‘ನಾಹು’ಸಾಬ್ ಮಾತಿನಂತೆ ನಡೆದರೆ ದಿಲ್ಲಿ ಲೆವೆಲ್ಲಿನ ಹಲವು ನಾಯಕರು ತಿರುಗಿ ಬೀಳಲಿದ್ದಾರೆ.

ಯಡಿಯೂರೋತ್ಸವ ಮುಂದಕ್ಕೆ?

ಇನ್ನು ಪಕ್ಷಕ್ಕೆ ಟಾನಿಕ್ ನೀಡಲು ಚಿತ್ರದುರ್ಗದಲ್ಲಿ ಯಡಿಯೂರೋತ್ಸವ ಏರ್ಪಡಿಸಲು ಬಿಜೆಪಿ ನಿರ್ಧರಿಸಿತ್ತಲ್ಲ? ಲೆಕ್ಕಾಚಾರದ ಪ್ರಕಾರ ಈ ಉತ್ಸವವನ್ನು ಮೇ ಒಂಭತ್ತರ ಹೊತ್ತಿಗೆ ನಡೆಸಲು ಯೋಚಿಸಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಂದ ನಂತರ ಯಡಿಯೂರೋತ್ಸವದ ಡೇಟು ಫಿಕ್ಸಾಗಲಿದೆ.

ಅಂದ ಹಾಗೆ ಯಡಿಯೂರೋತ್ಸವ ನಡೆಸಲು, ಪಕ್ಷದ ಟಿ.ಆರ್.ಪಿ ಹೆಚ್ಚಿಸಲು ಶುರುವಿನಲ್ಲಿ ಬಿಜೆಪಿಯ ಹಲ ನಾಯಕರು ತುಂಬ ಆಸಕ್ತಿ ತೋರಿಸಿದ್ದರು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸಿದ್ಧರಾಮೋತ್ಸವ ಮಾಡಿದ ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಯಲ್ಲಿ ಬಂಪರ್ ಲಾಭ ಗಳಿಸಿತು. ಈಗ ನಾವು ಯಡಿಯೂರೋತ್ಸವ ಮಾಡಿದರೆ ನಮ್ಮ ಪಕ್ಷದ ನಡೆ ಅಧಿಕಾರದ ಕಡೆ ಸಾಗುವುದು ಗ್ಯಾರಂಟಿ ಎಂಬುದು ಈ ನಾಯಕರ ಲೆಕ್ಕಾಚಾರವಾಗಿತ್ತು.

ಆದರೆ ಇತ್ತೀಚೆಗೆ ನಡೆದ ಉಪಚುನಾವಣೆಯ ನಂತರ ಯಡಿಯೂರೋತ್ಸವದ ಜವಾಬ್ದಾರಿ ಹೊತ್ತ ಕೆಲ ನಾಯಕರಲ್ಲಿ ಸಣ್ಣದೊಂದು ಡೌಟು ಶುರುವಾಗಿದೆ. ಅವರ ಪ್ರಕಾರ, ದಾವಣಗೆರೆಯಲ್ಲಿ ಮುಸ್ಲಿಮರು ಕಾಂಗ್ರೆಸ್ಸಿಗೆ ಅಡ್ಡೇಟು ಹೊಡೆದಿದ್ದಾರಾದರೂ ಅದು ಐವತ್ತು ಪರ್ಸೆಂಟಿನಷ್ಟು ಎಂಬುದು ಸುಳ್ಳು. ಇದೇ ರೀತಿ ಪಕ್ಷ ದಾವಣಗೆರೆಯಲ್ಲಿ ಲಿಂಗಾಯತ ಸಮುದಾಯ ಸಾಲಿಡ್ಡಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಮತ ಕೊಟ್ಟಿರುವ ಸಾಧ್ಯತೆ ಜಾಸ್ತಿ.

ಹೀಗಾಗಿ ಸಣ್ಣ ಅಂತರದಲ್ಲಾದರೂ ಸಮರ್ಥ್ ಗೆಲ್ಲಬಹುದು. ಇನ್ನು ಬಾಗಲಕೋಟೆಯಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ಇದೆಯಾದರೂ ಸಾಧ್ಯಾಸಾಧ್ಯತೆ ಫಿಫ್ಟಿ, ಫಿಫ್ಟಿ. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಒಂದು ಕಡೆ, ಇಲ್ಲವೇ ಎರಡು ಕಡೆ ಗೆಲ್ಲುತ್ತದೆ ಎಂಬುದು ಇನ್ನೂ ನಂಬಿಕೆ.

