ವಿತ್ತ ಸೂಕ್ತ
ನಾರಾಯಣ ಯಾಜಿ
ಬೆಂಗಳೂರಿನ ಟ್ರಾಫಿಕ್ ಕಷ್ಟಗಳಿಗೆ ಪರಿಹಾರವಾಗಿ ಕನ್ನಡಿಗನಿಗೆ ಸಿಕ್ಕ ಸಂಜೀವಿನಿ ‘ನಮ್ಮ ಮೆಟ್ರೋ’. ದುಬಾರಿ ದರದ ನಡುವೆಯೂ ಪ್ರಯಾಣಿಕನ ಮುಖದ ತೃಪ್ತಿ ಈಗ ಮೆಟ್ರೋ ನಿಗಮದವರಿಗಿಲ್ಲ. ಕಾರಣ ತಲೆಯ ಮೇಲಿರುವ ಸಾಲದ ಮೂಟೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸು ತ್ತಿರುವ ಡಾಲರ್‌ನ ಅಬ್ಬರ! ಸಿಲ್ಕ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಲಿಂಕ್ ಕಲ್ಪಿಸಲು 2021ರಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ (ADB) ಪಡೆದ 50 ಕೋಟಿ ಯುಎಸ್ ಡಾಲರ್ (500 ಮಿಲಿಯ) ಸಾಲ, ಇಂದು ನಿಗಮದ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಭವಿಷ್ಯದ ಆಪತ್ತನ್ನು ಮೊದಲೇ ಗ್ರಹಿಸದ ಆಡಳಿತಶಾಹಿಯ ‘ದೂರದೃಷ್ಟಿಯ ಕೊರತೆ’ಗೆ ಈಗ ಪ್ರಯಾಣಿಕರು ಬೆಲೆ ತೆರಬೇಕಾಗಿ ಬಂದಿದೆ.
ನಮ್ಮ ಆಡಳಿತಶಾಹಿಯ ಯೋಜನೆಗಳಿಗೂ ಮತ್ತು ವಾಸ್ತವಿಕ ಅನುಷ್ಠಾನಕ್ಕೂ ನಡುವೆ ಆಕಾಶ ಭೂಮಿಯಷ್ಟು ಅಂತರವಿದೆ. ಸಾಲ ಪಡೆಯುವಾಗ 5 ವರ್ಷಗಳ ಮೊರೊಟೋರಿಯಂ ಅಂದರೆ ಸಾಲ ಮರುಪಾವತಿಯ ರಜೆ ಇತ್ತು. ಅಷ್ಟರಲ್ಲಿ ಯೋಜನೆ ಮುಗಿಯಬೇಕಿತ್ತು. ಈಗ ರಿಯಾಯಿತಿ ಅವಧಿ ಮುಗಿದುಹೋಗಿದೆ. ಆದರೆ ವಿಮಾನ ನಿಲ್ದಾಣದ ಮೆಟ್ರೋ ಹಳಿಗಳ ಕಾಮಗಾರಿ ಮಾತ್ರ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಪರಿಣಾಮವಾಗಿ, ಯೋಜನೆಯಿಂದ ಒಂದು ರೂಪಾಯಿ ಆದಾಯವೂ ಬಾರದಿದ್ದರೂ, ಮೆಟ್ರೋ ನಿಗಮವು (BMRCL) ಈಗ ಬ್ಯಾಂಕಿಗೆ 12.5 ಮಿಲಿಯ ಅಂದರೆ 118 ಕೋಟಿ ರೂಪಾಯಿಯಷ್ಟು ಸಾಲದ ಕಂತನ್ನು ಮರುಪಾವತಿಸಬೇಕಾಗಿದೆ. ಆದಾಯ ತರಬೇಕಿದ್ದ ಮೆಟ್ರೋ, ಈಗ ಬೊಕ್ಕಸವನ್ನು ನುಂಗುವ ಬಿಳಿ ಆನೆಯಾಗಿ ಬದಲಾಗುತ್ತಿದೆ.
