ಒಂದೊಳ್ಳೆ ಮಾತು
ಮಂಜು ಮುಚ್ಚಿದ ಕೈಲಾಸ ಪರ್ವತ. ಜಗನ್ನಾಟಕ ಸೂತ್ರಧಾರಿ ಮಹಾದೇವನು ಗಾಢವಾದ ಧ್ಯಾನದಲ್ಲಿದ್ದಾನೆ. ಜಗನ್ಮಾತೆ ಪಾರ್ವತಿ ಅವನ ಪಕ್ಕದಲ್ಲಿ ವಿರಾಜಮಾನಳಾಗಿದ್ದಾಳೆ. ರುದ್ರಗಣಗಳು ಸುತ್ತಲೂ ನೆರೆದಿವೆ. ಆದರೆ ಕೈಲಾಸದ ಮಹಾದ್ವಾರದಲ್ಲಿ, ಕಣ್ಣು ಮಿಟುಕಿಸದೆ, ಸದಾ ಎಚ್ಚರದಿಂದ, ತನ್ನೊಡೆಯನನ್ನೇ ಅನವರತ ದೃಷ್ಟಿಸುತ್ತಾ ನಿಂತಿರುವ ಅಪ್ರತಿಮ ಭಕ್ತನೊಬ್ಬನಿದ್ದಾನೆ. ಅವನೇ ನಂದಿ.
ನಂದಿಯನ್ನು ನಾವು ಕೇವಲ ‘ಶಿವನ ವಾಹನ’ಎಂದು ಮಾತ್ರ ಭಾವಿಸಿದ್ದರೆ ಅದು ಅಪೂರ್ಣವಾಗುತ್ತದೆ. ಶೈವ ಪರಂಪರೆಯಲ್ಲಿ ನಂದಿಯ ಸ್ಥಾನ ಅತ್ಯುನ್ನತವಾದದ್ದು. ಆತ ಕೇವಲ ವಾಹನವಲ್ಲ; ಕೈಲಾಸದ ದ್ವಾರಪಾಲಕ, ಪ್ರಮಥ ಗಣಗಳ ಅಧಿನಾಯಕ, ಅಪ್ರತಿಮ ಯೋಧ, ಶ್ರೇಷ್ಠ ಸಂಗೀತಜ್ಞ ಹಾಗೂ ಪರಮ ಭಕ್ತ. ನಟರಾಜನ ಆನಂದ ತಾಂಡವಕ್ಕೆ ಮೃದಂಗ ನುಡಿಸುವವ ಇದೇ ನಂದಿಕೇಶ್ವರ. ಕೆಲವು ಆಗಮ ಶಾಸ್ತ್ರಗಳ ಪ್ರಕಾರ, ನಂದಿಯು ಶಿವನಿಂದಲೇ ನೇರವಾಗಿ ಜ್ಞಾನೋಪದೇಶ ಪಡೆದು, ಅದನ್ನು ಜಗತ್ತಿಗೆ ಸಾರಿದ ಆದಿಗುರು ಸ್ವರೂಪಿಯೂ ಹೌದು.
ಇದನ್ನೂ ಓದಿ: Roopa Gururaj Column: ಕಲ್ಲಿನಲ್ಲಿ ಸಂಗೀತದ ಪ್ರತಿಧ್ವನಿ: ಚೋಳರ ವಾಸ್ತುಶಿಲ್ಪದ ವಿಸ್ಮಯ
ನಂದಿಯ ಜನನದ ಹಿನ್ನೆಲೆಯಲ್ಲಿ ಒಂದು ರೋಚಕ ಕಥೆಯಿದೆ. ಶಿಲಾದ ಎಂಬ ಮಹರ್ಷಿ ಗಳಿಗೆ ಸಂತಾನಭಾಗ್ಯವಿರಲಿಲ್ಲ. ಆ ಕೊರಗನ್ನು ನೀಗಿಸಿಕೊಳ್ಳಲು ಅವರು ಪರಶಿವನನ್ನು ಕುರಿತು ಘೋರ ತಪಸ್ಸು ಮಾಡಿದರು. ಅವರ ನಿಷ್ಕಲ್ಮಶ ಭಕ್ತಿಗೆ ಒಲಿದು ಬಂದ ಶಿವನು, ತನ್ನದೇ ಅಂಶದಿಂದ ನಂದಿಯನ್ನು ಅವರಿಗೆ ಪುತ್ರನಾಗಿ ಕರುಣಿಸಿದನು.
