ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಚಂಡಮಾರುತಗಳಿಗೆ ನಾಮಕರಣ

1953ರ ಮಹಾ ಚಂಡಮಾರುತ’ ಎಂದೋ ಅಥವಾ ಅಟ್ಲಾಂಟಿಕ್ ಸಾಗರದಲ್ಲಿ ನಿರ್ದಿಷ್ಟ ರೇಖಾಂಶದಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಎಂದೋ ಕರೆಯಲಾಗುತ್ತಿತ್ತು. ಆದರೆ, ಹವಾಮಾನ ಇಲಾಖೆಯ ವಿಜ್ಞಾನಿಗಳಿಗೆ, ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಇಂಥ ಸಂಕೀರ್ಣ ತಾಂತ್ರಿಕ ಸಂಖ್ಯೆಗಳು ಅಥವಾ ರೇಖಾಂಶ-ಅಕ್ಷಾಂಶಗಳ ಅಂಕಿ-ಅಂಶಗಳನ್ನು ನೆನಪಿ ನಲ್ಲಿಟ್ಟುಕೊಳ್ಳುವುದು ಅತ್ಯಂತ ಕಠಿಣ ವಾಗಿತ್ತು

ಸಂಪಾದಕರ ಸದ್ಯಶೋಧನೆ

ಜಗತ್ತಿನ ಯಾವುದೇ ಭಾಗದಲ್ಲಿ ತೀವ್ರ ಬಿರುಗಾಳಿ ಅಥವಾ ಚಂಡಮಾರುತ ಬೀಸಿದಾಗ, ಅವುಗಳಿಗೆ ಯಾರೋ ತಟ್ಟನೆ ಹೆಸರಿನ್ನಿಡುತ್ತಾರೆ. ನಂತರ ಎಲ್ಲರೂ ಆ ಚಂಡಮಾರುತವನ್ನು ಆ ಹೆಸರಿ ನಿಂದಲೇ ಕರೆಯುತ್ತಾರೆ. ಚಂಡಮಾರುತಗಳಿಗೆ ಈ ಹೆಸರುಗಳನ್ನು ಕೊಡುವವರು ಯಾರು? ಇವುಗಳ ಹಿಂದೆ ಇರುವ ವೈಜ್ಞಾನಿಕ, ಭೌಗೋಳಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳೇನು? ಹಿಂದಿನ ಕಾಲದಲ್ಲಿ ಚಂಡಮಾರುತಗಳನ್ನು ಅವು ಸಂಭವಿಸಿದ ದಿನಾಂಕ, ವರ್ಷ, ಅಕ್ಷಾಂಶ-ರೇಖಾಂಶಗಳು ಅಥವಾ ಅವು ಅಪ್ಪಳಿಸಿದ ಹಡಗು ಮತ್ತು ಸ್ಥಳಗಳ ಆಧಾರದ ಮೇಲೆ ಗುರುತಿಸಲಾಗುತ್ತಿತ್ತು.

ಉದಾಹರಣೆಗೆ, ‘1953ರ ಮಹಾ ಚಂಡಮಾರುತ’ ಎಂದೋ ಅಥವಾ ಅಟ್ಲಾಂಟಿಕ್ ಸಾಗರದಲ್ಲಿ ನಿರ್ದಿಷ್ಟ ರೇಖಾಂಶದಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಎಂದೋ ಕರೆಯಲಾಗುತ್ತಿತ್ತು. ಆದರೆ, ಹವಾಮಾನ ಇಲಾಖೆಯ ವಿಜ್ಞಾನಿಗಳಿಗೆ, ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಇಂಥ ಸಂಕೀರ್ಣ ತಾಂತ್ರಿಕ ಸಂಖ್ಯೆಗಳು ಅಥವಾ ರೇಖಾಂಶ-ಅಕ್ಷಾಂಶಗಳ ಅಂಕಿ-ಅಂಶಗಳನ್ನು ನೆನಪಿ ನಲ್ಲಿಟ್ಟುಕೊಳ್ಳುವುದು ಅತ್ಯಂತ ಕಠಿಣವಾಗಿತ್ತು.