ಇದನ್ನೂ ಓದಿ: Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ
ಕಡೆಗಣಿಸಿದ ಹೆಡ್ಜಿಂಗ್
ಹಣಕಾಸಿನ ಜಗತ್ತಿನಲ್ಲಿ ‘ಹೆಡ್ಜಿಂಗ್’ (Hedging) ಎನ್ನುವುದು ಕರೆನ್ಸಿ ಏರಿಳಿತದ ವಿರುದ್ಧ ಮಾಡಿ ಕೊಳ್ಳುವ ಒಂದು ವಿಮೆಯಿದ್ದಂತೆ. ಸಾಮಾನ್ಯವಾಗಿ ವಿದೇಶಿ ಸಾಲ ಪಡೆಯುವಾಗ ಹಣದ ಮೌಲ್ಯ ಕುಸಿದರೆ ಎಂದು ಒಂದು ನಿರ್ದಿಷ್ಟ ಮೊತ್ತಕ್ಕೆ ಡಾಲರ್ ಮತ್ತು ರೂಪಾಯಿಯನ್ನು ಲಾಕ್ ಮಾಡಿಕೊಳ್ಳುತ್ತಾರೆ. ಅದಕ್ಕೆ ಸ್ವಲ್ಪ ಶುಲ್ಕವನ್ನು ವಿಧಿಸಲಾಗುತ್ತಿದೆ. 2021ರಲ್ಲಿ ಬಿಎಂಆರ್‌ಸಿಎಲ್ ಈ 500 ಮಿಲಿಯನ್ ಸಾಲದ ಒಪ್ಪಂದಕ್ಕೆ ಸಹಿ ಹಾಕಿದಾಗ ಡಾಲರ್ ಮತ್ತು ರೂಪಾಯಿ ವಿನಿಮಯ ದರವನ್ನು ಲಾಕ್ ಮಾಡಲು ಇದ್ದ ವಾರ್ಷಿಕ ಹೆಡ್ಜಿಂಗ್ ಪ್ರೀಮಿಯಂ ಶುಲ್ಕ ಕೇವಲ ಶೇ. 2ರಿಂದ ಶೇ. 2.5ರಷ್ಟಿತ್ತು. ಅಂದರೆ, ವರ್ಷಕ್ಕೆ ಕೇವಲ 80 ರಿಂದ 90 ಕೋಟಿ ರೂಪಾಯಿಗಳ ಪ್ರೀಮಿಯಂ ಪಾವತಿಸಿ ದ್ದರೆ ಈಗ ಇಷ್ಟು ಸಮಸ್ಯೆ ಇರುತ್ತಿರಲಿಲ್ಲ.
ಇದನ್ನೂ ಓದಿ: Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ
ನೀತಿ ಆಯೋಗ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ತಜ್ಞರು ವಿದೇಶಿ ಸಾಲಗಳನ್ನು ಪಡೆಯುವ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (PSUs) ನೀಡಿದ ಮಾರ್ಗಸೂಚಿಯಲ್ಲಿಯೂ ಈ ನಿರ್ದೇಶನವಿತ್ತು. ಆರ್ಥಿಕ ತಜ್ಞರು ವಿದೇಶಿ ಕರೆನ್ಸಿಗಳ ಮೌಲ್ಯ ಯಾವಾಗ ಬೇಕಿದ್ದರೂ ಏರಬಹುದು. ಆರ್ಥಿಕ ಸ್ವಾವಲಂಬನೆ ಇಲ್ಲದ ಮೆಟ್ರೋದಂತಹ ಸಂಸ್ಥೆಗಳು ಕಡ್ಡಾಯವಾಗಿ ಆರಂಭದ ಕರೆನ್ಸಿ ರಿsfkf ಅನ್ನು ಹೆಡ್ಜ್ ಮಾಡಿಕೊಳ್ಳಬೇಕು ಎಂದು ನೀಡಿದ ಎಚ್ಚರಿಕೆಯನ್ನೂ ಸಾಲ ಪಡೆಯುವಾಗ ಇದನ್ನೆಲ್ಲವನ್ನೂ ಕಡೆಗಣಿಸಲಾಯಿತು. ಹೇಗಿದ್ದರೂ ಐದು ವರ್ಷಗಳ ಮೊರಟೋರಿಯಂ (ವಿನಾಯಿತಿ ಅವಧಿ) ಇದೆ, ತಕ್ಷಣಕ್ಕೇನು ಹಣ ಕಟ್ಟಬೇಕಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಒಂದೆಡೆಯಾದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿದ ‘ಸಾರ್ವಭೌಮ ಗ್ಯಾರಂಟಿ’ ( Sovereign Guarantee) ತಮಗಿರುವ ರಕ್ಷಣಾ ಕವಚ ಎಂದು ನಂಬಿದ್ದರು. ಮುಂದೆ ನೋಡಿಕೊಂಡ ರಾಯಿತು ಎಂಬ ಆಡಳಿತಶಾಹಿಯ ಎಂದಿನ ಉದಾಸೀನತೆಯೇ ಇಂದಿನ ಬಿಕ್ಕಟ್ಟಿಗೆ ಮುನ್ನುಡಿ ಬರೆಯಿತು.
ಈಗಾದರೆ ಹೆಡ್ಜ್ ಶುಲ್ಕ ಎಷ್ಟಾಗುತ್ತದೆ?
ಕಾಲಚಕ್ರ ಉರುಳಿದೆ. 2021ರಲ್ಲಿ 75 ರೂಪಾಯಿ ಇದ್ದ ಡಾಲರ್ ಬೆಲೆ, ಇದೀಗ ಬರೋಬ್ಬರಿ 95.26 ರೂಪಾಯಿಗೆ ತಲುಪಿದೆ. ಹೆಡ್ಜಿಂಗ್ ಒಪ್ಪಂದವಿಲ್ಲದ ಕಾರಣ ಬಿಎಂಆರ್‌ಸಿಎಲ್ ಪ್ರತಿ ಡಾಲರ್‌ಗೆ ರೂ.20 ರೂಪಾಯಿಗಳಂತೆ, ಒಟ್ಟು ಸಾಲಕ್ಕೆ ಸುಮಾರು ರೂ.1000 ಕೋಟಿಗಿಂತಲೂ ಅಧಿಕ ಹಣ ವನ್ನು ಕೇವಲ ಕರೆನ್ಸಿ ನಷ್ಟದ ರೂಪದ ಹೆಚ್ಚುವರಿಯಾಗಿ ಭರಿಸಬೇಕಾಗಿದೆ. ಜೊತೆಗೆ ಇದುವರೆಗೆ 500 ಮಿಲಿಯನ್ ಡಾಲರ್ ಸಾಲದಲ್ಲಿ ಬಿಎಂಆರ್‌ಸಿಎಲ್ ಕೇವಲ 335.12 ಮಿಲಿಯನ್ ಡಾಲರ್ ಅನ್ನು ಮಾತ್ರ ಬಳಸಿಕೊಂಡಿದೆ.