ಬಾಲ್ಯದಿಂದಲೇ ಅಸಾಧಾರಣ ಜ್ಞಾನ ಮತ್ತು ಶಿವಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ನಂದಿಗೆ, ಒಂದು ದಿನ ತನ್ನ ಆಯುಷ್ಯ ಬಹಳ ಅಲ್ಪ ಎಂಬ ಸತ್ಯ ತಿಳಿಯುತ್ತದೆ. ತಂದೆ ಶಿಲಾದ ಕಣ್ಣೀರು ಹಾಕಿದರೂ, ನಂದಿ ವಿಚಲಿತನಾಗುವುದಿಲ್ಲ. ಬದಲಾಗಿ, ಸಾಕ್ಷಾತ್ ಮೃತ್ಯುಂಜಯನನ್ನೇ ಒಲಿಸಿಕೊಳ್ಳಲು ಘೋರ ತಪಸ್ಸಿಗೆ ಕೂರುತ್ತಾನೆ. ಆತನ ತಪಸ್ಸಿನ ಜ್ವಾಲೆಗೆ ಕರಗಿದ ಮಹಾದೇವ ಪ್ರತ್ಯಕ್ಷನಾಗಿ ವರವನ್ನು ಕೇಳು ಎಂದಾಗ, ಈ ಬಾಲಕ ಸಂಪತ್ತು, ಅಧಿಕಾರ, ಅಥವಾ ಇಂದ್ರಪದವಿಯನ್ನು ಕೇಳುವುದಿಲ್ಲ.
ನನಗೆ ಬೇರೇನೂ ಬೇಡ, ನಿನ್ನ ಪಾದಸೇವೆಯಲ್ಲಿ ಸದಾ ಇರುವ ಭಾಗ್ಯವನ್ನು ಕರುಣಿಸು ಎಂದು ಪ್ರಾರ್ಥಿಸುತ್ತಾನೆ. ಈ ನಿಸ್ವಾರ್ಥ ಭಕ್ತಿಗೆ ಬೆರಗಾದ ಶಿವನು, ಆತನಿಗೆ ಅಮೃತತ್ವವನ್ನು ಕರುಣಿಸಿ, ತನ್ನ ಪ್ರಧಾನ ವಾಹನವನ್ನಾಗಿ ಹಾಗೂ ಕೈಲಾಸದ ಕಾವಲುಗಾರನನ್ನಾಗಿ ಸ್ವೀಕರಿಸುತ್ತಾನೆ. ನಂದಿಯ ಶಕ್ತಿ ಮತ್ತು ಸ್ವಾಭಿಮಾನಕ್ಕೆ ರಾವಣನ ಪ್ರಸಂಗ ಒಂದು ದೊಡ್ಡ ಉದಾಹರಣೆ.
ಒಮ್ಮೆ ದಶಕಂಠ ರಾವಣನು ತನ್ನ ಅಹಂಕಾರದಿಂದ ಕೈಲಾಸವನ್ನು ಪ್ರವೇಶಿಸಲು ಯತ್ನಿಸಿ ದಾಗ, ನಂದಿ ಅವನನ್ನು ದ್ವಾರದಲ್ಲೇ ತಡೆಯುತ್ತಾನೆ. ಆಗ ರಾವಣನು ನಂದಿಯ ಮುಖ ವನ್ನು ನೋಡಿ, ಕೋತಿಯ ಮುಖದವನೇ ಎಂದು ಗೇಲಿ ಮಾಡುತ್ತಾನೆ. ಇದರಿಂದ ಕೆರಳಿದ ನಂದಿ, ಯಾವ ವಾನರನ ಮುಖವನ್ನು ನೋಡಿ ನೀನು ನಕ್ಕೆಯೋ, ಅದೇ ವಾನರ ಕುಲದಿಂದ ನಿನ್ನ ಮತ್ತು ನಿನ್ನ ಲಂಕೆಯ ಸರ್ವನಾಶವಾಗಲಿ ಎಂದು ಶಪಿಸುತ್ತಾನೆ.