ಎರಡನೇ ಮಹಾಯುದ್ಧದ ಸಮಯದಲ್ಲಿ, ಅಮೆರಿಕದ ಮಿಲಿಟರಿ ಹವಾಮಾನ ತಜ್ಞರು ಬಿರುಗಾಳಿ ಗಳನ್ನು ಸುಲಭವಾಗಿ ಗುರುತಿಸಲು ಮತ್ತು ಸಂವಹನ ನಡೆಸಲು ಮಹಿಳೆಯರ ಹೆಸರುಗಳನ್ನು ಬಳಸಲು ಪ್ರಾರಂಭಿಸಿದರು. ತದನಂತರ, 1970ರ ದಶಕದ ಕೊನೆಯಲ್ಲಿ ಲಿಂಗ ಸಮಾನತೆಯ ದೃಷ್ಟಿ ಯಿಂದ ಪುರುಷರ ಹೆಸರುಗಳನ್ನೂ ಈ ಪಟ್ಟಿಗೆ ಸೇರಿಸಿದರು.

ಇದನ್ನೂ ಓದಿ: Vishweshwar Bhat Column: ಲುಡ್ಡೈಟ್ಸ್ ಅಂದರೆ ಯಾರು ?

ಕಾಲಕ್ರಮೇಣ, ಈ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಶಿಸ್ತುಬದ್ಧ ಹಾಗೂ ವ್ಯವಸ್ಥಿತ ಚೌಕಟ್ಟಿಗೆ ತರಲಾಯಿತು. ಭೌಗೋಳಿಕವಾಗಿ ಜಗತ್ತಿನಾದ್ಯಂತ ಸೃಷ್ಟಿಯಾಗುವ ಚಂಡಮಾರುತ ಗಳನ್ನು ಅವುಗಳ ತೀವ್ರತೆ ಮತ್ತು ಪ್ರದೇಶಗಳ ಆಧಾರದ ಮೇಲೆ ವಿವಿಧ ಹೆಸರುಗಳಿಂದ ಕರೆಯ ಲಾಗುತ್ತದೆ.

ಅಟ್ಲಾಂಟಿಕ್ ಮತ್ತು ಈಶಾನ್ಯ ಪೆಸಿಫಿಕ್ ಸಾಗರದಲ್ಲಿ ಇವುಗಳನ್ನು ‘ಹರಿಕೇನ್’ ಎನ್ನಲಾಗುತ್ತದೆ, ವಾಯುವ್ಯ ಪೆಸಿಫಿಕ್‌ನಲ್ಲಿ ‘ಟೈಫೂನ್’ ಹಾಗೂ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ವಲಯದಲ್ಲಿ ‘ಸೈಕ್ಲೋನ್’ ಅಥವಾ ‘ಚಂಡಮಾರುತ’ ಎಂದು ಕರೆಯಲಾಗುತ್ತದೆ. ಚಂಡಮಾರುತ ಗಳಿಗೆ ಯಾರು ಬೇಕಾದರೂ ತಮಗಿಷ್ಟ ಬಂದ ಹಾಗೆ ಹೆಸರಿಡುವಂತಿಲ್ಲ.

ಇದರ ಹಿಂದೆ ವಿಶ್ವ ಹವಾಮಾನ ಸಂಸ್ಥೆಯ ಕಟ್ಟುನಿಟ್ಟಿನ ಆಡಳಿತಾತ್ಮಕ ನಿಯಮಗಳಿವೆ. ಜಗತ್ತಿನ ಸಾಗರ ವಲಯಗಳನ್ನು ಐದು ಪ್ರಮುಖ ಪ್ರಾದೇಶಿಕ ಹವಾಮಾನ ಸಂಸ್ಥೆಗಳಾಗಿ (Regional Specia lized Meteorological Centres - RSMC) ಮತ್ತು ಆರು ಪ್ರಾದೇಶಿಕ ಉಷ್ಣ ವಲಯದ ಚಂಡ ಮಾರುತ ಎಚ್ಚರಿಕೆ ಕೇಂದ್ರಗಳಾಗಿ ವಿಂಗಡಿಸಲಾಗಿದೆ.