ಉಳಿದ ಹಣವನ್ನು ಬಳಸದೆ ಹಾಗೆಯೇ ಇಟ್ಟಿರುವುದಕ್ಕಾಗಿ ಬ್ಯಾಂಕಿಗೆ ಹೆಚ್ಚುವರಿಯಾಗಿ ಸುಮಾರು ರೂ.22 ಕೋಟಿ ರೂಪಾಯಿಗಳನ್ನು ‘ಕಮಿಟ್ಮೆಂಟ್ ಚಾರ್ಜಸ್’ ರೂಪದಲ್ಲಿ ದಂಡವಾಗಿ ಪಾವತಿಸ ಬೇಕಾಗಿ ಬಂದಿದೆ. ಇದೀಗ ಹೆಡ್ಜಿಂಗ್ ಪ್ರೀಮಿಯಂ ಶುಲ್ಕ ವಾರ್ಷಿಕ ಶೇ. 3.5ರಿಂದ ಶೇ. 4.5ಕ್ಕೆ ಏರಿಕೆಯಾಗಿದೆ. ಈಗ ಹೆಡ್ಜಿಂಗ್ ಒಪ್ಪಂದಕ್ಕೆ ಹೋದರೆ ನಿಗಮವು ವಾರ್ಷಿಕವಾಗಿ ಸುಮಾರು ರೂ.150 ಕೋಟಿಗಿಂತಲೂ ಅಧಿಕ ಹಣವನ್ನು ಕೇವಲ ಪ್ರೀಮಿಯಂ ಶುಲ್ಕದ ರೂಪದ ಬ್ಯಾಂಕು ಗಳಿಗೆ ಸುರಿಯಬೇಕಾಗುತ್ತದೆ. ಜೂನ್ 1, 2026ರಿಂದಲೇ ಆದಾಯವಿಲ್ಲದಿದ್ದರೂ ಮೊದಲ ಕಂತಿನ ಹಣ ರೂ.150 ಕೋಟಿಯನ್ನು ರಾಜ್ಯ ಸರಕಾರದ ನೆರವಿನ ಮೂಲಕ ಮರುಪಾವತಿ ಮಾಡಿದೆ. ಪರೋಕ್ಷವಾಗಿ ಇದು ಜನಸಾಮಾನ್ಯರ ಮೇಲಿನ ಹೊರೆಯಾಗಿದೆ.
ಸ್ವದೇಶಿ ಸಂಪನ್ಮೂಲಗಳ ಕಡೆಗಣನೆ
1990ರಲ್ಲಿ ಕೊಂಕಣ ರೈಲು ಯೋಜನೆಯನ್ನು ಆರಂಭಿಸುವಾಗ, ಗುಜರಾತಿನ ನರ್ಮದಾ ಯೋಜನೆ, ಕೃಷ್ಣಾ ಭಾಗ್ಯ ಯೋಜನೆ, ಇಲ್ಲ ದೇಶೀಯ ಮಾರುಕಟ್ಟೆಯ ಸಾರ್ವಜನಿಕ ಬಾಂಡ್‌ಗಳನ್ನು ( Infrastructure Bonds) ಬಿಡುಗಡೆ ಮಾಡುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ನಿಧಿಯನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿತ್ತು. ಅಂದು ಸಾಧ್ಯವಾಗಿದ್ದು, ಇಂದಿನ ಬಲಿಷ್ಠ ಆರ್ಥಿಕತೆಯ ಭಾರತದಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು ಮೆಟ್ರೋಗೆ ಏಕೆ ಸಾಧ್ಯವಾಗಲಿಲ್ಲ? ಸ್ವದೇಶಿ ಬಾಂಡ್‌ಗಳ ಮೂಲಕ ಸಾಲ ಪಡೆದಿದ್ದರೆ ರೂಪಾಯಿ ಮೌಲ್ಯ ಕುಸಿತದ ಆತಂಕವೇ ಇರುತ್ತಿರಲಿಲ್ಲ.