ಇದೇ ಶಾಪ ಮುಂದೆ ರಾಮಾಯಣದಲ್ಲಿ ಹನುಮಂತ ಮತ್ತು ವಾನರ ಸೇನೆಯ ಮೂಲಕ ನಿಜವಾಗುತ್ತದೆ. ಪ್ರತಿಯೊಂದು ಶಿವಾಲಯದಲ್ಲೂ ನಂದಿಯು ಸದಾ ಶಿವಲಿಂಗದ ಎದುರು ಮಂಡಿಯೂರಿ ಕುಳಿತಿರುವುದನ್ನು ನಾವು ನೋಡುತ್ತೇವೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ನಂದಿಯ ಕಿವಿಯಲ್ಲಿ ಪಿಸುಗುಟ್ಟುವ ವಾಡಿಕೆಯಿದೆ; ಏಕೆಂದರೆ, ನಂದಿಯ ಮೂಲಕ ಹೇಳಿದ ಪ್ರಾರ್ಥನೆಯು ನೇರವಾಗಿ ಶಿವನನ್ನು ತಲುಪುತ್ತದೆ ಎಂಬುದು ಭಕ್ತರ ದೃಢವಾದ ನಂಬಿಕೆ. ವರ್ಷಗಳು ಕಳೆದರೂ, ಯುಗಗಳು ಬದಲಾದರೂ ಶಿವನ ಮೇಲಿರುವ ಆತನ ಆ ಏಕಾಗ್ರತೆಯ ದೃಷ್ಟಿ ಬದಲಾಗುವುದಿಲ್ಲ.
ನಂದಿಯಿಂದ ನಮಗೆ ಸಿಗುವ ಜೀವನ ಪಾಠ ಎಂದಿಗೂ ಗುರಿ ಒಂದೇ ಆಗಿರಲಿ, ಅದರಲ್ಲಿ ಚಂಚಲತೆ ಬೇಡ. ಕರ್ತವ್ಯದಲ್ಲಿ ಅಚಲವಾದ ಶ್ರದ್ಧೆ ಇರಲಿ. ಎಷ್ಟೇ ಅಪಾರ ಶಕ್ತಿಯಿದ್ದರೂ ತಲೆಬಾಗುವ ವಿನಯವಿರಲಿ. ಕೊನೆಗೆ ಎಷ್ಟೇ ಜ್ಞಾನವಿದ್ದರೂ ಅಹಂಕಾರ ಸುಳಿಯದಿರಲಿ ಮತ್ತು ಭಕ್ತಿಯಲ್ಲಿ ಯಾವುದೇ ಸ್ವಾರ್ಥವಿರಬಾರದು ಎಂಬುದು.
ನಂದಿಗೆ ಶಿವನ ಸಾನ್ನಿಧ್ಯವನ್ನು ಬಿಟ್ಟರೆ ಜಗತ್ತಿನ ಬೇರೆ ಯಾವ ವಸ್ತುವಿನ ಮೇಲೂ ವ್ಯಾಮೋಹವಿಲ್ಲ. ನಂದಿಯ ಮೌನ ನಮಗೆ ಬೋಧಿಸುವ ಪಾಠವೊಂದೇ: ನಿನ್ನ ಮನಸ್ಸನ್ನು ನಿನ್ನ ಗುರಿಯ ಮೇಲೆ ಸ್ಥಿರವಾಗಿರಿಸು. ಅಹಂಕಾರವನ್ನು ತ್ಯಜಿಸಿ, ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು. ಆಗ ನಿನ್ನೊಳಗಿನ ಶಿವತ್ವವೇ ಜಾಗೃತವಾಗುತ್ತದೆ.
ಆದ್ದರಿಂದಲೇ ನಂದಿ ಕೇವಲ ಕಲ್ಲಿನ ಪ್ರತಿಮೆಯಲ್ಲ. ಆತ ಭಕ್ತಿ, ಶಕ್ತಿ, ಶಿಸ್ತು, ಧರ್ಮ ಮತ್ತು ಸಂಪೂರ್ಣ ಶರಣಾಗತಿಯ ಪ್ರತೀಕ. ನಂದಿಯ ಭಕ್ತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಮಗೆ ಶಿವನ ದರ್ಶನ ಮತ್ತು ಒಲುಮೆ ಸಿಗಲು ಸಾಧ್ಯ.