ಹೀಗಾಗಿ ಇಂತಹ ನಂಬಿಕೆ ಇಟ್ಟುಕೊಂಡು ಮೇ ಒಂಭತ್ತುರಂದು ಯಡಿಯೂರೋತ್ಸವ ಮಾಡು ವುದು ಸೇಫ್ ಅಲ್ಲ.‌ ಒಂದು ವೇಳೆ ಬಿಜೆಪಿ ಒಂದು ಸೀಟು ಗೆದ್ದರೂ ಓಕೆ. ಆದರೆ ಎರಡೂ ಕಡೆ ಸೋತು ಅದೇ ಬಿಸಿಯಲ್ಲಿ ಉತ್ಸವ ನಡೆಸಿದರೆ ಅದು ಪಕ್ಷಕ್ಕೆ ಹೇಳಿಕೊಳ್ಳುವಂತಹ ಲಾಭ ಕೊಡುವು ದಿಲ್ಲ. ಬದಲಿಗೆ ಕಾಂಗ್ರೆಸ್ಸಿನ ವಿಜಯೋತ್ಸವದ ನಡುವೆ ನಾವು ಸಂಭ್ರಮ ಆಚರಿಸಿದಂತಾಗಿ ಉತ್ಸವ ಡಲ್ಲು ಹೊಡೆಯುತ್ತದೆ.

ಹೀಗಾಗಿ ಉಪ ಚುನಾವಣೆಯ ಫಲಿತಾಂಶ ಬರುವವರೆಗೆ ಕಾಯೋಣ. ಒಂದು ಕ್ಷೇತ್ರದಲ್ಲಿ ಗೆದ್ದರೂ ಮೇ ತಿಂಗಳಲ್ಲಿ ಉತ್ಸವ ನಡೆಸಬಹುದು. ಇಲ್ಲದಿದ್ದರೆ ಇನ್ನಷ್ಟು ಕಾಲ ಮುಂದೂಡುವುದು ಬೆಟರ್ರು ಎಂಬುದು ಈ ನಾಯಕರ ಯೋಚನೆ. ಪರಿಣಾಮ? ಉಪಚುನಾವಣೆಯ ಫಲಿತಾಂಶ ಬಂದ ನಂತರ ಯಡಿಯೂರೋತ್ಸವದ ಡೇಟು ಫಿಕ್ಸಾಗಲಿದೆ.

ಕೊನೆಯ ಮಾತು

ಅಂದ ಹಾಗೆ ಉಪಚುನಾವಣೆಯ ಬೆನ್ನ ಜಮೀರ್ ಗ್ಯಾಂಗನ್ನು ಮೂಲೋಚ್ಛಾಟನೆ ಮಾಡಿ. ಸ್ವಲ್ಪ ತಡವಾದರೆ ಇದು ಕಷ್ಟ ಅಂತ ‘ನಾಹು’ಸಾಬ್ ಎಐಸಿಸಿ ವರಿಷ್ಟರಿಗೆ ಹೇಳಿದ್ದರಂತೆ. ಅವರು ಹೇಳಿದಂತೆ ಈಗ ಜಮೀರ್ ಕೇಸು ಟಫ್ ಆಗುತ್ತಿದೆ. ಕಾರಣ? ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ಗರಂ ಅಗಿರುವ ಕರ್ನಾಟಕದ ಮುಸ್ಲಿಂ ಧರ್ಮಗುರುಗಳು ಈಗ ಕಾಂಗ್ರೆಸ್ ಹೈಕಮಾಂಡ್‌ಗೇ ಎಚ್ಚರಿಕೆ ನೀಡಿzರೆ. ಪರಿಣಾಮ?ನೋಡನೋಡುತ್ತಿದ್ದಂತೆಯೇ ಜಮೀರ್ ಮತ್ತಷ್ಟು ಗಟ್ಟಿಯಾಗತೊಡಗಿದ್ದಾರೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author