ಈ ಸಾಲದ ಸಮರ್ಥಕರ ಪ್ರಕಾರ, ವಿದೇಶಿ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ ಎನ್ನುವುದಾಗಿದೆ. ಆದರೆ ಎಡಿಬಿ ಸಾಲದ ಅಸಲಿ ಗಣಿತವೇ ಬೇರೆಯಾಗಿದೆ. ಈ 500 ಮಿಲಿಯನ್ ಡಾಲರ್ ಸಾಲವನ್ನು ‘ಸೋಫರ್’ (SOFR- Secured Overnight Financing Rate) ಆಧಾರಿತ ತೇಲುವ ಬಡ್ಡಿದರ (Floating Interest Rate) ಹಾಗೂ ಶೇಕಡಾ 0.60ರಷ್ಟು ಹೆಚ್ಚುವರಿ ಪ್ರೀಮಿಯಂ ದರದಲ್ಲಿ ಪಡೆಯಲಾಗಿದೆ. ಒಟ್ಟು 25 ವರ್ಷಗಳ ಸುದೀರ್ಘ ಮರುಪಾವತಿ ಅವಧಿಯ ಈ ಸಾಲದ ರಿಯಾಯಿತಿ ಅವಧಿ ಮುಗಿದು, ಜೂನ್ 1, 2026ರಿಂದಲೇ ಮೆಟ್ರೋ ಸಂಸ್ಥೆಯು ವರ್ಷಕ್ಕೆ ಎರಡು ಬಾರಿಯಂತೆ ( Semi- annual ), ಒಟ್ಟು 40 ಕಂತುಗಳಲ್ಲಿ 2045ರವರೆಗೆ ಈ ಸಾಲವನ್ನು ತೀರಿಸಬೇಕಾಗಿದೆ. ಜಾಗತಿಕ ಹಣದುಬ್ಬರದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ‘ಸೋಫರ್’ ಬಡ್ಡಿದರವೂ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ ಕರಗುತ್ತಿರುವ ಕಾರಣ ದೇಶೀಯ ಬಾಂಡ್‌ಗಳಿಗಿಂತಲೂ ಇದು ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ 2015ರಲ್ಲಿಯೇ ಮೆಟ್ರೋ ಮ್ಯಾನ್ ಡಾ. ಈ ಶ್ರೀಧರನ್ ಬೆಂಗಳೂರು ಮೆಟ್ರೋದ ವಿಳಂಬ ನೀತಿಯ ಬಗ್ಗೆ ಬೆಂಗಳೂರು ಮೆಟ್ರೋ ಕಾಮಗಾರಿಯ ಜಾರಿ ಯಲ್ಲಿ ವಿಳಂಬವಾಗುವ ಪ್ರತಿ ದಿನವೂ ರೂ.1.5 ಕೋಟಿಯಿಂದ ರೂ.2 ಕೋಟಿ ರೂಪಾಯಿಗಳಷ್ಟು ಭಾರಿ ನಷ್ಟ ಉಂಟಾಗುತ್ತದೆ ಎಂದು ಎಚ್ಚರಿಸಿದ್ದರು. ಸುರಂಗ ಮಾರ್ಗ ಕೊರೆಯುವಾಗ ಬೆಂಗಳೂ ರಿನ ಕಠಿಣ ಭೂಪ್ರದೇಶದ ನೆಪ ಹೇಳಿ ವರ್ಷಗಟ್ಟಲೆ ಕಾಲಹರಣ ಮಾಡುವುದನ್ನು ಕಟುವಾಗಿ ಖಂಡಿಸಿದ್ದ ಶ್ರೀಧರನ್ ಅವರ ಮುನ್ಸೂಚನೆ ಇಂದು ಅಕ್ಷರಶಃ ನಿಜವಾಗಿದ್ದು, ಮೆಟ್ರೋದ 2ನೇ ಹಂತದ ಒಟ್ಟು ಬಜೆಟ್ ಆರಂಭಿಕ ಅಂದಾಜಿಗಿಂತ ದುಪ್ಪಟ್ಟಾಗಿ ಬರೊಬ್ಬರಿ ರೂ.40,614 ಕೋಟಿಗೂ ಅಧಿಕ ಮೊತ್ತಕ್ಕೆ ಬಂದು ತಲುಪಿದೆ.
ಪರಿಹಾರವೇನು?