ಬ್ರಿಟನ್‌ನ ‘ಮೆಟ್ ಆಫೀಸ್’(Met Office), ಐರ್ಲೆಂಡ್‌ನ ’Met Éireann’ ಮತ್ತು ನೆದರ್ಲ್ಯಾಂಡ್ಸ್‌ನ ’ KNMI’ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ಸಂಸ್ಥೆಗಳು ಪ್ರತಿ ವರ್ಷ ಶರತ್ಕಾಲ ದಲ್ಲಿ ಹೊಸ ಬಿರುಗಾಳಿಯ ಹಂಗಾಮು ಆರಂಭವಾಗುವ ಮುನ್ನ ಸಾರ್ವಜನಿಕರಿಂದ ಇಮೇಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಹೆಸರುಗಳ ಸಲಹೆಗಳನ್ನು ಆಹ್ವಾನಿಸುತ್ತವೆ.

ಸಾರ್ವಜನಿಕರಿಂದ ಬಂದ ಹೆಸರುಗಳನ್ನು ಇಂಗ್ಲಿಷ್ ವರ್ಣಮಾಲೆಯ (A to Z) ಕ್ರಮದಲ್ಲಿ ಜೋಡಿಸಲಾಗುತ್ತದೆ. ಉದಾಹರಣೆಗೆ: ಆರ್ವೆನ್, ಬರಾರ್, ಕೋರಿ, ಡಡ್ಲಿ, ಯೂನಿಸ್, ಗ್ಲಾಡಿಸ್, ಹರ್ಮನ್... ಹೀಗೆ. ಆದರೆ ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ Q, U, X, Y, Z ಅಕ್ಷರಗಳನ್ನು ಬಿರುಗಾಳಿಗಳ ಹೆಸರಿಡಲು ಬಳಸವುದಿಲ್ಲ, ಏಕೆಂದರೆ ಈ ಅಕ್ಷರಗಳಿಂದ ಆರಂಭವಾಗುವ ಹೆಸರು ಗಳು ವಿರಳ ಮತ್ತು ಗೊಂದಲಕಾರಿಯಾಗಿರುತ್ತವೆ.

ನಮ್ಮ ದೇಶಕ್ಕೆ ಸಂಬಂಧಿಸಿದಂತೆ, ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ವಲಯವನ್ನು ನವದೆಹಲಿಯಲ್ಲಿರುವ ‘ಭಾರತೀಯ ಹವಾಮಾನ ಇಲಾಖೆ’ ಮೇಲ್ವಿ ಚಾರಣೆ ಮಾಡುತ್ತದೆ. ಈ ವಲಯದ ಆಡಳಿತಾತ್ಮಕ ಪ್ರಕ್ರಿಯೆ ಅತ್ಯಂತ ಆಸಕ್ತಿದಾಯಕ ವಾಗಿದೆ. ಈ ಸಮಿತಿಯಲ್ಲಿ ಒಟ್ಟು 13 ದೇಶಗಳಿವೆ- ಭಾರತ, ಬಾಂಗ್ಲಾದೇಶ, ಮಾಲ್ಡೀ, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಇರಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯೆಮೆನ್. ಈ 13 ದೇಶಗಳು ತಲಾ 13 ಹೆಸರುಗಳ ಪಟ್ಟಿಯನ್ನು ಮುಂಚಿತವಾಗಿಯೇ ಸಿದ್ಧಪಡಿಸಿ ವಿಶ್ವ ಹವಾಮಾನ ಸಂಸ್ಥೆ (WMO) ಸಮಿತಿಗೆ ಸಲ್ಲಿಸುತ್ತವೆ.

ಹೀಗೆ ಒಟ್ಟು 169 (13 X 13)ಹೆಸರುಗಳ ಬೃಹತ್ ಪಟ್ಟಿಯನ್ನು ಸಿದ್ಧಪಡಿ ಸಲಾಗುತ್ತದೆ. ಈ ಪಟ್ಟಿ ಯಿಂದ ದೇಶಗಳ ಇಂಗ್ಲಿಷ್ ಅಕ್ಷರಗಳ ವರ್ಣಮಾಲೆಯ ಕ್ರಮದ ಪ್ರಕಾರ ಸರದಿಯ ಮೇಲೆ ಒಂದೊಂದೇ ಹೆಸರನ್ನು ಚಂಡಮಾರುತಗಳಿಗೆ ಇಡಲಾಗುತ್ತದೆ.

ವಿಶ್ವೇಶ್ವರ ಭಟ್‌

View all posts by this author