ಆದ್ದರಿಂದ ಇದಕ್ಕೆ ಅತ್ಯಂತ ಸಾಧುವಾದ ಮತ್ತು ಪ್ರಾಯೋಗಿಕ ಪರಿಹಾರವೆಂದರೆ, ಮೆಟ್ರೋ ನಿಗಮವು ತಕ್ಷಣವೇ ರಿಸರ್ವ್ ಬ್ಯಾಂಕ್ (RBI) ಮಧ್ಯಸ್ಥಿಕೆಯಲ್ಲಿ ಎಡಿಬಿ ಬ್ಯಾಂಕಿನೊಂದಿಗೆ ‘ಕರೆನ್ಸಿ ಸ್ವಾಪ್ ಒಪ್ಪಂದ’ ( Currency Swap Agreement) ಮಾಡಿಕೊಳ್ಳುವುದು. ಈ ಮೂಲಕ ಡಾಲರ್ ಸಾಲವನ್ನು ಇಂದಿನ ದರದ ನಿಗದಿತ ರೂಪಾಯಿ ಮೌಲ್ಯದ ಸಾಲವಾಗಿ ಬದಲಾಯಿಸಿಕೊಂಡರೆ, ಮುಂದಿನ ದಿನಗಳಲ್ಲಿ ಡಾಲರ್ ಮೌಲ್ಯ ರೂ.110 ದಾಟಿದರೂ ನಮ್ಮ ಬೊಕ್ಕಸಕ್ಕೆ ಆಗುವ ಭಾರಿ ನಷ್ಟವನ್ನು ತಡೆಯಬಹುದು. ಸಾಧ್ಯವಾದರೆ ಈ ಸಾಲವನ್ನು ‘ಮಸಾಲಾ ಬಾಂಡ್’ಗಳಾಗಿ ( Masala Bonds) ಅಂದರೆ ವಿದೇಶಿ ಸಾಲವನ್ನು ಭಾರತೀಯ ರೂಪಾಯಿಯಲ್ಲಿ ಪಡೆಯುವುದು ಜೊತೆಗೆ ತೀರಿಸುವತ್ತ ಪ್ರಯತ್ನಿಸಬಹುದಾಗಿದೆ. ಜೊತೆಗೆ ಭೂಸ್ವಾಧೀನದ ಕುರಿತು ಏನೆ ಸಮಸ್ಯೆ ಇದೆಯೋ ಅದನ್ನೆಲ್ಲವನ್ನೂ ಯುದ್ಧೋಪಾದಿಯಲ್ಲಿ ಬಗೆಹರಿಸಿ ತಕ್ಷಣ ಮೆಟ್ರೋ ಓಡಾಡುವಂತೆ ಮಾಡಬೇಕು. ಜೊತೆಗೆ, ಕಾಮಗಾರಿ ವಿಳಂಬ ಮಾಡುವ ಖಾಸಗಿ ಗುತ್ತಿಗೆದಾರರ ಮೇಲೆ ಭಾರಿ ದಂಡ ವಿಧಿಸಿ, ಆ ಹಣವನ್ನು ಈ ಸಾಲದ ಖಾತೆಗೆ ಜಮಾ ಮಾಡಬೇಕು.
ಮಸಾಲಾ ಬಾಂಡ್ ಅಂದರೇನು? ಸಾಮಾನ್ಯವಾಗಿ ವಿದೇಶಗಳಲ್ಲಿ ಸಾಲ ಪಡೆಯುವಾಗ ಡಾಲರ್ ಅಥವಾ ಯುರೋ ಕರೆನ್ಸಿಗಳಲ್ಲಿ ಪಡೆಯಬೇಕಾಗುತ್ತದೆ. ಆದರೆ, ಮಸಾಲಾ ಬಾಂಡ್‌ಗಳ ವಿಶೇಷತೆ ಯೆಂದರೆ ವಿದೇಶಿ ಹೂಡಿಕೆದಾರರು ಭಾರತೀಯ ರೂಪಾಯಿಯ ಹೂಡಿಕೆ ಮಾಡುತ್ತಾರೆ. ಭಾರತೀಯ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಜಾಗತಿಕವಾಗಿ ಬಿಂಬಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ * (ಐಊಇ) ಇದಕ್ಕೆ ‘ಮಸಾಲಾ ಬಾಂಡ್’ ಎಂದು ಹೆಸರಿಟ್ಟಿದೆ.